Tuesday, June 11, 2013

ಸರ್ವ ರೋಗಕ್ಕೂ ಮೋದಿಯೇ ಮದ್ದಲ್ಲ

ಅಡಾಲ್ಫ್ ಹಿಟ್ಲರ್, ಆಧುನಿಕ ಜಗತ್ತು ಕಂಡ ಮಹಾನ್ ನರ ಹಂತಕ; ಆದರೂ ೧೯೩೦ರ ದಶಕದಲ್ಲಿ ಜರ್ಮನಿಗೆ ಹೊಸ ಚೈತನ್ಯ ತುಂಬಿದ್ದ. ಮಾವೋ ತ್ಸೆ ತುಂಗ್, ಲಕ್ಷ ಗಟ್ಟಲೆ ಹೆಣಗಳ ರಾಶಿ ಹಾಕಿ ಅದರ ಸಮಾಧಿಯ ಮೇಲೆ ಚೀನಾದ ಪ್ರಗತಿ ಪಥ ರೂಪಿಸಿದ್ದ. ಜೋಸೆಫ್ ಸ್ಟಾಲೀನ್, ಕೈಗಾರಿಕೀಕರಣದ ದೊಂದಿ ಹಿಡಿದು ರಷ್ಯಾ ಸಾಮ್ಯಾಜ್ಯದ ಕತ್ತಲನ್ನು ಒದ್ದೋಡಿಸುವುದಾಗಿ ಲೆಕ್ಕವಿಲ್ಲದಷ್ಟು ಪ್ರಜೆಗಳನ್ನು ಕಾಣದ ಲೋಕಕ್ಕೆ ಕಳುಹಿಸಿದ್ದ.

ಪ್ರಗತಿ, ಅಭಿವೃದ್ಧಿ, ವಿಕಾಸ, ರಕ್ಷಣೆ ಮುಂತಾದ ಪದ ಮತ್ತು ಇದರ ತಪ್ಪು ವ್ಯಾಖ್ಯಾನ ತೆಗೆದಷ್ಟು  ಜೀವ, ಮಾಡಿದಷ್ಟು ಉತ್ಪಾತಗಳನ್ನು ಬಡತನ, ದಾರಿದ್ರ್ಯಗಳು ಕೂಡ ತೆಗೆದಿಲ್ಲ, ಮಾಡಿಲ್ಲ. ವಿಶ್ವ ವಿಖ್ಯಾತ ಚಿಂತಕ ಲಿಯೋ ಟಾಲ್‌ಸ್ಟಾಯ್‌ನ ಪ್ರಸಿದ್ಧ ಕೃತಿ ಅನ್ನಾ ಕಾರ್ನಿನಾದ ಮೊದಲ  ಸಾಲಿನಲ್ಲೆ, ಸುಖಿ ಕುಟುಂಬಗಳೆಲ್ಲ ಒಂದೇ ರೀತಿ, ಆದರೆ ಪ್ರತಿ ದುಃಖಿ ಕುಟುಂಬ ಕೂಡ ತನ್ನ ದುಃಖಕ್ಕೆ ತನ್ನದೆ ಆದ ಸಂಗತಿಗಳನ್ನು ಹೊಂದಿರುತ್ತದೆ ಎಂದು ಹೇಳಿದ ಮಾತು ಅಭಿವೃದ್ಧಿಯ ವ್ಯಾಖ್ಯಾನ ಮತ್ತು ಲೆಕ್ಕಾಚಾರದ ಸಮಯದಲ್ಲಿ ನೆನಪು ಮಾಡಿಕೊಳ್ಳಲೇ ಬೇಕು.

ರೋಗಗ್ರಸ್ತ ದೇಶಗಳಾಗಿದ್ದ ಜರ್ಮನಿ, ಚೀನಾ, ರಷ್ಯಾಗಳಿಗೆ ಹೊಸ ಕಸುವು, ಕನಸು ಮತ್ತು ಹೊಸ ದಾರಿ ತೋರಿದ್ದ ಈ ಮಹಾನ್ ಸರ್ವಾಧಿಕಾರಿಗಳು ಇದಕ್ಕಾಗಿ ಜೀವಗಳ ಲೆಕ್ಕದಲ್ಲಿ ಕಟ್ಟಿದ್ದ ಕಂದಾಯವನ್ನು ಈ ಜಗತ್ತು ಮರೆಯಲು ಸಾಧ್ಯವೇ? ಈ ರಾಷ್ಟ್ರಗಳು ಒಂದೆರಡು ದಶಕಗಳ ಕಾಲ ಅಭಿವೃದ್ಧಿಯ ಅಲೆಯ ಮೇಲೆ ತೇಲಾಡಿದರೂ ಕೂಡ ದೇಶದ ಸರ್ವ ಸಮಸ್ಯೆಗಳಿಗೆ ಮದ್ದು ಅರೆಯಲು ಅವರಿಂದ ಸಾಧ್ಯವಾಯಿತೇ? ಇತ್ತ ಕಮ್ಯುನಿಸಂ, ಸಮಾಜವಾದಿ, ಪ್ರಜಾ ಪ್ರಭುತ್ವ ಮುಂತಾದ ತತ್ವ ಸಿದ್ದಾಂತಗಳ ಮೂಸೆಯಲ್ಲಿ ಅರಳಿದ ವಿಶ್ವದ ಬಹುತೇಕ ದೇಶಗಳು ಸಮಸ್ಯೆ ಮುಕ್ತವಾಗಿವೆಯೇ? ವಿನ್‌ಸ್ಟನ್ ಚರ್ಚಿಲ್, ಅಬ್ರ್ರಾಹಂ ಲಿಂಕನ್, ಜಾನ್ ಎಫ್ ಕೆನಡಿ, ಜವಹಾರ್ ಲಾಲ್ ನೆಹರೂ, ನೆಲ್ಸಾನ್ ಮಂಡೇಲಾ, ಫಿಡೆಲ್ ಕ್ಯಾಸ್ಟ್ರೋ ಮುಂತಾದ ವಿಭಿನ್ನ ಹಿನ್ನೆಲೆಯ ಸಾಲು ಸಾಲು ನಾಯಕರನ್ನು ಕಂಡ ಜಗತ್ತು ಇಂದಿಗೆ ಸಮಸ್ಯೆ ಮುಕ್ತವೇ ಆಗಿರಬೇಕಿತ್ತು, ಆದರೆ ಆಗಿಲ್ಲ. ಇನ್ನೂ ಕೂಡ ದೇಶಗಳು ತಮ್ಮ ’ನಿರ್ಮಾಣ ಕಾಮಗಾರಿ’ಯನ್ನು ಮುಂದುವರಿಸುತ್ತಲೇ ಇವೆ.

ಜಗತ್ತಿನ ಎಲ್ಲ ಸಮಸ್ಯೆಗಳು ಪರಿಹಾರ ಕಂಡಿದ್ದು ’ರಾಮರಾಜ್ಯ’ದ ಕಾಲದಲ್ಲಿ ಮಾತ್ರವೇ ಇರಬೇಕು!

ಕಾಲದ ಹರಿವಿನ ಜೊತೆಗೆ ತೇಲು ತೇಲುತ್ತಲೇ ಬರುವುದು ಬಡತನ, ನಿರುದ್ಯೋಗ, ಅಪೌಷ್ಠಿಕತೆ, ಸಂಪತ್ತಿನ ಅಸಮಾನ ಹಂಚಿಕೆ ಮುಂತಾದ ಸಮಸ್ಯೆಗಳು. ಈ ಸಮಸ್ಯೆಗಳಿಂದ ಮುಕ್ತವಾಗುವುದು ಎಲ್ಲ ಕಾಲದಲ್ಲಿಯೂ ಯಾವುದೇ ರೀತಿಯ, ಯಾರದ್ದೆ ಸರ್ಕಾರವಿದ್ದರೂ  ಅದಕ್ಕೊಂದು ಸವಾಲು. ಅದೇ ರೀತಿ ಸರ್ಕಾರಗಳು ಕೂಡ ಇದನ್ನು ನಿರ್ಮೂಲನೆ ಮಾಡುವ ತಮ್ಮ ಬದ್ಧತೆಯ ಬಗ್ಗೆ ನಿರಂತರವಾಗಿ ಹೇಳಿಕೆ ನೀಡುತ್ತಲೇ ಇರುತ್ತವೆ. ಆದರೆ ಸಮಸ್ಯೆಗಳೇ ರಾಜಕೀಯದ ಒಲೆ ಉರಿಯಲು ಬೇಕಾದ ಕಟ್ಟಿಗೆ ಆಗಿರುವುದರಿಂದ ಈ ಕಟ್ಟಿಗೆ ಸಿಗದಂತೆ ಮಾಡುವ ಪ್ರಯತ್ನಕ್ಕೆ ಬಹುತೇಕ ಸರ್ಕಾರಗಳು ಗಂಭೀರವಾಗಿ ಯತ್ನಿಸುವುದೇ ಇಲ್ಲ. ಸರ್ಕಾರಗಳಿಗೆ ಅಡುಗೆಗೂ ಈ ಕಟ್ಟಿಗೆ ಬೇಕು, ಚಳಿ ಕಾಯಿಸಲು ಕೂಡ ಆಗಬೇಕು ಅನ್ನುವ ದುಸ್ತರ ಕಾಲಬಿಂದುವಿನಲ್ಲಿ ನಾವು ನಿಂತಿದ್ದೇವೆ.

ಇದೆಲ್ಲವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿಯ ಭಕ್ತರಿಗೆ, ಆರಾಧಕರಿಗೆ ಹೇಳುವವರು ಯಾರು? ಇಂದು ದೇಶದ ಬಗಲಲ್ಲಿ ನಿಗಿನಿಗಿ ಕೆಂಡವಾಗಿರುವ ನೂರಾರು ಸಮಸ್ಯೆಗಳ ಹೆಸರು ಹೇಳಿ, ತಕ್ಷಣವೇ ನರೇಂದ್ರ ಮೋದಿ ದೇಶದ ಪ್ರಧಾನಿ ಯಾಗುತ್ತಲೇ ಇದೆಲ್ಲ ಮಂಗಮಾಯ ಅನ್ನುತ್ತಾರೆ ಈ ಭಕ್ತ ಮಹಾಶಯರು!

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿ ಎಂದು ದೇಶದ ಪ್ರಜೆಗಳು ನಿರ್ಧಾರ ಕೈಗೊಂಡಿದ್ದೇ ಆದರೆ ಅದು ತಪ್ಪು ಎಂದು ಹೇಳಲಾಗದು. ಕಾಂಗ್ರೆಸ್‌ನ ನಿಂತ ನೀರಿನಂತ ನಾಯಕತ್ವ ಕಂಡ ದೇಶಕ್ಕೆ ಮೋದಿ ಒಂದಿಷ್ಟು ಚಲನ ಶೀಲ ನಾಯಕತ್ವ ನೀಡಬಹುದು ಎಂಬುದರ ಸೂಚನೆಗಳೇನೋ ಇವೆ.

ದೇಶದ ಮತದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಎಂಬ ತಳ ಒಡೆದ ಪಕ್ಷಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಮೋದಿಗೆ ಪೂರಕ. ಆದರೆ ಇದು ಯಾವ ರಾಜ್ಯದಲ್ಲಿ ಬಿಜೆಪಿಗೆ ಹೇಗೆ ಲಾಭ ತರಲಿದೆ ಎಂದು ಕೇಳಿದರೆ ಮೇಲೆ ಕೆಳಗೆ ನೋಡುತ್ತಾರೆ ಈ ಮೋದಿವಾದಿಗಳು.

ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಹುಟ್ಟಿಕೊಂಡಿದೆ. ಆದರೆ ಬಿಜೆಪಿಗೆ ಕನಿಷ್ಠ ಪಕ್ಷ ೨೦೦ ಲೋಕಸಭಾ ಸ್ಥಾನದಲ್ಲಿ ಗೆಲುವಿನ ದಡ ತಲುಪಬೇಕಾದರೆ ಕಾಂಗ್ರೆಸ್ ವಿರೋಧಿ ಸುನಾಮಿಯೇ ಹುಟ್ಟಿಕೊಳ್ಳಬೇಕು. ಆದರೆ ಬಿಜೆಪಿ ತನ್ನ ಒಡಲಲ್ಲೆ ಹುಟ್ಟಿರುವ ಸುಳಿಗಳಿಂದ ಬಸವಳಿದು ಕುಳಿತಿದೆ.

ಯಾವುದೆ ಚಿಂತನೆ, ವ್ಯಕ್ತಿಯ ಸಮಯ ಬಂದಾಗ ಕಟ್ಟಿ ಹಾಕಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಹಿರಿಯರು. ಆ ಹಿನ್ನೆಲೆಯಲ್ಲಿ ಇದೀಗ ಮೋದಿಯ ಕಾಲ ಬಂದಿದೆ ಎಂಬುವುದು ಮೋದಿ ಭಕ್ತರ ನಂಬಿಕೆ. ಮೋದಿಯ ಕಾಲ ಬಂದಿರುವುದು ನಿಜ, ಆದರೆ ಇದು ನವಮಾಸ ತುಂಬಿಯಾದ ಸಹಜ ಹೆರಿಗೆಯೋ ಅಲ್ಲ ಸಿಜೇರಿಯನ್ ಹೆರಿಗೆಯೋ ಎಂದು ಹೇಳಲು ಇನ್ನು ಕಾಲ ಪಕ್ವವಾಗಿಲ್ಲ. ಈ ವರ್ಷದ ಅಂಚಿನ ಅಸುಪಾಸಿನಲ್ಲಿ ನಡೆಯುವ ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಈ ಬಗ್ಗೆಗಿನ ಸುಳಿವು ಸಿಗಬಹುದು.

ಮೋದಿ ಮತ್ತು ಅವರ ಭಕ್ತರು ಪ್ರತಿಪಾದಿಸುವ ’ಗುಜರಾತ್ ಮಾದರಿ’ಯ ಆಡಳಿತದ ಘಮಘಮ ದೇಶದಾದ್ಯಂತ ಹರಡಬೇಕು. ಗುಜರಾತ್‌ನಂತೆಯೇ ದೇಶದ ಎಲ್ಲ ರಾಜ್ಯಗಳು, ಪ್ರದೇಶಗಳು ಅಭಿವೃದ್ಧಿಯಾಗಬೇಕು. ಆದರೆ ಸಂಪಿಗೆ, ಮಲ್ಲಿಗೆಯ ಪರಿಮಳ ಕೂಡ ಕೆಲವರಿಗೆ ತಲೆ ನೋವು ತರುತ್ತದೆ ಎಂಬ ಅರಿವನ್ನು ಕಳೆದುಕೊಳ್ಳಲಾಗದು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರೇ ಗೆದ್ದರು, ಯಾರೇ ಪ್ರಧಾನಿಯಾದರೂ ದೇಶವಂತೂ ಸಮಸ್ಯೆ ರಹಿತವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಈಗ ಮುನ್ನೆಲೆಯಲ್ಲಿರುವ ನಾಯಕರಲ್ಲಿ ದೇಶದ ಬಗೆಗಿನ ತಳಸ್ಪರ್ಶಿ ಅರಿವು, ದೂರದೃಷ್ಟಿಯ ನಿಲುವು ನಾಪತ್ತೆಯಾಗಿದೆ. ಗೆದ್ದಲ ಗೂಡಗಿರುವ ಕಾಂಗ್ರೆಸ್, ಗೊಂದಲಗಳ ಬುಟ್ಟಿಯಾಗಿರುವ ಬಿಜೆಪಿ ಎರಡೂ ದೇಶಕ್ಕೆ ಸಮರ್ಥ ದಿಕ್ಕು ದೆಸೆ ನೀಡಬಹುದು ಎಂದು ಭಾವಿಸುವ ಸ್ಥಿತಿಯಲ್ಲಿ ಪ್ರಜ್ಞಾವಂತ ನಾಗರಿಕರಿಲ್ಲ.

ಅದ್ದರಿಂದ ಮೋದಿಯ ಪೂಜಾರಿಗಳು ಇನ್ನಾದರೂ ಕಲ್ಪನಾ ಲೋಕದಲ್ಲಿ ವಿಹರಿಸುವುದನ್ನು ಬಿಟ್ಟು ವಾಸ್ತವದ ಕಣ್ಣಲ್ಲಿ ಮೋದಿಯನ್ನು ನೋಡುವ ಪ್ರಯತ್ನ ಮಾಡಿದ್ದೇ ಆದರೆ ದೇಶದ ಆರೋಗ್ಯಕ್ಕೆ ಒಳ್ಳೆಯದು.

ನರೇಂದ್ರ ಮೋದಿ ದೇಶದ ಸರ್ವ ರೋಗಕ್ಕೂ ಮದ್ದಾಗಲಾರರು, ಆದರೆ ಕಾಂಗ್ರೆಸ್ ಎಂಬ ಕಾಯಿಲೆಗೆ ಮದ್ದಾಗಲು ಬಹುದೇನೋ!

ಹೇಳಲೇ ಬೇಕಾಗಿದ್ದು: 

ಮೇ ೮: ಕರ್ನಾಟಕ ವಿಧಾನ ಸಭಾ ಫಲಿತಾಂಶ ಪ್ರಕಟವಾಗಿ ಬಿಜೆಪಿ ಸೋತಿದ್ದ ದಿನ. ಮುಸ್ಸಂಜೆಯ ಹೊತ್ತು. ಆಶೋಕ ರಸ್ತೆಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯ ಆವರಣ. ವೆಂಕಯ್ಯ ನಾಯ್ಡು ಕರೆದಿದ್ದ ಪತ್ರಿಕಾಗೋಷ್ಠಿ. ಗೋಷ್ಠಿ ಮುಗಿದ ಬಳಿಕ ರಾಜ್ಯದಲ್ಲಿ ಬಿಜೆಪಿಯ ಆಗುಹೋಗುಗಳ ಬಗ್ಗೆ ಹತ್ತಿರದ ಅಂದಾಜಿದ್ದ ’ಪ್ರಧಾನ’ ನಾಯಕರೊಬ್ಬರು ಅಂಗ್ಲ-ಹಿಂದಿ ಮಾಧ್ಯಮಗಳ ಪತ್ರಕರ್ತರ ಜೊತೆ ಹೊಡೆಯುತ್ತಿದ್ದ ಹರಟೆಯಲ್ಲಿ ಆ ನಾಯಕ ಹೊರಡಿಸಿದ್ದ ಅಣಿಮುತ್ತು.

"ನಾವು ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದ್ದೆವು. ಆದರೆ ಯಡಿಯೂರಪ್ಪರನ್ನು ಉಳಿಸಿಕೊಳ್ಳಲು ಅವರ ಜೊತೆ ರಾಜಿಯಾಗಲು ಮುದುಕ (ಎಲ್. ಕೆ. ಅಡ್ವಾಣಿ) ಒಪ್ಪಿಕೊಳ್ಳಲಿಲ್ಲ"

ಅಡ್ವಾಣಿಯ ಬಗೆಗಿನ ಅಸಹನೆ ಪಕ್ಷದ ಒಂದು ವಲಯದಲ್ಲಿ ಹೆಪ್ಪುಗಟ್ಟಿರುವುದು ಆ ನಾಯಕನ  ಮಾತುಗಳಲ್ಲಿ ಜಿನುಗುತ್ತಿತ್ತು. ಇದು ಬಿಜೆಪಿಯ ಅನೇಕ ನಾಯಕರ ಮನಸ್ಸಿಗೆ ಹಿಡಿದಿದ್ದ ಕನ್ನಡಿ ಎಂದೇ ಬಿಜೆಪಿಯನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ. ಇಂತಹ ಒಡೆದ ಮನಸ್ಸುಗಳ, ನಿರ್ಲಜ್ಜ ನಡೆಯ ನೇತಾರರ ಹೊಸ ದಂಡು ಕಟ್ಟಿ ಬಿಜೆಪಿ ಭವಿಷ್ಯದಲ್ಲಿ ಬರ್ಕತ್ ಆಗಬಹುದೇ?  

No comments: