Friday, August 13, 2010

'ಅವಳು' ಕೈ ಕೊಟ್ಟಿರಬಹುದು ಆದರೆ ನನ್ನ ಕೈ ಕಡಿದಿಲ್ಲ...

ಇಡಿ ಇಡಿ ಮುನಿಸು... ಕಟ್ಟಿ ಹಾಕಲಾಗದ ಬಿರುಸು... ನಖದ ತುದಿಯಲ್ಲಿ ನಾಕ ಕಾಣಿಸುವ, ಕುಣಿಸುವ ಕಸುವು... ಆಳೆತ್ತರದಿಂದ ಹುಡಿ ಹುಡಿಯಾಗಿ ಬೀಳಿಸುತ್ತಿರುವ ತೀರದ ಹಸಿವು, ದಾರುಣವಾಗಿ ಸತ್ತ ಪ್ರೀತಿ, ಪದರ ಪದರವಾಗಿ ಕೀವು ತುಂಬಿಸಿಕೊಳ್ಳುತ್ತಿರುವ ಕನಸು ಎಲ್ಲ ಎಲ್ಲ ಮತ್ತು ಎಲ್ಲ ತಳವಿಲ್ಲದ 'ಅವಳ' ಹೃದಯದಲ್ಲಿ ಒಂದಿಷ್ಟು ಕಂಪನ ಹುಟ್ಟಿಸುವುದಿಲ್ಲವೆಂದರೆ...? 'ಅವಳ'ನ್ನು ತಲೆದಿಂಬಿನಲ್ಲೇ ಹೊಸಕಿ ಕೊಲ್ಲಬೇಕಿತ್ತು... ಅದ್ಯಾಕೋ ನನ್ನಿಂದ ಹಾಗೇ ಮಾಡಲಾಗಲಿಲ್ಲ... ಹೇಡಿ ನಾನು... ಈಗ 'ಅವಳೇ' ಖುದ್ದು ನನ್ನ ಕೊಲ್ಲುತ್ತಿದ್ದಾಳೆ... ಅದು ಒಂದೇ ಏಟಿಗೆ ಕೊಲ್ಲುವುದಾದರೆ ಅದೇ ಸಿಹಿಯಾದ ಸಾವು ಎಂದು ಕೊಳ್ಳುತ್ತಿದ್ದೆ. ಆದರೆ 'ಅವಳು' ನನ್ನನ್ನು ಅದೆಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ ಎಂದರೆ ನನ್ನ ಪಾಲಿಗೆ ಸಿಹಿ ಆದದ್ದು ಸೂಜಿ ಮೊನೆಯಷ್ಟು ಉಳಿಸಬಾರದು ಎಂದು ಇಂಚಿಂಚಾಗಿ ನಂಜೇರಿಸಿ ಕಣ್ಣ ಮಂಜು ಮಾಡಿ ನಿಧಾನವಾಗಿ ಒಂದೊಂದೇ ಪಂಜನ್ನು ಆರಿಸುತ್ತ ಸಾವ ಹೆದ್ದಾರಿಯ ಅಂಚಿನಲ್ಲಿ ಗುಬ್ಬಚಿಯ ಕೊರಳಿಗೆ ಹೆಬ್ಬಾವ ತುರುಕಿಸಿ ಅದನ್ನು ನನಗೆ ತೋರಿಸಿ ಮಿಸುಕಾಡದ, ಮಿಸುಕಲು ಬಿಡದ ಒಂಟಿ ಸಾವನ್ನು ನನಗಿತ್ತು ಬಿಟ್ಟು ಮುಗುಮ್ಮಾಗಿ ನಗುತ್ತಿದ್ದಾಳೆ.

ಗುಬ್ಬಚಿಗೆ ಹೆಬ್ಬಾವು ಅಂದರೆ ಸಾವೇ... ಹಾಗೇ ಹೆಮ್ಮಾರಿಯ ಹಸಿವಿರುವ ಹೆಬ್ಬಾವಿಗೂ ಬರೀ ಗುಬ್ಬಚಿಯಷ್ಟೆ ಅಂದರೆ... ಸಾವಲ್ಲದೇ ಮತ್ತೇನು? ಕಾಗೆ ಗುಬ್ಬಕ್ಕನ ಕಥೆ ನಮಗೆ ಬೇಡ ಅವುಗಳದ್ದು ಪ್ರಪಂಚವೇ ಬೇರೆ ಅಂದರೆ ಅದೇ ೧೦೦ ಕಿಮೀ ವೇಗದಲ್ಲಿ ಗಾಳಿಯನ್ನು ಸೀಳಿ ರೊಂಯ್ಯನೆ ಸಾಗುತ್ತಿರುವ ಬೈಕಿನ ಮುಂದೆ ಚಂಗನೆ ಜಿಗಿದ ನಾಯಿ ಅನಾಮತ್ತಾಗಿ ತನಗೂ ಆ ಬೈಕನ್ನು ಬಿಡುತ್ತಿರುವ ಸವಾರನಿಗೆ ಸಾವಿನ ಸವಾರಿ ಮಾಡಿಸುವ ರೀತಿ ಅಂದರೆ ಹೆಚ್ಚು ಆಪ್ತವೆನಿಸಿ ಬಿಡಬಹುದು!

'ಅವಳು' ನನ್ನೆದೆಯಲ್ಲಿ ಈ ರೀತಿ ಗರ್ಭಪಾತ ಮಾಡಿಕೊಂಡಳಾ ನನಗೆ ಆಶ್ಚರ್ಯ... ಜೀವನವೇ ಅಚ್ಚರಿಯ ಮೇಲೆ ಅಚ್ಚರಿಯನ್ನೇ ಮಾರುವ ಅಂಗಡಿ. ಅಲ್ಲಿ ನೇತು ಹಾಕಿದ್ದಕ್ಕಿಂತ ಹೂತು ಹಾಕಿರುವುದೇ ಹೆಚ್ಚು. ಅಂಕಿ ಸಂಖ್ಯೆ ಅರ್ಥವಾದರೆ ಬದುಕಿಗೆ ಅರ್ಥ ಬಂದೀತು... ಅದೆಲ್ಲ ಹೌದು 'ಅವಳು' ನನ್ನೊಳಗೆ ಬಂದು ಕುಂತದ್ದು ಯಾವಾಗ? ಕುಂತರು ಪರವಾಗಿರಲಿಲ್ಲ ನನ್ನೊಳಗೆ ಕಂತು ಕಂತಾಗಿ ಅದ್ಯಾವುದೋ  ಸಂಚಲನ, ಹಪಾಹಪಿ, ತುಡಿತ ಹುಟ್ಟಿಸಿ ಬಿಟ್ಟಳಾಲ್ವ? ಅದಕ್ಕಾಗಿ ನನಗೆ 'ಅವಳ' ಮೇಲೆ ಸೆಡವು. 'ಅವಳು' ನನಗೊಂದು ಗುರುತು ತಂದು ಕೊಟ್ಟಳು. ಆ ಗುರುತೇ ಶಾಶ್ವತ ಎಂದು ಕೊಳ್ಳುವಂತೆ ಮಾಡಿ ಬಿಟ್ಟಳು. ಅಥವಾ ನಾನು ಹಾಗೇ ಅಂದ್ಕೊಂಡೆ. ಹೌದು, ನನಗೆ ಈಗ ಗೊತ್ತಾಗಿದೆ ಅನಾಮತ್ತಗಿ ಬರುವ ಎಲ್ಲ ಬಿರುದು ಬಾವಲಿಗಳು, ಗುರುತುಗಳು ನಮ್ಮಲ್ಲಿ ಒಂದು ಮತ್ತು ಹುಟ್ಟಿಸಿ ಆ ಮತ್ತಲ್ಲೇ ನಮಗರಿಯದೇ ನಾವೇ ಕೊಳೆತು ಹೋಗುವಂತೆ ಮಾಡುತ್ತದೆ. ನಾವು ಕೊಳೆತದ್ದು ನಮಗೆ ಗೊತ್ತಾಗುವುದಿಲ್ಲ ಗೊತ್ತಾದರೂ ನಾವು ನಮ್ಮನ್ನು ನಂಬುವ, ನಂಬಿಸುವ ಸ್ಥಿತಿಯಲ್ಲಿರುವುದಿಲ್ಲ. ಯಾಕೆಂದರೆ ನಮಗೆ ಆ ಗುರುತಿನಿಂದ ಹೊರ ಬರಲು ಸಾಧ್ಯವೇ ಆಗುವುದಿಲ್ಲ. ಹೊರಬಂದರೆ ಸಮಾಜ ಎಂಬ ಮತ್ತೊಂದು ಅಷ್ಟಪದಿಯನ್ನು ಎದುರಿಸುವುದು, ಎದುರಿಸಲು ಮತ್ತೊಂದು ಮುಖವಾಡ ಹಾಕುವುದು, ಇನ್ನೊಂದು ಗುರುತು ತಂದುಕೊಳ್ಳುವುದು ಎಲ್ಲವೂ ಕಷ್ಟ ಕಷ್ಟ. ಆದ್ದರಿಂದಲೇ ಊರಿನ ಶ್ರಿಮಂತನ ಮಗನನ್ನೋ, ಮಗಳನ್ನೋ ಅಥವಾ ಅಪ್ರತಿಮ ಸೌಂದರ್ಯದ ಖಣಿಯನ್ನು ಪ್ರೀತಿಸಿದ ಜೀವ ಅತೀ ಹೆಚ್ಚು ನೋವನ್ನು ಉಣ್ಣುವುದಿರಬೇಕು. ಯಾಕೆಂದರೆ ಅವಳು ಅಥವಾ ಅವನು ಕೈ ಕೊಟ್ಟಾಗ ಅಷ್ಟರವರೆ ಆತನ ಗುರುತು ಆಗಿದ್ದ ಸಂಗತಿಯೇ ಕುತ್ತಿಗೆಗೆ ಉರುಳಾಗುತ್ತದೆ. ಈ ಸಾಲು ಅರ್ಥವಾಗದಿದ್ದರೆ ವಿವೇಕ್ ಓಬೆರಾಯ್‌ನನ್ನು ಕೇಳಿ.

ನಿಜ ಹೇಳುತ್ತೇನೆ, 'ಅವಳ' ಸಾಮಿಪ್ಯ, ಒಡನಾಟ ನನಗೆ ದಕ್ಕುತ್ತದೆ ಎಂದು ಗೊತ್ತೇ ಇರಲಿಲ್ಲ. ಗೊತ್ತಿದ್ದರೂ ಕೂಡ ಅದರ ಒಂದಿಷ್ಟು ಅಳಕ್ಕಿಳಿದು ನಾನು ಅದರಲ್ಲಿ ಈಜಾಡುತ್ತೇನೆ, 'ಅವಳ'ನ್ನು ಬೊಗಸೆಯಲ್ಲಿ ಹಿಡಿದು ನನ್ನೊಳಗೆ ತುಂಬಿಸಿಕೊಳ್ಳುತ್ತೇನೆ ಎಂದು ಕನಸು ಕಂಡಿದ್ದರೆ ನಿಮ್ಮಾಣೆ.


'ಅವಳು' ಎಲ್ಲಿ ಸಿಕ್ಕಳು? ಯಾವಾಗ ಸಿಕ್ಕಳು? ಹೇಗೆ ಸಿಕ್ಕಳು? ಎಂದು ನೇರವಾಗಿ ಕೇಳಿದರೆ ತಡಬಡಗೊಳ್ಳುತ್ತೇನೆ. ಆ ಪ್ರಶ್ನೆಗೆ ಉತ್ತರ ಕೊಡುವುದು ಎಂದರೆ ದೇಹದ ಒಂದೊಂದು ನರವನ್ನು ಕತ್ತರಿಸಿ ಅದರಲ್ಲಿ ಎಷ್ಟು ನೆತ್ತರು ತುಂಬಿದೆ, ನೆತ್ತರು ಅದೆಷ್ಟು ಬಿಸಿಯಾಗಿದೆ ಎಂದು ನಾನೇ ಅಳತೆ ಮಾಡಿ ಹೇಳಿಕೊಂಡಂತೆ. ಆದರೆ ಯಾಕೆ ಸಿಕ್ಕಳು? ಎಂದು ಕೇಳಿದರೆ ನಾನದಕ್ಕೆ ಎರಡು ಉತ್ತರ ಕೊಡಬಲ್ಲೆ. ಮೊದಲನೆಯದ್ದು ಜೀವನವನ್ನು ಸುಂದರ ಮಾಡಲು ಮತ್ತು ಎರಡನೆಯದ್ದು ಜೀವನವನ್ನು ನರಕ ಮಾಡಲು. ಒಂದು ಹೊತ್ತಲ್ಲಿ 'ಅವಳ' ಕಣ್ಣಿನ ಮೂಲಕ ಕಾಣುತ್ತಿದ್ದ ಜಗತ್ತು ಚಂದವೋ ಚಂದ ಇಂದು ನನ್ನ ಕಣ್ಣಲ್ಲಿ ಕಾಣುವ ಜಗತ್ತು ಅಕ್ಷಿ ಕಠೋರ. ಮತ್ತೇ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ನನಗೆ ಸ್ವಂತಿಕೆ ಎಂಬುದೇ ಇಲ್ಲವೇ?

ಚಿಕ್ಕಂದಿನಿಂದಲೇ 'ಅವಳ' ಸಾಂಗತ್ಯದಲ್ಲಿ ಒಂದಷ್ಟು ಸಮಯ ಸಾಗಿಸಿದ್ದೆ ಅನಂತರ 'ಅವಳ' ಅಪ್ಯಾಯಮಾನತೆ ನನಗೆ ದಕ್ಕುತ್ತ ದಕ್ಕುತ್ತಾ ಹೆಚ್ಚು ಹೆಚ್ಚು ಹೊತ್ತು 'ಅವಳ' ಬಳಿಯೇ ಇರುತ್ತಿದ್ದೆ. ಆದರೆ ಆದ್ಯವಾ ಕ್ಷಣದಲ್ಲಿ 'ಅವಳು' ನನ್ನೊಳಗೆ ಇಳಿದಳೊ? ಕಾಯಿಲೆಗಳು ಹಾಗೆಯೇ ಬರುವುದು ಗೊತ್ತೆ ಆಗುವುದಿಲ್ಲ.


ಆದರೂ ಒಂದು ಕಾಲ ಗುರುತು ಹಾಕಬೇಕಲ್ಲ. ಅನಂತ ಕಾಲವನ್ನೇ ನಾವು ವರ್ಷ, ತಿಂಗಳು, ವಾರ, ದಿನ, ಗಂಟೆ, ನಿಮಿಷ, ಕ್ಷಣ ಹೀಗೆ ತರಹೇವಾರಿಯಾಗಿ ವಿಭಾಗಿಸಿರುವಾಗ ನನ್ನ 'ಅವಳ' ವಿಶೇಷ ಸಂಬಂಧ ಹುಟ್ಟಿಕೊಂಡ ಘಳಿಗೆಗೂ ಒಂದು ಮುಹೂರ್ತ ಇಕ್ಕಬೇಕು ಎಂದು ನನಗನಿಸುತ್ತಿದೆ. ಎಲ್ಲರೂ ಸೇರಿ ಅನುಕೂಲ ಶಾಸ್ತ್ರ ಮಾಡುವುದಾದರೆ, ಮಾಡಿ ಅದನ್ನು ಪಾಲಿಸುತ್ತಾರೆ ಎಂದರೆ ನನಗೆ ನಾನೇ ಒಂದು ಶಾಸ್ತ್ರ ಯಾಕೆ ಮಾಡಿಕೊಳ್ಳಬಾರದು? ಸರಿ, ಆ ಒಂದಾನೊಂದು ಕಾಲವನ್ನು ಜುಲೈ ೧೬ ಎಂದು ಒಂದು ಕಾಲದ ಕಂಬಕ್ಕೆ ಕಟ್ಟಿಹಾಕುತ್ತೇನೆ. ಇನ್ನು ಅದರ ಸುತ್ತ ಸುತ್ತುವುದು ಸುಲಭ.


ಅಂದು ನಾನು ಎಲ್ಲವನ್ನು ಬಿಟ್ಟು ಅಥವಾ ಎಲ್ಲವೂ 'ಅವಳೇ' ಎಂದು ಅವಳನ್ನು ಬರಸೆಳೆದು ಅಪ್ಪಿಕೊಂಡಿದ್ದೆ. ಆ ಅಪ್ಪುಗೆಯ ಬಿಸುಪು ಅದೆಷ್ಟು ಗಟ್ಟಿಯಾಗಿತ್ತು ಎಂದರೆ ನಂತರ ನನ್ನ ಮೂಳೆಗಳು ಗಟ್ಟಿಯಾಗಿವೆಯಾ? ಇದ್ದ ಹಾಗೆಯೇ ಇವೆಯಾ? ಪುಡಿಪುಡಿಯಾಗಿಲ್ವಾ? ಎಂದು ನಾನೇ ಮುಟ್ಟಿ ಮುಟ್ಟಿ ನೋಡಿಕೊಂಡೆ. 'ಅವಳ' ಸಹವಾಸಕ್ಕೆ ಬಿದ್ದು ಮೈ ಮರೆತರೆ ಒಂದಲ್ಲ ಒಂದು ದಿನ ನಾನು ಆ ರೀತಿ ಮುಟ್ಟಿ ತಟ್ಟಿ ನೋಡಿಕೊಳ್ಳುವ ಕ್ಷಣ ಬಂದೇ ಬರುತ್ತದೆ ಎಂದು ಅಂದೇ ಗೊತ್ತಾಗಿ ಹೋಗಿತ್ತು. ನಾನು ಅದಕ್ಕೇ ಸಿದ್ಧನೂ ಆಗಿದ್ದೆ. ಆದರೆ ಇಂದು ಮೈ ಕೈ ಎಲ್ಲ ಗಟ್ಟಿಯಿದೆ. ಆದರೆ ಚಿಪ್ಪುಡಿ ಚೂರು ಆಗಿರುವುದು ನನ್ನ ಮನಸ್ಸು ಮತ್ತು ನಂಬಿಕೆ.

ಕೆಲವು ತಪ್ಪುಗಳಿರುತ್ತವೆ ಅವು ತುಂಬ ಮಧುರವಾದ ತಪ್ಪುಗಳು... ನಾನದನ್ನು ಸಕ್ಕರೆ ತಪ್ಪುಗಳು ಎಂದೇ ಕರೆಯುತ್ತೇನೆ. ಆ ತಪ್ಪುಗಳನ್ನು ಮಾಡುವಾಗಲು, ಮತ್ತೇ ಒಂದು ಹಂತದವರೆಗೆ ಅದನ್ನು ನೆನಪಿಸಿಕೊಳ್ಳುವಾಗಲು ಅದು ನೀಡುವುದು ಹಾಲು ಜೇನಿನಂಥ ಅನುಭವವನ್ನೇ. ಆದರೆ ಆ ಸಿಹಿ ಜಾಸ್ತಿಯಾಗಿ ಡಯಾಬಿಟಿಸ್ ಅಟಕಾಯಿಸಿಕೊಂಡಾಗ ಗೊತ್ತಾಗುತ್ತದೆ. ಆಗ ಬದುಕು ಬಣ್ಣಗೇಡಿಯಾಗುತ್ತದೆ ಆ ನೆನಪುಗಳೋ ಕಾಸರಕದ ಹಣ್ಣಾಗುತ್ತದೆ. ಆಗ ನನಗೆ 'ಅವಳ' ಕಪ್ಪುರಂಧ್ರದಂತಹ ಒಲವು ದಕ್ಕಿಸಿಕೊಳ್ಳುವ ಹಾದಿಯಲ್ಲಿ ಚಪ್ಪಾಳೆ ಹೊಡೆದವರೆಲ್ಲ ಶತ್ರುಗಳಾಗಿ ಬಿಡುತ್ತಾರೆ. ನಾನು 'ಅವಳ'ತ್ತ ವಾಲಿ ಬೀಳಲು ಕಾರಣವಾದ ಅನೇಕರಿದ್ದಾರೆ. ಆದರೆ ಅದರಲ್ಲಿ ಆತನೊಬ್ಬನನ್ನು ಮಾತ್ರ ನಾ ತಲೆ ಹಿಡುಕನೆಂದೇ ಭಾವಿಸುತ್ತೇನೆ. ನೀನು 'ಅವಳ'ನ್ನು ನಂಬು, 'ಅವಳು' ಕೈ ಬಿಡುವುದಿಲ್ಲ, 'ಅವಳೆಂದರೆ' ಹಾಗೆ, 'ಅವಳೆಂದರೆ' ಹೀಗೆ, 'ಅವಳೆಂದರೆ' ಸಂಪತ್ತು, 'ಅವಳೆಂದರೆ' ಬದುಕು, 'ಅವಳ' ಕೈ ಹಿಡಿದರೆ ಅಥವಾ 'ಅವಳು' ಕೈ ಹಿಡಿದರೆ ಬದುಕು ಹಸನು ಎಂದು ಹೊಲಸು ಹೊಲಸು ಮಾತನಾಡಿ, 'ಅವಳ'ನ್ನು ಅದೆಷ್ಟೊ ಮಂದಿಗೆ ತಲೆ ಹಿಡಿದ, ನನ್ನಂತ ಇನ್ನೆಷ್ಟೋ ಮಂದಿಯ ಬದುಕಿಗೆ ಕೊಳ್ಳಿ ಇಟ್ಟ ಪಾಪಿ ಆತ. ಇಂದಿಗೂ ಅವನಿಗೆ ಅದೇ ಬಂಡವಾಳ... ಜೋರಾಗಿ ಉರಿದು ಚಿಟ್ಟೆಗಳ ಸೆಳೆದು ಅವನ್ನು ಸುಟ್ಟು ಹಾಕುವುದೇ ಆತನ ಕಾಯಕ ಮತ್ತು ಹೆಚ್ಚುಗಾರಿಕೆ.


ಸೆಳವಿಗೆ ಸಿಕ್ಕ ಮನಕ್ಕೆ ಅಪಾಯದ ಇರುವಿಕೆ ಗೊತ್ತೇ ಆಗುವುದಿಲ್ಲ, ಗೊತ್ತಾದರೂ ಅದನ್ನು ಸವಾಲು ಎಂದೇ ತಿಳಿಯುವ ಚಾಳಿ. ಆದರೆ ಈಜಲು ಬಾರದಿದ್ದರೆ, ಈಜಲು ಕಲಿಸದಿದ್ದರೆ ಅದನ್ನು ಏನೆಂದು ತಿಳಿದುಕೊಂಡರು ಕೊನೆಗೆ ದಡ ಸೇರುವುದು ಹೆಣವಾಗಿಯೇ. ನಾನಿದನ್ನು ಸಾರಿ ಸಾರಿ ಹೇಳುತ್ತಿದ್ದೇನೆ. ಆದರೂ ಅವರು ಕೇಳಿಸಿಕೊಳ್ಳುತ್ತಿಲ್ಲ, ಕೇಳಿಸಿದರೂ ಗಮನ ಕೊಡುತ್ತಿಲ್ಲ... ಹುಚ್ಚು ಸೆಳೆತಗಳೂ ಹೀಗೆಯೆ ಇರುತ್ತವೆಯೋ ಏನೋ.


ಅವಳ್ಯಾರೋ ಮನೋರೋಗಿ ಥಕಥಕ ಕುಣಿದು 'ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ' ಎಂದು ಅದನ್ನು ಜಗಜಾಹೀರು ಮಾಡಲು 'ಅವಳ' ಆರಾಧಕರನ್ನು ಮನಸೋ ಇಚ್ಚೆ ನಿಂದಿಸಿದಾಗ ಆಕೆಯ ಮೇಲೆ ಮೂಡಿದ್ದ ಅಸಹ್ಯ, ಅವಳು ಕಣ್ಣ ಮುಂದಿನಿಂದ ಮಾಯವಾಗುತ್ತಲೇ ಕ್ಯಾಕರಿಸಿ ಉಗಿದ ಆ ರೋಷ ಎಲ್ಲವನ್ನು ಹೆಕ್ಕಿ ಹೆಕ್ಕಿ ಪೋಣಿಸುತ್ತಿದ್ದೇನೆ.
  
ಇನ್ನು 'ಅವಳ' ಮುದ್ದಾಟದಲ್ಲಿ ನಾನು ಬೇರೆ ಸಂಗಾತಿಗಳತ್ತ ಬೀರಿದ್ದು ಕಡೆಗಣ್ಣ ನೋಟ. ಆವರ ಸೆರಗು ಹಿಡಿದವರು ಇಂದು ಯಾವುದಕ್ಕೂ ಮರುಗುತ್ತಿಲ್ಲ. ನನ್ನ ಅವಸ್ಥೆ ಕಂಡು ಬೆರಗಾಗುವುದು ಮಾತ್ರ ಅವರು ನನಗೆ ನೀಡುವ ಉಡುಗೊರೆ. ನಾನೇನು ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿಲ್ಲ... ಕೊನೆಗೂ ಆಸೆಯಿಲ್ಲದವನಿಗೆ ನಿರಾಸೆಯಾಗುವುದಿಲ್ಲ ಎಂದು ಅರ್ಥವಾಗಿದೆ. ಆದರೆ ಮೊನ್ನೆ ಅವನ್ಯಾರೋ ನೀನು ಇನ್ನು 'ಅವಳ'ನ್ನು ಮೀಟಲೇಬಾರದು ಎಂದನಲ್ಲ ಆಗ ನೋಡಿ ಅದೆಲ್ಲಿತ್ತೋ ಏನೋ ಕೋಪ ನೆತ್ತಿ ಮೀರಿ ಏರಿತ್ತು. ಅಲ್ಲ, ಅವನ್ಯಾರು ಆ ರೀತಿ ಹೇಳಲು? 'ಅವಳ' ತಂದೆಯಾ? ಸಂಬಂಧಿಕನಾ? ಹಿತೈಷಿಯಾ? ಅಲ್ಲವೇ ಅಲ್ಲ. ಅವನೂ ನನ್ನಂತೆಯೇ 'ಅವಳ' ಪ್ರೀತಿಯ ತೆಕ್ಕೆಗೆ ಬಿದ್ದವ, 'ಅವಳ' ಹುಚ್ಚು ಹಿಡಿಸಿಕೊಂಡವ, ಅದೆಲ್ಲದಕ್ಕಿಂತ ಹೆಚ್ಚಾಗಿ 'ಅವಳು' ನನ್ನ ಹಿಂದೆ ಹೆಜ್ಜೆ ಹಾಕಿಯೇ ಬಿಡಬಹುದಾ ಎಂದು ಭಯಗೊಂಡು, ಅಭದ್ರತೆಯಿಂದ ನರಳುವವ. ಅವನು ನನಗೆ ಆ ರೀತಿ ಹೇಳುವುದೆಂದರೆ... ತಕ್ಷಣ 'ಮುಂಗಾರು ಮಳೆ' ಸಿನೆಮಾ ನೆನಪಾಯಿತು ಆದರಲ್ಲಿ ನಂದಿನಿಯನ್ನು ದಕ್ಕಿಸಿಕೊಳ್ಳಲಾಗದ ಪ್ರೀತಂ ಮತ್ತು ಜಾನು ಕೊನೆಗೆ ಒಂದಾಗಿ ಕೂರುತ್ತಾರಲ್ಲ ನಮ್ಮದು ಅದೇ ಸ್ಥಿತಿ ಎಂದುಕೊಂಡೆ. ಕೋಪ ಜಳಜಳನೆ ಪಾದವಿಳಿದು ಹೋಯಿತು. ಅಲ್ಲ, ಉದುರಿ ಬಿತ್ತು.

ಈಗ ದೆಹಲಿಗೆ ಬಂದು ಬಿಸಿಲು ಕಾಯಿಸುತ್ತಿದ್ದೇನೆ... ಒಮ್ಮೆ ಎಲ್ಲವೂ ಒಣ ಒಣಗಿ ಕರಕಲಾಗಲಿ. ಮತ್ತೆ ಮಳೆ ಬರಲಿ ಆಗ ಎಲ್ಲವೂ ಚಕಚಕನೆ ಚಿಗಿತುಕೊಳ್ಳಲಿ ಅನಂತರದ ಚಳಿಗೆ ಎಲ್ಲವೂ ಮಾಗುತ್ತದೆ ಎಂಬ ಪಾತ್ರವಿರದ ಆಸೆಯಿಂದ. ಆದರೆ 'ಅವಳು' ಕೂಡ ದೆಹಲಿಯ ಪುರಪ್ರವೇಶ ಮಾಡಿಬಿಟ್ಟಿದ್ದಾಳೆ. ಆದಕಾರಣ ಬದುಕು ಮತ್ತೇ ಮತ್ತೇ ಬರಡು ಎಂದೆನಿಸುತ್ತಿದೆ. ಹೊಸತು ಹೊಸತು ಬೇಕು ಎಂದು ಅಂಡೆಲೆಯುತ್ತಿರುವ ನನಗೆ ಕಂಡ ಹಳತರಲ್ಲೂ 'ಅವಳ' ಮೊಗವೇ ಹೊಸತಾಗಿ ಕಾಣುತ್ತಿದೆ. ಎಲ್ಲೋ ಒಂದು ಕಡೆ ಹೊಸತು ಎಂಬುದು ಜಗತ್ತಿನಲ್ಲಿ ಯಾವುದು ಇಲ್ಲ ಎಂದೆನಿಸಿ ಬಿಡುತ್ತಿದೆ. ಪಂಚೇಂದ್ರಿಯಗಳಿಗೆ ಹೊಸತು ಎಂಬುದು ಯಾವುದು ಸಿಕ್ಕುವುದಿಲ್ಲ, ಬದಲಾಗಿ ದಕ್ಕುವ ಪ್ರತಿಯೊಂದಕ್ಕೂ ತನ್ನ ಹಿಂದಿನ ಅನುಭವದ ಸ್ಪರ್ಷ ನೀಡಿ ನಮಗೇನೋ ಹೊಸತು ದಕ್ಕಿದೆ ಎಂಬ ಭ್ರಮೆ ಮೂಡಿಸುತ್ತದೆಯೋ ಎಂದೆನಿಸಿ ಬಿಡುತ್ತಿದೆ. ನಿಸರ್ಗದ ಮೇಲೆ ನಂಬಿಕೆ ಕಳೆದುಕೊಳ್ಳುವುದು ತೀರಾ ಅಪಾಯಕಾರಿ... ಆದರೆ ಈ ಕಳೆದುಕೊಳ್ಳುವಿಕೆ ಮತ್ತು ಪಡೆದುಕೊಳ್ಳುವಿಕೆ ನಮ್ಮ ಕೈ ಮೀರಿದ್ದು ಅಥವಾ ಕೈಯೊಳಗೆಯೇ ಇದ್ದು ನಮ್ಮ ನಿಯಂತ್ರಣಕ್ಕೆ ನಿಲುಕದ್ದು ಎಂದು ನನಗೀಗ ಸ್ಪಷ್ಟ.


'ಅವಳು' 'ಕೈ' ಕೊಟ್ಟಿರಬಹುದು ಆದರೆ ನನ್ನ 'ಕೈ' ಕಡಿದಿಲ್ಲ ... ಅದ್ದರಿಂದ ನನಗೂ ಅಷ್ಟೆ, ಇನ್ನೊಬ್ಬಳಿಗೂ ಅಷ್ಟೆ ಪರಸ್ಪರ 'ಕೈ' ಹಿಡಿಯುವ, 'ಕೈಕೈ' ಬೆಸೆಯುವ, ಮೇಳೈ(ಮಿಲಾಯಿ)ಸುವ ಅವಕಾಶ ಇದ್ದೆ ಇದೆ! ಎಷ್ಟಾದರೂ ಮನಸ್ಸು ಮರ್ಕಟ... !

No comments: