Thursday, February 20, 2014

ಕೊನೆಯ ಉಸಿರಿನ ತನಕ... ಕಲರ್ ಕಲರ್ ಪ್ರೀತಿ ಮತ್ತು ಕಪ್ಪು ಬಿಳುಪು ಬದುಕು

ನಡೆದ ಹಾದಿ, ಮುಗಿಯದ ಬೇಗುದಿ, ಹತಾಶೆಯ ಸುಳಿಯೊಳಗೆಯೇ ಸೆಳೆಯುವ ಸೆಳೆತಗಳು, ನಿರೀಕ್ಷೆಗಳೇ ಹುಟ್ಟಿಸದ ಗುಳಿಗೆ, ಕನಸ್ಸಿಗೆ ಕೊಳ್ಳಿ ಇಡುವ ಇರುಳುಗಳು, ಶ್ರಮದ ಫಲಿತಾಂಶಗಳ ಹಗಲು ದರೋಡೆ, ನಾಳೆಗೆ ಚಿಗುರೊಡೆಯಬಹುದು ಎಂದು ನೆನೆಸಿಟ್ಟ ಕಾಳುಗಳಿಗಾದ ಗರ್ಭಪಾತ. ಒಂದೇ... ಎರಡೇ.. ಬದುಕಿ ಲಾಭವಿಲ್ಲ, ನಷ್ಟವೇ. ನಷ್ಟಕ್ಕೂ ಮಿಗಿಲಾಗಿ ಸಾಲಸೋಲ, ಋಣಗಳು!

ದಶಕದ ಹಿಂದೆ ಮೈಮರೆತ ಒಂದು ಕ್ಷಣ ಮತ್ತು ಆ ಮೇಲೆ ಕಲೆತ ನೂರಾರು ದಿನಗಳು... ಹೀಗೆ ನನ್ನನ್ನು ಅಬ್ಬೇಪಾರಿಯಾಗಿಸಿ ಬಿಡಬಹುದು ಎಂದು ಅಂದು ಕೊಂಡೇ ಇರಲಿಲ್ಲ. ಅಂದು ಕೊಳ್ಳುವ ಲೆಕ್ಕಾಚಾರಗಳು ಪ್ರೀತಿಯ ಅಡಿಪಾಯವಲ್ಲ ತಾನೇ? ಪ್ರೀತಿಗೆ ಲೆಕ್ಕಾಚಾರಗಳ ಹಂಗಿಲ್ಲ... ಬರೀ ಕನಸು, ಭವ್ಯತೆಯದ್ದೆ ಗುಂಗು, ರಂಗು. ಅಡಿಪಾಯವು ಬೇಕಿಲ್ಲ, ಬರೀ ಆಶಾಗೋಪುರ, ಗಾಳಿಗೋಪುರ.

ಮುಗ್ಧ... ಪೇಟೆ ಪಟ್ಟಣಗಳ ಕಲರ್ ಗೊತ್ತಿಲ್ಲದ ಹುಡುಗ, ಸುಮ್ಮನೆ ತನ್ನ ಪಾಡಿಗೆ ತಾನು. ರಗಳೆ, ಬೊಗಳೆಗಳು ಸಾಧ್ಯವಿಲ್ಲದ ಸಾಹಸ. ತುಂಟತನ, ಆಪ್ತ ವಲಯದೊಳಗಿನ ಕಸರತ್ತು. ಹೊರ ವಲಯದಲ್ಲಿ ಮುಟ್ಟಿದರೆ ಮುನಿ. ಆದರೂ ಆಸೆ, ಆಕಾಂಕ್ಷೆಗಳಿಗೆ ಇಲ್ಲದ, ಸಲ್ಲದ ಬೇಲಿ.
 
ಅದೇ ಕ್ಯಾಂಟೀನ್. ಹರಕು ಮುರುಕು ಕುರ್ಚಿಗಳು, ತುಕ್ಕು ಹಿಡಿದ ಟೇಬಲ್‌ಗಳು. ಕಪ್ಪಾದ  ಸ್ಟೀಲ್ ಗ್ಲಾಸ್‌ನಲ್ಲಿನ ಚಹಾ, ಜೊತೆಗೊಂದು ಬನ್ಸ್. ಸ್ವರ್ಗಾದಪಿ ಗರಿಯಸಿ... ಅರಳುವುದು, ಕೆರಳುವುದು ಮಾತ್ರ ಗೊತ್ತಿದ್ದ ವಿಷಯ. ನರಳುವುದು, ಸಾಯುವುದು ಇನ್ನೊಬ್ಬರ ಹಣೆ ಬರಹ ಅನ್ನುತ್ತಿತ್ತು ವಯಸ್ಸು.

ಎದೆಗವಚಿಕೊಂಡು ಪುಸ್ತಕ, ಕ್ಯಾಂಟೀನ್‌ನೊಳಗೆ ಬಿಗುಮಾನವಿಲ್ಲದೆ ಬರುತ್ತಿದ್ದ ಹುಡುಗಿಯರು. ಗುರುತಿದ್ದರೆ ನಸುನಕ್ಕು, ಮುಗಳ್ನಕ್ಕು, ಮುಕ್ಕುವುದರಲ್ಲೆ ಲೀನವೇ ಹೊರತು ಕಣ್ಣೆತ್ತಿ ನೋಡಲು ಬಿಡದ ಪುಕ್ಕಲುತನ. ಕದ್ದು ಮುಚ್ಚಿ ಅಥವಾ ಮುಚ್ಚಿದ್ದನ್ನು ಕದ್ದು ನೋಡುವ ಹಂಬಲಕ್ಕೆ ಪುಕ್ಕುಲತನವನ್ನು ಮೀರಿದ ಗುರುತ್ವಾಕರ್ಷಣೆ.

ಅಕ್ಸಿಡೆಂಟ್‌ಗಳು ಹೇಗಾಗುತ್ತವೆ? ನಮ್ಮ ಅಜಾಗರೂಕತೆಯಿಂದ, ಇನ್ನೊಬ್ಬರ ಅಜಾಗರೂಕತೆಯಿಂದ... ಆಗುವ ಹಾನಿ ಮಾತ್ರ ನಮಗೊ, ಅವರಿಗೋ ಅಥವಾ ಮತ್ತೊಬ್ಬರ ಪಾಲಿಗೋ. ಕೆಲವೊಮ್ಮೆ ಅಕ್ಸಿಡೆಂಟ್ ಆಗಬಾರದು ಎಂದುಕೊಳ್ಳುವ ಅತಿ ಜಾಗರೂಕತೆ ಕೂಡ ಮತ್ತೊಂದು ಅಪಘಾತಕ್ಕೆ ಕಾರಣ. ಇತ್ತೀಚೆಗೆ ಸತ್ಯಶೋಧನೆಯಲ್ಲಿಯೇ ನಾವು ವ್ಯಸ್ತರು. ಈ ವೇದನೆಗಳ ಮೂಲಕವಾದರು ನಿನ್ನ ನೆನಪು ಚಿರಂತನ ಸತ್ಯ ಎಂಬ ಶೋಧನೆಯಾಗಿದೆ. ಅದನ್ನು ಮೀರಿ ಹಾರುವ ರೆಕ್ಕೆಗಳಾಗಲಿ, ಶಕ್ತಿಯಾಗಲಿ ನನಗಿಲ್ಲ. ಏಕೆಂದರೆ ನಾನು ನೀನಲ್ಲ!

ಈ ಜಾಗರೂಕ ಅಪಘಾತ ಸಂಭವಿಸಿದ್ದಾದರೂ ಹೇಗೆ? ಮೂಲೆಯಲ್ಲಿ ಜಿಟುಗು ಮಳೆಗೆ ಒಗಟು ಕಟ್ಟುತ್ತ ಕೂತಿದ್ದ ಕವಿ ಮನಸ್ಸು... ತುಂಬಿದ ಟೇಬಲ್‌ಗಳ ಪ್ರದರ್ಶನ ಆ ಮುರುಕು ಕ್ಯಾಂಟೀನ್‌ನಲ್ಲಿ. ಮಳೆಗೆ ನೆನೆಯದ ಆಶ್ರಯ ಪಡೆಯಲು ಬಂದವರೇ ಹೆಚ್ಚು. ಆ ನೆಪದಲ್ಲಿಯಾದರೂ ಕ್ಯಾಂಟೀನ್‌ಗೆ ಫುಲ್ ಆಗುವ ಯೋಗ, ಒಂದು ಸಾರ್ಥಕತೆ.  ಟೇಬಲ್‌ಗಳು ಫುಲ್ ಆಗುತ್ತ ಬರುತ್ತಿದ್ದರೆ ನನಗೆ ನನ್ನ ಟೇಬಲ್‌ನ ಉಳಿದ ಮೂರು ಕುರ್ಚಿಗಳಲ್ಲಿ ಯಾರು ಕುಂಡೆ ಊರುವರು ಎಂಬ ಕುತೂಹಲ. ಆದರೂ.
ಊರಿಗೆ ಬಂದವಳು ನೀರಿಗೆ ಬಾರದೆ ಇರುವಳೆ ಎಂಬಂತೆ ಎಲ್ಲ ಕುರ್ಚಿ ತುಂಬಿದ ಬಳಿಕ ಯಾರಾದರೂ ನನ್ನ ಬಳಿ ಬಂದು ಕೂರಲೇ ಬೇಕು ಎಂಬುದು ಸರಳ ಲೆಕ್ಕಾಚಾರ. ಆಗಿನ ದಿನಗಳಿಗೆ ಇಂತಹ ತಪ್ಪಾಗದ ಲೆಕ್ಕಾಚಾರಗಳೆ ಬುದ್ದಿವಂತಿಕೆಯ ಮಾನದಂಡಗಳು! ಆಗ ತಪ್ಪು ನಿರ್ಧಾರಕ್ಕೂ, ತಪ್ಪು ಲೆಕ್ಕಾಚಾರಕ್ಕೂ ಇರುವ ವ್ಯತ್ಯಾಸಗಳು ಅರಿವಿನ ವ್ಯಾಪ್ತಿಗೆ ನಿಲುಕಿರಲಿಲ್ಲ.
ಆಸನ ಬಿಟ್ಟು ಕೊಡು ಎಂದು ಕ್ಯಾಂಟೀನ್‌ನವರು ಹೇಳುವುದಿಲ್ಲ ಎಂದು ಗೊತ್ತಿತ್ತು. ಬಂದೇ ಬಿಟ್ಟರು ನಾಲ್ವರು ಲಲನೆಯರು. ಅತ್ತಿತ್ತ ಕಣ್ಣಾಡಿಸಿ, ಅನಿವಾರ್ಯ ಕರ್ಮ ಎಂಬಂತೆ ನಾನು ಕೂತ ಕುರ್ಚಿಯತ್ತ ನಿಧಾನವಾಗಿ ಹೆಜ್ಜೆ ಊರಿದರು. ಇದು ನನ್ನ ಮುಂದೆಯೇ ಬಂದು ಕೂರುವ ಗಿರಾಕಿಗಳು ಎಂದು ಅರ್ಥವಾಗಿತ್ತು ನನಗೆ. ಈ ಶನಿಯೊಬ್ಬ ಅಲ್ಲಿ ಕೂತಿದ್ದಾನೆ,   ಎಂದು ನನಗೆ ಅವರು ಬೈಯ್ಯುತ್ತಿರುತ್ತಾರೆ, ನಾನು ಇಲ್ಲಿ ಕೂತಿದ್ದರಿಂದಲೇ ಅವರಿಗೆ ಆ ಸೀಟ್ ಉಳಿದಿದೆ ಎಂದು ಅವರಿಗೆ ಅನಿಸೋದಿಲ್ಲ ಎಂದೆಲ್ಲ ಆ ಕ್ಷಣದಲ್ಲಿ ನಾನು ಅಂದುಕೊಂಡಿರಬೇಕು.
 
ಜಾಗವಂತು ಸಿಕ್ಕಿತ್ತು... ಅವರ ಸಮಸ್ಯೆ ಮುಗಿದಿರಲಿಲ್ಲ. ಇರುವುದು ಮೂರು ಕುರ್ಚಿ. ನಾಲ್ಕು ಜನ ಕೂರಬೇಕು... ಎಲ್ಲರಿಗೂ ತ್ಯಾಗಮಯಿಗಳಾಗುವ ಚಪಲ... ನೀನು ಕೂರು, ನೀನು ಕೂರು, ನಾನು ನಿಲ್ಲುವೆ ಎಂದು ಚೆಲುವೆಯರು ತ್ಯಾಗದ ರಬ್ಬರ್ ಬ್ಯಾಂಡ್ ಎಳೆದದ್ದೆ ಎಳೆದದ್ದು. ನಾನು ಕದಲಲಿಲ್ಲ. ಯಾವುದೋ ಒಂದು ಸಮಸ್ಯೆಗೆ ಸಿಕ್ಕು ಒದ್ದಾಡುತ್ತಿರುತ್ತೇವೆ. ಅದಕ್ಕೊಂದು ಪರಿಹಾರ ಸಿಕ್ಕಿದೆ ಎಂದಾಗ ನಾವು ಮತ್ತೊಂದು ಸಮಸ್ಯೆಯಲ್ಲಿ ಬಿದ್ದು ಒದ್ದಾಡುತ್ತಿರುತ್ತೇವೆ... ತ್ಯಾಗ, ದಾನ, ಸಹನೆ ಎಂದು ಕೊಚ್ಚಿಕೊಂಡರು ಒಳಗಡೆ ಹಲುಬುತ್ತಿರುತ್ತೇವೆ... ಒಂಚೂರು ಹೊಂದಾಣಿಕೆ ಮಾಡಿಕೊಂಡರು ಅದು ಸಮಸ್ಯೆಗೊಂದು ಶಾಶ್ವತ ಪರಿಹಾರವಾಗದೆ ಸಮಸ್ಯೆಯ ಹಂಚುವಿಕೆ ಆಗಿರುತ್ತದೆ. ಸಮಸ್ಯೆಯನ್ನು ಸಮಾನವಾಗಿ ಹಂಚಿ ಎಂದು ದೊಡ್ಡ ದೊಡ್ಡ ಮೇಧಾವಿಗಳು ಹೇಳುತ್ತಾರೆ, ಸಮಸ್ಯೆಯನ್ನು ಎದುರಿಸುವ ಅಥವಾ ಹೊಂದಿರುವ ಮನಸ್ಸು ಹೇಗಿದೆ ಎಂಬುದರ ಮೇಲೆ ಸಮಸ್ಯೆಯ ಪರಿಣಾಮದ ಆಳ, ಅಗಲದ ಅಚ್ಚು ಬೀಳುವುದು ಎಂದು ನಾನು ಆ ಕ್ಷಣಗಳ ಬಗ್ಗೆ ಈ ಕ್ಷಣ  ಯೋಚಿಸಿದರೆ ಹೊಳೆಯುವ ಮ್ಯಾನೇಜ್‌ಮೆಂಟ್ ಪಾಠ!

ಕೆಕ್ಕರಿಸಿ ನೋಡುವ ಅಷ್ಟ ಕಣ್ಣುಗಳಿಂದ ನನ್ನ ಹಾವಭಾವ ಮುಚ್ಚಿಡುವುದು ಕಷ್ಟ. ಎಂತಹ ಹುಡುಗನೇ ಇರಲಿ, ಹುಡುಗಿಯರ ಮಧ್ಯೆ ಏಕಾಂಗಿಯಾಗಿದ್ದರೆ ಆತನ ಆತ್ಮ ಚಡಪಡಿಸಲು ಶುರುವಿಕ್ಕುತ್ತದೆ. ಮೋಕ್ಷಕ್ಕಾಗಿ ಹಾತೊರೆಯುತ್ತದೆ. ಅಲ್ಲಿ ನಿಂತವಳಿಗಿಂತಲು, ಕುಂತವರಿಗಿಂತಲೂ ಹೆಚ್ಚಿನ ಹೊಯ್ದಾಟವಾಗಿದ್ದು ನನಗೆ. ಸುತ್ತಮುತ್ತ ನಮ್ಮವರಲ್ಲದವರು ಇದ್ದಾಗ ಕಾಡುವ ಅಸುರಕ್ಷಿತ ಭಾವ ಸರ್ವವ್ಯಾಪಿ, ಸರ್ವರೀತಿ. ಇದೇ ಕುಟುಂಬ, ಜಾತಿ, ಊರು, ರಾಜ್ಯ, ಭಾಷೆ, ದೇಶ ಹೀಗೆ ಹಿಗ್ಗುತ್ತ ಹೋಗುತ್ತದೆ. ಒಂದು ಹಂತದ ಬಳಿಕ ಅಸುರಕ್ಷಿತ ಭಾವವೇ ಸಂಕುಚಿತವಾಗಿ ದ್ವೇಷ, ಅಸೂಯೆ, ಸಾವು, ನೋವು, ಅನುಮಾನಗಳಲ್ಲಿ ಪರ್ಯಾವಸನ ಗೊಳ್ಳುತ್ತದೆ ಎನ್ನುವುದು ಲೋಕ ಕಂಡವರ ಅನುಭವ.
 
ಆಯ್ಕೆಗಳೇ ಇಲ್ಲವೆಂದ ಮೇಲೆ ಸಿಕ್ಕಿದ್ದೆ ಪಂಚಾಮೃತ. ಹುಡುಗಿಯರ ಹರಟೆ ರಂಗೇರುತ್ತಿತ್ತು. ಹುಡುಗಿಯರು ಮಾತನಾಡುವುದಕ್ಕಿಂತ ನಗುವುದೇ ಹೆಚ್ಚು ಎಂದು ಅಂದುಕೊಳ್ಳುತ್ತಿದೆ. ಮುಂದಿನ ಸೀಟ್‌ನಲ್ಲಿ ಕೂತವರನ್ನು ನೋಡುವುದು ಶ್ರಮವಿಲ್ಲದ, ಸಹಜ ಕಾರ್ಯ. ಆದರೆ ಪಕ್ಕದಲ್ಲಿ ಕೂತವಳನ್ನು, ನಿಂತವಳನ್ನು ನೋಡುವುದಕ್ಕೆ ಪ್ರಯತ್ನ ಬೇಕಿತ್ತು. ಆದರೂ ಮುಖ ನೋಡುವುದರಲ್ಲಿ ಏನಿದೆ ಎಂದು ನೋಡಿ ಬಿಟ್ಟೆ.

ಪಕ್ಕದವಳಿಂದ, ನಿಂತವಳತ್ತ ದೃಷ್ಟಿ ಹಾಯಿಸಿದೆ. ಇಬ್ಬರ ಮುಖದಲ್ಲಿಯೂ ಮುಗಳ್ನಗುವಿನ ಸ್ಟ್ಯಾಂಪ್. ಸುಮ್ಮನಾದೆ, ಪಕ್ಕದ ಕ್ಲಾಸ್ ಅಲ್ಲವೇ ಇವರು ಎಂದು ... ಮತ್ತೊಮ್ಮೆ ನೋಡಿದೆ. ಏನ್ರಿ ಮಳೆಗೆ ಭಾರಿ ಬಾರಿಸುತ್ತಿದ್ದೀರಿ ಎಂದು ಪಕ್ಕ ಕೂತವಳು ಕೇಳಿಯೇ ಬಿಟ್ಟಳು. ನಾನು ಹೀಗೆ ಸುಮ್ಮನೆ ನೋಡಿ ಅಂದರೆ ಶೂನ್ಯ ದೃಷ್ಟಿಯಂತು ಅಲ್ಲ. ಹಾ... ಇದು ಮಾಮೂಲಿ ಎಂದು ಬಿಟ್ಟೆ. ನಿಮ್ಮದು ಕ್ಲಾಸ್ ಬೇಗ ಬಿಡ್ತಾ? ಎಂದಳು... ತಕ್ಷಣವೇ ಇವಳಿಗೆ ನನ್ನ ಪರಿಚಯವಿದೆ, ಕನಿಷ್ಠ ನಾನು ಯಾವ ಕ್ಲಾಸ್ ಎಂಬುದು ಗೊತ್ತಿದೆ ಎಂದು ಕೊಂಡು... ಹಾ ಇವತ್ತು ಲಾಸ್ಟ್ ಹವರ್ ಇಲ್ಲ ಎಂದೆ. ಆದರೂ ನನ್ನ ಮನಸ್ಸೊಳಗೆ ಇನ್ನೇನೋ ಪಗಡೆಯಾಟ. ಎಂದಿನಂತೆ ಅಥವಾ ಪ್ರತಿ ಎರಡು ನಿಮಿಷಕ್ಕೊಮ್ಮೆ ಮಾಡುವ ಪ್ರಕ್ರಿಯೆಯಂತೆ ಪಕ್ಕದವಳು, ನಿಂತವಳು ಜಾರಿದ್ದ ದುಪ್ಪಟ್ಟವನ್ನು ಎತ್ತಿ ಹೊದ್ದುಕೊಂಡರು. ಆಗ ಈ ಕೆಲಸಕ್ಕಿದ್ದ ಸೂಕ್ಷ್ಮತೆ, ರಹಸ್ಯ, ಉದ್ದೇಶಗಳು ತಲೆಗೆ ಹೊಕ್ಕಿರಲಿಲ್ಲ.
ನಂತರ ಅವರಿಬ್ಬರು ನನ್ನ ಜೊತೆ ಮಾತನಾಡುವ ಗೋಜಿಗೆ ಹೋಗಲಿಲ್ಲ... ಅವರದ್ದೆ ಪಟ್ಟಾಂಗ. ನಾನು ತರಿಸಿದ್ದ ಬನ್ಸ್ ಮುಗಿಯಿತು ಎಂದು ನನಗೆ ಗೊತ್ತಾಗುವ ಮೊದಲೇ ನಿಂತಿದ್ದವಳ ಕಣ್ಣು ಅದನ್ನು ಹೇಳುತ್ತಿತ್ತು, ಸಂಭ್ರಮಿಸುತ್ತಿತ್ತು! ನೋಡುವಾಗಲೇ ಹೀಗೆ ನಕ್ಕಳು... ಸರಿ, ಇನ್ನು ಹೊರಡೋದೆ ಲೇಸು ಇಲ್ಲದಿದ್ದರೆ ತಪ್ಪ್ಪಬಹುದು ಬಸ್ಸು ಎಂದು ಕೊಂಡು ಹೊರಟೆ. ನಾನು ನಿಲ್ಲುತ್ತಲೇ ಪಕ್ಕ ಕೂಂತವಳು ನಿಂತು ಸರಿದು, ನಿಂತವಳು ಅತ್ತ ಸರಿದು ರಾಜ ಮಾರ್ಯಾದೆಯಿಂದ ಬಿಟ್ಟು ಕೊಡುವ ತಯಾರಿ ನಡೆಸಿದರು. ನಾನು ಪಕ್ಕದವಳಿಗೊಂದು ಬೈ ಹೇಳಿ... ಕ್ಯಾಂಟೀನ್‌ನವನಿಗೆ ದುಡ್ಡು ಕೊಟ್ಟು ಹೊರಟೆ. ಒಂದು ಸಂದಿಗ್ಧ. ತಿರುಗಿ ಒಮ್ಮೆ ಅವರನ್ನು ನೋಡಲೇ, ಬೇಡವೇ ಎಂಬುದು. ಹೊಟೆಲ್‌ನ ರಶ್ ಹಾಗೆಯೇ ಇತ್ತು. ತಿರುಗಿ ನೋಡಿದೆ. ಅವರು ಅವರ ಪಾಡಿಗೆ ಇದ್ದರು. ನಾನು ಅಲ್ಲಿಂದ ಹೊರಬಿದ್ದೆ.

ನನ್ನ ದಿನಚರಿಗಳಲ್ಲಿ ಮನಸ್ಸಿನ ಏರಿಳಿತಗಳಲ್ಲಿ ಏನೇನು ಬದಲಾಗಿರಲಿಲ್ಲ. ಲವ್ ಅಟ್ ಫಸ್ಟ್ ಸೈಟ್ ಅಥವಾ ಇಂಪ್ರಶನ್‌ಗಳು ಆದಾದಕ್ಕೆ ಯಾವ ದಿಕ್ಕಿನಲ್ಲಿ ಯೋಚಿಸಿದರು ಇನ್‌ಫಾರ್ಮೇಶನ್ ಸಿಗುತ್ತಿಲ್ಲ ಎಂಬುದು ಆ ದಿನದ ನನ್ನ ಡೈರಿ ಸಾರುವ ಸತ್ಯ. ಇದೊಂದು ಸಿನಿಮೀಯ ಸನ್ನಿವೇಶವಾಗಿದ್ದರು ಘಟನೆಯಾಗಿಯೇ ನಮೂದಾಗಿದೆ. ಸರಿ, ಆ ಬಳಿಕ ಕ್ಯಾಂಟೀನ್ ಪಕ್ಕ ಕೂತವಳು ಅನೇಕ ಬಾರಿ ಕಾಲೇಜ್ ಕಾರಿಡಾರಿನಲ್ಲಿ ಸಿಕ್ಕಿದ್ದಿದೆ. ಒಂದು ಅಂಕದ ಪ್ರಶ್ನೆಗಳಾದ ಊಟ ಆಯಿತಾ? ಕ್ಲಾಸ್ ಇಲ್ಲವಾ? ಯಾರು ಲೆಕ್ಚರರ್? ಮುಂತಾದವುಗಳ ವಿನಿಮಯವಾಗಿದೆ, ಇಂತಹ ಪ್ರಶ್ನೆಗಳಿಗೆ ಉತ್ತರವು ಸಿಕ್ಕಿದೆ, ದಿನಗಳು ಉರುಳಿದೆ.
ಕಾರಿಡಾರಿನಲ್ಲಿ ಒಂದು ದಿನ ನಿಂತುಕೊಂಡಿದ್ದಾಗ ಆಕೆ ಬಂದು ಮಾತನಾಡಿಸಿದ್ದಿದೆ. ಅಷ್ಟರಲ್ಲಿ ಅವಳ ಹೆಸರು ತಿಳಿದುಕೊಂಡಿದ್ದೆ. ವಯಸ್ಸಿಗೆ ಸಹಜವಾದ ಆದರೆ ಅಸಹಜ ಸೆಳೆತವೊಂದರ ಸುಳಿ ಹುಟ್ಟಲು ಆ ಕ್ಷಣಗಳು ಹೇತುವಾಗಿದೆ. ಈಗ ಇಂತಹದ್ದನ್ನು ವ್ಯಾಖ್ಯಾನಿಸಲು ’ಕ್ರಶ್’ ಎಂಬ ಅಂಗ್ಲ ಪದ ನನ್ನ ಪದ ಬತ್ತಳಿಕೆಗೆ ಸೇರಿದೆ.

ಹುಟ್ಟಿದ್ದ ಸೆಳೆತ, ಮಿಡಿತದ ಮಾತು ಓರೆಕೋರೆ ದಾರಿಗಳಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ಒಂದು ದಿನ ಅವಳ ’ನಿಂತುಕೊಂಡಿದ್ದ’ ಗೆಳತಿಯೂ ಅಲ್ಲಿಗೆ ಆಗಮಿಸಿದ್ದಳು. ಅವಳು ಹಾಯ್ ಎಂದು ಹೇಳಿ ನನಗೆ ಹಾಯನಿಸಿದಳು. ಅವರಿಬ್ಬರು ಮತ್ತು ನಾನು ಸುಮಾರು ೧೫ ನಿಮಿಷ ಮಾತನಾಡಿರಬಹುದು! ನಂತರ ಇದು ೩-೪ ದಿನಗಳಲ್ಲಿ ಮತ್ತೊಮ್ಮೆ ಪುನರಾವರ್ತನೆ. ಪ್ರೇಮದ ಕಿಡಿ ಹೊತ್ತಿದೆ ಎಂದು ಹೊಗೆ ಕಂಡ ನಮ್ಮ ಸ್ನೇಹಿತರು ಪುಕಾರು ಎಬ್ಬಿಸಿಯೇ ಬಿಟ್ಟಿದ್ದರು. ಅವರಿಬ್ಬರಲ್ಲಿ ಯಾರು ನಿನ್ನವಳು ಎಂದು ಪ್ರಶ್ನೆ ಕೇಳುತ್ತಾ, ತನಿಖೆ ಮಾಡುತ್ತ ಅವರ ಸಮಯವೂ ಸುರುಳಿ ಸುತ್ತುತ್ತಿತ್ತು.
 
ಬಳಿಕದ ದಿನಗಳಲ್ಲಿ... ಅಂಕಿತಾ (ಕ್ಯಾಂಟಿನ್‌ನಲ್ಲಿ ನಿಂತುಕೊಂಡಿದ್ದ ಹುಡುಗಿ) ಕ್ಲಾಸ್‌ನಲ್ಲಿ ಕೂತಿದ್ದ ನನ್ನನ್ನು ಕಿಟಕಿಯಿಂದಲೇ ಕೈಸನ್ನೆ ಮಾಡಿ ಕರೆದು ಕಾರಿಡಾರಿನಲ್ಲಿ ಮಾತನಾಡಲು ಶುರುವಿಡುತ್ತಿದ್ದಳು. ಇಂತಹ ಒಂದು ದಿನ, ಅದು, ಇದು ಎಲ್ಲ ಆದ ಮೇಲೆ ಎಲ್ಲಿ ಅಮೃತಾ ಎಂದು ಕೇಳಿದ್ದೆ. ಅವಳು ಬಂದಿಲ್ಲ... ಎಂದಳು. ಏಕೆ ಎಂಬ ನನ್ನ ಪ್ರಶ್ನೆಗೆ ಏನೋ ಮನೆಯ ಪ್ರಾಬ್ಲಮ್ ಎಂಬ ಉತ್ತರ ಸಿಕ್ಕಿತ್ತು. ಸರಿ ಎಂದು ಹೇಳಿದ್ದೆ.

ಮತ್ತೆ ಮೂರ್‍ನಾಲ್ಕು ದಿನ ಅಂಕಿತಾಳ ಜೊತೆ ಮಧ್ಯಾಹ್ನದ ಸಂಭಾಷಣೆ. ಅಮೃತಾ ಎರಡು ದಿನ ಬಿಟ್ಟು ಕಾಲೇಜ್‌ಗೆ ಬರುತ್ತಿದ್ದಾಳೆ ಎಂದು ಅಂಕಿತಾ ಮಾತಿನ ಮಧ್ಯೆ ಎಲ್ಲೋ ಹೀಗೇ ಹೇಳಿದ್ದಳು. ಆ ಎರಡು ದಿನ ಬಿಟ್ಟು ಅಮೃತಾ ಕಾಲೇಜ್‌ಗೆ ಬಂದಿದ್ದಳು. ನಾನು ಗಮನಿಸಿದ್ದೆ. ಆ ಬಳಿಕ ಎರಡು ಮೂರು ದಿನ ಸರಿದು ಹೋಗಿರಬೇಕು. ಅಂದು ಅಂಕಿತಾ ಬಂದಿರಲಿಲ್ಲ. ಹಿಂದಿನ ದಿನವೇ ಈ ಸಮಾಚಾರ ಸಿಕ್ಕಿತ್ತು. ಮಧ್ಯಾಹ್ನ ಕಾರಿಡಾರ್‌ನಲ್ಲಿ ನಿಂತಿದ್ದೆ, ಅಂಕಿತಾ ಆಗಮನಕ್ಕಾಗಿ ಎಂಬುದು ವಾತಾವರಣದ ಪರಿಚಯ ಇದ್ದವರು ಪ್ರಚುರ ಪಡಿಸಿದ ಸಮಾಚಾರ.
ನಿಂತಿದ್ದವನ ಬಳಿ ಬಂದದ್ದು ಅಮೃತಾ..
ನಾನು: ಏನು ಮೇಡಂ? ಆಯಿತಾ ಊಟ?
ಅಮೃತಾ: ಹಾ ಸರ್, ನಿಂದು?
ನಾನು: ಹೋ
ಅಮೃತಾ: ಅಂಕಿತಾಳಿಗೆ ಕಾಯ್ತಾ ಇದ್ದೀಯಾ?
ನಾನು: (ಮುಗುಳ್ನಗು)
ಅಮೃತಾ: ಅವಳು ಇವತ್ತು ಬರೊಲ್ಲ
ನಾನು: ಹಾ.. ನಿನ್ನೆ ಹೇಳಿದ್ದಳು, ಏನು ಕೆಲವು ದಿನ ರಜೆ ಹಾಕಿದ್ದೀರಿ ಅಲ್ವಾ?
ಅಮೃತಾ: ಹಾ, ಹೌದು. (ಮುಗುಳ್ನಗು, ಸಂತಸದ್ದು ಅಲ್ಲ), ನಿಮ್ಮ ಜೊತೆ ಮಾತನಾಡಬಹುದಾ?
ನಾನು: ಈಗೇನು ಮಾಡುತ್ತಿರುವುದು?
ಅಮೃತಾ: ಇಲ್ಲಿ ಅಲ್ಲ, ಬನ್ನಿ ನಮ್ಮ ಕ್ಲಾಸ್‌ಗೆ,
ನಾನು: (ಅರೆ ಕ್ಷಣ ತಬ್ಬಿಬ್ಬು, ಮತ್ತೆ ಹಿಂಬಾಲಿಸಿದ್ದೆ)

ನಾವಿಬ್ಬರು ಒಂದು ಬೆಂಚಿನಲ್ಲಿ, ಕುಳಿತು ಮಾತುಕತೆ, ಕಣ್ಣೀರು, ಸಂತಾಪ, ನೋವು, ವಿಷಾದ, ಸಾಂತ್ವನ ಮುಂತಾದವುಗಳಿಂದ ತುಂಬಿದ್ದ ಮಹತ್ವದ ಮಾತುಕತೆ... ಅಲ್ಲಿ ತನಕ ನಮ್ಮ ನಡುವೆ ಇದ್ದ ಭಾವನೆ, ಸಂಬಂಧಕ್ಕೆ ಭಾರಿ ತಿರುವು.
   
ಅರೆ ಘಂಟೆಯಲ್ಲಿ ಅಮೃತಾ ಎಲ್ಲೋ ಕಳೆದು ಹೋಗಿದ್ದಳು, ಅಮೃತಾಳಿಗೆ ಅಮೃತಾಳೆಂಬ ಅಸ್ತಿತ್ವ ನನ್ನಲ್ಲಿ ಮತ್ತೆ ಸೃಷ್ಟಿಯಾಗಲೇ ಇಲ್ಲ. ಅಮೃತಾ ಉರಿದು ಹೋದಳೋ, ಬೆಳಕಾಗಿ ಬೆಳಗಿದಳೋ. ಬಳಿಕ ನನ್ನ ಕ್ಷಣಕ್ಷಣದ ಕಣಕಣದ ಪ್ರಾಣವಾಗಿ ಆಕೆ ನನ್ನೊಳಗೆ ತನ್ನ ಪ್ರಾಣ ಬಿಟ್ಟಿದ್ದಳು, ನನ್ನ ಪ್ರಾಣವಾಗಿದ್ದಳು ಕೊನೆಗೊಂದು ದಿನ ನನ್ನ ಪ್ರಾಣವನ್ನೂ ತೆಗೆದಿದ್ದಳು!
 
ಊಟದ ವಿರಾಮದ ಮುಕ್ತಾಯ, ಮುಂದಿನ ತರಗತಿಯ ಆರಂಭಕ್ಕೆಂದು ಬಾರಿಸಿದ್ದ ಬೆಲ್‌ನಿಂದಾಗಿ ನಾನು ಅಮೃತಾಳನ್ನು ಬಿಟ್ಟು ಹೋಗಲೇ ಬೇಕಿತ್ತು. ಹೌದು, ಅಮೃತಾಳನ್ನು ಅಲ್ಲೆ ಬಿಟ್ಟು ಹೋಗಿದ್ದೆ... ಅಮ್ಮುಳನ್ನು ಕರೆದುಕೊಂಡು ಬಂದಿದ್ದೆ, ನನ್ನ ಜೊತೆಗೆ, ಮುಂದಿನ ತರಗತಿಗೆ ಮುಗಿಯುವರೆಗೆ ಮಾತ್ರವಲ್ಲ, ನನ್ನ ಬದುಕಿನ ಗತಿ, ಪ್ರಗತಿ, ಸದ್ಗತಿ ಮತ್ತು ದುರ್ಗತಿವರೆಗೆ.
ಪ್ರೀತಿ ವಿಫಲವಾಗಿದೆ ಎಂದು ಬೊಬ್ಬಿಡುವುದು, ನೊಂದುಕೊಳ್ಳುವುದು, ಬೈಯ್ಯುವುದು, ಶಾಪ ಹಾಕುವುದು ತಪ್ಪು. ಆ ರೀತಿ ಮಾಡಬಾರದು, ಜೀವನ ದೊಡ್ಡದಿದೆ ಎಂಬುದು ಪುಸ್ತಕಗಳ ಸರಕು. ಮಸ್ತಕದಲ್ಲಿಯೂ ಅದು ಇರುತ್ತದೆ. ಆದರೆ ಇದರ ಪಾಲನೆ ಕಬ್ಬಿಣದ ಕಡಲೆ. ವಾಸ್ತವವಾಗಿ ಪ್ರೀತಿ ವಿಫಲ ಎಂಬುದರ ವ್ಯಾಖ್ಯಾನವು ಅಸ್ಪಷ್ಟ. ನಾವು ಸಾಮಾನ್ಯವಾಗಿ ಹುಡುಗ/ಹುಡುಗಿ ಬೇರೆ ಒಬ್ಬರನ್ನು ಮದುವೆಯಾದರೆ ಅಥವಾ ನಿನ್ನ ಸಹವಾಸ ಸಾಕಪ್ಪ ಎಂದು ಬಿಟ್ಟರೆ ಅದನ್ನು ಪ್ರೀತಿಯ ವೈಫಲ್ಯ ಎಂದು ಕೊಳ್ಳುತ್ತೇವೆ. ನಂತರ ಅವನು/ಅವಳು ಈಗ ನನ್ನ ಜೊತೆ ಇದ್ದರೆ, ಅವನು/ಅವಳು ಈಗ ಏನು ಮಾಡುತ್ತಿರಬಹುದು, ನಾನು ಮೋಸ ಹೋದೆ ಎಂದೆಲ್ಲ ಪರಿತಾಪಿಸುತ್ತ ಕಳೆದುಹೋದವರನ್ನು ಮತ್ತೂ ಕಳೆದುಕೊಳ್ಳುತ್ತಾ, ಮಿಸ್ ಮಾಡಿಕೊಳ್ಳುತ್ತಾ ಪ್ರೀತಿಯ ವಿರಹ ಎಂದುಕೊಳ್ಳುತ್ತಿರುತ್ತೇವೆ. ಈ ಲೋಕರೂಢಿಯ ವ್ಯಾಖ್ಯಾನದ ಮಟ್ಟಿಗೆ ಸಫಲ ಪ್ರೀತಿ ಎಂದು ಕರೆಯುವ ಮದುವೆಯಾದವರು ಕೂಡ, ನೆಮ್ಮದಿಯ ಬದುಕು ಸಾಗಿಸಬಹುದು ಎಂಬುದಕ್ಕೆ ಖಾತ್ರಿ ಕೊಡುವುದು ಕಷ್ಟ.

ಯಾವ ಪ್ರೀತಿ ಕೂಡ ಸಫಲ ಅಥವಾ ವಿಫಲ ಆಗುವುದು ಪ್ರೀತಿಯಲ್ಲಿ ತೊಡಗಿಕೊಂಡವರ ಫಲಿತಾಂಶದ ನಿರೀಕ್ಷೆ ಏನಿದೆ ಎಂಬುದರ ಮೇಲೆ. ಕೆಲವರಿಗೆ ಸಮಯ ಸಾಗಿಸುವ ಅಥವಾ ಸಮಯ ಕೊಲ್ಲುವ ಸಾಧನ ಪ್ರೀತಿ ಎಂದಾದರೆ ಅವರು ಪರಸ್ಪರ ಪ್ರೀತಿಯಲ್ಲಿ ತೊಡಗಿಕೊಂಡಾಗ ಎಷ್ಟು ಸಮಯ ಕೊಂದಿದ್ದಾರೆ, ಸಾಗಿಸಿದ್ದಾರೆ ಎಂಬುದರ ಮೇಲೆ ಅವರ ಪ್ರೀತಿಯ ಯಶಸ್ಸನ್ನು ಅಳೆಯಬೇಕು. ಅವರು ಬೇರೆಯಾದ ಬಳಿಕ  ಪರಸ್ಪರರನ್ನು ನೆನಪಿಸಿಕೊಳ್ಳುತ್ತ ಕೊಲ್ಲುವ ಸಮಯ ಕೂಡ ಈ ಪ್ರೀತಿಯ ಉಳಿತಾಯ/ಸಾಲದ ಖಾತೆಗೆ ಜಮಾ ಆಗುವಂತಹದ್ದೆ.

ಇನ್ನು ಸಫಲ ಪ್ರೀತಿ ಎಂದು ಮದುವೆಯಾದವರು ಬಳಿಕ ಕಿತ್ತಾಡಿಕೊಂಡರೆ ಅದನ್ನು ಯಶ ಕಂಡ ಪ್ರೀತಿ ಎನ್ನಬಹುದೇ? ಕಿತ್ತಾಡಿಕೊಳ್ಳದಿದ್ದರು, ಡೈವೋರ್ಸ್ ಪಡೆಯದಿದ್ದರು ಕೂಡ ಸಾಂಸಾರಿಕ ಸಮಸ್ಯೆಗಳು ಹುಟ್ಟಿಕೊಂಡು ಅದನ್ನು ಸಹಮತದಲ್ಲಿ ಪರಿಹರಿಸಲಾಗದೆ ಒಬ್ಬರ ದರ್ಪ, ಯಾಜಮಾನಿಕೆ, ವೈವಾಹಿಕ ಬಂಧನದ ಕಟ್ಟುಪಾಡುಗಳ ಕಾರಣದಿಂದಾಗಿ ಒಬ್ಬರು ತಮ್ಮ ನೋವನ್ನು ನುಂಗಿಕೊಂಡಿದ್ದರೆ ಅದು ಯಾವ ಪ್ರೀತಿ? ಯಾವುದೋ ಒಂದು ಕಾರಣಕ್ಕೆ ಹತ್ತಿರವಾಗಿ ಒಂದಿಷ್ಟು ಸಮಯ ಒಟ್ಟಿಗೆ ಕಳೆದು ಬಳಿಕ ಇನ್ನೂ ಹೆಚ್ಚಿನ ಸಮಯ ಅಥವಾ ಮುಂದಿನ ದಿನಮಾನದಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಬೇರೆಯಾದರೆ ಅದು ವಿಫಲ ಪ್ರೀತಿಯೇ?

ಸಾಮಾನ್ಯವಾಗಿ ನಮ್ಮ ತಂದೆ ತಾಯಿಗಳು ನಾವು ಹುಟ್ಟಿದಾಗ ನಮ್ಮ ಜೊತೆಗೆ ಇರುತ್ತಾರೆ. ತಮ್ಮ ವಾತ್ಸಲ್ಯ ಧಾರೆ ಎರೆಯುತ್ತಾರೆ. ಆದರೆ ನಮ್ಮ ಜೀವನದ ಯಾವುದೋ ಹಂತದಲ್ಲಿ ನಮ್ನನ್ನು ಬಿಟ್ಟು ಹೋಗುತ್ತಾರೆ. ಆದೇ ರೀತಿ ಹೆಂಡತಿ ಮಕ್ಕಳು, ಮರಿ ಮಕ್ಕಳು ನಾವು ಹುಟ್ಟಿದ ಅದೇಷ್ಟೂ ಸಮಯದ ಬಳಿಕ ನಮ್ಮ ಜೊತೆ ಇದ್ದು ಹೋಗಲು ಬರುವವರು. ಮಾನವ ಜಗತ್ತಿನ ಯಾವುದೇ ಸಂಬಂಧಗಳ ದೈಹಿಕ ಸಾಮಿಪ್ಯ ಶಾಶ್ವತವಲ್ಲ. ಇಂತಹ ಸಂದರ್ಭದಲ್ಲಿ ತಂದೆ, ತಾಯಿಗಳ ವಾತ್ಸಲ್ಯದ ಯಶಸ್ಸನ್ನು ಅಳೆಯುವ ಮಾನದಂಡಗಳು ಏನು? ತಂದೆ ತಾಯಿಗಳು ನಮ್ಮನ್ನು ಹುಟ್ಟಿಸಿದ ಮಾತ್ರಕ್ಕೆ ಯಶಸ್ವಿ ಪೋಷಕರಾಗುತ್ತಾರೆಯೇ? ಮಕ್ಕಳಿಗೆ ನೀಡಿದ ಸಂಸ್ಕಾರ ಮತ್ತು ಅವರ ಜವಾಬ್ದಾರಿಗಳ ನಿರ್ವಹಣೆಯನ್ನು ಆಧಾರಿಸಿ ಪೋಷಕರು ಯಶಸ್ಸನ್ನು ಅಳೆಯಬಹುದು. ಈ ನಿದರ್ಶನದ ಆಧಾರದಲ್ಲಿ ಹೇಳುವುದಾದರೆ ಪ್ರೀತಿಯ ಯಶಸ್ಸು ಜೋಡಿಗಳು ಒಟ್ಟಿಗೆ ಇದ್ದಾಗ, ಆಥವಾ ದೂರದಲ್ಲಿ ಇದ್ದಾಗ ಅನುಭವಿಸಿದ ಗುಣಮಟ್ಟದ ಸಮಯದ ಆಧಾರದ ಮೇಲೆಯೇ ಅಳೆಯಬೇಕು. ಕೋಪತಾಪ, ಕಣ್ಣೀರು, ವಿಷಾದ, ನೋವು, ವಿರಹ, ಸತಾಯಿಸುವುದು, ಕಿಚಾಯಿಸುವುದು, ಮಾತು ಬಿಡುವುದು, ಮಾತು ಕೊಡುವುದು ಎಲ್ಲವು ನಲಿವು, ಸಂತಸ, ಸರಸ, ಸನಿಹ, ಖುಷಿಯಷ್ಟೆ ಅಗತ್ಯ. ಎರಡು-ಮೂರು ದಿನ ಮಾತು ಬಿಟ್ಟಾಕ್ಷಣ ಪ್ರೀತಿಯಲ್ಲಿ ಕೊರತೆ ಕಾಣದೆ, ದೂರದಲ್ಲಿ ಇದ್ದಾಗಲು ಸಾಮಿಪ್ಯದ ಕಾತರತೆ ಇದ್ದಾಗ ಅದನ್ನು ಪ್ರೀತಿಯ ಯಶಸ್ಸು ಎಂದು ಸಾರಬಹುದೇನೋ.

ಇದೆಲ್ಲ ವ್ಯಾಖ್ಯಾನ, ನಿರೂಪಣೆಗಳ ಮಾತಾಯಿತು. ಆದರೆ ಜೀವನ? ಈಗ ಅಮೃತಾ ಯಾನೆ ಅಮ್ಮುನ ದೇಹದ ಸಾಮೀಪ್ಯ ನನ್ನ ಜೊತೆಗಿಲ್ಲ, ಮನಸ್ಸಿನ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಅವಳ ಮನಸ್ಸು ನನ್ನ ಬಗ್ಗೆ ಕಾತರಿಸುತ್ತಿರುವುದಾಗಿದ್ದರೆ ಅವಳ ದೇಹ ಯಾರ ಜೊತೆಗಿದೆಯೋ ಅವರ ಜೊತೆ ನೆಮ್ಮದಿಯಾಗಿಲ್ಲ. ಇಲ್ಲ, ಅವಳ ಮನಸ್ಸು, ದೇಹ ಎರಡೂ ಒಂದೇ ಕಡೆ ಇದ್ದು ನನಗೆ ಒಳಿತಾಗಲಿ, ಕೆಡುಕಾಗಲಿ ಎಂದು ದಿನದ ಕೆಲವು ನಿಟ್ಟುಸಿರುಗಳ ಎಡೆಯಲ್ಲಿ ಅಥವಾ ಹೀಗೆ ಏನೋ ಆಕೆಗೆ ನೆನಪಾದಾಗ ಭಾವಿಸುತ್ತಿದ್ದರೆ? ಎಲ್ಲ ಬಿಟ್ಟು, ನಮ್ಮ ಮೊದಲ ಭೇಟಿಯ, ಆ ಬಳಿಕದ ಅನೇಕ ಭೇಟಿಗಳ ಕ್ಯಾಂಟಿನ್‌ಗೆ ಅವಳು ಹೋದಾಗ ನನ್ನ ನೆನಪಾಗಿ ಅವನ ಜೊತೆ ಇರುವಾಗ ಎಷ್ಟು ಖುಷಿಯಾಗಿದ್ದೆ ಎಂದೋ ಅಥವಾ ಈಗ ಎಷ್ಟು ನೆಮ್ಮದಿಯಾಗಿದ್ದೇನೆ ಎಂದು ಆಕೆ ಅಂದು ಕೊಂಡರೆ ಆಗಲೂ ಪ್ರೀತಿ ತಕ್ಕಡಿಗೆ ಬೀಳುತ್ತದೆ.

ಹುಲು ಮಾನವನ ಮನಸ್ಸಿಗೆ ಸಂಬಂಧಿಸಿದಂತೆ ಯಾವೂದೂ ಪೂರ್ಣವಲ್ಲ. ಅಮ್ಮು ಈಗ ನನ್ನ ಜೊತೆಗಿಲ್ಲದನ್ನು ಕ್ರಿಕೆಟ್‌ನಲ್ಲಿ ಹತ್ತನೇ ವಿಕೆಟ್ ಪತನದೊಂದಿಗೆ ಇನಿಂಗ್ಸ್‌ಗೆ ಮಂಗಳ ಹಾಡುವುದಕ್ಕೆ ಹೋಲಿಸಿಬಿಡಬಹುದು. ನೀವು ಒಂದು ತುದಿಯಲ್ಲಿ ತ್ರಿಬಲ್ ಸೆಂಚುರಿ ಹೊಡೆದು ಆಡುತ್ತಿದ್ದರು ಕೂಡ ಹನ್ನೊಂದನೆ ಆಟಗಾರ ಯಾವ ರೀತಿ ಔಟ್ ಆದರೂ ಪೆವಿಲಿಯನ್ ಸೇರಲೇಬೇಕು.  ಅದು ನಿಯಮ. ನನ್ನ ಅಮ್ಮುನ ಜೊತೆಯಾಟದಲ್ಲಿ ವಿಧಿಯೆಂಬ ಅಂಪೈರ್ ನೀಡಿದ ತೀರ್ಪಿನಿಂದಾಗಿ ಅಮ್ಮು ಔಟ್ ಆಗಿದ್ದಾಳೆ. ಜೊತೆಯಾಟ ಮುರಿದಿದೆ, ನಮ್ಮ ಸಂಬಂಧದ ಇನ್ನಿಂಗ್ಸ್ ಮುಗಿದಿದೆ. ಆಕೆ ಹೊಸ ಇನ್ನಿಂಗ್ಸ್‌ನಲ್ಲಿ ಹೊಸ ಜೊತೆಯಾಟದಲ್ಲಿ ಭಾಗಿಯಾಗಿದ್ದಾಳೆ.
 
ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ತಯಾರಿಲ್ಲ. ಮನಸ್ಸು ತಯಾರಾದರೂ ಒಳ ಮನಸ್ಸು ಬಿಡುವುದಿಲ್ಲ, ಒಳ ಮನಸ್ಸು ಒಪ್ಪಿಕೊಂಡರು, ಸುಪ್ತ ಮನಸ್ಸು ಸುಮ್ಮನಿರುವುದಿಲ್ಲ. ನಾವು ಯಶಸ್ಸಿ ಇನ್ನಿಂಗ್ಸ್ ಆಡಿದ್ದೇವೆ, ನಾವು ಉತ್ತಮ ಜೊತೆಯಾಟ ಆಡಿದ್ದೇವೆ, ಅವಳ ಸಹಾಯದಿಂದ ನನಗೆ ಉತ್ತಮ ಸ್ಕೋರ್ ಮಾಡಲು ಸಾಧ್ಯವಾಗಿದೆ ಎಂಬುದು ಗೊತ್ತಿದೆ. ಅವಳು ಕಟ್ಟುಪಾಡುಗಳನ್ನು ಮೀರಿ ಇನ್ನಿಂಗ್ಸ್ ಬೆಳೆಸಿದ್ದಾಳೆ, ಔಟ್ ಆಗಲು ಅಂಪೈರ್ ನೀಡಿದ ಕೆಟ್ಟ ತೀರ್ಪು ಕಾರಣ ಎಂಬ ಅರಿವಿದೆ, ನಿಯಮ ಮೀರುವ ಮನಸ್ಸು ಅವಳದಲ್ಲ ಎಂದು ಗೊತ್ತಿದೆ. ಆದರೂ ಮನಸ್ಸು ಕೆರಳಿದ ಮುಳ್ಳು ಹಂದಿ. ಇಲ್ಲ, ಅವಳು ಉದ್ದೇಶಪೂರ್ವಕವಾಗಿ ಔಟ್ ಆಗಿದ್ದಾಳೆ ಎಂಬ ಸಂಶಯದ ನರ್ತನ.

ನಮಗೆ ಗ್ಯಾಂಗ್ರಿನ್ ಆಗುತ್ತದೆ. ಕಾಲು ಕಟ್ ಮಾಡಬೇಕು ಎನ್ನುತ್ತಾರೆ ಡಾಕ್ಟರ್. ಅವರು ಅಪರೇಷನ್ ಮಾಡಿ ಕಾಲು ತೆಗೆಯುತ್ತಾರೆ. ಯಾವುದೇ ವೈದ್ಯಕೀಯ ನೆರವಿನ ಸಹಾಯವಿಲ್ಲದೆ ಅದೇ ಕಾಲನ್ನು ಒಂದು ಮಚ್ಚಿನಿಂದ ಕಡಿದು ಕೂಡ ಕಟ್ ಮಾಡಬಹುದು. ಎರಡು ಕ್ರಿಯೆಯಲ್ಲಿಯೂ ಕಾಲು ಕಟ್ ಆಗುತ್ತದೆ. ಆದರೆ ಉಂಟಾಗುವ ತಲ್ಲಣ? ಅಮೃತಾ ಮಚ್ಚಿನಿಂದ ಹೊಡೆದು ಕಾಲು ಕಟ್ ಮಾಡಿದಂತೆ ನಮ್ಮ ಸಂಬಂಧವನ್ನು ಕಟ್ ಮಾಡಿದಳು. ಒಂದು ಸಂಬಂಧವನ್ನು ಮನಸ್ಸಿಗೆ ಮುಜುಗರವಾದರು ಮುಂದುವರಿಸಬೇಕು ಎಂಬುದು ಬಾಲಿಶತನ. ಇಂತಹ ನಡಾವಳಿಕೆ ಇರುವ, ಬೇಡುವ ಸಂಬಂಧಗಳು ನೆಮ್ಮದಿಯ ನಾಳೆಗಳನ್ನು ಕಾಣುವುದಿಲ್ಲ. ಒಂದು ಸಂಬಂಧದಲ್ಲಿ ಹುಳುಕು ಕಂಡು ಬಂದರೆ, ಹುಳುಕುಗಳೆ ದೊಡ್ಡದಾಗಿ ನಾಳೆ ನಮ್ಮನ್ನು ಲಗಾಡಿ ತೆಗೆಯುತ್ತವೆ ಎಂದು ಅನಿಸಿದೊಡನೆ ಆ ಸಂಬಂಧದಿಂದ ಹೊರಗಡೆ ಬರಬೇಕು. ಆದರೆ ಹೇಗೆ ಹೊರಗಡೆ ಬರುತ್ತೇವೆ ಎಂಬುದರ ಮೇಲೆ ಸಂಬಂಧಗಳಲ್ಲಿ ಭಾಗಿಯಾದವರ ನಾಳೆಯ ನೆಮ್ಮದಿಯ ದಿನಗಳ ಹೊದಿಕೆ ಇರುತ್ತದೆ. ಇಬ್ಬರಿಗೂ ನೋವಾಗದಂತೆ ಒಂದು ಸೌಹಾರ್ದ ಮಾತುಕತೆಯೊಂದಿಗೆ ಪರಸ್ಪರ ಅಗಲಿಕೆಯ ಅನಿವಾರ್ಯತೆಯನ್ನು ತೆರೆದಿಟ್ಟು ಬೇರೆಯಾಗುವುದು ಪ್ರಬುದ್ಧತೆಯ ಲಕ್ಷಣ. ಇದರಿಂದ ಮುಂದೆ ಸಮಸ್ಯೆಗಳೇ ಇರಲಾರದು ಎನ್ನಲಾಗದಿದ್ದರು ಕೂಡ ಗೊಂದಲ, ಗೋಜಲುಗಳಿಗೆ ಅಸ್ಪದ ಸಿಗುವುದು ಕಡಿಮೆ. ಇಬ್ಬರಲ್ಲಿಯೂ ಏನೋ ಒಂದು ಸ್ಪಷ್ಟತೆಯ ಬೆಳಕು ಮೂಡಿರುತ್ತದೆ.

ಆದರೆ ಅಮೃತಾ? ಅಲ್ ಅಫ್ ಸಡನ್. ಫೋನ್ ರಿಸೀವ್ ಮಾಡುವುದು ನಿಲ್ಲಿಸಿದ್ದಳು.  ಮೆಸೆಜ್‌ಗಳಿಗೆ ರಿಪ್ಲೈ ಇಲ್ಲ. ಸಿಮ್ ಬ್ಲಾಕ್ ಮಾಡುವ ಪ್ರಯತ್ನ. ಇಲ್ಲ, ನಿನ್ನೊಂದಿಗೆ ಇರಲಾಗದು ಎಂದು ಯಾರೋ ಗೆಳತಿಯ ಜೊತೆಗೆ ಹೇಳಿ ಕಳುಹಿಸುವ ಪ್ರಯತ್ನ, ನನಗೆ ಬೇರೆ ಹುಡುಗ ನೋಡುತ್ತಿದ್ದಾರೆ, ನಮ್ಮ ಜಾತಿ ಬೇರೆ, ಅಂತಸ್ತು ಜಾಸ್ತಿ, ಇಂಜಿನಿಯರ್ ಹುಡುಗ ಬೇಕು, ಅಮೆರಿಕಕ್ಕೆ ಹಾರಬೇಕು, ನಿನ್ನ ನಡೆ ಸರಿ ಇಲ್ಲ, ನಿನ್ನ ಜೊತೆ ನೆಮ್ಮದಿಯಾಗಿರಲು ನನ್ನಿಂದ ಸಾಧ್ಯವಿಲ್ಲ ಎಂಬತಹ ಕಾರಣ ಕೊಡಲೆಂದೇ ಸೃಷ್ಟಿಸಿರುವ ನೆಪಗಳ ಚೀಲವನ್ನು ಎಸೆದಿದ್ದಳು. ಇಂತಹ ಚೀಲವನ್ನು ಹೆಕ್ಕಿ, ಅದರಲ್ಲಿನ ಕಾರಣವನ್ನು ಜೋಪಾನವಾಗಿ ಕಾದಿರಿಸಿಕೊಂಡು ನಂಬುವ ಮೂರ್ಖತನ ನನ್ನಲ್ಲಿ ಇಲ್ಲದಿರುವುದು ನನ್ನ ದುರದೃಷ್ಟ.
ಅದರೆ ನಾನು ಹೋರಾಡುತ್ತೇನೆ ಅಮೃತಾ ಅಲಿಯಾಸ್ ಅಮ್ಮು...

ನೀನು ನನ್ನ ಉಸಿರಾಗಬಾರದು ಎಂದು ನನ್ನ ಕೊನೆಯ ಉಸಿರಿರುವರೆಗೆ...

No comments: