Thursday, August 13, 2009

ಅವಳನ್ನು ಅದು ಹೇಗೆ ತಾನೇ ಕಥೆ ಮಾಡಲಿ?

ನಾನು 'ಅವಳ' ಹೆಸರು ಬರೆಯುವಂತಿಲ್ಲ. ಯಾಕೆಂದರೆ 'ಅವಳು' ಯಾರೆಂದು ನನ್ನ ಹತ್ತಿರದವರಿಗೆ ಗೊತ್ತಾಗಿ ಬಿಡುತ್ತದೆ. ಅದಕ್ಕಿಂತ ಹೆಚ್ಚಾಗಿ 'ಅವಳಿಗೆ' ಅದು 'ಅವಳೇ' ಎಂದು ಗೊತ್ತಾಗುತ್ತದೆ. ಅದು 'ಅವಳೇ' ಎಂದು 'ಅವಳಿಗೆ' ಗೊತ್ತಾದರೆ 'ಅವಳು' 'ಅವಳಾಗಿ'ಯೇ ಇರುವುದಿಲ್ಲ. (ಈಗ ಹಾಗೆ ಇದ್ದಾಳೆ ಎಂದೇನೂ ನನಗನಿಸುತ್ತಿಲ್ಲ). ಅದು ಮತ್ತೊಂದು ಬಿರುಗಾಳಿಗೆ ಕಾರಣವಾಗುತ್ತದೆ. ಮತ್ತವಳು ಏರಿರುವ ಸಂಸಾರ ನೌಕೆಯಲ್ಲಿ ಅನಾಮತ್ತಾಗಿ ಒಂದು ಬಿರುಕು ಸೃಷ್ಟಿಯಾಗುತ್ತದೆ. ನನಗದು ಇಷ್ಟವಾಗದ ಸಂಗತಿ.
ಇಲ್ಲ, ಅದು 'ಅವಳೇ' ಎಂದು 'ಅವಳಿಗೆ' ಗೊತ್ತಾಗಬಾರದು ಹಾಗೆಯೇ ನಮ್ಮಿಬ್ಬರ ಬಗ್ಗೆ ಗೊತ್ತಿರುವ ಯಾರಿಗೂ ಕೂಡ. ಅದರಲ್ಲೂ ನನ್ನ ಬರವಣಿಗೆಯ ಸೂಕ್ಷ್ಮ ವಿಮರ್ಶಕನಾಗಿರುವ 'ಅವಳ' ಗಂಡನಿಗೆ!
ನಾನು ಏನೇ ಬರೆದರೂ ಅದು ನಮ್ಮಿಬ್ಬರ ನಡುವೆ ನಡೆದ ಯಾವುದೇ ಘಟನೆಯನ್ನು ಪುನರಪಿ ನೆನಪಿಸಲೇ ಬಾರದು. ನೆನಪಿಸಿದರೂ ಅದು ಯಾರ ಜತೆಗೂ ನಡೆಯುವಂತದ್ದೆ ಎಂದು 'ಅವಳು' ಸಹಿತ ಎಲ್ಲರಿಗೂ ಅನಿಸಿ ಬಿಡಬೇಕು. ಅದರಲ್ಲಿ 'ವಿಶೇಷ' ಕಾಣಲೇಬಾರದು.
ನಾ ಬರೆಯುವ ಯಾವ ಪದವೂ ನಮ್ಮ 'ಗೌಪ್ಯ ಪದಕೋಶ'ದಲ್ಲಿದ್ದಿರಬಾರದು. ಅದರ ಬಗ್ಗೆ ನಮ್ಮ ಹತ್ತಿರವರಿಗೆ ಯಾವುದೇ 'ಕ್ಲೂ' ಸಿಗಲೇಬಾರದು. ನಾ ವರ್ಣಿಸುವ ಸ್ಥಳ, ಸನ್ನಿವೇಶ, ಭಾವನೆಗಳೆಲ್ಲವೂ ಅಪರಿಚಿತವೆನಿಸಬೇಕು. ಇಲ್ಲ, ತೀರಾ ಪರಿಚಿತವೆಂದೆನಿಸಿ ಅದು 'ಸಾಮಾನ್ಯೀಕರಣ'ಕ್ಕೊಳಗಾಗಬೇಕು. ಅದರಲ್ಲಿ ನನ್ನ ಅವಳ ಪ್ರೀತಿ, ಒಡನಾಟ, ಮತ್ತೊಂದಿಷ್ಟು ಕಣ್ಣಾಮುಚ್ಚಾಲೆ ವ್ಯವಹಾರಗಳ ಚಿತ್ರಣ ಅವಳಲ್ಲಿ ಇವ 'ಇನ್ಯಾರನ್ನೋ ಇಟ್ಟು ಕೊಂಡಿದ್ನ' ಎಂಬ ಅನುಮಾನ ಮೂಡಿಸಬೇಕು.
ಅದೇ ನಮ್ಮ ಹತ್ತಿರದವರಿದ್ದಾರಲ್ಲ, ಅವರು ಅದ್ಯಾವ ಹುಡುಗಿ ಎಂದು ತಲೆ ಕೆರೆದುಕೊಂಡು, ಕುತೂಹಲದ ಹಿಮಾಲಯ ಏರಿ, ಕಾಲ್ ಮಾಡಿ ಅದ್ಯಾರು ಅಂತ ಹೇಳೋ ಪ್ಲೀಸ್... ಎಂದು ಗೋಗರೆಯಬೇಕು. ಹೇಳು ನಾವು ಯಾರಿಗೂ ಹೇಳುವುದಿಲ್ಲ ಎಂದು ಆಣೆಗಳ ಸುರಿಮಳೆ ಸುರಿಸಿ ನಂತರ ಆಧುನಿಕವಾಗಿ ಚಿಂತಿಸಿ ಬಾಂಡ್ ಪೇಪರ್ ಮೇಲೆ ಸಹಿ ಹಾಕೋ ಮಟ್ಟಕ್ಕೆ ಬರಬೇಕು, ನಮ್ಮ ಮೇಲೆ ನಿನಗೆ ನಂಬಿಕೆ ಇಲ್ವಾ? ಎಂದು ಅವರು ಕೇಳ ಬೇಕು. ಇನ್ನೂ ಹತ್ತಿರವರು ನನ್ನ ಕಾಲರ್ ಹಿಡಿದು ಕೇಳುವ ಸ್ಥಿತಿಗೆ ಬರಬೇಕು. ಊಹೂಂ ಅದರು ಅವರಿಗೆ 'ಅವಳು' ಯಾರು ಎಂದು ಗೊತ್ತಾಗಲೇ ಬಾರದು.
ಬರವಣಿಗೆಯಲ್ಲಿನ ಯಾವುದೇ ಹೆಸರಿನ ಯಾವುದೇ ಪದ ಕೂಡ 'ಅವಳ' ಹೆಸರನ್ನು ಸೂಚಿಸಲೇಬಾರದು. ಒಂದು ಸತ್ಯ ಹೇಳಿದರೆ ಆ ಸತ್ಯವನ್ನು ಸುಳ್ಳು ಮಾಡುವ ನೂರು ಸುಳ್ಳು ಹೇಳಬೇಕು. ಅಥವಾ ನೂರು ಸತ್ಯ ಹೇಳಿ ಒಂದು 'ದೊಡ್ಡ' ಸುಳ್ಳು ಹೇಳಿದರೂ ಆಗುತ್ತದೆ.
ಅವಳ ರೂಪ, ಗುಣ, ಹಾವಭಾವಗಳೆಲ್ಲವನ್ನೂ ಗೊಂದಲ ಹುಟ್ಟಿಸುವಂತೆ ಹೇಳಬೇಕು. ಬೇಡ, ಅದು ಹೇಗೆ ಬರೆದರೂ ಅವಳಿಗೆ ಅದು 'ಅವಳೇ' ಎಂಬ ಅನುಮಾನ ಬಂದೇ ಬರುತ್ತದೆ. ಅವಳಿಗೆ ಬಾರದಿದ್ದರೂ ಅವಳ ಬಗ್ಗೆ ಮನಸಲ್ಲೇ ಮಂಡಿಗೆ ಮೆಲ್ಲುತ್ತಿದ್ದರಿಗಂತೂ ಬಂದೇ ಬರುತ್ತದೆ. ಇದರ ಸಹವಾಸವೇ ಬೇಡ. ಅವಳು ಬಳಸುತ್ತಿದ್ದ ವಸ್ತು, ಇಷ್ಟಪಡುವ ತಿಂಡಿ ತಿನಿಸು, ನಟ ನಟಿ, ಬಣ್ಣ ಹೀಗೆ ಇನ್ನೇನೋ ಗಳನ್ನು ರೂಪಕವಾಗಿ ಬಳಸೋಣ... ಅಂದರೆ ಅದು ಹೆಚ್ಚಿನವರಿಗೆ ಗೊತ್ತಿದೆ.
"ಇಲ್ಲಿನ ಎಲ್ಲ ಸನ್ನಿವೇಶ, ಪಾತ್ರ ಹಾಗೂ ಸಂಭಾಷಣೆಗಳು ಕೇವಲ ಕಾಲ್ಪನಿಕ. ಇದಕ್ಕೂ ನೈಜ ಘಟನೆಗಳಿಗೂ ಯಾವುದೇ ಸಂಬಂಧವಿದೆ ಎಂದೆನಿಸಿದರೆ ಅದು ಕೇವಲ ಕಾಕತಾಳೀಯ" ಎಂದು ಕಥೆಯ ಆರಂಭದಲ್ಲಿ ಬರೆದು ಬಿಟ್ಟರೇ...? ಆದರೆ ಈ ಸಾಲುಗಳು ನಂಬಿಕೆ ಹುಟ್ಟಿಸುವ ಸಾಮರ್ಥ್ಯ ಕಳೆದುಕೊಂಡು ತುಂಬ ಸಮಯವಾಗಿದೆ.
ಈಗೇನು ಮಾಡಲಿ? ನನಗೆ 'ಅದನ್ನು' ಬರೆಯಲೇ ಬೇಕು. ಆದರೆ ಅದರಲ್ಲಿರುವ 'ಅವಳನ್ನು' ಏನು ಮಾಡೋದು?
'ಅವಳ' ಕಥೆ ನನ್ನ ಮನದಲ್ಲಿ ಗರ್ಭಂಕುರವಾಗಿ ಕೆಲ ಸಮಯಗಳೇ ಸಾಗಿದೆ... ಅದನ್ನು ಗರ್ಭಪಾತ ಮಾಡಿಸಲು ನನಗೆ ಸುತಾರಾಂ ಇಷ್ಟವಿಲ್ಲ. ಅದು ನನ್ನ ಬರವಣಿಗೆಯ ಸೋಲು ಅಥವಾ ಅತ್ಮಹತ್ಯೆ. ಹಾಗೇ ಅಥವಾ ಹೀಗೆ ಜನ್ಮ ನೀಡಲು ಸಾಧ್ಯವಿಲ್ಲ, ಅದು ಅವಳ ಬದುಕಿನ ಪ್ರಶ್ನೆ... ಈಗ ತಾನೇ ಗಂಡನ ಮನೆ ಸೇರಿ ಆತನ ಬಿಸಿಯುಸಿರಿಗೆ ಕರಗುತ್ತಿರುವವಳು ನನ್ನ ಬಿಸಿಯುಸಿರಿಗೂ ಕರಗಿದ್ದಳು ಎಂದು 'ಅವನಿಗೆ' ಗೊತ್ತಾದರೆ ನಂತರ 'ಅವಳ' ಉಸಿರೆಲ್ಲ ಬಿಸಿಯೇ. ಆಕೆಯ ಆ ಬಿಸಿ ಉಸಿರಿನ ತಾಪಕ್ಕೆ ನನ್ನ ಬರವಣಿಗೆಯ ಸೆಲೆ ಬತ್ತಿ ಹೋಗಬಹುದು. ಅಲ್ಲಿಗೆ ನನ್ನ ಬರವಣಿಗೆಯ ಶವಸಂಸ್ಕಾರವೂ ನಡೆದು ಹೋಗುತ್ತದೆ! ಕಥೆಯಾಗಲೇ ಬೇಕಾದ ಹುಡುಗಿಯನ್ನು ಅದು ಹೇಗೆ ತಾನೇ ಕಥೆ ಮಾಡಲಿ?

No comments: