Saturday, October 29, 2011

ಅನಿವಾರ್ಯವಾಗಿರುವ ಹೊತ್ತಲ್ಲಿ ಚೂಸಿ ಆಗಿರೋಕ್ಕೆ ಸಾಧ್ಯನಾ...?

ಇವತ್ತು ಒಂಚೂರು ತಡವಾಗಿದೆ... ಆದ್ರೆ ರಿಕ್ಷಾಗಳಿಗೆ ಬರ ಬೀಳುವಷ್ಟು ತಡ ಆಗಿಲ್ಲ... ನೊಡೋಣ, ಯಾವ ಗಾಡಿ ಹತ್ತೋದು ... ಅದ್ರಲ್ಲಿ ನೋಡೊದು ಎಂತ... ಯಾವುದು ಬರುತ್ತೆ ಅದನ್ನು ಹತ್ತುವುದು... ಅನಿವಾರ್ಯವಾಗಿರುವ ಹೊತ್ತಲ್ಲಿ ಚೂಸಿ ಆಗಿರೋಕ್ಕೆ ಸಾಧ್ಯನಾ...? ಅಲ್ಲ, ಈ ಸೂಸೈಡ್ ಮಾಡುವವರು ನಾವು ಯಾವ ರೀತಿ ಸೂಸೈಡ್ ಮಾಡ್ಕೋಬೇಕು ಅನ್ನುವ ವಿಷಯದಲ್ಲಿ ಥಿಂಕ್ ಮಾಡ್ತಾರಾ... ಹಗ್ಗ... ಅದು ಫ್ಯಾನ್‌ಗೋ.. ಮರಕ್ಕೋ... ವಿಷ... ಅದ್ರಲ್ಲಿ ಯಾವ ವಿಷ... ಬೆಟ್ಟದಿಂದ ಹಾರುವುದೋ.. ನೀರಿಗೆ ಧುಮುಕುವುದೋ ಅಲ್ಲ... ರೈಲು... ಆತ್ಯಹತ್ಯೆ ಆ ಕ್ಷಣದ ಯೋಚನೆ ಆಗಿರುತ್ತದೆಯೋ... ಅಲ್ಲ, ಕೆಲವರು ತುಂಬ ದಿನದಿಂದ ಯೋಚನೆ ಮಾಡಿ ಈ ಹಲ್ಕ ಕೆಲಸ ಮಾಡ್ತಾರೆ... ಹುಂ ಅವರು ಪಕ್ಕಾ ಡಿಸೈಡ್ ಮಾಡಿರಬಹುದು... ರಿಕ್ಷಾ ಬಂತು... ಈ ಮಂಗ ಮುಂದೆ ಹೋಗಿ ನಿಲ್ಲಿಸಿದ... ಸರಿ, ಒಂಚೂರು ವ್ಯಾಯಾಮ ಆಗುತ್ತೆ... ಈ ನೆಲ ಹತ್ತು ವರ್ಷದ ಹಿಂದೆ ಹೇಗೆ ಇದ್ದಿರಬಹುದಾ... ಹೊಲ ಹೊಲ... ಈಗ ಕಟ್ಟಡ... ಕಟ್ಟಡ... ಹೌದು ನಾನು ಕೃಷಿ ಬಗ್ಗೆ ಯಾವ ನಾಲಗೆ ಇಟ್ಟುಕೊಂಡು ಮಾತನಾಡಲಿ... ಮನೆಯಲ್ಲಿ ಅಷ್ಟು ಕೃಷಿ ಭೂಮಿ ಇದ್ದು ಇಲ್ಲಿ ಬಂದು? ಕೃಷಿಕನೆಂದರೆ ಭೂಮಿ ಪುತ್ರ, ಆ ವೃತ್ತಿ ಶ್ರೇಷ್ಠ ಹಾಗೇ ಹೀಗೆ ಎಂದು ಹೇಳುವ ಒಂದು ಪೈಸೆಯ ನೈತಿಕತೆ ನನಗಿದೆಯೇ...? ಆದ್ರೂ ಜೀವನ ಇಲ್ಲಿಗೆ, ಇಂದಿಗೆ ಇಲ್ಲಿಯೇ ಕೊನೆಗೊಳ್ಳುತ್ತಾ? ನಾಳೆ ನಾನು ಎಲ್ಲೋ ಇರಬಹುದು... ನಮ್ಮ ಮನೆಯಲ್ಲೂ...! ಹುಂ ಅನಿಶ್ಚಿತ ಭವಿಷ್ಯ... ಹೇಕ್... ಇವನು ಏಕೆ ಇಷ್ಟು ಸೈಡ್‌ಲ್ಲಿ ಹೋಗುತ್ತಿದ್ದಾನೆ... ಮಾರ್ಗದ ಮಧ್ಯೆ ಹೋಗಲು ಆಗುವುದಿಲ್ವಾ... ಭಾಷೆ ಇಲ್ಲದ್ದು... ಹೋ ಅವಳು ಈ ರಿಕ್ಷಾ ಹತ್ತುತ್ತಾಳ... ಹುಂ ಚೆನ್ನಾ... ಸಖತ್ ಆಗಿದ್ದಾಳೆ... ಇಲ್ಲ ಅವಳು ಹತ್ತುವುದಿಲ್ಲ... ಸರಿ... ಲೈಟ್ ಕಂಬ... ಇಲ್ಲಿ ತಡೆಬೇಲಿಗಳೇ ವಿಚಿತ್ರವಾಗಿದೆ... ಹೇ... ಆ ಮುಂದಿನ ಗಾಡಿಯ ನಂಬರ್ ಎಷ್ಟು ಚೆನ್ನಾಗಿದೆ... ಈ ಗಾಡಿಗಳ ನಂಬರ್‌ನಲ್ಲಿ ಆಟ ಆಡೋದೆ ಮಜಾ... ಒಳ್ಳೆ  ಗಮ್ಮತ್ತು... ಆ ಕಾರಿನ ನಂಬರ್ ವಿಚಿತ್ರವಾಗಿದೆ... ಇದು ಸರಿಯಿಲ್ಲ... ಈ ನಂಬರ್ ತುಂಬ ಕೆಟ್ಟದಾಗಿದೆ... ಅದು ನಂಬರ್ ಚೆನ್ನಾಗಿದೆ... ಹೇ ಅದು ಅಂಧ್ರದ ರಿಜಿಸ್ಟ್ರೇಷನ್... ನಾನು ಕರ್ನಾಟಕದ ೭-೮ ಗಾಡಿ ನೋಡಿದ್ದೇನೆ ಇಲ್ಲಿ... ಗಾಡಿಯಲ್ಲಿ ನಂಬರ್ ಪ್ಲೇಟ್ ನೋಡಿ ಎಲ್ಲಿಯ ಗಾಡಿ ಅಂತ ಹೇಳೋದು ಸುಲಭ... ಆದ್ರೆ ಅದಕ್ಕಿಂತ ಮುಖ, ಕೂದಲು ನೋಡಿ ಇವರೆಲ್ಲಿಯವರು ಅಂತ ಗುರುತಿಸುವುದು... ಈ ವಿಷಯದಲ್ಲಿ ಶೆಟ್ರು ಹುಷಾರಿದ್ದಾರೆ... ಒಳ್ಳೆ ಸ್ಪೀಡ್ ಪಿಕ್ ಅಪ್ ಮಾಡ್ಕೊಂಡ... ಹುಷಾರಿದ್ದಾನೆ... ಹಾಡು ಕೂಡ ಹಾಡುತ್ತಿದ್ದಾನೆ... ಜಾಲಿ ಬಾಯ್ ಅನ್ನಬಹುದು... ಹೋ ಅವನ್ಯಾಕೆ ಹೀಗೆ ಮಾರ್ಗ ದಾಟುತ್ತಿದ್ದಾನೆ... ಹುಚ್ಚ... ಸೆನ್ಸ್ ಇಲ್ಲ... ಅಲ್ಲ, ನಾವು ಹೇಳುತ್ತಿರುತ್ತೇವೆ... ಅದರಲ್ಲೂ ನಾನು... ನಾನ್ಯಾರನ್ನು ನಂಬುವುದಿಲ್ಲ... ಹಾಗೇ ಹೀಗೆ ಎಂತ... ಆದ್ರೆ ಅದು ಬೊಗಸ್... ನಾವು ರಸ್ತೆ ದಾಟುವಾಗ ಮುಂದಿನಿಂದ, ಅತ್ತಲಿಂದ, ಇತ್ತಲಿಂದ ಬರುವ ವಾಹನ ಚಾಲಕರನ್ನು ನಂಬಿಯೇ ದಾಟಿರುತ್ತೇವೆ... ನಾವು ಹೋಟೆಲ್‌ಗೆ ಹೋಗಿ ತಿನ್ನುವುದು, ಮಾರುಕಟ್ಟೆಗೆ ಹೋಗಿ ತರಕಾರಿ ತೆಗೆದುಕೊಳ್ಳುವುದು, ಇನ್ನೊಬ್ಬರ ಮನೆಗೆ ಹೋಗಿ ಊಟ ಮಾಡುವುದು, ಈ ರಿಕ್ಷಾದಲ್ಲಿ ಕುಳಿತದ್ದು... ಎಲ್ಲ ನಂಬಿಕೆಯ ಮೇಲೆ ತಾನೆ... ನಮ್ಮನ್ನು ಯಾರಿಗೂ ಏನೂ ಬೇಕಾದರೂ ಮಾಡಬಹುದು... ಆದ್ರೂ ಮಾಡಲಿಕ್ಕಿಲ್ಲ...ಅನ್ನುವ ನಂಬಿಕೆ... ಮತ್ತೇ ಹೇಳುತ್ತೇನೆ ಯಾರನ್ನೂ ನಂಬೋದಿಲ್ಲ ಅಂತ... ಅಲ್ಲ, ಈ ರಸ್ತೆ ದಾಟುವುದು ನಿಜಕ್ಕೂ ಅದ್ಭುತ ಪ್ರತಿಕ್ರಿಯೆ... ನಮಗೆ ನಾವು ಎಷ್ಟು ಸ್ಪೀಡ್ ದಾಟಬಹುದು ಅಂತ ಗೊತ್ತಿರಬೇಕು... ಇನ್ನು ಅವನು ಗಾಡಿ ಎಷ್ಟು ಫಾಸ್ಟ್ ಆಗಿ ಓಡಿಸುತ್ತಿದ್ದಾನೆ ಎಂದು ಲೆಕ್ಕ ಹಾಕಬೇಕು... ಆ ಗಾಡಿ ಯಾವುದು ಎಂದು ಗಮನಿಸ್ಕೋಬೇಕು... ಅಕ್ಕ ಪಕ್ಕ ಬೇರೆ ಯಾವುದಾದರೂ ಗಾಡಿ ಬರುತ್ತಿದೆಯಾ ಎಂದು ನೋಡ್ಕೊಬೇಕು... ಮತ್ತೇ... ಈ ಬಸ್‌ನವ ಏಕೆ ಹೀಗೆ ಹಾರ್ನ್ ಹಾಕುತ್ತಿದ್ದಾನೆ... ಇಲ್ಲೇ ನಿಲ್ಲಿಸಿಬಿಟ್ಟ... ಸರಿ ಹಣ ಕೋಡಬೇಕಲ್ಲ... 

ನೋಡೋಣ... ಮೊನ್ನೆ ಸಂಜನಾ ಹೀಗೆ ಮಾತನಾಡುತ್ತಿದ್ದಾಗ... ಡಿಸೆಂಬರ್‌ನಲ್ಲಿ ಎಂಗೇಜ್‌ಮೆಂಟ್ ಏಪ್ರಿಲ್‌ನಲ್ಲಿ ಮದುವೆ... ಬೇಡ ಬೇಡ ಏಪ್ರಿಲ್‌ನಲ್ಲಿ ಇಲ್ಲಿ ಸೆಖೆ ಶುರುವಾಗುತ್ತೆ ಅಡ್ಜಸ್ಟ್ ಆಗೋಕ್ಕೆ ಕಷ್ಟ ಆಗುತ್ತೆ ಅಂದೆ... ಅಷ್ಟರಲ್ಲಿ ಎಂಗೇಜ್‌ಮೆಂಟ್‌ಗೂ ಮದುವೆಗೂ ಏಕೆ ಮೂರು ತಿಂಗಳು ಗ್ಯಾಪ್ ಅಂತ ಕೇಳಿದಾಗ ಅರ್ಥ ಮಾಡಿಕೊಳ್ಳಲು ಅನ್ನುತ್ತಾಳೆ... ಹುಂ ಅರ್ಥ ಮಾಡಿಕೊಳ್ಳುವುದು ಅನ್ನುವುದರ ಬದಲು ಕಂಪ್ರಾಮೈಸ್ ಮಾಡಿಕೊಳ್ಳಲು, ಅರ್ಥಾತ್ ಹೊಂದಾಣಿಕೆ ಮಾಡಿಕೊಳ್ಳಲು ಅಂದರೆ ನಿಜ ವ್ಯಕ್ತಿತ್ವ ಕಳೆದುಕೊಳ್ಳಲು ಇರುವ ಸಮಯ ಅದು ಎಂದು ನಾನು ಅವಳ ಜೊತೆ ಚರ್ಚೆ ಮಾಡಿದ್ದೆ... ಆಕೆಗೆ ಏನೂ ತೋಚಿತ್ತೋ... ದೇವರಿಗೆ ಗೊತ್ತು... ಅಷ್ಟಕ್ಕೂ ವ್ಯಕ್ತಿತ್ವ ಎಂದರೆ ಏನು ಮೊನ್ನೆ ತಾನೇ ಒಬ್ಬನಿಗೆ ಒಂದು ವ್ಯಕ್ತಿತ್ವ ಪ್ರಾಪ್ತಿ ಆಗುವುದು ನಾಲ್ವತ್ತು ದಾಟಿದ ಮೇಲೆ ಎಂದು ಓದಿದ್ದೆ... ಹಾಗಾದ್ರೆ ಈಗ ನಮಗೆ ಪರ್ಸನಾಲಿಟಿ ಅನ್ನುವುದು ಇಲ್ವಾ... ಈಗ ಈ ಪ್ರಾಯದಲ್ಲಿ ಇರುವುದು ಪರ್ಸನಾಲಿಟಿ ಅಲ್ಲ ಕ್ಯಾರೆಕ್ಟರ್... ಅಂದರೆ ಗುಣ... ಹುಂ ಕೆಲವರ ಜೊತೆ ಮಾತನಾಡುವುದು ಎಂದರೆ ತುಂಬಾ ಖುಷಿ... ಸೀಮಾಳ ವಾಯ್ಸ್ ನಿಜಕ್ಕೂ ಜೇನು... ಅದೂ ಫೋನ್‌ನಲ್ಲಿ... ಇನ್ನು ಕೆಲವರ ಜೊತೆ ಮಾತನಾಡುವುದೆಂದರೆ ಬೋರೋ ಬೋರು... ಹುಂ ಅಂಕಿತಾ ನನ್ನ ಬಗ್ಗೆ ಹೀಗೆ ಹೇಳಿದ್ದಳು... ಪಾಪಾ ನನಗೆ ಅದು ಗೊತ್ತಾಗಿಲ್ಲ ಎಂದು ತಿಳಿದುಕೊಂಡಿರಬೇಕು... ಪಾಪಾ ಮಗು... ಇಲ್ಲ, ನಾನು ನನ್ನ ಜೊತೆ ಹೇಗಿರುತ್ತಾರೋ ಹಾಗೇ ಅವರ ಜೊತೆಗೂ ಇರುತ್ತೇನೆ... ಅವಳೋ ಪಕ್ಕಾ ಕ್ಯಾಲ್ಕುಲೇಟೆಡ್... ಅಂತವರ ಜೊತೆ ಹಾಗೇ ವ್ಯವಹರಿಸುವುದು ನನ್ನ ಗುಣ... ಹೃದಯದಿಂದ ವ್ಯವಹರಿಸುವವರ ಜೊತೆಗೆ ಹಾಗೆಯೇ ವ್ಯವಹರಿಸಬೇಕು... ಈ ಮಟ್ಟಿಗೆ ಅನುರಾಧ ನಿಜಕ್ಕೂ ಗ್ರೇಟ್... ರೇರ್... ಹುಂ ಮೆಸೇಜ್ ಬಂತು.. ವಾರೆ ...ವಾಹ್ ಇದು ಅವಳೇ ಮೆಸೆಜ್ ಮಾಡಿದ್ದಾಳೆ... ಹೀಗೆ ಎಷ್ಟು ಸಲ ಅಗಿಲ್ಲ... ಯಾರನ್ನಾದರೂ ನೆನಪಿಸಿಕೊಳ್ಳುವಾಗ ಅವರೇ ಮೆಸೆಜ್ ಮಾಡುವುದು, ಕಾಲ್ ಮಾಡುವುದು... ಅದ್ಭುತ... ಕೆಲವೊಂದು ಸಲ ಸೆಟ್ ಕೈಗೆತ್ತಿಕೊಂಡಾಗ ಮೆಸೆಜ್ ಮಾಡುವುದೆಲ್ಲ ಒಂಥಾರ ವಿಚಿತ್ರ... ಹುಂ... ಡಿಗ್ರಿಯಲ್ಲಿ ನನಗೆ ತುಂಬಾ ಜನ ಫ್ರೆಂಡ್ಸ್ ಇದ್ದಾರಲ್ವಾ... ಈಗ ನಾನು ಈಗ ಅವರಿಗೆ ಕಾಲ್ ಮಾಡುವಾಗ.... ಬಹಳ ನಿಧಾನವಾಗಿ... ಇವನ್ಯಾಕೆ ಕಾಲ್ ಮಾಡಿದ ಎಂದೇ ಮಾತನಾಡಿಸುತ್ತಾರೆ... ಸರಿ, ಇಡುತ್ತೇನೆ...ಎಂದಾಗ... ಗಟ್ಟಿ ...ಓಕೆ... ಬಾಯ್....ಸ್ವೀಟ್ ಡ್ರೀಮ್ಸ್.. ಮಣ್ಣು ಮಸಿ ಅಂತ ಜೋರಾಗಿ ಹೇಳುತ್ತಾರೆ... ಅಂದರೆ ಇವನ್ಯಾವಗ ಇಡುತ್ತಾನೆ ಎಂದೇ ಅವರು ಕಾಯುತ್ತಿರುತ್ತಾರೆ... ಇಂತವರಿಗೆ ಮತ್ತೇ ಕಾಲ್ ಮಾಡಬೇಕಾ...? ನಾನು ಹೆಚ್ಚಾಗಿ ಮೂರು ಸಲದ ಸೂತ್ರ ಅನುಸರಿಸುತ್ತಿರುವುದರಿಂದ ಕೆಲವರ ನಂಬರ್ ಇನ್ನೂ ಉಳಿದಿದೆ...

Saturday, October 15, 2011

ಬರೆಯಲಾಗಲಿಲ್ಲ ನನಗೆ ಕವಿತೆ

ಮನದಾಳದ ನೋವು
ಮುಗಿಲೆತ್ತರದ ಈಡೇರದ ಕನಸು
ಎದೆ ತುಂಬ ಕೆಸರು
ಕಣ್ಣತುಂಬ ನೀರು
ಬರೆಯಲಾಗಲಿಲ್ಲ ನನಗೆ ಕವಿತೆ.


ನಗುವೆಂದರೆ ಬೆಟ್ಟದಂಚಿನಿಂದ ಧುಮ್ಮಿಕ್ಕುವ ಝರಿ
ಮಾತೆಂದರೆ ಮಲೆನಾಡಿನ ತುಂತುರು ಹನಿ
ಮೊಗ ತುಂಬ ಸ್ಪೂರ್ತಿಯ ಚಿಲುಮೆ
ಬೊಗಸೆ ತುಂಬ ಬಾಳಸಾಗಿಸುವ ಒಲುಮೆ
ಅದ ಕಂಡಾಗಲೆಲ್ಲ ಮನ ತುಂಬ ಏನೋ ನೀರವತೆ
ಆದರೂ ಬರೆಯಲಾಗಲಿಲ್ಲ ನನಗೆ ಕವಿತೆ


ಕವಿತೆ,
ನಿನ್ನಿರವ ಹೇಳುವ ಗೆರೆಯ ಮೇಲೆ
ಓಡುತ್ತಿಲ್ಲ ಪೆನ್ನು
ಬೆಚ್ಚಿ ಬೀಳುವುದು ಕಾಗದ, ಕಂಡವನಂತೆ ಗನ್ನು!
ಆದರೂ ನನಗೇನೋ ಹಟ
ಕವಿತೆ ಬರೆಯಲೇಬೆಕೆಂದು
ಪಕ್ಕದಲಿದ್ದ ಅಜ್ಜನ ಹೂವು ಹಾಕಿದ ಪೋಟೊ ಗುಣುಗುತ್ತಿತ್ತು
ಎಲೇ ಮಂಕೆ,
ಬರೆಯದಿದ್ದರೂ ಕವಿತೆ ಕವಿತೆಯಾಗುವುದಿಲ್ಲವೇ?
ಥೇಟ್ ನಮ್ಮಂತೆ!

Tuesday, October 4, 2011

ದ್ರಾವಿಡ್ ಏಕದಿನ ಪಂದ್ಯಗಳಿಂದ ನಿವೃತ್ತರಾಗುತ್ತಿದ್ದಂತೆ ಇದೆಲ್ಲ ನೆನಪಾಯಿತು...

ನಾನು ಕ್ರಿಕೆಟ್ ಕಲಿತದ್ದೆ ಗೋಡೆಗೆ ಚೆಂಡು ಹೊಡೆದು, ನಾನು ಕ್ರಿಕೆಟ್‌ನಲ್ಲಿ ಬೆಳೆದದ್ದು ಗೋಡೆಯನ್ನು ನೋಡುತ್ತ...

ರಾಹುಲ್ ದ್ರಾವಿಡ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಾಗ ಮನಸ್ಸಲ್ಲಿ ಕಳವಳ, ನೋವು ಮತ್ತು ನೆನಪುಗಳ ಮಳೆಯೇ ಸುರಿಯುತ್ತಿತ್ತು.

ನನಗೆ ಬಾಲ್ಯದಲ್ಲಿ ಕ್ರಿಕೆಟ್ ಎಂಬ ಒಂದು ಕ್ರೀಡೆಯಿದೆ ಅನ್ನುವುದೇ ಗೊತ್ತಿರಲ್ಲಿಲ್ಲ! ನನಗೆ ಆಡುವುದೆಂದರೆ ಕಣ್ಣಾ ಮುಚ್ಚಾಳೆ, ಮರಕೋತಿಯಾಟ, ಕಳ್ಳ ಪೊಲೀಸ್, ಗಾಡಿ ಬಿಡುವುದು ಹೀಗೆ. ನಾನು ಒಂದರಿಂದ ನಾಲ್ಕನೇ ತರಗತಿ ತನಕ ಓದಿದ್ದು ನಮ್ಮ ಮನೆಯ ಪಕ್ಕದಲ್ಲಿದ್ದ ನಡುಜಾರು, ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿ ನಾವು ಆಡುತ್ತಿದ್ದದ್ದು ಈ ಮೇಲೆ ಹೇಳಿದ ಆಟಗಳನ್ನು ಮಾತ್ರ. ಆದರೆ ಹಿರಿಯ ಪ್ರಾಥಮಿಕ ಶಿಕ್ಷಣ ಆ ಶಾಲೆಯಲ್ಲಿ ಇಲ್ಲದ ಕಾರಣ ನಾನು ಮುಂದಿನ ಶಿಕ್ಷಣಕ್ಕಾಗಿ ನೆರಿಯದ ಅಣಿಯೂರಿನಲ್ಲಿದ್ದ ಮಾವನ ಮನೆಗೆ ಬರಬೇಕಾಯಿತು. ಅಲ್ಲಿಂದ ನಾನು ಹಿರಿಯ ಪ್ರಾಥಮಿಕ ಶಾಲೆ ಬಯಲು ಇಲ್ಲಿಗೆ ಹಿರಿಯ ಪ್ರಾಥಮಿಕ ಶಿಕ್ಷಣಕ್ಕಾಗಿ ಹೋಗಲು ಶುರು ಮಾಡಿದೆ. ಅಲ್ಲಿ ನನ್ನ ಸ್ನೇಹಿತರೆಲ್ಲ ಕ್ರಿಕೆಟ್ ಆಡುತ್ತಿದ್ದರು.

ಮೊದಲಿಗೆ ನನಗೆ ಕ್ರಿಕೆಟ್ ಬ್ಯಾಟ್ ಎಂದರೆ ಹನುಮಂತನ ಗದೆ ರೀತಿಯೇ ಕಾಣಿಸುತ್ತಿತ್ತು! ನನ್ನ ಸ್ನೇಹಿತರು ಅದನ್ನು ಗದೆಯ ರೀತಿಯೂ ಬಳಸುತ್ತಿದ್ದರು! ಕೆಲ ಸಂದರ್ಭದಲ್ಲಿ ಸ್ಟಂಪ್ಸ್ ತ್ರಿಶೂಲವೂ ಆಗುತ್ತಿತ್ತು! ನನಗೆ ೫ನೇ ತರಗತಿಯಲ್ಲಿ ಕ್ರಿಕೆಟ್ ಜೊತೆ ಅಷ್ಟು ತಾಳಮೇಳ ಕೂಡಲಿಲ್ಲ. ನಾನು ಬ್ಯಾಟ್ ಎತ್ತುವ ಮೊದಲೇ ಚೆಂಡು ಕೀಪರ್‌ನ ಬೊಗಸೆಗೋ, ಸ್ಟಂಪ್ಸ್‌ಗೋ ಹೋಗಿ ಬೀಳುತ್ತಿದ್ದು. ಅಕಸ್ಮಾತ್ ಬ್ಯಾಟ್‌ಗೆ ತಾಕಿದರೂ ಅದು ಫಿಲ್ಡರ್‌ನ ಕೈಗೇ. ನಾ ಹೊಡೆದ ಹೊಡೆತಗಳಿಗೂ ಬಲ ಇಲ್ಲದಿರುತ್ತಿದ್ದುದನ್ನು ಗಮನಿಸಿದ್ದ ನನ್ನ ಓರಗೆಯ ಅನುಭವಿ ಆಟಗಾರರು ಎಲ್ಲ ಫಿಲ್ಡರ್‌ಗಳನ್ನು ನನ್ನ ಸುತ್ತ ಮುತ್ತ ನಿಲ್ಲಿಸುತ್ತಿದ್ದರು. ನನಗೆ ಗೋವುಗಳಿಗೆ ಇಂಜೆಕ್ಷನ್ ಅಥವಾ ಚಿಕಿತ್ಸೆ ಕೊಡಲು ಹೆಚ್ಚೆಂದರೆ ೩ ಅಡಿ ಅಗಲ ಮಾತ್ರವಿರುವ ಮೂರು ದಿಕ್ಕಿನಿಂದಲೂ ಕಬ್ಬಿಣದ ರಾಡ್‌ನಿಂದ ಮಾಡಲ್ಪಟ್ಟ ಬೇಲಿ (ಣಡಿives)ಯೊಳಗೆ ನಿಂತ ಗೋವಿನಂತೆ ಅಗುತ್ತಿತ್ತು. ಅದೇಷ್ಟೋ ಬಾರಿ ನಾನು ಬೇಕು ಬೇಕೆಂದೆ ಔಟ್ ಆಗುತ್ತಿದ್ದೆ. ಆಗ ನಾನು ಔಟ್ ಆಗಲು ಕೂಡ ಕಷ್ಟ ಪಡಬೇಕಿತ್ತು! ಏಕೆಂದರೆ ಬ್ಯಾಟ್ ಬಾಲ್‌ಗೆ ತಗೋದೆ ಇಲ್ಲ ಅಂದರೆ ಕ್ಯಾಚ್ ಆದರೂ ಹೋಗೋದು ಹೇಗೆ? ಆಗ ನನಗಿದ್ದ ಒಂದೇ ಒಂದು ಅಪ್ಷನ್ ಎಂದರೆ ಬೌಲ್ಡ್ ಆಗೋದು! ಬೌಲರ್ ಹಾಕಿದ ಬಾಲ್ ಸ್ಟಂಪ್‌ಗೆ ತಾಗುವ ತನಕ ನಾನು ಅನಿವಾರ್ಯವಾಗಿ ಆ ಚಕ್ರವ್ಯೂಹದಲ್ಲೇ ಒದ್ದಾಡಬೇಕಿತ್ತು. ಆಗ ನಾವು ಆಡುತ್ತಿದ್ದದ್ದು ಅಂಡರ್ ಅರ್ಮ್ ಕ್ರಿಕೆಟ್. ನಾನು ಬ್ಯಾಟ್ ಹಿಡಿಯುವಾಗ ಬ್ಯಾಟನ್ನು ನೆಲಕ್ಕೆ ಗಟ್ಟಿ ಒತ್ತಿ ಹಿಡಿಯುತ್ತಿದ್ದೆ. ಈಗ ಬಾಲ್ ಬರುತ್ತಿದೆ ಅದಕ್ಕೆ ಹೊಡೆಯಬೇಕು ಎಂದು ಬ್ಯಾಟ್ ಎತ್ತೋಣ ಎಂದರೆ ಬಾಲ್ ಕೀಪರ್‌ನ ಕೈ ಸೇರುವ ಹೊತ್ತಿಗೆ ನನ್ನ ಬ್ಯಾಟ್ ನೆಲದಿಂದ ಒಂದೋ ಎರಡೋ ಇಂಚು ಮೇಲಿರುತ್ತಿತ್ತು ಅಷ್ಟೆ! ಇನ್ನು ಫಿಲ್ಡಿಂಗ್ ಮಾಡಲು ನಿಂತರೆ ನನ್ನ ಕೈಗೇ ಸಿಗದೇ ಅಥವಾ ಸಿಕ್ಕರೂ ತಪ್ಪಿಸಿಕೊಂಡು ಹೋಗುತ್ತಿದ್ದ ಚೆಂಡುಗಳನ್ನು ಹಿಡಿಯಲು ಮತ್ತೆ ೩-೪ ಫಿಲ್ಡರ‍್ಸ್‌ಗಳು ಬೇಕಿತ್ತು! ಸ್ನೇಹಿತರು ನಾಳೆ ಶಾಲೆಗೆ ಬರುವಾಗ ಮಕ್ಕೇರಿ ಹಿಡಿದುಕೊಂಡು ಬಾ ಅಥವಾ ತೂಂಬು ಎಂದೇ ತಮಾಷೆ ಮಾಡುತ್ತಿದ್ದರು.

ನಾನು ಫಿಲ್ಡಿಂಗ್‌ಗೆ ಒಂದೋ ಬೌಂಡರಿ ಪಕ್ಕ ನಿಲ್ಲುತ್ತಿದ್ದೆ ಇಲ್ಲ ಬ್ಯಾಟ್ಸ್‌ಮನ್‌ನ ಪಕ್ಕ. ಬ್ಯಾಟ್ಸ್‌ಮೆನ್‌ನ ಪಕ್ಕ ನಿಲ್ಲುವುದೆಂದರೆ ನಾನು ಹೆದರಿ ಸಾಯುತ್ತಿದ್ದೆ... ‘ದೇವರೇ ಕಾಪಾಡಪ್ಪ’ ಅನ್ನೋದೆ ನನ್ನ ಪ್ರತಿಕ್ಷಣದ ಪ್ರಾರ್ಥನೆಯಾಗಿತ್ತು. ಕೈಯಲ್ಲಿ ಚೆಂಡು ಹಿಡಿಯುವುದರ ಬದಲು ನನ್ನ ಪ್ರಾಣವನ್ನೇ ಕೈಯಲ್ಲಿ ಹಿಡಿದುಕೊಂಡು ನಿಲ್ಲಬೇಕಿತ್ತು ನಾನು! ಅದರಲ್ಲೂ ನಾವಾಗ ಕ್ರಿಕೆಟ್ ಆಡುತ್ತಿದ್ದದ್ದು ಟೆನ್ನಿಸ್ ಬಾಲ್‌ನಲ್ಲಿ ಅಲ್ಲ ರಬ್ಬರ್ ಬಾಲ್‌ನಲ್ಲಿ! ನಾವು ಟೆನ್ನಿಸ್ ಬಾಲ್‌ಗೆ ಕವರಿಂಗ್ ಬಾಲ್ ಎಂದು ರಬ್ಬರ್ ಬಾಲ್‌ಗೆ ಹಾರ್ಡ್ ಬಾಲ್ ಎಂದು ಹೇಳುತ್ತಿದ್ದೆವು.

ರಾಹುಲ್ ದ್ರಾವಿಡ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವಾಗ ನಾನು ನಮ್ಮ ಶಾಲೆಯ ಮೈದಾನದಲ್ಲಿ ಅಂಬೆಗಾಲಿಡುತ್ತಿದ್ದೆ! ಐದನೇ ತರಗತಿ ಮುಗಿಯುತ್ತ ಬಂದಂತೆ ಅದು ಹೇಗೋ ನನಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಕುದುರಿತು. ಸಂಜೆ ಶಾಲೆ ಬಿಟ್ಟು ಬಂದು ಕೊಟ್ಟಿಗೆಯ ಗೋಡೆಗೆ ಚೆಂಡನ್ನು ಬಡಿದು ಬ್ಯಾಟಿಂಗ್, ಫಿಲ್ಡಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ನಮ್ಮ ಮನೆಯ ಪಕ್ಕ ನಮಗೆ ಸೇರಿದ ದೊಡ್ಡ ಮೈದಾನವಿತ್ತು. ಆದರೆ ಆ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದಗಳಿದ್ದರಿಂದ ಅಲ್ಲಿ ಆಡುವಂತಿರಲಿಲ್ಲ. ನನಗೆ ಆಗ ಓವರ್‌ಆರ್ಮ್ ಬೌಲಿಂಗ್ ಅನ್ನುವುದು ಇದೆ ಎಂದೇ ಗೊತ್ತಿರಲಿಲ್ಲ. ನಮ್ಮ ಶಾಲೆಯಲ್ಲಿ ಕೂಡ ಕೆಲವರಿಗೆ ಮಾತ್ರ ಓವರ್‌ಆರ್ಮ್ ಬೌಲಿಂಗ್‌ನ ಕಲೆ ಸಿದ್ಧಿಸಿತ್ತು. ಅವರು ಓವರ್‌ಆರ್ಮ್ ಕ್ರಿಕೆಟ್ ಆಡೋಣ ಅಂತ ವಾದಿಸಿದರೆ ಉಳಿದವರು ಬೇಡ ಅಂಡರ್‌ಅರ್ಮ್ ಕ್ರಿಕೆಟ್ ಆಡೋಣ ಅಂತ. ನಂತರ ನಾನು ಅದು ಹೇಗೋ ಓವರ್‌ಅರ್ಮ್‌ನ ಬಗ್ಗೆ ತಿಳಿದುಕೊಂಡು ಓವರ್‌ಅರ್ಮ್ ಬೌಲಿಂಗ್ ಕಲಿತೆ...

ನಾನು ಆರನೇ ತರಗತಿಯಲ್ಲಿ ಇದ್ದೆ... ಮನೆಗೆ ಟಿವಿ ಬಂತು... ಅದರಲ್ಲಿ ಅಗಾಗ ಕ್ರಿಕೆಟ್ ಬರುತ್ತಿತ್ತು, ನನ್ನ ಅಜ್ಜನಿಗೂ ಕ್ರಿಕೆಟ್ ಮೇಲಿನ ಪ್ರೀತಿ... ಮಳೆಗಾಲವಾದ್ದರಿಂದ ಶಾಲೆಯಲ್ಲಿ ಆಡಲು ಬಿಡುತ್ತಿರಲಿಲ್ಲ. ಆದರೆ ಮನೆಯಲ್ಲಿ ನಾನು ಏಕಲವ್ಯನ ರೀತಿ ಹೆಚ್ಚಿನ ದಿನ ಬೌಲಿಂಗ್, ಫಿಲ್ಡಿಂಗ್ ಮತ್ತು ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ನನ್ನ ಪ್ರ್ಯಾಕ್ಟೀಸ್‌ಗೆ ಸಿಕ್ಕ ಮನೆ ಮತ್ತು ಕೊಟ್ಟಿಗೆಯ ಗೋಡೆಯ ತುಂಬ ಚೆಂಡಿನ ತರಹೇವಾರಿ ಗುರುತುಗಳು! (ನನ್ನದು ನೆಟ್ ಪ್ರ್ಯಾಕ್ಟೀಸ್ ಅಲ್ಲ ಗೋಡೆ ಪ್ರ್ಯಾಕ್ಟೀಸ್!)ನನಗೆ ಬೈಗುಳದ ಸುರಿಮಳೆ.

ಆರನೇ ತರಗತಿಯಲ್ಲಿ ಚಿಕ್ಕ ರಜೆ ಅಂದರೆ ದಸರಾ ರಜೆಯ ಬಳಿಕ ಶಾಲೆಯಲ್ಲಿ ನಮ್ನನ್ನು ಆಡಲು ಬಿಡುತ್ತಿದ್ದರು. ಆಗ ಟೀಮ್‌ನ್ನು ನಾವು ಒಂದೋ ಮೈದಾನದಲ್ಲಿ ಅಥವಾ ಕ್ಲಾಸ್‌ನಲ್ಲಿಯೇ ಮಾಡುತ್ತಿದ್ದೆವು. ಆಗ ಇಬ್ಬರು ನಾಯಕರನ್ನು ಮೊದಲು ಆಯ್ಕೆ ಮಾಡಿ ನಂತರ ಕ್ರಿಕೆಟ್ ಆಡಲು ಆಸಕ್ತಿ ಇರುವ ಮಕ್ಕಳಲ್ಲಿ ಅವರು ಅವರಿಗೆ ಇಷ್ಟವಾದವರನ್ನು ಆ ನಾಯಕರು ಒಬ್ಬರ ನಂತರ ಒಬ್ಬರಂತೆ ಕರೆಯುತ್ತಿದ್ದರು. ಇದರಲ್ಲಿ ಮೊದ ಮೊದಲು ಒಳ್ಳೆ ಆಟಗಾರರು ಯಾವುದಾದರೂ ಒಂದು ತಂಡ ಸೇರುತ್ತಿದ್ದರು... ಕೊನೆಗೆ ಅನಿವಾರ್ಯವಾಗಿ ನನ್ನನ್ನು ಸೇರಿಸಿಕೊಳ್ಳುತ್ತಿದ್ದರು. ಅಗ ನಾನು ತಂಡಕ್ಕೆ ಹೊರೆಯಾಗಿಯೇ ಇರುತ್ತಿದ್ದೆ! ನನ್ನನ್ನು ಲೆಕ್ಕ ಭರ್ತಿಗೆ ಎಂದು ಕೂಡ ಹೇಳುವಂತಿರಲಿಲ್ಲ ಹಾಗಿತ್ತು ನನ್ನ ಸ್ಥಿತಿ. ಆದರೆ ನಾನು ಏನು ಎಂದು ಗೊತ್ತು ಮಾಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಒಂದು ದಿನ ನಾನು ಲಾಂಗ್ ಅಫ್‌ನಲ್ಲಿ ಫಿಲ್ಡಿಂಗ್ ಮಾಡುತ್ತಿದ್ದೆ. ಒಬ್ಬ ಆಟಗಾರ (ಬಹುಶಃ ದಾಮೋದರ) ಹೊಡೆದ ಚೆಂಡು ಆಕಾಶದೆತ್ತರ ಚಿಮ್ಮಿತ್ತು. ಎಲ್ಲರೂ ಅದನ್ನು ಫೋರ್ ಅಥವಾ ಸಿಕ್ಸ್ ಎಂದೇ ಭಾವಿಸಿದ್ದರು ಆದರೆ ನಾನದನ್ನು ಕ್ಯಾಚ್ ಆಗಿ ಪರಿವರ್ತಿಸಿದ್ದೆ! ಆ ಬಳಿಕ ಇಂತಹದ್ದೆ ಎರಡು ಮೂರು ಕ್ಯಾಚ್‌ಗಳನ್ನು ಪಡೆದೆ. ಆಗ ನನ್ನ ಫಿಲ್ಡಿಂಗ್ ಸಾಮರ್ಥ್ಯ ಬೆಳಕಿಗೆ ಬಂದಿತ್ತು. ನಾನು ನನ್ನ ಫಿಲ್ಡಿಂಗ್‌ಗಾಗಿಯೇ ತಂಡಗಳಿಗೆ ಐದರಿಂದ ಆರನೇ ಸ್ಥಾನದಲ್ಲಿ ಸೇರ್ಪಡೆಯಾಗುತ್ತಿದ್ದೆ. ಎಲ್ಲಿ ಅಗತ್ಯವೋ ಅಲ್ಲಿ ಫಿಲ್ಡಿಂಗ್ ಮಾಡುತ್ತಿದ್ದೆ. ನನಗೋ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಅಥವಾ ತಂಡಗಳಲ್ಲಿ ಸ್ಥಾನ ಪಡೆಯಲು ಇದ್ದ ಏಕೈಕ ಕ್ಷೇತ್ರವೆಂದರೆ ನನ್ನ ಫಿಲ್ಡಿಂಗ್. ನನಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗುತ್ತಿರಲಿಲ್ಲ. ಸಿಕ್ಕರು ಒಂದೆರಡು ಎಸೆತಗಳು ಅಷ್ಟೆ.

ಆ ಬಳಿಕ ನಮ್ಮಲ್ಲಿ ಓವರ್‌ಅರ್ಮ್ ಕ್ರಿಕೆಟ್ ಆಡೋಣ ಎಂಬ ನಿರ್ಧಾರವಾಯಿತು. ಅದರೆ ಸಮಸ್ಯೆ (ನನಗೆ ವರ) ಎಂದರೆ ನಮ್ಮಲ್ಲಿ ಓವರ್‌ಆರ್ಮ್ ಬೌಲಿಂಗ್ ಮಾಡುವ ಬೌಲರ್‌ಗಳು ಹೆಚ್ಚಿರಲ್ಲಿಲ್ಲ. ಬಹುಶಃ ಒಟ್ಟು ೪ ಮಂದಿ ಇದ್ದಿದ್ದಿರಬೇಕು. ಆದರೆ ಅವರು ಸ್ವಲ್ಪ ’ದೊಡ್ಡ ಜನಗಳು’ ಆಗಿದ್ದರಿಂದ ಉಳಿದವರು ಕೂಡ ಓವರ್ ಆರ್ಮ್ ಕ್ರಿಕೆಟ್ ಆಡಲು ಒಪ್ಪಿಕೊಂಡರು. ಆದರೆ ನನಗೆ ಬೌಲಿಂಗ್ ಮಾಡಲು ಬರುತ್ತದೆ ಎಂದು ಹೇಳಲು ಭಯ. ಏಕೆಂದರೆ ನಮ್ಮ ತಂಡದ ಸೋಲಿಗೆ ನಾನೇ ಕಾರಣವಾದರೆ ಎಂಬುದು! ಮತ್ತೇ ಯಾವುದೋ ಒಂದು ದಿನ ಅಚಾನಕ್ ಆಗಿ ನನಗೆ ಬೌಲಿಂಗ್ ಅವಕಾಶ ಸಿಕ್ಕಿತು. ಆದರೆ ನನ್ನ ಬೌಲಿಂಗ್ ಸಾಮರ್ಥ್ಯ ಇನ್ನು ಹೊರ ಬಂದಿರಲಿಲ್ಲ. ಇದೇ ಸಂದರ್ಭದಲ್ಲಿ ನಮ್ಮಲ್ಲಿ ಮತ್ತೊಂದು ನಿಯಮ ಜಾರಿಗೆ ತಂದೆವು. ಅದೇನೆಂದರೆ ಬೌಲಿಂಗ್ ಮಾಡಲಾರದವರನ್ನು ಬ್ಯಾಟಿಂಗ್‌ಗೆ ಮೊದಲು ಕಲಿಸುವುದು ಎಂದು. ಇದೆಲ್ಲ ’ದೊಡ್ಡ ಜನಗಳ’ ಓಲೈಕೆ ತಂತ್ರಗಳಾಗಿದ್ದವು. ಇಲ್ಲ ಎಂದರೆ ಅವರು ಕ್ರಿಕೆಟ್ ಆಡಲೇ ಬರುತ್ತಿರಲಿಲ್ಲ. ಇದರಿಂದ ನನಗೆ ಬ್ಯಾಟಿಂಗ್ ಮಾಡುವ ಅವಕಾಶ ಕೂಡ ಸಿಗಲು ಆರಂಭಿಸಿದವು. ನಾನು ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಆರಂಭಿಸಿದೆ. ಬೌಲಿಂಗ್‌ನಲ್ಲಿಯೂ ಕೂಡ ಮಿಂಚುತ್ತಿದ್ದೆ. ಕವರಿಂಗ್ ಬೌಲಿಂಗ್‌ನ್ನು ಕೂಡ ಎರಡು ಕಡೆಗೂ ಸ್ವಿಂಗ್ ಮಾಡುವುದನ್ನು ಕಲಿತೆ. ಇದರಿಂದ ನಾನು ತಂಡಗಳಿಗೆ ಮೂರನೇ ಹೆಸರಾಗಿ ಸೇರುತ್ತಿದ್ದೆ. ಲೆಕ್ಕಕ್ಕೂ ಸಿಗದ ಆಟಗಾರನಾಗಿದ್ದ ನಾನು ಲೆಕ್ಕ ಚುಕ್ತ ಮಾಡುವ ಆಟಗಾರನಾದೆ.

ಇತ್ತ ಮನೆಯಲ್ಲಿಯೂ ಕ್ರಿಕೆಟ್ ಆಡಲು ಶುರು ಮಾಡಿದೆವು. ಮಾವ, ನಾನು, ಸುರೇಶ, ಹೇಮಂತ್, ಇಲಿಯಾರ್ಸ್, ಇಕ್ಬಾಲ್ ಹೀಗೆ. ಕ್ರಿಕೆಟ್ ಕೂಡ ನೋಡುತ್ತಿದ್ದೆವು, ಇದೇ ವೇಳೆ ಊರಲ್ಲಿ ಒಂದೆರಡು ಮನೆಗಳಲ್ಲಿ ಮಾತ್ರ ಟಿವಿ ಇದ್ದುದ್ದರಿಂದ ನಮ್ಮ ಮನೆಗೆ ಕ್ರಿಕೆಟ್ ಮ್ಯಾಚ್ ನೋಡಲು ಕನಿಷ್ಠ ಪಕ್ಷ ೧೫-೨೦ ಜನ ಬರುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಚರ್ಚೆಗಳು ನನಗೆ ತುಂಬಾ ಸಹಾಯ ಮಾಡುತ್ತಿದ್ದವು. ನಾನು ಟಿವಿಗಿಂತ ೩ ಅಡಿ ದೂರದಲ್ಲಿಯೇ ಕುರ್ಚಿಯಲ್ಲಿ ಕುಳಿತು ಮ್ಯಾಚ್ ನೋಡುತ್ತಿದ್ದೆ. ಈ ಕುರ್ಚಿಗಾಗಿ ನನಗೂ ನನ್ನ ಅಜ್ಜನಿಗೂ ಕುರ್ಚಿ ಕದನವೇ ನಡೆಯುತ್ತಿತ್ತು!

ಏಳನೇ ತರಗತಿ ಬಳಿಕ ನನ್ನ ಕ್ರಿಕೆಟ್ ಸುವರ್ಣಯುಗವೇ ಪ್ರಾರಂಭವಾಯಿತು. ನಾನೇ ಅನೇಕ ಸಂದರ್ಭಗಳಲ್ಲಿ ತಂಡದ ನಾಯಕನಾಗುತ್ತಿದ್ದೆ. ಮನೆಯಲ್ಲಿಯೂ ದಿನಲೂ ಕ್ರಿಕೆಟ್ ಆಡುತ್ತಿದ್ದೆ. ಹೊರಗೆ ಬೇರೆ ಬೇರೆ ಕ್ಲಬ್‌ಗಳ ಪರವಾಗಿ ಆಡಲು ಶುರುಮಾಡಿದೆ. ಒಪನಿಂಗ್ ಬ್ಯಾಟ್ಸ್‌ಮೆನ್, ಒಪನಿಂಗ್ ಬೌಲರ್ ಆಗಿ ರೂಪುಗೊಂಡೆ. ಈ ಮಧ್ಯೆ ನಾನು ದ್ರಾವಿಡ್‌ನ ಪ್ರಭಾವಕ್ಕೆ ತುತ್ತಾದೆ. ನಾನು ಆರಂಭಿಕ ಆಟಗಾರನಾಗುವುದನ್ನು ನನ್ನ ಸ್ನೇಹಿತರು ವಿರೋಧಿಸಲಾರಂಭಿಸಿದರು! ಏಕೆಂದರೆ ನಾನು ಔಟ್ ಆಗುತ್ತಿರಲಿಲ್ಲ! ಇದರಿಂದ ಅವರಿಗೆ ಬ್ಯಾಟಿಂಗ್ ಸಿಗುತ್ತಿರಲಿಲ್ಲ. ಇತ್ತ ಮನೆಯಲ್ಲಿಯೂ ಕ್ರಿಕೆಟ್ ಆಡುವುದು ದಿನಚರಿಯ ಭಾಗವೇ ಆಗಿ ಹೋಯಿತು. ನಮ್ಮ ಅಂಗಳದಲ್ಲಿ ಎರಡು ಪಿಚ್‌ಗಳಿದ್ದವು. ನಮ್ಮ ದೊಡ್ಡ ಅಂಗಳಕ್ಕೆ ಮಳೆಗಾಲದಲ್ಲಿ ತೆಂಗಿನ ಕೊತ್ತಲಿಗೆ, ಅಡಿಕೆ ಸೋಗೆ ಹಾಕುತ್ತಿದ್ದರಿಂದ ಮತ್ತೊಂದು ಸಣ್ಣ ಅಂಗಳದಲ್ಲಿ ನಾವು ಅನಿವಾರ್ಯವಾಗಿ ಆಡುತ್ತಿದ್ದೆವು. ಆದರೆ ನನಗೆ ಕೋಪ ಬರುತ್ತಿದ್ದದ್ದು ಬೇಸಿಗೆಯಲ್ಲಿ! ಏಕೆಂದರೆ ಆಗ ನಮ್ಮ ದೊಡ್ಡ ಅಂಗಳದಲ್ಲಿ ಪೂರ್ತಿ ಅಡಿಕೆ ಇರುತ್ತಿತ್ತು. ಆಗ ನಾವು ಪುನಃ ಒಲ್ಲದ ಮನಸ್ಸಿನಿಂದ ಸಣ್ಣ ಅಂಗಳಕ್ಕೆ ನಮ್ಮ ಮೈದಾನವನ್ನು ಸ್ಥಳಾಂತರಿಸಬೇಕಿತ್ತು. ಯಾಕಾದ್ರೂ ಇಷ್ಟು ಅಡಿಕೆ ಆಗುತ್ತದೆ ಎಂದು ನಾನು ಆಗ ಶಾಪ ಹಾಕುತ್ತಿದ್ದೆ!

ನಮ್ಮ ಕ್ರಿಕೆಟ್ ಆಟದ ಹುಚ್ಚು ಜಾಸ್ತಿ ಆಗುತ್ತಿದ್ದಂತೆ ಒಂದು ದಿನ ನಮ್ಮ ಅಜ್ಜಿ ನಮ್ಮ ವಿಕೆಟ್‌ಗಳನ್ನು ಒಲೆಗೆ ಹಾಕಿದ್ರು. ಆ ವಿಷಯ ಗೊತ್ತಾಗುತ್ತಲೆ ನಾವು ಕುಟ್ಟಿ ದೊಣ್ಣೆ, ಲಗೋರಿ ಆಡಲು ಶುರು ಮಾಡಿದೆವು. ಒಂದೆರಡು ದಿನಗಳ ಕಾಲ ನಮ್ಮ ಈ ಹೋರಾಟ ಚಾಲ್ತಿಯಲ್ಲಿತ್ತು ಆದ್ರೆ ಕೊನೆಗೂ ನಮಗೆ ಕ್ರಿಕೆಟ್ ಹೊರತಾದ ಮತ್ತೊಂದು ಆಟದಲ್ಲಿ ಮಜಾ ಬರುತ್ತಿರಲಿಲ್ಲ. ಮತ್ತೆ ಸ್ಟಂಪ್ಸ್ ಮಾಡಿ ಕ್ರಿಕೆಟ್ ಆಡ ತೊಡಗಿದೆವು.

ನಮ್ಮ ಮನೆಯ ಅಂಗಳಕ್ಕೆ ತಾಕಿಕೊಂಡು ಪೊದರೆಗಳು ಇದ್ದ ಕಾರಣ ಚೆಂಡು ಅಲ್ಲಿ ಬಿದ್ದು ಕಾಣದಾಗುತ್ತಿತ್ತು. ಆಗ ಚೆಂಡು ಹುಡುಕುವ ಕಾರ್ಯಕ್ರಮ! ಕೆಲವು ಬಾರಿ ಇದು ದಿನಗಟ್ಟಲೆ ಸಾಗುತ್ತಿತ್ತು. ನನ್ನ ಕೆಲವು ಸ್ನೇಹಿತರು ಚೆಂಡು ಬಿಸಾಕಿ ಹೋಗುವ ತನಕ ನಮ್ಮ ಜೊತೆ ಇದ್ದು ಆ ಬಳಿಕ ಏನೇನೋ ಸಾಬೂಬು ನೀಡಿ ಅಲ್ಲಿಂದ ಪರಾರಿಯಾಗುತ್ತಿದ್ದರು. ನಾವು ಉಳಿದವರು ಎಲ್ಲ ದೇವರ ಹೆಸರನ್ನು ಸ್ಮರಿಸಿ, ಅಜ್ಜನಿಗೆ ಎಲೆ ಅಡಿಕೆ ಇಡುತ್ತೇವೆ ಎಂದು ಹರಕೆ ಹೊರುತ್ತಾ ಚೆಂಡು ಹುಡುಕುತ್ತಿದ್ದೆವು. ಚೆಂಡು ಸಾಗಿದ ದಿಕ್ಕು, ಅದು ಯಾವ ಕಡೆ ಹಾರಿರಬಹುದು ಎಂಬ ನಮ್ಮ ಲೆಕ್ಕಾಚಾರಗಳು ಈಗ ನೆನಪಿಸಿಕೊಂಡಾಗ ನಗು ಉಕ್ಕಿಸುತ್ತವೆ. ಅದೇಷ್ಟೋ ಬಾರಿ ಕಾಲ ಬುಡದಲ್ಲೆ ಚೆಂಡಿದ್ದರು ಕೂಡ ಇಡೀ ಪೊದರೆಯನ್ನೇ ಚೆಂಡಾಡಿದ ಬಳಿಕವೇ ಆ ಚೆಂಡು ಸಿಗುತ್ತಿತ್ತು! ಚೆಂಡು ಸಿಕ್ಕಾಗ ಅಜ್ಜನ ನೆನಪೇ ಇಲ್ಲ... ಮತ್ತೇ ಪುನಃ ಅಂದು ಚೆಂಡು ಬಿಸಾಕಿ ಹೋದರೆ ಮತ್ತೇ ಅಜ್ಜನ ನೆನಪಾಗಿ ಹರಕೆ ತೀರಿಸಿ ಮತ್ತೇ ಅಜ್ಜನಿಗೆ ಹರಕೆ...

ನಾನು ಆರಂಭದಲ್ಲಿ ಹೆಚ್ಚು ಕ್ರಿಕೆಟ್ ಆಡುತ್ತಿದ್ದದ್ದು ಮಾವ ಮತ್ತು ಸುರೇಶನ ಜೊತೆ. ಸುರೇಶ ಸ್ವಲ್ಪ ದಪ್ಪನೇ ಇದ್ದ. ನಾನು ಒಮ್ಮೆ ಹೊಡೆದ ಚೆಂಡು ಅವನ ಕಣ್ಣಿಗೆ ಬಡಿದು ಅವನು ನಂತರ ಕ್ರಿಕೆಟ್ ಆಡಲು ಬರುತ್ತಲೇ ಇರಲಿಲ್ಲ. ಇಷ್ಟರಲ್ಲಿ ನನ್ನ ಮೇಲೆ ಮತ್ತೊಂದು ಆರೋಪ ಬಂದಿತ್ತು... ಅದೇ ಕೆಲಸದವರನ್ನು ಕ್ರಿಕೆಟ್ ಆಡಿಸಿ ನಾನು ಹಾಳು ಮಾಡುತ್ತಿದ್ದೇನೆ ಎಂದು...!

ಹೈಸ್ಕೂಲ್‌ನಲ್ಲಿ ಇನ್ನು ಮಜಬೂತದ ಪ್ರಸಂಗಗಳು ನಡೆಯುತ್ತಿದ್ದವು. ಅಲ್ಲಿ ನಮ್ಮ ಪಿಟಿ ಮಾಸ್ಟ್ರಿಗೆ ಕ್ರಿಕೆಟ್ ಅಂದರೆ ಅಷ್ಟಕಷ್ಟೆ. ಅವರು ನಮಗೆ ಬ್ಯಾ ಟ್, ಸ್ಟಂಪ್ ಕೊಡುತ್ತಿರಲಿಲ್ಲ. "ಹೋಗಿ ವಾಲಿಬಾಲ್ ಆಡಿ" ಅನ್ನುತ್ತಿದ್ದರು. ನಮಗೆ ಆಗ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು ಆದರೆ ಏನು ಮಾಡಲು ಆಗುತ್ತಿರಲ್ಲಿಲ್ಲ. ಆಗ ನಾವು ಹೆಚ್‌ಎಮ್‌ನ್ನು ಭೇಟಿಯಾಗಿ ಅವರ ಮನ ಒಲಿಸಲು ಏನೆಲ್ಲ ಮಾಡಬೇಕೋ ಅದೆಲ್ಲ ಮಾಡಿ ಸ್ಟಂಪ್ಸ್, ಬ್ಯಾಟ್ ತೆಗೆದುಕೊಳ್ಳುತ್ತಿದ್ದೆವು. ಇನ್ನು ಚೆಂಡು ಮೊದಲಿನಿಂದಲೂ ನಾವೇ ಹಣ ಹಾಕಿ ತೆಗೆದುಕೊಳ್ಳುತ್ತಿದ್ದೆವು. ಈ ವಿಷಯದಲ್ಲಿ ನಮ್ಮದು ಸಹಕಾರಿ ಬ್ಯಾಂಕ್ ತತ್ವ.

ನಮ್ಮ ತಂಡ ಅದೇಷ್ಟು ಬಲಿಷ್ಠವಾಗಿತ್ತೆಂದರೆ ನಾವು ೮ನೇ ತರಗತಿಯಲ್ಲಿ ಇರುವಾಗ ೧೦ನೇ ತರಗತಿಯವರಿಗೂ ನಮ್ಮನ್ನು ಸೋಲಿಸಲಾಗುತ್ತಿರಲಿಲ್ಲ! ಈ ಸಂದರ್ಭದಲ್ಲಿ ಬಹುತೇಕ ನಾನು ಆರಂಭಿಕ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಆದರೆ ಒವರ್‌ಗಳ ಸಂಖ್ಯೆ ಒಂದು ಅಥವಾ ಎರಡು ಇದ್ದರೆ ನಾನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ ಬೇಕಿತ್ತು. ಇದಕ್ಕೆ ಕಾರಣ ನನಗೆ ಆಗ ಗೊತ್ತಿರಲಿಲ್ಲ ಆದರೆ ಈಗ ಗೊತ್ತಾಗಿದೆ. ಟೆನ್ನಿಸ್ ಬಾಲ್‌ನ ಬ್ಯಾಟಿಂಗ್ ನಿಂತಿರುವುದೇ ಪವರ್ ಸ್ಟ್ರೋಕ್‌ನ ಮೇಲೆ. ನಾನು ಶಕ್ತಿಶಾಲಿ ಹೊಡೆತಗಳ ಆಟಗಾರನಾಗಿರಲಿಲ್ಲ. ನನ್ನದೇನಿದ್ದರು ಟೆಕ್ನಿಕ್ ಅಷ್ಟೆ. ನನ್ನ ಸ್ವೀಪ್ ಮಾತ್ರ ಬಲಿಷ್ಠ ಹೊಡೆತವಾಗಿರುತ್ತಿತ್ತು. ಆದರೆ ನಮ್ಮ ಹೈಸ್ಕೂಲಿನಲ್ಲಿ ಲೆಗ್ ಸೈಡ್‌ನ ಬೌಂಡರಿ ಗೆರೆ ತುಂಬ ದೂರದಲ್ಲಿತ್ತು. ಆಲ್ಲಿ ಹೆಚ್ಚಿನ ಫಿಲ್ಡರ‍್ಸ್‌ಗಳು ಇರುತ್ತಿದ್ದರು. ಅದ್ದರಿಂದ ನನಗೆ ಕಟ್ಟಿ ಹಾಕಿದಂತಾಗುತ್ತಿತ್ತು. ಆಗ ನಾನು ಥೇಟ್ ದ್ರಾವಿಡ್ ಶೈಲಿಯಲ್ಲೆ ಮುಂದೆ ಬಂದು ಗಲ್ಲ ಕಚ್ಚಿ ಬಾಲ್‌ನ್ನು ಕವರ್‌ಡ್ರೈವ್ ಮಾಡುತ್ತಿದ್ದೆ. ಒಂದೆರಡು ರನ್ ಆಗ ಗ್ಯಾರಂಟಿ ಸಿಗುತ್ತಿತ್ತು. ಮಳೆಗಾಲದಲ್ಲಿ ಅದು ಮೂರು ರನ್ ಆಗುತ್ತಿತ್ತು! ಏಕೆಂದರೆ ನಮ್ಮ ಹೈಸ್ಕೂಲ್‌ನ ಕವರ‍್ಸ್ ಕ್ಷೇತ್ರದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿತ್ತು ಮತ್ತು ಅಲ್ಲಿ ಜಾರುತ್ತಿತ್ತು ಅದ್ದರಿಂದ ಫಿಲ್ಡಿಂಗ್ ಮಾಡಲು ಕಷ್ಟವಾಗುತ್ತಿತ್ತು!

ನಾವು ೯ನೇ ತರಗತಿಗೆ ಬಂದ ಬಳಿಕ ಟೆಸ್ಟ್ ಆಡಲು ಶುರು ಮಾಡಿದೆವು. ಒಂದು ಪಂದ್ಯದಲ್ಲಿ ನಾನು ಮೂರನೇ ಕ್ರಮಾಂಕದಲ್ಲಿ ಇಳಿದಿದ್ದೆ. ನಾವು ಪಂದ್ಯ ಗೆಲ್ಲಬೇಕು ಅಂದರೆ ೧೩೬ ರನ್ ಮಾಡಬೇಕಿತ್ತು. ನಮ್ಮ ತಂಡ ೨೯ ರನ್ನಿಗೆ ೯ ವಿಕೆಟ್ ಕಳೆದುಕೊಂಡಿತ್ತು. ನಾನು ಆ ಪಂದ್ಯವನ್ನು ಗೆಲ್ಲಿಸಿದ್ದೆ ಎಂದರೆ ಇಂದಿಗೂ ನಂಬಲಾಗುತ್ತಿಲ್ಲ...! ಅಂದು ನಾನು ಆಡಿದ್ದು ಎರಡೇ ಕಡೆಗೆ ಒಂದು ಪೈನ್ ಲೆಗ್‌ನತ್ತ ಮತ್ತೊಂದು ಕವರ‍್ಸ್‌ನತ್ತ... ನಮ್ಮಲ್ಲಿ ಫೈನ್ ಲೆಗ್‌ನ ಕಡೆ ಹೈಸ್ಕೂಲ್‌ನ ಕಟ್ಟಡವಿದ್ದುದ್ದರಿಂದ ಅತ್ತ ಚೆಂಡು ಹೋದರೆ ೨ ರನ್ ಓಡದಿದ್ದರೂ ಸಿಗುತ್ತಿತ್ತು ಹಾಗೆ ಕವರ‍್ಸ್‌ನ ಕತೆ ನಾನು ನಿಮಗೆ ಮೊದಲೇ ಹೇಳಿದ್ದೇನೆ. ಕೊನೆಯ ಎಸೆತ ಸಿಂಗಲ್ಸ್ ತೆಗೆಯುತ್ತಿದ್ದೆ. ಕೆಲ ಸಂದರ್ಭದಲ್ಲಿ ಅದು ಅಗುತ್ತಿರಲ್ಲಿಲ್ಲ. ಆದರೂ ನಾವು ಗೆದ್ದೆವು...

ನಮ್ಮ ಮನೆಗೆ ಮ್ಯಾಚ್ ನೋಡಲು ಬರುತ್ತಿದ್ದವರಲ್ಲಿ ದ್ರಾವಿಡ್‌ರನ್ನು ಇಷ್ಟ ಪಡುತ್ತಿದ್ದವರು ತುಂಬ ಕಡಿಮೆ. ‘ಅವನೇನು ಕುಟ್ಟುತ್ತಾನೆ’ ಎಂಬುದೇ ಅವರ ಭಾವನೆ. ಕೆಲವೊಮ್ಮೆ ನನಗೂ ಹಾಗೆ ಅನಿಸುತ್ತಿತ್ತು. ಆದರೆ ಆ ಬಳಿಕ ಕ್ರಿಕೆಟ್ ಆಡುತ್ತಾ ಹೋದಂತೆ ನನಗನಿಸಿದ್ದು ಕೆಂಡದ ಮೇಲೆ ನಡೆಯುವುದಕ್ಕಿಂತ ಓಡುವುದು ಸುಲಭ ಅಂದರೆ ೧೫ ಎಸೆತದಲ್ಲಿ ೩೦ ರನ್ ಮಾಡುವುದಕ್ಕಿಂತ ೩೦ ಎಸೆತದಲ್ಲಿ ೧೫ ರನ್ ಮಾಡುವುದು ಕಷ್ಟ ಎಂದು ಗೊತ್ತಾಯಿತು. ಆದರೆ ಇದು ಏಕದಿನ ಪಂದ್ಯಗಳಿಗೆ ಹೇಳಿ ಮಾಡಿಸಿದ್ದಲ್ಲ ನಿಜ. ಆದರೆ ದ್ರಾವಿಡ್ ಒಮ್ಮೆ ಸೆಟ್ ಆದರೆ ಆ ಬಳಿಕ ಈ ಬಾಲ್ ಮತ್ತು ರನ್‌ನ ನಡುವಿರುತ್ತಿದ್ದ ಅಂತರ ಕಡಿಮೆ ಆಗಿರುತ್ತಿತ್ತು. ಈ ಸಿದ್ಧಾಂತ ಮುಂದೆ ನನ್ನನ್ನು ತುಂಬ ಪ್ರಭಾವಿಸಿತು. ಏನೇ ಆಗಲಿ ಮೊದಲು ನಿಲ್ಲು, ಅಮೇಲಿನದ್ದು ಅಮೇಲೆಗೆ ಅನ್ನುವುದನ್ನು ಕಲಿತೆ. ಒಂದಲ್ಲ ಒಂದು ಕೆಟ್ಟ ಎಸೆತ ಬಂದೆ ಬರುತ್ತೆ ಆಗ ನೀನು ರನ್ ಮಾಡಬಹುದು ಹಾಗೆಯೇ ನೀನು ಒಮ್ಮೆ ಸೆಟ್ ಆದರೆ ಆ ಬಳಿಕ ಕೆಟ್ಟ ಎಸೆತವನ್ನು ಕೂಡ ನಿನ್ನ ಒಳ್ಳೆದಕ್ಕೆ ಬಳಸಿಕೊಳ್ಳಬಹುದು.

ನಾನು ನನ್ನ ಕ್ಲಬ್‌ಗೆ ಆಡಿದ ಪ್ರಥಮ ಪಂದ್ಯದಲ್ಲೆ ಮ್ಯಾನ್ ಅಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡೆ. ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನವನ್ನೆ ನೀಡಿದೆ.

ಆದರೆ ನನ್ನ ಹೈಸ್ಕೂಲ್ ಶಿಕ್ಷಣ ಮುಗಿದ ಬಳಿಕ ನನಗೆ ಕ್ರಿಕೆಟ್ ಆಡುವ ಅವಕಾಶ ಸಿಗುತ್ತಿರಲಿಲ್ಲ. ಕಾಲೇಜ್ ಬಿಟ್ಟು ಬರುವಾಗ ತಡವಾಗಿರುತ್ತಿತ್ತು. ಆದರೆ ಮನೆಯಲ್ಲಿ ಆಡುತ್ತಿದ್ದೆವು. ಆದರೆ ನನಗೆ ಅದು ಸಾಕಾಗುತ್ತಿರಲಿಲ್ಲ. ಡಿಗ್ರಿಗೆ ಬಂದ ಬಳಿಕವಂತೂ ಕ್ರಿಕೆಟ್ ಆಡುವುದು ಅಪರೂಪವಾಯಿತು. ಪಿಜಿಗೆ ಬಂದ ಬಳಿಕವಂತೂ ನಿಂತೇ ಹೋಯಿತು.

ಇವತ್ತು ಚೆಂಡು ಬ್ಯಾಟ್‌ಗೆ ಕನೆಕ್ಟ್ ಮಾಡಲೇ ಪರದಾಡಬೇಕಿದೆ. ಕ್ಯಾಚ್ ಹಿಡಿಯವಾಗ, ಫಿಲ್ಡ್ ಮಾಡುವಾಗ ಮೊದಲಿನ ಆತ್ಮವಿಶ್ವಾಸವಿಲ್ಲ, ಬೌಲಿಂಗ್‌ನಲ್ಲೂ ಮೊದಲಿನ ಹಿಡಿತವು ಇಲ್ಲ. ಕಳೆದ ಫೆಬ್ರ್ರುವರಿಯಲ್ಲಿ ಕನ್ನಡ ಸಂಘದ ವತಿಯಿಂದ ಕ್ರಿಕೆಟ್ ಪಂದ್ಯ ಆಯೋಜಿಸಿದಾಗ ನಾನು ಆಡಲು ತುಂಬ ಕಷ್ಟ ಪಟ್ಟಿದ್ದೆ.