Monday, July 23, 2012

ಯಾವಾಗ ಪಂದ್ಯ ಮುಗಿಯುತ್ತದೆ ಅನ್ನುವುದನ್ನು ವಿಧಿಯೇ ನಿರ್ಧರಿಸಲಿ ಅನ್ನುವುದು ನನ್ನ ಆಸೆ, ನಿನ್ನದು?


. . . ಎಚ್ . . . .
ಇಷ್ಟೇ ಬರೆದು ಪತ್ರ ವ್ಯವಹಾರ ಶುರು ಮಾಡುವುದು ಪತ್ರ ಸಂಪ್ರದಾಯದ ಉಲ್ಲಂಘನೆ ಅನ್ನುವುದೇನೋ ನಿಜ. ಆದರೆ ನಾನು ಏನು ಮಾಡಲಿ? ಯಾವ ಪ್ರಿಫಿಕ್ಸ್, ಸಫಿಕ್ಸ್ ಬಳಸೋದು ಅಂತ ಗೊತ್ತೇ ಆಗುತ್ತಿಲ್ಲ ಮಾರಾಯ್ತಿ. ಕಲ್ಲನ್ನು ಕಲ್ಲು ಎಂದು ಕರೆಯುವುದನ್ನು ಬಿಟ್ಟು ಅದಕ್ಕೆ ಯಾವುದೇ ಪ್ರಿಫಿಕ್ಸ್ ಆಥವಾ ಸಫಿಕ್ಸ್ ಸೇರಿಸಿದರೂ ಅದು ತನ್ನ ಗುಣ, ಗುಣಮಟ್ಟ, ಆಕಾರ, ಆಕೃತಿ, ದೃವ್ಯರಾಶಿಗಳಲ್ಲಿ ಕಿಂಚಿತ್ತು ಬದಲಾವಣೆ ತಂದು ಕೊಳ್ಳಲಾರದು ಎಂಬುದು ಕಲ್ಲು ಹೃದಯದವಳಾದ (ನೀನೇ ಕರೆದುಕೊಂಡಂತೆ) ನಿನಗೆ ಚೆನ್ನಾಗಿಯೇ ಗೊತ್ತಿದೆ. ನಾನು ನಿನ್ನನ್ನು ಏಕೆ ಗೌರವಿಸುತ್ತಿದ್ದೆ ಎಂದು ಕಾರಣ ಕೊಟ್ಟು ಹೇಳಬಹುದಾದ ಕೆಲವೇ ಕೆಲವು ಕಾರಣಗಳಲ್ಲಿ ಒಂದು ನೀನು stone hearted ಆಗಿದ್ದರೂ ಅದಕ್ಕಿಂತ ಹೆಚ್ಚು strong hearted ಆಗಿದ್ದದ್ದು. ಕಲ್ಲು ಹೃದಯಕ್ಕು ಗಟ್ಟಿ ಹೃದಯಕ್ಕೂ ಅಂಗ್ಲ ಭಾಷೆಯಲ್ಲಿ ಎರಡೇ ಎರಡು ಸ್ಪೆಲ್ಲಿಂಗ್ ವ್ಯತ್ಯಾಸವಷ್ಟೇ ಇದ್ದರೂ ಕೂಡ ಎರಡು ಸ್ಪೆಲ್ಲಿಂಗ್ಗಳು ನಮ್ಮ ವ್ಯಕ್ತಿತ್ವ, ವ್ಯವಹಾರ, ನಡೆ ನುಡಿಗಳಲ್ಲಿ ತರುವ ವ್ಯತ್ಯಯ ಅಪಾರವಾದದ್ದು. ಸ್ಪೆಲ್ಲಿಂಗ್ ವಿಷಯ ಬಿಟ್ಟು ಬಿಡೋಣ. ಏಕೆಂದರೆ ಎರಡು ಭಾಷೆಗಳಲ್ಲೂಅಪಾರ ಪಾಂಡಿತ್ಯಸಂಪಾದಿಸಿರುವ ನಿನಗೆ ನಾನಂತೂ ಏನೂ ಹೇಳಲಾಗದು. "ನನ್ನದು ಏನೇ ಇದ್ದರೂ ಹೇಳಿ ಕೇಳಿ ಮೊದಲೇ ಚೂರು... ಪಾಪಿ ನಾನು"...

ಆದರೂ ನನಗೆ ನನ್ನ ಭಾವ ಮತ್ತು ಜ್ಞಾನ ಪರಿಧಿಯಲ್ಲಿ ಹೊಳೆದ ಒಂದು ಅಂಶವನ್ನು ನಿನ್ನ ಮುಂದೆ ಇಡುತ್ತೇನೆ. ಒಪ್ಪಿಕೊ ಎಂದು ಒತ್ತಾಯಿಸಲಾರೆ... ಒಪ್ಪದಿದ್ದರೂ ನಾನೇನು ಕಳೆದುಕೊಳ್ಳಲಾರೆ. ನನ್ನ ಪ್ರಕಾರ ಕಲ್ಲು ಹೃದಯ ಎಂದರೆ ಪಲಾಯನವಾದ. ಯಾವುದೇ ಸ್ಥಿತಿ, ಪರಿಸ್ಥಿತಿ ಎದುರಾದಗಲೂ ಅದಕ್ಕೆ ಬೆನ್ನು ಹಾಕಿ ಓಡುವುದು. ಉದಾಹರಣೆಗೆ ನಾನು ನಿನಗೆ ಬೈದದ್ದೆ ಆದರೆ ಆಮೇಲೆ ಫೋನ್ ರಿಸೀವ್ ಮಾಡದಿರುವುದು, ಮೆಸೆಜ್ಗೆ ರಿಪ್ಲೈ ಮಾಡದಿರುವುದು ಇತ್ಯಾದಿ. ಅದೇ ಗಟ್ಟಿ ಹೃದಯ ಎಂದರೆ ನಾನು ನಿನ್ನಲ್ಲಿ ಅದೇಷ್ಟೆ ಪರಿ ಪರಿಯಾಗಿ ಪಪ್ಪಿ ಕೇಳಿದ್ದರೂ ಕೂಡ ಅದನ್ನು ಕೊಡದೆ ಆದರೆ ನನ್ನನ್ನು ಕಳೆದುಕೊಳ್ಳದೆ ವ್ಯವಹರಿಸುತ್ತಿದ್ದಿ ಅಲ್ವಾ ಅದು. ಇದರಿಂದ ನಿನ್ನ ಬಗ್ಗೆ ನನಗಿದ್ದ ಪ್ರೀತಿ ಹೆಚ್ಚೇನು ಆಗಿಲ್ಲ. ಅದು ಆಗಲೂ, ಈಗಲೂ, ಕ್ಷಣವೂ, ಕ್ಷಣವೂ ಹಾಗೇ ಇದೆ ಸಾಗರದಂತೆ. ಅದರ ಸಾಂದ್ರತೆ, ತೀವೃತೆಯಲ್ಲಿ ಹೆಚ್ಚು ಕಡಿಮೆಯಾಗಿಲ್ಲ. ಅದ್ದರಿಂದ ನಾನು ನಿನ್ನಿಂದ ಏನು ನಿರೀಕ್ಷಿಸುತ್ತಿದ್ದೇನೆ ಎಂಬುದನ್ನು ನೀನು ಅರ್ಥ ಮಾಡಿಕೊಳ್ಳುವಲ್ಲೆ ಸಂಪೂರ್ಣ ಎಡವಿದ್ದಿ ಎಂದು ನನಗನಿಸುತ್ತೆ. ಅದ್ದರಿಂದಲೇ ಎಲ್ಲ ಸಮಸ್ಯೆ.

ನನ್ನ ನಿನ್ನ ಪರಿಚಯಕ್ಕೆ ೯ರ ಹರೆಯ. ನಿನ್ನ ನನ್ನ ಸಂಬಂಧಕ್ಕ್ಕೆ ೬ರ ಪ್ರಾಯ. ನಿನ್ನನ್ನು ನಾನು ಪಿಯು ದಿನದಲ್ಲಿ ಕಂಡಾಗ ನನಗೆ ಅನ್ನಿಸಿದ್ದು ನೀನೊಬ್ಬಳು ವಿಶಿಷ್ಟ ಹುಡುಗಿ ಎಂದು. ಆದರೆ ಈಗ ಅನಿಸುತ್ತದೆ ನಿನ್ನದು ವಿಶಿಷ್ಟತೆ ಅಲ್ಲ ವಿಲಕ್ಷಣತೆ ಅಂತ! 
ಮೊನ್ನೆ ನನಗೆ ಅಪಘಾತವಾಗಿತ್ತು. ನನ್ನ ಅಕ್ಕ ಪಕ್ಕನೇ ಕೂತಿದ್ದ ಇಬ್ಬರು ಇನ್ನಿಲ್ಲವಾದರು. ನಾನು ಆಸ್ಪತ್ರೆ ಪಾಲಾದೆ. ಬದುಕುತ್ತೇನೋ, ಇಲ್ಲವೋ ಎಂಬುದೆಲ್ಲವೂ ಅನಿಶ್ಚಿತ. ಅದು ಹೇಗೋ ಬದುಕಿಕೊಂಡೆ. ಪವಾಡ ಸದೃಶವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಅರೆಪ್ರಜ್ಞಾವಸ್ಥೆಯಲ್ಲೂ ನಿನ್ನ ಹೆಸರು ಬಡ ಬಡಿಸುತ್ತಿದ್ದೆ ಅಂತೆ. ನನ್ನ ಜನ್ಮಕ್ಕಿಷ್ಟು! ನನಗೆ ನನ್ನ ಬಗ್ಗೆನೇ ಅಸಹ್ಯವಾಗುತ್ತಿದೆ ಮಾರಾಯ್ತಿ.

ನಿನಗೆ ಈಗ ನನ್ನ ಮೇಲೆ ಕೋಪಕ್ಕೆ ಕಾರಣ ನಿರಂತರವಾಗಿ ನಾನು ಫೋನ್ ಮಾಡುತ್ತಿರುವುದು ಮತ್ತು ನಿನ್ನ ಮಾತಿನ ಪ್ರಕಾರ ಹೇಳುವುದಾದರೆ ಬಾಯಿಗೆ ಬಂದಂತೆ ಮೆಸೇಜ್ ಮಾಡುತ್ತಿರುವುದು

ಅಕ್ಸಿಡೆಂಟ್ ಕತೆ ಮೊದಲು ಹೇಳಿ ಮುಗಿಸುತ್ತೇನೆ. ನಿಜ ಹೇಳಿದರೇ ನೀನು ನಂಬೋದಿಲ್ಲ ಅಂತ ಗೊತ್ತು. ಆದರೆ ನಿಜ ಹೇಳದಿದ್ದರೆ ನಮ್ಮ ಸಂಬಂಧಕ್ಕಿದ್ದ ಪ್ರಾಮಾಣಿಕತೆ ಮತ್ತು ವಿಶ್ವಾಸರ್ಹತೆಯ ಲೇಪಕ್ಕೆ ಕುತ್ತು. ಏನೇ ಆಗಲಿ, ನಿಜ ಹೇಳುವೆ. ಏಕೆಂದರೆ ಇನ್ನು ನಿನ್ನನ್ನು ಕಳ ಕೊಳ್ಳುವ ಭಯ, ಪಡ ಕೊಳ್ಳವ ತವಕ ಎರಡೂ ನನಗಿಲ್ಲ. ಕಳೆದುಕೊಂಡರೆ ಒಂದು ಕಲ್ಲು, ಪಡೆದುಕೊಂಡರೂ ಒಂದು ಕಲ್ಲು ಅಷ್ಟೆ ಅನ್ನುವಷ್ಟು ನಿನ್ನ (ನಮ್ಮ ಸಂಬಂಧದ) ಬಗ್ಗೆ ನಿರಾಶನಾಗಿದ್ದೇನೆ ಅಥವಾ ವೈರಾಗ್ಯ ಪಡೆದಿದ್ದೆನೆ ಎಂದು ನೀನು ತಿಳಿದುಕೊಂಡರೂ ಅಡ್ಡಿಯಿಲ್ಲ

ನನಗೆ ಅಕ್ಸಿಡೆಂಟ್ ಆದವತ್ತು ನಾನು ನಿನಗೆ ಒಂದು ಮೆಸೆಜ್ ಮಾಡಿದ್ದೆ. ನಾನು ಸಾಯೋ ತನಕವೂ ನಿನಗೆ ಕಾಲ್ ಮಾಡುತ್ತಿರುವೆ ಅಂತ. ಕಾಕತಾಳೀಯವೆಂದರೆ ಹಾಗೇ ಕಾಲ್ ಮಾಡುತ್ತಿರುವಾಗಲೇ ಅಕ್ಸಿಡೆಂಡ್ ಆಗಿತ್ತು. ದುರದೃಷ್ಟವಶಾತ್ ನಾನು ಸಾಯಲಿಲ್ಲ. ನಿನಗೆ ಕೊಟ್ಟ ಮಾತು ನನಗೆ ಉಳಿಸಿಕೊಳ್ಳಲಾಗಲಿಲ್ಲ. ವೆರಿ ವೆರಿ ಸ್ಸಾರಿ. ಸಾಯುವ ಒಂದು ಅವಕಾಶ ಮತ್ತು ನಿನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬಹುದಾಗಿದ್ದ ಪ್ರಥಮ ಅವಕಾಶ ನನ್ನ ಕೈಯಿಂದ ತಪ್ಪಿತು. ಹಾಗೇಯೇ ನಿನಗೆ ಕಿರಿಕಿರಿ ಮಾಡುತ್ತಿದ್ದ, ರೇಜಿಗೆ ಹುಟ್ಟಿಸಿದ್ದ ಅಸಭ್ಯ, ಅಸಹ್ಯ ಪ್ರಾಣಿಯೊಂದರ ಕಾಟದಿಂದ ತಪ್ಪಿಸಿಕೊಳ್ಳುವಂತಹ ನಿನ್ನ ಅವಕಾಶ ಕೂಡ ಮುಂದೂಡಲ್ಪಟ್ಟಿತ್ತು. ಇಬ್ಬರದ್ದು ಕೂಡ ದುರದೃಷ್ಟವೇ ಸರಿ

ಸರಿ, ಈಗ ಚೇತರಿಸಿಕೊಳ್ಳುತ್ತಿದ್ದೇನೆ, ಖಂಡಿತವಾಗಿಯೂ ಮೊದಲಿನಂತೆಯೆ ಆಗುತ್ತೇನೆ. ನೊ ಡೌಟ್. ನನ್ನ ಮೈಮೇಲಿನ ಎಲ್ಲಾ ಗಾಯಗಳು ಮಾಯವಾಗುತ್ತದೆ. ಆದರೆ, ಮನಸ್ಸಿಗಾದ ಗಾಯ ಅದರಲ್ಲೂ ನೀನು ಮಾಡಿದ ಗಾಯವಿದೆಯಲ್ಲ ಅದು ಯಾವತ್ತೂ ಮಾಸಲಾರದು. ನಾನು ಸಾಯುವವರೆಗೂ ಹಸಿ ಹಸಿಯಾಗಿಯೇ ಇರುತ್ತದೆ. ನೀನು ನನ್ನ ಮನಸ್ಸನ್ನು ಗೀರಿ ಗೀರಿ ಹಾಕಿದ್ದಿ, ಪುಡಿ ಪುಡಿ ಮಾಡಿದ್ದಿ, ಚಿಂದಿ ಚಿತ್ರಾನ್ನ ಮಾಡಿದ್ದಿ. ನಿನ್ನ ಜೊತೆ ಒಮ್ಮೆ ಮಾತಾಡಬೇಕು ಎಂದು ಅದೇಷ್ಟೋ ಬಾರಿ ತವಕಿಸುತ್ತಿದ್ದೆ, ಗಾಯದ ನೋವಿನಲ್ಲೂ, ರಕ್ತದ ಸೋರುವಿಕೆಯಲ್ಲೂ, ಔಷಧ, ನಿದೆರೆಯ ಅಮಲಿನಲ್ಲೂ, ಸಾಯುವ, ಬದುಕುವ ಒದ್ದಾಟದಲ್ಲೂ. ಒಮ್ಮೆ ನಿನ್ನ ಜೊತೆ ಮಾತನಾಡಬೇಕು, ಒಮ್ಮೆ, ಒಮ್ಮೆ, ಒಮ್ಮೆ, ಒಂದೇ ಒಂದು ಸಾರಿ... ಇಲ್ಲ ನಿನ್ನ ಕಲ್ಲು ಮನಸ್ಸು ಕರಗಲೇ ಇಲ್ಲ. ಅದು ಮತ್ತಷ್ಟು ಕಲ್ಲಾಯಿತು, ಕರಿ ಕಲ್ಲಾಯಿತು, ಕಲ್ಲಿದ್ದಲ್ಲಾಯಿತು.

ನೋಡು, ನನಗೆ ನೂರಾರು ಗೆಳೆಯರಿದ್ದಾರೆ ಅನ್ನುವುದು ನಿನಗೆ ಸೇರಿದಂತೆ ಎಲ್ಲರಿಗೂ ಗೊತ್ತು. ಆದರೆ ನನಗೆ ಅಪಘಾತವಾದ ಸುದ್ದಿ ಕೇಳಿ ನನ್ನ ಕೆಲ ಸ್ನೇಹಿತರನ್ನು ಬಿಟ್ಟು ಯಾರೊಬ್ಬರೂ ಸ್ಪಂದಿಸಲಿಲ್ಲ. ದಿನ ಮೆಸೇಜ್ ಮಾಡುವವರದ್ದು, ದಿನಕ್ಕೆರಡು ಬಾರಿ ಕಾಲ್ ಮಾಡುತ್ತಿದ್ದವರದ್ದು ಸುದ್ದಿನೇ ಇಲ್ಲ. ನನಗೆ ಡೌಟ್... ನನಗೆ ಅಕ್ಸಿಡೆಂಟ್ ಆದದ್ದೋ ಅಲ್ಲಾ ಅವರಿಗೋ ಅಂತ! ಅವರನ್ನು ಬಿಟ್ಟು ಬಿಡು.. ಅವರಿಗೂ ನನಗೂ ಹೆಚ್ಚೇನು ಕೊಡು ಕೊಳ್ಳುವಿಕೆಯೂ ಇಲ್ಲ. ಅಥವಾ ಅವರಿಂದ ಇಂತಹದ್ದನ್ನು ನಿರೀಕ್ಷೆ ಮಾಡುವಷ್ಟು ಮೂರ್ಖನೂ ನಾನಲ್ಲ. ಇದರರ್ಥ ನಿನ್ನಿಂದ ನಾನು ನಿರೀಕ್ಷೆ ಮಾಡುತ್ತಿದ್ದೆ ಎಂದು ತೀರಾ ಬಾಲಿಶವಾಗಿ ನೀನು ನಿರ್ಧರಿಸಬೇಡ

ನಾನು ನನ್ನ ಚಿಕ್ಕ ವಯೋಮಾನದಲ್ಲೆ ಒಂದಿಷ್ಟು ಸಾಧನೆ ಮಾಡಿದ್ದರೂ ಕೂಡ ಒಂದೇ ಒಂದು ಅಭಿನಂದನೆ ಮೆಸೆಜ್ ಮಾಡದ, ಮಾತಿನಲ್ಲಿ ಮೆಚ್ಚುಗೆ ಸೂಚಿಸದ, ನಾನು ಅದೇನೋ ಬರೆದು ತಂದು ನಿನ್ನ ಮುಂದಿಟ್ಟಾಗ ಅದನ್ನು ತೀಡಾದ, ನನ್ನ ಸರಿ ತಪ್ಪುಗಳ ಬಗ್ಗೆ ಒಮ್ಮೆಯೂ, ಒಂಚೂರು ವಿಮರ್ಶೆ ಮಾಡದ ಎಲ್ಲವನ್ನೂ ಲೆಕ್ಕಾಚಾರದ ಮೂಸೆಯಲ್ಲೇ ನೋಡುತ್ತಿದ್ದ ನಿನ್ನತ್ತ ಒಂದು ಹಿಡಿ ಗಾಳಿಗೋಸ್ಕರ, ಬದುಕಿಗೋಸ್ಕರ  ಒದ್ದಾಡುತ್ತಿದ್ದಾಗ ಮಾನಸಿಕ ಬೆಂಬಲಕ್ಕಾಗಿ ನೋಡುವಷ್ಟು ಮುಠ್ಠಾಳ ನಾನಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ನಿನ್ನ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದೇನೆ ಮಾರಾಯ್ತಿ! ನಿನ್ನ ದನಿ ಕೇಳಿದರೆ ನಾನು ಬದುಕುತ್ತೇನೆ ಎಂದು ಗೊತ್ತಾದದ್ದೇ ಆದರೆ ನಿನ್ನ ಸಿಮ್ನ್ನೆ ಬದಲಾಯಿಸಿ ಬಿಡುವಷ್ಟು ನಿಷ್ಕರುಣಿ, ನಿರ್ದಯಿ ಮತ್ತು ಕಠೋರ ಹೃದಯದವಳು ನೀನು.

ಆದರೂ ನಾನು ನಿನಗೆ ಮೆಸೇಜ್ ಮಾಡಿದ್ದೆ. ಬೈದು ಮೆಸೇಜ್ ಮಾಡಿದ್ದೆ, ಮತ್ತೊಮ್ಮೆ ನಿನ್ನ ಮಾತಲ್ಲೇ ಹೇಳುವುದಾದರೆ ಬಾಯಿಗೆ ಬಂದಂತೆ ಮೆಸೆಜ್ ಮಾಡಿದ್ದೆ. ಒಂದರ ಮೇಲೊಂದರಂತೆ ಕಾಲ್ ಕೊಟ್ಟೆ. ಏಕೆ?  ನಿನಗೆ ನಾನು ಇಲ್ಲಿ ಮತ್ತೊಂದು ವಿಷಯ ಸ್ಪಷ್ಟ ಪಡಿಸಬೇಕು. ನೀನು ನನ್ನನ್ನು ಅದೇಷ್ಟೆ ಕಾಡಿಸಿದ್ದರು, ಪೀಡಿಸಿದ್ದರು ಕೂಡ ನಿನ್ನ ಮೇಲಿನ ಪ್ರ್ರೀತಿ ಮಾತ್ರ ಈಗಲೂ ಕ್ಷಣವೂ ನನ್ನಲ್ಲಿ ಚಿಮ್ಮುತ್ತಲೇ ಇದೆ. ಇದೇ ವಿಧಿ ವಿಪರ್ಯಾಸ! ವಿಧಿಯೇ ನನ್ನನ್ನು ನೀನು ಏನು ಮಾಡಬೇಕೆಂದಿದ್ದಿಯಾ?
ನನ್ನ ನಿನ್ನ ಸಂಬಂಧದ ಮೂಲಭೂತ ಅಂಶಗಳತ್ತ ಒಮ್ಮೆ ಗಮನ ಹರಿಸೋಣ. ನನಗೆ ನಿನ್ನ ಮೇಲೆ ವಿಶೇಷ ಪ್ರೀತಿ (ಇನ್ನು ಲವ್ ಎಂದಷ್ಟೇ ತಿಳಿದುಕೊಳ್ಳಬೇಡ) ಹುಟ್ಟಿಕೊಂಡದ್ದು. ಒಂದು ಸಂಜೆ. ಅವತ್ತು ನನ್ನ ನಿನ್ನ ಮಧ್ಯೆ ಏನು ನಡೆದಿತ್ತು ಎಂಬುದು ನಿನಗೆ ನೆನಪಿರಬಹುದು, ಅದೇ ನೆನಪಿಲ್ಲ ಎಂದಾದರೆ ನಾನೇನು ಮಾಡಲು ಸಾಧ್ಯವಿಲ್ಲ. ಆದರೆ ನಿನ್ನ ಬಗ್ಗೆ ನನಗೆ ಸಿಕ್ಕಾಪಟ್ಟೆ ಕೋಪ ಬಂದಿದ್ದದ್ದು ಘಟನೆ ನಡೆಯುವುದಕ್ಕಿಂತ ಎಷ್ಟೋ ಹಿಂದೆ. ಅದು ಕೂಡ ಯಾವಾಗ ಎಂದು ನಿನಗೆ ಗೊತ್ತಿರಬಹುದು. ಗೊತ್ತಿಲ್ಲ ಎಂದರೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಾನೇನು ಮಾಡಲು ಸಾಧ್ಯವಿಲ್ಲ. ಆದರೆ ನಮ್ಮಿಬ್ಬರಿಗೆ ಗೊತ್ತಿದ್ದ ಪಕ್ಕಾ ಸತ್ಯವೆಂದರೆ ನಾವಿಬ್ಬರು ಲವ್ (ಲೋಕದ ಕಣ್ಣೆವೆಯ ವ್ಯಾಖ್ಯಾನದಲ್ಲಿ) ಮಾಡುತ್ತಿರಲಿಲ್ಲ. ಆಫ್ಕೋರ್ಸ್, ನಾನಂತು ಯಾವ ಆಂಗಲ್ನಿಂದಲೂ ನಿನ್ನನ್ನು ಲವ್ ಮಾಡಲು ಸಾಧ್ಯವೇ ಇರಲಿಲ್ಲ!

ಬಳಿಕ ನಮ್ಮ ನಡುವೆ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಯಾವಾಗ, ಏನೆಲ್ಲ ನಡೆದಿದೆ, ನಡೆದಿಲ್ಲ ಅನ್ನುವುದು ನಮ್ಮಿಬ್ಬರ ಮನದಲ್ಲಿ ಕಲ್ಲಿನ ಮೇಲಿನ ಬರಹದಂತೆ ಇದೆ. ಇರಲಿ ಬಿಡು, ನೀನು ನನ್ನುನ್ನು ನಾಟಕದವ ಅಂದದ್ದು ಅಥವಾ ಕಳೆದ ಏಪ್ರಿಲ್ನಲ್ಲಿ ನಾನು ಊರಿಗೆ ಬಂದಿದ್ದಾಗ ನೀನು ಸಿಗುವೆ ಎಂದು ಹೇಳಿ ಕೈಕೊಟ್ಟದ್ದು ನನಗೆ ಅತ್ಯಂತ ನೋವು ಕೊಟ್ಟ ಸಂಗತಿ ಅಂತ ನಾನು ನಿನಗೆ ಹೇಳಿದ್ದೆ. ಹಾಗೇ ನಾಟಕದವ ಅಂದ ವಿಷಯವನ್ನು ನಾವಿಬ್ಬರು ಅಲ್ಲೇ ಬಿಟ್ಟು ಬಹಳಷ್ಟು ದೂರ ಒಂದಾಗಿಯೇ ಬಂದಿದ್ದೇವೆ.

ಆದರೆ ನೀನು ಸಿಗುತ್ತೇನೆ ಎಂದು ಹೇಳಿ ಮೋಸ ಮಾಡಿದ ಘಟನೆ ಮತ್ತು ಮೋಸ ಮಾಡಿದ ರೀತಿಯ ಬಳಿಕ ನಿನ್ನ ಜೊತೆ ಮಾತನಾಡುವುದನ್ನು ನಾನು ಬಹಳಷ್ಟು ಕಡಿಮೆ ಮಾಡಿದ್ದೆ. ನನಗೆ ಕಳೆದ ವರ್ಷ ಬರ್ತ್ ಡೇ ವಿಶ್ ಕೂಡ ಮಾಡದೇ ನೀನು ಅದೇಷ್ಟು ಹಠವಾದಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದೆ. ’ಮುಯ್ಯಿಗೆ ಮುಯ್ಯಿಎಂಬಂತೆ ನಿನ್ನ ಬರ್ತ್ ಡೇಗೂ ನಾನು ವಿಶ್ ಮಾಡಿರಲಿಲ್ಲ. ಮೇಲೆ ನಾನು ನಿನಗೆ ಕಾಲ್ ಮಾಡಿದ್ದು ನಿನ್ನ ಲವರ್ಗಳಲ್ಲಿ ಒಬ್ಬ ನನಗೆ ನಿನ್ನ ನಂಬರ್ ಕೊಡು ಎಂದು ದುಂಬಾಲು ಬಿದ್ದ ಬಳಿಕವೇ. ಅಂದರೆ ಸುಮಾರು ಆರು ತಿಂಗಳ ಬಳಿಕ. ಅನಂತರ ಕಳೆದ ವರ್ಷಾಂತ್ಯಕ್ಕೆ ಊರಿಗೆ ಬರುತ್ತೇನೆ ಎಂದಾಗ ಗೆಳತಿಯೊಬ್ಬಳ ಮದುವೆಯ ದಿನ ನಾವು ಭೇಟಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿರಲಿಲ್ಲ. ಅಂದು ನಮ್ಮ ಭೇಟಿ ಕೂಡ ಆಯಿತು. ಅಂದು ನನಗೆ ನಿನ್ನ ವರ್ತನೆ ನೋಡಿ ತುಂಬ ಖುಷಿಯಾಗಿತ್ತು. ನಿನ್ನ ಮೋಸದ ಕೊಳೆ ಮದುವೆಯಲ್ಲಿ ನಿನ್ನ ಅಟಿಟ್ಯೂಡ್ ನೋಡಿ ತೊಳೆದು ಹೋಗಿತ್ತು

ಸೋ ನಾನು ಅವತ್ತು ಒಂದು ನಿರ್ಧಾರಕ್ಕೆ ಬಂದೆ. ಕಳೆದ ವರ್ಷದಲ್ಲಿ ಅಂದರೆ ೨೦೧೧ರ ಏಪ್ರಿಲ್ನಿಂದ ಡಿಸೆಂಬರ್ ತನಕ ನನ್ನ - ನಿನ್ನ ಮಧ್ಯೆ ಇದ್ದ ನಿರ್ವಾತವನ್ನು ಇಲ್ಲವಾಗಿಸಿ ಮತ್ತೆ ನಮ್ಮ ಸಂಬಂಧವನ್ನು ಸರಿ ಪಡಿಸಿಕೊಳ್ಳಬೇಕು ಎಂಬುದೇ ನನ್ನ ನಿರ್ಧಾರವಾಗಿತ್ತು. ಅದೇ ರೀತಿ ನನ್ನ ಜೀವನದಲ್ಲಿ ಅವಧಿ ಬಹಳ ಮಹತ್ವಪೂರ್ಣವಾಗಿದ್ದು ಬಗ್ಗೆ ನಿನಗೆ ಗೊತ್ತೆ ಇರಲಿಲ್ಲ. ನಿನ್ನ ಜೊತೆ ಒಮ್ಮೆ ಬಗ್ಗೆ ಮಾತಾಡಬೇಕು ಎಂಬುದೇ ನನ್ನ ಆಸೆಯಾಗಿತ್ತು. ಆದರಂತೆ ವರ್ಷದ ಮೊದಲ ವಾರ ನಾನು ನಿನಗೆ ಕಾಲ್ ಮಾಡಿದ್ದೆ. ಮೆಸೇಜ್ ಮಾಡಿದ್ದೆ. ಆದರೆ ವಾರ ಬೇಡ ಮುಂದಿನ ವಾರ ಕಾಲ್ ಮಾಡು ಅಂದಿದ್ದೆ. ಅದರಂತೆ ನಾನು ಮಾಡಿದರೆ, ನಿನ್ನ ರೆಸ್ಪಾನ್ಸ್ ಇರಲಿಲ್ಲ. ನಂತರ ಒಂದಷ್ಟು ಬಾರಿ ಮಾಡಿದರೆ ಬೇರೆ ಸಮಯದಲ್ಲಿ ನಾನೇ ಮಾಡುವೆ ಎಂಬ ನಿನ್ನ ಉತ್ತರ, ಬೇರೆ ಸಮಯ ಬೇಗ ಬಾರದಿರುವುದನ್ನ ಕಂಡಾಗ ನಾನೇ ಮತ್ತೇ ಮತ್ತೇ ಮೆಸೆಜ್ ಮಾಡಿದರೆ ನಾನು ಪ್ರ್ಯಾಕ್ಟೀಸ್ ನಲ್ಲಿದ್ದೆ, ಅರ್ಜೆಂಟ್, ಏನೋ ಬರಿಲಿಕ್ಕೆ ಇದೆ, ಓದಲಿಕ್ಕೆ ಇದೆ ಎಂಬ ನಿನ್ನ ಸಿದ್ಧ ಉತ್ತರಗಳು. ಒಬ್ಬ ಹೊಣೆಗೇಡಿ ವ್ಯಕ್ತಿ ಮಾತ್ರ ಇಂತಹ ಉತ್ತರ ನೀಡಲು ಸಾಧ್ಯ ಎಂಬುದು ನನ್ನ ಭಾವನೆ. ಸರಿ ಹಾಗೇ ೪೦ ದಿನಗಳು ಉರುಳಿದ ಮೇಲೆ ನಿನಗೆ ನಾನು ಖಾರವಾಗಿಯೇ ಮೆಸೇಜ್ ಮಾಡಿದ್ದೆ. ನೀನು ಕೂಡ ಅಷ್ಟೆ ಖಾರವಾಗಿ ಪ್ರತಿಕ್ರಿಯಿಸಿದ್ದಿ.  

ಮತ್ತೆ, ಮೆಸೇಜ್ನಲ್ಲೇ ತೇಪೆ ಎಲ್ಲ ಹಾಕಿ ಒಂದು ಹಂತಕ್ಕೆ ನಿನಗೂ ಸಮಾಧಾನವಾಯಿತು. ನೀನು ಹಗಲು ಕಾಲ್ ಮಾಡಬೇಡ, ರಾತ್ರಿ ೯ರ ಬಳಿಕ ಮಾಡು ಎಂದು ಹೇಳಿದ್ದು, ನಾನು ಅದಕ್ಕೆ ಒಪ್ಪಿಕೊಂಡದ್ದು ಎಲ್ಲಾ ನಡೆಯಿತು. ಆಗನೌ ಅಲ್ ಈಸ್ ವೆಲ್ಅಂತ ಅಂದ್ಕೊಂಡೆ. ಮತ್ತೆ ನಮ್ಮ ಸಂಬಂಧ ಸುಗಮವಾಗುತ್ತದೆ ಎಂದು ಕೊಂಡೆ. ಆದರೆ ನಿನ್ನಲ್ಲಿದ್ದ ಕೆಟ್ಟತನದ ಕಾಳ ಸರ್ಪ ಮತ್ತೇ ಹುತ್ತದೊಳಗಿನಿಂದ ಬುಸ್ ಗುಟ್ಟಿದ್ದ. ಮತ್ತೇ ೨೦ ದಿನಗಳ ಕಾಲ ರಾತ್ರಿ ಗಂಟೆ ಬಳಿಕ ಕಾಲ್ ಮಾಡಿದ್ದರೆ ನೀನು ಅದನ್ನು ರಿಸೀವ್ ಮಾಡುತ್ತಲೇ ಇರಲಿಲ್ಲ. ಮೆಸೆಜ್ ಮಾಡಿದರೆ ಅದಕ್ಕೂ ರಿಪ್ಲೈ ಇಲ್ಲ

ವಾಸ್ತವವಾಗಿ ನನಗೂ ಯಾರಾದರೂ ಜಾಸ್ತಿ ಫೋನ್ ಮಾಡಿದ್ದೆ ಆದರೆ ಕಿರಿಕಿರಿ ಆಗುತ್ತದೆ. ಹಾಗಂತ ಹೇಳಿ ಫೋನ್ ರಿಸೀವ್ ಮಾಡದೆ ಅವರನ್ನು ಸತಾಯಿಸುವಷ್ಟು ನೀಚತನವನ್ನು ನಾನು ಮೈಗೂಡಿಸಿಕೊಂಡಿಲ್ಲ. ಒಂದು ವೇಳೆ ನನಗೆ ಆಗ ಕಾಲ್ ರಿಸೀವ್ ಮಾಡಲು ಆಗದಿದ್ದರು ಕೂಡ ಬಳಿಕ ಮತ್ತೇ ಅವರಿಗೆ ಕಾಲ್ ಮಾಡುವ ಅಥವಾ ಮೆಸೇಜ್ ಮಾಡುವ ಪ್ರಯತ್ನವನ್ನೂ ನಾನು ಮಾಡಿಯೇ ಮಾಡುತ್ತೇನೆ. ಇದು ನನ್ನ ಒಬ್ಬನ ಮಹಾತ್ಸಾಧನೆ ಮಾತ್ರವಲ್ಲ. ಬಹುತೇಕ ಎಲ್ಲರು ರೂಢಿಸಿಕೊಂಡಿರುವ, ಅನುಸರಿಸುತ್ತಿರುವ ಒಂದು ಸಣ್ಣ ಸತ್ಸಂಪ್ರದಾಯವಷ್ಟೆ. ಆದರೆ ನೀನು ಬರೋಬ್ಬರಿ ೬೦ ದಿನಗಳ ಕಾಲ ವಿನಾ ಕಾರಣ ಕಾಲ್ ರಿಸೀವ್ ಮಾಡದೆ, ಮಾತನಾಡದೇ ಸತಾಯಿಸಿ ಸಾಯಿಸ ಹೊರಟೇ ಅಲ್ಲಾ... ನಾನು ಏನು ತಪ್ಪು ಮಾಡಿದ್ದೆ? ನಿನಗೆ ಏನು ಅನ್ಯಾಯ ಮಾಡಿದ್ದೆ?. ಇಷ್ಟೆಲ್ಲವೂ ಆದ ಬಳಿಕವೂ ನಿನಗೆ ಅದು ಹೇಗೆ ಸೌಮ್ಯವಾಗಿ ನಾನು ಮೆಸೇಜ್ ಮಾಡಲಿ? ನೀನು ನನ್ನ ಮೆಸೇಜ್ಗಳಿಗೆ ರಿಪ್ಲೈ ಮಾಡಿದಾಗ, ಕಾಲ್ ರಿಸೀವ್ ಮಾಡುತ್ತಿದ್ದಾಗ ಯಾವತ್ತಾದರೂ ನಿನ್ನ ಮಾತನ್ನು ನಾನು ಮೀರಿದ್ದು ಉಂಟಾ? ಅದೇ ರೀತಿ ನಿನಗೂ ಯಾವುದೇ ತೊಂದರೆಯಾಗಬಾರದು ಎಂದು ಅನೇಕ ವಿಷಯಗಳಲ್ಲಿ ನಾನೇ ಸ್ವ ನಿಯಂತ್ರಣ ಹಾಕಿಕೊಂಡಿರಲಿಲ್ಲವೇ?

ಮಾರ್ಚ್ ಆರಂಭಕ್ಕೆ ನನ್ನ ತಾಳ್ಮೆಯ ಕಟ್ಟೆ ಒಡೆಯಿತು. ಘರ್ಷಣೆ ಜಾಸ್ತಿಯಾದಂತೆ ಒಂದು ಹಂತದ ಬಳಿಕ ಒಡೆದು ಒಳಗಿದ್ದದ್ದು ಹೊರ ಬರಬೇಕಾದದ್ದು ಪೃಕೃತಿಯ ನಿಯಮ ತಾನೇ

ನೋಡು ಮಾರಾಯ್ತಿ, ನಿನಗೆ ಗೊತ್ತಿರುವಂತೆ ನಾನು ಬರೆಯುವುದನ್ನು ಮತ್ತು ನಿನ್ನ ಜೊತೆ ಮಾತಾನಾಡುವುದನ್ನು ಮಾತ್ರ ತುಂಬಾ ತುಂಬಾ ಇಷ್ಟ ಪಡುತ್ತಿದ್ದೆ. ಈಗ ನೀನು ನನ್ನ ಜೊತೆ ಮಾತನಾಡುವುದಿಲ್ಲ ಎಂದು ಸ್ವ ನಿರ್ಬಂಧ ಹಾಕಿಕೊಂಡಿರುವ ಕಾರಣ ನಾನು ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ಅಂದರೆ ನನ್ನ ಮುಂದೆ ಈಗ ಉಳಿದಿರುವ ಏಕೈಕ ನಾನು ಇಷ್ಟ ಪಡುವ ಆಯ್ಕೆ ಎಂದರೆ ಬರವಣಿಗೆ. ಅದನ್ನು ನನ್ನಿಂದ ಯಾರು ಎಂದರೆ ಯಾರು, ನೀನು ಸಹಿತ ಇನ್ಯಾರು ಕೂಡ ಕಿತ್ತು ಕೊಳ್ಳಲಾರರು. ಬೇಕಾದರೆ ವೇದಿಕೆಯನ್ನು ನಿರಾಕರಿಸಬಹುದು ಅಷ್ಟೆ.

ಕಳೆದ ವರ್ಷಗಳಲ್ಲಿ ನನಗೆ ಯಾವುದು ಇಷ್ಟವೋ ಅದಕ್ಕೆ ಉಲ್ಟಾ ಅದದ್ದನ್ನೇ ಮಾಡುತ್ತ ಬಂದಿದ್ದಿ. ಆದರೆ ನಾನು ಅದರ ಬಗ್ಗೆ ಯಾವತ್ತೂ ಕ್ಯಾತೆ ತೆಗೆದಿರಲಿಲ್ಲ. ಅದು ನಿನ್ನ ಗುಣ. ಅದನ್ನು ನಾನು ತುಂಬು ಹೃದಯದಿಂದಲೇ ಗೌರವಿಸುತ್ತಿದ್ದೆ. ಆದರೆ ನೀನು ನನ್ನ ಜೊತೆ ಮಾತು ಬಿಟ್ಟಾಗ ನನಗೆ ಸುಮ್ಮನಿರಲಾಗಲಿಲ್ಲ. ಆದೂ ಕೂಡ ಯಾವುದೇ ಕಾರಣ ನೀಡದೆ, ಕಾರಣ ಕೊಡದೆ, ಕಾರಣವಿಲ್ಲದೆ ಮತ್ತು ಕೊನೆ ಪಕ್ಷ ಒಂದು ಗಲಾಟೆ ಕೂಡ ಮಾಡದೆ!

ನಮ್ಮ ಮಧ್ಯೆ ಇದ್ದದ್ದು ಸೋ ಕಾಲ್ಡ್ ಲವ್ ಅಲ್ಲ... ಹಾಗೇನೆ ಜಸ್ಟ್ ಫ್ರೇಂಡ್ ಶಿಪ್ ಕೂಡ ಅಲ್ಲ ಅನ್ನುವುದು ನಿನಗೆ ಗೊತ್ತೆ ಇದೆ. ಲವ್ ಮತ್ತು ಫ್ರೇಂಡ್ಶಿಪ್ ಮಧ್ಯೆ ನಮ್ಮ ಸಂಬಂಧ ಓಲಾಡುತ್ತಿತ್ತು ಅಥವಾ ಅದನ್ನೆಲ್ಲ ಮೀರಿ ಬೆಳೆದಿತ್ತು ಎಂಬುದು ನನ್ನ ನಂಬುಗೆ ಅಥವಾ ಲೆಕ್ಕಾಚಾರ.

ಸರಿ, ನೀನು ನನಗೆ ಕೊಡಬಹುದಾಗಿದ್ದ ಅತ್ಯಂತ ಬೆಲೆಬಾಳುವ ಬಹುಮಾನ ಏನೆಂದರೆ ನನ್ನ ಮಾತಿಗೆ ಕಿವಿ ಆಗುವಂತಾದ್ದು ಅನ್ನುವುದು ಕೂಡ ನಿನಗೆ ವೇದ್ಯ. ನನಗೆ ನಿನ್ನ ಜೊತೆ ಮಾತನಾಡುತ್ತಿರಬೇಕು ಅಷ್ಟೆ. ಹಾಗಂತ ಹೇಳಿ ೨೪* ಕಾಲ್ ಮಾಡಿ ನಿನಗೆ ಉಪದ್ರವ ಕೊಟ್ಟಿದ್ದೆ ಆಗಿದ್ದರೆ ಕೇಳು. ಪ್ರತಿ ಸಲ ನಿನಗೆ ಮೆಸೇಜ್ ಮಾಡಿ, ಕಾಲ್ ಮಾಡೋದಾ ಎಂದು ಕೇಳಿ ನೀನು ಅನುಮತಿ ನೀಡಿದ್ದೆ ಆದರೆ ಕಾಲ್ ಮಾಡುತ್ತಿದ್ದೆ. ಅದೇ ನೀನು ತಲೆ ನೋವು, ಹೊಟ್ಟೆ ನೋವು, ಮನೆಯಲ್ಲಿದ್ದೇನೆ, ಅವರಿದ್ದಾರೆ, ಇವರಿದ್ದಾರೆ, ಬ್ಯುಸಿ ಇದ್ದೇನೆ ಎಂದೆಲ್ಲ ಹೇಳಿದಾಗ ನಾನು ನಿನಗೆ ಒತ್ತಾಯ ಪಡಿಸಿದ್ದು ಕಡಿಮೆ ಅನ್ನುವುದು ಒಂಚೂರು ಮುಕ್ತ ಮನಸ್ಸಿನಿಂದ (ಅದು ನಿನಗೆ ಇರುವುದೇ ಡೌಟು) ನೀನು ಯೋಚಿಸಿದ್ದೇ ಆದರೆ ನಿನಗೆ ಹೊಳೆಯಲೂ ಬಹುದು. ಆದರೂ ನೀನು ಸುಮಾರು ೯೦ ದಿನ ನನ್ನ ಕಾಲ್ ರಿಸೀವ್ ಮಾಡಲೇ ಇಲ್ಲ. ಏಕೆ? ನಿನ್ನ ಅಹಂಕಾರಕ್ಕೆ ನನ್ನ ಧಿಕ್ಕಾರ.

ಇವತ್ತಿಗೂ ನಿನ್ನ ಸಣ್ಣತನಗಳ ಬಗ್ಗೆ ನನ್ನ ಯಾವುದೇ ಅಕ್ಷೇಪಣೆಗಳು ಇಲ್ಲ. ಇದನ್ನು ನಾನು ನಿನ್ನ ಜೊತೆ ಮಾತನಾಡುತ್ತಿರುವಾಗಲೇ ಹೇಳುತ್ತಿದ್ದೆ ಕೂಡ. ನನಗೆ ಸರಿ ಕಾಣದ್ದನ್ನು ನಿನಗೆ ಹೇಳುತ್ತಿದ್ದೆ ಅಷ್ಟೆ. ಆದರೆ ನನ್ನ ಕಾಲ್ ರಿಸೀವ್ ಮಾಡದ ನಿನ್ನ ಕುಬ್ಜತನವನ್ನು ನನಗೆ ಸ್ವೀಕರಿಸಲೇ ಆಗುತ್ತಿಲ್ಲ ಮಾರಾಯ್ತಿ.

ಪತ್ರ ಓದಿದ ತಕ್ಷಣ ನೀನು ನನಗೆ ಕಾಲ್ ಮಾಡುತ್ತೀಯಾ, ಮೆಸೇಜ್ ಮಾಡುತ್ತಿಯಾ, ನಮ್ಮ ಸಂಬಂಧ ಮತ್ತೆ ಸರಿ ಆಗುತ್ತದೆ ಎಂಬ ಯಾವುದೆ ಭ್ರಮೆ ನನ್ನಲಿಲ್ಲ ಎಂಬುದನ್ನು ನಾನು ಇಲ್ಲೇ ಸ್ಪಷ್ಟ ಪಡಿಸುತ್ತೇನೆ. ಇನ್ನು ನೀನು ಬೇರೆಲೆಕ್ಕಾಚಾರಹಾಕುವ ಶ್ರಮ ತೆಗೆದುಕೊಳ್ಳಬೇಡ

ಪತ್ರ ಓದಿ ನಿನಗೆ ಬೇಸರ, ದುಃಖ, ಖೇದ, ವಿಷಾದ, ನಿರಾಶೆ ಮುಂತಾದದ್ದು ಆದದ್ದೆ ಆದರೆ ನಿನಗೆ ಅದು ಎಷ್ಟು ಆಗುತ್ತೋ ಅದಕ್ಕಿಂತ ಒಂದು ಹಿಡಿ ಹೆಚ್ಚು ನನಗೆ ಆಗುತ್ತದೆ.

ಈಗ ನಿನ್ನ ನೆನಪಾದಾಗ ನನ್ನ ಮುಷ್ಠಿ ಬಿಗಿಯಾಗುತ್ತದೆ. ಆದರೆ ನಿನಗೆ ಹೊಡೆಯಲಲ್ಲ, ನನಗೆ ನಾನೇ ಹೊಡೆದುಕೊಳ್ಳಲು!
ನಿನ್ನೊಂದಿಗೆ ಮಾತನಾಡಬೇಕು ಎಂದು ಅನಿಸುವುದನ್ನು ನನ್ನ ದೌರ್ಬಲ್ಯ ಎಂದು ಭಾವಿಸಿ ನೀನು ನನ್ನ ಮೇಲೆ ಸಾಕಷ್ಟು ದೌರ್ಜನ್ಯ ಎಸಗಿದ್ದಿ. ಇನ್ನೊಬ್ಬರ ದೌರ್ಬಲ್ಯವನ್ನು ಬಳಸಿ ಅವರನ್ನು ಶೋಷಣೆ ಮಾಡುವುದು ನನ್ನ ಪ್ರಕಾರ ನೀಚತನ. ನೋಡು, ನನಗೂ ಕೆಲವರ ಜೊತೆ ಮಾತನಾಡಲು ಇಷ್ಟವಾಗುದುದಿಲ್ಲ, ಕಿರಿಕಿರಿ ಆಗುತ್ತದೆ ಆದರೆ ಅವರು ನನ್ನ ಜೊತೆ ಮಾತನಾಡ ಬಯಸಿದಾಗ ನಿನ್ನ ರೀತಿಯಲ್ಲಿ ಅವರನ್ನು ಹೀಯಾಳಿಸುವುದಿಲ್ಲ. ನಿನ್ನ ವರ್ತನೆ ಯಾವ ರೀತಿ ಇತ್ತು ಎಂದರೆ ನನ್ನನ್ನು ಹಾಳು ಮಾಡಲು ನನ್ನ ಶತ್ರುಗಳೇ ನಿನ್ನನ್ನು ಕಳುಹಿಸಿದಂತೆ ಇದೆ

ಸಂಬಂಧಗಳು ಸಾಯೋದಿಲ್ಲ, ಕೊಲೆ ಮಾಡಲ್ಪಡುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅದು ನಿಜ, ನನ್ನ ನಿನ್ನ ಸಂಬಂಧ ಖಂಡಿತವಾಗಿಯೂ ಸಾಯುವಂತದ್ದಾಗಿರಲಿಲ್ಲ. ಆದು ಕೊಲೆಯಾಗಲ್ಪಟ್ಟಿತ್ತು. ಕೊಲೆ ಮಾಡಲ್ಪಟ್ಟಿತ್ತು. ಅದರ ಕೊಲೆಗಡುಕಿ ನೀನೆ... ನೀನೆ... ನೀನೆ... ದಯಮಾಡಿ ನನ್ನ ಮೇಲೆ ನೀನು ದೋಷಾರೋಪಣೆ ಮಾಡಬೇಡ. ಜಗತ್ತಿನ ಯಾವ ಆಪಾದನೆಯನ್ನು ಬೇಕಾದರೂ ನಾನು ಎದುರಿಸಬಲ್ಲೆ. ಆದರೆ ನಮ್ಮ ಮಧ್ಯೆ ಇದ್ದ ನಿಷ್ಕಪಟ, ಅಮೂಲ್ಯ, ಸಾವಯವ, ಸಹಜ, ಬೆಲಕಟ್ಟಲಾಗದ ಒಂದು ಸಂಬಂಧವನ್ನು ಕೊಂದ ಆಪಾದನೆಯನ್ನಲ್ಲ. ಪಾಪ ನಿನಗೆಯೇ ಇರಲಿ, ನಿನಗೆಯೇ ಸೇರಲಿ, ನೀನು ಏಳು ಜನ್ಮವೆತ್ತಿ ಬಂದರೂ ನಿನ್ನನ್ನೇ ಸುತ್ತಿಕೊಳ್ಳಲಿ.

ನಿನಗೆ ಗೊತ್ತೋ ಇಲ್ಲವೋ ನನಗೆ ಗೊತ್ತಿಲ್ಲ... ಇಳಿ ಕತ್ತಲಲ್ಲಿ, ಮೋಡದ ಕರಿ ನೆರಳಲ್ಲಿ, ಮೂಲೆಯಲ್ಲಿ ಹುಟ್ಟಿ ಕೊಂಡ ಸಂಬಂಧವದು. ಇಬ್ಬರು ಹುಟ್ಟಿಸಿದ್ದ ಸಂಬಂಧದ ಲಾಲನೆ, ಪಾಲನೆ, ಪೋಷಣೆ ನೀನು ಮಾಡಲೇ ಇಲ್ಲ. ಅದು ನನ್ನ ಜವಾಬ್ದಾರಿಯಾಯಿತು. ಚಿಂತೆಯಿಲ್ಲದೆ, ವ್ಯಥೆಪಡದೆ ನಾನದನ್ನು ಸಲಹಿದ್ದೆ. ನೀನು ಏನು ಮಾಡಲೇ ಇಲ್ಲ ಎಂದು ನಾನು ಹೇಳಿದ್ದೆ ಆದರೆ ಅದು ಘೋರ ಅಪರಾಧವಾಗುತ್ತದೆ. ಆದರೆ ಮಗು ಸಂಕಷ್ಟಕ್ಕೆ ಸಿಕ್ಕಾಗ ನಾನು ಅದನ್ನು ಕೈ ಹಿಡಿದು ನಡೆಸಿ ಅದು ಹೇಗೋ ನಿನ್ನನ್ನು ಸಮಾಧಾನಿಸಿ ನಮ್ಮ ಮಧ್ಯೆ ತಂದು ಅದನ್ನು ಬಿಡುತ್ತಿದ್ದೆ. ಬಳಿಕ ಅದು ನಮ್ಮ ಮಧ್ಯೆ ತಿಳಿ ಗಾಳಿ, ಅಲೆ ನೀರಿನಂತೆ ಚಿಮ್ಮುತ್ತಿತ್ತು, ಪುಟಿದೇಳುತ್ತಿತ್ತು. ಅಂತಹ ಸಂಬಂಧವೊಂದನ್ನು ಯಾವ ರಾಕ್ಷಸ ಕೂಡ ಕಳೆದುಕೊಳ್ಳಲಾರ. ಆದರೆ ನೀನು ಮಾತ್ರ ರಾಕ್ಷಸರಿಗೆಯೇ ಸಡ್ಡು ಹೊಡೆದು ಬಿಟ್ಟೆ ಮಾರಾಯ್ತಿ

ನಾನು ನಿನ್ನಲ್ಲಿರುವ ಕೆಟ್ಟತನದ ಬಗ್ಗೆ ಮಾತ್ರ ಏಕೆ ಬರೆದೆ? ನನ್ನಲ್ಲಿ ಒಂದೇ ಒಂದು ಒಳ್ಳೆಯತನವಿಲ್ಲವೇ ಎಂದು ನೀನು ಕೇಳಿ ಕೊಳ್ಳುವ ಸಾಧ್ಯತೆಯಿದೆ. ನಿನ್ನಲ್ಲಿಭರಪೂರಒಳ್ಳೆಯತನಗಳೂ ಇವೆ ಅನ್ನುವುದು ಅಲ್ಲಲ್ಲಿ ತೋರಿಕೆಯಾಗಿದೆ ಅಥವಾ ಸೋರಿಕೆಯಾಗಿದೆ. ನಿನಗೆ ನೆನಪಿರಬಹುದು, ೨೦೦೩ರ ವರ್ಲ್ಡ್ ಕಪ್ ಫೈನಲ್ ಪಂದ್ಯ. ಇಡೀ ಸರಣಿಯಲ್ಲಿ ಸಚಿನ್ ಅದ್ಭುತ ಆಟ ಆಡಿದ್ದರೂ ಕೂಡ ಫೈನಲ್ನಲ್ಲಿ ವಿಫಲವಾದದ್ದೆ ನಮಗೆ ಹೆಚ್ಚು ನೆನಪಿರುವುದು. ಅದೇ ರೀತಿ ೧೯೯೭ರಲ್ಲಿ ಢಾಕದಲ್ಲಿ ನಡೆದ ಇಂಡಿಪೇಡೆನ್ಸ್ ಕಪ್ನಲ್ಲಿನ ಪಾಕ್ ವಿರುದ್ಧದ ಪಂದ್ಯದಲ್ಲಿ ಹೃಷಿಕೇಶ್ ಕಾನಿಟ್ಕರ್ ಹೊಡೆದ ಏಕೈಕ ಬೌಂಡರಿ ನಮ್ಮ ಮನಸ್ಸಿನಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ. ಉಳಿದಂತೆ ಆತ ವಿಫಲ ಕ್ರಿಕೆಟಿಗನಾದರೂ ಕೂಡ! ಅಂದರೆ ಇದರರ್ಥ ಕೊನೆಗೆ ಯಾವುದೇ ವಿಷಯದ ಪ್ರಕ್ರಿಯೆಗಳೂ ನಮ್ಮಲ್ಲಿ ನೆನಪುಳಿಯುವುದಿಲ್ಲ, ಅದರ ಫಲಿತಾಂಶ ಆಥವಾ ಕೊನೆಗೆ ಏನು ಉಳಿದ್ದಿತ್ತು ಎನ್ನುವುದೇ ನಮ್ಮ ನೆನಪಲ್ಲಿ ಉಳಿಯುವುದು.

ಅಂದರೆ ನಮ್ಮ ಸುಮಧುರ ಸಂಬಂಧದ ಆರು ವರ್ಷಗಳು ಮರೆಯಾಗಿ ಈಗೀನ ನಮ್ಮಿಬ್ಬರ ರಾಕ್ಷಸಿತನವೇ ನನ್ನ ಮತ್ತು ನಿನ್ನ ಮನಸ್ಸಿನಲ್ಲಿ ಕೊಟ್ಟ ಕೊನೆಯದಾಗಿ ಉಳಿಯುತ್ತದೆ. ನೀನು ಇದನ್ನು ಬಯಸುತ್ತೀಯಾ ಹೇಳು?

ನೀನು ಮೂರು ತಿಂಗಳ ಅವಧಿಯಲ್ಲಿ ಒಂದೆ ಒಂದು ಸಲ ಕಾಲ್ ಮಾಡಿ ಮಾತನಾಡುತ್ತಿದ್ದರು ನನ್ನ ನಿನ್ನ ಸಂಬಂಧ ಇಂದಿಗೂ ಜೀವ ತಾಳಿಯೇ ನಿಂತಿರುತ್ತಿತ್ತು. ಆದರೆ ನಿನ್ನಲ್ಲಿನ ದುಷ್ಟ ಹಠ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹಾಗಂತ ಹೇಳಿ ನನ್ನ-ನಿನ್ನದು ಎಲ್ಲವೂ ನೀನು ಕಾಲ್ ರಿಸೀವ್ ಮಾಡದೇ ಇದ್ದ ಕ್ಷಣಕ್ಕೆಯೇ ಮುಗಿಯುತ್ತದೆ ಎಂಬ ಭ್ರಮೆಯಲ್ಲಿ ನೀನು ಇರಬೇಡ. ಒಂದು ನೆನಪಿಡು ಒಳ್ಳೆಯತನಕ್ಕಿಂತ ಕೆಟ್ಟತನಕ್ಕೆ ಬಾಳಿಕೆ ಹೆಚ್ಚು.

ನೀನು ಒಮ್ಮೆ ನನ್ನ ಜೊತೆ ಮಾತನಾಡಿದ್ದೇ ಆದರೆ ನಮ್ಮ ನಡುವಿರುವ ಎಲ್ಲ ಗೊಂದಲಗಳು ಇಲ್ಲವಾಗುತ್ತದೆ ಎಂಬ ಅರಿವು ನಿನಗಿದೆ. ನಾನು ನೀನು ಅದೇಷ್ಟೆ ಗಲಾಟೆ ಮಾಡಿಕೊಂಡರು, ಕಿತ್ತಾಡಿಕೊಂಡರು, ಕಿಚಾಯಿಸಿಕೊಂಡರು, ಸರಸವಾಡಿದರೂ, ಸಲ್ಲಾಪ ಮಾಡಿದರೂ ಕೂಡ ನಮ್ಮನ್ನು ಅದು ಬೇರೆ ಮಾಡದು ಅನ್ನುವುದು ಕೂಡ ನಿನಗೆ ಗೊತ್ತಿದೆ. ಅದಕ್ಕಾಗಿ ನೀನು ರೀತಿಯ ಮೌನ ಧಾರಣೆ ಮಾಡುವ ಧೋರಣೆ ಅನುಸರಿಸಿ ನನ್ನನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿರಲೂಬಹುದು, ನಿನ್ನನ್ನು ನಂಬಲಾಗುವುದಿಲ್ಲ

ನೋಡು, ವ್ಯಾಖ್ಯೆಯ ಚಿಪ್ಪಿನೊಳಗೆ ಸಿಳುಕದ, ನಿಲುಕದ ಅದ್ಭುತ ಸಂಬಂಧ ನಮ್ಮದು. ಯಾವುದೋ ಕಹಿ ಘಳಿಗೆಯಲ್ಲಿ ಏನೇನೋ ನಮ್ಮ ನಡುವೆ ನಡೆದಿರಬಹುದು. ಆದರೆ ಅದು ಮುಂದುವರಿಯಬಾರದು ಅನ್ನುವುದು ನನ್ನ ಕಳಕಳಿ. ನನ್ನದು ನಿನ್ನದು ಪ್ರೇಮ ಸಂಬಂಧವಲ್ಲ, ಅದು ಮದುವೆಯಲ್ಲಿ ಕೊನೆಯಾಗುವಂತದ್ದೂ ಕೂಡ ಅಲ್ಲ ಅನ್ನುವುದು ಇನ್ನೂ ಮುಖ್ಯವಾದ ಸಂಗತಿ

ನೀನಿಲ್ಲದ ನನ್ನ ಜೀವನ ಕೂಡ ಅದ್ಭುತವಾಗಿಯೇ ಇದೆ, ಇರುತ್ತದೆ. ಅದೇ ರೀತಿ ನಾನಿಲ್ಲದ ನಿನ್ನ ಜೀವನ ಕೂಡ ಹಾಗೇಯೆ ಇರಬಹುದು ಮತ್ತು ಇರಲಿ. ಅದ್ದರಿಂದ ನಮಗಿಬ್ಬರಿಗೂ ಜೀವನದ ಸುಂದರತೆಯನ್ನು ಅಸ್ವಾದಿಸಲು ಪರಸ್ಪರರ ಯಾವುದೇ ಅನಿವಾರ್ಯತೆ ಹಾಗೂ ಅವಶ್ಯಕತೆ ಇಲ್ಲ. ಆದರೆ ನಮ್ಮ ಸಂಬಂಧ ಯಾವುದೋ ಅನಿವಾರ್ಯತೆ ಅಥವಾ ಅವಶ್ಯಕತೆಗೋ ಕಟ್ಟು ಬಿದ್ದು ಬೆಳೆದದ್ದು ಅಲ್ಲ ತಾನೇ?

ಈಗ ಚೆಂಡು ನಿನ್ನ ಅಂಕಣದಲ್ಲಿ ಇದೆ. ಹೇಗೆ ಬೇಕಾದರೂ ನೀನು ಆಡಬಹುದು. ಆದರೆ ಚೆಂಡನ್ನು ಮೈದಾನದಾಚೆ ತಳ್ಳಿ ಇನ್ನು ಚೆಂಡೆ ಇಲ್ಲ, ಆಡಲಾಗದು ಎಂದು ನೀನು ಭಾವಿಸಿದ್ದೆ ಆದರೆ ನಿನ್ನಷ್ಟು ಎಡಬಿಡಂಗಿ, ಮೂರ್ಖ, ಪೆದ್ದ, ಅಹಂಕಾರಿ ಮನುಷ್ಯರು ಬೇರೆ ಯಾರೂ ಕೂಡ ಇರಲಾರರು. ಅದ್ದರಿಂದ ಮೈದಾನದಾಚೆ ಚೆಂಡು ಕಳಿಸುವ ಪ್ರಯತ್ನವನ್ನು ಮಾಡದೆ ನಮ್ಮ ಸಂಬಂಧದ ಆಟವನ್ನು ಮುಂದುವರಿಸುವ ಪ್ರಯತ್ನ ಮಾಡೋಣ. ಪ್ರತಿ ಅಟದಲ್ಲೂ ಸೋಲು, ಗೆಲುವು ಇದ್ದದ್ದೆ. ಪಂದ್ಯ ಮುಕ್ತಾಯಗೊಳ್ಳಬೇಕಾದದ್ದೆ. ಅದರೆ ಯಾರು ಗೆಲ್ಲುತ್ತಾರೆ, ಯಾವಾಗ ಪಂದ್ಯ ಮುಗಿಯುತ್ತದೆ ಅನ್ನುವುದನ್ನು ವಿಧಿಯೇ ನಿರ್ಧರಿಸಲಿ ಅನ್ನುವುದು ನನ್ನ ಆಸೆ, ನಿನ್ನದು?

ನೋಡು, ಕೆಟ್ಟದ್ದು ಮಾಡಬೇಕು, ಕೆಟ್ಟದಾಗಲಿ ಅನ್ನುವ ಯಾವ ಆಶಯವು ಒಂದು ಒಳ್ಳೆಯ ಸಂಬಂಧದ ಕೊನೆಯಲ್ಲಿ ಇರದು. ಹಾಗೆಯೇ ಒಳ್ಳೆಯದಾಗಲಿ ಅನ್ನುವ ಆಶಯವು ಕೂಡ ಒಳ್ಳೆ ಸಂಬಂಧದ ಕೆಟ್ಟ ಮುಕ್ತಾಯದಾಚೆ ಇರದು. ತಪ್ಪುಗಳು ಇಬ್ಬರಿಂದಲೂ ನಡೆದಿದೆ, ಆದರೆ ತಪ್ಪುಗಳೇ ಜೀವನವನ್ನು ಸಾಗಿಸದು ಮತ್ತು ತಪ್ಪುಗಳ ಸಮರ್ಥನೆಯೇ ನಮ್ಮ ಜೀವನವಾಗಬಾರದು ಅನ್ನುವುದು ನನ್ನ ಬಯಕೆ

ಪತ್ರ ಓದಿದೊಡನೆ ನನ್ನ ಜೊತೆ ಮಾತನಾಡು, ಮಾತನಾಡುತ್ತೀಯಾ ಅನ್ನುವುದು ನನ್ನ ನಂಬಿಕೆ. ನಂಬಿಕೆ ಕುರುಡಾಗದಿರಲಿ, ಕುರುಡು ಪ್ರೀತಿ ರೀತಿ! ಸರಿ, ಮುಗಿಸುತ್ತೇನೆ, ಓದಿ ಫೋನ್ ಮಾಡಲು ಮರೆಯದಿರು ಸಮಸ್ಯೆಯ ಉಲ್ಪಣಕ್ಕೆ ಅವಕಾಶ ನೀಡದಿರು.                                                                                                                                                                                                                                                                                                                         ಇಂತೀ...

Friday, June 22, 2012

ತುಂಬಿದೆ ಎಪ್ಪತ್ತು, ನಮಗೆಲ್ಲಿದೆ ನೆನಪಿಸಿಕೊಳ್ಳಲು ಪುರುಸೊತ್ತು?

ಭಾರತವನ್ನು ಅವರಿಸಿಕೊಂಡಿದ್ದ ಬ್ರಿಟೀಷ್ ಬಂದಣಿಕೆಯ ಬಂಧವನ್ನು ಕಡಿದು ಹಾಕಲು ಹೋರಾಡಿದ ಶಕ್ತಿಗಳು ಒಂದೇ, ಎರಡೇ. ಆದರೆ ಕೆಲವೇ ಕೆಲವು ಶಕ್ತಿಗಳಿಗೆ, ವ್ಯಕ್ತಿಗಳಿಗೆ ಇತಿಹಾಸದ ಪುಟದಲ್ಲಿ ದಾಖಲಾಗಿ, ನಿತ್ಯ ಆರಾಧನೆಯನ್ನು ಪಡೆಯುವ ಭಾಗ್ಯ. ಆದರೆ ಇತಿಹಾಸ ಪುಟ ಸೇರುವ, ಅಲ್ಲಿ ಮೆರೆಯುವ ಆಸೆಗಳನ್ನು ಇಟ್ಟುಕೊಳ್ಳದೆ ತಮ್ಮ ಚಟುವಟಿಕೆಯಿಂದಲೇ ಇತಿಹಾಸಕ್ಕೆ ಹೊಸ ದಿಸೆ ನೀಡಿದ, ಹೊಸ ಇತಿಹಾಸವನ್ನೆ ಬರೆದ ಮಹಾನ್ ಶಕ್ತಿಗಳಲ್ಲಿ ಒಂದು ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ)!
ಟೈಟಾನಿಕ್ ಮುಳುಗಿ ೧೦೦ ವರ್ಷವಾದ ನೋವಿನಲ್ಲಿ ಮುಳುಗಿರುವ ನಮಗೆ ಐಎನ್‌ಎಯ ಸ್ಥಾಪನೆಯಾಗಿ ೭೦ ವರ್ಷವಾದ ಸಂಭ್ರಮವನ್ನು ಆಚರಿಸಲು ಪುರುಸೊತ್ತೆಲ್ಲಿ? ಆ ನೆನಪೆಲ್ಲಿ? ಹೌದು, ಈ ವರ್ಷಕ್ಕೆ ಐಎನ್‌ಎಯ ವೀರ ಸೈನಿಕರ ಹೆಜ್ಜೆಗೆ ಚರಿತ್ರೆಯ ಧೂಳಿನ ಕಣಗಳ ಲೇಪನವಾಗಿ ೭೦ ತುಂಬಲಿದೆ. ನಮ್ಮಲ್ಲಿ ಬಹುತೇಕ ಮಂದಿ ಸುಭಾಷ್ ಚಂದ್ರ ಭೋಸ್ ಐಎನ್‌ಎಯನ್ನು ಕಟ್ಟಿದ್ದರು ಎಂದೇ ಭಾವಿಸಿದ್ದಾರೆ. ಆದರೆ ಐಎನ್‌ಎಯನ್ನು ಕಟ್ಟಿದ್ದು ಸುಭಾಷ್ ಅಲ್ಲ. ಸುಭಾಷ್ ಐಎನ್‌ಎಯನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಪ್ರಥಮ ವಿಶ್ವ ಯುದ್ಧ (೧೯೧೪-೧೮) ನಡೆದ ಸಂದರ್ಭದಲ್ಲಿ ಭಾರತೀಯ ಸೈನಿಕರು ಬ್ರಿಟೀಷರ ಪರವಾಗಿ ಹೋರಾಡಿದ್ದರು. ಆದರೆ ಭಾರತೀಯ ಸೈನಿಕರಿಗೆ ಅವರ ಯೋಗ್ಯತೆಗೆ ತಕ್ಕ ಸ್ಥಾನಮಾನವನ್ನು ಬ್ರಿಟೀಷರು ಎಂದೂ ನೀಡಲೇ ಇಲ್ಲ. ಮೊದಲ ವಿಶ್ವ ಯುದ್ಧದಲ್ಲಿ ಅವರ ಪರವಾಗಿ ಹೋರಾಡಿ ಮಡಿದ ೯೦,೦೦೦ ಸೈನಿಕರ ಸ್ಮರಣಾರ್ಥ ದೆಹಲಿಯಲ್ಲಿ ಇಂಡಿಯಾ ಗೇಟ್ ಕಟ್ಟಿದೊಡನೆ ಅವರು ಭಾರತೀಯ ಸೈನಿಕರಿಗೆ ಮಾಡಿದ ಅಪಮಾನದ ಪಾಪವೇನು ತೊಳೆದುಹೋಗಲಾರದು.
ಮೊದಲ ವಿಶ್ವ ಯುದ್ಧದ ಆರಂಭದವರೆಗೆ ಭಾರತೀಯ ಸೈನಿಕನೊಬ್ಬ ಅದೇಷ್ಟೆ ಸಾಧನೆ ಮಾಡಿದರೂ ಕೂಡ ಹೆಚ್ಚೆಂದರೆ ಸುಬೇದರ್ ಅಥವಾ ಸುಬೇದರ್ ಮೇಜರ್ ಆಗಬಹುದಿತ್ತು ಅಷ್ಟೆ. ಆದರೆ ಆ ಹುದ್ದೆಗೊಂದು ಸುಂದರ ಹೆಸರು ಜೂನಿಯರ್ ಕಮೀಷನ್ಡ್ ಅಫೀಸರ್ ಎಂದು ದಯಪಾಲಿಸಿದ್ದರು. ಆದರೆ ಮೊದಲ ವಿಶ್ವ ಯುದ್ಧದ ಸಂದರ್ಭದಲ್ಲಿ ಭಾರತೀಯರಲ್ಲಿ ಕೆಲವರು ಕ್ಯಾಪ್ಟನ್ ಹುದ್ದೆಗೆ ಏರಿದ್ದರು.

ಆದರೆ ೧೯೨೦ರ ಬಳಿಕ ಭಾರತೀಯರಿಗೆ ಕೂಡ ಕಿಂಗ್ಸ್ ಕಮೀಷನ್ ನೀಡುವ ಉದಾರತೆಯನ್ನು ಬ್ರಿಟೀಷ್ ಮನಸ್ಸುಗಳು ಮಾಡಿದವು. ಇಂತಹ ಅವಕಾಶವನ್ನು ಪಡೆದವರಲ್ಲಿ ಮುಂದೆ ದೇಶದ ಸೇನಾ ಮುಖ್ಯಸ್ಥರಾದ ಕೆ ಎಂ ಕಾರಿಯಪ್ಪ ಅವರು ಒಬ್ಬರು. ಆದರೆ ೧೯೩೯ರಲ್ಲಿ ದ್ವಿತೀಯ ವಿಶ್ವ ಮಹಾಯುದ್ಧ ಶುರುವಾಗುವ ಒಪ್ಪೊತ್ತಿಗೆ ಭಾರತೀಯ ಸೈನ್ಯದಲ್ಲಿ ಭಾರತೀಯನೊಬ್ಬ ಹೊಂದಿದ್ದ ಅತ್ಯುನ್ನತ ಹುದ್ದೆ ಎಂದರೆ ಅದು ಮೇಜರ್ ಹುದ್ದೆ ಅಷ್ಟೆ.

ಆದರೆ ೧೯೪೧ರಲ್ಲಿ ಶುರುವಾದ ಮಲಯನ್ ಯುದ್ಧ ಐಎನ್‌ಎಯ ಪರಿಕಲ್ಪನೆ ಅಂಕುರಿಸಲು ಕಾರಣವಾಯಿತು. ಬ್ರಿಟೀಷ್ ಅಧಿಕಾರಿಗಳಿಂದ ಸತತವಾಗಿ ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ತಿನ್ನುತ್ತಿದ್ದ ಮತ್ತು ಜನಾಂಗೀಯ ನಿಂದನೆಯಿಂದ ರೋಸಿ ಹೋಗಿದ್ದ ಭಾರತೀಯರು ಅವರಿಗೆ ಸೂಕ್ತ ಏದಿರೇಟು ನೀಡುವ ಒಂದು ಅವಕಾಶ ಮತ್ತು ಸಂದರ್ಭಕ್ಕೊಸ್ಕರ ಕಾಯುತ್ತಿದ್ದರು. ಸ್ವಾತಂತ್ರ್ಯ ಭಾರತದ ಸೇನಾ ಮುಖ್ಯಸ್ಥರಾಗಿದ್ದ ಕೆ ಎಸ್ ತಿಮ್ಮಯ್ಯ, ಎಸ್ ಎಮ್ ಶ್ರೀನಾಗೇಶ್ ಮತ್ತು ಪಾಕಿಸ್ಥಾನದ ಸೇನಾ ಮುಖ್ಯಸ್ಥರಾಗಿದ್ದ ಎಮ್ ಐ ಮಜೀದ್ ಮುಂತಾದ ಉನ್ನತ ಅಧಿಕಾರಿಗಳೇ ಬ್ರಿಟೀಷರಿಂದ ಅವಹೇಳನಕ್ಕೀಡಾಗಿದ್ದರು ಎಂದಾದ ಮೇಲೆ ಉಳಿದ ಸಾಮಾನ್ಯ ಸೈನಿಕರ ಪಾಡು ಏನಾಗಿದ್ದಿರಬಹುದು?

ಸೂರ್ಯ ಮುಳುಗದ ನಾಡಿನ ಎಲ್ಲ ಲೆಕ್ಕಾಚಾರಗಳು ಬೋರಾಲಾಗಿ ಬಿದ್ದು ಸಿಂಗಾಪುರ ೧೯೪೨ರ ಫೆಬ್ರುವರಿ ೧೫ರಂದು ಜಪಾನ್‌ನ ವಶವಾಯಿತು. ಅದೇ ದಿನ ಬ್ರಿಟೀಷರು ಜಪಾನ್‌ನ ಮುಂದೆ ಮಂಡಿಯೂರಿದ್ದರು.

ಆದರೆ ಈ ಯುದ್ಧದ ಸಂದರ್ಭದಲ್ಲಿ ಆಯಕಟ್ಟಿನ ಪ್ರದೇಶವಾಗಿದ್ದ ಜಿತ್ರಾ ರಕ್ಷಣಾ ರೇಖೆ (ಈಗ ಮಲೇಷ್ಯಾದ ಭಾಗವಾಗಿದೆ) ಪ್ರದೇಶದಲ್ಲಿ ಬ್ರಿಟೀಷ್‌ರು ಜಪಾನಿಯರನ್ನು ಎದುರಿಸದಿದ್ದದ್ದು ಅವರ ಸೋಲಿನ ಮುನ್ನುಡಿ ಯಾಗಿತ್ತು. ಬ್ರಿಟೀಷರು ಕೊನೆ ಕ್ಷಣದಲ್ಲಿ ಅಲ್ಲಿ ಕಾವಲು ಕಾಯುತ್ತಿದ್ದ ೧/೧೪ ಪಂಜಾಬ್ ರೆಜಿಮೆಂಟ್‌ಗೆ ಅಲ್ಲಿಂದ ಮುಂದೆ ಹೋಗುವಂತೆ ಆದೇಶಿಸಿದ್ದರು. ಅದೇ ರೆಜಿಮೆಂಟ್‌ನಲ್ಲಿ ಐಎನ್‌ಎಯ ರೂವಾರಿಗಳಾದ ಕ್ಯಾಪ್ಟನ್ ಮೋಹನ್ ಸಿಂಗ್ ಮತ್ತು ಮೊಹಮ್ಮದ್ ಅಕ್ರಮ್ ಖಾನ್ ಇದ್ದರು!
ಜಪಾನ್‌ನ ತೀವೃ ದಾಳಿಗೆ ಸುಲಭ ತುತ್ತಾಗುವುದರಿಂದ ಪಾರಾಗಲು ಮೋಹನ್ ಸಿಂಗ್ ಮತ್ತು ಖಾನ್ ಇಬ್ಬರು ರಸ್ತೆ ಬಿಟ್ಟು ಅಲ್ಲೇ ಇದ್ದ ಕಾಡೊಳಗೆ ನುಗ್ಗಿದ್ದರು. ಇದೇ ಸಂದರ್ಭದಲ್ಲಿ ಜಪಾನ್ ಸೈನ್ಯದೊಡನೆ ಕೆಲ ಸಿಖ್ಖರು ಬರುವುದು ಅವರಿಗೆ ಕಂಡಿತ್ತು. ಆ ಸಿಖ್ಖರ ನಾಯಕನಾಗಿದ್ದ ಪ್ರೀತಂ ಸಿಂಗ್. ಆತ ಮೋಹನ್ ಸಿಂಗ್‌ಗೆ ಜಪಾನಿಯರ ಸಂದೇಶವನ್ನು ಮುಟ್ಟಿಸಿದ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜಪಾನ್‌ನ ಬೆಂಬಲದ ಒತ್ತಾಸೆ ಸಿಕ್ಕಿತ್ತು. ಅವರಿಬ್ಬರ ಆ ಭೇಟಿ ಐಎನ್‌ಎಯ ಹುಟ್ಟಿಗೆ ನಾಂದಿ ಹಾಡಿತ್ತು. ಬಳಿಕ ಮೋಹನ್ ಸಿಂಗ್ ಮೇಜರ್ ಜನರಲ್ ಯಮಶಿಟರನ್ನು ಭೇಟಿಯಾಗಿ ಈ ಬಗೆಗಿನ ಮಾತುಕತೆ ನಡೆಸಿದರು.
ಈ ಮಲಯನ್ ಯುದ್ಧ ಶುರುವಾಗಿ ಕೇವಲ ೧೦ ದಿನಗಳಲ್ಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಬಲ್ಲ ದಳವೊಂದನ್ನು ಈ ಸೈನ್ಯದೊಳಗಿನಿಂದಲೇ ರಚಿಸಲು ಬೇಕಾದ ಎಲ್ಲಾ ಏರ್ಪಾಟು ಕೂಡ ನಡೆಯಿತು.

ಸಿಂಗಾಪುರದ ಪತನದ ಎರಡು ದಿನದ ಬಳಿಕ ಅಂದರೆ ಫೇಬ್ರವರಿ ೧೭ರಂದು ಭಾರತೀಯ ಮೂಲದ ಎಲ್ಲ ಖೈದಿಗಳನ್ನು ಫರೇರ್ ಪಾರ್ಕ್‌ನಲ್ಲಿ ಕಳೆ ಹಾಕಲಾಯಿತು. ಅಂದು ಜಪಾನಿನ ಸೇನಾನಾಯಕ ಮೇಜರ್ ಫ್ಯುಜಿವೆರಾನ ಕೈಗೇ ಬ್ರಿಟೀಷ್ ಕರ್ನಲ್ ಹಂಟ್ ಭಾರತೀಯರನ್ನು ಒಪ್ಪಿಸಿದ್ದ. ಅಂದು ಹಂಟ್ ಮಾಡಿದ ಘೋಷಣೆ, ಇಂದು, ನಾನು ಬ್ರಿಟೀಷ್ ಸರ್ಕಾರದ ಪರವಾಗಿ ನಿಮ್ಮನ್ನು ಜಪಾನ್ ಸರ್ಕಾರಕ್ಕೆ ಹಸ್ತಾಂತರಿಸುತ್ತೇನೆ. ನೀವು ಈವರೆಗೆ ಹೇಗೆ ನಮ್ಮ ಆದೇಶವನ್ನು ಪಾಲಿಸುತ್ತಿದ್ದೀರೋ ಹಾಗೇ ಇನ್ನು ಮುಂದೆ ಅವರ ಆದೇಶವನ್ನು ಪಾಲಿಸಿ ಎಂದಿದ್ದ. ಈ ಘೋಷಣೆ ಬ್ರಿಟೀಷ್ ಅಧಿಪತ್ಯಕ್ಕೆ ಕಪ್ಪು ಮಸಿ ಬಳೆದಿತ್ತು ಜೊತೆಗೆ ಮುಂದೆ ನಡೆದ ಕೆಂಪು ಕೋಟೆ ವಿಚಾರಣೆ (೧೯೪೫-೪೬) ಸಂದರ್ಭದಲ್ಲಿ ಭಾರತೀಯರಿಗೆ ಭಾರಿ ಲಾಭ ತಂದಿತ್ತು.

ಮಾರ್ಚ್‌ನಲ್ಲಿ ಟೋಕಿಯೋ ಕಾನ್ಫರೆನ್ಸ್ ನಡೆಸುವುದು ಮತ್ತು ಅಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳ ಜೊತೆಗೆ ಐಎನ್‌ಎಯ ಪ್ರತಿನಿಧಿಗಳು ಕೂಡ ಸಭೆ ಸೇರಿ ಮಾತುಕತೆ ನಡೆಸುವುದು ಎಂದು ನಿಶ್ಚಯಿಸಲಾಯಿತು. ಆದರೆ ವಿಧಿ ಬೇರೆಯದ್ದೆ ಬಗೆದಿದ್ದ. ಅ ಸಮ್ಮೇಳನದಲ್ಲಿ ಭಾಗವಹಿಸಲೆಂದು ಸಿಂಗಾಪುರದಿಂದ ಹೊರಟಿದ್ದ ವಿಮಾನವೊಂದು ಜಪಾನಿನ ದಕ್ಷಿಣ ಭಾಗದ ಕಡಲ ಗರ್ಭ ಸೇರಿತು. ಅದರಲ್ಲಿದ್ದ ಪ್ರೀತಮ್ ಸಿಂಗ್, ಸ್ವಾಮಿ ಸತ್ಯಾನಂದ ಪುರಿ, ಎನ್. ಕೆ ಆಯ್ಯರ್ ಮತ್ತು ಕ್ಯಾ. ಅಕ್ರಂ ಖಾನ್ ವಿಧಿವಶರಾದರು. ಆ ಮೂಲಕ ಐಎನ್‌ಎಯ ಮೊದಲ ಹುತಾತ್ಮರ ಪಡೆ ಸೃಷ್ಟಿಯಾಯಿತು!

ಇದೇ ಸಂದರ್ಭದಲ್ಲಿ ಪೂರ್ವದಲ್ಲಿನ ಎಲ್ಲ ಭಾರತೀಯರ ಹೊಣೆ ಹೊತ್ತಿಕೊಳ್ಳಲು ೧೯೨೮ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (ಐಐಎಲ್)ನ ಸ್ಥಾಪನೆಯಾಗಿತ್ತು. ಆ ಸಮಯದಲ್ಲಿ ರಾಜಾ ಮಹೇಂದ್ರ ಪ್ರತಾಪ ಇದರ ಅಧ್ಯಕ್ಷರಾಗಿದ್ದರೆ ರಾಸ್ ಬಿಹಾರಿ ಬೋಸ್ ಉಪಾಧ್ಯಕ್ಷರಾಗಿದ್ದರು. ಆದರೆ ಸೈನ್ಯದ ಪ್ರತಿನಿಧಿಗಳು ಅಲ್ಲಿಗೆ ತಲುಪುತ್ತಲೇ ರಾಜಾ ಮಹೇಂದ್ರ ಪ್ರತಾಪ್ ಪದಚ್ಯುತರಾಗಿ ರಾಸ್ ಬಿಹಾರಿ ಬೋಸ್ ಅಧ್ಯಕ್ಷರಾಗಿದ್ದರು! ಅಷ್ಟೇ ಅಲ್ಲ ರಾಜಾ ಮಹೇಂದ್ರರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಕಾರಣ, ರಾಜಾ ಮಹೇಂದ್ರ ಜಪಾನಿಯರು ಹೇಳಿದ್ದಕ್ಕೆಲ್ಲ ತಲೆಯಾಡಿಸುವ ಜಾಯಮಾನದವರಾಗಿರಲಿಲ್ಲ.

ಮಾರ್ಚ್ ೨೮ರಿಂದ ಮಾರ್ಚ್ ೩೧ರವರೆಗೆ ಬೋಸ್‌ರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಐಐಎಲ್‌ನ್ನು ಪೂರ್ವ ದೇಶಗಳಲ್ಲಿ ವಿಸ್ತರಿಸುವುದು, ಐಎನ್‌ಎಯ ರಚನೆ ಮತ್ತು ಈ ಚಳವಳಿಯನ್ನು ಮುನ್ನಡೆಸಲು ಯೂರೋಪ್‌ನಿಂದ ಸುಭಾಶ್ ಚಂದ್ರ ಬೋಸ್‌ರನ್ನು ಕರೆಸುವುದು ಮುಂತಾದ ನಿರ್ಣಯ ಕೈಗೊಳ್ಳಲಾಯಿತು.

ಸಿಂಗಾಪುರದಲ್ಲಿ ಜಪಾನಿಯರಿಗೆ ಶರಣಾದ ೯೦,೦೦೦ದಷ್ಟು ಸೈನಿಕರಲ್ಲಿ ಸುಮಾರು ಅರ್ಧದಷ್ಟು ಭಾರತೀಯ ಮೂಲದ ಸೈನಿಕರಿದ್ದರು. ಅವರಲ್ಲಿ ಕೆಲವರು ಯುದ್ಧದ ಮಧ್ಯೆಯೇ ಮೋಹನ್ ಸಿಂಗ್‌ರನ್ನು ಸೇರಿಕೊಂಡಿದ್ದರು. ಮತ್ತೆ ಉಳಿದವರನ್ನು ಬಳಸಿಕೊಂಡು ಐಎನ್‌ಎ ಕಟ್ಟುವ ಕೆಲಸ ಏಪ್ರಿಲ್ ತಿಂಗಳಲ್ಲೇ ಪ್ರಾರಂಭಿಸಲಾಯಿತು.

ಮೊದಲ ಹಂತದಲ್ಲಿ ಮೂರು ಬ್ರಿಗೇಡ್ ಮತ್ತು ಸಹಾಯಕ ಪಡೆಗಳಿರುವ ಒಂದು ಡಿವಿಷನ್‌ನ್ನು ರಚಿಸಲಾಯಿತು. ಮೋಹನ್ ಸಿಂಗ್ ಮೇಜರ್ ಜನರಲ್ ಆಗಿ ಆಯ್ಕೆಯಾದರು. ಜೂನಿಯರ್ ಕಮೀಷನ್ಡ್ ಆಫೀಸರ್ ಹುದ್ದೆಯನ್ನು ಕಿತ್ತು ಹಾಕಲಾಯಿತು. ಹಿಂದೂ, ಮುಸ್ಲಿಂ ಮತ್ತು ಸಿಖ್ಖರು ಒಂದೇ ಕಡೆ ಊಟ ಮಾಡಬೇಕಿತ್ತು. ಈ ರೀತಿ ಸಮಾನತೆ ಮತ್ತು ಜಾತ್ಯತೀತತೆಯ ಅಂಶವನ್ನು ಐಎನ್‌ಎ ತನ್ನ ಬೇರಿನಲ್ಲೇ ಅಳವಡಿಸಿಕೊಂಡಿತ್ತು. ಕಮಾಂಡ್ ನೀಡಲು ಹಿಂದಿ ಪದಗಳನ್ನು ಪರಿಚಯಿಸಲಾಯಿತು. ಬ್ರಿಗೇಡ್‌ಗಳಿಗೆ ಗಾಂಧಿ, ನೆಹರು ಮತ್ತು ಅಜಾದ್‌ರ ಹೆಸರು ಇಡಲಾಯಿತು.

ಆ ಬಳಿಕ ೧೯೪೨ರ ಜೂನ್ ೧೫ ರಿಂದ ೨೩ರವರೆಗೆ ಬ್ಯಾಂಕಾಕ್ ಕಾನ್ಫರೆನ್ಸ್ ನಡೆಯಿತು. ಈ ಸಮ್ಮೇಳನದಲ್ಲಿ ಈ ಚಳವಳಿಯ ಮುಖ್ಯ ಉದ್ದೇಶ ಭಾರತದ ಸಂಪೂರ್ಣ ಸ್ವರಾಜ್ಯ ಎಂಬ ನಿರ್ಣಯ ಕೈಗೊಳ್ಳುವುದರ ಜೊತೆಗೆ ಕಾಂಗ್ರೆಸ್‌ನ ಹೋರಾಟದ ಆಶಯಗಳ ಬಗ್ಗೆ ಸಮ್ಮತಿ ಮುಂತಾದ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ರಾಸ್ ಬಿಹಾರಿ ಬೋಸ್‌ರ ನೇತೃತ್ವದಲ್ಲಿ ಕ್ರಿಯಾ ಸಮಿತಿವೊಂದನ್ನು ರಚಿಸಲಾಯಿತು. ಇದರಲ್ಲಿ ಸೇನೆಯ ಕಡೆಯಿಂದ ಮೋಹನ್ ಸಿಂಗ್, ಎ ಕ್ಯೂ ಗಿಲಾನಿ ಮತ್ತು ನಾಗರಿಕರ ಕಡೆಯಿಂದ ಕೆ ಪಿ ಕೆ ಮೆನನ್ ಮತ್ತು ಎನ್ ರಾಘವನ್ ಇದ್ದರು. ಇಡೀ ಚಳವಳಿಯ ನಿಯಂತ್ರಣ ಮತ್ತು ಮಾರ್ಗದರ್ಶನ ಈ ಸಮಿತಿಯ ಜವಾಬ್ಧಾರಿಯಾಗಿತ್ತು.

ಐಎನ್‌ಎಯ ಮೊದಲ ಡಿವಿಷನ್‌ನಲ್ಲಿ ಕಮಾಂಡರ್ ಆಗಿ ಮೋಹನ್ ಸಿಂಗ್ ಮತ್ತು ದ್ವಿತೀಯ ಕಮಾಂಡರ್ ಮತ್ತು ಮುಖ್ಯ ಸಲಹೆಗಾರರಾಗಿ ನರಂಜನ್ ಸಿಂಗ್ ಗಿಲ್ (ಇವರಿಗೂ ಜಪಾನಿಯರಿಗೂ ಅಷ್ಟೊಂದು ಅಗಿ ಬರುತ್ತಿರಲಿಲ್ಲವಂತೆ)ಇದ್ದರು. ಗಾಂಧಿ ಬ್ರಿಗೇಡ್‌ಗೆ ಐ ಕೆ ಕಿಯಾನಿ, ನೆಹರು ಬ್ರಿಗೇಡ್‌ಗೆ ಅಜೀಜ್ ಅಹಮ್ಮದ್ ಖಾನ್ ಮತ್ತು ಅಜಾದ್ ಬ್ರಿಗೇಡ್‌ಗೆ ಪ್ರಕಾಶ್ ಚಾಂದ್ ನೇತೃತ್ವ ವಹಿಸಿಕೊಂಡರು. 

ಈ ಪಡೆ ಅದೇ ವರ್ಷ ಅಕ್ಟೋಬರ್‌ನಲ್ಲಿ ಬರ್ಮಾದತ್ತ ದಾಪುಗಾಲಿಡಲು ಸಿದ್ಧವಾಗಿತ್ತು. ಆದರೆ ದುರದೃಷ್ಟವಶಾತ್ ಹಾಗೇ ಆಗಲಿಲ್ಲ. ಭಾರತೀಯರನ್ನು ಮತ್ತು ಭಾರತೀಯ ಸೈನ್ಯವನ್ನು ತನ್ನ ಮೂಗಿನ ನೇರಕ್ಕೆ ನಿರ್ದೇಶಿಸುವ ಹಾಗೂ ಭಾರತೀಯ ಸೇನೆಯನ್ನು ತನ್ನ ಅಧೀನದಲ್ಲೆ ಇಟ್ಟುಕೊಳ್ಳಬೇಕೆಂಬ ಜಪಾನಿಯರ ಹವಣಿಕೆ ಮತ್ತು ವರ್ತನೆ ಮೋಹನ್ ಸಿಂಗ್‌ರಿಗೆ ಭಾರಿ ನೋವು ತಂದಿತ್ತು. ಕ್ರಿಯಾ ಸಮಿತಿ ಒಡೆದು ಹೋಯಿತು. ಬ್ಯಾಂಕಾಕ್ ಸಮ್ಮೇಳನದ ನಿರ್ಣಯವನ್ನು ಜಪಾನ್ ಬಹಿರಂಗವಾಗಿ ಒಪ್ಪಿಕೊಳ್ಳದಿದ್ದದ್ದು ಅಸಮಾಧಾನದ ಹೊಗೆ ಕವಿಯುವಂತೆ ಮಾಡಿತ್ತು. ಇದರಿಂದ ಬೇಸತ್ತ ಮೋಹನ್ ಸಿಂಗ್ ಜಪಾನಿಯರ ಜೊತೆ ಅಸಹಕಾರ ಮತ್ತು ಐಎನ್‌ಎಯ ವಿಸರ್ಜನೆಯ ನಿರ್ಧಾರಕ್ಕೆ ಬಂದರು.

೧೯೪೨ನೇ ಇಸವಿಯ ಡಿಸೆಂಬರ್ ೨೧ಕ್ಕೆ ಐಎನ್‌ಎ ವಿಸರ್ಜನೆಯಾಯಿತು. ನರಂಜನ್ ಸಿಂಗ್‌ರನ್ನು ಮೊದಲೇ ಬಂದಿಸಿಟ್ಟಿದ್ದ ಜಪಾನಿಯರು ಆ ಬಳಿಕ ಡಿಸೆಂಬರ್ ೨೯ಕ್ಕೆ ಮೋಹನ್ ಸಿಂಗ್‌ರನ್ನು ಕೂಡ ಬಂಧಿಸಿದರು. ಅದ್ದರಿಂದ ೧೯೪೨ರ ಫೇಬ್ರುವರಿ ೧೫ರಿಂದ ಅದೇ ವರ್ಷದ ಡಿಸೆಂಬರ್ ೨೧ರವರೆಗೆ ಅಸ್ತಿತ್ವದಲ್ಲಿದ್ದ ಐಎನ್‌ಎಯ ಮೊದಲ ಅಧ್ಯಾಯ ಮುಕ್ತಾಯಗೊಂಡಿತು.
ಆ ಚಳಿಗಾಲದಲ್ಲಿ ಬರ್ಮಾದ ಮೂಲಕ ಭಾರತದ ಮೇಲೆ ದಾಳಿ ಮಾಡಬೇಕು ಎಂಬ ಭಾರತೀಯರ ರಣತಂತ್ರಕ್ಕೆ ಮಣೆ ಹಾಕದ್ದು ಜಪಾನಿಗೆ ಭಾರಿ ನಷ್ಟ ಉಂಟು ಮಾಡಿತು ಎಂದು ಆ ಬಳಿಕ ಜಪಾನ್ ಸೈನ್ಯದ ಜನರಲ್ ಅದ ಫುಜಿವಾರ ಕೂಡ ಒಪ್ಪಿಕೊಳ್ಳುತ್ತಾರೆ.

ಐಎನ್‌ಎಯ ಮೊದಲ ಪರ್ವದ ಬಗ್ಗೆ ನರಂಜನ್ ಸಿಂಗ್ ಹೇಳುವುದನ್ನು ಕೇಳಿ, "ಐಎನ್‌ಎಯ ಎರಡು ಭಾಗಗಳು ಪರಸ್ಪರ ಪೂರಕವಾಗಿದ್ದವು. ಇದನ್ನು ಒಂದೇ ಕಥೆಯ ಎರಡು ಭಾಗಗಳೆಂದು ಪರಿಗಣಿಸಬಹುದು. ಮೊದಲನೆ ಭಾಗ ಇಲ್ಲದೇ ಇದ್ದಲ್ಲಿ ಐಎನ್‌ಎಯ ಎರಡನೇ ಯಶಸ್ಸಿನ ಪರ್ವ ಸೃಷ್ಟಿಯಾಗುತ್ತಿರಲಿಲ್ಲ ಮತ್ತು ಎರಡನೇ ಭಾಗ ಇಲ್ಲದೆ ಹೋಗಿದ್ದರೆ ಐಎನ್‌ಎ ಸಾಧಿಸಿದ್ದು ಏನು ಇರುತ್ತಿರಲಿಲ್ಲ".

ಅ ಬಳಿಕ ೧೯೪೩ರ ಜುಲೈ ೨ರಂದು ಸಿಂಗಾಪುರಕ್ಕೆ ನೇತಾಜಿಯ ಆಗಮನ, ಬಂದ ಎರಡೇ ದಿನದಲ್ಲಿ ಅವರು ಐಐಎಲ್‌ನ ಜವಾಬ್ಧಾರಿ ವಹಿಸಿಕೊಂಡ ತದನಂತರ ಆಗಸ್ಟ್‌ನಲ್ಲಿ ಐಎನ್‌ಎಯ ದಂಡನಾಯಕರಾಗಿ ನಿಯುಕ್ತರಾಗುತ್ತಾರೆ. ಆ ಬಳಿಕದ ರೋಚಕ ಕತೆ ಚಿರಪರಿಚಿತ.

ನಾವು ವ್ಯಕ್ತಿ ಪೂಜೆ ಮಾಡುತ್ತ ಆ ವ್ಯಕ್ತಿಯ ಹಿಂದಿರುವ ಶಕ್ತಿಗಳನ್ನು ಮರೆಯುವುದರಲ್ಲಿ ಮತ್ತು ಮುಚ್ಚಿಡುವುದರಲ್ಲಿ ನಿಸ್ಸಿಮರು. ಇಂದು ಐಎನ್‌ಎಗೆ ಅಡಿಪಾಯ ಹಾಕಿದವರನ್ನು ಕೇಳುವವರಿಲ್ಲ, ನೇತಾಜಿಗೆ ಸಲ್ಲಲೇ ಬೇಕಾದ ಮಾನ್ಯತೆ ಸಲ್ಲಲಿಲ್ಲ.
ಇಂದು ೧೨ ಲಕ್ಷ ಭೂ ಸೈನಿಕರ ರಕ್ಷಣೆಯಲ್ಲಿರುವ, ಸುಮಾರು ಒಂದೂವರೆ ಲಕ್ಷ ಕೋಟಿ ರೂ ಸುರಿದು ನಮ್ಮ ರಕ್ಷಣೆ ಮಾಡಿಸಿಕೊಳ್ಳುತ್ತಿರುವ, ಬಗೆ ಬಗೆಯ ಕ್ಷಿಪಣಿಗಳನ್ನು ಉಡಾಯಿಸಿ ನೆರೆಯ ದೇಶಗಳಿಗೆಗೆ ಬಿಸಿ ಮುಟ್ಟಿಸಿದ್ದೇವೆ ಎಂದು ಬೀಗುತ್ತಿರುವ ನಮಗೆ ಈ ಮಣ್ಣಿನ ಪರಾಧೀನತೆಯನ್ನು ಕಡಿದು ಹಾಕಿ ೩೮ ಕೋಟಿ ಭಾರತೀಯರ ರಕ್ಷಣೆಗೆ ಪರದೇಶಗಳ ಕಾಡುಮೇಡುಗಳಲ್ಲಿ ಪಡಬಾರದ ಪಾಡು ಪಟ್ಟ ಆ ೪೫,೦೦೦ ಕದನ ಕಲಿಗಳನ್ನು ನೆನಪಿಸಿಕೊಳ್ಳುವಷ್ಟು ವ್ಯವಧಾನವಿಲ್ಲದೆ ಹೋಯಿತೇ?

Thursday, May 24, 2012

ಚುಟುಕು ಕ್ರಿಕೆಟ್ ನೈತಿಕತೆಯ ಕೊನೆಗುಟುಕು

ಭಾರತ ೨೦೦೭ರಲ್ಲಿ ವಿಶ್ವ ಟೆಂಟಿ ಟ್ವೆಂಟಿ ಚಾಂಪಿಯನ್ ಆದ ಕುರುಹಾಗಿ ಮತ್ತು ಜೀ ಸಮೂಹದ ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸಡ್ಡು ಹೊಡೆಯಲಿಕ್ಕಾಗಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಅಕಾಲದಲ್ಲಿ ಜನ್ಮ ತಾಳಿ ಐದು ವರ್ಷ ಸಂದಿದೆ. ’ಶುದ್ಧ ಕ್ರಿಕೆಟ್’ ಎಂಬುದು ಐಪಿಎಲ್‌ನ ಜಾತಕದಲ್ಲೇ ಬರೆದಿಲ್ಲ ಎಂಬುದು ಈ ಪಂಚ ವರ್ಷದಲ್ಲೆ ಸಾಬೀತಾಗಿದೆ.
ಭಾರತ ಟ್ವೆಂಟಿ-ಟ್ವೆಂಟಿ ವಿಶ್ವ ಚಾಂಪಿಯನ್ ಆದದ್ದು ಒಂದೇ ಐಪಿಎಲ್‌ನ ಉಗಮಕ್ಕೆ ಕಾರಣವಾಗಿರಲಿಲ್ಲ. ಭಾರತದಲ್ಲಿ ಕ್ರಿಕೆಟ್‌ನ ಏಕಸ್ವಾಮ್ಯ ಹೊಂದಿರುವ ಬಿಸಿಸಿಐಯ ಅಧಿಪತ್ಯಕ್ಕೆ ಜೀ ಸಮೂಹದ ಸುಭಾಶ್ ಚಂದ್ರ ಐಸಿಎಲ್‌ನ ಮೂಲಕ ಕೊಡಲಿಯೇಟು ನೀಡಿದಾಗ ತನ್ನ ಕ್ರಿಕೆಟ್ ಕೊಪ್ಪರಿಗೆ ಇನ್ನೊಬ್ಬರ ಪಾಲಾಗುವುದನ್ನು ಯಾವುದೇ ಬೆಲೆ ತೆತ್ತು ತಪ್ಪಿಸಬೇಕು ಎಂಬ ಬಿಸಿಸಿಐ ಯೋಚನೆಯೇ ಐಪಿಎಲ್‌ನ ತಳಪಾಯ. ಉಳಿದಂತೆ ಕ್ರಿಕೆಟಿಗರ ಉದ್ಧಾರ, ಮನರಂಜನೆ ಮುಂತಾದ ಬಿಸಿಸಿಐ ಹೇಳಿಕೆಗಳು ಸುಮ್ಮನೆ ತೋರಿಕೆಯದ್ದು ಅಷ್ಟೆ.
ಟ್ವೆಂಟಿ-ಟ್ವೆಂಟಿ ನಿಂತಿರುವುದೇ ಹೊಡಿ ಬಡಿ ಸಿದ್ಧಾಂತದ ಮೇಲೆ. ಕ್ರಿಕೆಟ್‌ನ ಮೂಲ ಧರ್ಮಕ್ಕೆ ಇದು ವಿರುದ್ಧವಾದರೂ ಕಾಲ ಧರ್ಮಕ್ಕನುಗುಣವಾಗಿ ಈ ಸಂಸ್ಕ್ರತಿಯನ್ನು ಒಪ್ಪಿಕೊಂಡರೆ ಅದರಲ್ಲಿ ತಪ್ಪೇನಿಸಲಾಗದು. ಆದರೆ ಕ್ರಿಕೆಟ್ ಎಂಬ ಆಟ ಉದ್ದಿಮೆಗಳ ತೆಕ್ಕೆಗೆ ಸೇರಿಕೊಂಡಾಗ ಉಂಟಾಗುವ ಉತ್ಪಾತಗಳು ಮಾತ್ರ ಸಹ್ಯವಾಗಿಲ್ಲ.
ಮನರಂಜನೆ ಮತ್ತು ವ್ಯಾಯಾಮ ಕ್ರೀಡೆಯ ಎರಡು ಕಣ್ಣುಗಳಿದ್ದಂತೆ. ಮನರಂಜನೆ ಆಡುವವನಿಗೆ ಮತ್ತು ನೋಡುವವನಿಗೆ ಹಾಗೆ ವ್ಯಾಯಾಮ ಆಡುವವನಿಗೆ ಸಿಗುತ್ತದೆ. ಆದರೆ ವೃತ್ತಿಪರ ಆಟಗಾರರಿಗೆ ಪ್ರತ್ಯೇಕವಾದ ವ್ಯಾಯಾಮವೇ ಇರುತ್ತದೆ. ನಮ್ಮಂತವರಿಗೆ ಮಾತ್ರ ಆಡುವುದೇ ವ್ಯಾಯಾಮ! ಅದ್ದರಿಂದ ಯಾವುದೇ ವೃತ್ತಿಪರ ಆಟಗಾರನಿಗೆ ಆತ ನಮ್ಮ ಮುಂದೆ ನೀಡುವ ಪ್ರದರ್ಶನ ಆತನಿಗೆ ವ್ಯಾಯಾಮ ಮತ್ತು ಮನರಂಜನೆಯಾಗಿ ಮುಖ್ಯವಾಗುವುದಕ್ಕಿಂತ ನೋಡುಗನಿಗೆ ಅದು ನೀಡುವ ಮನರಂಜನೆಯಷ್ಟೆ ಪ್ರಮುಖವಾಗುತ್ತದೆ. ಐಪಿಎಲ್ ನಂತಹ ಕ್ರೀಡಾಕೂಟದಲ್ಲಿ ಒಬ್ಬ ಆಟಗಾರ ಎಷ್ಟು ಮನರಂಜನೆ ನೀಡಬಲ್ಲ ಎಂಬುದರ ಮೇಲೆ ಅತನ ಹಣದ ಜೋಳಿಗೆ ತುಂಬುತ್ತದೆ. ಅದ್ದರಿಂದ ಇಲ್ಲಿ ಒಬ್ಬ ಆಟಗಾರ ಪ್ರದರ್ಶಕನಾಗಿ ಮುಖ್ಯನಾಗುತ್ತಾನೆಯೇ ಹೊರತು ಆತನ ಕೌಶಲ್ಯಗಳಿಂದಾಗಿ ಅಲ್ಲ.
ಒಂದು ಕ್ರೀಡಾ ತಂಡಕ್ಕೆ ಅಥವಾ ಕ್ರಿಡಾಳುವಿಗೆ ಮನರಂಜನೆ ನೀಡುವ ಸಾಮರ್ಥ್ಯವಿದ್ದರೆ ಅದು ಹೆಚ್ಚುಗಾರಿಕೆಯ ವಿಷಯ. ಒಂದು ಸಿನೆಮಾ, ನಾಟಕ ಕೂಡ ಮಾಡುವುದು ಅದೇ ಕೆಲಸವನ್ನು. ಆದರೆ ಸಿನೆಮಾ, ನಾಟಕಕ್ಕೆ ಒಂದು ಸ್ಕ್ರೀಪ್ಟ್ ಇರುತ್ತದೆ, ಕ್ರೀಡೆಗೆ ನೀತಿ ನಿಯಮದ ಚೌಕಟ್ಟು ಇರುತ್ತದೆ. ಆದರೆ ಇದು ಅದಲು ಬದಲಾದರೆ ಮಾತ್ರ ಶುದ್ಧ ಮನರಂಜನೆಯ ಆಶಯ ನೆಲಕಚ್ಚುತ್ತದೆ. ಕ್ರೀಡೆಯ ಸೋಲು, ಗೆಲುವು ಸ್ಕ್ರೀಪ್ಟ್ ರೂಪ ಪಡೆದರೆ ಮ್ಯಾಚ್ ಫಿಕ್ಸಿಂಗ್‌ನ ಭೂತ ಕಣ್ಣ ಮುಂದೆ ಬಂದು ನಿಂತಂತೆ.
ಮ್ಯಾಚ್ ಫಿಕ್ಸಿಂಗ್ ದಶಕಗಳ ಹಿಂದೆಯೇ ಅಧಿಕೃತವಾಗಿ ಕ್ರಿಕೆಟ್‌ನೊಂದಿಗೆ ಸಂಬಂಧ ಕುದುರಿಸಿಕೊಂಡಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾದ ತಲಾ ಒರ್ವ ಯಶಸ್ವಿ ಕ್ರಿಕೆಟ್ ಕಪ್ತಾನರ ಮತ್ತು ಕೆಲ ಆಟಗಾರರ ಕ್ರಿಕೆಟ್ ಬದುಕಿಗೆ ಎಳ್ಳುನೀರು ನೀಡಿತ್ತು. ಆ ಬಳಿಕ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್‌ನ ಆನೇಕ ಆರೋಪಗಳು ಕೇಳಿಬಂದವು. ಕೆಲ ಪ್ರಕರಣಗಳು ಸಾಬೀತಾದವು ಕೂಡ. ಇನ್ನು ಅನೇಕ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆ ಮುಂತಾದ ಅಂಶಗಳಿಂದ ಅಲ್ಲಿಗೆ ಕಣ್ಣು ಮುಚ್ಚಿದ್ದವು. ಆದರೆ ಈಗ ಮತ್ತೆ ಐವರು ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್‌ನ ಆರೋಪಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ಅಮಾನತುಗೊಳ್ಳುವುದರೊಂದಿಗೆ ಐಪಿಎಲ್‌ನ ಆಶಯದ ಮೇಲೆ ಕರಿ ನೆರಳು ಮೂಡಿದೆ.
ಉದ್ದಿಮೆದಾರರು ಐಪಿಎಲ್‌ನ ಪ್ರಮುಖ ಪಾಲುದಾರರು. ಅವರಿಗೆ ಬ್ಯುಸಿನೆಸ್ ಎಂದರೆ ಒಂದು ರೂ ಚೆಲ್ಲಿ ಎಷ್ಟು ಆಗುತ್ತೋ ಅಷ್ಟನ್ನು ಬಾಚಿಕೊಳ್ಳುವುದು. ಹೆಚ್ಚು ಆದಾಯ ಬಂದಷ್ಟು ಅವರಿಗೆ ಖುಷಿಯೂ ಜಾಸ್ತಿ. ಇದು ವ್ಯವಹಾರ ಧರ್ಮ. ಐಪಿಎಲ್‌ನಿಂದ ಅವರಿಗೆ ಅದಾಯಗಳಿಸುವ ಹೊಸ ದಾರಿಯ ಗೋಚಾರವಾಗುವುದೇನೋ ಸರಿ ಆದರೆ ಅವರು ಈಗಾಗಲೇ ತಾವು ಗಳಿಸಿದ ಕರಿ ಹಣವನ್ನು ಬಿಳಿ ಹಣವನ್ನಾಗಿ ಮಾಡಲು ಐಪಿಎಲ್‌ನ ದಾರಿಯನ್ನು ಹಿಡಿದಿದ್ದಾರೆ ಎಂಬುದು ಹಲವು ಕಡೆಗಳಿಂದ ಕೇಳಿ ಬರುತ್ತಿರುವ ಗಟ್ಟಿ ಆರೋಪ. ಈ ಬಗ್ಗೆ ೨೦೧೧ರ ಆಗಸ್ಟ್ ೨ರಂದು ಆರ್ಥಿಕ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.
ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನ ಕಳಂಕಿತ ಕ್ರಿಕೆಟಿಗರಲ್ಲಿ ಮೋನಿಶ್ ಶರ್ಮಾ ಕೂಡ ಒಬ್ಬ. ಆತ ಅಂತರಾಷ್ಟ್ರೀಯ ಕ್ರಿಕೆಟ್ ಆಡದ ಕಾರಣ ಆತನಿಗೆ ಯಾವುದೇ ಐಪಿಎಲ್ ಪ್ರಾಂಚೈಸಿ ಕೊಡಬಹುದಾದ ಗರಿಷ್ಠ ಹಣ ೩೦ ಲಕ್ಷ. ಆದರೆ ಅವನಿಗೆ ಪುಣೆ ವಾರಿಯರ‍್ಸ್ ತಂಡದ ಪರ ಆಡಲು ೧.೫ ಕೋಟಿ ಸಿಕ್ಕಿದೆಯಂತೆ. ಅಂದರೆ ೧.೨ ಕೋಟಿ ರೂವನ್ನು ಪುಣೆ ತಂಡ ಅಕ್ರಮವಾಗಿ ಅವನಿಗೆ ನೀಡಿದೆ. ಆದರೆ ಅಮಾನತಿನ ಶಿಕ್ಷೆ ಮಿಶ್ರಾನಿಗೆ ಮಾತ್ರ ಸೀಮಿತ! ಇಲ್ಲಿ ನಿಜ ತಪ್ಪಿತಸ್ಥರಾದ ಪುಣೆ ತಂಡದ ಮಾಲೀಕರಿಗೆ ಯಾವುದೇ ಬೇಲಿಯ ಬಂಧನ ಇನ್ನೂ ಬಿದ್ದಿಲ್ಲ.
ಐಪಿಎಲ್‌ನ ಮೊದಲ ಮುಖ್ಯಸ್ಥ ಲಲಿತ್ ಮೋದಿಯನ್ನು ಕಿತ್ತೆಸೆದು, ಕೊಚ್ಚಿ ಟಸ್ಕರ‍್ಸ್ ತಂಡವನ್ನು ರದ್ದುಗೊಳಿಸಿ ಈಗ ಐವರು ಕ್ರಿಕೆಟಿಗರನ್ನು ಅಮಾನತುಗೊಳಿಸುವುದರ ಮೂಲಕ ತಮ್ಮ ಶುಭ್ರತೆಯ ಹಲ್ಲನ್ನು ಐಪಿಎಲ್ ಬೋರ್ಡ್ ತೋರಿಸುತ್ತಿದೆ. ಆದರೆ ಇದೇ ಐಪಿಎಲ್‌ನ ಸಂಘಟಕರು ಕಳೆದ ವರ್ಷ ತಮ್ಮ ಸಂವಿಧಾನಕ್ಕೆ ತಿಲಾಂಜಲಿ ನೀಡಿ ಮುಂಬೈ ತಂಡ ಐವರು ವಿದೇಶಿ ಕ್ರಿಕೆಟಿಗರನ್ನು ಆಡಿಸಲು ಅನುಮತಿ ನೀಡಿತ್ತು, ಈ ವರ್ಷ ಕ್ರಿಸ್ ಗೈಲ್‌ರನ್ನು ಬೆಂಗಳೂರು ತಂಡ ಉಳಿಸಿಕೊಳ್ಳುವಂತೆ ಮಾಡಿತ್ತು, ಪುಣೆ ತಂಡದ ತಕರಾರುಗಳ ಜೊತೆ ರಾಜಿ ಮಾಡಿಕೊಂಡಿತ್ತು ಹೀಗೆ ತಂಡಗಳ ಮಾಲೀಕರ ಹಿತಾಸಕ್ತಿಗಳಿಗೆ ಐಪಿಎಲ್ ಸದಾ ಸ್ಪಂದಿಸುತ್ತಿದೆ.
ಪಂದ್ಯಗಳ ನಡುವೆ ಟಿವಿ ವಾಹಿನಿಗಳ ಜಾಹೀರಾತು ದಾಹ ತೀರಿಸಲು ಟೈಮ್ ಔಟ್ ಜಾರಿಗೆ ತಂದದ್ದು ಪಂದ್ಯ ಮುಗಿದ ಬಳಿಕ ಅಧಿಕೃತ ಪಾರ್ಟಿಗಳನ್ನು ನಡೆಸುತ್ತಿರುವುದೆಲ್ಲ ಹಣದಾಸೆಗೆಯೇ ಹೊರತು ಮತ್ತೆನಕ್ಕೂ ಅಲ್ಲ. ಒಂದು ಕ್ರೀಡೆ ಕೆಲವೇ ಕೆಲವರ ಧನಪಿಶಾಚಿಯನ್ನು ಬಿಡಿಸಲು ಬಳಕೆಯಾದಾಗ, ದೊಡ್ಡವರ  ಅವ್ಯವಹಾರವನ್ನು ಮುಚ್ಚಿಡಲು ಸಾಧನವಾದಗ ಮತ್ತು ಈ ಆವಾಂತರಗಳಿಗೆ ಮನರಂಜನೆಯ ಲೇಪ ಸಿಕ್ಕಾಗ ಈಗ ನಡೆಯುತ್ತಿರುವ, ಬಯಲಾಗುತ್ತಿರುವ ಭಾನಗಡಿಗಳು ಸಂಭವಿಸುತ್ತವೆ!
ಅತ್ಯಾಚಾರ ಯತ್ನ, ರೇವ್ ಪಾರ್ಟಿ ಪ್ರಕರಣಗಳನ್ನು ಮೈದಾನದಾಚೆಗಿನ ಪ್ರಕರಣ ಎಂದು ಹೇಳಿ ಐಪಿಎಲ್ ಸಂಘಟಕರು ಬಚಾವಾಗಬಹುದು. ಆದರೆ ಯುವ ಕ್ರಿಕೆಟಿಗರಿಗೆ ಹಣ, ಮದ್ಯ, ಮಾನಿನಿ ಪೂರೈಕೆಯಾಗುವ ಸಂದರ್ಭದಲ್ಲಿ ಅವರು ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಘಟಕರದ್ದೆ ಆಗಿರುತ್ತದೆ. ಏಕೆಂದರೆ ಪಂದ್ಯದ ಬಳಿಕ ಪಾರ್ಟಿ ಕಲ್ಚರ್‌ನ್ನು ಜಾರಿಗೆ ತಂದದ್ದು ಐಪಿಎಲ್ ಸಂಘಟಕರೆ. ಐಪಿಎಲ್ ಸಂಘಟಕರು ಪಾರ್ಟಿ ಮಾಡಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ ಆದರೆ ಅಲ್ಲಿ ಸಮಸ್ಯೆಗಳು ಇರುವುದಿಲ್ಲ.
ಭಾರತೀಯ ಕ್ರೀಡಾಪ್ರೇಮಿಗಳಿಗೆ ಶ್ರೀಮಂತ ಕ್ರಿಕೆಟಿಗರು ಬೇಕಾಗಿಲ್ಲ, ಸಂಸ್ಕಾರವಂತ ಕ್ರಿಕೆಟಿಗರು ಬೇಕು. ಅದಕ್ಕಾಗಿಯೆ ಇಂದಿಗೂ ಸಚಿನ್, ದ್ರಾವಿಡ್, ಕುಂಬ್ಳೆ, ಶ್ರೀನಾಥ್ ಎಂದರೆ ಎದೆಯಲ್ಲಿ ಗೌರವದ ಅಲೆ ತನ್ನಿಂದ ತಾನೆ ಎದ್ದಿರುತ್ತದೆ. ಅವರನ್ನು ಯಾವುದೇ ಅಭಿಮಾನಿ ಮೈದಾನ, ಮೈದಾನದಾಚೆಗಿನ ವ್ಯಕ್ತಿತ್ವ ಎಂದು ವಿಂಗಡಿಸುವ ಗೋಜಿಗೆ ಹೋಗುವುದಿಲ್ಲ. ಅದೇ ಯುವ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ಮಾತನಾಡುವಾಗ ಅವನು ಚೆನ್ನಾಗಿ ಆಡುತ್ತಾನೆ ಅಷ್ಟೆ ಎಂದು ಹೇಳಿ ಅಲ್ಲಿಗೆ ಮಾತು ನಿಲ್ಲಿಸುವುದು ಇದೇ ಕಾರಣಕ್ಕಾಗಿ. ಅವರಿಗೆ ಫ್ರಾಂಚೈಸಿಗಳ ಮಾಲೀಕರು ಕೋಟಿ ಕೋಟಿ ಸುರಿದರು ಕೂಡ ಅವರ‍್ಯಾರು ಜನರ ಹೃದಯದಲ್ಲಿ ನೆಲೆ ನಿಲ್ಲಲಾರರು.
ಈ ಬಾರಿ ಐಪಿಎಲ್‌ನ ಅನೇಕ ಪಂದ್ಯಗಳ ನಿರ್ಣಾಯಕ ಸಂದರ್ಭಗಳಲ್ಲಿ ಬೌಲರ್‌ಗಳು ಪುಲ್ಟಾಸ್ ಎಸೆದು ಸಿಕ್ಸ್ ಹೊಡೆಸಿಕೊಂಡಿರುವುದನ್ನು ಈಗ ಅನುಮಾನದ ದೃಷ್ಟಿಯಿಂದ ನೋಡದೆ ವಿಧಿಯಿಲ್ಲ.
ಈ ಐದು ವರ್ಷದಲ್ಲಿ ಬಯಲಾದ ಎಲ್ಲಾ ಹಗರಣಗಳು ಏನೇನೂ ಅಲ್ಲ. ಐಪಿಎಲ್ ಎಂಬ ಹುತ್ತದಲ್ಲಿ ಲೆಕ್ಕವಿಲ್ಲದಷ್ಟು ಅಕ್ರಮ, ಅವ್ಯವಹಾರ, ಅನೈತಿಕ ಸಂಗತಿಗಳ ಘಟಸರ್ಪಗಳು ಅವಿತು ಕೂತಿವೆ. ಅದಕ್ಕಾಗಿಯೇ ಫಿಕ್ಸಿಂಗ್ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಬಿಸಿಸಿಐ ನೆಲದ ಕಾನೂನಿನಡಿ ಕೆಲಸ ನಿರ್ವಹಿಸುವ ಸಂಸ್ಥೆಗಳಿಗೆ ಕೊಟ್ಟಿಲ್ಲ.
ಐಪಿಎಲ್‌ಗೆ ಬಾಲಗ್ರಹ ಪೀಡೆಯಿದೆ. ಯಾವುದೆ ಕ್ರೀಡಾಕೂಟ ೫ ವರ್ಷ ಪೂರೈಸಿದೆ ಎನ್ನುವುದು ಇತಿಹಾಸದಲ್ಲಿನ ಚಿಕ್ಕ ತುಣುಕು ಅಷ್ಟೆ. ಅದು ಮುಂದೆ ದಶಕ, ಶತಮಾನಗಳ ಕಾಲ ಬದುಕುವ ಆಯುಷ್ಯ ಹೊಂದಿರುತ್ತದೆ. ಈ ದೀರ್ಘಾವಧಿಯ ಪಯಣದಲ್ಲಿ ತೊಡಕು, ತೊಡರುಗಳು ವಿವಾದಗಳು ಸರ್ವೇ ಸಾಮಾನ್ಯ. ಒಲಿಂಪಿಕ್ಸ್ ಕ್ರೀಡಾಕೂಟ ಕೂಡ ಇದಕ್ಕೆ ಹೊರತಲ್ಲ. ಆದರೆ ಪಂಚ ವರ್ಷದಲ್ಲೇ ಸಾಕಷ್ಟು ಪಂಚ್ ತಿಂದಿರುವ ಐಪಿಎಲ್‌ನ ಬುಡವೇ ಸರಿಯಿಲ್ಲ ಎಂದಾದ ಮೇಲೆ ಅದಕ್ಕೆ ಅಕಾಲ ಮರಣ ಬರುವುದು ನಿಶ್ಚಿತ.
ಕೆಲವೊಮ್ಮೆ ಗುರಿ ಸರಿ ಇದ್ದರೆ ಯಾವುದೇ ದಾರಿ ಹಿಡಿದಾದರೂ ಅದನ್ನು ಸಾಧಿಸಬೇಕು ಅಥವಾ ಗುರಿ ಸಾಧನೆ ತಡವಾದರು ತೊಂದರೆಯಿಲ್ಲ ಆದರ್ಶದ ದಾರಿಯಲ್ಲೆ ಸಾಗಬೇಕು ಇದರಲ್ಲಿ ಎರಡನೇ ಅಂಶ ಅತ್ಯುತ್ತಮವಾಗಿದ್ದರೂ ಕೂಡ ಮೊದಲನೇಯ ಅಂಶವನ್ನು ಕೆಲವು ಸಂದರ್ಭಗಳಲ್ಲಿ ಸಮರ್ಥಿಸಿಕೊಳ್ಳಬಹುದೇನೋ. ಆದರೆ ಐಪಿಎಲ್‌ನ ಗುರಿಯೇ ಸರಿಯಿಲ್ಲ ಎಂದ ಮೇಲೆ ಅದು ಸಾಗುವ, ಸಾಗುತ್ತಿರುವ ದಾರಿ ಹೇಗೆ ತಾನೆ ಸರಿ ಇರಲು ಸಾಧ್ಯ?