Tuesday, November 22, 2011

"I have never lost faith in the power of journalism"

[IT IS AN EXCLUSIVE INTERVIEW WITH R. POORNIMA (ASSISTANT  EDITOR OF MAYURA MONTHLY MAGAZINE) FOR OUR SUPPLEMENT MEDIA WATCH]


 What inspired you to enter into the field of Journalism?

I never dreamt that I would become a journalist some day. I entered the field by chance. In 1973, I passed my master’s degree in Kannada Literature with First Rank and two Gold medals. And the decade of 1970- 1980 was filled with different democratic movements. There was that big JP movement against emergency. Its cascading effect shook the society. There were Bandaya (rebel) Literary movement, Samudaya People’s Theatre movement, Democratic Women’s movement, Farmers’ movement etc.in Karnataka. As a student and a young writer I identified with all of them. One day, I applied for a job in Prajavani and became a journalist. I found that working as a journalist would be an extension of my involvement in cultural, social and political movements.  I can not imagine journalism without social perspective and social responsibility.

What was the actual condition of women journalists when you entered the field? How was their representation compared to these days?
Kannada Journalism developed along National movement for Independence like in any other language. Women in Karnataka were attracted to Journalism since its beginning, as early as 1920. But 1950s and 1960s saw many women starting there own monthly and weekly magazines. It was more a passion than profession. But in 1970s few women entered weekly magazines published by big media houses.  But there were hardly any women working in newspaper offices. It was the conscious decision of K.N. Hari Kumar (editor of Deccan Herald and Prajavani at that time) which made history. The 1980s saw few women like us working in the newsroom as subeditors. We never begged for exemptions from late night duties and night shifts.

What were challenges you personally faced in the beginning of your carrier?
I entered Journalism with great enthusiasm. And there were no role models. We had to prove ‘double’ than the boys. The male dominated field was watching us, with a pinch of suspicion. But as a tough girl ‘shaped and seasoned’ by movements, I viewed all challenges as opportunities. ‘Prajavani’ had enlightened leadership and the company always stood for social justice in letter and spirit. Nobody dared to humiliate us. I personally did not face much discrimination. I did not wait for reporting beats or assignments to write; I created my own. I could write on more than ten subjects and my growth as a journalistic writer was cool. I firmly believed that if we work with dedication and conviction, recognition (inside and outside) would naturally follow. After all, all our work will be in ‘black and white’!

What are the challenges women journalists have to face today?

Today, women in media have lot of opportunities. The challenge before them is to recognize them. Those who do will get recognition. Another challenge to overcome, as well as fight is the ‘attitude’ problem. I feel that women should challenge discrimination at workplace through their good work.

Do you think that you have achieved what you had thought of at the beginning?
I have never lost faith in the power of  journalism. But I have miles to go before I sleep!

Could you tell us some of your most interesting and passionate work in your career?

To name a few, my writing on the problems of rural areas, female foeticide, health care, HIV, communalism.

How you define the present journalism with a comparison the journalism of yours initial days?
Passion and Fashion- today there is remixing. And there is addition of Corruption.

Does patriarchy get manifested in the field of journalism, may be in terms of discriminations in salary, promotion, assignments etc? If yes, how to tackle it?
Discrimination if any depends on the policy of the media house. The best way to tackle that is through excellence.

Do you think that the explosion of visual media is threatening to the growth of print media?
The explosion of visual media has forced the print media to set its priorities right. In Asia, the growth is not very much affected. The real challenge before print media is to groom its future generations of readers. Today’s children should be today’s readers- for a safe tomorrow!

How do you see the future of print media in the face of growing internet and visual media?
Newspapers will not die; they live long- on the net. We should see that the internet, the new technology, every new gadget will serve the print media. Only difference is the printing will be on LCD screen. But still, at least in Asia, there is no good morning without a newspaper.

What do you think of editorial sanctity in the backdrop of increasing reports of paid news, trade interests, castism, favoritism, corruption in the media?
Paid news, trade interests, casteism, favoritism and corruption are rapidly increasing types of cancers affecting the media. They are both institutional and individual.  Excepting in a very few media houses, the editorial sanctity is in ICU. Media is demanding and getting its ‘scoop’ in the loot. This is really a heart-breaking news.

Women are projected as either sex objects or a tool to sell the products and services of corporate firms, particularly through advertisements? How do you see the trend?
This is not a new trend. Advertisements always reflected the society. Now the curve is more visible and downwards.

How you state your dream journalism?
Dream Journalism! -  By fair people, for the welfare of the people.

Yours tips to budding journalists?

Be on the information highway, to be on the right path.

Brief  Note about Dr. R. Poornima

Dr. R. Poornima has over three decades of experience in Kannada Journalism (18 years in Prajavani, 11 years in Udayavani and now again with Prajavani). She is a well-known Development Journalist and also writes on Culture (Literature, Music, Cinema and Arts). She has worked in daily newspaper, weekly and monthly magazines and all sections of the news room. She is the first woman in Kannada Journalism to get an opportunity to work as Bureau Chief (Mangalore Bureau of Prajavani) and Editor of a daily newspaper (Udayavani Bangalore Edition). She is recognized as a trend setter in many ways. She has earned more than a dozen awards for excellence in media.

Wednesday, November 16, 2011

ರೇಷ್ಮೆ ರೈತರಿಗೆ ನೋವಿನ ಕುಲುಮೆ

ಚನ್ನಪಟ್ಟಣದಲ್ಲಿ ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆ ಗೂಡುಗಳ ಬೆಲೆ ತೀವೃವಾಗಿ ಕುಸಿತವಾದುದನ್ನು ಕಂಡು ರೊಚ್ಚಿಗೆದ್ದು ಬೆಂಗಳೂರು - ಮೈಸೂರು ಹೆದ್ದಾರಿಯನ್ನು ಸುಮಾರು ೬ ಗಂಟೆಗಳ ಕಾಲ ಬಂದ್ ಮಾಡಿರುವುದು ಅಚ್ಚರಿಯ ಸಂಗತಿಯೂ ಅಲ್ಲ, ಇದು ನೊಂದ ರೈತರ ತಕ್ಷಣದ ಪ್ರತಿಕ್ರಿಯೆಯಂತೂ ಖಂಡಿತವಾಗಿಯೂ ಅಲ್ಲ. ಕಳೆದ ಫೆಬ್ರುವರಿಯಿಂದ ಸತತವಾಗಿ ತಾವು ಬೆಳೆದ ರೇಷ್ಮೆಯ ಬೆಲೆ ಪಾತಾಳಮುಖಿಯಾಗಿ ಸಾಗುತ್ತಿರುವುದನ್ನು ಹತಾಶರಾಗಿ ನೋಡುತ್ತಿದ್ದ, ಈ ಬೆಲೆ ಕುಸಿತವನ್ನು ಇನ್ನು ಸಹಿಸಿಕೊಳ್ಳಲಾಗದ ಹಂತಕ್ಕೆ ಬಂದ ರೈತರು ತಮ್ಮ ಆಕ್ರೋಶವನ್ನು ರಸ್ತೆ ತಡೆ ಮಾಡುವ ಮೂಲಕ ವ್ಯಕ್ತಪಡಿಸಿದ್ದರು.

ಈ ರೇಷ್ಮೆ ಬೆಲೆ ಕುಸಿತ ಈಗಾಗಲೇ ಎರಡು ಜೀವಗಳನ್ನು (ಸ್ವಾಮಿಗೌಡ ಮತ್ತು ಆತನ ಪತ್ನಿ ವಸಂತ) ಬಲಿ ತೆಗೆದುಕೊಂಡಿದೆ. ೨೦೦೯ರ ಏಪ್ರಿಲ್‌ನಲ್ಲಿ ಮಿಶ್ರ ತಳಿಯ ರೇಷ್ಮೆಗೆ ಕೆಜಿಗೆ ಸರಾಸರಿ ೧೫೬ರೂ ಗಳಿತ್ತು. ೨೦೧೦ರ ಏಪ್ರಿಲ್‌ನಲ್ಲಿ ಇದು ೧೯೫ ರೂಗಳನ್ನು ತಲುಪಿತ್ತು. ಅದೇ ೨೦೧೧ರಲ್ಲಿ ಒಂದು ಕೆಜಿ ರೇಷ್ಮೆಯ ಬೆಲೆ ಸರಾಸರಿ ೩೧೧ ರೂ ಇತ್ತು!

ಆದರೆ ರೇಷ್ಮೆ ಬೆಳೆಗಾರರ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ ಅಥವಾ ಉಳಿಯಲು ನಮ್ಮ ಘನ ಸರ್ಕಾರಗಳು ಬಿಡಲಿಲ್ಲ. ೨೦೧೧ರ ಮೇ ಯಲ್ಲಿ ರೇಷ್ಮೆ ಗೂಡಿನ ಬೆಲೆ ಕೆಜಿಗೆ ಸರಾಸರಿ ೧೮೫ ರೂಗೆ ಇಳಿದಿತ್ತು. ರೇಷ್ಮೆ ಬೆಳೆಗಾರರ ಕತ್ತು ಹಿಸುಕುವ ಕೆಲಸವನ್ನು ಈ ವರ್ಷ ಕೇಂದ್ರ ಸರ್ಕಾರ ತನ್ನ ಬಜೆಟ್‌ನ ಮೂಲಕ ನೇರವಾಗಿಯೇ ಮಾಡಿತ್ತು. ಕೇಂದ್ರ ತನ್ನ ಬಜೆಟ್‌ನಲ್ಲಿ ರೇಷ್ಮೆ ಮೇಲೆ ಶೇ. ೩೦ ರಷ್ಟಿದ್ದ ಆಮದು ಸುಂಕವನ್ನು ಕೇವಲ ಶೇ. ೫ಕ್ಕೆ ಇಳಿಸಿತು. ಅದ್ದರಿಂದ ಈ ಬಾರಿಯ ಬಜೆಟ್ ರೇಷ್ಮೆ ಬೆಳೆಗಾರರಿಗೆ ಮರಣ ಶಾಸನವಾಯಿತು.

ಬೆಲೆ ಇಳಿಕೆಯನ್ನು ಅವಡುಗಚ್ಚಿ ಸಹಿಸಿಕೊಂಡಿದ್ದ ರೈತರಿಗೆ ರೇಷ್ಮೆ ಗೂಡಿನ ಬೆಲೆ ಎರಡಂಕಿಗೆ (೩೦-೫೦ರೂ) ಇಳಿದಾಗ ತೀವೃ ಅಘಾತಕ್ಕೀಡಾಗಿ ಹರಾಜು ಪ್ರಕ್ರಿಯೆಯಿಂದ ದೂರ ಸರಿದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ರೈತರ ಬಗ್ಗೆ ರಾಜ್ಯ ಸರ್ಕಾರದ
ನಿರ್ಲಕ್ಷ್ಯತನ, ದಲ್ಲಾಳಿಗಳು ಮತ್ತು ರೀಲರ್‌ಗಳ ವಿರುದ್ಧ ತಮಗಿದ್ದ ಅಸಹನೆಯನ್ನು ಅವರು ಈ ಮೂಲಕ ವ್ಯಕ್ತ ಪಡಿಸಬೇಕಾಯಿತು. ಕೊನೆಗೆ ಅರಣ್ಯ ಸಚಿವ ಸಿ ಪಿ ಯೋಗಿಶ್ವರ್‌ರ ಮಧ್ಯ ಪ್ರವೇಶದಿಂದ ಈ ಪ್ರತಿಭಟನೆ ಕೊನೆಗೊಂಡರು ಕೂಡ ಯೋಗಿಶ್ವರ್ ನೀಡಿದ ಭರವಸೆಯಂತೆ ಸರ್ಕಾರ ಪ್ರತಿ ಕೆಜಿಗೆ ೩೦ರೂ ಸಹಾಯ ಧನ ನೀಡುವ ಬಗ್ಗೆ ಮೀನ ಮೇಷ ಎಣಿಸುತ್ತಿರುವುದು ರೈತರಿಗೆ ಮಾಡಿದ ಅವಮಾನವೇ ಸರಿ. ಈ ಹಿಂದೆ ಈ ವರ್ಷದ ಫೆಬ್ರುವರಿಯಲ್ಲಿ ರಾಮನಗರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಮುಂದೆ ರೈತರು ಬೆಂಗಳೂರು - ಮೈಸೂರು ಹೆದ್ದಾರಿಯನ್ನು ೧೦ ಗಂಟೆಗಳ ಕಾಲ ಬಂದ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, “ಇದು ರೈತರ ದುರಂತ, ರೈತರಿಗೆ ೧ ಕೆಜಿ ರೇಷ್ಮೆ ಗೂಡಿಗೆ ೩೨೦ ರೂ ಖರ್ಚಾಗುತ್ತದೆ. ಭಾನುವಾರದ ಬೆಲೆಯನ್ನು (ಪ್ರತಿ ಕೆಜಿಗೆ ೩೦- ೫೦ ರೂ) ಹೊರತು ಪಡಿಸಿದರೂ ಕೂಡ ಮಾರುಕಟ್ಟೆ ದರ ೧೩೫ರಷ್ಟಿತ್ತು. ಮಾರುಕಟ್ಟೆಯಲ್ಲಿ ಕನಿಷ್ಟ ಬೆಲೆ ನಿಗದಿ ಪಡಿಸಲು ಯಾವುದೇ ಮಾನದಂಡವಿಲ್ಲ. ಅದ್ದರಿಂದಲೇ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ ೩೦ ರೂ ಹರಾಜು ಕೂಗುತ್ತಾರೆ. ಇದಕ್ಕಾಗಿ ಮಾರುಕಟ್ಟೆ ರಕ್ಷಣಾ ಕಾಯಿದೆಯನ್ನು ಸರ್ಕಾರ ಜಾರಿಗೆ ತರಬೇಕು, ಇಲ್ಲದೆ ಹೋದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ. ರೇಷ್ಮೆ ಬೆಲೆ ಕುಸಿತ ಕಾಣುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಿದೆ. ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತರಬೇಕು ಹಾಗೆ ರಾಜ್ಯ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು” ಎಂದು ಅಭಿಪ್ರಾಯ ಪಡುತ್ತಾರೆ.

ರಾಜ್ಯ ರೇಷ್ಮೆ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ೧,೪೦,೯೫೯ ರೇಷ್ಮೆ ಬೆಳೆಗಾರರು ಮತ್ತು ೭,೧೯೫ ರೇಷ್ಮೆ ರೀಲರ್‌ಗಳಿದ್ದಾರೆ. ರೇಷ್ಮೆ ಬೆಳೆ ರಾಜ್ಯದಲ್ಲಿ ಸುಮಾರು ೮ ಲಕ್ಷ ಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗ ನೀಡುತ್ತದೆ. ಭಾರತದಲ್ಲಿ ಉತ್ಪಾದನೆಯಾಗುವ ೧೫,೬೧೦ ಟನ್ ಮಲ್ಬರಿ ರೇಷ್ಮೆಯಲ್ಲಿ ೭,೨೩೮ ಟನ್ ರೇಷ್ಮೆಯನ್ನು ಕರ್ನಾಟಕ ಉತ್ಪಾದಿಸುತ್ತದೆ. ಭಾರತ ಪ್ರತಿ ವರ್ಷ ೨೮,೦೦೦ ಟನ್ ರೇಷ್ಮೆಯನ್ನು ಬಳಸುತ್ತದೆ ಆದರೆ ನಮ್ಮಲ್ಲಿ ಉತ್ಪಾದನೆಯಾಗುವುದು ೧೯,೦೦೦ ಟನ್ ಮಾತ್ರ. ಅದ್ದರಿಂದ ದೇಶ ಸುಮಾರು ೫,೦೦೦ ಟನ್‌ನಷ್ಟು ರೇಷ್ಮೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೇಷ್ಮೆ ಕೃಷಿಗೆ ನೆರವಿನ ಹಸ್ತ ಚಾಚ ಬೇಕಾದ ಸರ್ಕಾರಗಳೇ ರೈತರ ಬದುಕಿಗೆ ಕೊಡಲಿಯೇಟು ನೀಡುತ್ತಿರುವುದು ವಿಪರ್ಯಾಸ.

Saturday, October 29, 2011

ಅನಿವಾರ್ಯವಾಗಿರುವ ಹೊತ್ತಲ್ಲಿ ಚೂಸಿ ಆಗಿರೋಕ್ಕೆ ಸಾಧ್ಯನಾ...?

ಇವತ್ತು ಒಂಚೂರು ತಡವಾಗಿದೆ... ಆದ್ರೆ ರಿಕ್ಷಾಗಳಿಗೆ ಬರ ಬೀಳುವಷ್ಟು ತಡ ಆಗಿಲ್ಲ... ನೊಡೋಣ, ಯಾವ ಗಾಡಿ ಹತ್ತೋದು ... ಅದ್ರಲ್ಲಿ ನೋಡೊದು ಎಂತ... ಯಾವುದು ಬರುತ್ತೆ ಅದನ್ನು ಹತ್ತುವುದು... ಅನಿವಾರ್ಯವಾಗಿರುವ ಹೊತ್ತಲ್ಲಿ ಚೂಸಿ ಆಗಿರೋಕ್ಕೆ ಸಾಧ್ಯನಾ...? ಅಲ್ಲ, ಈ ಸೂಸೈಡ್ ಮಾಡುವವರು ನಾವು ಯಾವ ರೀತಿ ಸೂಸೈಡ್ ಮಾಡ್ಕೋಬೇಕು ಅನ್ನುವ ವಿಷಯದಲ್ಲಿ ಥಿಂಕ್ ಮಾಡ್ತಾರಾ... ಹಗ್ಗ... ಅದು ಫ್ಯಾನ್‌ಗೋ.. ಮರಕ್ಕೋ... ವಿಷ... ಅದ್ರಲ್ಲಿ ಯಾವ ವಿಷ... ಬೆಟ್ಟದಿಂದ ಹಾರುವುದೋ.. ನೀರಿಗೆ ಧುಮುಕುವುದೋ ಅಲ್ಲ... ರೈಲು... ಆತ್ಯಹತ್ಯೆ ಆ ಕ್ಷಣದ ಯೋಚನೆ ಆಗಿರುತ್ತದೆಯೋ... ಅಲ್ಲ, ಕೆಲವರು ತುಂಬ ದಿನದಿಂದ ಯೋಚನೆ ಮಾಡಿ ಈ ಹಲ್ಕ ಕೆಲಸ ಮಾಡ್ತಾರೆ... ಹುಂ ಅವರು ಪಕ್ಕಾ ಡಿಸೈಡ್ ಮಾಡಿರಬಹುದು... ರಿಕ್ಷಾ ಬಂತು... ಈ ಮಂಗ ಮುಂದೆ ಹೋಗಿ ನಿಲ್ಲಿಸಿದ... ಸರಿ, ಒಂಚೂರು ವ್ಯಾಯಾಮ ಆಗುತ್ತೆ... ಈ ನೆಲ ಹತ್ತು ವರ್ಷದ ಹಿಂದೆ ಹೇಗೆ ಇದ್ದಿರಬಹುದಾ... ಹೊಲ ಹೊಲ... ಈಗ ಕಟ್ಟಡ... ಕಟ್ಟಡ... ಹೌದು ನಾನು ಕೃಷಿ ಬಗ್ಗೆ ಯಾವ ನಾಲಗೆ ಇಟ್ಟುಕೊಂಡು ಮಾತನಾಡಲಿ... ಮನೆಯಲ್ಲಿ ಅಷ್ಟು ಕೃಷಿ ಭೂಮಿ ಇದ್ದು ಇಲ್ಲಿ ಬಂದು? ಕೃಷಿಕನೆಂದರೆ ಭೂಮಿ ಪುತ್ರ, ಆ ವೃತ್ತಿ ಶ್ರೇಷ್ಠ ಹಾಗೇ ಹೀಗೆ ಎಂದು ಹೇಳುವ ಒಂದು ಪೈಸೆಯ ನೈತಿಕತೆ ನನಗಿದೆಯೇ...? ಆದ್ರೂ ಜೀವನ ಇಲ್ಲಿಗೆ, ಇಂದಿಗೆ ಇಲ್ಲಿಯೇ ಕೊನೆಗೊಳ್ಳುತ್ತಾ? ನಾಳೆ ನಾನು ಎಲ್ಲೋ ಇರಬಹುದು... ನಮ್ಮ ಮನೆಯಲ್ಲೂ...! ಹುಂ ಅನಿಶ್ಚಿತ ಭವಿಷ್ಯ... ಹೇಕ್... ಇವನು ಏಕೆ ಇಷ್ಟು ಸೈಡ್‌ಲ್ಲಿ ಹೋಗುತ್ತಿದ್ದಾನೆ... ಮಾರ್ಗದ ಮಧ್ಯೆ ಹೋಗಲು ಆಗುವುದಿಲ್ವಾ... ಭಾಷೆ ಇಲ್ಲದ್ದು... ಹೋ ಅವಳು ಈ ರಿಕ್ಷಾ ಹತ್ತುತ್ತಾಳ... ಹುಂ ಚೆನ್ನಾ... ಸಖತ್ ಆಗಿದ್ದಾಳೆ... ಇಲ್ಲ ಅವಳು ಹತ್ತುವುದಿಲ್ಲ... ಸರಿ... ಲೈಟ್ ಕಂಬ... ಇಲ್ಲಿ ತಡೆಬೇಲಿಗಳೇ ವಿಚಿತ್ರವಾಗಿದೆ... ಹೇ... ಆ ಮುಂದಿನ ಗಾಡಿಯ ನಂಬರ್ ಎಷ್ಟು ಚೆನ್ನಾಗಿದೆ... ಈ ಗಾಡಿಗಳ ನಂಬರ್‌ನಲ್ಲಿ ಆಟ ಆಡೋದೆ ಮಜಾ... ಒಳ್ಳೆ  ಗಮ್ಮತ್ತು... ಆ ಕಾರಿನ ನಂಬರ್ ವಿಚಿತ್ರವಾಗಿದೆ... ಇದು ಸರಿಯಿಲ್ಲ... ಈ ನಂಬರ್ ತುಂಬ ಕೆಟ್ಟದಾಗಿದೆ... ಅದು ನಂಬರ್ ಚೆನ್ನಾಗಿದೆ... ಹೇ ಅದು ಅಂಧ್ರದ ರಿಜಿಸ್ಟ್ರೇಷನ್... ನಾನು ಕರ್ನಾಟಕದ ೭-೮ ಗಾಡಿ ನೋಡಿದ್ದೇನೆ ಇಲ್ಲಿ... ಗಾಡಿಯಲ್ಲಿ ನಂಬರ್ ಪ್ಲೇಟ್ ನೋಡಿ ಎಲ್ಲಿಯ ಗಾಡಿ ಅಂತ ಹೇಳೋದು ಸುಲಭ... ಆದ್ರೆ ಅದಕ್ಕಿಂತ ಮುಖ, ಕೂದಲು ನೋಡಿ ಇವರೆಲ್ಲಿಯವರು ಅಂತ ಗುರುತಿಸುವುದು... ಈ ವಿಷಯದಲ್ಲಿ ಶೆಟ್ರು ಹುಷಾರಿದ್ದಾರೆ... ಒಳ್ಳೆ ಸ್ಪೀಡ್ ಪಿಕ್ ಅಪ್ ಮಾಡ್ಕೊಂಡ... ಹುಷಾರಿದ್ದಾನೆ... ಹಾಡು ಕೂಡ ಹಾಡುತ್ತಿದ್ದಾನೆ... ಜಾಲಿ ಬಾಯ್ ಅನ್ನಬಹುದು... ಹೋ ಅವನ್ಯಾಕೆ ಹೀಗೆ ಮಾರ್ಗ ದಾಟುತ್ತಿದ್ದಾನೆ... ಹುಚ್ಚ... ಸೆನ್ಸ್ ಇಲ್ಲ... ಅಲ್ಲ, ನಾವು ಹೇಳುತ್ತಿರುತ್ತೇವೆ... ಅದರಲ್ಲೂ ನಾನು... ನಾನ್ಯಾರನ್ನು ನಂಬುವುದಿಲ್ಲ... ಹಾಗೇ ಹೀಗೆ ಎಂತ... ಆದ್ರೆ ಅದು ಬೊಗಸ್... ನಾವು ರಸ್ತೆ ದಾಟುವಾಗ ಮುಂದಿನಿಂದ, ಅತ್ತಲಿಂದ, ಇತ್ತಲಿಂದ ಬರುವ ವಾಹನ ಚಾಲಕರನ್ನು ನಂಬಿಯೇ ದಾಟಿರುತ್ತೇವೆ... ನಾವು ಹೋಟೆಲ್‌ಗೆ ಹೋಗಿ ತಿನ್ನುವುದು, ಮಾರುಕಟ್ಟೆಗೆ ಹೋಗಿ ತರಕಾರಿ ತೆಗೆದುಕೊಳ್ಳುವುದು, ಇನ್ನೊಬ್ಬರ ಮನೆಗೆ ಹೋಗಿ ಊಟ ಮಾಡುವುದು, ಈ ರಿಕ್ಷಾದಲ್ಲಿ ಕುಳಿತದ್ದು... ಎಲ್ಲ ನಂಬಿಕೆಯ ಮೇಲೆ ತಾನೆ... ನಮ್ಮನ್ನು ಯಾರಿಗೂ ಏನೂ ಬೇಕಾದರೂ ಮಾಡಬಹುದು... ಆದ್ರೂ ಮಾಡಲಿಕ್ಕಿಲ್ಲ...ಅನ್ನುವ ನಂಬಿಕೆ... ಮತ್ತೇ ಹೇಳುತ್ತೇನೆ ಯಾರನ್ನೂ ನಂಬೋದಿಲ್ಲ ಅಂತ... ಅಲ್ಲ, ಈ ರಸ್ತೆ ದಾಟುವುದು ನಿಜಕ್ಕೂ ಅದ್ಭುತ ಪ್ರತಿಕ್ರಿಯೆ... ನಮಗೆ ನಾವು ಎಷ್ಟು ಸ್ಪೀಡ್ ದಾಟಬಹುದು ಅಂತ ಗೊತ್ತಿರಬೇಕು... ಇನ್ನು ಅವನು ಗಾಡಿ ಎಷ್ಟು ಫಾಸ್ಟ್ ಆಗಿ ಓಡಿಸುತ್ತಿದ್ದಾನೆ ಎಂದು ಲೆಕ್ಕ ಹಾಕಬೇಕು... ಆ ಗಾಡಿ ಯಾವುದು ಎಂದು ಗಮನಿಸ್ಕೋಬೇಕು... ಅಕ್ಕ ಪಕ್ಕ ಬೇರೆ ಯಾವುದಾದರೂ ಗಾಡಿ ಬರುತ್ತಿದೆಯಾ ಎಂದು ನೋಡ್ಕೊಬೇಕು... ಮತ್ತೇ... ಈ ಬಸ್‌ನವ ಏಕೆ ಹೀಗೆ ಹಾರ್ನ್ ಹಾಕುತ್ತಿದ್ದಾನೆ... ಇಲ್ಲೇ ನಿಲ್ಲಿಸಿಬಿಟ್ಟ... ಸರಿ ಹಣ ಕೋಡಬೇಕಲ್ಲ... 

ನೋಡೋಣ... ಮೊನ್ನೆ ಸಂಜನಾ ಹೀಗೆ ಮಾತನಾಡುತ್ತಿದ್ದಾಗ... ಡಿಸೆಂಬರ್‌ನಲ್ಲಿ ಎಂಗೇಜ್‌ಮೆಂಟ್ ಏಪ್ರಿಲ್‌ನಲ್ಲಿ ಮದುವೆ... ಬೇಡ ಬೇಡ ಏಪ್ರಿಲ್‌ನಲ್ಲಿ ಇಲ್ಲಿ ಸೆಖೆ ಶುರುವಾಗುತ್ತೆ ಅಡ್ಜಸ್ಟ್ ಆಗೋಕ್ಕೆ ಕಷ್ಟ ಆಗುತ್ತೆ ಅಂದೆ... ಅಷ್ಟರಲ್ಲಿ ಎಂಗೇಜ್‌ಮೆಂಟ್‌ಗೂ ಮದುವೆಗೂ ಏಕೆ ಮೂರು ತಿಂಗಳು ಗ್ಯಾಪ್ ಅಂತ ಕೇಳಿದಾಗ ಅರ್ಥ ಮಾಡಿಕೊಳ್ಳಲು ಅನ್ನುತ್ತಾಳೆ... ಹುಂ ಅರ್ಥ ಮಾಡಿಕೊಳ್ಳುವುದು ಅನ್ನುವುದರ ಬದಲು ಕಂಪ್ರಾಮೈಸ್ ಮಾಡಿಕೊಳ್ಳಲು, ಅರ್ಥಾತ್ ಹೊಂದಾಣಿಕೆ ಮಾಡಿಕೊಳ್ಳಲು ಅಂದರೆ ನಿಜ ವ್ಯಕ್ತಿತ್ವ ಕಳೆದುಕೊಳ್ಳಲು ಇರುವ ಸಮಯ ಅದು ಎಂದು ನಾನು ಅವಳ ಜೊತೆ ಚರ್ಚೆ ಮಾಡಿದ್ದೆ... ಆಕೆಗೆ ಏನೂ ತೋಚಿತ್ತೋ... ದೇವರಿಗೆ ಗೊತ್ತು... ಅಷ್ಟಕ್ಕೂ ವ್ಯಕ್ತಿತ್ವ ಎಂದರೆ ಏನು ಮೊನ್ನೆ ತಾನೇ ಒಬ್ಬನಿಗೆ ಒಂದು ವ್ಯಕ್ತಿತ್ವ ಪ್ರಾಪ್ತಿ ಆಗುವುದು ನಾಲ್ವತ್ತು ದಾಟಿದ ಮೇಲೆ ಎಂದು ಓದಿದ್ದೆ... ಹಾಗಾದ್ರೆ ಈಗ ನಮಗೆ ಪರ್ಸನಾಲಿಟಿ ಅನ್ನುವುದು ಇಲ್ವಾ... ಈಗ ಈ ಪ್ರಾಯದಲ್ಲಿ ಇರುವುದು ಪರ್ಸನಾಲಿಟಿ ಅಲ್ಲ ಕ್ಯಾರೆಕ್ಟರ್... ಅಂದರೆ ಗುಣ... ಹುಂ ಕೆಲವರ ಜೊತೆ ಮಾತನಾಡುವುದು ಎಂದರೆ ತುಂಬಾ ಖುಷಿ... ಸೀಮಾಳ ವಾಯ್ಸ್ ನಿಜಕ್ಕೂ ಜೇನು... ಅದೂ ಫೋನ್‌ನಲ್ಲಿ... ಇನ್ನು ಕೆಲವರ ಜೊತೆ ಮಾತನಾಡುವುದೆಂದರೆ ಬೋರೋ ಬೋರು... ಹುಂ ಅಂಕಿತಾ ನನ್ನ ಬಗ್ಗೆ ಹೀಗೆ ಹೇಳಿದ್ದಳು... ಪಾಪಾ ನನಗೆ ಅದು ಗೊತ್ತಾಗಿಲ್ಲ ಎಂದು ತಿಳಿದುಕೊಂಡಿರಬೇಕು... ಪಾಪಾ ಮಗು... ಇಲ್ಲ, ನಾನು ನನ್ನ ಜೊತೆ ಹೇಗಿರುತ್ತಾರೋ ಹಾಗೇ ಅವರ ಜೊತೆಗೂ ಇರುತ್ತೇನೆ... ಅವಳೋ ಪಕ್ಕಾ ಕ್ಯಾಲ್ಕುಲೇಟೆಡ್... ಅಂತವರ ಜೊತೆ ಹಾಗೇ ವ್ಯವಹರಿಸುವುದು ನನ್ನ ಗುಣ... ಹೃದಯದಿಂದ ವ್ಯವಹರಿಸುವವರ ಜೊತೆಗೆ ಹಾಗೆಯೇ ವ್ಯವಹರಿಸಬೇಕು... ಈ ಮಟ್ಟಿಗೆ ಅನುರಾಧ ನಿಜಕ್ಕೂ ಗ್ರೇಟ್... ರೇರ್... ಹುಂ ಮೆಸೇಜ್ ಬಂತು.. ವಾರೆ ...ವಾಹ್ ಇದು ಅವಳೇ ಮೆಸೆಜ್ ಮಾಡಿದ್ದಾಳೆ... ಹೀಗೆ ಎಷ್ಟು ಸಲ ಅಗಿಲ್ಲ... ಯಾರನ್ನಾದರೂ ನೆನಪಿಸಿಕೊಳ್ಳುವಾಗ ಅವರೇ ಮೆಸೆಜ್ ಮಾಡುವುದು, ಕಾಲ್ ಮಾಡುವುದು... ಅದ್ಭುತ... ಕೆಲವೊಂದು ಸಲ ಸೆಟ್ ಕೈಗೆತ್ತಿಕೊಂಡಾಗ ಮೆಸೆಜ್ ಮಾಡುವುದೆಲ್ಲ ಒಂಥಾರ ವಿಚಿತ್ರ... ಹುಂ... ಡಿಗ್ರಿಯಲ್ಲಿ ನನಗೆ ತುಂಬಾ ಜನ ಫ್ರೆಂಡ್ಸ್ ಇದ್ದಾರಲ್ವಾ... ಈಗ ನಾನು ಈಗ ಅವರಿಗೆ ಕಾಲ್ ಮಾಡುವಾಗ.... ಬಹಳ ನಿಧಾನವಾಗಿ... ಇವನ್ಯಾಕೆ ಕಾಲ್ ಮಾಡಿದ ಎಂದೇ ಮಾತನಾಡಿಸುತ್ತಾರೆ... ಸರಿ, ಇಡುತ್ತೇನೆ...ಎಂದಾಗ... ಗಟ್ಟಿ ...ಓಕೆ... ಬಾಯ್....ಸ್ವೀಟ್ ಡ್ರೀಮ್ಸ್.. ಮಣ್ಣು ಮಸಿ ಅಂತ ಜೋರಾಗಿ ಹೇಳುತ್ತಾರೆ... ಅಂದರೆ ಇವನ್ಯಾವಗ ಇಡುತ್ತಾನೆ ಎಂದೇ ಅವರು ಕಾಯುತ್ತಿರುತ್ತಾರೆ... ಇಂತವರಿಗೆ ಮತ್ತೇ ಕಾಲ್ ಮಾಡಬೇಕಾ...? ನಾನು ಹೆಚ್ಚಾಗಿ ಮೂರು ಸಲದ ಸೂತ್ರ ಅನುಸರಿಸುತ್ತಿರುವುದರಿಂದ ಕೆಲವರ ನಂಬರ್ ಇನ್ನೂ ಉಳಿದಿದೆ...

Saturday, October 15, 2011

ಬರೆಯಲಾಗಲಿಲ್ಲ ನನಗೆ ಕವಿತೆ

ಮನದಾಳದ ನೋವು
ಮುಗಿಲೆತ್ತರದ ಈಡೇರದ ಕನಸು
ಎದೆ ತುಂಬ ಕೆಸರು
ಕಣ್ಣತುಂಬ ನೀರು
ಬರೆಯಲಾಗಲಿಲ್ಲ ನನಗೆ ಕವಿತೆ.


ನಗುವೆಂದರೆ ಬೆಟ್ಟದಂಚಿನಿಂದ ಧುಮ್ಮಿಕ್ಕುವ ಝರಿ
ಮಾತೆಂದರೆ ಮಲೆನಾಡಿನ ತುಂತುರು ಹನಿ
ಮೊಗ ತುಂಬ ಸ್ಪೂರ್ತಿಯ ಚಿಲುಮೆ
ಬೊಗಸೆ ತುಂಬ ಬಾಳಸಾಗಿಸುವ ಒಲುಮೆ
ಅದ ಕಂಡಾಗಲೆಲ್ಲ ಮನ ತುಂಬ ಏನೋ ನೀರವತೆ
ಆದರೂ ಬರೆಯಲಾಗಲಿಲ್ಲ ನನಗೆ ಕವಿತೆ


ಕವಿತೆ,
ನಿನ್ನಿರವ ಹೇಳುವ ಗೆರೆಯ ಮೇಲೆ
ಓಡುತ್ತಿಲ್ಲ ಪೆನ್ನು
ಬೆಚ್ಚಿ ಬೀಳುವುದು ಕಾಗದ, ಕಂಡವನಂತೆ ಗನ್ನು!
ಆದರೂ ನನಗೇನೋ ಹಟ
ಕವಿತೆ ಬರೆಯಲೇಬೆಕೆಂದು
ಪಕ್ಕದಲಿದ್ದ ಅಜ್ಜನ ಹೂವು ಹಾಕಿದ ಪೋಟೊ ಗುಣುಗುತ್ತಿತ್ತು
ಎಲೇ ಮಂಕೆ,
ಬರೆಯದಿದ್ದರೂ ಕವಿತೆ ಕವಿತೆಯಾಗುವುದಿಲ್ಲವೇ?
ಥೇಟ್ ನಮ್ಮಂತೆ!

Tuesday, October 4, 2011

ದ್ರಾವಿಡ್ ಏಕದಿನ ಪಂದ್ಯಗಳಿಂದ ನಿವೃತ್ತರಾಗುತ್ತಿದ್ದಂತೆ ಇದೆಲ್ಲ ನೆನಪಾಯಿತು...

ನಾನು ಕ್ರಿಕೆಟ್ ಕಲಿತದ್ದೆ ಗೋಡೆಗೆ ಚೆಂಡು ಹೊಡೆದು, ನಾನು ಕ್ರಿಕೆಟ್‌ನಲ್ಲಿ ಬೆಳೆದದ್ದು ಗೋಡೆಯನ್ನು ನೋಡುತ್ತ...

ರಾಹುಲ್ ದ್ರಾವಿಡ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಾಗ ಮನಸ್ಸಲ್ಲಿ ಕಳವಳ, ನೋವು ಮತ್ತು ನೆನಪುಗಳ ಮಳೆಯೇ ಸುರಿಯುತ್ತಿತ್ತು.

ನನಗೆ ಬಾಲ್ಯದಲ್ಲಿ ಕ್ರಿಕೆಟ್ ಎಂಬ ಒಂದು ಕ್ರೀಡೆಯಿದೆ ಅನ್ನುವುದೇ ಗೊತ್ತಿರಲ್ಲಿಲ್ಲ! ನನಗೆ ಆಡುವುದೆಂದರೆ ಕಣ್ಣಾ ಮುಚ್ಚಾಳೆ, ಮರಕೋತಿಯಾಟ, ಕಳ್ಳ ಪೊಲೀಸ್, ಗಾಡಿ ಬಿಡುವುದು ಹೀಗೆ. ನಾನು ಒಂದರಿಂದ ನಾಲ್ಕನೇ ತರಗತಿ ತನಕ ಓದಿದ್ದು ನಮ್ಮ ಮನೆಯ ಪಕ್ಕದಲ್ಲಿದ್ದ ನಡುಜಾರು, ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿ ನಾವು ಆಡುತ್ತಿದ್ದದ್ದು ಈ ಮೇಲೆ ಹೇಳಿದ ಆಟಗಳನ್ನು ಮಾತ್ರ. ಆದರೆ ಹಿರಿಯ ಪ್ರಾಥಮಿಕ ಶಿಕ್ಷಣ ಆ ಶಾಲೆಯಲ್ಲಿ ಇಲ್ಲದ ಕಾರಣ ನಾನು ಮುಂದಿನ ಶಿಕ್ಷಣಕ್ಕಾಗಿ ನೆರಿಯದ ಅಣಿಯೂರಿನಲ್ಲಿದ್ದ ಮಾವನ ಮನೆಗೆ ಬರಬೇಕಾಯಿತು. ಅಲ್ಲಿಂದ ನಾನು ಹಿರಿಯ ಪ್ರಾಥಮಿಕ ಶಾಲೆ ಬಯಲು ಇಲ್ಲಿಗೆ ಹಿರಿಯ ಪ್ರಾಥಮಿಕ ಶಿಕ್ಷಣಕ್ಕಾಗಿ ಹೋಗಲು ಶುರು ಮಾಡಿದೆ. ಅಲ್ಲಿ ನನ್ನ ಸ್ನೇಹಿತರೆಲ್ಲ ಕ್ರಿಕೆಟ್ ಆಡುತ್ತಿದ್ದರು.

ಮೊದಲಿಗೆ ನನಗೆ ಕ್ರಿಕೆಟ್ ಬ್ಯಾಟ್ ಎಂದರೆ ಹನುಮಂತನ ಗದೆ ರೀತಿಯೇ ಕಾಣಿಸುತ್ತಿತ್ತು! ನನ್ನ ಸ್ನೇಹಿತರು ಅದನ್ನು ಗದೆಯ ರೀತಿಯೂ ಬಳಸುತ್ತಿದ್ದರು! ಕೆಲ ಸಂದರ್ಭದಲ್ಲಿ ಸ್ಟಂಪ್ಸ್ ತ್ರಿಶೂಲವೂ ಆಗುತ್ತಿತ್ತು! ನನಗೆ ೫ನೇ ತರಗತಿಯಲ್ಲಿ ಕ್ರಿಕೆಟ್ ಜೊತೆ ಅಷ್ಟು ತಾಳಮೇಳ ಕೂಡಲಿಲ್ಲ. ನಾನು ಬ್ಯಾಟ್ ಎತ್ತುವ ಮೊದಲೇ ಚೆಂಡು ಕೀಪರ್‌ನ ಬೊಗಸೆಗೋ, ಸ್ಟಂಪ್ಸ್‌ಗೋ ಹೋಗಿ ಬೀಳುತ್ತಿದ್ದು. ಅಕಸ್ಮಾತ್ ಬ್ಯಾಟ್‌ಗೆ ತಾಕಿದರೂ ಅದು ಫಿಲ್ಡರ್‌ನ ಕೈಗೇ. ನಾ ಹೊಡೆದ ಹೊಡೆತಗಳಿಗೂ ಬಲ ಇಲ್ಲದಿರುತ್ತಿದ್ದುದನ್ನು ಗಮನಿಸಿದ್ದ ನನ್ನ ಓರಗೆಯ ಅನುಭವಿ ಆಟಗಾರರು ಎಲ್ಲ ಫಿಲ್ಡರ್‌ಗಳನ್ನು ನನ್ನ ಸುತ್ತ ಮುತ್ತ ನಿಲ್ಲಿಸುತ್ತಿದ್ದರು. ನನಗೆ ಗೋವುಗಳಿಗೆ ಇಂಜೆಕ್ಷನ್ ಅಥವಾ ಚಿಕಿತ್ಸೆ ಕೊಡಲು ಹೆಚ್ಚೆಂದರೆ ೩ ಅಡಿ ಅಗಲ ಮಾತ್ರವಿರುವ ಮೂರು ದಿಕ್ಕಿನಿಂದಲೂ ಕಬ್ಬಿಣದ ರಾಡ್‌ನಿಂದ ಮಾಡಲ್ಪಟ್ಟ ಬೇಲಿ (ಣಡಿives)ಯೊಳಗೆ ನಿಂತ ಗೋವಿನಂತೆ ಅಗುತ್ತಿತ್ತು. ಅದೇಷ್ಟೋ ಬಾರಿ ನಾನು ಬೇಕು ಬೇಕೆಂದೆ ಔಟ್ ಆಗುತ್ತಿದ್ದೆ. ಆಗ ನಾನು ಔಟ್ ಆಗಲು ಕೂಡ ಕಷ್ಟ ಪಡಬೇಕಿತ್ತು! ಏಕೆಂದರೆ ಬ್ಯಾಟ್ ಬಾಲ್‌ಗೆ ತಗೋದೆ ಇಲ್ಲ ಅಂದರೆ ಕ್ಯಾಚ್ ಆದರೂ ಹೋಗೋದು ಹೇಗೆ? ಆಗ ನನಗಿದ್ದ ಒಂದೇ ಒಂದು ಅಪ್ಷನ್ ಎಂದರೆ ಬೌಲ್ಡ್ ಆಗೋದು! ಬೌಲರ್ ಹಾಕಿದ ಬಾಲ್ ಸ್ಟಂಪ್‌ಗೆ ತಾಗುವ ತನಕ ನಾನು ಅನಿವಾರ್ಯವಾಗಿ ಆ ಚಕ್ರವ್ಯೂಹದಲ್ಲೇ ಒದ್ದಾಡಬೇಕಿತ್ತು. ಆಗ ನಾವು ಆಡುತ್ತಿದ್ದದ್ದು ಅಂಡರ್ ಅರ್ಮ್ ಕ್ರಿಕೆಟ್. ನಾನು ಬ್ಯಾಟ್ ಹಿಡಿಯುವಾಗ ಬ್ಯಾಟನ್ನು ನೆಲಕ್ಕೆ ಗಟ್ಟಿ ಒತ್ತಿ ಹಿಡಿಯುತ್ತಿದ್ದೆ. ಈಗ ಬಾಲ್ ಬರುತ್ತಿದೆ ಅದಕ್ಕೆ ಹೊಡೆಯಬೇಕು ಎಂದು ಬ್ಯಾಟ್ ಎತ್ತೋಣ ಎಂದರೆ ಬಾಲ್ ಕೀಪರ್‌ನ ಕೈ ಸೇರುವ ಹೊತ್ತಿಗೆ ನನ್ನ ಬ್ಯಾಟ್ ನೆಲದಿಂದ ಒಂದೋ ಎರಡೋ ಇಂಚು ಮೇಲಿರುತ್ತಿತ್ತು ಅಷ್ಟೆ! ಇನ್ನು ಫಿಲ್ಡಿಂಗ್ ಮಾಡಲು ನಿಂತರೆ ನನ್ನ ಕೈಗೇ ಸಿಗದೇ ಅಥವಾ ಸಿಕ್ಕರೂ ತಪ್ಪಿಸಿಕೊಂಡು ಹೋಗುತ್ತಿದ್ದ ಚೆಂಡುಗಳನ್ನು ಹಿಡಿಯಲು ಮತ್ತೆ ೩-೪ ಫಿಲ್ಡರ‍್ಸ್‌ಗಳು ಬೇಕಿತ್ತು! ಸ್ನೇಹಿತರು ನಾಳೆ ಶಾಲೆಗೆ ಬರುವಾಗ ಮಕ್ಕೇರಿ ಹಿಡಿದುಕೊಂಡು ಬಾ ಅಥವಾ ತೂಂಬು ಎಂದೇ ತಮಾಷೆ ಮಾಡುತ್ತಿದ್ದರು.

ನಾನು ಫಿಲ್ಡಿಂಗ್‌ಗೆ ಒಂದೋ ಬೌಂಡರಿ ಪಕ್ಕ ನಿಲ್ಲುತ್ತಿದ್ದೆ ಇಲ್ಲ ಬ್ಯಾಟ್ಸ್‌ಮನ್‌ನ ಪಕ್ಕ. ಬ್ಯಾಟ್ಸ್‌ಮೆನ್‌ನ ಪಕ್ಕ ನಿಲ್ಲುವುದೆಂದರೆ ನಾನು ಹೆದರಿ ಸಾಯುತ್ತಿದ್ದೆ... ‘ದೇವರೇ ಕಾಪಾಡಪ್ಪ’ ಅನ್ನೋದೆ ನನ್ನ ಪ್ರತಿಕ್ಷಣದ ಪ್ರಾರ್ಥನೆಯಾಗಿತ್ತು. ಕೈಯಲ್ಲಿ ಚೆಂಡು ಹಿಡಿಯುವುದರ ಬದಲು ನನ್ನ ಪ್ರಾಣವನ್ನೇ ಕೈಯಲ್ಲಿ ಹಿಡಿದುಕೊಂಡು ನಿಲ್ಲಬೇಕಿತ್ತು ನಾನು! ಅದರಲ್ಲೂ ನಾವಾಗ ಕ್ರಿಕೆಟ್ ಆಡುತ್ತಿದ್ದದ್ದು ಟೆನ್ನಿಸ್ ಬಾಲ್‌ನಲ್ಲಿ ಅಲ್ಲ ರಬ್ಬರ್ ಬಾಲ್‌ನಲ್ಲಿ! ನಾವು ಟೆನ್ನಿಸ್ ಬಾಲ್‌ಗೆ ಕವರಿಂಗ್ ಬಾಲ್ ಎಂದು ರಬ್ಬರ್ ಬಾಲ್‌ಗೆ ಹಾರ್ಡ್ ಬಾಲ್ ಎಂದು ಹೇಳುತ್ತಿದ್ದೆವು.

ರಾಹುಲ್ ದ್ರಾವಿಡ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವಾಗ ನಾನು ನಮ್ಮ ಶಾಲೆಯ ಮೈದಾನದಲ್ಲಿ ಅಂಬೆಗಾಲಿಡುತ್ತಿದ್ದೆ! ಐದನೇ ತರಗತಿ ಮುಗಿಯುತ್ತ ಬಂದಂತೆ ಅದು ಹೇಗೋ ನನಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಕುದುರಿತು. ಸಂಜೆ ಶಾಲೆ ಬಿಟ್ಟು ಬಂದು ಕೊಟ್ಟಿಗೆಯ ಗೋಡೆಗೆ ಚೆಂಡನ್ನು ಬಡಿದು ಬ್ಯಾಟಿಂಗ್, ಫಿಲ್ಡಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ನಮ್ಮ ಮನೆಯ ಪಕ್ಕ ನಮಗೆ ಸೇರಿದ ದೊಡ್ಡ ಮೈದಾನವಿತ್ತು. ಆದರೆ ಆ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದಗಳಿದ್ದರಿಂದ ಅಲ್ಲಿ ಆಡುವಂತಿರಲಿಲ್ಲ. ನನಗೆ ಆಗ ಓವರ್‌ಆರ್ಮ್ ಬೌಲಿಂಗ್ ಅನ್ನುವುದು ಇದೆ ಎಂದೇ ಗೊತ್ತಿರಲಿಲ್ಲ. ನಮ್ಮ ಶಾಲೆಯಲ್ಲಿ ಕೂಡ ಕೆಲವರಿಗೆ ಮಾತ್ರ ಓವರ್‌ಆರ್ಮ್ ಬೌಲಿಂಗ್‌ನ ಕಲೆ ಸಿದ್ಧಿಸಿತ್ತು. ಅವರು ಓವರ್‌ಆರ್ಮ್ ಕ್ರಿಕೆಟ್ ಆಡೋಣ ಅಂತ ವಾದಿಸಿದರೆ ಉಳಿದವರು ಬೇಡ ಅಂಡರ್‌ಅರ್ಮ್ ಕ್ರಿಕೆಟ್ ಆಡೋಣ ಅಂತ. ನಂತರ ನಾನು ಅದು ಹೇಗೋ ಓವರ್‌ಅರ್ಮ್‌ನ ಬಗ್ಗೆ ತಿಳಿದುಕೊಂಡು ಓವರ್‌ಅರ್ಮ್ ಬೌಲಿಂಗ್ ಕಲಿತೆ...

ನಾನು ಆರನೇ ತರಗತಿಯಲ್ಲಿ ಇದ್ದೆ... ಮನೆಗೆ ಟಿವಿ ಬಂತು... ಅದರಲ್ಲಿ ಅಗಾಗ ಕ್ರಿಕೆಟ್ ಬರುತ್ತಿತ್ತು, ನನ್ನ ಅಜ್ಜನಿಗೂ ಕ್ರಿಕೆಟ್ ಮೇಲಿನ ಪ್ರೀತಿ... ಮಳೆಗಾಲವಾದ್ದರಿಂದ ಶಾಲೆಯಲ್ಲಿ ಆಡಲು ಬಿಡುತ್ತಿರಲಿಲ್ಲ. ಆದರೆ ಮನೆಯಲ್ಲಿ ನಾನು ಏಕಲವ್ಯನ ರೀತಿ ಹೆಚ್ಚಿನ ದಿನ ಬೌಲಿಂಗ್, ಫಿಲ್ಡಿಂಗ್ ಮತ್ತು ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ನನ್ನ ಪ್ರ್ಯಾಕ್ಟೀಸ್‌ಗೆ ಸಿಕ್ಕ ಮನೆ ಮತ್ತು ಕೊಟ್ಟಿಗೆಯ ಗೋಡೆಯ ತುಂಬ ಚೆಂಡಿನ ತರಹೇವಾರಿ ಗುರುತುಗಳು! (ನನ್ನದು ನೆಟ್ ಪ್ರ್ಯಾಕ್ಟೀಸ್ ಅಲ್ಲ ಗೋಡೆ ಪ್ರ್ಯಾಕ್ಟೀಸ್!)ನನಗೆ ಬೈಗುಳದ ಸುರಿಮಳೆ.

ಆರನೇ ತರಗತಿಯಲ್ಲಿ ಚಿಕ್ಕ ರಜೆ ಅಂದರೆ ದಸರಾ ರಜೆಯ ಬಳಿಕ ಶಾಲೆಯಲ್ಲಿ ನಮ್ನನ್ನು ಆಡಲು ಬಿಡುತ್ತಿದ್ದರು. ಆಗ ಟೀಮ್‌ನ್ನು ನಾವು ಒಂದೋ ಮೈದಾನದಲ್ಲಿ ಅಥವಾ ಕ್ಲಾಸ್‌ನಲ್ಲಿಯೇ ಮಾಡುತ್ತಿದ್ದೆವು. ಆಗ ಇಬ್ಬರು ನಾಯಕರನ್ನು ಮೊದಲು ಆಯ್ಕೆ ಮಾಡಿ ನಂತರ ಕ್ರಿಕೆಟ್ ಆಡಲು ಆಸಕ್ತಿ ಇರುವ ಮಕ್ಕಳಲ್ಲಿ ಅವರು ಅವರಿಗೆ ಇಷ್ಟವಾದವರನ್ನು ಆ ನಾಯಕರು ಒಬ್ಬರ ನಂತರ ಒಬ್ಬರಂತೆ ಕರೆಯುತ್ತಿದ್ದರು. ಇದರಲ್ಲಿ ಮೊದ ಮೊದಲು ಒಳ್ಳೆ ಆಟಗಾರರು ಯಾವುದಾದರೂ ಒಂದು ತಂಡ ಸೇರುತ್ತಿದ್ದರು... ಕೊನೆಗೆ ಅನಿವಾರ್ಯವಾಗಿ ನನ್ನನ್ನು ಸೇರಿಸಿಕೊಳ್ಳುತ್ತಿದ್ದರು. ಅಗ ನಾನು ತಂಡಕ್ಕೆ ಹೊರೆಯಾಗಿಯೇ ಇರುತ್ತಿದ್ದೆ! ನನ್ನನ್ನು ಲೆಕ್ಕ ಭರ್ತಿಗೆ ಎಂದು ಕೂಡ ಹೇಳುವಂತಿರಲಿಲ್ಲ ಹಾಗಿತ್ತು ನನ್ನ ಸ್ಥಿತಿ. ಆದರೆ ನಾನು ಏನು ಎಂದು ಗೊತ್ತು ಮಾಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಒಂದು ದಿನ ನಾನು ಲಾಂಗ್ ಅಫ್‌ನಲ್ಲಿ ಫಿಲ್ಡಿಂಗ್ ಮಾಡುತ್ತಿದ್ದೆ. ಒಬ್ಬ ಆಟಗಾರ (ಬಹುಶಃ ದಾಮೋದರ) ಹೊಡೆದ ಚೆಂಡು ಆಕಾಶದೆತ್ತರ ಚಿಮ್ಮಿತ್ತು. ಎಲ್ಲರೂ ಅದನ್ನು ಫೋರ್ ಅಥವಾ ಸಿಕ್ಸ್ ಎಂದೇ ಭಾವಿಸಿದ್ದರು ಆದರೆ ನಾನದನ್ನು ಕ್ಯಾಚ್ ಆಗಿ ಪರಿವರ್ತಿಸಿದ್ದೆ! ಆ ಬಳಿಕ ಇಂತಹದ್ದೆ ಎರಡು ಮೂರು ಕ್ಯಾಚ್‌ಗಳನ್ನು ಪಡೆದೆ. ಆಗ ನನ್ನ ಫಿಲ್ಡಿಂಗ್ ಸಾಮರ್ಥ್ಯ ಬೆಳಕಿಗೆ ಬಂದಿತ್ತು. ನಾನು ನನ್ನ ಫಿಲ್ಡಿಂಗ್‌ಗಾಗಿಯೇ ತಂಡಗಳಿಗೆ ಐದರಿಂದ ಆರನೇ ಸ್ಥಾನದಲ್ಲಿ ಸೇರ್ಪಡೆಯಾಗುತ್ತಿದ್ದೆ. ಎಲ್ಲಿ ಅಗತ್ಯವೋ ಅಲ್ಲಿ ಫಿಲ್ಡಿಂಗ್ ಮಾಡುತ್ತಿದ್ದೆ. ನನಗೋ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಅಥವಾ ತಂಡಗಳಲ್ಲಿ ಸ್ಥಾನ ಪಡೆಯಲು ಇದ್ದ ಏಕೈಕ ಕ್ಷೇತ್ರವೆಂದರೆ ನನ್ನ ಫಿಲ್ಡಿಂಗ್. ನನಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗುತ್ತಿರಲಿಲ್ಲ. ಸಿಕ್ಕರು ಒಂದೆರಡು ಎಸೆತಗಳು ಅಷ್ಟೆ.

ಆ ಬಳಿಕ ನಮ್ಮಲ್ಲಿ ಓವರ್‌ಅರ್ಮ್ ಕ್ರಿಕೆಟ್ ಆಡೋಣ ಎಂಬ ನಿರ್ಧಾರವಾಯಿತು. ಅದರೆ ಸಮಸ್ಯೆ (ನನಗೆ ವರ) ಎಂದರೆ ನಮ್ಮಲ್ಲಿ ಓವರ್‌ಆರ್ಮ್ ಬೌಲಿಂಗ್ ಮಾಡುವ ಬೌಲರ್‌ಗಳು ಹೆಚ್ಚಿರಲ್ಲಿಲ್ಲ. ಬಹುಶಃ ಒಟ್ಟು ೪ ಮಂದಿ ಇದ್ದಿದ್ದಿರಬೇಕು. ಆದರೆ ಅವರು ಸ್ವಲ್ಪ ’ದೊಡ್ಡ ಜನಗಳು’ ಆಗಿದ್ದರಿಂದ ಉಳಿದವರು ಕೂಡ ಓವರ್ ಆರ್ಮ್ ಕ್ರಿಕೆಟ್ ಆಡಲು ಒಪ್ಪಿಕೊಂಡರು. ಆದರೆ ನನಗೆ ಬೌಲಿಂಗ್ ಮಾಡಲು ಬರುತ್ತದೆ ಎಂದು ಹೇಳಲು ಭಯ. ಏಕೆಂದರೆ ನಮ್ಮ ತಂಡದ ಸೋಲಿಗೆ ನಾನೇ ಕಾರಣವಾದರೆ ಎಂಬುದು! ಮತ್ತೇ ಯಾವುದೋ ಒಂದು ದಿನ ಅಚಾನಕ್ ಆಗಿ ನನಗೆ ಬೌಲಿಂಗ್ ಅವಕಾಶ ಸಿಕ್ಕಿತು. ಆದರೆ ನನ್ನ ಬೌಲಿಂಗ್ ಸಾಮರ್ಥ್ಯ ಇನ್ನು ಹೊರ ಬಂದಿರಲಿಲ್ಲ. ಇದೇ ಸಂದರ್ಭದಲ್ಲಿ ನಮ್ಮಲ್ಲಿ ಮತ್ತೊಂದು ನಿಯಮ ಜಾರಿಗೆ ತಂದೆವು. ಅದೇನೆಂದರೆ ಬೌಲಿಂಗ್ ಮಾಡಲಾರದವರನ್ನು ಬ್ಯಾಟಿಂಗ್‌ಗೆ ಮೊದಲು ಕಲಿಸುವುದು ಎಂದು. ಇದೆಲ್ಲ ’ದೊಡ್ಡ ಜನಗಳ’ ಓಲೈಕೆ ತಂತ್ರಗಳಾಗಿದ್ದವು. ಇಲ್ಲ ಎಂದರೆ ಅವರು ಕ್ರಿಕೆಟ್ ಆಡಲೇ ಬರುತ್ತಿರಲಿಲ್ಲ. ಇದರಿಂದ ನನಗೆ ಬ್ಯಾಟಿಂಗ್ ಮಾಡುವ ಅವಕಾಶ ಕೂಡ ಸಿಗಲು ಆರಂಭಿಸಿದವು. ನಾನು ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಆರಂಭಿಸಿದೆ. ಬೌಲಿಂಗ್‌ನಲ್ಲಿಯೂ ಕೂಡ ಮಿಂಚುತ್ತಿದ್ದೆ. ಕವರಿಂಗ್ ಬೌಲಿಂಗ್‌ನ್ನು ಕೂಡ ಎರಡು ಕಡೆಗೂ ಸ್ವಿಂಗ್ ಮಾಡುವುದನ್ನು ಕಲಿತೆ. ಇದರಿಂದ ನಾನು ತಂಡಗಳಿಗೆ ಮೂರನೇ ಹೆಸರಾಗಿ ಸೇರುತ್ತಿದ್ದೆ. ಲೆಕ್ಕಕ್ಕೂ ಸಿಗದ ಆಟಗಾರನಾಗಿದ್ದ ನಾನು ಲೆಕ್ಕ ಚುಕ್ತ ಮಾಡುವ ಆಟಗಾರನಾದೆ.

ಇತ್ತ ಮನೆಯಲ್ಲಿಯೂ ಕ್ರಿಕೆಟ್ ಆಡಲು ಶುರು ಮಾಡಿದೆವು. ಮಾವ, ನಾನು, ಸುರೇಶ, ಹೇಮಂತ್, ಇಲಿಯಾರ್ಸ್, ಇಕ್ಬಾಲ್ ಹೀಗೆ. ಕ್ರಿಕೆಟ್ ಕೂಡ ನೋಡುತ್ತಿದ್ದೆವು, ಇದೇ ವೇಳೆ ಊರಲ್ಲಿ ಒಂದೆರಡು ಮನೆಗಳಲ್ಲಿ ಮಾತ್ರ ಟಿವಿ ಇದ್ದುದ್ದರಿಂದ ನಮ್ಮ ಮನೆಗೆ ಕ್ರಿಕೆಟ್ ಮ್ಯಾಚ್ ನೋಡಲು ಕನಿಷ್ಠ ಪಕ್ಷ ೧೫-೨೦ ಜನ ಬರುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಚರ್ಚೆಗಳು ನನಗೆ ತುಂಬಾ ಸಹಾಯ ಮಾಡುತ್ತಿದ್ದವು. ನಾನು ಟಿವಿಗಿಂತ ೩ ಅಡಿ ದೂರದಲ್ಲಿಯೇ ಕುರ್ಚಿಯಲ್ಲಿ ಕುಳಿತು ಮ್ಯಾಚ್ ನೋಡುತ್ತಿದ್ದೆ. ಈ ಕುರ್ಚಿಗಾಗಿ ನನಗೂ ನನ್ನ ಅಜ್ಜನಿಗೂ ಕುರ್ಚಿ ಕದನವೇ ನಡೆಯುತ್ತಿತ್ತು!

ಏಳನೇ ತರಗತಿ ಬಳಿಕ ನನ್ನ ಕ್ರಿಕೆಟ್ ಸುವರ್ಣಯುಗವೇ ಪ್ರಾರಂಭವಾಯಿತು. ನಾನೇ ಅನೇಕ ಸಂದರ್ಭಗಳಲ್ಲಿ ತಂಡದ ನಾಯಕನಾಗುತ್ತಿದ್ದೆ. ಮನೆಯಲ್ಲಿಯೂ ದಿನಲೂ ಕ್ರಿಕೆಟ್ ಆಡುತ್ತಿದ್ದೆ. ಹೊರಗೆ ಬೇರೆ ಬೇರೆ ಕ್ಲಬ್‌ಗಳ ಪರವಾಗಿ ಆಡಲು ಶುರುಮಾಡಿದೆ. ಒಪನಿಂಗ್ ಬ್ಯಾಟ್ಸ್‌ಮೆನ್, ಒಪನಿಂಗ್ ಬೌಲರ್ ಆಗಿ ರೂಪುಗೊಂಡೆ. ಈ ಮಧ್ಯೆ ನಾನು ದ್ರಾವಿಡ್‌ನ ಪ್ರಭಾವಕ್ಕೆ ತುತ್ತಾದೆ. ನಾನು ಆರಂಭಿಕ ಆಟಗಾರನಾಗುವುದನ್ನು ನನ್ನ ಸ್ನೇಹಿತರು ವಿರೋಧಿಸಲಾರಂಭಿಸಿದರು! ಏಕೆಂದರೆ ನಾನು ಔಟ್ ಆಗುತ್ತಿರಲಿಲ್ಲ! ಇದರಿಂದ ಅವರಿಗೆ ಬ್ಯಾಟಿಂಗ್ ಸಿಗುತ್ತಿರಲಿಲ್ಲ. ಇತ್ತ ಮನೆಯಲ್ಲಿಯೂ ಕ್ರಿಕೆಟ್ ಆಡುವುದು ದಿನಚರಿಯ ಭಾಗವೇ ಆಗಿ ಹೋಯಿತು. ನಮ್ಮ ಅಂಗಳದಲ್ಲಿ ಎರಡು ಪಿಚ್‌ಗಳಿದ್ದವು. ನಮ್ಮ ದೊಡ್ಡ ಅಂಗಳಕ್ಕೆ ಮಳೆಗಾಲದಲ್ಲಿ ತೆಂಗಿನ ಕೊತ್ತಲಿಗೆ, ಅಡಿಕೆ ಸೋಗೆ ಹಾಕುತ್ತಿದ್ದರಿಂದ ಮತ್ತೊಂದು ಸಣ್ಣ ಅಂಗಳದಲ್ಲಿ ನಾವು ಅನಿವಾರ್ಯವಾಗಿ ಆಡುತ್ತಿದ್ದೆವು. ಆದರೆ ನನಗೆ ಕೋಪ ಬರುತ್ತಿದ್ದದ್ದು ಬೇಸಿಗೆಯಲ್ಲಿ! ಏಕೆಂದರೆ ಆಗ ನಮ್ಮ ದೊಡ್ಡ ಅಂಗಳದಲ್ಲಿ ಪೂರ್ತಿ ಅಡಿಕೆ ಇರುತ್ತಿತ್ತು. ಆಗ ನಾವು ಪುನಃ ಒಲ್ಲದ ಮನಸ್ಸಿನಿಂದ ಸಣ್ಣ ಅಂಗಳಕ್ಕೆ ನಮ್ಮ ಮೈದಾನವನ್ನು ಸ್ಥಳಾಂತರಿಸಬೇಕಿತ್ತು. ಯಾಕಾದ್ರೂ ಇಷ್ಟು ಅಡಿಕೆ ಆಗುತ್ತದೆ ಎಂದು ನಾನು ಆಗ ಶಾಪ ಹಾಕುತ್ತಿದ್ದೆ!

ನಮ್ಮ ಕ್ರಿಕೆಟ್ ಆಟದ ಹುಚ್ಚು ಜಾಸ್ತಿ ಆಗುತ್ತಿದ್ದಂತೆ ಒಂದು ದಿನ ನಮ್ಮ ಅಜ್ಜಿ ನಮ್ಮ ವಿಕೆಟ್‌ಗಳನ್ನು ಒಲೆಗೆ ಹಾಕಿದ್ರು. ಆ ವಿಷಯ ಗೊತ್ತಾಗುತ್ತಲೆ ನಾವು ಕುಟ್ಟಿ ದೊಣ್ಣೆ, ಲಗೋರಿ ಆಡಲು ಶುರು ಮಾಡಿದೆವು. ಒಂದೆರಡು ದಿನಗಳ ಕಾಲ ನಮ್ಮ ಈ ಹೋರಾಟ ಚಾಲ್ತಿಯಲ್ಲಿತ್ತು ಆದ್ರೆ ಕೊನೆಗೂ ನಮಗೆ ಕ್ರಿಕೆಟ್ ಹೊರತಾದ ಮತ್ತೊಂದು ಆಟದಲ್ಲಿ ಮಜಾ ಬರುತ್ತಿರಲಿಲ್ಲ. ಮತ್ತೆ ಸ್ಟಂಪ್ಸ್ ಮಾಡಿ ಕ್ರಿಕೆಟ್ ಆಡ ತೊಡಗಿದೆವು.

ನಮ್ಮ ಮನೆಯ ಅಂಗಳಕ್ಕೆ ತಾಕಿಕೊಂಡು ಪೊದರೆಗಳು ಇದ್ದ ಕಾರಣ ಚೆಂಡು ಅಲ್ಲಿ ಬಿದ್ದು ಕಾಣದಾಗುತ್ತಿತ್ತು. ಆಗ ಚೆಂಡು ಹುಡುಕುವ ಕಾರ್ಯಕ್ರಮ! ಕೆಲವು ಬಾರಿ ಇದು ದಿನಗಟ್ಟಲೆ ಸಾಗುತ್ತಿತ್ತು. ನನ್ನ ಕೆಲವು ಸ್ನೇಹಿತರು ಚೆಂಡು ಬಿಸಾಕಿ ಹೋಗುವ ತನಕ ನಮ್ಮ ಜೊತೆ ಇದ್ದು ಆ ಬಳಿಕ ಏನೇನೋ ಸಾಬೂಬು ನೀಡಿ ಅಲ್ಲಿಂದ ಪರಾರಿಯಾಗುತ್ತಿದ್ದರು. ನಾವು ಉಳಿದವರು ಎಲ್ಲ ದೇವರ ಹೆಸರನ್ನು ಸ್ಮರಿಸಿ, ಅಜ್ಜನಿಗೆ ಎಲೆ ಅಡಿಕೆ ಇಡುತ್ತೇವೆ ಎಂದು ಹರಕೆ ಹೊರುತ್ತಾ ಚೆಂಡು ಹುಡುಕುತ್ತಿದ್ದೆವು. ಚೆಂಡು ಸಾಗಿದ ದಿಕ್ಕು, ಅದು ಯಾವ ಕಡೆ ಹಾರಿರಬಹುದು ಎಂಬ ನಮ್ಮ ಲೆಕ್ಕಾಚಾರಗಳು ಈಗ ನೆನಪಿಸಿಕೊಂಡಾಗ ನಗು ಉಕ್ಕಿಸುತ್ತವೆ. ಅದೇಷ್ಟೋ ಬಾರಿ ಕಾಲ ಬುಡದಲ್ಲೆ ಚೆಂಡಿದ್ದರು ಕೂಡ ಇಡೀ ಪೊದರೆಯನ್ನೇ ಚೆಂಡಾಡಿದ ಬಳಿಕವೇ ಆ ಚೆಂಡು ಸಿಗುತ್ತಿತ್ತು! ಚೆಂಡು ಸಿಕ್ಕಾಗ ಅಜ್ಜನ ನೆನಪೇ ಇಲ್ಲ... ಮತ್ತೇ ಪುನಃ ಅಂದು ಚೆಂಡು ಬಿಸಾಕಿ ಹೋದರೆ ಮತ್ತೇ ಅಜ್ಜನ ನೆನಪಾಗಿ ಹರಕೆ ತೀರಿಸಿ ಮತ್ತೇ ಅಜ್ಜನಿಗೆ ಹರಕೆ...

ನಾನು ಆರಂಭದಲ್ಲಿ ಹೆಚ್ಚು ಕ್ರಿಕೆಟ್ ಆಡುತ್ತಿದ್ದದ್ದು ಮಾವ ಮತ್ತು ಸುರೇಶನ ಜೊತೆ. ಸುರೇಶ ಸ್ವಲ್ಪ ದಪ್ಪನೇ ಇದ್ದ. ನಾನು ಒಮ್ಮೆ ಹೊಡೆದ ಚೆಂಡು ಅವನ ಕಣ್ಣಿಗೆ ಬಡಿದು ಅವನು ನಂತರ ಕ್ರಿಕೆಟ್ ಆಡಲು ಬರುತ್ತಲೇ ಇರಲಿಲ್ಲ. ಇಷ್ಟರಲ್ಲಿ ನನ್ನ ಮೇಲೆ ಮತ್ತೊಂದು ಆರೋಪ ಬಂದಿತ್ತು... ಅದೇ ಕೆಲಸದವರನ್ನು ಕ್ರಿಕೆಟ್ ಆಡಿಸಿ ನಾನು ಹಾಳು ಮಾಡುತ್ತಿದ್ದೇನೆ ಎಂದು...!

ಹೈಸ್ಕೂಲ್‌ನಲ್ಲಿ ಇನ್ನು ಮಜಬೂತದ ಪ್ರಸಂಗಗಳು ನಡೆಯುತ್ತಿದ್ದವು. ಅಲ್ಲಿ ನಮ್ಮ ಪಿಟಿ ಮಾಸ್ಟ್ರಿಗೆ ಕ್ರಿಕೆಟ್ ಅಂದರೆ ಅಷ್ಟಕಷ್ಟೆ. ಅವರು ನಮಗೆ ಬ್ಯಾ ಟ್, ಸ್ಟಂಪ್ ಕೊಡುತ್ತಿರಲಿಲ್ಲ. "ಹೋಗಿ ವಾಲಿಬಾಲ್ ಆಡಿ" ಅನ್ನುತ್ತಿದ್ದರು. ನಮಗೆ ಆಗ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು ಆದರೆ ಏನು ಮಾಡಲು ಆಗುತ್ತಿರಲ್ಲಿಲ್ಲ. ಆಗ ನಾವು ಹೆಚ್‌ಎಮ್‌ನ್ನು ಭೇಟಿಯಾಗಿ ಅವರ ಮನ ಒಲಿಸಲು ಏನೆಲ್ಲ ಮಾಡಬೇಕೋ ಅದೆಲ್ಲ ಮಾಡಿ ಸ್ಟಂಪ್ಸ್, ಬ್ಯಾಟ್ ತೆಗೆದುಕೊಳ್ಳುತ್ತಿದ್ದೆವು. ಇನ್ನು ಚೆಂಡು ಮೊದಲಿನಿಂದಲೂ ನಾವೇ ಹಣ ಹಾಕಿ ತೆಗೆದುಕೊಳ್ಳುತ್ತಿದ್ದೆವು. ಈ ವಿಷಯದಲ್ಲಿ ನಮ್ಮದು ಸಹಕಾರಿ ಬ್ಯಾಂಕ್ ತತ್ವ.

ನಮ್ಮ ತಂಡ ಅದೇಷ್ಟು ಬಲಿಷ್ಠವಾಗಿತ್ತೆಂದರೆ ನಾವು ೮ನೇ ತರಗತಿಯಲ್ಲಿ ಇರುವಾಗ ೧೦ನೇ ತರಗತಿಯವರಿಗೂ ನಮ್ಮನ್ನು ಸೋಲಿಸಲಾಗುತ್ತಿರಲಿಲ್ಲ! ಈ ಸಂದರ್ಭದಲ್ಲಿ ಬಹುತೇಕ ನಾನು ಆರಂಭಿಕ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಆದರೆ ಒವರ್‌ಗಳ ಸಂಖ್ಯೆ ಒಂದು ಅಥವಾ ಎರಡು ಇದ್ದರೆ ನಾನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ ಬೇಕಿತ್ತು. ಇದಕ್ಕೆ ಕಾರಣ ನನಗೆ ಆಗ ಗೊತ್ತಿರಲಿಲ್ಲ ಆದರೆ ಈಗ ಗೊತ್ತಾಗಿದೆ. ಟೆನ್ನಿಸ್ ಬಾಲ್‌ನ ಬ್ಯಾಟಿಂಗ್ ನಿಂತಿರುವುದೇ ಪವರ್ ಸ್ಟ್ರೋಕ್‌ನ ಮೇಲೆ. ನಾನು ಶಕ್ತಿಶಾಲಿ ಹೊಡೆತಗಳ ಆಟಗಾರನಾಗಿರಲಿಲ್ಲ. ನನ್ನದೇನಿದ್ದರು ಟೆಕ್ನಿಕ್ ಅಷ್ಟೆ. ನನ್ನ ಸ್ವೀಪ್ ಮಾತ್ರ ಬಲಿಷ್ಠ ಹೊಡೆತವಾಗಿರುತ್ತಿತ್ತು. ಆದರೆ ನಮ್ಮ ಹೈಸ್ಕೂಲಿನಲ್ಲಿ ಲೆಗ್ ಸೈಡ್‌ನ ಬೌಂಡರಿ ಗೆರೆ ತುಂಬ ದೂರದಲ್ಲಿತ್ತು. ಆಲ್ಲಿ ಹೆಚ್ಚಿನ ಫಿಲ್ಡರ‍್ಸ್‌ಗಳು ಇರುತ್ತಿದ್ದರು. ಅದ್ದರಿಂದ ನನಗೆ ಕಟ್ಟಿ ಹಾಕಿದಂತಾಗುತ್ತಿತ್ತು. ಆಗ ನಾನು ಥೇಟ್ ದ್ರಾವಿಡ್ ಶೈಲಿಯಲ್ಲೆ ಮುಂದೆ ಬಂದು ಗಲ್ಲ ಕಚ್ಚಿ ಬಾಲ್‌ನ್ನು ಕವರ್‌ಡ್ರೈವ್ ಮಾಡುತ್ತಿದ್ದೆ. ಒಂದೆರಡು ರನ್ ಆಗ ಗ್ಯಾರಂಟಿ ಸಿಗುತ್ತಿತ್ತು. ಮಳೆಗಾಲದಲ್ಲಿ ಅದು ಮೂರು ರನ್ ಆಗುತ್ತಿತ್ತು! ಏಕೆಂದರೆ ನಮ್ಮ ಹೈಸ್ಕೂಲ್‌ನ ಕವರ‍್ಸ್ ಕ್ಷೇತ್ರದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿತ್ತು ಮತ್ತು ಅಲ್ಲಿ ಜಾರುತ್ತಿತ್ತು ಅದ್ದರಿಂದ ಫಿಲ್ಡಿಂಗ್ ಮಾಡಲು ಕಷ್ಟವಾಗುತ್ತಿತ್ತು!

ನಾವು ೯ನೇ ತರಗತಿಗೆ ಬಂದ ಬಳಿಕ ಟೆಸ್ಟ್ ಆಡಲು ಶುರು ಮಾಡಿದೆವು. ಒಂದು ಪಂದ್ಯದಲ್ಲಿ ನಾನು ಮೂರನೇ ಕ್ರಮಾಂಕದಲ್ಲಿ ಇಳಿದಿದ್ದೆ. ನಾವು ಪಂದ್ಯ ಗೆಲ್ಲಬೇಕು ಅಂದರೆ ೧೩೬ ರನ್ ಮಾಡಬೇಕಿತ್ತು. ನಮ್ಮ ತಂಡ ೨೯ ರನ್ನಿಗೆ ೯ ವಿಕೆಟ್ ಕಳೆದುಕೊಂಡಿತ್ತು. ನಾನು ಆ ಪಂದ್ಯವನ್ನು ಗೆಲ್ಲಿಸಿದ್ದೆ ಎಂದರೆ ಇಂದಿಗೂ ನಂಬಲಾಗುತ್ತಿಲ್ಲ...! ಅಂದು ನಾನು ಆಡಿದ್ದು ಎರಡೇ ಕಡೆಗೆ ಒಂದು ಪೈನ್ ಲೆಗ್‌ನತ್ತ ಮತ್ತೊಂದು ಕವರ‍್ಸ್‌ನತ್ತ... ನಮ್ಮಲ್ಲಿ ಫೈನ್ ಲೆಗ್‌ನ ಕಡೆ ಹೈಸ್ಕೂಲ್‌ನ ಕಟ್ಟಡವಿದ್ದುದ್ದರಿಂದ ಅತ್ತ ಚೆಂಡು ಹೋದರೆ ೨ ರನ್ ಓಡದಿದ್ದರೂ ಸಿಗುತ್ತಿತ್ತು ಹಾಗೆ ಕವರ‍್ಸ್‌ನ ಕತೆ ನಾನು ನಿಮಗೆ ಮೊದಲೇ ಹೇಳಿದ್ದೇನೆ. ಕೊನೆಯ ಎಸೆತ ಸಿಂಗಲ್ಸ್ ತೆಗೆಯುತ್ತಿದ್ದೆ. ಕೆಲ ಸಂದರ್ಭದಲ್ಲಿ ಅದು ಅಗುತ್ತಿರಲ್ಲಿಲ್ಲ. ಆದರೂ ನಾವು ಗೆದ್ದೆವು...

ನಮ್ಮ ಮನೆಗೆ ಮ್ಯಾಚ್ ನೋಡಲು ಬರುತ್ತಿದ್ದವರಲ್ಲಿ ದ್ರಾವಿಡ್‌ರನ್ನು ಇಷ್ಟ ಪಡುತ್ತಿದ್ದವರು ತುಂಬ ಕಡಿಮೆ. ‘ಅವನೇನು ಕುಟ್ಟುತ್ತಾನೆ’ ಎಂಬುದೇ ಅವರ ಭಾವನೆ. ಕೆಲವೊಮ್ಮೆ ನನಗೂ ಹಾಗೆ ಅನಿಸುತ್ತಿತ್ತು. ಆದರೆ ಆ ಬಳಿಕ ಕ್ರಿಕೆಟ್ ಆಡುತ್ತಾ ಹೋದಂತೆ ನನಗನಿಸಿದ್ದು ಕೆಂಡದ ಮೇಲೆ ನಡೆಯುವುದಕ್ಕಿಂತ ಓಡುವುದು ಸುಲಭ ಅಂದರೆ ೧೫ ಎಸೆತದಲ್ಲಿ ೩೦ ರನ್ ಮಾಡುವುದಕ್ಕಿಂತ ೩೦ ಎಸೆತದಲ್ಲಿ ೧೫ ರನ್ ಮಾಡುವುದು ಕಷ್ಟ ಎಂದು ಗೊತ್ತಾಯಿತು. ಆದರೆ ಇದು ಏಕದಿನ ಪಂದ್ಯಗಳಿಗೆ ಹೇಳಿ ಮಾಡಿಸಿದ್ದಲ್ಲ ನಿಜ. ಆದರೆ ದ್ರಾವಿಡ್ ಒಮ್ಮೆ ಸೆಟ್ ಆದರೆ ಆ ಬಳಿಕ ಈ ಬಾಲ್ ಮತ್ತು ರನ್‌ನ ನಡುವಿರುತ್ತಿದ್ದ ಅಂತರ ಕಡಿಮೆ ಆಗಿರುತ್ತಿತ್ತು. ಈ ಸಿದ್ಧಾಂತ ಮುಂದೆ ನನ್ನನ್ನು ತುಂಬ ಪ್ರಭಾವಿಸಿತು. ಏನೇ ಆಗಲಿ ಮೊದಲು ನಿಲ್ಲು, ಅಮೇಲಿನದ್ದು ಅಮೇಲೆಗೆ ಅನ್ನುವುದನ್ನು ಕಲಿತೆ. ಒಂದಲ್ಲ ಒಂದು ಕೆಟ್ಟ ಎಸೆತ ಬಂದೆ ಬರುತ್ತೆ ಆಗ ನೀನು ರನ್ ಮಾಡಬಹುದು ಹಾಗೆಯೇ ನೀನು ಒಮ್ಮೆ ಸೆಟ್ ಆದರೆ ಆ ಬಳಿಕ ಕೆಟ್ಟ ಎಸೆತವನ್ನು ಕೂಡ ನಿನ್ನ ಒಳ್ಳೆದಕ್ಕೆ ಬಳಸಿಕೊಳ್ಳಬಹುದು.

ನಾನು ನನ್ನ ಕ್ಲಬ್‌ಗೆ ಆಡಿದ ಪ್ರಥಮ ಪಂದ್ಯದಲ್ಲೆ ಮ್ಯಾನ್ ಅಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡೆ. ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನವನ್ನೆ ನೀಡಿದೆ.

ಆದರೆ ನನ್ನ ಹೈಸ್ಕೂಲ್ ಶಿಕ್ಷಣ ಮುಗಿದ ಬಳಿಕ ನನಗೆ ಕ್ರಿಕೆಟ್ ಆಡುವ ಅವಕಾಶ ಸಿಗುತ್ತಿರಲಿಲ್ಲ. ಕಾಲೇಜ್ ಬಿಟ್ಟು ಬರುವಾಗ ತಡವಾಗಿರುತ್ತಿತ್ತು. ಆದರೆ ಮನೆಯಲ್ಲಿ ಆಡುತ್ತಿದ್ದೆವು. ಆದರೆ ನನಗೆ ಅದು ಸಾಕಾಗುತ್ತಿರಲಿಲ್ಲ. ಡಿಗ್ರಿಗೆ ಬಂದ ಬಳಿಕವಂತೂ ಕ್ರಿಕೆಟ್ ಆಡುವುದು ಅಪರೂಪವಾಯಿತು. ಪಿಜಿಗೆ ಬಂದ ಬಳಿಕವಂತೂ ನಿಂತೇ ಹೋಯಿತು.

ಇವತ್ತು ಚೆಂಡು ಬ್ಯಾಟ್‌ಗೆ ಕನೆಕ್ಟ್ ಮಾಡಲೇ ಪರದಾಡಬೇಕಿದೆ. ಕ್ಯಾಚ್ ಹಿಡಿಯವಾಗ, ಫಿಲ್ಡ್ ಮಾಡುವಾಗ ಮೊದಲಿನ ಆತ್ಮವಿಶ್ವಾಸವಿಲ್ಲ, ಬೌಲಿಂಗ್‌ನಲ್ಲೂ ಮೊದಲಿನ ಹಿಡಿತವು ಇಲ್ಲ. ಕಳೆದ ಫೆಬ್ರ್ರುವರಿಯಲ್ಲಿ ಕನ್ನಡ ಸಂಘದ ವತಿಯಿಂದ ಕ್ರಿಕೆಟ್ ಪಂದ್ಯ ಆಯೋಜಿಸಿದಾಗ ನಾನು ಆಡಲು ತುಂಬ ಕಷ್ಟ ಪಟ್ಟಿದ್ದೆ.

Tuesday, September 6, 2011

ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... !

ಇವತ್ತು ಎಲ್ಲಿಂದ ರಿಕ್ಷಾ ಹತ್ತೋದು... ನಮ್ಮೂರಿನ ರಿಕ್ಷಾಕ್ಕೂ ಇಲ್ಲಿನ ರಿಕ್ಷಾಕ್ಕೂ ತುಂಬಾ ವ್ಯತ್ಯಾಸವಿದೆ. ನಮ್ಮೂರಲ್ಲಿ ಜೀಪಲ್ಲಿ ೧೦ ರಿಂದ ೧೫ ಜನ ಕೂತರೆ ಇಲ್ಲಿ ರಿಕ್ಷಾದಲ್ಲೇ ೧೫ ಜನ ಆರಾಮವಾಗಿ ಕೂತುಕೊಳ್ಳುತ್ತಾರೆ... ಇಲ್ಲಿಗೂ ಜೀಪ್ ಬಂದಿದ್ರೆ ಒಳ್ಳೇದಿತ್ತಲ್ಲ... ಹುಂ ಆದ್ರೆ ಇದು ಮೈದಾನ ಪ್ರದೇಶ... ಸಮತಟ್ಟಾದ ನೆಲ... ನಮ್ಮೂರು ಹೀಗೆ ಸಮತಟ್ಟಾದ ನೆಲವಲ್ಲ... ಇಲ್ಲೇ ಮಹಾಭಾರತ ನಡೆದದ್ದು... ಇಲ್ಲಿಗೆ ಕೃಷ್ಣ ಬಂದಿದ್ನಾ... ಯಾವ ರಿಕ್ಷಾ ಹತ್ತೋದು... ಇವತ್ತು ಸಂಜೆ ಕೂದಲು ತೆಗಿಬೇಕು... ಮುಂದೆ ಹೋಗಿ ಹತ್ತೋದ ಅಥವಾ ಇಲ್ಲೆ... ನೋಡುವ... ಇದೇ ರಿಕ್ಷಾ... ಅವನೇ ನಿಲ್ಲಿಸಿದ... ಸೈಡ್‌ಗೆ ಕೂರೋಕ್ಕೆ ಇವನು ಬಿಡ್ತಾ ಇಲ್ವೇ... ತೊಂದ್ರೆಯಿಲ್ಲ... ನಡುವಲ್ಲೇ ಕೂರೋಣ... ಹುಂ.. ಐದು ನಿಮಿಷ ಕೂರುವ ಸೀಟಿಗೆ ನಮ್ಮದು ಇಷ್ಟು ತಾಕಲಾಟ... ಹಾಗಾದ್ರೆ ನಾವು ರಾಜಕೀಯದವರಿಗೆ ಬೈಯ್ಯೋದು... ಇವನು ಎಡೆಯಲ್ಲಿ ಇಳಿತಾನೋ ಏನೋ... ಈ ನೋಯ್ಡಾ ಪ್ಲ್ಯಾನ್ಡ್ ಸಿಟಿ ಅಂತಾರೆ... ಆದರೂ ಇಲ್ಲಿ ಒಂದು ಕಡೆಯೂ ಚರಂಡಿ ಇಲ್ಲ.. ಮಳೆ ಬಂದಾಗ ರಂಬಾರೊಟ್ಟಿ ಆಗುತ್ತೆ... ಲಾಸ್ಟ್ ಟೈಮ್ ಆಗಿತ್ತು... ಹುಂ ಇಲ್ಲಿ ಅದೇ ಭಾರಿ ಮಳೆಯಂತೆ... ನನಗೆ ಅದು ಒಂದು ಚಮಚಾದಷ್ಟು ಮಳೆ ಅನಿಸಿತ್ತಲ್ಲಾ.... ಅದು ಬೇರೆ... ಇದು ಬೇರೆ... ನಮ್ಮೂರಿನ ರೀತಿಯೇ ಇಲ್ಲೂ ಇರೋದಾದ್ರೆ... ಇದನ್ನು ನೋಯ್ಡಾ ಎಂದು ಏಕೆ ಕರಿಬೇಕು? ಆದ್ರೂ ಇಲ್ಲಿ ಮಾರ್ಗದ ಬದಿಯೆಲ್ಲ ಗಿಡ ನೆಟ್ಟಿದ್ದಾರೆ... ಕೆಲ ಗಿಡಗಳು ಮರ ಆಗಿವೆ... ಸುಮಾರು ೪ ವರ್ಷದ ಹಿಂದೆ ನೆಟ್ಟಿರಬೇಕು... ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಲ್ಲಿ ಮರ ಕಡಿಯುತ್ತಾರೆ... ಇಲ್ಲಿ ಗಿಡ ನೆಟ್ಟಿದ್ದಾರೆ.... ಒಂದು ಹಳೆ ನಗರವನ್ನು ಯೋಜಿತವಾಗಿ ಅಭಿವೃದ್ಧಿ ಮಾಡೋದು ಕಷ್ಟ... ಆದೇ ಹೊಸ ನಗರ ಕಟ್ಟೋದು ಎಷ್ಟು ಸುಲಭ... ಹುಂ... ಮಾಯಾವತಿ ನಿಜಕ್ಕೂ ಗ್ರೇಟ್... ತನ್ನ ಮೂರ್ತಿ ಹಾಕಲಾದರೂ ಚಂದ ಚಂದದ ಗಾರ್ಡನ್ ಮಾಡ್ತಾಳೆ... ನಮ್ಮ ಆಫೀಸ್ ಪಕ್ಕದ ಗಾರ್ಡನ್ ಎಷ್ಟು ಚಂದ ಇದೆ... ಅಲ್ಲಿ ಸೂರ್ಯ ಮುಳುಗೋದು ನೋಡೋದು ಎಷ್ಟು ಚಂದ... ಹೌದು... ನಾನು ಯೋಚನೆ ಮಾಡೋದು ಯಾವ ಭಾಷೆಯಲ್ಲಿ ಕನ್ನಡದಲ್ಲಾ... ಅಲ್ಲಾ ತುಳುವಿನಲ್ಲ... ಎರಡರಲ್ಲೂ ಮಾಡುತ್ತೇನೆ... ಇಲ್ಲ... ನನಗೆ ಹಾಗಾದ್ರೆ ಎರಡು ಮಾತೃಭಾಷೆ... ತಾಯಿ ಎಷ್ಟು ಬೇಕಾದರೂ ಇರಲಿ... ತುಂಬ ಇದ್ರೆ ತುಂಬಾ ಒಳ್ಳೆಯದು... ಆದ್ರೆ... ತಂದೆ ಒಬ್ಬನೇ ಇರಬೇಕು... ನನಗೆ ಯಾರದರೂ ಇವನು ನನ್ನ ಮಗನ ಸಮಾನ ಅಂದಾಗ ಎಷ್ಟು ಕೋಪ ಬರುತ್ತೆ... ಹಾಗೇ ಹೇಳುವವರು ಹೆಚ್ಚಾಗಿ ದೊಡ್ಡ ಲೋಫರ್‌ಗಳಾಗಿರುತ್ತಾರೆ... ಅದೇ ಅವತ್ತು ಕೃಷ್ಣಪ್ಪಣ್ಣ ಆಂದಾಗ ಎದ್ದು ಜಾಡಿಸಿ ಒದೆಯುವಷ್ಟು ಕೋಪ ಬಂದು ಸರಿ ಬೈಯ್ದಿದ್ದೆ... ನಾನು ಬೈಯ್ಯೋದು ಕಡಿಮೆ... ಆದ್ರೂ ಅವತ್ತು ಅಷ್ಟೂ.... ಇನ್ನೂ ಕೆಲ ಹುಡುಗೀರೂ ಅಣ್ಣಾ ಎಂದು ಕರೆಯುತ್ತಾರೆ.... ಅವರು ನನಗೆ ಯಾವತ್ತೂ ತಂಗಿಯರ ರೀತಿ ಕಂಡಿಲ್ಲ... ಇನ್ನೂ ನಾನು ಕೂಡ ಅವರಿಗೆ ಅಣ್ಣನ ರೀತಿಯಿಲ್ಲ ಅನ್ನೋದು ಗೊತ್ತು... ಆದ್ರೂ ನಾಟ್ಕ ಮಾಡುತ್ತಾರೆ...ಬದ್ಮಾಶ್‌ಗಳು... ನಾನು ಸಂಬಂಧಿಕರನ್ನು ಬಿಟ್ಟು ಬೇರೆ ಯಾರನ್ನೂ ಸಂಬಂಧದ ಹೆಸರಲ್ಲಿ ಕರೆದಿಲ್ಲ... ನಾನು ಅಕ್ಕ ಎಂದು ಕರೆದದ್ದು ಸಂಧ್ಯಾ, ರಶ್ಮಿ, ವಿದ್ಯಾ ಮತ್ತು ಪ್ರಸೀನಾರನ್ನು ಮಾತ್ರ... ಹೌದು... ಆ ಟೈಮ್ ನಿಜಕ್ಕೂ ನನ್ನ ಸುವರ್ಣ ಯುಗ... ನಂ ಬಸ್... ಈ ರಿಕ್ಷಾದಲ್ಲಿ ಮಳೆಯನ್ನು ಎನ್‌ಜಾಯ್ ಮಾಡೋಕ್ಕೂ ಆಗೋದಿಲ್ಲ... ಅದೇ ನಮ್ಮೂರಲ್ಲಿ ಆ ಬಸ್‌ನಲ್ಲಿ... ಕಿಟಕಿ ಬಾಗಿಲು ತೆರೆದು ಅದು ಎಂತಹ ಮಳೆ ಬಂದ್ರೂ... ಹನಿ ಹನಿ ನೀರು ಮುಖಕ್ಕೆ ಬಡಿಯುತ್ತಿದ್ದದ್ದು... ಆಗಲೇ ತಾನೇ ನನಗೂ ಅವಳಿಗೂ ಶುರುವಾಗಿದ್ದು... ನಮ್ಮೂರಿನ ಮಳೆಗೆ ಏನೋ ಚೆಲುವಿದೆ.... ಈ ಬಸ್‌ನಿಂದಾಗಿ ನನ್ನರೆಡು ಶರ್ಟ್ ಬಿಸಾಕುವ ಹಾಗೇ ಅಗಲಿಲ್ವಾ... ಆಯಿಲ್... ಹುಂ... ಆದೂ ಬ್ರ್ಯಾಂಡೆಡ್... ನನ್ನ ಮಾವನಿಗೆ ಬ್ರ್ಯಾಂಡೆಡ್ ಡ್ರೆಸ್ ಆಗಬೇಕು... ಇಲ್ಲ ಅಂದ್ರೆ ಬಿಸಾಕುತ್ತಾರೆ... ನಾನು ಸಧ್ಯ ಬ್ರ್ಯಾಂಡೇಡ್ ಡ್ರೆಸ್ ತೆಗೆದುಕೊಂಡಿಲ್ಲ... ಇನ್ನೂ ತೆಗೆದುಕೊಳ್ಳುವುದಾದರೆ ಬ್ರ್ಯಾಂಡೇಡ್ ತಗೋಬೇಕು...ಹೋ ಅವಳು ಚಂದ ಇದ್ದಾಳೆ... ನಮ್ಮ ಗಾಡಿಯೇ ಹತ್ತುತ್ತಾಳೆ... ನನ್ನ ಪಕ್ಕನೇ ಕೂ... ನೋಡು ಹುಡುಗಿಗೇ ಹೇಗೆ ಜಾಗ ಮಾಡಿಕೊಟ್ಟ... ಲೋಫರ್... ಅವಳನ್ನು ಮಧ್ಯ ಕೂರಿಸಿರುತ್ತಿದ್ದರೆ ಅವನಿಗೆ ಏನಾಗುತ್ತಿತ್ತು.... ಅವಳೇನೋ ರೆಡಿ ಇದ್ದಳು... ಇವನೇ ಮಂಗ... ಈ ಹುಡುಗೀರ ನೆರಳು ಕಂಡ್ರೇ ಸಾಕು ಹುಡುಗರು ಸ್ವಾರ್ಥಿಗಳಾಗುತ್ತಾರೆ... ಇವರ ಜನ್ಮಕ್ಕಿಷ್ಟು... ಹೊಸದು ಗಾಗಲ್ ತಗೋಬೇಕು... ಏನಿವತ್ತು ರಾಮಕೃಷ್ಣ ಮೆಸೆಜ್ ಮಾಡಿಲ್ಲ.... ಹೆಚ್ಚಾಗಿ ಆತ ಬೆಳಿಗ್ಗೆ ೬ ಗಂಟೆಗೆ ಮೆಸೆಜ್ ಮಾಡೋನು... ಏನೋ ಬ್ಯುಸಿ ಇರಬೇಕು... ಹುಂ... ಎಲ್ಲರೂ ಬ್ಯುಸಿ ಆಗುತ್ತಿದ್ದಾರೆ... ಆದ್ರೆ ನಾನು.... ಇಲ್ಲ, ಯಾರೂ ಬ್ಯುಸಿ ಆಗೋದಿಲ್ಲ... ಬ್ಯುಸಿ ಆಗೀರೋರ್ ತರ ತೋರಿಸಿಕೊಳ್ಳುತ್ತಾರೆ... ನಾನು ಮೆಸೇಸ್ ಮಾಡೋದು ಕಡಿಮೆ ಆಗಿದೆ... ಅದು ನಾನು ಬ್ಯುಸಿ ಅಂತೇನು ಅಲ್ಲ... ನಾನು ಅದೇಷ್ಟು ಬ್ಯುಸಿ ಇದ್ದರು ಪ್ರೀತಿ ಇರೋರಿಗೆ ಮೆಸೆಜ್ ಮಾಡಿಯೇ ಮಾಡುತ್ತೇನೆ.... ಬೇಕಾದ್ರೆ ನನ್ನ ಪ್ರೀತಿ ಕಡಿಮೆ ಆಗಿದೆ ಅಂದ್ರೆ ಒಪ್ಪಿಕೊಳ್ಳುತ್ತೇನೆ... ಆದ್ರೆ ಕೊಡಲು ಸಮಯವಿಲ್ಲ... ಬ್ಯುಸಿ ಅನ್ನೋ ಕಾರಣ ನಾ ಕೊಡೋದೆ ಇಲ್ಲ... ಜಸ್ಟ್ ಲವ್ ಮ್ಯಾಟರ‍್ಸ್ ಡೀಯರ‍್ಸ್... ಅಲ್ಲ ಈ ಮನುಷ್ಯರಿಗೆ ಪ್ರೀತಿ, ಗೆಳೆತನ ಮತ್ತು ಗಂಡ ಹೆಂಡ್ತಿ ಸಂಬಂಧಕ್ಕಿರುವ ವ್ಯತ್ಯಾಸವೇ ಗೊತ್ತಿಲ್ಲ... ಒಬ್ಳು ಒಳ್ಳೆ ಫ್ರೇಂಡ್ ಅಂದರೆ ಅವಳನ್ನೇ ಲವರ್ ಅಂತ ಅಂದ್ಕೋತಾರೆ ಅನಂತರ ಮದುವೆ ಆಗ್ಬೇಕು ಅಂತ ಬಯಸ್ತಾರೆ... ಕೆಲವರು ಆಗುತ್ತಾರೆ ಕೂಡ... ಅದು ಹೇಗೆ ಸಾಧ್ಯ... ಫ್ರೇಂಡ್, ಲವರ್ ಮತ್ತು ಹೆಂಡ್ತಿ ಮಧ್ಯೆ ವ್ಯತ್ಯಾಸವಿಲ್ವಾ...? A = B, B=C THERE FOR A=C ಆಗುವುದು ಮ್ಯಾತ್ಸ್‌ನಲ್ಲಿ ಮಾತ್ರ. ಭಾವನೆ, ಸಂಬಂಧಗಳ ವಿಷಯದಲ್ಲಿ ೨+ ೨=೪ ಅಂತ ಸ್ಪಷ್ಟವಾಗಿ ಕೈ ತೋರಿಸಿ ಹೇಳಲಿಕ್ಕಾಗುತ್ತಾ? ಆದರೂ ಈ ಜನಗಳು ಸಂಬಂಧಗಳನ್ನು ಕಲಸುಮೆಲೋಗರ ಮಾಡಿಕೊಂಡು ಕೊನೆಗೊಂದು ದಿನ ಪರಿತಪಿಸುತ್ತಿರುತ್ತಾರೆ... ಕರ್ಮದವರು.... ಗೆಳತಿ=ಹೆಂಡ್ತಿ .... ಎಂತಹ ಡೆಡ್ಲಿ ಕಾಂಬಿನೇಷನ್! ಈ ಕುಂಬ್ಳೆ ಬಗ್ಗೆ ನನಗೆ ಮೊದಲು ಗೌರವವಿತ್ತು... ಆದ್ರೆ ಈಗ ಎಲ್ಲ ಕಳ್ಕೊಂಡು ಬಿಟ್ಟ... ಸುಮ್ಮನಿದ್ದರೆ ಅವನ ಹುಳುಕುಗಳು ಅಲ್ಲಿಂದಲ್ಲಿಗೆ ಮುಚ್ಚಿ ಹೋಗುತ್ತಿತ್ತು... ಆದ್ರೆ ಬೇಡದಕ್ಕೆ ಕೈ ಹಾಕಲು ಹೋಗಿ ಅವನೇ ಬೇಡದವನು ಆಗುತ್ತಿದ್ದಾನೆ...ಕರ್ಮ ಕರಗುತ್ತಿದೆ ಕನಸಿನ ಬಣ್ಣ... ಈ ಸೆಟ್‌ನಲ್ಲಿ ತುಂಬ ಬೇಡದ ನಂಬರ್ ಸೇರಿಕೊಂಡಿವೆ... ಎಲ್ಲ ತೆಗಿಬೇಕು... ಆಗ ಒಂಚೂರು ಸುಲಭವಾಗುತ್ತೆ... ಮೊನ್ನೆಯಷ್ಟೆ ಒಂದಷ್ಟು ಹೆಸರನ್ನು ಡಿಲಿಟ್ ಮಾಡಿದ್ದೆ....ಹತ್ತಿರ ಹತ್ತಿರ ೯೦೦ ನಂಬರ್‌ಗಳಿದ್ದವು... ಇನ್ನೀಗ ಕೆಲವು ಇವೆ.... ಈ ಮನುಷ್ಯರ ಹಣೆ ಬರಹ ಗೊತ್ತಾಗುವುದು ಸಾವಿನಲ್ಲಿ... ಇದರಲ್ಲಿ ಈಗ ಏಳೆಂಟು ಅಕ್ಷತಾನವರ ನಂಬರ್ ಇದೆ... ನಾನು ರೆಗ್ಯುಲರ್ ಆಗಿ ಕಾಂಟ್ಯಾಕ್ಟ್ ಇಟ್ಟುಕೊಂಡಿರುವುದು ಇಬ್ಬರಲ್ಲಿ ಮಾತ್ರ... ಸೋ ಉಳಿದ ನಂಬರ್‌ಗಳು ಯಾಕೆ.... ಡಿಲೀಟ್ ಮಾಡೋದೆ.... ಹೌದು ಇಲ್ಲ ಅಂದರೆ ಕೆಲವು ಸಲ ತಪ್ಪಿ ಮೆಸೇಜ್ ಹೋಗುತ್ತೆ... ಆ ರೀತಿ ಆಗಬಾರದು... ಅಯ್ಯೋ ಇನ್ನು ಇಲ್ಲಿ ಇಳಿಬೇಕಾ.... ಹುಂ ನೆಕ್ಸ್ಟ್ ಎಲ್ಲಿ ರಿಕ್ಷಾ ಹತ್ತುವುದು... ಕ್ರಾಸ್‌ನಲ್ಲಿಯಾ ಅಥವಾ ಸ್ಟ್ಯಾಂಡ್‌ನಲ್ಲಿಯಾ... ನೋಡೋಣ.... ಅಲ್ಲಿಗೆ ಹೋಗಿ... ಹೋ ಕ್ರಾಸ್‌ನಲ್ಲೇ ರಿಕ್ಷಾ ರೆಡಿ ಇದೆ... ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... ನಾನು ಎಷ್ಟೇ ಕೆಟ್ಟವನಾದರೂ ಕೂಡ ವರ್ಷಗಟ್ಟಳೆ ಶಿಕ್ಷೆ ಪಡೆಯುವ ಯಾವ ಕೆಲಸ ಕೂಡ ಮಾಡುತ್ತಿರಲಿಲ್ಲ... ಅದು ಗ್ಯಾರಂಟಿ... ಆದರೆ ಒಳ್ಳೆ ಹುಡುಗ ಎಂದು ಕರೆಸಿಕೊಂಡು ೪ ವರ್ಷಗಳ ಕಾಲ ಅದೇಷ್ಟು ಹಿಂಸೆ ಪಟ್ಟಿಲ್ಲ... ಆದರೂ ನಾನು ಅದರಿಂದ ತುಂಬ ಗಟ್ಟಿಯಾದೆ ಎಂದೆನಿಸುವುದಿಲ್ವಾ.... ಹುಂ ಗಟ್ಟಿಯೇನೋ ಆದೆ... ಆದರೆ ಕಳಕೊಂಡದ್ದು... ನಾನು ಆಪಾತ್ರರಿಗೆ ಒಂದು ಪೈಸೆಯೂ ಕೊಡಬಾರದು ಎಂದೆ ನಿರ್ಧರಿಸಿಕೊಂಡವನು... ಈಗ ಯಾವೊಂದು ಚಿಂತೆಯಿಲ್ಲದೆ... ಆಬ್ಬಾ ಆರಾಮ... ಹೇ... ಇದರರ್ಥ ನಾನು ಈ ಹಿಂದೆ ಚಿಂತೆ ಮಾಡುತ್ತಿದ್ದೆ ಅಂತ ಆಗುತ್ತಾ...? ಇಲ್ಲ ನನಗೆ ಸ್ಪಷ್ಟವಾಗಿ ಗೊತ್ತಿರುತ್ತೆ... ಯಾವ ಸಂಬಂಧ ಎಲ್ಲಿ ತನಕ ಅಂತ... ನಾನು ಪ್ರವಾದಿ ರೀತಿಯಲ್ಲಿ ಈ ೮ ತಿಂಗಳ ಹಿಂದೆಯೇ ಅವಳ ಜೊತೆ ಏಪ್ರಿಲ್‌ನಲ್ಲಿ ನಮ್ಮ ಸಂಬಂಧ ಮುರಿದು ಬೀಳುತ್ತೆ ಅಂತ ಹೇಳಿರಲಿಲ್ವಾ... ಹಾಗೆಯೇ ಆಯಿತಲ್ವಾ? ಈ ಕಾರಣಕ್ಕೆ ಮತ್ತು ಈ ಧೈರ್ಯದಿಂದಲೇ ಇರಬೇಕು ನಾನು ಸಿಕ್ಕಾಪಟ್ಟೆ ಫ್ಲರ್ಟ್ ಮಾಡುವುದು... ವೇದದ ಸಾಲಿರಬೇಕು... ಯಾವುದಕ್ಕೂ ಅಂಟಿಕೊಳ್ಳಬಾರದು... ಅಂಟಿಕೊಳ್ಳುವಿಕೆಯೇ ದುಃಖಕ್ಕೆ ಕಾರಣ ಅಂತ... ಅದನ್ನೇ ಶಿರಸಾ ವಹಿಸಿ ಪಾಲಿಸಿಕೊಂಡು ಬರುತ್ತಿದ್ದೇನೆ... ಇವತ್ತು ನನ್ನಿಂದ ಯಾರು ದೂರವಾದರೆ ನನಗೆ ನೋವಗಬಹುದು.... ಯಾರಿಲ್ಲ... ಆದರೆ ಎಲ್ಲರೂ ದೂರವಾದರೆ ಖಂಡಿತಾ ನೋವಾಗುತ್ತದೆ... ನನ್ನ ಪರ್ಯಾಯ ಮೂಲಗಳು ಗಟ್ಟಿಯಾಗಿವೆ... ಆದ್ದರಿಂದ ಡೊಂಟ್ ವರಿ... ಈಗ ಏನೇ ಆಗಲಿ ಹುಚ್ಚು ಹಿಡಿದವರ ರೀತಿ ಓದುತ್ತಿದ್ದೇನೆ... ಓದುವುದಂತೂ ನಾನು ತುಂಬ ಮಾಡುತ್ತಿದ್ದೇನೆ ಆದರೆ ಆಧ್ಯಯನ... ಇಲ್ಲವೇ ಇಲ್ಲ... ಇದು ಬದಲಾಗಬೇಕು... ಅಲ್ಲ ಹುಡುಗಿಯರ ಎಫ್‌ಬಿ ಸ್ಟೇಟಸ್ ಮೆಸೆಜ್, ಪೊಟೋಗಳಿಗೆ ಯಾಕೆ ಅಷ್ಟು ಕಾಮೆಂಟ್, ಲೈಕ್ಸ್ ಬರುತ್ತೆ... ಹುಂ ನಾನು ಆ ಮಟ್ಟಿಗೆ ಇಂದಿಗೂ ಪ್ರಾಮಾಣಿಕತೆ ಉಳಿಸಿಕೊಂಡಿದ್ದೇನೆ... ನನಗೆ ಖುಷಿ ಅದ್ರೆ ಮಾತ್ರ ಕಾಮೆಂಟ್ ಹಾಕುತ್ತೇನೆ... ಇಲ್ಲ ಅಂದ್ರೆ ಸುಮ್ಮನಿರುತ್ತೇನೆ... ಟೀಕೆ ಅಥವಾ ಸಲಹೆ ಯಾರಿಗೂ ಬೇಡ... ಅಲ್ಲ... ನಾವು ನಮ್ಮ ಅಭಿಪ್ರಾಯ ಅಥವಾ ಪೊಟೋ ವನ್ನು ೪ ಜನರ ಮುಂದೆ ಇಟ್ಟ ಮೇಲೆ ಪ್ರತಿಯೊಂದಕ್ಕೂ ನಾವು ಸಿದ್ಧರಿರಬೇಕು... ಅದು ಬಿಟ್ಟು ಎಲ್ಲರೂ ನಮ್ಮನ್ನು ಹೊಗಳಲೇ ಬೇಕು, ನಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಬಯಸುವುದು ಎಷ್ಟು ಸರಿ? ಅಂತವರು ಸೊಷಿಯಲ್ ನೆಟ್‌ವರ್ಕ್‌ಗಳಲ್ಲಿ ಏನನ್ನೂ ಅಪ್‌ಲೋಡ್ ಮಾಡುವ ಉಸಾಬರಿಗೆ ಹೋಗಬಾರದು... ನಾನ್‌ಸೆನ್ಸ್... ಈ ರಿಕ್ಷಾದವ ತುಂಬಾ ಫಾಸ್ಟ್ ಆಗಿ ಹೋಗುತ್ತಿದ್ದಾನೆ... ಆದರೆ ಒಳ್ಳೆ ಡ್ರೈವಿಂಗ್... ಹೋಯ್ ನಾವು ಇಳಿಯೋ ಪ್ಲೇಸ್ ಬಂತಲ್ಲ... ಚಿಲ್ಲರೇ ಕೈಯಲ್ಲೇ ಇದೆ..