Wednesday, December 8, 2010

ಇಲ್ಲಿ ಉಸುಕಿಗೆ ಹಸುರಿನ ಮುಸುಕು


ಎದೆಗೆ ಇರಿಯುವಂತೆ ರೊಂಯ್ಯನೇ ಬೀಸುವ ಕುಳಿರ್ಗಾಳಿ, ಅಲೆಅಲೆಯಂತೆ ಮುಳುಗೇಳುವ ಸಾಲು ಸಾಲು ಪರ್ವತಗಳು, ಕಡಿದಾದ ಕಂದಕಗಳುಬೆಟ್ಟಗಳ ಮೌನಕ್ಕೆ ಗಾರ್ಧಭಗಳ ರಾಗದ ಸವಾಲು, ಬೆಟ್ಟವನ್ನೇ ಕರ್ಮ ಭೂಮಿಯಾಗಿಸಿಕೊಂಡ ಹಂದಿಗಳು, ಇದೆಲ್ಲದಕ್ಕೆ ಮುಕುಟವಿಟ್ಟಂತೆ ಪಚ್ಚನೆ  ಹೊದಿಕೆ, ಹೊದಿಕೆ ಮಡಿಕೆ ಮಡಿಕೆಯಾಗಿ ದಶದಿಕ್ಕುಗಳಿಗೂ ಹಬ್ಬಿರುವ ಪರಿ, ಬೆಟ್ಟದ ನೆತ್ತಿಯ ಬೈತಲೆಯಂತಿರುವ ಕಾಲುದಾರಿ... ಸಹ್ಯಾದ್ರಿಯ ಮಡಿಲಲ್ಲಿ ದೃಶ್ಯಕಾವ್ಯ ಮೂಡಿದ್ದರೆ ಅದರಲ್ಲಿ ಒಂದಿನಿತು ಅಚ್ಚರಿ ಇರಲಿಲ್ಲ. ಆದರೆ ಸಹ್ಯಾದ್ರಿಗೆ ಇಗೋ ನನ್ನ ಸವಾಲು ಎಂದು ಅರಾವಳಿ ಪರ್ವತ ಶ್ರೇಣಿಯಲ್ಲಿದೆ ಸೌಂದರ್ಯದ ಖಣಿ. ಇದು ಮರಳುಗಾಡಿನ ನಾಡು ರಾಜಸ್ಥಾನದ ನಿಸರ್ಗ ಸೊಬಗು ಅಂದರೆ ಮೂಗ ಮೇಲೊಂದು ಬೆರಳು ನಿಶ್ಚಿತ
ರಾಜಸ್ಥಾನದ ರಾಜಧಾನಿಪಿಂಕ್ ಸಿಟಿಎಂದೇ ಜನಪ್ರಿಯವಾಗಿರುವ ಜೈಪುರದಿಂದ ಶೇಖಾವತಿಗೆ ಸಾಗುವ ಮಾರ್ಗದಲ್ಲಿ ಸುಮಾರು ೪೨ ಕಿಮೀ ಸಾಗಿದರೆ ಸಿಗುವಸಮೋದ್ ಚಿತ್ರಣವಿದು. ಇಲ್ಲಿ ಪ್ರಕೃತಿ ತನ್ನೆಲ್ಲ ಬಚ್ಚಿಟ್ಟ ಚೆಲುವನ್ನು ಬಿಚ್ಚಿಟ್ಟಿದ್ದಾಳೆ. ರಾಜಸ್ಥಾನದ ಮರಳಿನ ಕಥೆಯನ್ನಷ್ಟೇ ಕೇಳಿದವರು, ಹೇಳಿದವರು ಸಮೋದ್ಗೆ ಭೇಟಿ ನೀಡಿದ ಬಳಿಕ ಅದೇ ಮಾತಿಗೆ ಆತುಕೊಳ್ಳಲಾರರು.
ಜೈಪುರದಿಂದ ಶೇಖಾವತಿಗೆ ಹೋಗುವ ಮಾರ್ಗದಲ್ಲಿ ಜೈಪುರದಿಂದ ೪೨ ಕಿಮೀ ದೂರದಲ್ಲಿ ಸಮೋದ್ ಇದೆ. ಪುರಾತನ ಆದರೆ ಚೆಲುವು ಮಾಸದ ಹವೇಲಿಗಳು ಇದೇ ಸಮೋದ್... ಇದೇ ಸಮೋದ್ ಎಂದು ನಮ್ಮನ್ನು ಕರೆದು ನಿಲ್ಲಿಸುತ್ತವೆ.
ಸಮೋದ್ ತನ್ನ ಕೋಟೆ, ಅರಮನೆ ಮತ್ತು ಹನುಮನ ದೇಗುಲದಿಂದಾಗಿ ಪ್ರಸಿದ್ಧವಾಗಿದೆ.
ಸಮೋದ್ ಅರಮನೆಗೆ ಸುಮಾರು ೪೦೦ ವರ್ಷಗಳ ಐತಿಹ್ಯವಿದೆ. ಇದರ ನಿರ್ಮಾತೃಗಳು ಜೈಪುರದ ರಾವಲರು. ಇವರು ಜೈಪುರದ ರಾಜರುಗಳಿಗೆ ನಿಷ್ಠರಾಗಿದ್ದವರು. ಇವರ ಸಾಹಸ ಪೃವೃತ್ತಿ ಮತ್ತು ವಿಶ್ವಾಸಾರ್ಹತೆಯನ್ನು ಮೆಚ್ಚಿ ಕೊಂಡಿದ್ದ ಜೈಪುರದ ದೊರೆಗಳು ಇವರಿಗೆಮಹಾ ರಾವಲರುಎಂಬ ಬಿರುದು ದಯಪಾಲಿಸಿದ್ದರು. ಸಮೋದ್ ಅರಮನೆ ಅದ್ಭುತ ಕಲಾ ಚಿತ್ತಾರದ ಆಗರ. ಆದರೆ ಇಂದಿನ ಅರಮನೆಯ ಚೆಲುವು ಅನೇಕ ನವೀಕರಣ ಕೆಲಸಗಳ ಫಲ. ಇಂದು ಅರಮನೆಯನ್ನು ಹೊಟೆಲ್ ಆಗಿ ಪರಿವರ್ತಿಸಲಾಗಿದೆ. ಅನೇಕ ಸಿನೆಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ.
ಅರಮನೆಯ ಮೇಲ್ಬಾಗದಲ್ಲಿರುವ ಸಮೋದ್ ಕೋಟೆಯಂತು ಅದ್ಭುತ. ಹಸುರು ಬೆಟ್ಟಗಳನ್ನು ಸೀಳಿ ನಿಂತ ಅದರ ಪರಿ ನಿಜಕ್ಕೂ ನಯನ ಮನೋಹರ. ಕೋಟೆಯ ಮೇಲಿನಿಂದ ಸಮೋದ್ ವಿಹಂಗಮ ನೋಟ ನಮ್ಮ ಕಣ್ಣೆವೆಗೆ ನಿಲುಕುತ್ತದೆ. ಆದರೆ ಇಂದು ಕೋಟೆ ಶಿಥಿಲಾವಸ್ಥೆಯಲ್ಲಿದ್ದು ತನ್ನ ಗತ ವೈಭವವನ್ನು ಮೆಲುಕು ಹಾಕುತ್ತಿದೆ.
ಕೋಟೆಗೆ ತಾಕಿಕೊಂಡೆ ಸಾಗುವ ಏರು ತಗ್ಗುಗಳ ದಾರಿಯಲ್ಲಿ ಸುಮಾರು ಕಿಮೀ ನಡೆದರೆ ಹನುಮಂತನ ದೇಗುಲದ ದರ್ಶನ ಭಾಗ್ಯ ನಿಮ್ಮದಾಗುತ್ತದೆ. ಮೋಡವನ್ನು ಚುಂಬಿಸುವಷ್ಟು ಎತ್ತರದಲ್ಲಿರುವ ಪರ್ವತದ ಮೇಲೆ ಕಿರಿದಾದ ಸಮತಟ್ಟು ಜಾಗದಲ್ಲಿ ದೇಗುಲವಿದೆ. ಇಲ್ಲಿಂದ ಕೆಳ ನೋಡುವುದೇ ವರ್ಣಿಸಲಸದಳ ಅನುಭವ. ಇದು ೭೦೦ ವರ್ಷಗಳಷ್ಟು ಹಳೆಯ ದೇಗುಲ ಎನ್ನುತ್ತಾರೆ ಅಲ್ಲಿನ ಅರ್ಚಕರು.
ಸಮೋದ್ ಭಾಗ್ ಎಂಬ ಸುಂದರ ಉದ್ಯಾನ ಸಮೋದ್ನಲ್ಲಿದೆ. ಇದು ೧೬ನೇ ಶತಮಾನದಾಗಿದ್ದು ಮೊಘಲ್ ಶೈಲಿಯಲ್ಲಿದೆ. ಸುಮಾರು ೨೦ ಎಕರೆ ಪ್ರದೇಶದಲ್ಲಿ ಹಬ್ಬಿರುವ ಉದ್ಯಾನ ಸುತ್ತ ೧೫ ಅಡಿಗಳ ಗೋಡೆ ಕಟ್ಟಲಾಗಿದೆ. ಇವುಗಳ ಜೊತೆಗೆ ಸಮೋದ್ ಗ್ರಾಮದಲ್ಲಿ ಆಸಕ್ತರಿಗೆ ಒಂಟೆ ಸವಾರಿ ಮಾಡುವ ಅವಕಾಶ ಇಲ್ಲಿದೆ. ಇದರೊಂದಿಗೆ ರಾಜಸ್ಥಾನದ ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡುವ, ಸವಿಯುವ ಸುವರ್ಣ ಅವಕಾಶ ಇಲ್ಲಿ ಲಭ್ಯ
ಅಕ್ಟೋಬರ್ ತಿಂಗಳಿಂದ ಮಾರ್ಚ್ ತಿಂಗಳು ಸಮೋದ್ಗೆ ಭೇಟಿ ನೀಡಲು ಸೂಕ್ತ ಸಮಯ
ಜೈಪುರ ಪ್ರವಾಸ ಮಾಡುವ ಯೋಚನೆ ಹಾಕಿಕೊಂಡವರು ಒಂದು ದಿನವನ್ನು ಸಮೋದ್ಗೆಂದು ತೆಗೆದಿಡಬಹುದು. ಜೈಪುರದಲ್ಲಂತೂ ಪ್ರವಾಸಿಗರ ಮನಸೂರೆಗೊಳ್ಳುವ ಒಂದಕ್ಕಿಂತ ಒಂದು ಮಿಗಿಲಾದ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳು, ಅರಮನೆ, ಕೋಟೆ, ವಸ್ತು ಸಂಗ್ರಹಾಲಯಗಳಿವೆ.
ಜೈಪುರಪಿಂಕ್ ಸಿಟಿಎಂದೇ ಪ್ರಸಿದ್ಧ. ಇತ್ತೀಚೆಗೆ ನಡೆಸಿದ ಅಂತರ್ ರಾಷ್ಟ್ರೀಯ ಸಮೀಕ್ಷೆಯೊಂದು ಏಷ್ಯಾದ ೭ನೇ ಅತ್ಯುತ್ತಮ ಪ್ರವಾಸಿಯೋಗ್ಯ ಸ್ಥಳವೆಂದು ಜೈಪುರವನ್ನು ಗುರುತಿಸಿದೆ.
ಜೈಪುರಕ್ಕೆ ಅಡಿಗಲ್ಲು ಬಿದ್ದದ್ದು ೧೭೨೭ರಲ್ಲಿ. ಆಗ ಆಮೇರ್ ರಾಜನಾಗಿದ್ದ ಸವಾಯ್ ಎರಡನೇ ಜೈ ಸಿಂಗ್ನಿಂದ. ಇದು ದೇಶದ ಪ್ರಪ್ರಥಮ ಯೋಜನಾ ಬದ್ಧ ನಗರ. ನಗರ ಯೋಜನೆಗೆ ವಾಸ್ತು ಶಾಸ್ತ್ರವೇ ಬುನಾದಿ. ತದನಂತರದ ಅನೇಕ ರಾಜರು ಜೈಪುರದ ಉನ್ನತಿಗೆ ಶ್ರಮಿಸಿದ್ದಾರೆ.
ಜಂತರ್ ಮಂತರ್, ಹವಾ ಮಹಲ್, ಆಮೆರ್ ಕೋಟೆ, ಅಲ್ಬರ್ಟ್ ಹಾಲ್ ವಸ್ತು ಸಂಗ್ರಹಾಲಯ, ಲಕ್ಷ್ಮಿ ನಾರಾಯಣ ದೇವಾಲಯ, ಜಲ ಮಹಲ್, ರಾಮಭಾಗ್ ಅರಮನೆ, ಜೈಘರ್ ಕೋಟೆ, ನಹರ್ಘರ್ ಕೋಟೆ, ಸಿಟಿ ಅರಮನೆ, ಚೌಕಿಧಾಣಿ ಹೀಗೆ ಅನೇಕ ಪ್ರೇಕ್ಷಣಿಯ, ಮನೋರಂಜನ, ಧಾರ್ಮಿಕ, ಐತಿಹಾಸಿಕ ತಾಣಗಳು ಇಲ್ಲಿವೆ.
ಹವಾ ಮಹಲ್ ನಿರ್ಮಾಣ ಪೂರ್ಣಗೊಂಡದ್ದು ಸುಮಾರು ೧೮೦೦ರ ಹೊತ್ತಿಗೆ. ರಜಪೂತ ಮತ್ತು ಮೊಘಲ್ ವಾಸ್ತುಶಿಲ್ಪದ ಅದ್ಭುತ ಮೇಳೈಕೆ ಹವಾಮಹಲ್. ಶ್ರೀಕೃಷ್ಣನ ಕಿರೀಟ ರೂಪದಲ್ಲಿದೆ ರಚನೆ. ಮಹಡಿಗಳಿರುವ ಮಹಲ್ ಜೇನಿನ ಗೂಡಿನಂತೆ ಕಾಣುತ್ತದೆ.
ಆಮೇರ್ ಕೋಟೆ ಜೈಪುರದಿಂದ ೧೧ ಕಿಮೀ ದೂರದಲ್ಲಿದೆ. ಇದು ಕಚ್ವಾ ದೊರೆಗಳ ಹಿಂದಿನ ರಾಜಧಾನಿ. ಅನಂತರ ರಾಜಧಾನಿ ಜೈಪುರಕ್ಕೆ ಸ್ಥಳಾಂತರವಾಯಿತು. ಇಲ್ಲಿ ಆನೆ ಸವಾರಿ ಮಾಡುವ ಅವಕಾಶವಿದೆ. ಇಲ್ಲಿ ರಾತ್ರಿಲೈಟ್ ಮತ್ತು ಸೌಂಡ್ ಶೋಕಾರ್ಯಕ್ರಮವಿದ್ದು ಜೈಪುರದ ಇತಿಹಾಸ ಶಬ್ದ ಮತ್ತು ಬೆಳಕಿನ ಜೊತೆಯಾಟದಲ್ಲಿ ನಮ್ಮೆದುರು ಮರುಹುಟ್ಟು ಪಡೆಯುತ್ತವೆ.
ಆಮೇರ್ ಲೋಟೆ ಬೆಟ್ಟದ ಬುಡದಲ್ಲಿದ್ದರೆ, ಜೈಘರ್ ಕೋಟೆ ಬೆಟ್ಟದ ಮೇಲಿದೆ. ಇಲ್ಲಿ ವಿಶ್ವದ ಅತ್ಯಂತ ದೊಡ್ಡಗಾಲಿಗಳ ಮೇಲಿನ ಕಾಲುವೆಇದೆ.
ಸಿಟಿ ಪ್ಯಾಲೇಸ್ಜೈಪುರದ ಹೃದಯಭಾಗದಲ್ಲಿದೆ. ಈಗ ಅದರ ಒಂದು ಭಾಗ ಚಂದ್ರ ಮೋಹನ ಅರಮನೆಯನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಕೇಂದ್ರ ವಸ್ತು ಸಂಗ್ರಹಾಲಯ ಅಥವಾ ಅಲ್ಬರ್ಟ್ ಹಾಲ್ ವಸ್ತು ಸಂಗ್ರಹಾಲಯ ರಾಮ್ ನಿವಾಸ್ ಉದ್ಯಾನವನದಲ್ಲಿದೆ.
 ಇಲ್ಲಿ ಜೈಪುರದ ಅರಸರ ವೈಭೋಗ, ಕಲಾ ಅಭಿರುಚಿಗೆ ಸಾಕ್ಷಿ ಹೇಳುವ ಅನೇಕ ವಸ್ತುಗಳನ್ನು ಕಾಣಬಹುದು. ಇವುಗಳ ಜೊತೆ ಜೊತೆಗೆ ರಾಜಸ್ಥಾನದ ಕಲಾ ಕುಸುರಿ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅನೇಕ ಸಂಗತಿಗಳಿವೆ. ಸಂಗ್ರಹಾಲಯದಲ್ಲಿ ವಿದೇಶಿ ವಸ್ತುಗಳಿಗೂ ಬರವಿಲ್ಲ.
ಪ್ರಾಚೀನ ಭಾರತ ವಿಜ್ಞಾನ, ಗಣಿತ, ಬಾಹ್ಯಾಕಾಶ, ಜ್ಯೋತಿಷ್ಯ ಮತ್ತು ತಾಂತ್ರಿಕತೆಯಲ್ಲಿ ಅದೆಷ್ಟು ಮುಂದುವರಿದಿತ್ತು ಎಂಬ ಮಾತಿಗೆ ಮೂರ್ತ ರೂಪ ಕೊಡುತ್ತದೆ ಜಂತರ್ ಮಂತರ್. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಲ್ಲಿ ಇದು ಸ್ಥಾನ ಪಡೆದಿದೆ. ೧೯೪೮ರಲ್ಲೇ ಇದನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಾಗಿದೆ. ರಾಜ ಎರಡನೇ ಜೈ ಸಿಂಗ್ ಇಂತಹ ಜಂತರ್ ಮಂತರ್ಗಳನ್ನು ಉತ್ತರ ಭಾರತದ ನಾನ ಕಡೆ ನಿರ್ಮಿಸಿದ್ದಾನೆ. ಆದರೆ ಇವುಗಳಲ್ಲಿ ಜೈಪುರದ ಜಂತರ್ ಮಂತರ್ ಎಲ್ಲಕ್ಕಿಂತ ದೊಡ್ಡದು
ಜಲ ಮಹಲ್ ನೀರ ಮಧ್ಯೆ ನಿಂತ ಒಂಟಿ ಸುಂದರಿ. ಇದು ಮಾನ್ ಸಿಂಗ್ ಸರೋವರದ ಮಧ್ಯದಲ್ಲಿದೆ. ಇರುಳಿನ ಉರುಳು ಸುತ್ತೆಲ್ಲ ಹಬ್ಬಿರುವಾಗ ಇದು ಮಂದ ಬೆಳಕು ಸೂಸುತ್ತ ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ಸರೋವರ ೩೦೦ ಎಕರೆ ಪ್ರದೇಶದಲ್ಲಿ ಹಬ್ಬಿದೆ. ಸರೋವರದ ನೀರು ಹಿಂದೆ ತೀರಾ ಕಲುಷಿತವಾಗಿತ್ತಂತೆ. ಆದರೆ, ಅನಂತರ ಅಲ್ಲಿನ ಸರ್ಕಾರ ನೀರನ್ನು ಶುದ್ಧಗಿಳಿಸಲು ಅನೇಕ ಕ್ರಮಗಳನ್ನು ಕೈಗೊಂಡಿತ್ತಂತೆ. ಪ್ರಸಕ್ತ ಜಲ ಮಹಲ್ ನವೀಕರಣ ಕೆಲಸ ನಡೆಯುತ್ತಿದೆ. ಮುಂದೆ ಇಲ್ಲಿ ಬೋಟಿಂಗ್ ವ್ಯವಸ್ಥೆ ಪ್ರಾರಂಭಿಸುವ ಯೋಜನೆ ಇದೆಯಂತೆ. ಹಾಗಾದಲ್ಲಿ ಜಲ್ ಮಹಲ್ ಪ್ರವಾಸಿಗರ ಕಣ್ಮಣಿ ಆಗುವುದರಲ್ಲಿ ಒಂದಿನಿತು ಆಶ್ಚರ್ಯವೇ ಇಲ್ಲ.    
 ಜೈಪುರಕ್ಕೆ ದೇಶದ ಬಹುತೇಕ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲು ಮತ್ತು ವಿಮಾನ ಸಂಪರ್ಕವಿದೆ.
ಜೈಪುರ ಮತ್ತದರ ಪರಿಸರ ಮಾನವ ಮತ್ತು ಪ್ರಕೃತಿ ನಿರ್ಮಿತ ಚೆಲುವಿನ ಅದ್ಭುತ ಸಂಗಮ. ಇಲ್ಲಿ ಮರಳಿದೆ, ಕಲ್ಲಿದೆ, ಮಣ್ಣಿದೆ, ಹಚ್ಚ ಹಸುರಿನ ಬೆಟ್ಟ ಗುಡ್ಡಗಳಿವೆ. ಇವುಗಳನ್ನೆಲ್ಲ ಬಳಸಿಕೊಂಡ ಮಾನವ ನಿರ್ಮಾಣಗಳಿವೆ... ಪ್ರಕೃತಿ ಮತ್ತು ಮಾನವ ಜೊತೆಯಾದರೆ ಸೌಂದರ್ಯದ ಭಾಷ್ಯ ಹೇಗಿತ್ತದೆ ಎಂಬುದಕ್ಕೆ ಜೈಪುರ ಮತ್ತದರ ಪರಿಸರ ಸಾಕ್ಷ್ಯ ಹೇಳುತ್ತದೆ

No comments: