Friday, August 7, 2009

ಕಾಲೇಜು ಚುನಾವಣೆ: ಕಾಸೇ ಬಾಸ್!

ಶಿಕ್ಷಣ ವ್ಯವಸ್ಥೆಗೂ ಆ ದೇಶದ ಆಡಳಿತ ಕ್ರಮಕ್ಕೂ ನೇರ ಸಂಬಂಧವಿದೆ. ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿ(ಬೆಳೆ)ಯುವಿಕೆಗೆ ಶಿಕ್ಷಣದ ಕೊಡುಗೆ ಅಪಾರ.ನಮ್ಮ ದೇಶದ ಮಕ್ಕಳಿಗೆ ಪ್ರಜಾಪ್ರಭುತ್ವ ಎಂದರೆ ಏನು ಎಂಬುದು ಆರ್ಥವಾಗುವುದೇ ಶಾಲಾ ಕಾಲೇಜುಗಳ ಮೂಲಕ. ಈ 'ಆರ್ಥವಾಗುವಿಕೆ' ಸೈಧಾಂತಿಕ ಮತ್ತು ಪ್ರಾಯೋಗಿಕ ಅನುಭವಗಳೆರಡನ್ನು ಹೊಂದಿರುತ್ತವೆ.
ಸೈಧಾಂತಿಕ ವಿಷಯಗಳನ್ನು ಪಠ್ಯಗಳ ಮೂಲಕ ತಿಳಿದುಕೊಳ್ಳವ ನಾವುಗಳು ಅದರ ಪ್ರಾಯೋಗಿಕ ಅನುಭವವನ್ನು ಶಾಲಾ ಕಾಲೇಜು ಚುನಾವಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಡೆಯುತ್ತಿವೆ.
ಆಂದರೆ ಶಾಲಾ ಕಾಲೇಜು ಚುನಾವಣೆಗಳು ದೇಶದ ಭಾವಿ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಮೊದಲ ಪಾಠಶಾಲೆ ಎಂದಾಯಿತು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಚುನಾವಣೆಗಳಲ್ಲಿ ನಾವು ಇಂದು ಕಾಣುವ ವಾತಾವರಣ ದೇಶದ ಮುಂದಿನ ಚುನಾವಣೆಗಳ ಪರಿಸರ ಯಾವ ರೀತಿ ಇರುತ್ತದೆ ಎಂಬುದರ ಸ್ಪಷ್ಟ ಮುನ್ಸೂಚಣೆ. ಹಾಗಾದರೆ 'ಡೆಮೋಕ್ರಸಿ ಇಸ್ ಇನ್ ಡೇಂಜರ್'!
ಕಾಲೇಜಿನ ವಿದ್ಯಾರ್ಥಿ ಸಂಘಗಳಿಗೆ ನಡೆಯುವ ಚುನಾವಣೆಗಳು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳಿಗೆ 'ಎಲ್ಲಾ' ರೀತಿಯಿಂದಲೂ ಪೈಪೋಟಿ ನೀಡುತ್ತಿದೆ. ಸದನದಲ್ಲೊಂದು ಸ್ಥಾನ ಪಡೆಯಲು ಒಬ್ಬ ಅಭ್ಯರ್ಥಿ ಏನೆಲ್ಲಾ ಕಸರತ್ತು ಮಾಡುತ್ತಾನೋ ಅದೆಲ್ಲವನ್ನು ಒಂದು ವರ್ಷದ ಆವಧಿಗೆ ಒಂದು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಲು ವಿಧ್ಯಾರ್ಥಿಯೊಬ್ಬ ಮಾಡುತ್ತಾನೆ ಎಂದರೆ ನೀವು ನಂಬಲೇ ಬೇಕು.
ಚುನಾವಣೆ ಅಂದಾಗ ಪೈಪೋಟಿ ಇದ್ದೆ ಇರುತ್ತದೆ. ರಾಜಕೀಯ ಪಕ್ಷಗಳ ನಡುವೆ ನಡೆಯುವ ಚುನಾವಣೆಯಲ್ಲಿ ಹೆಸರಿಗಾದರೂ ಅಧಿಕಾರಕ್ಕಾಗಿ 'ತತ್ವ ಸಿದ್ದಾಂತಗಳ ನಡುವಿನ ಸೆಣಸಾಟ' ಎಂಬ ಪರಿಕಲ್ಪನೆ ಇದೆ. ಈ ಸೆಣಸಾಟವನ್ನು ವ್ಯವಸ್ಥಿತವಾಗಿ ಮತ್ತು ಕಾನೂನು ಬದ್ಧವಾಗಿ ನಡೆಸಲು ಚುನಾವಣ ಆಯೋಗ ಎಂಬ ಒಂದು ಸಂಸ್ಠೆಯೇ ಇದೆ. ಹಾಗೆಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರಿಗೆ ಶಿಕ್ಷೆಯ ಭಯ ಕೂಡವಿರುತ್ತದೆ. ಆದರೆ ಕಾಲೇಜುಗಳಲ್ಲಿ?
ಇಂದು ಕಾಲೇಜು ಚುನಾವಣೆ ಗೆಲ್ಲಲ್ಲು ವಿದ್ಯಾರ್ಥಿಗಳು ಲಕ್ಷಗಟ್ಟಲೆ ಹಣ ಸುರಿಯುತ್ತಾನೆ. ನನಗೆ ಗೊತ್ತಿರುವಂತೆ, ಕಳೆದ ವರ್ಷ ಒಂದು ಗ್ರಾಮೀಣ ಕಾಲೇಜಿನ ವಿದ್ಯಾರ್ಥಿ ಚುನಾವಣೆ ಗೆಲ್ಲಲ್ಲು ಸುರಿದದ್ದು ಬರೋಬ್ಬರಿ 75,000 ರೂಪಾಯಿಗಳು!
ಇದರರ್ಥ, ಹಿಂದೆ ಕಾಲೇಜು ಚುನಾವಣೆಗಳು ಮಾದರಿಯಾಗಿ ನಡೆಯುತ್ತಿತ್ತು, ಒಳ್ಳೆಯವರು ಮಾತ್ರ ಚುನಾವಣೆಗೆ ನಿಲ್ಲುತ್ತಿದ್ದರು ಮತ್ತು ಗೆಲ್ಲುತ್ತಿದ್ದರು ಎಂದಲ್ಲ. ಆದರೆ ಈಗಿನ ಕಾಲೇಜು ಚುನಾವಣೆಗಳಷ್ಟು ಅಧಃಪತನಕ್ಕೀಡಾಗಿರಲಿಲ್ಲ.
ಕಾಲೇಜು ಚುನಾವಣೆಗಳು ಗಮ್ಮತ್ತಿನ ಮತ್ತು ಮೋಜು ಮಸ್ತಿ ಮಾಡುವ ಅವಕಾಶವೊದಗಿಸುತ್ತದೆ. ಇದನ್ನು ಎಲ್ಲರು ಅನುಭವಿಸಬೇಕು, ಅಸ್ವಾದಿಸಬೇಕು, ಖುಷಿಪಡಬೇಕು. ಆದರೆ ಇದು ಉತ್ತಮ ಚುನಾವಣ ಹವಾ ಇದ್ದಲ್ಲಿ ಮಾತ್ರ ಸಾಧ್ಯ.
ಇಂದು ಕಾಲೇಜು ಚುನಾವಣೆ ಪ್ರತಿಷ್ಟೆಯ ಸಂಕೇತವಾಗಿ ಬಿಟ್ಟಿದೆ. ಇಲ್ಲಿ ಎರಡು ರೀತಿಯ ಪ್ರತಿಷ್ಟೆಗಳು ಮುಖ್ಯವಾಗಿ ವರ್ತಿಸುತ್ತದೆ. ಅದೇ ವ್ಯಕ್ತಿ ಪ್ರತಿಷ್ಟೆ ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿಷ್ಟೆ. ಈ ಕಾರಣಕ್ಕಾಗಿಯೇ ಇಂದು ಕಾಲೇಜು ಚುನಾವಣೆಗಳು ಪೊಲೀಸ್ ಭದ್ರತೆಯಲ್ಲಿ ನಡೆಯುತ್ತಿರುವುದು.
ನಮ್ಮ ಸಂಘಟನೆಯ ಅಭ್ಯರ್ಥಿ ಗೆಲ್ಲಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಏನೆಲ್ಲಾ ಕಸರತ್ತು ಮಾಡುತ್ತವೆ. ಹಾಗೆಯೇ, 'ನಮ್ಮ ಮಕ್ಕಳು ಗೆಲ್ಲಬೇಕು' ಎಂದು ಪೋಷಕರು ಹಣ ಸುರಿಯುತ್ತಾರೆ. ಅದರೊಂದಿಗೆ ಕೆಲ ಸಂದರ್ಭಗಳಲ್ಲಿ ತಮ್ಮ ತಂದೆ ತಾಯಿಗಳ ಹೆಸರನ್ನು ಬಂಡವಾಳ ಮಾಡಿಕೊಂಡು ವಿದ್ಯಾರ್ಥಿಗಳು ಸಾಲ ಮಾಡಿ ಚುನಾವಣೆಗೆ ನಿಲ್ಲುವುದು ಇದೆ.
ಸಾಮಾನ್ಯವಾಗಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಒಂದು ವರ್ಷದಿಂದಲೇ ಆ ಸ್ಥಾನದ ಮೇಲೆ ಕಣ್ಣಿಟ್ಟಿರುತ್ತಾನೆ. ಅದಕ್ಕಾಗಿ ವ್ಯವಸ್ಥಿತವಾದ ಕಾರ್ಯಾಚರಣೆ ಮಾಡುತ್ತಾನೆ. ತನ್ನ ಸುತ್ತ 'ಸಮಾನ ಮನಸ್ಕ' ವಿದ್ಯಾರ್ಥಿಗಳ ಪಟಾಲಾಂ ಕಟ್ಟಿಕೊಳ್ಳುತ್ತಾನೆ. ಇದು ಒಂಥರ ಭಟ್ಟಂಗಿಗಳ ಪಡೆ.
ಇನ್ನು ತರಗತಿ ಪ್ರತಿನಿಧಿಗಳ ಅಧ್ಯಕ್ಷನನ್ನು ಆಯ್ಕೆ ಮಾಡುವ ಕಾಲೇಜುಗಳಲ್ಲಿ ಆತ ತನನ್ನು ಬೆಂಬಲಿಸುವ ವಿದ್ಯಾರ್ಥಿಗಳು ಚುನಾವಣೆಗೆ ನಿಲ್ಲುವಂತೆ ನೋಡಿಕೊಳ್ಳುತ್ತಾನೆ. ಇದರಲ್ಲಿ ತಪ್ಪೇನಿಲ್ಲ, ಆದರೆ ಅವರ ಗೆಲುವಿನ ಸಂಪೂರ್ಣ 'ಜವಾಬ್ದಾರಿ' ತಾನೇ ಹೊರುತ್ತಾನೆ. ಇಲ್ಲೇ ಹಣದ ಚಲಾವಣೆ ಮೇರೆ ಮೀರುವುದು. ಇಲ್ಲ, ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಯನ್ನು ಕೊಂಡುಕೊಳ್ಳುತ್ತಾನೆ. ಒಂದು ವೇಳೆ ತನ್ನ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ವಿದ್ಯಾರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದಾದರೆ ಅವನನ್ನು ಬೆಂಬಲಿಸುವವರನ್ನು ತೃಪ್ತಿ ಪಡಿಸುವ ಕೆಲಸಕ್ಕೆ ಕೈ ಹಾಕುತ್ತಾನೆ. ಇನ್ನು ನೇರ ಚುನಾವಣೆ ನಡೆಯುವ ಕಾಲೇಜುಗಳಲ್ಲಿ ಅಭ್ಯರ್ಥಿಗೆ 'ರಿಸ್ಕ್' ಹೆಚ್ಚಿರುತ್ತದೆ. ಅಂದರೆ 'ಮಾನವ ಸಂಪನ್ಮೂಲ' ಮತ್ತು ಹಣದ ಹೂಡಿಕೆ ಹೆಚ್ಚು ಬೇಕಾಗುತ್ತದೆ. ಅದರೊಂದಿಗೆ ಪ್ರತಿಫಲದ ಗ್ಯಾರಂಟಿ ಇರುವುದಿಲ್ಲ. ಚುನಾವಣೆಯಲ್ಲಿ ಸೋತರೆ ಯಾರ ಕಾಲರ್ ಹಿಡಿಯುವುದು? ಎಂಬ ಸ್ಥಿತಿ. ಅದರೂ ಇಲ್ಲೂ ಹಣ, ಮದಿರೆ, ಪಾರ್ಟಿ ಯಥೇಚ್ಚವಾಗಿ ನಡೆಯುತ್ತದೆ. ಇಲ್ಲಿ ಕೆಲವು 'ಒಪಿನಿಯನ್ ಲೀಡರ್'ಗಳಿಗೆ ವಿಶೇಷ ಮನ್ನಣೆ.
ಅನಂತರ ಚುನಾವಣೆ... ಕಾಲೇಜುಗಳ ಆಡಳಿತ ಮಂಡಳಿ ನಮ್ಮದು ಬಹಳ ವ್ಯವಸ್ಥಿತವಾಗಿ, ಶಿಸ್ತುಬದ್ದವಾಗಿ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ನಡೆಯುವ ಚುನಾವಣೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತವೆ. ಯಾಕೆಂದರೆ ಅವರಿಗೆ ಚುನಾವಣೆ ಶಾಂತಿಯುತವಾಗಿ ನಡೆದರೆ ಸಾಕು. ಉಳಿದ ವಿಷಯಗಳು ಹೇಗಾದರೂ ಪರವಾಗಿಲ್ಲ. ಮತ್ತೇ ಕೆಲ ಸಂದರ್ಭಗಳಲ್ಲಿ ಅವರಿಗೆ ಈ 'ಭೂಗತ ಚಟುವಟಿಕೆ'ಯ ಅರಿವೇ ಇರುವುದಿಲ್ಲ.
ಇವುಗಳ ಒಟ್ಟು ಫಲವಾಗಿ ಬಡ ವಿದ್ಯಾರ್ಥಿಯೊಬ್ಬ ಚುನಾವಣೆಗೆ ನಿಲ್ಲುವಂತಿಲ್ಲ, ನಿಂತು ಗೆಲ್ಲಬೇಕಾದರೆ ಅವನಿಗೆ ಯಾರದದ್ದರೂ ಆರ್ಥಿಕ ಅಥವಾ ಸಂಘಟನೆಗಳ ಬೆಂಬಲ ಬೇಕೇ ಬೇಕು. ಅದರೊಂದಿಗೆ 'ಸಕಲ ಕಲಾ ವಲ್ಲಭ'ರಾಗಿರಬೇಕು. ಇದೇ ನಾಯಕತ್ವ ಗುಣ! ಹಾಗಂತ, ಕಾಲೇಜು ಚುನಾವಣೆ ನಡೆಸದೇ, ಅಂಕದ ಅಧಾರದ ಮೇಲೆ ಅಥವಾ ಇನ್ನೀತರ ಮಾನದಂಡಗಳ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆರಿಸುವುದು ಆಕ್ಷಮ್ಯ.ವಿದ್ಯಾರ್ಥಿ ಸಂಘದ ನಾಯಕ ಸ್ಥಾನಕ್ಕೆ ಚುನಾವಣೆಗಳ ಮೂಲಕವೇ ಆಯ್ಕೆ ನಡೆಯಬೇಕು. ಆದರೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಬೇಕು. ಯಾವುದೇ ವಿದ್ಯಾರ್ಥಿ ಅನೈತಿಕ ಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದ್ದಾನೆ ಅಥವಾ ಎದುರಿಸಿದ್ದಾನೆ ಎಂಬುದು ಸಾಬೀತಾದರೆ ಅವನ ಅಭ್ಯರ್ಥಿತನವನ್ನು ಅನೂರ್ಜಿತಗೊಳಿಸಬೇಕು.
ಕಾಲೇಜು ಚುನಾವಣೆ ಗೆಲ್ಲಲ್ಲು ಹಣ ಚೆಲ್ಲಿದ್ದೇ ಆದರೆ ಅಥವಾ ಆ ಅಭ್ಯರ್ಥಿಯ ಪರವಾಗಿ ಬೇರೆ ಯಾರದರೂ ಆ ಕೆಲಸ ಮಾಡಿದರೆ ಆ ವಿದ್ಯಾರ್ಥಿಯ ನಾಮಪತ್ರ ತಿರಸ್ಕರಿಸಬೇಕು, ಚುನಾವಣೆ ಬಳಿಕ ಈ ವರ್ತನೆ ಕಂಡರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು.
ಅಭ್ಯರ್ಥಿಗಳಿಗೆ ಪ್ರಚಾರ ನಡೆಸಲು ಒಂದು ನೀತಿ ಸಂಹಿತೆ ರಚಿಸಿಡಬೇಕು, ಆ ಪ್ರಕಾರವೇ ಅವರು ಪ್ರಚಾರ ನಡೆಸಬೇಕು.
ಕಾಲೇಜು ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ನಡೆಸುವ ಮೆರವಣಿಗೆ ಮತ್ತು ಸುಡುಮದ್ದು ಪ್ರದರ್ಶನಗಳಿಗೆ ಸಂಪೂರ್ಣ ನಿಷೇಧ ಹೇರಬೇಕು.
ಈ ಬಗ್ಗೆ ಕಾಲೇಜುಗಳ ಅಡಳಿತ ಮಂಡಳಿ ಮತ್ತು ಸರಕಾರ ಗಂಭೀರವಾಗಿ ಯೋಚಿಸಬೇಕು. ಕಾಲೇಜು ಚುನಾವಣೆಗಳನ್ನು ನಡೆಸುವ ಜವಾಬ್ಧಾರಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಅಥವಾ ಕಾಲೇಜುಗಳು ಇಡೀ ಚುನಾವಣ ಪ್ರಕಿಯೆಯ ಮೇಲೆಯೇ ನಿಗಾವಿಡುವ ಕೆಲಸ ಮಾಡಬೇಕು.
ಯಾಕೆಂದರೆ ಪ್ರಜಾಪ್ರಭುತ್ವದ ಯಶಸ್ಸಿನ ನಿರೀಕ್ಷೆಗಳು ಹುಟ್ಟ ಬೇಕಾದ ಜಾಗದಲ್ಲೇ ಭ್ರಮನಿರಶನವಾದರೆ ಪ್ರಜಾಪ್ರಭುತ್ವದ ಆಯುಷ್ಯಕ್ಕೆ ಗೆದ್ದಲು ಹಿಡಿದಂತೆ. (ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ)

No comments: