Friday, February 25, 2011

ಎದೆಯ ತುಂಬ ದೆಹಲಿಯದ್ದೇ ಗಾನ...


ದೆಹಲಿ ದೇಶದ ರಾಜಧಾನಿಯೂ ಹೌದು. ದೇಶದ ಎಲ್ಲ ಸಮಸ್ಯೆಗಳ ರಾಜಧಾನಿಯೂ ಹೌದು! ದೆಹಲಿ ನೆಟ್ಟಗಿದ್ದರೆ ದೇಶ ನೆಟ್ಟಗಿರುತ್ತಿತ್ತು. ದೆಹಲಿ ಸೊಟ್ಟಗಿರುವುದರಿಂದಲೇ ದೇಶವೂ ಸೊಟ್ಟಗಿದೆ! ಎರಡೇ ಸಾಲಿನ ತೀರ್ಪಿದು.

ಭಾರತದಂತ ವಿವಿಧತೆಯನ್ನೇ ತನ್ನ ಹಿರಿಮೆ ಮಾಡಿಕೊಂಡ ದೇಶದಲ್ಲಿ ಈ ರೀತಿಯ ತೀರ್ಪು ಅಸಂಬದ್ಧವಾದದ್ದು ಅಥವಾ ಬಾಲಿಶತನದಿಂದ ಕೂಡಿದ್ದು ಎಂದು ನಿಮಗೆ ಅನಿಸಿ ಬಿಡಲು ಅರೆ ಕ್ಷಣ ಸಾಕು. ಆದರೆ ಇದು ನಿಜ ಎಂದು ಒಪ್ಪಿಕೊಳ್ಳಬೇಕಾದರೆ ನಮ್ಮ ದೇಶದ ಇತಿಹಾಸ ಮತ್ತು ವರ್ತಮಾನಗಳ ಒಂದಿಷ್ಟು ಅರಿವಾದರೂ ಬೇಕು.

ದೆಹಲಿಗೆ ಸುಮ್ಮನಿದ್ದು ಗೊತ್ತಿಲ್ಲ ಅಥವಾ ದೆಹಲಿಯನ್ನು ಸುಮ್ಮನಿರಲೂ ಯಾರೂ ಬಿಟ್ಟಿಲ್ಲ. ತುರಿಸಿಕೊಳ್ಳುತ್ತಿರುವುದೇ ದೆಹಲಿಯ ಖಯಾಲಿ! ಪುರಾಣ, ಇತಿಹಾಸಗಳ ಪುಟದಲ್ಲಿ ದೆಹಲಿಯ ಬಗೆಗಿನ ವಿವರಣೆಗಳು ಇದಕ್ಕಿಂತ ಹೆಚ್ಚಾಗಿ ದೆಹಲಿ ಕೇಂದ್ರಿತ ಆಗುಹೋಗುಗಳು ಸ್ಪುಟವಾಗಿ ದೊರೆಯುತ್ತವೆ, ಈ ವಿಷಯದಲ್ಲಿ ದೇಶದ ಇತರ ಮಹಾನಗರಗಳಾದ ಕೋಲ್ಕತ್ತಾ, ಮುಂಬೈ, ಚೆನೈ, ಬೆಂಗಳೂರು, ಹೈದರಾಬಾದ್‌ಗಳು ಬರೀ ಬಚ್ಚಾಗಳು!

ಇಂದ್ರಪ್ರಸ್ಥ, ಕುರುಕ್ಷೇತ್ರ, ಹಸ್ತಿನಾಪುರ ಮುಂತಾದವು ಪುರಾಣದಲ್ಲಿನ ದೆಹಲಿ ಆದರೆ ಅನಂತರ ಮೊಘಲರ ದೆಹಲಿ, ಬ್ರಿಟಿಷರ ದೆಹಲಿ ಮತ್ತೇ ಈಗ ...? ಯಾರ ದೆಹಲಿ? ಅಥವಾ ಯಾರದ್ದೋ ದೆಹಲಿ... ಎಲ್ಲರ ದೆಹಲಿ ಆಗಬೇಕಾದ ಪ್ರಸಂಗದಲ್ಲಿ ಯಾರದ್ದೂ ಆಗಲಾರದೆ ಹೋಗುವ ಸ್ಥಿತಿ. ಒಂದು ರೀತಿಯಲ್ಲಿ ವೇಷ್ಯೆಯಂತೆ! ಸುಖಕ್ಕೆ ಬೇಕು... ಅನಿವಾರ್ಯತೆಗೆ ಬೇಕು... ಆದರೆ ಅದರ ಕಣ್ಣೀರು ಬೇಡವೇ ಬೇಡ.

ಇತಿಹಾಸದ ಆಧಾರದಲ್ಲಿ ನೋಡುವುದಾದರೆ ದೆಹಲಿಯ ಸ್ಥಾಪನೆ ತೋಮರ್ ವಂಶಸ್ಥ ಅನಂಗಪಾಲನಿಂದ ಆಗಿತ್ತು. ಅನಂತರ ಮಾಮ್ಲುಕರು, ಖಿಲ್ಜಿ, ತುಘಲಕ್, ಸೈಯದಿಗಳು, ಲೋಧಿ, ಮುಘಲರು ಮತ್ತು ಬ್ರಿಟಿಷರು ಇಲ್ಲಿಂದ ರಾಜ್ಯಭಾರ ಮಾಡಿದ್ದರು. ಆದರೆ ದೆಹಲಿಗೆ ತಾಕಿಕೊಂಡೇ ಇರುವ ನೊಯ್ಡಾದ ಶ್ರೀನಿವಾಸಪುರಿಯಲ್ಲಿ ಕ್ರಿ. ಪೂ ೩೦೦ರ ಕಾಲಘಟ್ಟದ ಆಶೋಕನ ಕಾಲದ ಶಾಸನ ಪತ್ತೆಯಾಗಿರುವುದು ಮತ್ತು ಕುತುಬ್ ಮಿನಾರ್‌ನ ಬಳಿ ಇರುವ ಉಕ್ಕಿನ ಕಂಬ ಸರಿಸುಮಾರು ಇದೇ ಕಾಲಕ್ಕೆ ಸೇರಿರುವುದು ಈ ಪ್ರದೇಶದಲ್ಲಿದ್ದ ಜನವಸತಿ ಅಥವಾ ಜನ ಚಟುವಟಿಕೆಯ ಇತಿಹಾಸವನ್ನು ಇನ್ನೂ ಹಿಂದೊಯ್ಯುತ್ತದೆ. ಹಾಗೇ ಹಿಂದಿನ ದೆಹಲಿ ಅಂದರೆ ಈಗಿನ ದೆಹಲಿಯನ್ನೇ ಆಧಾರವಾಗಿಟ್ಟು ನೋಡಲಾಗದು. ಒಂದೊಂದು ಕಾಲದಲ್ಲಿ ಈಗ ವಿಶಾಲವಾಗಿ ಹಬ್ಬಿರುವ ದೆಹಲಿಯ ಒಂದೊಂದು ಭಾಗ ಪ್ರಾಮುಖ್ಯತೆ ಪಡೆದುಕೊಂಡಿತ್ತು.

ಆದರೆ ನಾವು ಮಹಾಭಾರತದಲ್ಲಿನ ದೆಹಲಿಯ ಉಲ್ಲೇಖವನ್ನು ಗಂಭೀರವಾಗಿ ಪರಿಗಣಿಸಿದ್ದೇ ಆದರೆ ಕ್ರಿ ಪೂ ೨೫೦೦ರಷ್ಟು ಹಿಂದೆಯೇ ದೆಹಲಿಯ ಅಸ್ತಿತ್ವವಿತ್ತು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಈ ಲೇಖನದಲ್ಲಿ ಮೊದಲೇ ಹೇಳಿದಂತೆ ದೆಹಲಿಯನ್ನು ಇಂದ್ರಪ್ರಸ್ಥ ಎಂದು ಕರೆಯುತ್ತಿದ್ದರು. ಇಂದ್ರಪ್ರಸ್ಥ ಎಂಬ ಪ್ರದೇಶ ಆಧುನಿಕ ದೆಹಲಿಯಲ್ಲಿ ೧೯ನೇ ಶತಮಾನದವರೆಗೂ ಇತ್ತು! ಆದರೆ ನವದೆಹಲಿ ಕಟ್ಟುವ ಬ್ರಿಟಿಷರ ಆಸೆಗೆ ಈ ಪ್ರದೇಶ ಹೇಳಹೆಸರಿಲ್ಲದಾಯಿತು. ಪುರಾಣ ಕಿಲಾ ಬಳಿ ಇಂದ್ರಪ್ರಸ್ಥ ಇದ್ದದ್ದಕ್ಕೆ ಪುರಾತತ್ವ ಸಾಕ್ಷ್ಯಗಳು ದೊರಕಿವೆ. ಇಂದಿನ ನವದೆಹಲಿಯ ವಿನ್ಯಾಸ ಮಾಡಿದ ಕೀರ್ತಿ ಎಡ್ವೀನ್ ಲುಟಾಯಿಸ್‌ಗೆ ಸಲ್ಲುತ್ತದೆ.

ದೆಹಲಿ ವಿಶ್ವದ ಆತ್ಯಂತ ಪ್ರಾಚೀನ ಮತ್ತು ಇಂದಿಗೂ ಅಸ್ತಿತ್ವದಲ್ಲಿರುವ ಹಾಗೂ ರಾಜಧಾನಿಯಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದ ಜಗತ್ತಿನ ಕೆಲವೇ ಕೆಲವು ನಗರಗಳಲ್ಲಿ ಒಂದು. ಈ ನಗರದ ಪ್ರಾಚೀನತೆಯ ಮುಂದೆ ವಾಷಿಂಗ್ಟನ್, ಲಂಡನ್ ಇತ್ಯಾದಿ ಜಾಗತಿಕ ರಾಜಧಾನಿಗಳು ಅಂಬೆಗಾಲಿಡುವ ಮಗು. ಆದರೆ ವಯಸ್ಸೇ ಎಲ್ಲವೂ ಅಲ್ಲವಲ್ಲ!


ಅಂದು, ಇಂದು ಆ ನಗರಗಳು ಎದ್ದು ಫಾರ್ಮುಲಾ ೧ ಕಾರ್‌ನ ವೇಗದಲ್ಲಿ ಅಭಿವೃದ್ಧಿಯ ನೊಗ ಹೆಗಲಿಗೇರಿಸಿಕೊಂಡು ಸಾಗುತ್ತಿದ್ದರೆ ದೆಹಲಿ ಮಾತ್ರ ಸೈಕಲ್ ತುಳಿಯುತ್ತಿದೆ! ಒಂದು ನಗರವನ್ನು ಹುಟ್ಟು ಹಾಕಿ ಅದನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು (ಪಕ್ಕಾ ಯೋಜನೆ, ಇಚ್ಚಾಶಕ್ತಿ ಇದಲ್ಲಿ ಮಾತ್ರ) ಒಂದೆರಡು ದಶಕ ಸಾಕು. ಆದರೆ ದೆಹಲಿ ಈ ವಿಷಯದಲ್ಲಿ ಎಲ್ಲಿ ಸೋತಿತು? ಉತ್ತರ ಕಂಡುಕೊಳ್ಳುವುದು ತೀರಾ ಕಷ್ಟ. ಇಂದಿಗೂ ದೆಹಲಿಯ ಕೆಲ ಭಾಗಗಳು ಅತ್ಯುತ್ತಮವಾಗಿದ್ದು, ವ್ಯವಸ್ಥಿತವಾಗಿವೆ. ಆದರೆ ಬಹುತೇಕ ಭಾಗಗಳು ಗಬ್ಬೆದ್ದು ನಾರುತ್ತಿವೆ.

ಇದಕ್ಕೆ ಕಾರಣ ಒಮ್ಮಲೇ ಹರಿದು ಬಂದ ಜನಸಂಖ್ಯೆ ಮತ್ತು ದೂರದೃಷ್ಟಿ ಇಲ್ಲದ ನಗರ ಯೋಜನೆ ಮತ್ತು ಜನ ಸಂಯೋಜನೆಯೇ ಆಗಿದೆ. ಇಲ್ಲಿನ ಜನಸಂಯೋಜನೆ ತೀರಾ ತೀರಾ ವಿಚಿತ್ರ. ಆದರೆ ಮಹಾನಗರಗಳ ಹಣೆ ಬರಹ ಇಷ್ಟೇ ಅಲ್ಲವೇ? ಅಂದರೆ ಮೂಲ ನಿವಾಸಿಗಳಿಗಿಂತ ವಲಸಿಗರನ್ನು ಪೊರೆಯುವ ಚಟ ಅವಕ್ಕೆ. ಅದೇ ರೀತಿ ದೆಹಲಿ ಕೂಡ ಶತ ಶತಮಾನಗಳಿಂದ ವಲಸಿಗರಿಗೆ ತನ್ನ ದ್ವಾರ ತೆರೆದಿಟ್ಟುಕೊಂಡೇ ಇದೆ. ಅದು ಈಗಲೂ ಮುಂದುವರಿಯುತ್ತಿದೆ. ಮುಂದೆಯೂ ಮುಂದುವರಿಯುತ್ತದೆ. ಅದ್ದರಿಂದ ಅದನ್ನು ಸಮಸ್ಯೆ ಎಂದು ಪರಿಗಣಿಸುವುದರಲ್ಲಿಯೇ ದೆಹಲಿಯ ಸೋಲು ಅಡಗಿದೆ. ಬದಲಾಗಿ ಅದನ್ನು ಒಂದು ಸವಾಲಾಗಿ ಅದು ತೆಗೆದುಕೊಳ್ಳಬೇಕಿದೆ.

ಅದು ಹೇಗೆ? ಇದಕ್ಕಾಗಿ ತನ್ನೆರಡು ಉಪಗ್ರಹ ನಗರಗಳಾದ ನೋಯ್ಡಾ ಮತ್ತು ಗುರ್ಗಾಂವ್ ಅನ್ನು ಮತ್ತಷ್ಟು ವಿಶಾಲವಾಗಿ ಹಬ್ಬಿಸಲು ಕೆಲ ಕ್ರಮ ಕೈಗೊಳ್ಳುವುದರ ಜೊತೆ ಜೊತೆಗೆ ತನ್ನಲ್ಲಿ ಅದಷ್ಟು ಸರ್ಕಾರಿ ಕಚೇರಿಗಳು ಮಾತ್ರ ಇರುವಂತೆ ನೋಡಿಕೊಂಡು ಖಾಸಗಿ ಸಂಸ್ಥೆಗಳನ್ನು ಅದಷ್ಟು ಈ ಉಪಗ್ರಹ ನಗರಗಳಿಗೆ ದಾಟಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಜನ ಸಂಯೋಜನೆಯಲ್ಲಿ ಒಂದು ವ್ಯವಸ್ಥಿತ ಬದಲಾವಣೆ ತಂದುಕೊಳ್ಳುವುದು ಅದಕ್ಕೆ ಸಾಧ್ಯ. ಈ ಜನಸಂಖ್ಯೆ ಹೆಚ್ಚಳದ ಸಮಸ್ಯೆಯ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳೆಂದರೆ ಸುರಕ್ಷತೆ, ಭದ್ರತೆ, ವಸತಿ, ವಿದ್ಯುತ್, ಉತ್ತಮ ರಸ್ತೆ, ನೀರಿನ ವ್ಯವಸ್ಥೆ ಮತ್ತು ಶುಚಿತ್ವ ಕಾಪಾಡಿಕೊಳ್ಳುವ ಸಮಸ್ಯೆಗಳು.
ಇಂದು ದೆಹಲಿಯಲ್ಲಿ ಜನರಿಗೆ ನೀಡುವ ಭದ್ರತೆ ಅಥವಾ ಜನರ ಸುರಕ್ಷತೆ ಪ್ರಶ್ನಾರ್ಹವಾಗಿದೆ. ಇಲ್ಲಿ ಅಪರಾಧ ಪ್ರಮಾಣ ಎಗ್ಗಿಲ್ಲದೆ ಏರುತ್ತಿದೆ. ಜನರ ಭದ್ರತೆಯ ಜವಾಬ್ಧಾರಿ ವಹಿಸಿಕೊಳ್ಳಬೇಕಾದ ಪೊಲೀಸರು ದೊಡ್ಡವರ ಗೇಟ್ ಕಾಯುತ್ತಿದ್ದಾರೆ. ಉತ್ತಮ ರಸ್ತೆ ನೀಡುವ ನಿಟ್ಟಿನಲ್ಲಿ ದೆಹಲಿ ಒಂಚೂರು ಯಶ ಕಂಡಿದೆ. ಇದಕ್ಕೆ ಕಾಮನ್‌ವೆಲ್ತ್ ಗೇಮ್ಸ್ ಕೂಡ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಆದರೆ ವಾಹನಗಳ ಸಂಖ್ಯೆಗೆ ಹೋಲಿಸಿದರೆ ರಸ್ತೆಗಳ ಅಗಲ ಏನೇನು ಸಾಲದು. ಇನ್ನೂ ಕೆಲ ಕಡೆ ರಸ್ತೆ ಸಾಕಷ್ಟು ಅಗಲವಾಗಿದ್ದರೂ ಅದರ ಶೇ. ೭೫ ಭಾಗದಲ್ಲಿ ವಾಹನಗಳು ನಿಂತು ಇಡೀ ಟ್ರಾಫಿಕ್ ವ್ಯವಸ್ಥೆಯನ್ನೆ ಗೊಂದಲದ ಗೂಡಾಗಿಸಿ ಬಿಡುವುದು ಸಾಮಾನ್ಯ. ಬಸ್ ವ್ಯವಸ್ಥೆ ಚೆನ್ನಾಗಿಲ್ಲ. ಇನ್ನೂ ಮೆಟ್ರೋ ಜನಪ್ರಿಯವಾಗಿದ್ದರೂ ಈ ಜನಪ್ರಿಯತೆಯೆ ಅದರ ಸುಗಮ ಪಯಣಕ್ಕೆ ಮುಳುವಾಗಿದೆ. ಒಂದು ಕಡೆ ಮಿತಿ ಮೀರಿದ ಪ್ರಯಾಣಿಕರು ಮತ್ತೊಂದು ಕಡೆ ಆಗಾಗ ಕಾಡುವ ತಾಂತ್ರಿಕ ಅಡಚಣೆಗಳು ಮೆಟ್ರೋಕ್ಕೆ ಬಗಲ ಮುಳ್ಳಾಗಿ ಕಾಡುತ್ತಿದೆ. ಯಮುನೆಯ ಕೃಪೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಚೆನ್ನಾಗಿದೆ. ವಿದ್ಯುತ್ ವ್ಯವಸ್ಥೆಯ ಬಗ್ಗೆ ಯಾವುದೇ ತಕರಾರು ತೆಗೆಯುವಂತಿಲ್ಲ.



ದೆಹಲಿಯ ವಾಯುಗುಣವಂತೂ ಅತಿರೇಕಗಳ ಸಂಗಮ. ಚಳಿಗಾಲದಲ್ಲಿ ಶೂನ್ಯದ ಬಳಿ ಸುಳಿದಾಡುವ ಪಾದರಸ ಬೇಸಿಗೆಯಲ್ಲಿ ೫೦ ಡಿಗ್ರಿಯ ಬಳಿ ಕುಣಿದಾಡುತ್ತಿರುತ್ತದೆ. ಒಮ್ಮೆ ಚಳಿಯ ತಂಪಿಗೆ ಮರಗಟ್ಟುವ ದೇಹ ಮತ್ತೊಮ್ಮೆ ಬೇಸಿಗೆಯ ತಾಪಕ್ಕೆ ಥರಗಟ್ಟಿ ಹೋಗುತ್ತದೆ. ಇಲ್ಲಿ ಚಳಿ ಮತ್ತು ಬೇಸಿಗೆ ಕೆಲ ಜೀವಗಳಿಗೆ ಕಂಟಕವಾಗುವುದು ಸಾಮಾನ್ಯ. ದೆಹಲಿಯಲ್ಲಿ ಬದುಕುವುದೆಂದರೆ ಈ ಎರಡು ಅತಿರೇಕಗಳ ನಡುವಿನ ಒದ್ದಾಟ ಮತ್ತು ನರಳಾಟ!

ಆದರೂ ದೆಹಲಿಗೆ ಅದೆಂಥದ್ದೋ ಒಂದು ಚುಂಬಕತೆಯಿದೆ... ಇಲ್ಲವಾದರೆ ಇಂತಹ ವೈರುಧ್ಯಗಳನ್ನು ಬಗಲಲ್ಲಿ, ಮುಗಿಲಲ್ಲಿ ಕಟ್ಟಿಕೊಂಡು ಸಹಸ್ರ ಸಹಸ್ರ ವರ್ಷಗಳಿಂದ ಈ ನಗರ ರಾಜನಂತೆ ಬಾಳಿ ಬದುಕುತ್ತಿರಲಿಲ್ಲ. ದರೋಡೆ, ಲೂಟಿ, ಆಕ್ರಮಣ ಮತ್ತು ದಾಸ್ಯಗಳಿಗೆ ಸತತವಾಗಿ ಒಳಪಟ್ಟರು ದೆಹಲಿ ತನ್ನತನವನ್ನು ಎಲ್ಲೂ ಸೂರೆಗೊಳ್ಳಲು ಬಿಡಲಿಲ್ಲ; ಬದಲಾಗಿ ಅವರ ತನವನ್ನು ತನ್ನಲ್ಲಿ ಅಂತರ್ಗತ ಮಾಡಿಕೊಳ್ಳುತ್ತ ಸಾಗಿತು, ಸಾಗಿದೆ.

ನನಗಂತೂ ದೆಹಲಿ ರೋಮಾಂಚನಗಳ ರಸ ಬೀಡು, ಕುಣಿದಾಟದ ಮೈದಾನ, ನನ್ನೂರಿನಲ್ಲಿ ಕಳೆದುಕೊಂಡದನ್ನು ಮೊಗೆಮೊಗೆದು ಪಡೆಯೋ ತಾಣ...

ನಾನು ಸವಾಲುಗಳನ್ನು ಇಷ್ಟಪಡುತ್ತೇನೆ. ಅದಕ್ಕಾಗಿಯೇ ಇರಬೇಕು ದೆಹಲಿಯನ್ನೂ ಕೂಡ ...

Tuesday, February 22, 2011

ವಿದಾಯ ಹೇಳುವ ಮುನ್ನಾ

ಆ ದಾರಿಯಲ್ಲಿ ನಾ
ಏಕಾಂಗಿಯಾದೇನೆ?
ಸಾವಿರಾರು ಹೆಜ್ಜೆಯಿಟ್ಟಿದ್ದ
ದಾರಿಯಲ್ಲಿ ನಾ
ಇಂಗಿಹೋದೇನೆ?
ಆ ನಗು, ನಲಿವುಗಳೆಲ್ಲ
ಅವರ ಪಾದದಡಿಯ ಧೂಳಾಯಿತೇ?
ಕಾದಿದ್ದೆ ನಾ ಆ ದಾರಿಯಲ್ಲಿ
ನನ್ನ ಗೆಳೆಯರಿಗಾಗಿ
ಅವರು, ಅದೇ ದಾರಿಯಲ್ಲಿ ಬಂದೆ ಬರುವರೆಂದು
ಇಂದೂ ಅಲ್ಲೇ ಕಾಯುತ್ತಿರುವೆ
ಅವರಿನ್ನೂ ಬರಲಾರರು ಎಂದು ತಿಳಿದು ಸಹ!

ಯಾರಿಗೋ ವಿಶ್ ಮಾಡಿದ್ದೆ
ಇನ್ಯಾರನ್ನೋ ಪುಶ್ ಮಾಡಿದ್ದೆ
ಅವನ್ಯಾರೋ ನನ್ನನ್ನು ಕಂಡು ಬುಸ್ ಗುಟ್ಟಿದ್ದ
ಕಣ್ಣಂಚಲ್ಲಿ ಅವಳ ಚೆಲುವ ಹೀರಿದ್ದೆ
ನನ್ನ ಕಣ್ಣಮಿಂಚಲ್ಲಿ ಅವಳ ಪುಲಕಗೊಳಿಸಿದ್ದೆ
ಒಂದು ತುಂಟ ನಗು ನಕ್ಕು ಮರೆಯಾಗಿದ್ದೆ
ಇದೆಲ್ಲ ಕ್ಷಣಗಳು ಸೆರೆಯಾಗಿದೆ ನನ್ನ ಮನದಲ್ಲಿ
ಕೂರಲಾರದ ತೆರೆಯಾಗಿದೆ ನನ್ನ ಹೃದಯದಲ್ಲಿ.

ಅಂದು ನನ್ನ ಸುತ್ತಲೇ ಕುಂಯ್ ಗುಟ್ಟುತ್ತಿದ್ದ ನನ್ನ ಜೂನಿಯರ್
ಇಂದು ನಾನೇ ತಲೆ ಬಾಗಿದರು ಡೋಂಟ್ ಕೇರ್
ಇದೆಂತಹ ಪ್ಯಾರ್?
ಆದರೂ ನಾ ಅವನನ್ನು ಕ್ಷಮಿಸಲೇ ಬೇಕು
ಯಾಕೆಂದರೆ ಆ ದಾರಿಯಲ್ಲಿ ನಾನೊಬ್ಬನೆ!

ಅಂದು ಆಡಿದ ಮಾತುಗಳು, ಮಾಡಿದ ಕೀಟಲೆಗಳು
ನಗುವಿನ ಸೆಲೆಗಳು, ಆತ್ಮೀಯತೆಯ ಅಭಿವ್ಯಕ್ತಿಗಳು
ಇವಕ್ಕೆಲ್ಲ ಆ ಕಾರಿಡಾರಿನ ಇಟ್ಟಿಗೆಗಳು ಮೂಕ ಸಾಕ್ಷಿಗಳು
ನೆನೆದಾಗ ಹನಿಯಾಗುತ್ತವೆ ನನ್ನ ಅಕ್ಷಿಗಳು
ಬೆಳಕಿಲ್ಲದಿದ್ದರೂ ನಡೆಯುವೆ ಆ
ದಾರಿಯಲ್ಲಿ ಅನ್ನುವ ಧೈರ್ಯ ನನಗಿತ್ತು
ಏನೇ ಬಂದರೂ ಜಯಿಸುವೆ ಎಂಬ
ಶೌರ್ಯ ಮನದೊಳಗಿತ್ತು

ಈ ಬೆಳಕಲ್ಲೆ, ಅದೇ ಮನಸ್ಸಲ್ಲೆ
ಏನೊಂದು ತಡೆಯಿಲ್ಲದಿದ್ದರೂ
ನಡೆಯಲಾರದೇ ಕುಸಿಯುತ್ತಿದ್ದೇನೆ
ದಾರಿಯ ಮಧ್ಯದಲ್ಲಿ
ರಕ್ಷಣೆಗೆ ಒರ್ವನೂ ನನ್ನವನ್ನಿಲ್ಲ
ವೀಕ್ಷಣೆಗೆ, ಭಕ್ಷಣೆಗೆ ಈ ದಾರಿಯ
ಇಂದಿನ ಪಯಣಿಗರು ನಾಳೆಯ
ಏಕಾಂಗಿಗಳು ಸಿದ್ಧರಾಗಿರುವರು!

ಕೂಗಿ ಹೇಳಬೇಕೆನಿಸುತ್ತದೆ, ಗೆಳೆಯರೇ,
ಇಂದು ನಗಬೇಡಿ, ನಾಳೆ ಇಲ್ಲಿ ನಿಂತು
ನನ್ನ ಹಾಗೆ ನೀವು ಮರುಗಬೇಡಿ ಎಂದು
ಆದರೇನು? ಗಂಟಲಿನಿಂದ ಹೊರಟ ದನಿ
ಅವರಿಗೆ ಕೇಳಿಸುತ್ತಿಲ್ಲ
ಕೇಳಿದರು, ಕೇಳಿಸದಂತಿರುವರೋ ಅದು ಗೊತ್ತಿಲ್ಲ!
ಅಲ್ಲ, ಆ ದನಿ ನನ್ನ ಭ್ರಮೆಯೋ?
ಇಗೋ ಇಂಗಿ ಹೋಗುತ್ತಿದ್ದೇನೆ ಈ ದಾರಿಯಲ್ಲಿ
ಏಕಾಂಗಿಯಾಗಿ...
ನಾನಿಟ್ಟ ಹೆಜ್ಜೆಯಡಿಯಲ್ಲಿ
ಅವರ ಹೆಜ್ಜೆಯ ಸಪ್ಪಳದ ಅಡಿಯಲ್ಲಿ!!!

(ಪದವಿಯ ಕೊನೆಯ ದಿನಗಳಲ್ಲಿ ಬರೆದ ಕವನವಿದು)

Monday, February 14, 2011

ಪ್ರೀತಿಗೆ ಕಣ್ಣು ಬೇಡ, ಒಂದಿಷ್ಟು ಮಣ್ಣಾದರೂ ಬೇಡವೇ?

ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ.....! ಇದು ಭಾರತದಲ್ಲಿ ಈ ದಿನಾಚರಣೆಯ ಒಟ್ಟೊಟ್ಟಿಗೆ ಬೆಳೆದು ಬಂದ ಒಂದು ಘೋಷಣೆ ಮತ್ತು ಕ್ರಿಯೆ. ಇಲ್ಲಿ ವಿರೋಧ ಮತ್ತು ಪರ ಒಟ್ಟೊಟ್ಟಿಗೆಯೇ ಸಾಗಿದೆ, ಸಾಗುತ್ತಿದೆ ಮತ್ತು ಮುಂದೆಯೂ ಸಾಗಬಹುದು. ವಿಪರ್ಯಾಸವೆಂದರೆ ಧಿಕ್ಕಾರದ ಕೂಗು ಜೋರಾದಂತೆ ಸ್ವೀಕಾರದ ಬಯಕೆ ಕೂಡ ಏರುತ್ತಿದೆ. ಅದು ಹಾಗೆಯೇ, ಮುಚ್ಚಿಟ್ಟಿರುವುದರ ಬಗೆಗೆ ಹೆಚ್ಚು ಕುತೂಹಲ. ಇದು ಮಾನವನ ಸಹಜ ಸಂಸ್ಕ್ರತಿ. ಕಾಲದ ಹರಿವು ಮುಂದೆ ಮುಂದೆ.... ಹಿಂದೆಯಲ್ಲ, ಅನ್ನುವುದು ’ಹೀಗೂ ಒಂದು ದಿನ’ ಬೇಕು ಎಂಬುವವರ ಅಂಬೋಣ. ಆದರೆ ಯಾವುದು ಮುಂದೆ, ಯಾವುದು ಹಿಂದೆ ಎಂಬುದು ನಿರ್ದಿಷ್ಟ ವ್ಯಾಖ್ಯೆಯಿಲ್ಲದ ’ಕಾಲಗುಣ’. ಒಟ್ಟಿನಲ್ಲಿ ನನ್ನಂಥವರ ಸದ್ಯದ ಸ್ಥಿತಿ, ಮೂರು ಮಾರ್ಗದ ಮಧ್ಯೆ ಮದ್ಯ ಕುಡಿದು ತೂರಾಡುವವನಂತಾಗಿದೆ!
***
ಪ್ರವೀಣ್ ಗೊಡ್ಕಿಂಡಿಯ ಕೊಳಲನಾದ ಅಲೆ ಅಲೆಯಾಗಿ ತೇಲಿ ವಾಲಿ ನನ್ನ ಸುತ್ತ ಮತ್ತು ನನ್ನೊಳಗೊಂದು ಭಾವವಲಯ ಸ್ರೃಷ್ಟಿಸಿ ಬಿಡುತ್ತದೆ. ಹೌದು, ನಾನು ಕೊಳಲನ್ನು ಪ್ರೀತಿಸುತ್ತೇನೆ. ನುಡಿಸುವವನನಲ್ಲ! ಅದನ್ನು ಯಾರು ನುಡಿಸಿದರೂ ನನಗಷ್ಟೆ! ನಾ ಝಾಕೀರ್ ಹುಸೇನ್‌ನನ್ನು ಪ್ರೀತಿಸುತ್ತೇನೆ. ತಬಲವನ್ನಲ್ಲ! ಕೊಳಲು ವಾದಕನ ಉಸಿರು ಕೊಳಲಿಗೆ ತಾಕಿದರೆ ಸಾಕು ನನಗದು ಬರಿ ಕೊಳಲ ದನಿಯಾಗಿ ಉಳಿಯೋದಿಲ್ಲ, ಅದು ಮನಃಶಾಂತಿಯ ಕೊಳವಾಗಿ ಬಿಡುತ್ತದೆ. ತಬಲ.... ಇಲ್ಲದೆ ’ನನ್ನ’ ಹುಸೇನ್‌ಗೆ ಅಸ್ತಿತ್ವವೇ ಇಲ್ಲ! ವೇಣುಗಾನ ಸೋನೆಯಾಗಿ ಸುರಿಯುವಾಗ ತಬಲ ನನಗೆ ಗುಡುಗಿನಂತೆ ಭಯ ಹುಟ್ಟಿಸುತ್ತದೆ. ಆದರೂ ನಾ ಹುಸೇನ್‌ನನ್ನು ಪ್ರೀತಿಸುವುದನ್ನು ಬಿಟ್ಟಿಲ್ಲ!

ಈಗ ಆಯ್ಕೆ ಪ್ರೀತಿಯದ್ದು. ನನ್ನ ಪ್ರೀತಿ ಯಾರ ಕಡೆಗೆ? ಯಾವುದು ನೈಜ ಪ್ರೀತಿ? ಅಷ್ಟರಲ್ಲಿ ಆಕೆಯ ಮಿಸ್‌ಡ್ ಕಾಲ್! ಕೊಳಲು ಬೇಡ! ಹುಸೇನ್‌ನ್ನು ಬೇಡ!
***

ಅವಳದ್ದು ಕಲ್ಲು ಹೃದಯ, ಅವಳೂ ಹಾಗೆ ಹೇಳಿಕೊಳ್ಳುತ್ತಿದ್ದಳು, ಅವಳಿಗಾಗಿ ಹಪಹಪಿಸಿದವರೂ ಕೂಡ! ಒಂದು ದಿನ ’ಪರಾರಿ’ ಸುದ್ದಿಯಡಿಯಲ್ಲಿ ಅವಳ ಹೆಸರು! ಅವನ್ಯಾರೋ ಚಿರಪರಿಚಿತ ಟಪೋರಿ! ಅದು ಕಲ್ಲು ಕರಗುವ ಸಮಯ! ’ಪ್ರೀತಿಗೆ ಕಣ್ಣಿಲ್ಲ’ ಎನ್ನುವವರಿಗೆ ಸಿಕ್ಕ ಉದಾಹರಣೆ. ಪ್ರೀತಿಗೆ ಕಣ್ಣು ಬೇಡ ಬಿಡಿ, ಕೊನೆಗೊಂದಿಷ್ಟು ಮಣ್ಣಾದರೂ ಬೇಡವೇ? ಇದು ಅವಳ ತಂದೆ ತಾಯಿಯ ಅಳಲು, ಕೊನೆಗೊಂದು ದಿನ ಅವಳದ್ದು ಕೂಡ!
***
ಪ್ರೀತಿಯಿಂದ ಬಿತ್ತಿದರೆ ಅಕ್ಕಿಯಿಂದ ಭತ್ತ ಬೆಳೆಯಬಹುದು, ಪ್ರೀತಿಯಿದ್ದರೆ ಗಾಳಿಯನ್ನು ಕೂಡ ಮುಷ್ಟಿಯಲ್ಲಿ ಹಿಡಿದು ತೋರಿಸಬಹುದು, ಒಣ ಮರಳಲ್ಲಿ ಆಳೆತ್ತರದ ಗೋಡೆ ಕಟ್ಟಬಹುದು, ಹೀಗೆ ಪ್ರೀತಿಯಿದ್ದಲ್ಲಿ ಎಲ್ಲ ಬಹುದುಗಳೇ! ಪ್ರೀತಿಯೆಂದರೆ
ಏನು? ನಾವು ಪ್ರೀತಿಗೆ ಬೀಳುವುದಾ? ಅಥವಾ ಪ್ರೀತಿ ನಮ್ಮನ್ನು ಎಬ್ಬಿಸುವುದಾ? ಪ್ರೀತಿಯಲ್ಲಿ ನೈತಿಕ ಮತ್ತು ಅನೈತಿಕ ಎಂಬ ವಿಧ ಇದೆಯಾ? ಅದು ವರ್ತನೆಯಲ್ಲಿ ಮಾತ್ರ ಅಲ್ವಾ?

ನಾ ಮುಗ್ದ ಮುಖವಿಟ್ಟುಕೊಂಡು, ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನು ಕೇಳುತ್ತಿದ್ದೇನೆ..... ಒಂದೋ ಉತ್ತರ ಕೊಡಿ. ಇಲ್ಲ, ಒಂದಿಷ್ಟು ಪ್ರೀತಿ......!

Wednesday, February 9, 2011

ಈಜಿಪ್ಟ್ ಮಾದರಿ ಕ್ರಾಂತಿ, ಭಾರತ ಸಜ್ಜಾಗಿದೆಯೇ?


ಕಳೆದ ಶತಮಾನದ ಆರಂಭ ಗುಲಾಮಿ ದೇಶಗಳಿಗೆ ವಸಾಹತು ಶಾಹಿಗಳಿಂದ ವಿಮೋಚನೆ ಪಡೆಯುವ ಪರ್ವಕಾಲವಾಗಿತ್ತು. ಆಗ ಗುಲಾಮಿ ದೇಶಗಳ ಜನಮಾನಸದಲ್ಲಿ ದೇಶದ ಅಸ್ಮಿತೆಯ ಬಗೆಗಿನ ತಿಳುವಳಿಕೆ, ಗೌರವ, ಪ್ರೀತಿ ಉಚ್ಚ್ರಾಯ ಸ್ಥಿತಿ ಮುಟ್ಟಿತ್ತು. ಅದೇ ರೀತಿ ಜನರು ಬಡತನ, ಕಷ್ಟಕಾರ್ಪಣ್ಯಗಳ ಸರೋವರದಲ್ಲಿ ಸ್ವಚ್ಚಂದವಾಗಿ ಈಜಾಡುತ್ತಿದ್ದರು!

ಹೆಚ್ಚು ಕಡಿಮೆ ಒಂದು ಶತಮಾನದ ಬಳಿಕ ಮತ್ತೇ ಹೋರಾಟದ ಪರ್ವ ಚಿಗುರೊಡೆಯುತ್ತಿದೆ. ನಮ್ಮ ಈಗಿನ ವರ್ತಮಾನ ಮುಂದೊಂದು ದಿನ ಇತಿಹಾಸ ಪುಟ ಸೇರುವಾಗ ಅಲ್ಲೂ ರೋಚಕ ಅಧ್ಯಾಯಗಳು ಅಚ್ಚಾಗುವ ಆಶಾಕಿರಣ ಗೋಚರಿಸುತ್ತಿದೆ. ಇದೆಲ್ಲದಕ್ಕೂ ಅತಿ ಪ್ರಾಚೀನ ನಾಗರಿಕತೆಯ ಮಡಿಲು ಈಜಿಪ್ಟ್ ಓನಾಮ ಹಾಕುತ್ತಿದೆ ಎಂದೆನಿಸುತ್ತಿದೆ.

ಇಂದು ಎಲ್ಲೆಲ್ಲೂ ಈಜಿಪ್ಟ್‌ನ ಕ್ರಾಂತಿಯದ್ದೆ ಚರ್ಚೆ. ಈಜಿಪ್ಟ್‌ನಲ್ಲಿನ ಜನರ ಹೋರಾಟ ಅನೇಕ ದೇಶಗಳ ಜನರಿಗೆ ಪ್ರೇರಣೆಯಾಗುವ ಸಾಧ್ಯತೆ ಇರುವುದು ಭ್ರಷ್ಟ, ಅನೈತಿಕ, ಸರ್ವಾಧಿಕಾರಿ ಮತ್ತು ಅಕ್ರಮ ಸರ್ಕಾರ ಅಥವಾ ಆಡಳಿತ ಶಕ್ತಿಗಳ ಬೆನ್ನೆಲುಬು ನಡುಗುವಂತೆ ಮಾಡಿದೆ.

ಹೌದು, ಜಗತ್ತಿನ ದುರುಳ ಆಡಳಿತ ವ್ಯವಸ್ಥೆಗಳಿಗೆ ಬಿಸಿ ಮುಟ್ಟಿಸಲು ಜಗತ್ತಿನ ಯಾವುದಾದರೂ ಒಂದು ಭಾಗದಲ್ಲಿ ಇಂತಹ ಕ್ರಾಂತಿ ಅತ್ಯಗತ್ಯವಾಗಿತ್ತು. ಆದರೆ ಈ ಹೋರಾಟ ೧೮ನೇ ಶತಮಾನದ ಉತ್ತಾರಾರ್ಧದಲ್ಲಿ ನಡೆದ ಮತ್ತು ಜಗತ್ತಿನ ಚಹರೆಯನ್ನು ಬದಲಾಯಿಸಿದ, ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಅಡಿಗಲ್ಲು ಹಾಕಿದ ಫ್ರಾನ್ಸ್ ಮತ್ತು ಅಮೆರಿಕ ಕ್ರಾಂತಿಯ ೨೧ನೇ ಶತಮಾನದ ಅಪರಾವತಾರ ವಾಗುತಗ್ತದೆಯಾ ಎಂಬ ಕುತೂಹಲ ಮೂಡುತ್ತಿದೆ.

ಹೌದು. ಇಂದು ಏಷ್ಯಾ, ಆಫ್ರಿಕಾ, ಲ್ಯಾಟೀನ್ ಅಮೆರಿಕದ ಹೆಚ್ಚಿನೆಲ್ಲ ದೇಶಗಳಲ್ಲಿ ಸಮಸ್ಯೆಗಳದ್ದೆ ಕಾರುಬಾರು. ಅಲ್ಲಿನ ಸಾಮಾನ್ಯ ಜನರ ಬದುಕು, ಕನಸು ಚಿಂದಿ ಚಿತ್ರಾನ್ನ. ಈ ರಾಷ್ಟ್ರಗಳಲ್ಲಿ ಹೆಚ್ಚಿನವು ಪ್ರಜಾಪ್ರಭುತ್ವ ಅಥವಾ ಸರ್ವಾಧಿಕಾರಿಗಳ ಆಡಳಿತ ವ್ಯವಸ್ಥೆ ಹೊಂದಿದೆ. ಪ್ರಜಾಪ್ರಭುತ್ವದ ಮಾದರಿ ಯೂರೋಪ್ ಹೊರತು ಪಡಿಸಿ ಬೇರೆಲ್ಲ ಕಡೆ ದಯನೀಯವಾಗಿ ಸೋತಿದೆ ಎಂದು ಹೇಳದೆ ವಿಧಿಯಿಲ್ಲ. ಇದು ಹೊಸ ಹೊಸ ಸರ್ವಾಧಿಕಾರಿಗಳ ಸೃಷ್ಟಿ ಮತ್ತು ಜನರ ಕೊನೆಗಾಣದ ಸಮಸ್ಯೆಗಳಿಗೆ ಹೇತುವಾಗಿದೆ. ಈಜಿಪ್ಟ್‌ನಲ್ಲಿ ಇದು ಅತಿರೇಕಕ್ಕೆ ಹೋಯಿತೋ, ಜನರ ಆಕ್ರೋಶ ವ್ಯವಸ್ಥಿತವಾಗಿ ಮತ್ತು ಗಟ್ಟಿಯಾಗಿ ಮೊಳಗಿತೋ ಅಥವಾ ಮಾಧ್ಯಮಗಳು ಅಲ್ಲಿನ ಜನರ ಹೋರಾಟಕ್ಕೆ ಅತಿರಂಜಿತ ಮತ್ತು ಹೆಚ್ಚಿನ ಪ್ರಚಾರ ನೀಡಿದವೋ ಎಂಬುದು ಸದ್ಯದ ಮಟ್ಟಿಗೆ ನನ್ನರಿವಿನ ತೆಕ್ಕೆಗೆಟುಕದ ಸಂಗತಿ. ಅದ್ದರಿಂದ ಈಜಿಪ್ಟ್‌ನಲ್ಲಿ ಏನಾಗಿದೆ, ಏನಾಗುತ್ತಿದೆ, ಏನಾಗಬಹುದು, ಏನಾದರೆ ಒಳ್ಳೆಯದು ಮುಂತಾದ ವಿಷಯಗಳ ಬಗ್ಗೆ ನಾನಿಲ್ಲಿ ಬರೆಯಲಾರೆ. ಆದರೆ ಈಜಿಪ್ಟ್‌ನ ಕ್ರಾಂತಿಯನ್ನು ಭಾರತಕ್ಕೂ ವಿಸ್ತರಿಸುವ ಬಗ್ಗೆ ಕೆಲ ಹೇಳಿಕೆಗಳು, ಪ್ರೇತ ಕರೆಗಳು ಕೇಳಿಸುತ್ತಿದೆ. ಆ ಬಗ್ಗೆ ನನ್ನ ಈ ಲೇಖನವನ್ನು ಕೇಂದ್ರಿಕರಿಸುತ್ತಿದ್ದೇನೆ.

ಯಾವುದೇ ಕ್ರಾಂತಿಗೆ ಬೇಕಾದ ಮನಸ್ಥಿತಿ ಜನರಲ್ಲಿ ರಾತ್ರಿ ಹಗಲಾಗುವುದರೊಂದಿಗೆ ಕಾಣಿಸಿಕೊಳ್ಳುವುದಿಲ್ಲ. ಅದು ನಿಧಾನವಾಗಿ ಹಬ್ಬಿಕೊಂಡು, ಗಟ್ಟಿಯಾಗುವ ಲಾವಾರಸ. ಅದು ಒಂದು ಹಂತದವರೆಗೆ ಶಾಂತವಾಗಿಯೇ ಇರುತ್ತದೆ. ಆಗೊಮ್ಮೆ, ಈಗೊಮ್ಮೆ ಅದು ಅಲ್ಲಲ್ಲಿ ಚಿಕ್ಕ ಪುಟ್ಟ ಕಿಡಿಯಾಗಿ ಚಿಮ್ಮುತ್ತಿರುತ್ತದೆಯೇ ಹೊರತು ಒಮ್ಮೆಲ್ಲೆ ಭುಗಿಲೇಳುವುದಿಲ್ಲ. ತಣ್ಣನೆ ಹರಡುವ ಕ್ರಾಂತಿಯ ಪಸೆ ಒಂದು ಹಂತದಲ್ಲಿ ತನಗೆ ಬೇಕಾದ ನಾಯಕ, ಸ್ಪಷ್ಟ ಗುರಿ, ಸೈದ್ಧಾಂತಿಕ ನೆಲೆಗಟ್ಟನ್ನು ಪಡೆದುಕೊಂಡು ಶಕ್ತಿಶಾಲಿಯಾಗಿ ರೂಪುಗೊಂಡು ಸಿಡಿದು ತನ್ನ ಉದ್ದೇಶ ಈಡೇರಿಸಿಕೊಳ್ಳುತ್ತದೆ. ಉದಾಹರಣೆಗಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಗಮನಿಸಿದರೆ ಅದು ೯೦ ವರ್ಷಗಳ ದೀರ್ಘ ಇತಿಹಾಸ ಹೊಂದಿದೆ. ಆದರೆ ೧೮೫೭ಕ್ಕಿಂತಲೂ ಹಿಂದೆ ಕೂಡ ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳು ಜರುಗಿದ್ದವು. ಇದೇ ಮಾತು ಜನ ಸಾಮಾನ್ಯರು ಪಾಲ್ಗೊಂಡ ಹೆಚ್ಚಿನೆಲ್ಲ ಕ್ರಾಂತಿಗಳಿಗೆ ಅನ್ವಯವಾಗುತ್ತದೆ.

ಆದರೆ ನಮ್ಮಲ್ಲಿನ ಕೆಲ ನಾಯಕರು ತಮಗೂ ಲೋಕ ಜ್ಞಾನವಿದೆ ಎಂಬುದನ್ನು ತೋರಿಸಿಕೊಳ್ಳಲು ಭಾರತದಲ್ಲೂ ಈಜಿಪ್ಟ್ ಮಾದರಿಯ ಕ್ರಾಂತಿಯಾಗಬೇಕು ಎಂದು ಬಂಬಡ ಬಾರಿಸುತ್ತಿದ್ದಾರೆ. ಈ ಮಾತನ್ನು ಮೊದಲು ಹೇಳಿದ್ದು ಕಾಂಗ್ರೆಸ್ ನಾಯಕ ಜಾಫರ್ ಷರೀಫ್. ಅವರು ಕರ್ನಾಟಕದಲ್ಲಿನ ಯಡಿಯೂರಪ್ಪ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದಲ್ಲಿ ಈಜಿಪ್ಟ್ ಮಾದರಿ ಕ್ರಾಂತಿಯಾಗಬೇಕು ಎಂದು ಕರೆ ನೀಡಿ ತಮ್ಮ ಲೋಕ ಜ್ಞಾನವನ್ನು ಜಗಜಾಹೀರು ಮಾಡಿದ್ದಾರೆ. ಇದೇ ಮಾತನ್ನು ಸಿಪಿಐ (ಎಂ) ನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕೂಡ ಹೇಳಿದ್ದಾರೆ. ಆದರೆ ಅವರ ಗುರಿ ಕೇಂದ್ರ ಸರ್ಕಾರವಾಗಿದೆ.

ಇಂದು ದೇಶದಲ್ಲಿ ಅವ್ಯವಸ್ಥೆ ಇದೆ ಮತ್ತು ಇದನ್ನು ಸರಿಪಡಿಸಲು ಕ್ರಾಂತಿಯೇ ದಾರಿ ಎನ್ನುವುದಾದರೆ ಈ ಎಲ್ಲ ಗೊಂದಲಗಳಿಗೆ ಜಾಫರ್ ಷರೀಫ್‌ರ ಅನ್ನದಾತ ಕಾಂಗ್ರೆಸ್ ಪಕ್ಷವೇ ಹೊಣೆ. ಇಂದಿನ ಹಣದುಬ್ಬರವೇ ಇದಕ್ಕೆ ಸಾಕ್ಷಿ. ಅದ್ದರಿಂದ ಈಜಿಪ್ಟ್ ಮಾದರಿ ಕ್ರಾಂತಿ ದೇಶದಲ್ಲಿ ನಡೆಯಬೇಕೆ ಹೊರತು ಕರ್ನಾಟಕಕ್ಕೇ ಸೀಮಿತವಾಗಿಯಲ್ಲ.

ಪಶ್ಚಿಮ ಬಂಗಾಳದಲ್ಲಿ ಕಳೆದ ೩೦ ವರ್ಷಗಳಿಂದ ಕಾರಟ್‌ರ ಕಮ್ಯುನಿಷ್ಟ್ ಪಕ್ಷ ಆಡಳಿತ ನಡೆಸುತ್ತಿದೆ. ಇಂದು ಈಜಿಪ್ಟ್ ಮಾದರಿ ಕ್ರಾಂತಿಗೆ ಪಶ್ಚಿಮ ಬಂಗಾಳದಷ್ಟು ಹುಲುಸಾದ ಜಾಗ ಸಿಗಲಿಕ್ಕಿಲ್ಲ.

ನಿತಿನ್ ಗಡ್ಕರಿಯವರು ಈಜಿಪ್ಟ್ ಮಾದರಿ ಕ್ರಾಂತಿ ಆಗಬೇಕು ಎಂದು ಹೇಳುವುದೇ ಬಾಲಿಶತನದಿಂದ ಕೂಡಿದ್ದು. ಭ್ರಷ್ಟಾಚಾರದ ಆಪಾದನೆಗೆ ಸಿಲುಕಿರುವ ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಲು ಅಸಮರ್ಥರಾದರು ಕ್ರಾಂತಿಯ ಮಾತನಾಡುವುದೇ ಸೋಜಿಗದ ಸಂಗತಿ. ಅಂದರೆ ದೇಶದ ಮೂರು ಪ್ರಧಾನ ರಾಜಕೀಯ ಶಕ್ತಿಗಳಿಗೂ ದೇಶದಲ್ಲಿ ಕ್ರಾಂತಿ ಸಂಘಟಿಸುವ ಯಾವುದೇ ನೈತಿಕತೆ ಉಳಿದಿಲ್ಲ.

ಆದರೂ ದೇಶದಲ್ಲಿ ಖಂಡಿತವಾಗಿಯೂ ಕ್ರಾಂತಿ ನಡೆದೆ ನಡೆಯುತ್ತದೆ.



ಇಂದು ದೇಶದಲ್ಲಿರುವ ಯಾವುದೇ ಸಮುದಾಯಕ್ಕೆ ದೇಶ ಸಾಗುತ್ತಿರುವ ದಾರಿಯ ಬಗ್ಗೆ ಸಮಾಧಾನವಿಲ್ಲ. ಎಲ್ಲ ಜನರಲ್ಲೂ ಅಸಮಾಧಾನದ ಕಾರ್ಮುಗಿಲು, ರೋಷದ ಲಾವಾರಸ, ಅತೃಪ್ತಿಯ ಅಲೆ ಹುಟ್ಟಲು ಶುರುಮಾಡಿದೆ.

ಬಲಪಂಥೀಯರು (ಕೇವಲ ಹಿಂದೂಗಳು ಮಾತ್ರ ಎಂದುಕೊಳ್ಳಬೇಡಿ, ಎಲ್ಲ ಮತಗಳಲ್ಲಿರುವ ತೀವ್ರಗಾಮಿಗಳು) ತಮ್ಮ ಕನಸಿನ ಭಾರತ ನಿರ್ಮಾಣವಾಗಿಲ್ಲ ಎಂಬ ಚಿಂತೆಯಲ್ಲಿದ್ದರೆ, ಎಡಪಂಥೀಯರು ದೇಶದ ಬಡತನ ಮತ್ತು ಕಾರ್ಮಿಕ ವರ್ಗದ ಸ್ಥಿತಿ ಬಗ್ಗೆ ಮರುಗುತ್ತಿದ್ದಾರೆ. ಈ ಎರಡು ಪಂಥಕ್ಕೂ ಸೇರದ ಜನರು ಮೂಲಭೂತವಾದ ಮತ್ತು ಮಾವೋವಾದಿಗಳ ಅಟ್ಟಹಾಸ ಮತ್ತು ದೇಶವನ್ನು ಕಾಡುತ್ತಿರುವ ಇನ್ನಿತರ ಸಮಸ್ಯೆಗಳಿಂದ ಜರ್ಜರಿತರಾಗಿದ್ದಾರೆ. ಜನಸಾಮಾನ್ಯರ ಪಾಡಂತು ಹೇಳಿ ತೀರದ ಕಷ್ಟ ಕೋಟಲೆಗಳ ಸರಣಿ ಚಕ್ರದೊಳಗೆ ಕುಸಿದು ಕುಳಿತಿದೆ. ಇವರಿಗೆಲ್ಲ ಕ್ರಾಂತಿ ಅತ್ಯಗತ್ಯವಾಗಿ ಬೇಕಿದೆ.

ಆದರೆ ಭಾರತದ ಜನಮಾನಸ ಇನ್ನೂ ಹೋರಾಟ ಅಥವಾ ಕ್ರಾಂತಿಗೆ ಧುಮುಕುವಷ್ಟು ಬೆಂದಿಲ್ಲ ಮತ್ತು ಪಕ್ವವಾಗಿಲ್ಲ. ಆದರೆ ಆ ಹಾದಿಯಲ್ಲಿ ಮಾತ್ರ ಮುನ್ನಡೆಯುತ್ತಿದೆ.

ಇಂದು ಅಲ್ಲಲ್ಲಿ ನಡೆಯುತ್ತಿರುವ, ಅಥವಾ ಬಿಡಿಬಿಡಿಯಾಗಿ ನಡೆಯುತ್ತಿರುವ ಯಾವುದೇ ಹೋರಾಟಗಳಿಗೆ ದೇಶದಲ್ಲಿ ಕ್ರಾಂತಿ ತರುವ ಸಾಮರ್ಥ್ಯವಿಲ್ಲ. ಈ ಹೋರಾಟವನ್ನು ಸಂಘಟಿಸುವ ಸಂಸ್ಥೆಗಳಿಗೂ ಕೂಡ ಈ ತಾಕತ್ತಿಲ್ಲ.

ಮಾವೋವಾದಿ ಸಂಘಟನೆಗಳು ದೇಶದಲ್ಲಿ ಕ್ರಾಂತಿ ತರುತ್ತವೆ ಅಥವಾ ಅವರ ಹೋರಾಟ ಜನಪರವಾಗಿದೆ ಎಂದು ಅನೇಕ ಮಂದಿ ಹಗಲುಗನಸು ಕಾಣುತ್ತಿದ್ದಾರೆ. ಇಲ್ಲ, ಮಾವೋವಾದಿಗಳು ಖಂಡಿತವಾಗಿಯೂ ದೇಶದಲ್ಲಿ ಕ್ರಾಂತಿ ತರಲಾರರು. ಏಕೆಂದರೆ ಅವರಿಗೆ ದೇಶದೊಳಗಿನಿಂದಲೇ ತೀವ್ರ ವಿರೋಧವಿದೆ. ಸರ್ಕಾರಿ ಸಂಸ್ಥೆಗಳ ಜೊತೆ ಅವರ ತಾಕಲಾಟವನ್ನು ಬದಿಗಿಟ್ಟು ನೋಡಿದ್ದರು ಕೂಡ ದೇಶದ ಬಹುತೇಕ ಜನರಲ್ಲಿ ಅವರ ಬಗ್ಗೆ ಸದಾಭಿಪ್ರಾಯವಿಲ್ಲ. ಹಾಗೆಯೇ ನಕ್ಸಲ್ ಚಳವಳಿಯ ಆರಂಭ ಜನರಿಂದಲೇ ಆಗಿದ್ದರೂ ಕೂಡ ಇಂದು ಮಾವೋವಾದಿಗಳು ಜನಕಲ್ಯಾಣದ ಉದ್ದೇಶ ಹೊಂದಿದ್ದಾರೆ ಎಂದರೆ ನಂಬಲು ಸಾಧ್ಯವೇ ಇಲ್ಲ. ಅವರಿಗೆ ಜನ ಕತ್ತಲಲ್ಲಿದ್ದಷ್ಟು ಒಳ್ಳೆಯದು.

ಅವರು ಸರ್ಕಾರಿ ಉದ್ಯೋಗಿಗಳನ್ನು ಮತ್ತು ಜನಸಾಮಾನ್ಯರನ್ನು ಕೊಲ್ಲುವ ಕ್ರಿಯೆಯಲ್ಲಿ ಯಶಸ್ವಿಯಾಗಬಹುದೇ ಹೊರತು ಜನಮಾನಸವನ್ನು ಗೆಲ್ಲಲಾರರು.

ಉಳಿದಂತೆ ಈಗಿರುವ ಯಾವುದೇ ಸಂಘಟನೆಗಳಿಗೆ ದೇಶದಲ್ಲಿ ಕ್ರಾಂತಿ ತರುವ ಅಥವಾ ಒಂದು ಕ್ರಾಂತಿಯನ್ನು ರೂಪಿಸುವ, ಕ್ರಾಂತಿಯತ್ತ ಜನರನ್ನು ಸೆಳೆಯುವ, ಜನರಿಗೆ ನಾಯಕತ್ವ ಕೊಡುವ ಸಾಮರ್ಥ್ಯವಿಲ್ಲ. ಇನ್ನು ಎಲ್ಲರೂ ಒಪ್ಪಿಕೊಳ್ಳಬಹುದಾದ ಒಬ್ಬನೇ ಒಬ್ಬ ನಾಯಕ ಈ ದೇಶದಲ್ಲಿ ಈಗಿಲ್ಲ. ಎಲ್ಲರೂ ಒಪ್ಪಿಕೊಳ್ಳುವ ನಾಯಕ ಮತ್ತು ಸಂಘಟನೆ ಬೇಕು ಎಂಬುದು ಕ್ರಾಂತಿಗೆ ಕಡ್ಡಾಯ ಸಂಗತಿಯೇನಲ್ಲ. ಆದರೆ ಒಂದು ಕೇಂದ್ರ ಶಕ್ತಿ ಅನ್ನುವುದು ಇರಲೇ ಬೇಕು. ಇಲ್ಲದೇ ಹೋದಲ್ಲಿ ಹೋರಾಟ ಅನ್ನುವುದು ಅಧಿಕಾರ, ಸ್ವಹಿತ, ಪ್ರತಿಷ್ಠೆಗಾಗಿನ ಬಡಿದಾಟವಾಗುತ್ತದೆ. ಇದು ಕ್ರಾಂತಿ ಬಳಿಕದ ದೇಶದ ಭವಿಷ್ಯ ನಿರ್ಮಾಣಕ್ಕೆ ಅಡಿಗಲ್ಲು ಆಗುವುದರ ಬದಲು ಅಡ್ಡಿಗಲ್ಲು ಅಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದರೂ ಕೂಡ ಭಾರತದಲ್ಲಿ ಕ್ರಾಂತಿ ಆಗಬೇಕಾದರೆ ಇನ್ನಷ್ಟು ವರ್ಷ ಕಾಯಲೇ ಬೇಕಾಗುತ್ತದೆ ಎಂಬರಿವು ನಮಗಾಗುತ್ತದೆ.

ಮುಂದಿನ ದಿನಗಳಲ್ಲಿ ದೇಶದ ಜನರು ಹೋರಾಟಕ್ಕೆ ಆಹಿಂಸೆಯನ್ನೇ ಅಸ್ತ್ರ ಮಾಡಿಕೊಳ್ಳಬಹುದು ಮತ್ತದನ್ನು ಹತ್ತಿಕ್ಕಬಹುದು ಎಂಬ ಭ್ರಮೆಯನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಟ್ಟುಕೊಳ್ಳಬೇಕಿಲ್ಲ. ಇಂದು ಅಹಿಂಸಾತ್ನಕ ಪ್ರತಿಭಟನೆ ಮೊನಚು ಕಳೆದುಕೊಂಡ ಅಸ್ತ್ರವಾಗಿದ್ದು ಜನರಿಗೂ ಈ ಅರಿವಿದೆ. ಅದ್ದರಿಂದ ಅವರು ಹೆಚ್ಚು ಪರಿಣಾಮ ಬೀರುವ ಹೋರಾಟವನ್ನು ಆಯ್ದುಕೊಳ್ಳುವುದು ನಿಶ್ಚಿತ. ಇದು ನೇರ ಹಿಂಸೆಯ ದಾರಿಯಾಗಿರದಿದ್ದರು ಕೂಡ ಪರೋಕ್ಷ ಹಿಂಸೆಯ ಹಾದಿಯಾಗಿರುವ ಸಂಭವವಿದೆ.

ಥಾಮಸ್ ಜೆಫರ್‌ಸನ್ ಹೇಳಿದ್ದ "Every generation needs a new revolution” ಎಂಬ ಮಾತು ಇಲ್ಲಿ ಪ್ರಸ್ತುತ. ಹೌದು ನಾವು ಈ ಶತಮಾನದಲ್ಲಿ ಕುಳಿತು ಕ್ರಾಂತಿಯ ಬಗ್ಗೆ ಮಾತನಾಡುವಾಗ ಮಾಹಿತಿ ಕ್ರಾಂತಿಯಾಗಿದೆ, ವೈದ್ಯಕೀಯ ರಂಗದಲ್ಲಿ ಕ್ರಾಂತಿಯಾಗಿದೆ, ಇಂಜಿನಿಯರಿಂಗ್ ರಂಗದಲ್ಲಿ ಕ್ರಾಂತಿಯಾಗಿದೆ ಎನ್ನುತ್ತೇವೆ. ಇದರಿಂದ ಜನರಿಗೆ ಜೀವಿಸುವುದು ಸುಲಭವಾಗಿದೆ ಎನ್ನುತ್ತೇವೆ. ಆದರೆ ಇದೆಲ್ಲವು ಕೂಡ ಆರ್ಥಿಕವಾಗಿ ಸಬಲರಾಗಿರುವವರನ್ನು ಮಾತ್ರ ಸುಲಭವಾಗಿ ತಲುಪುತ್ತಿದೆಯೇ ಹೊರತು ಎಲ್ಲರನ್ನೂ ತಲುಪುತ್ತಿಲ್ಲ. ಇದು ಒಂದು ರೀತಿಯ ಅಸಮಾನತೆ ಹಬ್ಬಲು ಕಾರಣವಾಗಿದೆ. ಅಂದರೆ ನಮ್ಮಲ್ಲಿ ಅಥವಾ ನಮ್ಮಂತಹದ್ದೆ ಪರಿಸ್ಥಿತಿ ಎದುರಿಸುತ್ತಿರುವ ದೇಶಗಳಲ್ಲಿ ಆಗಬೇಕಿರುವ ಕ್ರಾಂತಿಯೇ ಬೇರೆ. ಈ ಅಸಮಾನತೆ, ಬಡತನ, ಅನಕ್ಷರತೆ ಸೇರಿದಂತೆ ಇನ್ನಿತರ ಋಣಾತ್ಮಕ ಸಂಗತಿಗಳನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆ ವಿಫಲವಾದಾಗ ಕ್ರಾಂತಿಯ ಬೀಜಾಂಕುರವಾಗುತ್ತದೆ. ಅಂದರೆ ಇಲ್ಲಿ ಆಡಳಿತ ವ್ಯವಸ್ಥೆಯ ಪಾತ್ರ ಪ್ರಮುಖವಾಗಿದೆ. ಉದಾಹರಣೆಗೆ ಏಡ್ಸ್‌ಗೆ ಮದ್ದಿಲ್ಲದಿರುವುದರಿಂದ ಒಬ್ಬ ಬಡ ವ್ಯಕ್ತಿ ಏಡ್ಸ್‌ನಿಂದ ಸತ್ತರೆ ಅದು ಬೀರುವ ಸಾಮಾಜಿಕ ಪರಿಣಾಮ ಬಹಳ ಸೀಮಿತವಾಗಿರುತ್ತದೆ. ಅದೇ ಏಡ್ಸ್‌ಗೆ ಮದ್ದು ಕಂಡು ಹುಡುಕಿ ಅದು ಸಮಾಜದ ಒಂದು ವರ್ಗದ ಜನರ ಕೈಗೇ ಮಾತ್ರ ಎಟುಕುತ್ತಿದ್ದು ಮತ್ತೊಂದು ವರ್ಗದಲ್ಲಿ ಏಡ್ಸ್‌ನಿಂದ ಸಾಯುತ್ತಿರುವವರ ಪ್ರಮಾಣ ತೀವ್ರವಾಗಿ ಹೆಚ್ಚಾದರೆ ಮತ್ತು ಆಡಳಿತ ಅಥವಾ ರಾಜಕೀಯ ವ್ಯವಸ್ಥೆ ಈ ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ ಆಗ ಜನರು ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಾರೆ. ಭಾರತದಲ್ಲಿ ಆಗಿರುವುದು ಇದೇ.

ಇಲ್ಲಿ ಸಾಕಷ್ಟು ’ಕ್ರಾಂತಿ’ಗಳು ಆಗಿದೆ. ಆದರೆ ಅದು ತಳಮಟ್ಟ ತಲುಪಲು ವಿಫಲವಾಗಿದೆ. ಅಂದರೆ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಯಾಗದೆ ಬೇರೆಲ್ಲಿ ಯಾವುದೇ ಬದಲಾವಣೆಯಾದರೂ ಅದು ದೇಶದ ಮನಸ್ಸುಗಳು ಕ್ರಾಂತಿಯತ್ತ ಸಾಗುವುದನ್ನು ತಡೆಯಲಾರವು.

ಅದರಿಂದ ರಾಜಕೀಯ ನಾಯಕರು ಮೊದಲು ವ್ಯವಸ್ಥೆಯನ್ನು ಸರಿಪಡಿಸಲು ಶ್ರಮಿಸಬೇಕೆ ಹೊರತು ಸುಖಾಸುಮ್ಮನೆ ಕ್ರಾಂತಿಯ ಬಗ್ಗೆ ಬೊಗಳೆ ಬಿಡುವುದಲ್ಲ!