Saturday, January 21, 2012

ಏನಿದು?


ವಿಷಾದದ ಕರಿನೆರಳಲ್ಲಿ
ಕರಿ ನಾಗರದ ಮರಿ
ಪ್ರೀತಿಸಿದ ಹೆಬ್ಬುಲಿಗೆ
ಬೇಕಂತೆ ನನ್ನ ಬಲಿ

ದೇವರು ದಿಂಡರು
ಹೊದ್ದು ಮಲಗಿರುವರು ಕಂಬಳಿ
ಗಂಟೆ, ಜಾಗಟೆ
ನಮಾಜು, ಪ್ರಾರ್ಥನೆಗಳ ಕರಾಮತ್ತು
ಇನ್ನು ನಡೆಯದು
ಅವರ ಬಳಿ

ಹಸಿ ನೋಟುಗಳ ದಾಹಕ್ಕೆ
ಮಿಡಿ ಮಿಡಿಯುವ ಹೃದಯಗಳ ಬಲಿ
ಹಸಿ ತೊಡೆಗಳ ಕಾದಾಟಕ್ಕೆ
ಕೋಟಿ ಕೋಟಿ ಜೀವ ಬಲಿ

ಪ್ರೀತಿ ಪ್ರೇಮ
ಹೋಗಿದೆ ಬೇರೆ ಲೋಕಕ್ಕೆ
ದ್ವೇಷ ಅಸೂಯೆ
ಬಂದು ಕುಳಿತಿದೆ ನಮ್ಮ ಪಕ್ಕಕ್ಕೆ

Monday, January 16, 2012

ಆ ಹಳಿಗಳಂತೆ



ಹಳಿಗಳ ಮೇಲೆ
ಸಾಗುತಿದೆ ಪಯಣ

ಮಿಂಚು ಬೆಳಕಿನ ದಾರಿ
ಹಿಂದೆ ಮುಂದೆ ಸಾಲು ಸಾಲು ಬೋಗಿ
ಅದರಲ್ಲೊಂದರಲ್ಲಿ ನಾನು

ಕೂತು ಕೂತು ಬೋರು
ಬಾಗಿಲ ಬಳಿ ಹೋಗೋಣ
ಹಾಗೇ ಸುಮ್ಮನೆ ಹೊರಗೆ ನೊಡೋಣ
ಚಿತ್ರವೊಂದೂ ಮನದಲಿ ನಿಲ್ಲುತ್ತಿಲ್ಲ
ನನ್ನ ಮಾಜಿ ಪ್ರೇಯಸಿಯರಂತೆ
ನೋಡಿ ನೋಡಿ ಬೋರು
ಹೋಗಿ ಕೂರೋಣ ಸಾಕು

ಚೂಟಿ ಹುಡುಗಿ, ತುಂಟ ಹುಡುಗ
ಗಂಡ ಹೆಂಡತಿ ಮತ್ತೆ ಮೂವರು
ಮತ್ತೊಬ್ಬ ನಾನು
ಮಕ್ಕಳದ್ದು ಮಂಗನಾಟ
ತಂದೆತಾಯಿಗಳಿಗೆ ಸಂಕಟ

"ಶ್, ಏನು? ಅತ್ತಿತ್ತ ಓಡಾಟ
ಕುಂತಲ್ಲಿ ಕೂರಲಾಗುವುದಿಲ್ಲವೇ ನಿಮಗೆ?"
ಅರೆ ಕ್ಷಣ ಮೌನ
ನನ್ನ ಮೊಗದಲ್ಲಿ ಒಂದು ನಗು
ಆ ಮೂವರು ನೆನಪಿಸುವಂತಿದೆ
ಏನನ್ನೋ

ನೀರು, ಜ್ಯೂಸು, ಮ್ಯಾಪು
ಆಟದ ಸಾಮಾನು
ಬಣ್ಣ ಬಣ್ಣದ ಕನಸುಗಳ
ಕಮಾನು
ನಗು, ಮಾತು,
ಪರಿಚಯ ಸಲಿಗೆ
ಕೆಲವು ಘಂಟೆಗಳ
ಪಯಣದ ಬಾಳಿಗೆ

ದೇಶ, ರಾಜಕೀಯ
ಹೆಣ್ಣು, ಬದುಕು
ತಿರುಗುತ್ತಿದೆ ಮನದೊಳಗೆ
ಆ ಫ್ಯಾನ್‌ನಂತೆ
ಕನಸು ನನಸು
ಆಕಾಂಕ್ಷೆ ವಾಸ್ತವ
ಒಟ್ಟು ಸೇರುತ್ತಿಲ್ಲ
ಆ ಹಳಿಗಳಂತೆ

Thursday, January 12, 2012

"ಸಾಹಿತ್ಯ ಕ್ಷೇತ್ರದಲ್ಲೂ ಜಾತೀಯತೆ ಹೆಚ್ಚಾಗಿದೆ"


ನಾರಾಯಣ ಭಟ್ಟ ಅವರು ನಾ ಮೊಗಸಾಲೆ ಎಂಬ ಹೆಸರಿನಿಂದ ಬರವಣಿಗೆಯ ಕೃಷಿ ಮಾಡಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರು ತಮ್ಮ ವೈದ್ಯ ಕಾಯಕ, ಸಾಹಿತ್ಯದ ಕೈಂಕರ್ಯ ಮತ್ತು ಸಾಹಿತ್ಯ ಸಂಘಟನೆಗೆ ಆಯ್ದುಕೊಂಡದ್ದು ಕಾಂತವಾರ ಎಂಬ ಕುಗ್ರಾಮವನ್ನು. ಅವರೊಂದಿಗೆ 'ದಿ ಸಂಡೆ ಇಂಡಿಯನ್' ಪತ್ರಿಕೆಯ ಸಾಕ್ಷಿಪ್ರಜ್ಷೆ ಅಂಕಣಕ್ಕಾಗಿ ನಾನು  ನಡೆಸಿದ ಸಂದರ್ಶನ.

ವೈದ್ಯಕೀಯ ವೃತ್ತಿಯೊಂದಿಗೆ ಸಾಹಿತ್ಯ ಮತ್ತು ಸಂಘಟನೆಗಳ ಒಡನಾಟ ಹೇಗೆ ಹುಟ್ಟಿಕೊಂಡಿತು?
ವೃತ್ತಿಯಲ್ಲಿ ವೈದ್ಯನಾದರೂ ನಾನು ಮೂಲತಃ ಸಾಹಿತಿ. ತಾನು ಹುಟ್ಟಿ ಬೆಳೆದ ಪರಿಸರ ಮತ್ತು ಮನೆಯ ವಾತವರಣ ಸಾಹಿತ್ಯಕ್ಕೆ ಪೂರಕವಾಗಿತ್ತು. ನನ್ನ ಸಂಬಂಧಿಕರೊಬ್ಬರು ನಾಟಿ ವೈದ್ಯರಾಗಿದ್ದರೂ ಕೂಡ ನಾನು ವೈದ್ಯನಾದದ್ದು ಮಾತ್ರ ಕಾಕತಾಳೀಯ. ನಾನು ಇಂಗ್ಲೀಷ್ ಅಧ್ಯಾಪಕನಾಗಬೇಕು ಎಂದು ಬಯಸಿದ್ದೆ. ನಾನು ಕಾಸರಗೋಡಿನ ಕೋಳ್ಯೂರುನ ಮೊಗಸಾಲೆಯಲ್ಲಿ ಶ್ರೀಮಂತ ಮನೆತನದಲ್ಲಿ ಜನಿಸಿದ್ದೆ. ಆದರೆ ನನ್ನ ತಂದೆಯ ಕಾಲಕ್ಕೆ ನಮ್ಮ ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ನನ್ನ ಚಿಕ್ಕಪ್ಪ ಯಕ್ಷಗಾನದ ಅರ್ಥಧಾರಿ, ತಂದೆಯ ಅಕ್ಕ (ಸೋದರತ್ತೆ) ಓಲೆಗರಿ ಗ್ರಂಥಗಳನ್ನು ಓದುವ ಪರಿಪಾಠ ಇಟ್ಟುಕೊಂಡಿದ್ದರು. ಅವರದನ್ನ್ನು ಗಮಕದ ರೀತಿಯಲ್ಲಿ ಹೇಳುತ್ತಿದ್ದರು. ಇದು ನನ್ನ ಮೇಲೆ ತುಂಬಾ ಪ್ರಭಾವ ಬೀರಿತು. ನಾನು ಒಡಿಯೂರಿನಲ್ಲಿದ ಸೋದರ ಮಾವನ ಮನೆಯಿಂದ ಕನ್ಯಾನ ಶಾಲೆಗೆ ಹೋಗುತ್ತಿದ್ದೆ. ಅಲ್ಲಿ ಪಂಜಾಜೆ ಶಂಕರ ಭಟ್ಟ ಎಂಬ ಉತ್ತಮ ಮೇಷ್ಟ್ರು ಇದ್ದರು. ಆಗ ಶಿವರಾಮ ಕಾರಂತರು ೧೫೦ ಶಾಲೆಗಳಲ್ಲಿ ಮಕ್ಕಳ ಕೂಟಗಳನ್ನು ನಡೆಸಿದ್ದರು. ಅವರು ಈ ಕಾರ್ಯಕ್ರಮದಿಂದ ಪ್ರೇರಣೆ ಪಡೆದರು. ಇವರ ಜೊತೆಗೆ ಬಿ ಎಂ ಇದಿನಬ್ಬ ಅವರು ಕೂಡ ಮಕ್ಕಳ ಹಾಡುಗಳನ್ನು ಹಾಡುತ್ತಿದ್ದರು. ಇದು ನನ್ನ ಮೇಲೆ ಪ್ರಭಾವ ಬೀರಿತು. ನಾನು ಕೂಡ ಸಾಹಿತಿಯಾಗಬೇಕು ಎಂಬ ಆಸೆ ಮೊಳಕೆಯೊಡೆಯಿತು. ನನ್ನ ಮನೆಯಲ್ಲಿ ಮೊದಲು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದು ನಾನೆ. ನಾನು ಪಿಯುಸಿ ಸೇರಲೆಂದು ಪೂರ್ಣಪ್ರಜ್ಞಾ ಮತ್ತು ಎಮ್‌ಜಿಎಮ್ ಕಾಲೇಜ್‌ಗೆ ಹೋದಾಗ ಅಲ್ಲಿ ಎಲ್ಲ ಸೀಟ್‌ಗಳು ಭರ್ತಿಯಾಗಿದ್ದವು. ಅದ್ದರಿಂದ ಉಡುಪಿಯ ಆಯುರ್ವೇದ ಕಾಲೇಜ್‌ನ್ನು ೧೯೬೧ರಲ್ಲಿ ಸೇರಿಕೊಂಡೆ. ಅಲ್ಲಿ ಡೊನೇಷನ್, ಶುಲ್ಕಗಳಿರಲಿಲ್ಲ. ಪೇಜಾವರಶ್ರೀಗಳೆ ನನಗೆ ಆಶ್ರಯ ನೀಡಿದ್ದರು. ಆಗ ನಾನು ಆಯುವೇದಕ್ಕಿಂತ ಸಾಹಿತ್ಯದ ಆಧ್ಯಯನವನ್ನೇ ಹೆಚ್ಚಾಗಿ ಮಾಡಿದೆ. ಸಣ್ಣಪುಟ್ಟ ಪತ್ರಿಕೆಯಲ್ಲಿ ಬರೆಯುತ್ತಿದ್ದೆ. ೧೯೬೫ರ ಹೊತ್ತಿಗೆ ಉದಯೋನ್ಮುಖ ಬರಹಗಾರನಾಗಿ ಗುರುತಿಸಲ್ಪಟ್ಟೆ. ೧೮ನೇ ವರ್ಷದಲ್ಲಿ ಮಣ್ಣಿನ ಮಕ್ಕಳು ಕಾದಂಬರಿ ಬರೆದೆ. ೨೦ನೇ ವಯಸ್ಸಿನಲ್ಲಿ ಅನಂತ ಕಾದಂಬರಿ ಬರೆದೆ. ಇದರಲ್ಲಿನ ಸಂಭಾಷಣೆಗಳು ಹವ್ಯಕ ಭಾಷೆಯಲ್ಲೇ ಇತ್ತು. ನಂತರ ಡಿ.ಎಸ್..ಸಿ ಡಿಪ್ಲೋಮಾ ಪದವಿ ಮುಗಿಸಿ ಮನೆಗೆ ಬಂದೆ. ಆಗ ಸ್ವಂತದ್ದೊಂದು ಕ್ಲಿನಿಕ್ ತೆರೆಯಲು ಕೂಡ ನನ್ನಲ್ಲಿ ಹಣವಿರಲಿಲ್ಲ. ಆಗ ಕಾಂತವರದಲ್ಲಿ ತಾಲೂಕು ಬೋರ್ಡ್ ಅಸ್ಪತ್ರೆ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂಬುದು ತಿಳಿಯಿತು. ಹಾಗೆ ಇಲ್ಲಿನ ರೂರಲ್ ಡಿಸ್ಪೆನ್ಸರಿಯಲ್ಲಿ ಅರೆಕಾಲಿಕ ವೈದ್ಯನಾಗಿ ಸೇರಿಕೊಂಡೆ. ಇಲ್ಲಿ ಮೂಲಭೂತ ಸೌಕರ್ಯಗಳಿರಲಿಲ್ಲ. ಆದರೆ ಇಲ್ಲಿನ ಜನರು ನನ್ನನ್ನು ತುಂಬ ಪ್ರೀತಿಸಿದರು. ಅವರದ್ದು ಸಹಜವಾದ ಒಳ್ಳೆಯತನವಾಗಿತ್ತು. ಈ ಊರಿನವರೇ ಆಗಿದ್ದ ಪ್ರೇಮಲತಾರನ್ನು ವಿವಾಹವಾದೆ. ಪ್ರೇಮಲತಾರವರ ತಂದೆ ರಾಮಕೃಷ್ಣಯ್ಯ ನನ್ನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು.

ನೀವು ನಿಮ್ಮನ್ನು ಬರವಣಿಗೆಗಷ್ಟೆ ಸೀಮಿತಗೊಳಿಸದೇ ಸಮಾಜ ಸೇವೆ, ಸಂಘಟನೆ ಮುಂತಾದ ಕೆಲಸಗಳನ್ನು ಮಾಡಿದವರರು. ಇದು ಹೇಗೆ ಸಾಧ್ಯವಾಯಿತು? ಮತ್ತು ಯಾಕಾಗಿ?
ಇಲ್ಲಿ ಯಾವುದೇ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಬೇಲಾಡಿಯ ಶಾಲೆಯಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿದ್ದವು. ಇದನ್ನು ಕಂಡು ನಮ್ಮೂರಲ್ಲಿ ಕೂಡ ಇಂತಹ ಚಟುವಟಿಕೆ ನಡೆಯಬೇಕು ಎಂದು ರೈತ ಯುವಕ ಮಂಡಲ ಮಾಡಿದೆವು. ಆದರೆ ಅದರಲ್ಲಿ ಹುಟ್ಟಿಕೊಂಡ ಗೊಂದಲಗಳಿಂದಾಗಿ ನಾನು ಅದರಿಂದ ವಿಮುಖನಾದೆ. ನಂತರ ‘ಕಾಂತವರ ಕನ್ನಡ ಸಂಘ (೧೯೭೬)ವನ್ನು ಸ್ಥಾಪಿಸಿದೆ. ಇದರಿಂದ ನನಗೆ ಸಾಹಿತಿಗಳ ಸಂಪರ್ಕ ಸಾಧ್ಯವಾಯಿತು. ಈ ಮೂಲಕ ಗ್ರಾಮೀಣ ಭಾಗದಲ್ಲಿಯೂ ಸಾಹಿತ್ಯ ಚಟುವಟಿಕೆಗಳು ಪ್ರಾರಂಭವಾಯಿತು. ಇನ್ನು ಮುದ್ದಣ್ಣ ಕಾವ್ಯ ಸ್ಮಾರಕ ಪ್ರಶಸ್ತಿ ಮತ್ತು ಅನಂತರ ವರ್ಧಮಾನ ಪ್ರಶಸ್ತಿ ಪೀಠ (೧೯೭೮))ದ ಮೂಲಕ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ನಾವು ಕಳೆದ ೩೪ ವರ್ಷಗಳಿಂದ ನೀಡುತ್ತಿದ್ದೇವೆ. ವರ್ಧಮಾನ ಪೀಠ ಈಗ ಸ್ವಾಯತ್ತವಾಗಿದೆ. ಇತ್ತೀಚೆಗೆ ‘ಅಲ್ಲಮ ಪೀಠದ ಕಲ್ಪನೆ ಮೂಡಿದೆ. ಈ ಪೀಠದ ಮೂಲಕ ಒಂದು ಆಧ್ಯಯನ ಕೇಂದ್ರ, ಒಪನ್ ಥಿಯೇಟರ್, ಗ್ರಂಥಾಲಯ ತೆರೆಯಬೇಕು ಎಂಬುದು ನಮ್ಮ ಯೋಚನೆ. ಇದು ಅಂದಾಜು ೧೫ ಕೋಟಿಯ ಯೋಜನೆ. ೫೦ ಲಕ್ಷ ಕೊಡುವುದಾಗಿ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಈಗಾಗಲೇ ೪ ಎಕರೆ ಜಾಗವನ್ನು ಸರ್ಕಾರ ಕೊಂಡು ಕೊಂಡಿದೆ. ಅದೇ ರೀತಿ ಹೊರಗಿನಿಂದ ಬಂದು ಇಲ್ಲಿ ನೆಲೆಸಿ ಗ್ರಾಮೀಣ ಜೀವನವನ್ನು ಸವಿಯುವ ಮನಸ್ಸಿರುವವರಿಗೆ ಸೈಟ್ ನೀಡುವ ಯೋಜನೆಯನ್ನು ಕೂಡ ಹಾಕಿಕೊಳ್ಳಲಾಗಿದೆ. ಹಳ್ಳಿಗಳತ್ತ ಜನರನ್ನು ಸೆಳೆಯಬೇಕು ಎಂಬುದೇ ಈ ಯೋಜನೆಯು ಉದ್ದೇಶ. ಇದು ಗ್ರಾಮ ಜೀವನದ ಅಸ್ಮಿತೆಯನ್ನು ಉಳಿಸುವ ನನ್ನ ಪ್ರಯತ್ನ ಮತ್ತು ಜಾಗತೀಕರಣದ ವಿರುದ್ಧದ ನನ್ನ ಪ್ರತಿರೋಧವನ್ನು ವ್ಯಕ್ತ ಪಡಿಸುವ ರೀತಿ.

ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರವಾದ ನಿಮ್ಮ ಪ್ರಸಿದ್ಧ ಕೃತಿ ಉಲ್ಲಂಘನೆಯ ಕುರಿತು...
ಇಲ್ಲಿ, ನನಗೆ ಹೆಚ್ಚು ಸಂಪರ್ಕಕ್ಕೆ ಬಂದವರು ಬಂಟರು, ಬಿಲ್ಲವರು ಮತ್ತು ಕೆಳವರ್ಗದವರು. ನಾನು ಈ ಕೃತಿಯಲ್ಲಿ ದಕ್ಷಿಣ ಕನ್ನಡದ ಸಾಂಸ್ಕೃತಿಕ ಚಿತ್ರಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಬಯಸಿದ್ದೆ. ನಾನು ತಿಳಿದುಕೊಂಡಂತೆ ಇದಕ್ಕೆ ಬಂಟ ಸಮುದಾಯವೇ ಸೂಕ್ತ. ಕರಾವಳಿ ಭಾಗದಲ್ಲಿ ಬಂಟರು ಅತ್ಯಂತ ಬಲಿಷೃರಾಗಿದ್ದರು ಎಂಬುದನ್ನು ನಾವು ಅಲ್ಲಗಳೆಯುವ ಹಾಗಿಲ್ಲ. ಇಂದು ಗುತ್ತಿನ ಮನೆಯ ವೈಭವ ಸಹಜವಾಗಿಯೇ ಕುಸಿಯುತ್ತಿದ್ದೆ. ಒಬ್ಬ ಮನುಷ್ಯನನ್ನು ಒಂದು ಚೌಕಟ್ಟಿನಲ್ಲಿ ನೋಡಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಉಲ್ಲಂಘನೆ ಮುಖ್ಯವಾಗುತ್ತದೆ. ತುಂಬಾ ಮಾನವೀಯ ಉದ್ದೇಶವನ್ನು ಹೊಂದಿದ್ದ ಭೂಮಸೂದೆ ಕಾಯ್ದೆ ಕೂಡ ತನ್ನ ಆಶಯವನ್ನು ಈಡೇರಿಸಿಕೊಳ್ಳುವಲ್ಲಿ ವಿಫಲವಾತು. ಬಹಳಷ್ಟು ಭವ್ಯ ಗುತ್ತಿನ ಮನೆಗಳು ನಾಶವಾಗುತ್ತಿರುವುದನ್ನು ಕಂಡಾಗ ನನಗೆ ಭಯವಾಗಿತ್ತು. ಗುತ್ತು ನಾಶವಾಗುತ್ತಿದೆ ಅಂದರೆ ಅದರರ್ಥ ನಮ್ಮ ಕೃಷಿ ಸಂಸ್ಕೃತಿ ನಾಶವಾಗುತ್ತದೆ ಎಂಬುದೇ ನನ್ನ ಭಯಕ್ಕೆ ಕಾರಣ. ಹಳ್ಳಿ ನಾಶವಾಗುತ್ತಿದೆ, ಅನೇಕ ಪಲ್ಲಟಗಳಾಗುತ್ತಿದೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನನ್ನ ಈ ಕೃತಿಯನ್ನು ಓದಿದ್ದ ಅನೇಕ ಬಂಟರು ತಮ್ಮ ಸಂಸ್ಕೃತಿಯ ಬಗ್ಗೆ ಅಶ್ಚರ್ಯ ಚಕಿತರಾಗಿದ್ದರು.

ಹಳ್ಳಿಗಳ ಪ್ರಗತಿ ಎತ್ತ ಸಾಗುತ್ತಿದೆ?
ನಮಗೆ ತೋರಿಕೆಯ ಪ್ರಗತಿ ಕಾಣುತ್ತಿದೆ. ಪ್ರಗತಿ ಎಂದರೆ ನಮಗೆ ಅರ್ಥಿಕ ಅಭಿವೃದ್ಧಿಯನ್ನು ತೋರಿಸುತ್ತಾರೆ. ಆದರೆ ಕೃಷಿಯ ಅಭಿವೃದ್ಧಿಗೆ ಬೇಕಾದ ಮೂಲಭೂತ ಸಂಗತಿಗಳನ್ನು ಸರ್ಕಾರ ಇನ್ನೂ ಕೊಟ್ಟಿಲ್ಲ. ರೈತರಿಗೆ ತಾವು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸಬ್ಸಿಡಿ ಕೊಟ್ಟ ಕ್ಷಣ ರೈತರ ಅಭಿವೃದ್ಧಿ ಆಗುವುದಿಲ್ಲ. ಅವರಿಗೆ ಮಾರ್ಗದರ್ಶನದ ಕೊರತೆಯಿದೆ. ಕೆಲವು ಕೆಲಸ ಮಾಡುವುದು ತಪ್ಪು ಎಂಬ ಕೀಳರಿಮೆ ಇದೆ. ಇಂದಿನ ಜನಾಂಗಕ್ಕೆ ಕುಲ ಕಸುಬು ಬೇಕಿಲ್ಲ. ಜನರು ಸುಲಭದ ಕೆಲಸಕ್ಕೆ ಮಾರು ಹೋಗುತ್ತಿದ್ದಾರೆ. ಪ್ರಾಣಿ ಪಕ್ಷಿಗಳ ಜೊತೆಗಿನ ಅವರ ಒಡನಾಟ ಕಡಿಮೆಯಾಗಿದೆ. ನಮ್ಮ ಹಿರಿಯರಿಗೆ ಬದುಕನ್ನು ಕಟ್ಟಿಕೊಡುವ ಕಲೆಗಾರಿಕೆ ಇತ್ತು. ಆದರೆ ಈಗ ಬದುಕನ್ನು ಬಿಚ್ಚಿಡುವ ಕೆಲಸವೇ ನಡೆಯುತ್ತಿದೆ.

ಪಠ್ಯಗಳಲ್ಲಿ ಪ್ರಾದೇಶಿಕತೆ ತರುವ ಬಗ್ಗೆ ನಿಮ್ಮ ಅನಿಸಿಕೆ.
ನಮ್ಮ ಶಿಕ್ಷಣ ನೀತಿಯೇ ಸರಿ ಇಲ್ಲ. ಇಲ್ಲಿ ವೈಜ್ಞಾನಿಕ ನೀತಿ ನಿಯಮಗಳು ಆಗಿಲ್ಲ. ನಾವು ಸಾಹಿತ್ಯದಲ್ಲಿ ದೇಸಿ ಬೇಕು ಎನ್ನುತ್ತೇವೆ ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ದೇಸಿ ತುಂಬುವ ಪ್ರಯತ್ನಗಳೇ ಆಗಿಲ್ಲ. ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ಪ್ರತಿ ಭಾಗದಲ್ಲಿಯೂ ಅಲ್ಲಿನ ಸಂಸ್ಕೃತಿಯ ಬಗ್ಗೆ ಕಲಿಸಬೇಕು ಮತ್ತು ಅಲ್ಲಿರುವ ಒಂದು ಉಪಭಾಷೆಯಲ್ಲಿ ಒಂದು ಉಪಪಠ್ಯ ಅಗತ್ಯವಾಗಿ ಇರಬೇಕು. ಪ್ರಾದೇಶಿಕತೆಗೆ ಇತಿಹಾಸ ಪಠ್ಯದಲ್ಲದರೂ ಆದ್ಯತೆ ನೀಡಬೇಕು. ನಮ್ಮದು ಮಾತಿನಲ್ಲಿ ಒಕ್ಕೂಟ ವ್ಯವಸ್ಥೆ ಆದರೆ ನೀತಿಯಲ್ಲಿ ಮಾತ್ರ ಅದಕ್ಕೆ ವಿರುದ್ಧವಾದದನ್ನೇ ನಾವೇ ಪಾಲಿಸುತ್ತೇವೆ.

ಪಶ್ಚಿಮ ಘಟ್ಟದಲ್ಲಿ ನಕ್ಸಲೀಯರ ಅಟ್ಟಹಾಸ ಅಂಕೆ ಮೀರಿ ಬೆಳೆಯುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ.
ನಿರುದ್ಯೋಗ ಮತ್ತು ಎಡಪಂಥೀಯ ಚಿಂತನೆಗಳಿಂದ ನಕ್ಸಲಿಸಂ ಹುಟ್ಟಿಕೊಂಡಿರುವುದು ಸ್ವಲ್ಪ ಮಟ್ಟಿಗೆ ನಿಜ. ವಿದ್ಯಾವಂತರು ಕೂಡ ನಕ್ಸಲರಾಗಿರುವುದು ನನ್ನ ಮಾತನ್ನು ಪುಷ್ಠಿಕರಿಸುತ್ತದೆ. ಈ ಸಮಸ್ಯೆಯ ಪರಿಹಾರದಲ್ಲಿ ಸ್ವಲ್ಪ ಮಟ್ಟಿಗೆ ಎಡವಟ್ಟು ಆಗಿರುವುದು ಕೂಡ ನಿಜ. ಆದರೆ ಈ ಬಗ್ಗೆ ಮಾತನಾಡಲು ನನಗೆ ಹೆಚ್ಚು ಗೊತ್ತಿಲ್ಲ. ಆದರೆ ನನಗೆ ಅವರ ಬಗ್ಗೆ ಕನಿಕರವಿಲ್ಲ. ರಕ್ತಪಾತದಲ್ಲಿ ನನಗೆ ನಂಬಿಕೆ ಇಲ್ಲ. ವಾಸ್ತವದಲ್ಲಿ ನಕ್ಸಲ್ ಚಟವಟಿಕೆಯೇ ಅನಗತ್ಯ, ಆದರೆ ಅದಕ್ಕೆ ನಾವು ರಾಜಕೀಯ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದೇವೆ.

ಲೋಕಪಾಲದ ಬಗ್ಗೆ ನಡೆಯುತ್ತಿರುವ ಜಟಾಪಟಿಯನ್ನು ಕಂಡಾಗ ನಿಮಗೆ ಏನನ್ನಿಸುತ್ತದೆ?
ಲೋಕಪಾಲದ ವಿಷಯದಲ್ಲಿ ಅಣ್ಣಾರ ನಿಲುವಿಗೆ ನನ್ನ ಸಹಮತವಿದೆ. ಆದರೆ ಲೋಕಪಾಲರ ಪ್ರಾಮಾಣಿಕತೆ ಮತ್ತು ಕಾರ್ಯಾನುಷ್ಠಾನದ ಬಗ್ಗೆ ನನಗೆ ಸಂಶಯವಿದೆ. ಉದಾಹರಣೆಗೆ ಈಗ ನಮ್ಮ ರಾಜ್ಯದಲ್ಲಿ ನಮಗೆ ಲೋಕಾಯುಕ್ತರೇ ಸಿಗುತ್ತಿಲ್ಲ.

ಪ್ರಾಥಮಿಕ ಶಾಲೆಯಲ್ಲಿ ಕನ್ನಡವನ್ನು ಕ್ರಮಬದ್ಧವಾಗಿ ಕಲಿಸುತ್ತೀಲ್ಲ ಎಂಬ ಕೂಗು ಹುಟ್ಟಿಕೊಂಡಿದೆಯಲ್ಲ?
ಇಂದು ಡಿಎಡ್‌ಗೆ ಡೊನೇಷನ್ ಕೊಟ್ಟರೆ ಯಾರನ್ನೂ ಬೇಕಾದರೂ ತೆಗೆದುಕೊಳ್ಳುತ್ತಾರೆ. ಹೆಚ್ಚು ಅಂಕ ಪಡೆದವರು, ರ‍್ಯಾಂಕ್ ಪಡೆದವರು ಭಾರಿ ಬುದ್ಧಿವಂತರು ಎಂಬ ಭ್ರಮೆ ಕೂಡ ಸರಿಯಲ್ಲ. ಇಂದು ಪದವಿ ಪೂರೈಸಿದವರಿಗೂ ನೆಟ್ಟಗೆ ಒಂದು ಪತ್ರ ಬರೆಯಲು ಗೊತ್ತಿಲ್ಲ ಅನ್ನುವ ಸ್ಥಿತಿ ಇದೆ. ಇಂದು ಪಾಠ ಮಾಡುವವರಿಗೆಯೇ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯನ್ನು ಯಾವತ್ತೂ ಲಾಭದ ದೃಷ್ಟಿಯಿಂದ ನೋಡಬಾರದು. ಈ ಇಲಾಖೆಗಳಿರುವುದೇ ಸೇವೆಗಾಗಿ. ಇಲ್ಲಿ ಮಕ್ಕಳ ಸಂಖ್ಯೆಯನ್ನು ನೋಡದೆ ಪ್ರತಿ ತರಗತಿಗೂ ಒಬ್ಬ ಶಿಕ್ಷಕರಿರುವಂತೆ ನೋಡಿಕೊಳ್ಳಬೇಕು. ಉದಾಹರಣೆಗೆ ಒಂದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೫ ತರಗತಿಗಳಿದ್ದರೆ ಅಲ್ಲಿ ೫ ಮಂದಿ ಶಿಕ್ಷಕರಿರಬೇಕು. ಇನ್ನು ಅಂಗ್ಲ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿದ್ದೆ ತಪ್ಪು. ಈಗ ಕೇಂದ್ರಿಯ ಪಠ್ಯಕ್ರಮವನ್ನು ಬೋಧಿಸಲು ಕಣ್ಣು ಮುಚ್ಚಿ ಅನುಮತಿ ನೀಡಲಾಗುತಿದೆ ಇದು ಕೂಡ ಸರಿಯಲ್ಲ.

ಕರಾವಳಿ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬ್ರಹ್ಮ ಕಲಶೋತ್ಸವ, ಭೂತಕೋಲದ ಟ್ರೆಂಡ್‌ನ ಬಗ್ಗೆ?
ಇದು ಧಾರ್ಮಿಕ ಪುನರುತ್ಥಾನವಂತೂ ಅಲ್ಲ. ಇದು ಒಂದು ರೀತಿಯ ಭಯ ಇರಬಹುದು ಅಂತ ನನಗೆ ಕಾಣಿಸುತ್ತದೆ. ದೇವರ ಬಗ್ಗೆ ಭಯ ಇರಬಾರದು ಬದಲಾಗಿ ಭಕ್ತಿ, ಮತ್ತು ಗೌರವವಿರಬೇಕು. ಇಂದು ಬಹುತೇಕ ಧಾರ್ಮಿಕ ಕೇಂದ್ರಗಳು ಉದ್ಯಮವಾಗಿ ಬೆಳೆಯುತ್ತಿವೆ.

ಜಾತೀಯತೆ ಮತ್ತು ಕೋಮುವಾದ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ?
ಸಾಹಿತ್ಯ ಕ್ಷೇತ್ರದಲ್ಲೂ ಜಾತೀಯತೆ ಹೆಚ್ಚಾಗಿದೆ. ಜಾತಿ ಮೂಲಕ ಗುರುತಿಸಿಕೊಳ್ಳುವುದನ್ನು ನಾವು ಈಗ ಹೆಚ್ಚಾಗಿ ಕಾಣಬಹುದು. ಕರ್ನಾಟಕದಲ್ಲೇ ಜಾತಿಯತೆಯ ಹೊಗೆಯಾಡುತ್ತಿದೆ. ಇಂದು ರಾಜ್ಯದ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತಿಕ ಲೋಕ ಜಾತೀಯತೆಯಿಂದ ಕೂಡಿದೆ. ಈ ಮೂಲಕ ನಾವು ಕಲಿತದ್ದಕ್ಕೆ ಅರ್ಥವೇ ಇಲ್ಲ ಅನ್ನುವ ಹಾಗೆ ನಮ್ಮ ಪರಂಪರೆಗೆ, ಧಾರ್ಮಿಕ ಗ್ರಂಥಗಳಿಗೆ, ಸಂತರಿಗೆ ನಾವು ನೇರವಾಗಿ ಅಥವಾ ಪರೋಕ್ಷವಾಗಿ ಅಗೌರವ ತೋರುತ್ತಿದ್ದೇವೆ. ಹಿಂದೆ ಸಂಘರ್ಷದಲ್ಲಿಯೇ ಸಾಮರಸ್ಯವಿತ್ತು. ಈಗ ಇಲ್ಲ.

ಓದುವ ಸಂಸ್ಕೃತಿ ಹೇಗಿದೆ?
ಒಳ್ಳೆಯ ಕೃತಿಗಳಿಗೆ ಇಂದಿಗೂ ಓದುಗರಿದ್ದಾರೆ. ಇತ್ತಿಜೆಗಷ್ಟೇ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಪಡೆದ ಸ್ವಪ್ನ ಸಾರಸ್ವತ ನಾಲ್ಕನೇಯ ಮುದ್ರಣ ಕಂಡಿದೆ. ನನ್ನ ಉಲ್ಲಂಘನೆಯ ಕೃತಿ ಎರಡೇ ವರ್ಷದಲ್ಲಿ ಎರಡನೇ ಮುದ್ರಣ ಕಂಡಿದೆ. ಇಂದು ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಜನರಲ್ಲಿ ಸಾಂಸ್ಕೃತಿಕ ಅರಿವು ಕಡಿಮೆಯಾಗಿದೆ ಎಂದು ತಕ್ಷಣ ಹೇಳಲಾಗದು

Tuesday, January 10, 2012

"ನನ್ನ ಅಂಕಣಬರಹವನ್ನು ನಾನು ‘ಸಾಹಿತ್ಯ’ ಕ್ಯಾಟೆಗರಿಗೆ ಸೇರಿಸುವುದೇ ಇಲ್ಲ"


ಕನ್ನಡದ ಹೆಮ್ಮೆಯ ಅಂಕಣಕಾರ ಮತ್ತು 'ಪನ್'ಡಿತ ಶ್ರೀವತ್ಸ ಜೋಶಿಯವರೊಂದಿಗೆ ನಮ್ಮ ಪತ್ರಿಕೆ 'ದಿ ಸಂಡೆ ಇಂಡಿಯನ್' 'ಸಾಕ್ಷಿಪ್ರಜ್ಞೆ' ಅಂಕಣಕ್ಕಾಗಿ ನಾನು ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ

ಪನ್ ಮಾಡುವುದು ನಿಮ್ಮ ಬರಹದ ವೈಶಿಷ್ಟ್ಯ. ನಿಮ್ಮ ಬರಹಗಳಲ್ಲಿ ಪನ್‌ನ್ನು ಹೆಚ್ಚಾಗಿ ಬಳಸಲು ಕಾರಣವೇನು?
ಪನ್ ಕುರಿತ ಪ್ರಶ್ನೆಯಿಂದಲೇ ಸಂದರ್ಶನವನ್ನು ಓ‘ಪನ್’ ಮಾಡಿದ್ದೀರಿ! ಅಥವಾ, ಇದನ್ನು ಸಂದರ್ಶನದ ಬಚ್’ಪನ್’ ಪ್ರಶ್ನೆ ಎನ್ನೋಣವೇ? ಹೌದು, ಬಾಲ್ಯದಿಂದಲೂ ನನ್ನದೊಂದು ಸ್ವಭಾವವೆಂದರೆ ಯಾವುದೇ ಸಂಗತಿಯನ್ನಾದರೂ ಅದರಲ್ಲೇನಾದರೂ ಸ್ವಾರಸ್ಯ ಇದೆಯೇ ಎಂಬ ದೃಷ್ಟಿಯಿಂದ ನೋಡುವುದು. ಇದರಿಂದ ನನ್ನಲ್ಲಿ ಅಬ್ಸರ್ವೇಶನ್ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಯಿತು. ಕೇಳಿದ ಯಾವುದೇ ಮಾತಿನಲ್ಲಾಗಲೀ, ಓದಿದ ಯಾವುದೇ ಬರಹದಲ್ಲಾಗಲೀ ಏನಾದರೂ ಪದಚಮತ್ಕಾರ (ಕೃತಕವಾಗಿ ಹೇರಿದ್ದಕ್ಕಿಂತಲೂ ತನ್ನಿಂತಾನೇ ಸಹಜವಾಗಿ ಮೂಡಿದ್ದು) ಇದೆಯೇ ಎಂದು ಸೂಕ್ಷ್ಮ ಗಮನ ಹರಿಯಿತು. ವಿಶೇಷವಾಗಿ ಪನ್ ಅಥವಾ ಶ್ಲೇಷೆ ಬಗ್ಗೆ ಎಲ್ಲಿಲ್ಲದ ಆಸಕ್ತಿ ಮೂಡಿತು. ಸ್ವಾಭಾವಿಕವಾಗಿ ನನ್ನ ಬರವಣಿಗೆಯಲ್ಲೂ ಅದು ಹೆಚ್ಚುಹೆಚ್ಚು ಕಾಣಿಸಿಕೊಂಡಿತು.

ಅಂಕಣ ಬರಹ ಸಾಹಿತ್ಯವಲ್ಲ ಅನ್ನುವ ಅಭಿಪ್ರಾಯವಿದೆ. ಈ ಬಗ್ಗೆ ಏನು ಹೇಳುತ್ತೀರಿ?
ಅದೊಂದೇ ಅಲ್ಲ, ಅಂಕಣವೆಂದರೆ ಅರ್ಜೆಂಟಿನ ಬರವಣಿಗೆ, ಸಂತೆಹೊತ್ತಿಗೆ ಮೂರು ಮೊಳ ನೇಯ್ದಂತೆ ಎಂಬಿತ್ಯಾದಿ ಅಭಿಪ್ರಾಯಗಳೂ ಇವೆ. ಆದರೆ ಸಾಹಿತ್ಯ ಎಂದರೇನು, ಯಾವ ಥರದ ಬರವಣಿಗೆಯನ್ನು ಸಾಹಿತ್ಯವೆಂದು ಗುರುತಿಸಬಹುದು ಎನ್ನುವುದು ತುಂಬ ಸಬ್ಜೆಕ್ಟಿವ್ ವಿಷಯ. ಒಬ್ಬೊಬ್ಬರದೂ ಒಂದೊಂದು ವ್ಯಾಖ್ಯೆ. ನಿಮಗೆ ಅಚ್ಚರಿಯೆನಿಸಬಹುದು, ನನ್ನ ಅಂಕಣಬರಹವನ್ನು ನಾನು ಸಾಹಿತ್ಯ ಕ್ಯಾಟೆಗರಿಗೆ ಸೇರಿಸುವುದೇ ಇಲ್ಲ! ಏಕೆಂದರೆ ನನ್ನ ಪ್ರಕಾರ ಸಾಹಿತ್ಯಎಂದರೆ ಸಂಪೂರ್ಣ ಸೃಜನಶೀಲವಾದ ಫಿಕ್ಷನ್ ಬರಹ. ಕವಿತೆ, ಕಥೆ, ಕಾದಂಬರಿ – ಇವೆಲ್ಲ ಸಾಹಿತ್ಯ. ನನ್ನ ಅಂಕಣದ ಹಾಗೆ ಅಲ್ಲಿಇಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಪೋಣಿಸಿ ಬರೆದದ್ದನ್ನು ನಾನು ಸಾಹಿತ್ಯ ಎನ್ನಲಾರೆ. ಅಂದಮಾತ್ರಕ್ಕೆ ಇದನ್ನು ಜನರಲೈಸ್ ಮಾಡುವುದಕ್ಕೂ ನನ್ನ ಮನಸ್ಸು ಒಪ್ಪುವುದಿಲ್ಲ. ಕನ್ನಡದಲ್ಲಿ ಮತ್ತು ಎಲ್ಲ ಭಾಷೆಗಳಲ್ಲೂ ಎಷ್ಟೋ ಮಹಾನ್ ಅಂಕಣಕಾರರು ಅದ್ಭುತವಾಗಿ ಬರೆದಿದ್ದಾರೆ, ಬರೆಯುತ್ತಿದ್ದಾರೆ. ಅವರ ಬರಹಗಳನ್ನೆಲ್ಲ ಸಾಹಿತ್ಯವಲ್ಲ ಎಂದು ಪಕ್ಕಕ್ಕೆ ತಳ್ಳಲಾದೀತೇ?

ಹೊರನಾಡಿನಲ್ಲಿ ಕನ್ನಡಿಗರ ಸಂಘಟನೆ ಮಾಡಲು ಇರುವ ಸವಾಲುಗಳೇನು?
ಅನ್ನಪೂರ್ಣೇಶ್ವರಿಯ ಅನುಗ್ರಹವಿದ್ದರೆ ಹೊರನಾಡಿನಲ್ಲಿ ಯಾವ ಸಂಘಟನೆ ಮಾಡಲಿಕ್ಕೂ ಯಾವೊಂದು ಸಮಸ್ಯೆ-ಸವಾಲುಗಳೂ ಇರುವುದಿಲ್ಲ! ಕ್ಷಮಿಸಿ, ನಾನಿನ್ನೂ ಪನ್ ಗುಂಗಿನಲ್ಲೇ ಇದ್ದೆ. ಹಾಗಾಗಿ ನಿಮ್ಮ ಪ್ರಶ್ನೆಯಲ್ಲಿನ ಹೊರನಾಡನ್ನು ಮಲೆನಾಡಿನ ಪುಣ್ಯಕ್ಷೇತ್ರ ಎಂದೇ ಅರ್ಥೈಸಿದೆ. ನಿಜವಾದ ಪ್ರಶ್ನೆಗೆ ಬಂದರೆ, ಸಂಘಟನೆ ಎಂದರೆ ಸಮಾನಮನಸ್ಕರು, ಸದುದ್ದೇಶದಿಂದ ಒಟ್ಟುಗೂಡಿ ರಚನಾತ್ಮಕ ಕೆಲಸ ಮಾಡುವುದು ತಾನೆ? ಕನ್ನಡದ ಮೇಲೆ ಪ್ರೀತಿ ಅಭಿಮಾನಗಳು ಎಲ್ಲರಲ್ಲೂ ಒಂದೇ ತೆರನಾಗಿದ್ದರೆ, ಕನ್ನಡ, ಕನ್ನಡಿಗ, ಮತ್ತು ಕರ್ನಾಟಕದ ಏಳ್ಗೆಗಾಗಿ ಸ್ವಾರ್ಥದ ಅಜೆಂಡಾ ಇಲ್ಲದೆ ಎಷ್ಟೇ ಅಲ್ಪಪ್ರಮಾಣದಲ್ಲಾದರೂ ಸಹಾಯ ಮಾಡುವ ಮನಸ್ಸಿದ್ದರೆ ಯಾವ ಸವಾಲು ಕೂಡ ಸವಾಲೆನಿಸುವುದೇ ಇಲ್ಲ. ಅದು ತೀರಾ ಭಾವುಕ ಮಾತಾಯಿತು. ನಾಲ್ಕೈದು ದಶಕಗಳ ಹಿಂದೆ ಅಮೆರಿಕ ಮತ್ತಿತರ ವಿದೇಶಗಳಲ್ಲಿ ನೆಲೆಸಿದ ಕನ್ನಡಿಗರ ಸಂಖ್ಯೆ ತುಂಬ ಕಮ್ಮಿಯಿತ್ತು. ಆ ಕಾಲದಲ್ಲಿ ಸಂಘಟನೆ ಮಾಡಲು ಇದ್ದ ಸವಾಲುಗಳು ಬೇರೆ. ಈಗ ವಿಶ್ವಗ್ರಾಮದ ಕಲ್ಪನೆಯಲ್ಲಿ ಎಲ್ಲ ಕಡೆ ಎಲ್ಲ ಭಾಷೆಗಳವರೂ ಪಸರಿಸಿರುವ ಸನ್ನಿವೇಶದಲ್ಲಿ ಕನ್ನಡಿಗರ ಸಂಘಟನೆ ಮಾಡಲು ಇರುವ ಸವಾಲುಗಳು ಬೇರೆ. ಆಗಿನವಾದರೂ ಈಗಿನವಾದರೂ ಎದುರಿಸಲಾರದಂಥ ಸವಾಲುಗಳು ಅಲ್ಲ ಎಂದು ನನಗನಿಸುತ್ತದೆ. ಮನಸ್ಸಿದ್ದಲ್ಲಿ ಮಾರ್ಗವಿರುತ್ತದೆ.

ಅಮೆರಿಕದಲ್ಲಿ ಕನ್ನಡದ ವಾತಾವರಣ ಹೇಗಿದೆ? ಅಲ್ಲಿ ವಾಸಿಸುತ್ತಿರುವ ಕನ್ನಡಿಗರು ಕನ್ನಡತನವನ್ನು ಉಳಿಸಿಕೊಂಡಿದ್ದಾರೆಯೇ?
ಅಮೆರಿಕದಲ್ಲಿ ಕನ್ನಡ ವಾತಾವರಣ ಹೇಗಿದೆ ಅಂತಷ್ಟೇ ಅಲ್ಲ, ‘ಅನಿವಾಸಿ ಭಾರತೀಯರ ಜೀವನಶೈಲಿ ಹೇಗಿರುತ್ತದೆ?’ ’ನೀವುಗಳು ತಾಯ್ನಾಡನ್ನು ಮಿಸ್ ಮಾಡ್ಕೊಳ್ಳೋಲ್ವಾ?’ ಮುಂತಾದ ಪ್ರಶ್ನೆಗಳಿಗೆ ನಿರ್ದಿಷ್ಟವಾದ ಕರಾರುವಾಕ್ಕಾದ ಉತ್ತರ ಕೊಡುವುದು ಕಷ್ಟ. ಅದೊಂಥರ ಕುರುಡರು ಆನೆ ಮುಟ್ಟಿದಂತೆ ಎಂದು ನನಗನಿಸುತ್ತದೆ. ಏಕೆಂದರೆ ಇಲ್ಲಿಗೆ ಬಂದಮೇಲೂ ಕನ್ನಡವನ್ನು ಅಪಾರವಾಗಿ ಪ್ರೀತಿಸುವ, ಇಲ್ಲಿಯೂ ಸಾಧ್ಯವಾದಷ್ಟು ಮಟ್ಟಿಗೆ ಕನ್ನಡತನವನ್ನು ಜತನವಾಗಿಟ್ಟುಕೊಂಡಿರುವ ಎಷ್ಟೋ ಕುಟುಂಬಗಳನ್ನು ನಾನು ನೋಡಿದ್ದೇನೆ, ಅದೇವೇಳೆಗೆ ರೋಮ್‌ನಲ್ಲಿ ರೋಮನ್ನನಾಗಿರುಎಂಬ ಗಾದೆಯನ್ನು ಅಕ್ಷರಶಃ ಪಾಲಿಸುತ್ತ ಕನ್ನಡ-ಕನ್ನಡತನಗಳನ್ನು ಮರೆತುಹೋದವರೂ ಇಲ್ಲಿ ಬೇಕಾದಷ್ಟು ಜನರಿದ್ದಾರೆ. ಆಮೇಲೆ, ಅಲ್ಲಿ ಸಲ್ಲುವವರು ಇಲ್ಲಿಯೂ ಸಲ್ಲುವರು ಎಂಬಂತೆ ವಿಶ್ವಮಾನವರಾದವರೂ ಇದ್ದಾರೆ. ಒಟ್ಟಂದದಲ್ಲಿ ಹೇಳುವುದಾದರೆ ವಲಸೆ ಬಂದ ತಲೆಮಾರಿನವರಂತೂ ಕನ್ನಡತನ ಉಳಿಸಿದ್ದಾರೆ; ಮುಂದಿನ ತಲೆಮಾರಿನವರು ಅದನ್ನು ಉಳಿಸಿ ಬೆಳೆಸುತ್ತಾರೆಯೇ, ಅವರಿಗದು ಅವಶ್ಯವಿದೆಯೇ ಎನ್ನುವುದು ಬೇರೆ ಮಾತು.

ಸಾಹಿತ್ಯ ಸಮ್ಮೇಳನವನ್ನು ರಾಜಕಾರಣಿಗಳು ತಮ್ಮ ವೇದಿಕೆಯನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ಸಾಹಿತ್ಯಸಮ್ಮೇಳನಗಳಲ್ಲಿ ರಾಜಕಾರಣಿಗಳಿಗೆ ಸಂಪೂರ್ಣ ನಿಷೇಧವಿರಬೇಕು ಎನ್ನೋಣವೆನಿಸುತ್ತದೆ ಇದುವರೆಗೂ ಅವರೆಲ್ಲ ಸಮ್ಮೇಳನಗಳಲ್ಲಿ ಗಬ್ಬೆಬ್ಬಿಸಿರುವುದನ್ನು ನೋಡಿದರೆ. ಆದರೆ ಹಾಗಲ್ಲ. ರಾಜಕಾರಣಿಗಳೂ ಸಾಹಿತ್ಯ ಸಮ್ಮೇಳನಕ್ಕೆ ಬರಬೇಕು. ವೇದಿಕೆಗಲ್ಲ, ಸಭೆಯಲ್ಲಿ ಕುಳಿತು ಸಾಹಿತ್ಯ ಸಮಾರಾಧನೆಯಲ್ಲಿ ಪಾಲ್ಗೊಳ್ಳಲಿಕ್ಕೆ, ಸಾಹಿತ್ಯದ ರಸಾಸ್ವಾದನೆ ಮಾಡಿ ಚಿತ್ತಶುದ್ಧಿ ಮಾಡಿಕೊಳ್ಳಲಿಕ್ಕೆ. ಮುಖ್ಯಮಂತ್ರಿ ಅಥವಾ ಒಬ್ಬಿಬ್ಬರು ಯೋಗ್ಯ ರಾಜಕಾರಣಿಗಳು ವೇದಿಕೆಗೂ ಬರಬೇಕು, ಸಾಹಿತ್ಯದ, ಸಾಹಿತ್ಯಾಭಿಮಾನಿಗಳ ಮತ್ತು ಸಾಹಿತ್ಯಸಮ್ಮೇಳನದ ಗತ್ತು-ಗೌರವಗಳನ್ನು ಹೆಚ್ಚಿಸಲಿಕ್ಕೆ.

ಸಾಹಿತ್ಯ ಸಮ್ಮೇಳನಗಳಿಂದ ಕನ್ನಡಕ್ಕೆ ಏನಾದರೂ ಪ್ರಯೋಜನವಾಗುತ್ತದೆ ಎಂಬ ನಂಬಿಕೆ ನಿಮಗೆ ಇದೆಯೆ?
ಅಂದವಾಗಿ, ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ನಡೆಸಿದರೆ ಸಾಹಿತ್ಯ ಸಮ್ಮೇಳನದಿಂದ ಕನ್ನಡಕ್ಕೆ, ಕನ್ನಡಿಗರಿಗೆ ಪ್ರಯೋಜನ ಇದೆ ಎಂದು ನನ್ನ ಅಭಿಪ್ರಾಯ. ಬೇರೆಬೇರೆ ಗೋಷ್ಠಿಗಳಲ್ಲಿ ವಿವಿಧ ಪ್ರಕಾರದ ಸಾಹಿತ್ಯಕೃಷಿಕರು ವಿಚಾರವಿನಿಮಯ ನಡೆಸಿದರೆ ಅವುಗಳಲ್ಲಿ ಭಾಗವಹಿಸುವ ಶ್ರೋತೃವರ್ಗಕ್ಕೂ ಒಳ್ಳೆಯದೇ ಅಲ್ಲವೇ? ಕನ್ನಡ ಭಾಷೆಯ ಸಿರಿವಂತಿಕೆಯನ್ನು ಅರಿಯಲು, ಅರಿತು ಹೆಮ್ಮೆಪಡಲು ಇದೂ ಒಂದು ಒಳ್ಳೆಯ ಅವಕಾಶವಲ್ಲವೇ? ಅದರೆ ಇತ್ತೀಚಿನ ಬಹುತೇಕ ಸಾಹಿತ್ಯಸಮ್ಮೇಳನಗಳೂ ಒಂದಿಲ್ಲೊಂದು ವಾದವಿವಾದ, ಗಲಭೆ-ಗೊಂದಲಗಳಿಂದ ಸುದ್ದಿಯಾದವೇ ಹೊರತು ಕನ್ನಡದ ಏಳಿಗೆಯ ಮಟ್ಟಿಗೆ ಗಟ್ಟಿಯಾದದ್ದು ಅಲ್ಲೇನೂ ಹರಳುಗಟ್ಟಿಲ್ಲ ಎಂದು ತಿಳಿದಾಗ ಬೇಸರವೆನಿಸುತ್ತದೆ.

ನಿಮ್ಮ ಪ್ರಕಾರ ಅನ್‌ಲೈನ್ ಮಾಧ್ಯಮದ ಭವಿಷ್ಯ ಹೇಗಿದೆ? ಇಲ್ಲಿ ಕನ್ನಡದ ಪರಿಸ್ಥಿತಿ ಹೇಗಿದೆ?
ಆನ್‌ಲೈನ್ ಮಾಧ್ಯಮ ಅಥವಾ ಇನ್ನೂ ಸ್ಥೂಲವಾಗಿ ಇಡೀ ಅಂತರಜಾಲವನ್ನು ನಾನು ಯಾವಾಗಲೂ ಆಕಾಶದಾಗಿನ ಮಾಯಗಾರ ಎಂದೇ ಬಣ್ಣಿಸುತ್ತೇನೆ. ಅದರ ಅನೂಹ್ಯತೆಗೆ, ಸಾಧ್ಯಾಸಾಧ್ಯತೆಗಳಿಗೆ ಆಕಾಶವೇ ಮಿತಿ. ಸ್ಕೈ ಈಸ್ ದಿ ಲಿಮಿಟ್. ಇನ್ನು, ಭವಿಷ್ಯ ಯಾವುದರದ್ದೇ ಆದರೂ ನಾವು ಬಳಸಿಕೊಂಡಂತೆ, ಬೆಳೆಸಿಕೊಂಡಂತೆ ಇದೆ. ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ಮಾಧ್ಯಮವು ಇಷ್ಟು ತೀವ್ರಗತಿಯಲ್ಲಿ ಪಸರಿಸಿರುವುದನ್ನು ನೋಡಿದರೆ ಇದರ ಭವಿಷ್ಯ ಉಜ್ವಲವಾಗಿಲ್ಲ ಎನ್ನುವುದು ನಗೆಪಾಟಲಿನ ಮಾತಾದೀತು. ಆನ್‌ಲೈನ್ ಮಾಧ್ಯಮದಲ್ಲಿ ಕನ್ನಡದ ಪರಿಸ್ಥಿತಿ ಅಥವಾ ಉಪಸ್ಥಿತಿಯೂ ಮೆಚ್ಚತಕ್ಕ ಪ್ರಮಾಣದಲ್ಲೇ ಇದೆ ಎಂದು ನನಗನಿಸುತ್ತದೆ. ನಾನು ಬೇರೆ ಭಾಷೆಗಳೊಂದಿಗೆ ತುಲನಾತ್ಮಕ ಅಧ್ಯಯನ ನಡೆಸಿಲ್ಲ. ಅಂತರಜಾಲದಲ್ಲಿ ನನ್ನ ಕಾಲಕ್ಷೇಪದ ಹೆಚ್ಚಿನ ಅವಧಿಯು ಕನ್ನಡ ತಾಣಗಳು, ಕನ್ನಡ ಬ್ಲಾಗುಗಳು, ಕನ್ನಡ ಪತ್ರಿಕೆಗಳ ಪಠಣದಲ್ಲೇ ಕಳೆಯುವುದರಿಂದ ಇಂಟರ್‌ನೆಟ್‌ನಲ್ಲಿ ಕನ್ನಡ ಗಣನೀಯ ಪ್ರಮಾಣದಲ್ಲಿ ಇದೆ ಎಂದು ನನಗೆ ಸ್ವಲ್ಪ ಹೆಚ್ಚಾಗಿಯೇ ಅನಿಸಿದ್ದರೂ ಆಶ್ಚರ್ಯವಿಲ್ಲ. ಅಂತೂ ಆನ್‌ಲೈನ್ ಮಾಧ್ಯಮದಲ್ಲಿ ಕನ್ನಡಕ್ಕೆ ದಯನೀಯ ಪರಿಸ್ಥಿತಿಯಂತೂ ಖಂಡಿತ ಅಲ್ಲ ಎಂದು ಹೆಮ್ಮೆಯಿಂದ ಹೇಳಬಲ್ಲೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ತಮಿಳು, ಹಿಂದಿ, ತೆಲುಗುಗಳ ಅಧ್ಯಯನ ಕೇಂದ್ರಗಳು ಸಾಕಷ್ಟಿದ್ದು ಕನ್ನಡದ ಬಗ್ಗೆ ಆಧ್ಯಯನ ಕೇಂದ್ರಗಳೆ ಇಲ್ಲ ಅನ್ನುವ ಸ್ಥಿತಿಯಿದೆ. ಈ ಬಗ್ಗೆ ಏನು ಹೇಳುತ್ತೀರಿ?
ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಕೇಂದ್ರಗಳ ವಿಚಾರ ಒತ್ತಟ್ಟಿಗಿರಲಿ. ವಿದೇಶದಲ್ಲಿರುವ ಭಾರತೀಯ ಅಂಗಡಿಗಳಲ್ಲಿ ಡಿವಿಡಿಗಳ, ವಿಡಿಯೋ/ಆಡಿಯೋ ಸಿ.ಡಿಗಳ ರಾಶಿಯಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ, ಗುಜರಾತಿಗಳಿಗೆ ಹೋಲಿಸಿದರೆ ಕನ್ನಡದವು ಎಷ್ಟಿರುತ್ತವೆ ಎಂದು ಹೇಳಿದರೆ ನಿಮಗೆ ಸುಲಭದಲ್ಲಿ ಗೊತ್ತಾಗಬಹುದು. ಇದೊಂದು ಅಪ್ರಿಯಸತ್ಯ ಇರಬಹುದು- ಆದರೆ ಮುಲಾಜಿಲ್ಲದೆ ಹೇಳುತ್ತೇನೆ, ಕನ್ನಡಿಗರಿಗೆ (ಕನ್ನಡಿಗ ಉದ್ಯಮಿಗಳಿಗೆ) ಮಾರ್ಕೆಟಿಂಗ್ ಗೊತ್ತಿಲ್ಲ. ಅಂತೆಯೇ, ಕನ್ನಡಿಗ ಗ್ರಾಹಕರು ಕಂಜೂಸ್‌ತನವನ್ನು ಜನ್ಮಜನ್ಮಾಂತರಕ್ಕೂ ಬಿಡುವವರಲ್ಲ. ಇಲ್ಲಿ ನಾನಿರುವ ವಾಷಿಂಗ್ಟನ್ ನಗರದಲ್ಲಿ ತೆಲುಗು ತಮಿಳು ಹಿಂದಿ ಸಿನೆಮಾಗಳನ್ನು ದಿನವಹಿ ತೋರಿಸುವ ಚಿತ್ರಮಂದಿರಗಳಿವೆ. ವಾರಾಂತ್ಯಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳಿರುತ್ತವೆ. ಕನ್ನಡ ಚಲನಚಿತ್ರವನ್ನು ಕನ್ನಡಸಂಘಗಳೋ ಯಾರಾದರೂ ಶ್ರಮಜೀವಿ ಕನ್ನಡಾಭಿಮಾನಿಯೋ ಕಷ್ಟಪಟ್ಟುತರಿಸಿ ಚಲನಚಿತ್ರಮಂದಿರದಲ್ಲಿ ಪ್ರದರ್ಶನ ಏರ್ಪಡಿಸಿದರೆ ಅಬ್ಬಬ್ಬಾ ಅಂದರೆ ಮೂರು ಮತ್ತೊಂದು ಜನ ಸೇರುತ್ತಾರೆ. ಓಕೆ,ಇದು ಸ್ವಲ್ಪ ಉತ್ಪ್ರೇಕ್ಷೆಯ ಮಾತೇ ನಿಜ, ಆದರೂ ಒಟ್ಟಾರೆ ಪರಿಸ್ಥಿತಿ ಹೇಗಿದೆ ಎಂದು ನಿಮಗೆ ಅಂದಜಾಗಿದೆ ಎಂದುಕೊಳ್ಳುತ್ತೇನೆ.

ವೈಜ್ಞಾನಿಕ, ವೈದ್ಯಕೀಯ, ತಾಂತ್ರಿಕ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕನ್ನಡದ ಬಳಕೆ ಇಲ್ಲ ಅಥವಾ ಸಲ್ಲ ಅನ್ನುವ ಪರಿಸ್ಥಿತಿ ಇದೆ. ಇದಕ್ಕೇನು ಕಾರಣ? ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಗಬಹುದೆ?
ಈ ವಿಷಯದಲ್ಲಿ ಸ್ವಲ್ಪ ತುಲನೆ ಮಾಡುವುದು ಒಳ್ಳೆಯದೆನಿಸುತ್ತದೆ. ಈಎಲ್ಲ ಕ್ಷೇತ್ರಗಳಲ್ಲಿ ಆಂಧ್ರಪ್ರದೇಶದಲ್ಲಿ ತೆಲುಗು ಎಷ್ಟಿದೆ? ತಮಿಳುನಾಡಿನಲ್ಲಿ ತಮಿಳು ಎಷ್ಟಿದೆ? ಕೇರಳದಲ್ಲಿ ಮಲಯಾಳಂ ಎಷ್ಟಿದೆ? ಅವುಗಳಿಗಿಂತ ಕನ್ನಡ ತುಂಬಾ ದೂರದಲ್ಲಿಲ್ಲ ಎಂದು ನನ್ನ ಅಂದಾಜು. ನಿಜ, ಸಂಪೂರ್ಣ ಕನ್ನಡಮಯ ಆಗಿದ್ದರೆ ಕನ್ನಡಾಭಿಮಾನಿಗಳಿಗೆ ಒಳ್ಳೆಯದೆನಿಸಬಹುದು, ಆದರೆ ರಾಷ್ಟ್ರೀಯ, ಬಹುರಾಷ್ಟ್ರೀಯ ವ್ಯಾಪ್ತಿಯಿರುವ ಈ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಆಯಾಯ ಪ್ರಾದೇಶಿಕ ಭಾಷೆಯ ಅಳವಡಿಕೆ ಪ್ರಾಕ್ಟಿಕಲಿ ಸುಲಭವಲ್ಲ, ಸಾಧುವೂ ಅಲ್ಲ ಎಂದು ನನ್ನ ಅಭಿಪ್ರಾಯ.

ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂಬುದರ ಬಗ್ಗೆ ನಿಮ್ಮ ಅನಿಸಿಕೆ?
ನಮ್ಮ ಮನೆಮಾತು (ಮಾತೃಭಾಷೆ) ಮರಾಠಿ. ನಾನು ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಕಲಿತವನು. ಈಎರಡು ಅಂಶಗಳನ್ನು ಬದಿಗಿಟ್ಟರೂ, ಮಾತೃಭಾಷೆಯಲ್ಲಿಯೇ ಶಿಕ್ಷಣದಿಂದ ಖಂಡಿತ ಪ್ರಯೋಜನ ಇದೆ ಎನ್ನುವವನು ನಾನು. ಆದರೆ ಜಾಗತಿಕ ಭಾಷೆಯೆನಿಸಿರುವ ಇಂಗ್ಲಿಷ್‌ನ ಪರಿಚಯವೂ ಬಾಲ್ಯದಿಂದಲೂ ಸಾಕಷ್ಟು ಪ್ರಮಾಣದಲ್ಲಿ ಇರಬೇಕು ಎಂದು ಹೇಳಲಿಕ್ಕೂ ನಾನು ಹಿಂಜರಿಯುವುದಿಲ್ಲ. ಇದನ್ನು ನನಗಿರುವ ಇಂಗ್ಲಿಷ್ ವ್ಯಾಮೋಹ ಎಂದು ಬಣ್ಣಿಸಬೇಕಾದ್ದಿಲ್ಲ. ಶಿಕ್ಷಣದ ವಿವಿಧ ವಿಷಯಗಳು ಮಾತೃಭಾಷೆಯಲ್ಲಿ ಬೋಧನೆ ಮಾಡಲ್ಪಟ್ಟರೂ, ಒಂದು ಸಬ್ಜೆಕ್ಟ್ ಎನ್ನುವಷ್ಟೇ ಮಟ್ಟಕ್ಕಿಂತ ಹೆಚ್ಚು, ಇಡೀ ಮಾಧ್ಯಮವೇ ಅದು ಎನ್ನುವ ಮಟ್ಟಕ್ಕಿಂತ ಕಡಿಮೆ – ಹೀಗೆ ಮಧ್ಯಪ್ರಮಾಣದಲ್ಲಿ ಇಂಗ್ಲಿಷ್ ಕಲಿಕೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಬೇಕು ಎಂದು ನನಗನಿಸುತ್ತದೆ. ಎಷ್ಟರಮಟ್ಟಿಗೆ ಇದನ್ನು ಕಾರ್ಯರೂಪಕ್ಕೆ ತರಬಹುದೆನ್ನುವ ಸರಿಯಾದ ಕಲ್ಪನೆ ನನಗಿಲ್ಲ.

ವಿದೇಶಗಳಲ್ಲಿ ಕನ್ನಡ ಉಳಿಸುವ ಬೆಳೆಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರ ಕೂಡ ‘ಅಕ್ಕ’, ‘ನಾವಿಕ’ದಂತಹ ಸಮ್ಮೇಳನಗಳಿಗೆ ಹೋಗಿ ಆ ಪ್ರಯತ್ನಗಳಿಗೆ ಪೂರಕವಾಗಿ ಮಾತಾಡುತ್ತದೆ. ಆದರೆ, ಅದೇ ಹೊತ್ತಿನಲ್ಲಿ ಅದು ಕನ್ನಡದ ನೆಲದಲ್ಲಿ ಸರ್ಕಾರಿ ಶಾಲೆಗಳನ್ನು (ಅರ್ಥಾತ್ ಕನ್ನಡ ಶಾಲೆಗಳನ್ನು) ಮುಚ್ಚುವ ಮೂಲಕ ಕನ್ನಡದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಅನ್ನಿಸುವುದಿಲ್ಲವೆ?
ಈ ಪ್ರಶ್ನೆಯನ್ನು ನಾನು ವೈಯಕ್ತಿಕವಾಗಿ ಸಂಪೂರ್ಣವಾಗಿ ರಿಲೇಟ್ ಮಾಡಿಕೊಳ್ಳಬಲ್ಲೆ. ಏಕೆಂದರೆ ನಾನು ಇಲ್ಲಿ ಅಮೆರಿಕದಲ್ಲಿ ನಡೆಯುವ ಅಕ್ಕ, ‘ನಾವಿಕಸಮ್ಮೇಳನಗಳನ್ನು ನೋಡಿದವನೂ ಹೌದು, ಕರ್ನಾಟಕದಲ್ಲಿ ನಾನು ಕಲಿತ ಕನ್ನಡ ಸರಕಾರಿ ಶಾಲೆ (ಕಾರ್ಕಳ ತಾಲೂಕಿನ ಮಾಳ ಗ್ರಾಮದ ಎಡಪಾಡಿ ಎಂಬಲ್ಲಿನ ಶಾಲೆ) ಇದೇ ಶೈಕ್ಷಣಿಕ ವರ್ಷದಿಂದ ಮುಚ್ಚಲ್ಪಟ್ಟಿದೆಯಂತೆ ಎಂದು ಪತ್ರಿಕೆಗಳಲ್ಲಿ ಓದಿ ಕಳವಳಗೊಂಡವನೂ ಹೌದು. ಬೇರೆ ಊರಿನ ಶಾಲೆಗಳ ಕಥೆ ನನಗೆ ಗೊತ್ತಿಲ್ಲ. ನಮ್ಮೂರಿನಲ್ಲಿ ಶಾಲೆಗೆ ಹೋಗುವ ಪ್ರಾಯದ ಮಕ್ಕಳೇ ಇಲ್ಲ ಎಂದಮೇಲೆ ಶಾಲೆಯಲ್ಲಿ ಅಧ್ಯಾಪಕರು ಗೋಡೆಗಳಿಗೆ ಪಾಠ ಮಾಡಬೇಕೇ? ಅದರರ್ಥ ರಾಜ್ಯವ್ಯಾಪಿಯಾಗಿ ಅಲ್ಲಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಅಂತಲ್ಲ. ಒಂದೊಂದು ಶಾಲೆಯ ಪರಿಸ್ಥಿತಿಯನ್ನೂ ಕೇಸ್-ಬೈ-ಕೇಸ್ ಅಧ್ಯಯನ ನಡೆಸಿ, ಸಂಪೂರ್ಣ ವಿವೇಚನೆಯಿಂದಲೇ ನಿರ್ಧಾರಕ್ಕೆ ಬಂದು ಶಾಲೆಯನ್ನು ಮುಚ್ಚಿದರೆ ಅದಕ್ಕೆ ಅರ್ಥವಿದೆ. ಶಾಲೆಯನ್ನು ಮುಚ್ಚಿದರೂ ಆ ಕಟ್ಟಡವನ್ನು ಗ್ರಂಥಾಲಯವಾಗಿಯೋ,ಇನ್ನಾವುದಾದರೂ ಸಮಾಜಮುಖಿ ಚಟುವಟಿಕೆಗೋ ಉಪಯೋಗಿಸಿದರೆ ಮತ್ತಷ್ಟು ಅರ್ಥವಿದೆ. ತುಘಲಕ್ ದರ್ಬಾರ್‌ನಂತೆ ಆಜ್ಞೆ ಹೊರಡಿಸಿ ಶಾಲೆಗಳನ್ನು ಮುಚ್ಚಿದರೆ ಕನ್ನಡದ ಕತ್ತು ಹಿಸುಕುವ ಕೆಲಸವಾಗುತ್ತಿದೆ ಎಂದು ಅನುಮಾನಿಸದೆ ದಾರಿಯಿಲ್ಲ.

ಹೊರನಾಡ ಕನ್ನಡಿಗರ ಸಂಘಟನೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಿರುಕು, ರಾಜಕೀಯಗಳು ಕಂಡುಬರುತ್ತಿರುವುದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ಭಾಷಾಭಿಮಾನವನ್ನು ಹಿಂದಿನ ಸೀಟ್‌ಗೆ ತಳ್ಳಿ ಜಾತಿ, ಅಧಿಕಾರದಾಹ,ಪೊಳ್ಳುಪ್ರತಿಷ್ಠೆಗಳೇ ಡ್ರೈವಿಂಗ್ ಫೋರ್ಸ್‌ಗಳಾದರೆ ಈ ಎಲ್ಲ ಸಂಘಟನೆಗಳಲ್ಲಿ ಬಿರುಕು ರಾಜಕೀಯಗಳು ಕಂಡುಬರದಿರುತ್ತವೆಯೇ? ಇದು ಕನ್ನಡಕ್ಕೆ/ಕನ್ನಡಿಗರಿಗೆ ಮಾತ್ರ ಅನ್ವಯಿಸುವುದಲ್ಲ. ಎಲ್ಲರ ಮನೆಯ ದೋಸೆಯೂ ತೂತೇ. ಕೆಲವರಲ್ಲಿ ಕಾವಲಿಯೇ ತೂತು. ತೀರಾ ಜಾಸ್ತಿಯಾಗಿ ಅಸಹ್ಯದ ಮಟ್ಟಕ್ಕೆ ಹೋದರೆ ಥೂಥೂ ಎನ್ನಬೇಕಷ್ಟೇ.

ಇಂದು ದೇಶದಲ್ಲಿ ಸಂಸತ್ ಅಥವಾ ವಿಧಾನಸಭೆಗಳ ಅಧಿವೇಶನ ಶಾಂತಯುತವಾಗಿ ನಡೆದು ಒಳ್ಳೆಯ ಚರ್ಚೆಗಳಾಗುವುದರ ಬದಲು ಕಿತ್ತಾಟ, ಬಹಿಷ್ಕಾರಗಳೇ ಹೆಚ್ಚಾಗಿವೆ. ಈ ಬಗ್ಗೆ ಏನು ಹೇಳುತ್ತೀರಿ?
ಈ ಪ್ರಶ್ನೆಯನ್ನು ಪರೋಕ್ಷವಾಗಿ ಉತ್ತರಿಸುತ್ತೇನೆ. ನನ್ನ ಎಂಜಿನಿಯರಿಂಗ್ ಕಾಲೇಜ್‌ಮೇಟ್ ಜನಾರ್ಧನ ಸ್ವಾಮಿ ಚಿತ್ರದುರ್ಗ ಕ್ಷೇತ್ರದ ಸಂಸದರಾಗಿರುವುದು ನಿಮಗೆ ಗೊತ್ತೇ ಇದೆ. ಅವರಿಗೆ ಮೂರನೇ ತರಗತಿಗೆ ಹೋಗುವ ಒಬ್ಬಳು ಮಗಳಿದ್ದಾಳೆ. ಟಿವಿಯಲ್ಲಿ ಲೋಕಸಭೆಯ ಕಾರ್ಯಕಲಾಪಗಳನ್ನು ಕೆಲವೊಮ್ಮೆ ಅವಳೂ ನೋಡುತ್ತಾಳಂತೆ. ತನಗೆ ಸ್ಕೂಲ್ ಇದ್ದಂತೆ ಅಪ್ಪನಿಗೆ ಪಾರ್ಲಿಮೆಂಟೇ ಸ್ಕೂಲ್ ಎಂದು ಅವಳೆನ್ನುತ್ತಾಳೆ. ಒಮ್ಮೆ ಸ್ವಾಮಿ ಅವಳಲ್ಲಿ ಕೇಳಿದರಂತೆ ನನ್ನ ಪಾರ್ಲಿಮೆಂಟ್ ಸ್ಕೂಲ್‌ಗೂ ನಿನ್ನ ಸ್ಕೂಲ್‌ಗೂ ಐದಾರು ವ್ಯತ್ಯಾಸಗಳನ್ನು ಹೇಳಬಲ್ಲೆಯಾ?” ಅವಳೆಂದಳಂತೆ- ಅಪ್ಪಾ ನಿನಗೆ ಒಬ್ಬರೇ ಟೀಚರ್ (ಮೀರಾಕುಮಾರ್ ಲೋಕಸಭಾ ಸ್ಪೀಕರ್), ನನಗೆ ಬೇರೆಬೇರೆ ಟೀಚರ್ಸ್ ಇದ್ದಾರೆ. ನಿಮ್ಮಲ್ಲಿ ಎಲ್ಲ ಸ್ಟೂಡೆಂಟ್ಸ್ ತುಂಬಾ ವಯಸ್ಸಾದವರು.ನಾವೆಲ್ಲ ಚಿಕ್ಕಮಕ್ಕಳು. ನಿಮ್ಮಲ್ಲಿ ಸಬ್ಜೆಕ್ಟ್‌ ಅಂತ ಇಲ್ಲ ಬರಿ ಮಾತು ಮಾತು ಮಾತು. ನಮ್ಮಲ್ಲಿ ಬೇರೆಬೇರೆ ಸಬ್ಜೆಕ್ಟ್ಸ್ ಇವೆ. ನಿಮ್ಮಲ್ಲಿ ಸ್ಟೂಡೆಂಟ್ಸೆಲ್ಲ ಕಚ್ಚಾಡ್ತಾನೇ ಇರ್ತಾರೆ. ನಾವೆಲ್ಲ ಜೊತೆಯಾಗಿ ಪಾಠಕಲೀತೇವೆ ಆಟ‌ಆಡ್ತೇವೆ...ನಿಮ್ಮಲ್ಲಿ ಯಾವ ಸ್ಟೂಡೆಂಟ್ ಎಷ್ಟು ಗಲಾಟೆ ಮಾಡಿದ್ರೂ ಪೇರೆಂಟ್ಸನ್ನ ಕರೆಯೋದಿಲ್ಲ...” – ಇದಕ್ಕಿಂತ ಹೆಚ್ಚಿಗೆ ಕಣ್ತೆರೆಸುವ ಉತ್ತರ ಬೇಕೆ?

ಅಮೆರಿಕದಲ್ಲಿನ ಮಾಧ್ಯಮ, ಸರ್ಕಾರ ಮತ್ತು ಪ್ರಜಾಪ್ರಭುತ್ವಕ್ಕೂ ಭಾರತದಲ್ಲಿನ ಮಾಧ್ಯಮ, ಸರ್ಕಾರ ಮತ್ತು ಪ್ರಜಾಪ್ರಭುತ್ವಕ್ಕೂ ನೀವು ಏನು ವ್ಯತ್ಯಾಸ ಗಮನಿಸುತ್ತೀರಿ?
ಪ್ರಜಾಪ್ರಭುತ್ವಕ್ಕೆ ಎರಡೂ ದೇಶಗಳಲ್ಲಿ ಭದ್ರವಾದ ಅಡಿಪಾಯವೇ ಇದೆ. ಏನೂ ತೊಂದರೆಯಿಲ್ಲ. ಸರ್ಕಾರ ಮತ್ತು ಪ್ರಜಾಪ್ರಭುತ್ವದ ಕೊಂಡಿಯಾಗಿ ಕೆಲಸ ಮಾಡಬೇಕಾದ್ದು ಮಾಧ್ಯಮಗಳ ಕರ್ತವ್ಯ. ಅಮೆರಿಕದ ಮಾಧ್ಯಮಗಳು ಇದನ್ನು ಹೆಚ್ಚೂಕಡಿಮೆ ಪ್ರಶಂಸನೀಯವಾಗಿಯೇ ನಿರ್ವಹಿಸುತ್ತಿವೆ ಎನ್ನಬಹುದು. ಭಾರತದ ಮಾಧ್ಯಮಗಳು ಹಾಗಲ್ಲ. ಅವು, ನಾರದಮಹರ್ಷಿ ದುರುದ್ದೇಶವಿಟ್ಟುಕೊಂಡು ವರ್ತಿಸಿದರೆ ಹೇಗಿರುತ್ತದೋ ಆರೀತಿಯವು. ಪುರಾಣದ ನಾರದಮಹರ್ಷಿ ಕಲಹಪ್ರಿಯನಾಗಿದ್ದ ಹೌದು ಆದರೆ ಅಂತಿಮವಾಗಿ ಅವನ ಉದ್ದೇಶ ಒಳ್ಳೆಯದಿರುತ್ತಿತ್ತು. ಪ್ರಸಕ್ತ ಭಾರತದ ಮಾಧ್ಯಮಗಳು ಕಲಹಪ್ರಿಯವಷ್ಟೇ ಅಲ್ಲ, ಸಮಾಜದ ಏಳಿಗೆಯಾಗಬೇಕೆಂಬ ಧ್ಯೇಯೋದ್ದೇಶಕ್ಕೆ ಅವು ಕವಡೆ ಕಿಮ್ಮತ್ತು ಕೊಡುವುದಿಲ್ಲ. ಬ್ರೇಕಿಂಗ್‌ನ್ಯೂಸ್ ಎನ್ನುತ್ತ ಇಡೀ ಸಮಾಜವನ್ನು ಒಡೆದುಹಾಕುವುದೊಂದೇ ಅವುಗಳ ಅಜೆಂಡಾ ಇದ್ದಂತಿದೆ.

ಭಾರತದಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಎಫ್‌ಡಿ‌ಐ ಬೇಕು ಬೇಡ ಅನ್ನುವುದರ ಬಗ್ಗೆ ನಡೆಯುತ್ತಿರುವ ಕೋಲಾಹಲದ ಬಗ್ಗೆ ನಿಮ್ಮ ಅನಿಸಿಕೆ?
ಹಿಂದೆ ಕೋಲಾ ಬಂದಾಗಲೂ ಕೋಲಾಹಲ ಆಗಿತ್ತು. ಮೊರಾರ್ಜಿ ದೇಸಾಯಿ ನಿರ್ದಾಕ್ಷಿಣ್ಯವಾಗಿ ಅದನ್ನು ಭಾರತದಿಂದ ಹೊರಗೋಡಿಸಿದರು. ಹದಿನೈದು ವರ್ಷಗಳ ನಂತರ ಅದು ಮತ್ತೆ ಭಾರತಕ್ಕೆ ಬಂತು. ಇದೊಂಥರ ಸಂದಿಗ್ಧ ಪರಿಸ್ಥಿತಿ. ಸ್ವದೇಶೀ ಚಳುವಳಿ, ಸ್ವಾವಲಂಬನೆಯ ಮಂತ್ರ ಇವೆಲ್ಲವೂ ಶ್ರೇಷ್ಠ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಜಾಗತೀಕರಣದ ದೆಸೆಯಿಂದಾಗಿ ಗವಾಕ್ಷೀಲಿ ಮಾತ್ರವಲ್ಲ ಹಿಂಬಾಗಿಲಿಂದ,ಮುಂಬಾಗಿಲಿಂದ ಎಲ್ಲ ಕಡೆಯಿಂದಲೂ ಪಿಶಾಚಿಗಳು ನುಗ್ಗುತ್ತವೆ.

ಅಕ್ವುಪೈ ವಾಲ್‌ಸ್ಟ್ರೀಟ್ ಚಳವಳಿಗೂ ಭಾರತದಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿರುವವ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳೇನು?
ಸಾಮ್ಯವೆಂದರೆ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಹತಾಶೆ. ವ್ಯತ್ಯಾಸವೆಂದರೆ ಭಾರತದಲ್ಲಿ ಆಗಲೇ ಒಬ್ಬ ಅಣ್ಣಾ ಇದ್ದಾರೆ. ಇಲ್ಲಿ ಅಂಥವನೊಬ್ಬ ಅಣ್ಣಾ ಜನರ ಮಧ್ಯದಿಂದ ಇನ್ನೂ ಎದ್ದುಬರಬೇಕಷ್ಟೇ. ಎರಡೂ ಚಳುವಳಿಗಳು ಆಯಾಯ ದೇಶಗಳಿಗೆ ಒಳ್ಳೆಯದಾಗಿ ಪರಿಣಮಿಸಲಿ ಎಂದಷ್ಟೇ ಅಲ್ಲ, ಪ್ರಪಂಚದ ಜನತೆಗೆಲ್ಲ ಎಚ್ಚರಿಕೆಯ ಪಾಠಗಳಾಗಲಿ ಎಂದು ಹಾರೈಸೋಣ.

ಅಮೆರಿಕದಲ್ಲಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಸರ ಹೇಗಿದೆ?
ಈ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದುಕೊಂಡಷ್ಟು ಪ್ರಮಾಣದಲ್ಲಿ ನಾನು ತೊಡಗಿಸಿಕೊಂಡಿಲ್ಲವಾದ್ದರಿಂದ ಮತ್ತು ಇಲ್ಲಿನ ಸಾಹಿತ್ಯ/ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯ ನನಗೆ ಪತ್ರಿಕೆಗಳ ಓದಿನಷ್ಟೇ ಸೀಮಿತವಾದ್ದರಿಂದ ಹೆಚ್ಚಿನದೇನನ್ನೂ ಹೇಳಲಾರೆ. ನಾನು ಅದರ ಒಳಹೊಕ್ಕು ನೋಡಿಲ್ಲವಾದ್ದರಿಂದ ನಿರ್ಮಲವಾಗಿದೆ ಎಂದಷ್ಟೇ ಹೇಳಬಯಸುತ್ತೇನೆ.

ದೇಶದ ಸಂವಹನ ಮತ್ತು ಮಾಹಿತಿ ತಂತೃಜ್ಞಾನ ಸಚಿವ ಕಪಿಲ್ ಸಿಬಲ್ ಸಾಮಾಜಿಕ ತಾಣಗಳ ಮೇಲೆ ಸೆನ್ಸಾರ್‌ಶಿಪ್ ಹೇರುವ ಬಗ್ಗೆ ಮಾತಾನಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಆಗಲೇ ಹೇಳಿದಂತೆ ಸಾಂಪ್ರದಾಯಿಕ ಮಾಧ್ಯಮಗಳು ಇವತ್ತು ಜನಸಾಮಾನ್ಯರ ನೋವಿಗೆ ದನಿಯಾಗುತ್ತಿಲ್ಲಸಮಾಜಮುಖಿ ಕೆಲಸಗಳನ್ನು ಮಾಡುತ್ತಿಲ್ಲ. ಜನರ ಹತಾಶೆಯನ್ನು ತೋಡಿಕೊಳ್ಳಲಿಕ್ಕೆ ಪರ್ಯಾಯ ಮಾರ್ಗವಾಗಿ ಹುಟ್ಟಿಕೊಂಡಿರುವ ಸಾಮಾಜಿಕ ತಾಣಗಳ ಮೇಲೂ ನಿರ್ಬಂಧ ಹೇರುತ್ತೇನೆಂದರೆ ಜನರು ತಿರುಗಿಬೀಳದೆ ಇರುತ್ತಾರೆಯೇ? ಸಾಮಾಜಿಕ ತಾಣಗಳನ್ನು ಬಳಸುವವರು ಪ್ರಜ್ಞಾವಂತ, ಜವಾಬ್ದಾರಿಯುತ ಪ್ರಜೆಗಳು. ಅವರ ಬಾಯಿ ಮುಚ್ಚಿಸುತ್ತೇನೆನ್ನುವುದು ಅತಿಯಾಯ್ತು.

ಶ್ರೀರಾಮುಲು ಬಳ್ಳಾರಿ ಉಪಚುನಾವಣೆಯಲ್ಲಿ ಗೆದ್ದದ್ದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ಪನ್‌ಖಾ ಗೆದ್ದಿತೆಂದರೆ ಪನ್ ಉತ್ತರವಾಯ್ತು, ’ಶ್ರೀ’ರಾಮುಲು ಗೆದ್ದದ್ದೆಂದರೆ ಧನ್ ಧನಾ ಧನ್ ಉತ್ತರವಾಯ್ತು.