Monday, October 15, 2012

ದೆಹಲಿಗೂ ಹರಿಯಲಿ ಕಾವೇರಿ; ಇಲ್ಲದೇ ಹೋದರೆ ಸೋಲುವಿರಿ


ಗಂಗಾ, ಯಮುನಾ ನದಿಗಳ ಹೆಸರು ಕೇಳಿದರೆ ನಿಮಗೆ ಯಾವುದಾದರೂ ರಾಜ್ಯದ ನೆನಪು ಆಗುತ್ತದೆಯೇ ಎಂದು ಹಿರಿಯ ಪತ್ರಕರ್ತರೊಬ್ಬರು ಕೇಳಿದರು. ನಾನು ಅವಾಕ್ಕಾದೆ. ಗಂಗಾ ನದಿಯೂ ಉತ್ತರಾ ಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಗಳಲ್ಲಿ ಜೀವ ನದಿಯಾಗಿ ಹರಿಯುತ್ತದೆ. ಉತ್ತರಾ ಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿಗಳಿಗೆ ಯಮುನೆಯ ಜೀವದಾಯಿ. ಮಾತು ಮುಂದುವರಿಸಿದ ಅವರು ನನಗೆ ಕಾವೇರಿ ಅಂದರೆ ತಮಿಳುನಾಡಿನ ನೆನಪಾಗುತ್ತದೆ ಎಂದರು. ಹೌದು, ಕಾವೇರಿ ನದಿ ಸಂಪೂರ್ಣವಾಗಿ ತಮಿಳುನಾಡಿಗೆ ಸೇರಿದಾಗಿದ್ದು, ಕರ್ನಾಟಕ ಸುಮ್ಮನೆ ಕಿರಿಕ್ ಮಾಡುತ್ತಿದೆ ಎಂಬ ಭಾವನೆ ಕರ್ನಾಟಕದ ಹೊರಗೆ ಮಡುಗಟ್ಟಿದೆ ಎಂಬುದನ್ನು ಅವರು ನನಗೆ ಸೂಚ್ಯವಾಗಿ ಮನದಟ್ಟು ಮಾಡಿಕೊಟ್ಟಿದ್ದರು.

ಈ ಹಿಂದೆ ಕಾವೇರಿ ವಿವಾದ ೨೦೦೨-೦೩ರಲ್ಲಿ ಉಚ್ಚ್ರಾಯ ಹಂತದಲ್ಲಿದ್ದಾಗ ದೆಹಲಿಯ ಪ್ರಗತಿ ಮೈದಾನದಲ್ಲಿ ತಮಿಳುನಾಡು ಸರ್ಕಾರ ಕಾವೇರಿ ನದಿ ಬಗ್ಗೆ ಒಂದು ಪ್ರದರ್ಶನ ಕಾರ್ಯಕ್ರಮ ಇಟ್ಟುಕೊಂಡಿತ್ತಂತೆ. ಅದರಲ್ಲಿ ಕಾವೇರಿ ನದಿ ತಮಿಳುನಾಡಿನ ಸಂಸ್ಕೃತಿ, ಪರಂಪರೆಯ ಮೇಲೆ ಬೀರಿದ ಪರಿಣಾಮಗಳ ಬಗ್ಗೆ, ತಮಿಳು ಜೀವನದಲ್ಲಿ ಕಾವೇರಿಯ ಪಾತ್ರದ ಬಗ್ಗೆ, ತಮಿಳಿನ ಕಾವ್ಯ, ಕೃತಿಗಳಲ್ಲಿ ಕಾವೇರಿಯ ಬಣ್ಣನೆ ಸೇರಿದಂತೆ, ಕಾವೇರಿ ಸೀಮೆಯ ಕೃಷಿ ಚಟುವಟಿಕೆಗಳ ಬಗ್ಗೆ ಛಾಯಾಚಿತ್ರ ಸಹಿತ ವಿವರಣೆಗಳಿದ್ದವು. ಕಾವೇರಿ ನದಿ ಪೂಂಪ್‌ಹಾರ್‌ನಲ್ಲಿ ಬಂಗಾಳ ಕೊಲ್ಲಿಯಲ್ಲಿ ಲೀನವಾಗುವ ಮೊದಲು ಅದು ಹೇಗೆ ಅಲ್ಲಿನ ಜನಜೀವನದ ಮೇಲೆ ಪರಿಣಾಮ ಉಂಟು ಮಾಡಿದೆ ಎಂಬುದನ್ನು ದೇಶದ ಜನರಿಗೆ ತಿಳಿಯಪಡಿಸಲು ಅಲ್ಲಿನ ಸರ್ಕಾರ ಕೈಗೊಂಡ ಕ್ರಮವಾದು.

ಆದರೆ ನಾವು ಕಾವೇರಿ ನಮ್ಮ ತಾಯಿ ಎಂದು ಭಾವನಾತ್ಮಕವಾಗಿ ಬೊಬ್ಬಿರಿಯುತ್ತೇವೆ, ಆ ತಾಯಿಯನ್ನು ಬಳಸಿಕೊಂಡು ಅದೇಷ್ಟು ರಾಜಕೀಯ ಲಾಭ ಪಡೆಯಬಹುದೋ ಅಷ್ಟನ್ನೂ ಬಾಚಿಕೊಳ್ಳಲು ಬಯಸುತ್ತೇವೆ. ಕಾವೇರಿ ಹೆಸರಲ್ಲಿ ಅದೇಷ್ಟು ಸಾಧ್ಯವೋ ಅಷ್ಟು ಸಂಘಟನೆಗಳನ್ನು ಕಟ್ಟಿ ದೊಣ್ಣೆ ನಾಯಕರಾಗಲು ಹೊರಡುತ್ತೇವೆ. ಆದರೆ ಕಾವೇರಿ ನಮ್ಮ ರಾಜ್ಯಕ್ಕೆ ನೀಡಿದ ಸಾಂಸ್ಕೃತಿಕ, ಸಾಹಿತ್ಯಿಕ, ಚಾರಿತ್ರಿಕ, ಆರ್ಥಿಕ ಕೊಡುಗೆಗಳನ್ನು ರಾಷ್ಟ್ರ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡುವುದೇ ಇಲ್ಲ. ಅದ್ದರಿಂದ ಕಾವೇರಿ ವಿವಾದ ಭುಗಿಲೆದ್ದ ಸಂದರ್ಭಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಸಿಗಬೇಕಾದ ನೈತಿಕ ಬೆಂಬಲ ಸಿಗದೇ ಅದು ತಮಿಳುನಾಡಿನ ಪಾಲಾಗುತ್ತಿದೆ.

ಕಾವೇರಿ ತಟದಲ್ಲಿ ನೆಲೆನಿಂತಿರುವ ತಲಕಾವೇರಿ, ಭಾಗಮಂಡಲ, ಶ್ರೀರಂಗಪಟ್ಣಣ, ಶಿವನ ಸಮುದ್ರ ತಳಕಾಡಿನಂತಹ ಅಸಂಖ್ಯಾತ ಪವಿತ್ರ ಯಾತ್ರ ಸ್ಥಳಗಳು, ಕಾವೇರಿ ಮಡಿಲಲ್ಲಿ ಸಾಮ್ರಾಜ್ಯ ಕಟ್ಟಿ ಮೆರೆದ ಗಂಗರು, ಮೈಸೂರಿನ ಮಹಾರಾಜರು, ಹೈದರಾಲಿ ಮುಂತಾದ ಚಾರಿತ್ರಿಕ ಸತ್ಯಗಳನ್ನು ನಮ್ಮ ನೆರವಿಗೆ ಬಳಸಿಕೊಳ್ಳಲು ನಾವು ಸಂಪೂರ್ಣವಾಗಿ ವಿಫಲರಾಗುತ್ತಿದ್ದೇವೆ. ಕರ್ನಾಟಕದ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಕಾವೇರಿ ಸಂಸ್ಕೃತಿ ನಮ್ಮ ಹಾರಾಟದ ಹೋರಾಟದಲ್ಲಿ ಲೋಕಕ್ಕೆ ಕಾಣುವುದೇ ಇಲ್ಲ.

ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಕೃಷಿ ಮತ್ತು ಕುಡಿಯುವ ನೀರಿಗಾಗಿ ಕಾವೇರಿ ನದಿಯ ಮೇಲೆ ರಾಜ್ಯದ ಅವಲಂಬನೆಯನ್ನು ಅಂಕಿ ಅಂಶಗಳ ಅಧಾರದಲ್ಲಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇದನ್ನೇ ಬಳಸಿಕೊಂಡು ಕೇಂದ್ರದ ನೆರವು ಯಾಚಿಸುತ್ತೇವೆ, ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಗೆಲುವು ಪಡೆಯುವ ದೃಷ್ಟಿಯಲ್ಲಿ ಇದು ಸಮರ್ಥನೀಯ. ಆದರೆ ಸರ್ಕಾರ ಒಂದು ಕಡೆ ಕಾನೂನು ಹೋರಾಟ ಚಾಲ್ತಿಯಲ್ಲಿಟ್ಟು ಕೊಂಡಿರುವಾಗಲೆ ಕಾವೇರಿ ಲಾಬಿಯನ್ನು ಮತ್ತೊಂದು ಮಜಲಿಗೆ ಕೊಂಡು ಹೋಗುವ ಕೆಲಸ ಮಾಡಬೇಕಾಗಿರುವುದು ಈ ಕಾಲಮಾನದ ಜರೂರತ್ತು.

ರಾಷ್ಟ್ರೀಯ ಮಾಧ್ಯಮಗಳಿಗೆ ಕಾವೇರಿ ವಿಷಯದಲ್ಲಿ ತಮಿಳುನಾಡಿನ ನಡೆಯೇ ಆದ್ಯತೆಯ ಸಂಗತಿ. ಸೆಪ್ಟೆಂಬರ್ ೧೯ರಂದು ನಡೆದಿದ್ದ ಕಾವೇರಿ ನದಿ ಪ್ರಾಧಿಕಾರದ ಸಭೆ ಮುಗಿದ ಬಳಿಕ ಇತ್ತ ಕರ್ನಾಟಕ ಭವನದಲ್ಲಿ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿ ಕರೆದಿದ್ದರೆ ಅತ್ತ ತಮಿಳುನಾಡು ಭವನದಲ್ಲಿ ಜಯಲಲಿತಾ ಪತ್ರಿಕಾಗೋಷ್ಠಿ ಕರೆದಿದ್ದರು. ’ಕುರ್ಚಿ ಕದನ’ವಿದ್ದ ಸಂದರ್ಭದಲ್ಲಿ ಸೋ ಕಾಲ್ಡ್ ರಾಷ್ಟ್ರೀಯ ಮಾಧ್ಯಮಗಳ ೩೦-೪೦ ಪತ್ರಕರ್ತರು ಕರ್ನಾಟಕ ಭವನಕ್ಕೆ ಮುತ್ತಿಗೆ ಹಾಕಿದ್ದರೆ ಅಂದು ಹಾಜರಾಗಿದ್ದು ಒಂದೋ ಎರಡೋ ಪತ್ರಕರ್ತರು. ಆದರೆ ತಮಿಳುನಾಡಿನ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಟಿಯಲ್ಲಿ ೩೦-೪೦ ಪತ್ರಕರ್ತರಿದ್ದರು. ಮರುದಿನ ಪತ್ರಿಕೆಗಳಲ್ಲಿಯೂ ತಮಿಳುನಾಡಿನ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಮೊದಲ ಸಾಲುಗಳನ್ನು ಅಲಂಕರಿಸಿದ್ದವು. ಟಿವಿಯಲ್ಲಿಯೂ ಜಯಾರಿಗೆಯೇ ಆದ್ಯತೆ. ಇದಕ್ಕೆ ರಾಜಕೀಯ ಕಾರಣಗಳಿದ್ದರು ಕೂಡ ಪ್ರಾಧಿಕಾರದ ಸಭೆಯಲ್ಲಿ ತನಗಾದ ಅನ್ಯಾಯ ಮತ್ತು ಕಾವೇರಿ ಕಣಿವೆಯ ವಾಸ್ತವ ಸ್ಥಿತಿಯನ್ನು ದೇಶದ ಮುಂದಿಡಲು ರಾಜ್ಯಕ್ಕೆ ಸಾಧ್ಯವೇ ಆಗಲಿಲ್ಲ.

ದಕ್ಷಿಣ ಭಾರತದ ಸುಮಾರು ಪಂಚಕೋಟಿ ಜನತೆ ಮತ್ತು ಅಪಾರ ಪ್ರಮಾಣದ ಪಶು ಪಕ್ಷಿಗಳ ಸಾವು ಬದುಕಿನ ಪ್ರಶ್ನೆ ಕಾವೇರಿಯಲ್ಲಿ ಅಡಗಿದೆ. ಆದರೂ ಕಾವೇರಿ ನೀರಿನಿಂದ ಉಪಕೃತವಾದ ರಾಜ್ಯಗಳ ಹೊರಗಿನ  ಮಾಧ್ಯಮಗಳಿಗೆ ಕಾವೇರಿ ವಿವಾದ ಸುದ್ದಿಯೇ ಆಗಲಿಲ್ಲ. ಅವರಿಗೆ ಇದರಲ್ಲಿ ಯಾವುದೇ ಸೇಲೆಬಲ್ ಅಂಶ ಕಾಣಿಸಲೇ ಇಲ್ಲ! ಪ್ರತಿಭಟನೆಗಳು ಜೋರಾದಾಗ, ಬೆಂಗಳೂರು ಬಂದ್ ಆದಾಗ ಒಮ್ಮೆ ಅವು ಮೈಕೊಡವಿಕೊಂಡವು ಅಷ್ಟೆ. ಈ ಪ್ರತಿಭಟನೆಯ ಹಿಂದಿರುವ ವಾಸ್ತವ ಸ್ಥಿತಿ ಬಗ್ಗೆ ಅವುಗಳದ್ದು ದಿವ್ಯ ನಿರ್ಲಕ್ಷ್ಯ.

ಕೇಂದ್ರದಲ್ಲಿರುವ ಮಂತ್ರಿಗಳು ಮತ್ತು ಕಾಂಗ್ರೆಸ್ ಸಂಸದರು ಪಕ್ಷಕ್ಕೆ ತಮ್ಮ ’ಅತಿ ನಿಷ್ಠೆ’ ತೋರಿಸುವ ಭರದಲ್ಲಿ ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ ಎಂದೆನಿಸುತ್ತದೆ. ಅವರಿಗೆ ಪಕ್ಷದ ಚೌಕಟ್ಟಿನಲ್ಲೇ ಕಾವೇರಿಗಾಗಿ ಹೊರಡುವ ಸಾಕಷ್ಟು ಅವಕಾಶಗಳಿದ್ದವು. ಕಾವೇರಿ ವಿವಾದದ ಸುಳಿವು ಸಿಕ್ಕ ಕೂಡಲೆ ಪ್ರಧಾನಿಯನ್ನು ಭೇಟಿಯಾಗಿ ಅವರಿಗೆ ರಾಜ್ಯದ ವಾಸ್ತವ ಸ್ಥಿತಿಯನ್ನು ವಿವರಿಸುವ ಕೆಲಸ ಮಾಡಬಹುದಿತ್ತು. ಪತ್ರ ಬರೆದು ರಾಜ್ಯದ ಸ್ಥಿತಿ ವಿವರಿಸಬಹುದಿತ್ತು. ವಿದೇಶಾಂಗ ಸಚಿವ ಎಸ್. ಎಂ ಕೃಷ್ಣ ಒಂದು ಓಲೆ ಬರೆದರೂ ಕೂಡ ಅಷ್ಟರ ಹೊತ್ತಿಗೆ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದು ತಮಿಳುನಾಡು ಸೇರಿತ್ತು. ಆ ಬಳಿಕ ಮುನಿಯಪ್ಪ, ಖರ್ಗೆ ಅವರ ಜೊತೆ ಸೇರಿ ಪ್ರಧಾನಿ ಭೇಟಿ ಮಾಡುವ ಸಾಹಸ ಮಾಡಿದರು. ಮತ್ತೆ ಮೊಯಿಲಿ ನಾನು ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದರು. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಕಾಂಗ್ರೆಸ್‌ನ ನಾಯಕರಿಗೆ ’ಅತಿ ವಿನಯ’ ಪ್ರದರ್ಶಿಸುವ ಭರದಲ್ಲಿ ರಾಜ್ಯಕ್ಕಾದ ಅನ್ಯಾಯ ನಗಣ್ಯವಾಗಿ ಹೋಯಿತು.

ಇನ್ನು ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಪಕ್ಷ ಎರಡೂ ಕೂಡ ಕಾವೇರಿ ವಿಷಯವನ್ನು ನಿರ್ವಹಿಸುವಲ್ಲಿ ಕಿಂಚಿತ್ ಜಾಣ್ಮೆ, ದೃಢತೆ ತೋರಲೇ ಇಲ್ಲ. ಕುರ್ಚಿ ಉಳಿಸಲು, ಉರಳಿಸಲು ಉದುರಿಸುವ ದಾಳಗಳ ಲೆಕ್ಕಾಚಾರಕ್ಕೆ ನೀಡುವ ಗಮನದ ಕನಿಷ್ಠ ಪ್ರಮಾಣವನ್ನು ಕಾವೇರಿ ಉಳಿಸಲು ನೀಡುತ್ತಿದ್ದರು ಕೂಡ ಸುಪ್ರೀಂ ಕೋರ್ಟ್‌ನ ಛೀಮಾರಿ ಮತ್ತು ಪ್ರಾಧಿಕಾರದ ಸಭಾ ತ್ಯಾಗದಂತಹ ಮೂರ್ಖ ನಡೆಗಳಿಂದ ಪಾರಾಗಬಹುದಿತ್ತು.

ರಾಜ್ಯದ ಸಂಸದರು ಒಗ್ಗಟ್ಟಾಗಿ ದೆಹಲಿಗೆ ಬಂದು ಒಂದು ಪ್ರತಿಭಟನೆ ನಡೆಸುತ್ತಿದ್ದರೆ ಅದೊಂದು ಸಂಚಲನ ಸೃಷ್ಟಿಸುತ್ತಿತ್ತು. ಆ ಮೂಲಕ ದೇಶದ ಮುಂದೆ ಕಾವೇರಿ ಮತ್ತು ಕರ್ನಾಟಕದ ಮಧ್ಯೆ ಇರುವ ಅವಿನಾನುಭವ ಸಂಬಂಧವನ್ನು ಪರಿಚಯಿಸುವ ವೇದಿಕೆ ನಿರ್ಮಾಣವಾಗುತ್ತಿದ್ದು. ಆದರೆ ಅವರು ಇದೆಲ್ಲವನ್ನು ಬಿಟ್ಟ ಯಾವ ಒಲೆಯಲ್ಲಿ ನನ್ನ ’ಮತ ಬೇಳೆ’ ಬೇಗ ಬೇಯುತ್ತದೆ ಎಂದು ರಾಜ್ಯದಲ್ಲೇ ಘೋಷಣೆ ಕೂಗುತ್ತ ಅವರೆಲ್ಲ ಇದ್ದಾರೆ. ಕಾವೇರಿ ಸಮಸ್ಯೆ ರಾಜ್ಯದೊಳಗೆ ಪರಿಹಾರ ಕಾಣುವಂತಹದ್ದಲ್ಲ. ಕಾವೇರಿ ವಿಷಯದಲ್ಲಿ ರಾಜ್ಯದ ಪರ ಅಭಿಪ್ರಾಯ ಸೃಷ್ಟಿಸುವ ಮಹತ್ತರ ಕೆಲಸ ದೆಹಲಿಯಲ್ಲಿ ನಡೆಯಬೇಕಿದೆ ಎಂಬ ಸರಳ ಸತ್ಯ ಅವರಿಗೆ ಹೊಳೆಯಲೇ ಇಲ್ಲ.

ದೆಹಲಿಯ ಜಂತರ್ ಮಂತರ್ ಪ್ರತಿಭಟನೆಗಳ ಕೇಂದ್ರ. ಅಲ್ಲಿ ದಿನಕ್ಕೆ ೪-೫ ಪ್ರತಿಭಟನಾ ಸಭೆಗಳು ನಡೆಯುವುದು ಸಾಮಾನ್ಯ. ಅಲ್ಲಿ ನಡೆಯುವ ಪ್ರತಿಭಟನೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದು ಅಪರೂಪ. ಅದೇ ಜಾಗದಲ್ಲಿ ಕಬಿನಿ ಹಿತ ರಕ್ಷಣಾ ಸಮಿತಿ ಅವರು ಕಾವೇರಿಗಾಗಿ ಪ್ರತಿಭಟನೆ ನಡೆಸಿದರು. ಇದು ಕನ್ನಡ ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪ್ರಕಟವಾಯಿತು ಅಷ್ಟೆ. ಇದರಿಂದ ಏನು ಪ್ರಯೋಜನ? ಒಂದು ವೇಳೆ ರಾಜ್ಯದ ಸಂಸದರೆಲ್ಲ ಒಟ್ಟಾಗಿ ಇಂತಹ ಪ್ರತಿಭಟನೆ ನಡೆಸುತ್ತಿದ್ದಾರೆ ಅದು ಸೃಷ್ಟಿಸುತ್ತಿದ್ದ ಒತ್ತಡ ಅಪರಿಮಿತವಾಗಿರುತ್ತಿತ್ತು.

ರಾಜ್ಯ ಸರ್ಕಾರದ ಮನವಿಯ ಮೇರೆಗೆ ಕೇಂದ್ರ ಜಲ ಸಂಪನ್ಮೂಲ ತಂಡ ಕಾವೇರಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಲು ಪ್ರಮುಖ ಕಾರಣ ಮಾಜಿ ಪ್ರಧಾನಿ ದೇವೇ ಗೌಡರು ದೆಹಲಿ ಮಟ್ಟದಲ್ಲಿ ನಡೆಸಿದ ಪ್ರಯತ್ನ. ಇದೇ ಕೆಲಸವನ್ನು ಬಿಜೆಪಿಯ ಅತಿರಥ ನಾಯಕ ಆನಂತ್ ಕುಮಾರ್, ಕಾಂಗ್ರೆಸಿನ ಮಹಾರಥಿಗಳಾದ ಎಸ್. ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಮುನಿಯಪ್ಪ ಮುಂತಾದವರೆಲ್ಲ ಮಾಡಿದ್ದರೆ ಪ್ರಧಾನಿಗಳ ಸುತ್ತ ರಾಜ್ಯದ ಒಂದು ಒತ್ತಡ ವಲಯ ಸೃಷ್ಟಿಯಾಗಿರುತ್ತಿತ್ತು. ಮುಂದಿನ ದಿನಗಳಲ್ಲಾದರೂ ಇದು ರಾಜ್ಯದ ಸಹಾಯಕ್ಕೆ ಬರುತ್ತಿತ್ತು.

ಯಾವುದೆ ಸಮಸ್ಯೆಗೆ ರಾಜಕೀಯ ಹೋರಾಟ ಪರಿಹಾರವಾಗಲಾರದು. ಏಕೆಂದರೆ ಸಮಸ್ಯೆಯನ್ನು ಜೀವಂತವಾಗಿಡುವುದು ತಾನೇ ರಾಜಕೀಯದ ಒಳ ಸುಳಿ! ಅದ್ದರಿಂದ ಕಾವೇರಿ ಹೋರಾಟ ರಾಜಕೀಯದ ಸುಳಿಗೆ ಸಿಳುಕಿಕೊಂಡದ್ದೆ ಆದರೆ ಅದಕ್ಕಂತೂ ಶಾಶ್ವತ ಮೋಕ್ಷ ಪ್ರಾಪ್ತವಾಗಲು ಸಾಧ್ಯವಿಲ್ಲ. ಕಾವೇರಿ ಸಮಸ್ಯೆಗೆ ಪರಿಹಾರ ದೊರಕುವುದು ದೆಹಲಿಯಿಂದಲೇ ಅನ್ನುವುದು ನಿಚ್ಚಳ ಸತ್ಯ.

ಈಗ ಎದ್ದಿರುವ ಕಾವೇರಿ ಕಿಚ್ಚು ಶಮನಗೊಳ್ಳುತ್ತಲೇ ರಾಜ್ಯ ಸರ್ಕಾರ ದೆಹಲಿಯಲ್ಲಿ ಕಾವೇರಿ ಸೇರಿದಂತೆ ಎಲ್ಲ ಜಲ ವಿವಾದಗಳ ಪರಿಹಾರಕ್ಕೆ ಪೂರಕ ವಾಗುವಂತೆ ಮತ್ತು ಆ ನದಿಗಳ ಜೊತೆ ರಾಜ್ಯದ ಜನಜೀವನದ ಮಿಳಿತ-ತುಡಿತಗಳನ್ನು ಬಿಂಬಿಸುವ ಪ್ರಯತ್ನ ಮಾಡಿದರೆ ಚೆನ್ನ.

ರಾಜ್ಯದ ಬಗ್ಗೆ ದೆಹಲಿ ಆಳುವವರಲ್ಲಿ ಮತ್ತು ಜನರಲ್ಲಿ ಅಭಿಪ್ರಾಯ ಹುಟ್ಟಿಸುವ ನಾಯಕರಲ್ಲಿ ಒಂದು ಮೃದು ಅಭಿಪ್ರಾಯವಿದ್ದದ್ದೆ ಆದರೆ ಅದು ಆಣೆಕಟ್ಟೆಯಲ್ಲಿ ಸಂಗೃಹಿಸಿಟ್ಟ ನೀರಿನಂತೆ ಎಂಬುದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಈಗ ಅಲ್ಲದೆ ಹೋದರೂ ಮುಂದೊಂದು ದಿನ ಅಗತ್ಯ ಬಿದ್ದ ಸಂದರ್ಭದಲ್ಲಿ ಈ ಸಂಗ್ರಹಿಸಿದ ನೀರನ್ನು ಬಳಸಿಕೊಳ್ಳಬಹುದು. ಆದರೆ ನಮ್ಮನಾಳುವವರಿಗೆ ಇಷ್ಟೆಲ್ಲ ದೂರದೃಷ್ಟಿ ಇದೆಯೇ? ಇದ್ದರೂ ಅವರಿಗೆ ಮುಂದಿನ ಚುನಾವಣೆಯ ಸಮೀಪ ದೃಷ್ಟಿಯನ್ನು ಮೀರಿ ನಡೆಯುವ ಬದ್ಧತೆ ಇರುವುದು ಕಷ್ಟ.

No comments: