ಬೆಂಗಳೂರಿನ್ನು ರೇಸ್ ಕುದುರೆಗಳ ಕೆನೆಯುವಿಕೆ ಮತ್ತು ಖರಪುಟದಿಂದ ಮುಕ್ತವಾಗುವುದು ನಿಶ್ಚಿತ. ನಗರದ ಕೇಂದ್ರ ಭಾಗದಲ್ಲಿದ್ದ ರೇಸ್ ಕೋರ್ಸ್ ನ್ನು ಸ್ಥಳಾಂತರಿಸಲು ಸರಕಾರ ಗಟ್ಟಿ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಸುಮಾರು 90 ವರ್ಷಗಳ ಒಂದು ಪರಂಪರೆ ಬೆಂಗಳೂರಿನಿಂದ ಕಳಚಿಕೊಳ್ಳಲಿದೆ. ಇದು ಸರಕಾರದ ಪಾಲಿಗೆ ಅನಿವಾರ್ಯ, ಅತ್ಯಗತ್ಯ ಎರಡೂ ಹೌದು.
ಇಲ್ಲೊಂದು ಉದ್ಯಾನ ಬರಲಿದೆ, ಬಸ್ ನಿಲ್ದಾಣ ಆಗಲಿದೆ, ವೀಕ್ಷಣಾ ಗೋಪುರ ನಿರ್ಮಾಣವಾಗಲಿದೆ, ಮೃಗಾಲಯವೂ ಆಗಬಹುದು ಎಂಬಿತ್ಯಾದಿ ಗಾಳಿ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಇದೊಂದು ರೇಸ್ ಕೋರ್ಸ್ ಆಗಿದ್ದ ಸಂದರ್ಭದಲ್ಲಿ ಆದುದಕ್ಕಿಂತ ಹೆಚ್ಚಿನ ಚರ್ಚೆಗಳು ಇದೀಗ ಆರಂಭವಾಗಿದೆ.
ಹೌದು, ಚರ್ಚೆಗೆ ಇದು ಸಕಾಲ. ಈ ಹಿಂದೆ ಕೇಂದ್ರ ಕಾರಾಗೃಹ ಬದಲಾದಗಲೂ ಇದೇ ಮಾದರಿ ಚರ್ಚೆಗಳು ಕೇಳಿ ಬಂದಿದ್ದವು. ಜನ ಇದೇ ರೀತಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಕೊನೆಗೆ ಆದದ್ದು ಇವುಗಳಲ್ಲಿ ಕೆಲವು ಮಾತ್ರ. ಅದೇ ಮಾದರಿ ಚರ್ಚೆ ಈಗ ಆರಂಭವಾಗಿದೆ.
ಬಹುಶಃ ಕುದುರೆ ರೇಸ್ ಗಾಗ ನಗರದ ಹೃದಯಭಾಗದಲ್ಲಿ ನೂರಾರು ಕೋಟಿ ರೂ. ಬೆಲೆಬಾಳುವ 85 ಎಕರೆ ಜಾಗ ಬಳಕೆಯಾಗುತ್ತಿರುವುದು ಜಗತ್ತಿನ ಯಾವುದೇ ಭಾಗದಲ್ಲೂ ಕಂಡುಬರಲಿಕ್ಕಿಲ್ಲ.
ರೇಸ್ ಕೋರ್ಸ್ ಅದು ಈಗೀರುವ ಜಾಗದಿಂದ ಸ್ಥಳಾಂತರ ಮಾಡಿದ ತಕ್ಷಣ ಸರಕಾರದ ಕೆಲಸ ಮುಗಿಯಿತು ಎಂದಲ್ಲ. ಸರಕಾರದ ನಿಜಬಣ್ಣ/ ಯೊಗ್ಯತೆ ಗೊತ್ತಾಗುವುದು ಸರಕಾರ ಮುಂದೆ ಆ ಜಾಗವನ್ನು ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ.
ಆದರೆ ನಮ್ಮ ಸರಕಾರದ ಬಳಿ ಈ ಅಮೂಲ್ಯ ಪ್ರದೇಶವನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಯೋಚನೆಯಾಗಲಿ, ಯೋಜನೆಯಾಗಲಿ ಇಲ್ಲ.
ಬೆಂಗಳೂರು ಕಾಂಕ್ರಿಟ್ ಕಾಡಾಗಿದೆ. ತುಂಡು ಭೂಮಿಯನ್ನು ಬಿಡದಂತೆ ರಿಯಲ್ ಎಸ್ಟೇಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮಾಲ್ ಗಳು ಮತ್ತಿತ್ತರ ವಾಣಿಜ್ಯ ಬಳಕೆಯ ಕಟ್ಟಡಗಳು ಎಲ್ಲ ಮಿತಿಯನ್ನು ಮೀರಿ ನಿರ್ಮಾಣಗೊಳ್ಳುತ್ತಿವೆ. ಅದರೊಂದಿಗೆ ಕೆಳ ರಸ್ತೆ, ಮೇಲು ರಸ್ತೆ. ಮೆಟ್ರೋ ರೈಲಿಗಾಗಿ ಸಾಕಷ್ಟು ಮರಗಳ ಮಾರಣ ಹೋಮ ನಡೆದಿದೆ. ಇದರಿಂದ ಬೆಂಗಳೂರಿಗಿರುವ 'ಹಸಿರು ನಗರಿ' ಎಂಬ ಪಟ್ಟಕ್ಕೂ ಧಕ್ಕೆ ಬಂದಿದೆ. ಅದ್ದರಿಂದ ಈ ಸ್ಥಳದಲ್ಲಿ ಉದ್ಯಾನವನ ನಿರ್ಮಿಸುವುದೇ ಸೂಕ್ತ ಎಂದು ಬಹುಪಾಲು ಜನರ ಅಭಿಪ್ರಾಯ.
'ಇಂದು ಬೆಂಗಳೂರಿನ ಟ್ರೇಡ್ ಮಾರ್ಕ್ ನಂತಿರುವುದು ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಉದ್ಯಾನ ವನಗಳು. ಇವುಗಳೊಂದಿಗೆ ಅನೇಕ ಚಿಕ್ಕ ಪುಟ್ಟ ಉದ್ಯಾನವನಗಳಿವೆ. ಇಲ್ಲಿ ಉದ್ಯಾನ ನಿರ್ಮಿಸಿದ್ದೆ ಆದರೆ ಇದನ್ನು ಲಾಲ್ ಭಾಗ್. ಕಬ್ಬನ್ ಪಾರ್ಕ್ ಗಳ ಮಟ್ಟಕ್ಕೆ ಅಥವಾ ಅವುಗಳನ್ನು ಮೀರಿಸುವಂತೆ ಮಾಡಬಹುದು' ಎನ್ನುತ್ತಾರೆ ವಿದ್ಯಾನಗರದ ಶ್ರೀಧರ್ ದೀಕ್ಷಿತ್.
ಉದ್ಯಾನವನ ಎಂದೊಡನೇ 50 ಮರ, 25 ಕಲ್ಲು ಬೆಂಚುಹಾಕಿ ಪ್ರೇಮಿಗಳಿಗೆ, ಜಾಗಿಂಗ್, ವಾಕಿಂಗ್ ಮಾಡುವವರಿಗೆ ಸೀಮಿತ ಮಾಡುವುದರ ಬದಲು ನಾನಾ ಔಷಧೀಯ ಗುಣವಿರುವ ಗಿಡಮರಗಳನ್ನು ಜೊತೆಜೊತೆಗೆ ಅಪರೂಪದ ವಿನಾಶದಂಚಿನಲ್ಲಿರುವ ಮತ್ತು ಇನ್ನಿತರ ಕಾರಣಗಳಿಗಾಗಿ ಉಪಯುಕ್ತವಾಗಿರುವ ಗಿಡಮರಗಳನ್ನು ಬೆಳೆಸಿದ್ದೆ ಆದಲ್ಲಿ ಇದು ಜಗತ್ತಿನ ಮಹತ್ವದ ಉದ್ಯಾನವೆಂದು ಕರೆಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇದು ಪರಿಸರ ಉಳಿಸುವಿಕೆಗಿನ ಸರಕಾರದ ಬದ್ದತೆಯನ್ನು ಕೂಡ ಎತ್ತಿಹಿಡಿಯುತ್ತದೆ. ಹೊಗೆ. ಧೂಳು ಮುಂತಾದ ಕಲ್ಮಶಗಳನ್ನೆ ಸೇವಿಸಿ ಸೇವಿಸಿ ಜಡ್ಡುಗೊಂಡಿರುವ ಬೆಂಗಳೂರಿಗರ ಮೂಗಿಗೆ, ಕಣ್ಣಿಗೆ ಸ್ವಲ್ಪ ಮಟ್ಟಿನ ಆಹ್ಲಾದತೆಯನ್ನು ನೀಡಬಲ್ಲದು ಎನ್ನುತ್ತಾರೆ ಅವರು.
ಇಲ್ಲೊಂದು ಮೃಗಾಲಯ ನಿರ್ಮಿಸುವುದರ ಬಗ್ಗೆಯೂ ಸರಕಾರ ಗಂಭೀರವಾಗಿ ಚಿಂತಿಸಬಹುದು. ಬೆಂಗಳೂರಿನಲ್ಲಿ ಎಲ್ಲವೂ ಇದೆ. ಆದರೆ ಮೃಗಾಲಯವೊಂದಿಲ್ಲ. ಈ ಸ್ಥಳ ಬಿಟ್ಟರೆ ಮೃಗಾಲಯ ನಿರ್ಮಿಸಲು ಬೇರೆ ಪ್ರಶಸ್ತ ಜಾಗ ಇಷ್ಟು ಸುಲಭವಾಗಿ ದೊರಕುವುದು ಅನುಮಾನ. ಮೃಗಾಲಯ ನಿರ್ಮಿಸಿದ್ದೆ ಆದರೆ ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ವಿಜಯನಗರದ ವೆಂಕಟೇಶ್ ಗೌಡರ ಅಭಿಪ್ರಾಯ.
ಆದರೆ ಗೋವಿಂದರಾಜನಗರದ ಶ್ರೀನಿವಾಸ್ ಪ್ರಕಾರ, ಇಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸರಕಾರ ಯೋಚಿಸುವುದು ಉತ್ತಮ. ನಗರದ ದರ್ಶನ ಮಾಡಿಸಲು ಇಲ್ಲೊಂದು ವೀಕ್ಷಣ ಗೋಪುರ ರಚಿಸಬಹುದು. ಇದರಿಂದ ಬೆಂಗಳೂರಿಗರಿಗೆಯೇ ಅಪರಿಚಿತವಾಗುತ್ತಿರುವ ನಗರವನ್ನು ಪರಿಚಯ ಮಾಡಿಕೊಳ್ಳಬಹುದು.
ಈ ಮೂರು ಸಾಧ್ಯತೆಗಳನ್ನು ಒಟ್ಟಿಗೆ ಸಾಕರಗೊಳಿಸಲು ಸಾಧ್ಯವಿದೆ ಕೂಡ.
ನಗರದ ದಟ್ಟಣೆಯ ನಡುವೆ ನಿಲುಗಡೆಗೆ ಎಲ್ಲೂ ತಾಣವೇ ಇಲ್ಲದಂತಾಗಿದೆ. ಅದ್ದರಿಂದ ಈ ಸ್ಥಳವನ್ನು ವಾಹನ ನಿಲುಗಡೆ ತಾಣವನ್ನಾಗಿ ಬಳಸಿಕೊಳ್ಳಬಹುದು. ಹಾಗಂತ ಇದನ್ನು ಸಂಪೂರ್ಣ ನಿಲುಗಡೆಗೂ ಬಳಸಿಕೊಳ್ಳಲು ಆಗದು. ಕಾರಣ ಇಷ್ಟು ವಿಶಾಲ ಸ್ಥಳದಲ್ಲಿ ನಿಲ್ಲಿಸಬಹುದಾದಷ್ಟು ವಾಹನ ಇತ್ತ ಬರುವುದೂ ಇಲ್ಲ. ಒಂದಿಷ್ಟು ಜಾಗ ಇದಕ್ಕಾಗಿ ಬಳಸಿಕೊಳ್ಳಬಹುದು ಎಂಬ ಸಲಹೆ ನೀಡುತ್ತಾರೆ ವಸಂತನಗರದದ ಶೇಖ್ ಅಬ್ದುಲ್ ರಶೀದ್.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ ಗಳು ತುಂಬಿಕೊಂಡು ಕೆಲವೊಮ್ಮೇ ಇಡೀ ಸಂಚಾರಿ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗಿ ಬಿಡುತ್ತದೆ. ಅದ್ದರಿಂದ ಅಲ್ಲಿಂದ ಒಂದಿಷ್ಟು ಬಸ್ ಗಳನ್ನು ಇಲ್ಲಿಗೆ ವರ್ಗಾಯಿಸಿ ಇಲ್ಲಿಂದಲೆ ಸಾಗುವಂತೆ ಮಾಡಬಹುದು ಎಂಬುದು ಶೇಷಾದ್ರಿಪುರದ ನಾಗರಾಜ್ ಅಭಿಪ್ರಾಯ.
ಒಟ್ಟಿನಲ್ಲಿ ಬೆಂಗಳೂರಿನ ಮುಂದಿನ ಬೆಳವಣಿಗೆಯಲ್ಲಿ ಅತ್ಯಂತ ಉಪಯುಕ್ತ ಪಾತ್ರ ವಹಿಸಲಿರುವ ಈ ಜಾಗ ಮತ್ತೊಂದು ಸಮಸ್ಯೆಯಾಗುವ ಬದಲು ಇರುವ ಸಮಸ್ಯೆಗೆ ಪರಿಹಾರವಾಗಲಿ ಎಂಬುದೇ ಬಹುಪಾಲು ಜನರ ಆಶಯ. ಸರಕಾರ ಕೂಡ ಈ ನಿಟ್ಟಿನಲ್ಲಿ ಯೋಚಿಸಲಿ.
1 comment:
idu Nammalli Banda haagittalla.....!?
Post a Comment