ಒಂದು
ಕ್ಷಣ…
ಕ್ಷಣ ಕ್ಷಣ ನೆನಪಾಗುತ್ತಿದ್ದ ಕ್ಷಣಗಳೆಲ್ಲ ನಿಧಾನವಾಗಿ ಮರೆಯಾಗುತಿದೆಯಲ್ಲ
ಎಂಬ ಯೋಚನೆ ನುಸುಳಿತ್ತು. ಹೌದಲ್ಲ, ಎಂದು ಅನಿಸಿಯೂ ಬಿಟ್ಟಿತ್ತು. ಆದರೂ ಮರೆಯಲೇ ಬಾರದ ಸಂಗತಿಗಳೆಲ್ಲ
ಇನ್ನೂ ನೆನಪಿದೆಯೇ ಎಂದು ಒಮ್ಮೆ ಪರೀಕ್ಷಿಸಿಕೊಂಡೆ. ಎಂದಿಗೂ ಮರೆಯಲಾರೆ ಎಂದು ಕೊಂಡಿದ್ದರಲ್ಲಿ ಕೆಲವು ಆ ಒಂದು ಕ್ಷಣ ನೆನಪಾಗಲೇ ಇಲ್ಲ. ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ
ಎಂದೇ ನೆನಪಿನಲ್ಲಿ ಇರದ ಕೆಲವು ನೆನಪಾಗಿ ಬಿಟ್ಟವು…
ಮರು ಕ್ಷಣ...
ಟೆರೇಸ್ ನ ಮೇಲೆ ನಿಂತುಕೊಂಡಿದ್ದ ನಾನು ಮೇಲಿನ ಆಕಾಶವನ್ನೊಮ್ಮೆ ನೋಡಿದೆ.
ಬೂದಿ ಎರಚಿದಂತಿತ್ತು ಆಕಾಶ. ನೀಲಿ, ಹಸಿರು, ತಿಳಿ ಹಳದಿಗಳೇ ಸ್ಥಾಯಿ ಭಾವವಾಗಿದ್ದ ನನ್ನಂತಹ ಮಲೆನಾಡ, ಕಡಲ ನಾಡ
ಹುಡುಗರಿಗೆ ಈ ಆಕಾಶ ಒಗ್ಗುವುದಿಲ್ಲ. ತಲೆ ಎತ್ತಿ ನೋಡಿದರೆ ನಮಗೆ ನಮ್ಮದಲ್ಲದ ಆಕಾಶ ಕಾಣುತ್ತದೆ,
ನಾವು ಪೇಟೆ ಸೇರಿದ ಮೇಲೆ ತಲೆ ತಗ್ಗಿಸಿದರೆ ಮಾತ್ರ ಅವಕಾಶ ಕಾಣಬಹುದೇನೋ? ನೀನು ನೀನಾಗಿರ
ಬೇಡ, ಬಣ್ಣ ಬದಲಾಯಿಸಿಕೋ ಎಂದು ನನಗೆ ಅದು ನೀತಿ ಪಾಠ ಮಾಡುತ್ತಿದೆಯೇ ಅಂದು ಕೊಂಡೆ. ನೋಡು ನಾನು ಆಕಾಶ.
ಜಗಕ್ಕೆಲ್ಲ ಒಂದೇ ಆಕಾಶ. ಆದರೂ ನಾನು ನಿಮ್ಮ ಹಳ್ಳಿಯಲ್ಲಿ ನೀಲಿ, ನಿನ್ನ ನಗರದಲ್ಲಿ ಬೂದು. ಊರಿಗೆ
ತಕ್ಕ ಕೋಲ ನನ್ನದು ಎಂದು ನನಗೆ ಹೇಳುತ್ತಿದೆಯೇ ಆಕಾಶ?
ಈ ಕ್ಷಣ...
ಒಂದು ದಾರಿಯನ್ನು ಆಯ್ದು ಕೊಂಡು ನಡೆಯಲು ಶುರು ಮಾಡಿದ್ದೇವೆ. ಈ ದಾರಿಗಳು
ಯಾವುವು? ನನ್ನ ಒಟ್ಟಿಗೆ ಅಂಗನವಾಡಿಯಲ್ಲಿ ಇದ್ದವರು ಈಗೆಲ್ಲಿದ್ದಾರೆ? ನಾಲ್ಕನೇ ಕ್ಲಾಸ್ ಲ್ಲಿ ಒಟ್ಟಿಗೆ
ಓದಿದವರು? ಏಳನೇ ಕ್ಲಾಸ್ ಲ್ಲಿ ಇದ್ದವರು? ಹತ್ತನೇ ಕ್ಲಾಸ್ ನಲ್ಲಿ ಇದ್ದವರು? ಒಟ್ಟಿಗೆ ಪಿಯುಸಿ ಮೆಟ್ಟಿಲು
ಹತ್ತಿದವರು? ಡಿಗ್ರಿ ಮುಗಿಸಿದವರು, ಪಿಜಿ ಮುಗಿಸಿದವರು? ಅದೇಷ್ಟೋ ಜನ ಎಲ್ಲಿದ್ದಾರೆ
ಎಂದೇ ನನಗೆ ಗೊತ್ತಿಲ್ಲ. ಒಬ್ಬರ ಜೊತೆ ಒಂದು ವರ್ಷ ಓದಿದ್ದೇನೆ ಅಂದರೂ ಅವರೊಂದಿಗೆ 200 ದಿನಗಳಷ್ಟು
ಕಾಲ ಒಂದೇ ಕೋಣೆಯಲ್ಲಿ ಇದ್ದೇ ಇರುತ್ತೇವೆ. ಆದರೆ ಈಗ ಎಲ್ಲಿ ಅವರು? ಎಷ್ಟೋ ಜನಗಳ ನೆನಪೇ ಇಲ್ಲ, ಮರೆತು
ಬಿಟ್ಟೆ ನಾ ಅವರನ್ನು. ಅವರನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ನನಗೆ ಏಕೆ ಸಾಧ್ಯವಾಗಿಲ್ಲ? ಅಲ್ಲಾ,
ಶಾಲೆ ಕಾಲೇಜು ಓದಲು ಬೇರೆ ಬೇರೆ ಕಾರಣಗಳನ್ನು ಇಟ್ಟುಕೊಂಡು ಬಂದಿರುತ್ತೇವೆ. ಅಕ್ಷರ ಕಲಿಯುವ ನಾವು
ನಂತರ ಬದುಕನ್ನು ಕಲಿತ ಅಕ್ಷರಗಳ ಆಸರೆ ಪಡೆದು ರೂಪಿಸಿಕೊಳ್ಳುತ್ತೇವೆ. ಅದರ ಮಧ್ಯೆ ಸ್ನೇಹ, ಪ್ರೇಮ,
ಜಗಳ, ಕೋಪ, ಭಾವ ರಾಹಿತ್ಯ ಇನ್ನು ಏನೇನೊ ಮಣ್ಣು ಮಸಿ. ಒಂದು ಹಂತದ ಶಿಕ್ಷಣ ಮುಗಿದ ಮೇಲೆ ಒಂದಿಷ್ಟು
ಜನ ಅವರೇ ಆಯ್ದು ಕೊಂಡ, ಇನ್ನೊಂದಷ್ಟು ಜನ ಇನ್ಯಾರೋ ತೋರಿಸಿದ ದಾರಿಯಲ್ಲಿ ಎಲ್ಲೆಲ್ಲೋ ಸೇರಿಕೊಂಡು
ಬಿಡುತ್ತಾರೆ. ಇವರಲ್ಲಿ ಯಾರು ನೆಮ್ಮದಿ ಯಿಂದ ಇದ್ದಾರೆ? ನೆಮ್ಮದಿ ಎಂಬುದು ತೀರಾ ವೈಯಕ್ತಿಕ. ಕೇಳಲು
ಹೋದರೆ ಎಲ್ಲರೂ ಚೆನ್ನಾಗಿ ಇದ್ದೇವೆ ಎಂದೇ ಹೇಳುತ್ತಾರೆ, ಕೆದಕಲು ಹೋದರೆ ಎಲ್ಲವು ಬಯಲಾಗುತ್ತದೆ.
ಸಾಕು ಸಾಕಾಗಿದೆ ನನಗೆ. ಬೇಡದ ಉಸಾಬರಿ. ಅವರು ಹೇಗಿದ್ದಾರೋ ಹಾಗೆಯೇ ಇರಲಿ, ನನಗೆ ಅದರ ಸಹವಾಸವೇ ಬೇಡ.
ಆದರೂ ಎಲ್ಲರೂ ಚೆನ್ನಾಗಿರಲಿ; ಇಲ್ಲ ಹಾಗೆ ಆಗೊಲ್ಲ, ಜೀವನ ಹಾಗೇ ಇರುವುದಿಲ್ಲ. ಒಂದು ಹೊತ್ತಿನಲ್ಲಿ ಸರಿಯಾಗಿದೆ ಎಂದು ಅನಿಸಿದ್ದು ಮತ್ತೊಂದು ಹೊತ್ತಿಗೆ ತೀರಾ ತಪ್ಪು ಅನಿಸಿದ್ದ ನಿದರ್ಶನ ಅದೇಷ್ಟು
ಇದೆ. ಎಲ್ಲವೂ ಸಮಯದ ವಲಯ!
ನಮ್ಮೊಂದಿಗೆ ಇದ್ದವರು ಅದೇಷ್ಟು ದೂರ ಸರಿದು ಬಿಡುತ್ತಾರೆ. ಒಂದಿಷ್ಟು
ಸುಳಿವು ನೀಡದೆ. ಕೆಲವರು ನಿಧಾನವಾಗಿ, ಇನ್ನು ಕೆಲವರು ಕ್ಷಿಪ್ರವಾಗಿ.
ಪ್ರತಿ
ಕ್ಷಣ...
ಸಾಗಿದ ದಾರಿಯಲ್ಲಿ ಕಂಡ, ಕಾಣುವ ಮುಖಗಳು, ಘಟನೆಗಳು, ಸಂದರ್ಭಗಳು. ಇದು
ಎಲ್ಲೋ ಹಿಂದಿನದ್ದಕ್ಕೋ, ಮುಂದಿನದಕ್ಕೋ ಕೊಂಡಿಯಂತೆ ಭಾಸವಾಗಿ ಬಿಡುತ್ತದೆ. ಆದೇ ಚೆನ್ನಾಗಿತ್ತು.
ಅಲ್ಲಿಯೇ ಚಂದವಾಗಿತ್ತು. ಹಾಗೇ, ಹೀಗೆ ಇತ್ತು. ಮುದವಿತ್ತು, ಮುಗ್ದತೆಯಿತ್ತು. ಈಗಲೂ ಹಾಗೆಯೇ ಇರಬಹುದಾ?
ಇದ್ದರೆ ಒಳ್ಳೆಯದಿತ್ತು. ಇಲ್ಲಿ ಹೀಗೆ ಒದ್ದಾಡುವುದಕ್ಕಿಂತ ಅಲ್ಲಿ ಹಾಗೆ ಹಾರಾಡುವುದು ಒಳ್ಳೆಯದಲ್ಲವೇ?
ಹುಂ, ನಿಜ. ಆದರೆ ಅಲ್ಲಿ ಹಾಗೆ ಇಲ್ಲ. ಇಲ್ಲಿ ನಿಂತು ಅಲ್ಲಿಯ ಬಗ್ಗೆ ರಮ್ಯ ಕಲ್ಪನೆ ಇಟ್ಟುಕೊಳ್ಳಬಹುದು.
ಆದರೆ ಹಾಗೆ ಇಲ್ಲ ಸ್ಥಿತಿ, ಪರಿಸ್ಥಿತಿ. ಅಲ್ಲಿ ಹೋಗಿ ಕಾದಾಡಲು ಬೇಕಾದ ಶಸ್ತ್ರಾಸ್ತ್ರಗಳು ನನ್ನಲ್ಲಿ
ಇಲ್ಲ, ಅಲ್ಲಿನ ಯುದ್ಧ ತಂತ್ರಗಳು ನನಗೆ ಗೊತ್ತಿಲ್ಲ. ಆದರೆ ಇಲ್ಲಿ ನಾನು ಹೋರಾಡಬಲ್ಲೆ, ಇಲ್ಲಿ ಬದುಕದಿದ್ದರೂ
ಸಾಯಲಾರೆ. ಆಯ್ಯೋ ಈಗಲೇ ಹೋಗಿ ಕಲಿತುಕೋ ಯುದ್ಧ ತಂತ್ರ, ಮುಂದೆ ನಿನಗೆ ಕಲಿಸುವವರೇ ಇರಲಾರರು. ನೀನು
ಒಬ್ಬಂಟಿ ಆಗುತ್ತಿ. ಕಾಲದ ಹರಿವು ಈಗ ಬರಿ ಹರಿವಾಗಿ ಉಳಿದಿಲ್ಲ… ಅದು ಪ್ರವಾಹವಾಗಿ ಬಿಟ್ಟಿದೆ.
ಕ್ಷಣ
ಕ್ಷಣ...
ನಾ ಅಲ್ಲಿ ಇರಲಾರೆ, ಇಲ್ಲಿ ಬದುಕಲಾರೆ. ನಾ ಅಲ್ಲಿಗೆ ಹೋಗಲಾರೆ, ಇಲ್ಲಿಗೆ
ಸೇರಲಾರೆ. ನಾ ಅಲ್ಲಿ ಈಜಲಾರೆ, ಇಲ್ಲಿ ಹಾರಲಾರೆ. ನಾ ಅಲ್ಲಿ ಬೆಳೆಯಲಾರೆ, ಇಲ್ಲಿ ಮಣ್ಣಾಗಲಾರೆ. ನಾ
ಅಲ್ಲಿ ಮಿನುಗಲಾರೆ, ಇಲ್ಲಿ ಬೆಳಕಾಗಲಾರೆ. ನಾ ಅಲ್ಲಿ ಬೇಲಿಯಾಗಲಾರೆ, ಇಲ್ಲಿ ಹೊಲವೂ ಆಗಲಾರೆ…
ನೋಡಿದರೆ ಕೋಟಿ ಕೋಟಿ ತಾರೆಗಳು. ಹತ್ತಿರದ ಸೂರ್ಯ ಬೆಳಕಿನ ಮೊತ್ತ, ಶಾಖದ ಮೂಟೆ. ಎಲ್ಲರಿಗೂ ಸೂರ್ಯನಾಗುವ
ಧಾವಂತ. ಸೂರ್ಯನೊಬ್ಬನೇ ಇದ್ದರೆ ಚೆನ್ನ. ಹತ್ತಾರು ಸೂರ್ಯರಿದ್ದರೆ ಬದುಕು ಉಂಟೇ? ಜೀವ, ಜೀವನ ಉಂಟೆ?
ಆದರೂ ‘ಅವರು’ ಸೂರ್ಯನನ್ನು ತೋರಿಸುವುದು ಬಿಟ್ಟಿಲ್ಲ, ನಾನು ಸೂರ್ಯನಾಗುವ ಆಸೆ ಬಿಟ್ಟಿಲ್ಲ!
No comments:
Post a Comment