ಬೆಂಗಳೂರಿನ್ನು ರೇಸ್ ಕುದುರೆಗಳ ಕೆನೆಯುವಿಕೆ ಮತ್ತು ಖರಪುಟದಿಂದ ಮುಕ್ತವಾಗುವುದು ನಿಶ್ಚಿತ. ನಗರದ ಕೇಂದ್ರ ಭಾಗದಲ್ಲಿದ್ದ ರೇಸ್ ಕೋರ್ಸ್ ನ್ನು ಸ್ಥಳಾಂತರಿಸಲು ಸರಕಾರ ಗಟ್ಟಿ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಸುಮಾರು 90 ವರ್ಷಗಳ ಒಂದು ಪರಂಪರೆ ಬೆಂಗಳೂರಿನಿಂದ ಕಳಚಿಕೊಳ್ಳಲಿದೆ. ಇದು ಸರಕಾರದ ಪಾಲಿಗೆ ಅನಿವಾರ್ಯ, ಅತ್ಯಗತ್ಯ ಎರಡೂ ಹೌದು.
ಇಲ್ಲೊಂದು ಉದ್ಯಾನ ಬರಲಿದೆ, ಬಸ್ ನಿಲ್ದಾಣ ಆಗಲಿದೆ, ವೀಕ್ಷಣಾ ಗೋಪುರ ನಿರ್ಮಾಣವಾಗಲಿದೆ, ಮೃಗಾಲಯವೂ ಆಗಬಹುದು ಎಂಬಿತ್ಯಾದಿ ಗಾಳಿ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಇದೊಂದು ರೇಸ್ ಕೋರ್ಸ್ ಆಗಿದ್ದ ಸಂದರ್ಭದಲ್ಲಿ ಆದುದಕ್ಕಿಂತ ಹೆಚ್ಚಿನ ಚರ್ಚೆಗಳು ಇದೀಗ ಆರಂಭವಾಗಿದೆ.
ಹೌದು, ಚರ್ಚೆಗೆ ಇದು ಸಕಾಲ. ಈ ಹಿಂದೆ ಕೇಂದ್ರ ಕಾರಾಗೃಹ ಬದಲಾದಗಲೂ ಇದೇ ಮಾದರಿ ಚರ್ಚೆಗಳು ಕೇಳಿ ಬಂದಿದ್ದವು. ಜನ ಇದೇ ರೀತಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಕೊನೆಗೆ ಆದದ್ದು ಇವುಗಳಲ್ಲಿ ಕೆಲವು ಮಾತ್ರ. ಅದೇ ಮಾದರಿ ಚರ್ಚೆ ಈಗ ಆರಂಭವಾಗಿದೆ.
ಬಹುಶಃ ಕುದುರೆ ರೇಸ್ ಗಾಗ ನಗರದ ಹೃದಯಭಾಗದಲ್ಲಿ ನೂರಾರು ಕೋಟಿ ರೂ. ಬೆಲೆಬಾಳುವ 85 ಎಕರೆ ಜಾಗ ಬಳಕೆಯಾಗುತ್ತಿರುವುದು ಜಗತ್ತಿನ ಯಾವುದೇ ಭಾಗದಲ್ಲೂ ಕಂಡುಬರಲಿಕ್ಕಿಲ್ಲ.
ರೇಸ್ ಕೋರ್ಸ್ ಅದು ಈಗೀರುವ ಜಾಗದಿಂದ ಸ್ಥಳಾಂತರ ಮಾಡಿದ ತಕ್ಷಣ ಸರಕಾರದ ಕೆಲಸ ಮುಗಿಯಿತು ಎಂದಲ್ಲ. ಸರಕಾರದ ನಿಜಬಣ್ಣ/ ಯೊಗ್ಯತೆ ಗೊತ್ತಾಗುವುದು ಸರಕಾರ ಮುಂದೆ ಆ ಜಾಗವನ್ನು ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ.
ಆದರೆ ನಮ್ಮ ಸರಕಾರದ ಬಳಿ ಈ ಅಮೂಲ್ಯ ಪ್ರದೇಶವನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಯೋಚನೆಯಾಗಲಿ, ಯೋಜನೆಯಾಗಲಿ ಇಲ್ಲ.
ಬೆಂಗಳೂರು ಕಾಂಕ್ರಿಟ್ ಕಾಡಾಗಿದೆ. ತುಂಡು ಭೂಮಿಯನ್ನು ಬಿಡದಂತೆ ರಿಯಲ್ ಎಸ್ಟೇಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮಾಲ್ ಗಳು ಮತ್ತಿತ್ತರ ವಾಣಿಜ್ಯ ಬಳಕೆಯ ಕಟ್ಟಡಗಳು ಎಲ್ಲ ಮಿತಿಯನ್ನು ಮೀರಿ ನಿರ್ಮಾಣಗೊಳ್ಳುತ್ತಿವೆ. ಅದರೊಂದಿಗೆ ಕೆಳ ರಸ್ತೆ, ಮೇಲು ರಸ್ತೆ. ಮೆಟ್ರೋ ರೈಲಿಗಾಗಿ ಸಾಕಷ್ಟು ಮರಗಳ ಮಾರಣ ಹೋಮ ನಡೆದಿದೆ. ಇದರಿಂದ ಬೆಂಗಳೂರಿಗಿರುವ 'ಹಸಿರು ನಗರಿ' ಎಂಬ ಪಟ್ಟಕ್ಕೂ ಧಕ್ಕೆ ಬಂದಿದೆ. ಅದ್ದರಿಂದ ಈ ಸ್ಥಳದಲ್ಲಿ ಉದ್ಯಾನವನ ನಿರ್ಮಿಸುವುದೇ ಸೂಕ್ತ ಎಂದು ಬಹುಪಾಲು ಜನರ ಅಭಿಪ್ರಾಯ.
'ಇಂದು ಬೆಂಗಳೂರಿನ ಟ್ರೇಡ್ ಮಾರ್ಕ್ ನಂತಿರುವುದು ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಉದ್ಯಾನ ವನಗಳು. ಇವುಗಳೊಂದಿಗೆ ಅನೇಕ ಚಿಕ್ಕ ಪುಟ್ಟ ಉದ್ಯಾನವನಗಳಿವೆ. ಇಲ್ಲಿ ಉದ್ಯಾನ ನಿರ್ಮಿಸಿದ್ದೆ ಆದರೆ ಇದನ್ನು ಲಾಲ್ ಭಾಗ್. ಕಬ್ಬನ್ ಪಾರ್ಕ್ ಗಳ ಮಟ್ಟಕ್ಕೆ ಅಥವಾ ಅವುಗಳನ್ನು ಮೀರಿಸುವಂತೆ ಮಾಡಬಹುದು' ಎನ್ನುತ್ತಾರೆ ವಿದ್ಯಾನಗರದ ಶ್ರೀಧರ್ ದೀಕ್ಷಿತ್.
ಉದ್ಯಾನವನ ಎಂದೊಡನೇ 50 ಮರ, 25 ಕಲ್ಲು ಬೆಂಚುಹಾಕಿ ಪ್ರೇಮಿಗಳಿಗೆ, ಜಾಗಿಂಗ್, ವಾಕಿಂಗ್ ಮಾಡುವವರಿಗೆ ಸೀಮಿತ ಮಾಡುವುದರ ಬದಲು ನಾನಾ ಔಷಧೀಯ ಗುಣವಿರುವ ಗಿಡಮರಗಳನ್ನು ಜೊತೆಜೊತೆಗೆ ಅಪರೂಪದ ವಿನಾಶದಂಚಿನಲ್ಲಿರುವ ಮತ್ತು ಇನ್ನಿತರ ಕಾರಣಗಳಿಗಾಗಿ ಉಪಯುಕ್ತವಾಗಿರುವ ಗಿಡಮರಗಳನ್ನು ಬೆಳೆಸಿದ್ದೆ ಆದಲ್ಲಿ ಇದು ಜಗತ್ತಿನ ಮಹತ್ವದ ಉದ್ಯಾನವೆಂದು ಕರೆಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇದು ಪರಿಸರ ಉಳಿಸುವಿಕೆಗಿನ ಸರಕಾರದ ಬದ್ದತೆಯನ್ನು ಕೂಡ ಎತ್ತಿಹಿಡಿಯುತ್ತದೆ. ಹೊಗೆ. ಧೂಳು ಮುಂತಾದ ಕಲ್ಮಶಗಳನ್ನೆ ಸೇವಿಸಿ ಸೇವಿಸಿ ಜಡ್ಡುಗೊಂಡಿರುವ ಬೆಂಗಳೂರಿಗರ ಮೂಗಿಗೆ, ಕಣ್ಣಿಗೆ ಸ್ವಲ್ಪ ಮಟ್ಟಿನ ಆಹ್ಲಾದತೆಯನ್ನು ನೀಡಬಲ್ಲದು ಎನ್ನುತ್ತಾರೆ ಅವರು.
ಇಲ್ಲೊಂದು ಮೃಗಾಲಯ ನಿರ್ಮಿಸುವುದರ ಬಗ್ಗೆಯೂ ಸರಕಾರ ಗಂಭೀರವಾಗಿ ಚಿಂತಿಸಬಹುದು. ಬೆಂಗಳೂರಿನಲ್ಲಿ ಎಲ್ಲವೂ ಇದೆ. ಆದರೆ ಮೃಗಾಲಯವೊಂದಿಲ್ಲ. ಈ ಸ್ಥಳ ಬಿಟ್ಟರೆ ಮೃಗಾಲಯ ನಿರ್ಮಿಸಲು ಬೇರೆ ಪ್ರಶಸ್ತ ಜಾಗ ಇಷ್ಟು ಸುಲಭವಾಗಿ ದೊರಕುವುದು ಅನುಮಾನ. ಮೃಗಾಲಯ ನಿರ್ಮಿಸಿದ್ದೆ ಆದರೆ ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ವಿಜಯನಗರದ ವೆಂಕಟೇಶ್ ಗೌಡರ ಅಭಿಪ್ರಾಯ.
ಆದರೆ ಗೋವಿಂದರಾಜನಗರದ ಶ್ರೀನಿವಾಸ್ ಪ್ರಕಾರ, ಇಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸರಕಾರ ಯೋಚಿಸುವುದು ಉತ್ತಮ. ನಗರದ ದರ್ಶನ ಮಾಡಿಸಲು ಇಲ್ಲೊಂದು ವೀಕ್ಷಣ ಗೋಪುರ ರಚಿಸಬಹುದು. ಇದರಿಂದ ಬೆಂಗಳೂರಿಗರಿಗೆಯೇ ಅಪರಿಚಿತವಾಗುತ್ತಿರುವ ನಗರವನ್ನು ಪರಿಚಯ ಮಾಡಿಕೊಳ್ಳಬಹುದು.
ಈ ಮೂರು ಸಾಧ್ಯತೆಗಳನ್ನು ಒಟ್ಟಿಗೆ ಸಾಕರಗೊಳಿಸಲು ಸಾಧ್ಯವಿದೆ ಕೂಡ.
ನಗರದ ದಟ್ಟಣೆಯ ನಡುವೆ ನಿಲುಗಡೆಗೆ ಎಲ್ಲೂ ತಾಣವೇ ಇಲ್ಲದಂತಾಗಿದೆ. ಅದ್ದರಿಂದ ಈ ಸ್ಥಳವನ್ನು ವಾಹನ ನಿಲುಗಡೆ ತಾಣವನ್ನಾಗಿ ಬಳಸಿಕೊಳ್ಳಬಹುದು. ಹಾಗಂತ ಇದನ್ನು ಸಂಪೂರ್ಣ ನಿಲುಗಡೆಗೂ ಬಳಸಿಕೊಳ್ಳಲು ಆಗದು. ಕಾರಣ ಇಷ್ಟು ವಿಶಾಲ ಸ್ಥಳದಲ್ಲಿ ನಿಲ್ಲಿಸಬಹುದಾದಷ್ಟು ವಾಹನ ಇತ್ತ ಬರುವುದೂ ಇಲ್ಲ. ಒಂದಿಷ್ಟು ಜಾಗ ಇದಕ್ಕಾಗಿ ಬಳಸಿಕೊಳ್ಳಬಹುದು ಎಂಬ ಸಲಹೆ ನೀಡುತ್ತಾರೆ ವಸಂತನಗರದದ ಶೇಖ್ ಅಬ್ದುಲ್ ರಶೀದ್.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ ಗಳು ತುಂಬಿಕೊಂಡು ಕೆಲವೊಮ್ಮೇ ಇಡೀ ಸಂಚಾರಿ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗಿ ಬಿಡುತ್ತದೆ. ಅದ್ದರಿಂದ ಅಲ್ಲಿಂದ ಒಂದಿಷ್ಟು ಬಸ್ ಗಳನ್ನು ಇಲ್ಲಿಗೆ ವರ್ಗಾಯಿಸಿ ಇಲ್ಲಿಂದಲೆ ಸಾಗುವಂತೆ ಮಾಡಬಹುದು ಎಂಬುದು ಶೇಷಾದ್ರಿಪುರದ ನಾಗರಾಜ್ ಅಭಿಪ್ರಾಯ.
ಒಟ್ಟಿನಲ್ಲಿ ಬೆಂಗಳೂರಿನ ಮುಂದಿನ ಬೆಳವಣಿಗೆಯಲ್ಲಿ ಅತ್ಯಂತ ಉಪಯುಕ್ತ ಪಾತ್ರ ವಹಿಸಲಿರುವ ಈ ಜಾಗ ಮತ್ತೊಂದು ಸಮಸ್ಯೆಯಾಗುವ ಬದಲು ಇರುವ ಸಮಸ್ಯೆಗೆ ಪರಿಹಾರವಾಗಲಿ ಎಂಬುದೇ ಬಹುಪಾಲು ಜನರ ಆಶಯ. ಸರಕಾರ ಕೂಡ ಈ ನಿಟ್ಟಿನಲ್ಲಿ ಯೋಚಿಸಲಿ.
Tuesday, June 30, 2009
Tuesday, June 23, 2009
ಬಿಜೆಪಿ ನಾಯಕರು ಕಥೆ ಹೇಳುತ್ತ ಕೂರಬೇಕಾದೀತು, ಎಚ್ಚರ!
ಬಿಜೆಪಿ ಕಳೆದ ಲೋಕಸಭೆಯಲ್ಲಿ ಇಷ್ಟು ಹೀನಾಯ ಪ್ರದರ್ಶನ ನೀಡಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅದರೆ ಫಲಿತಾಂಶ ಪ್ರಕಟವಾದೊಡನೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದದ್ದು ನಿರೀಕ್ಷಿತವಾಗಿತ್ತು. ವಾಸ್ತವವಾಗಿ ಚುನಾವಣಾಪೂರ್ವದಲ್ಲೇ ಪಕ್ಷದಲ್ಲಿ 'ಎಲ್ಲವೂ ನೆಟ್ಟಗಿರ ಆದರೂ ನಾವೆಲ್ಲ ಒಂದೇ ಎಂಬ ಮುಖವಾಡತೊಟ್ಟು ಪಕ್ಷ ಚುನಾವಣೆ ಎದುರಿಸಿತ್ತು.
ಭಿನ್ನಮತ, ಬಂಡಾಯ ಮತ್ತು ಪಕ್ಷದಿಂದ ಹೊರಹೋಗುವುದು, ಹೊರಹಾಕುವುದು ಭಾರತೀಯ ರಾಜಕಾರಣಕ್ಕೆ ತೀರಾ ಪರಿಚಿತ ಸಂಗತಿ. ದೇಶದ ಜನರಿಗೆ ಇದರಲ್ಲೇನು ಹೊಸದು ಕಾಣಿಸೋದಿಲ್ಲ. ಆದರೆ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ನಮ್ಮ ರಾಜಕೀಯ ವ್ಯವಸ್ಢೆಯಲ್ಲಿ ಒಂದು ಅಪರಿಚಿತ ವಾತವರಣ ಸೃಷ್ಟಿಸಿಬಿಟ್ಟಿದೆ. 'ಪಾರ್ಟಿ ವಿತ್ ಡಿಫರೆನ್ಸ್' ಎಂದು ಬೀಗುತ್ತಿದ್ದವರು 'ಡಿಫರೆನ್ಸ್ ಇನ್ ಪಾರ್ಟಿ’ಯಿಂದ ನರಳುತ್ತಿದ್ದಾರೆ.
ಭಿನ್ನಮತ ಬಿಜೆಪಿಗೆ ಹೊಸದಲ್ಲ. ವಾಜಪೇಯಿ ಮತ್ತು ಅಡ್ವಾಣಿ ಅದೇಷ್ಟೆ ಅತ್ಮೀಯರಾಗಿದ್ದರೂ ಕೂಡ ಪಕ್ಷದಲ್ಲಿ ಹಿಂದಿನಿಂದಲೂ ವಾಜಪೇಯಿ ಬಣ ಮತ್ತು ಅಡ್ವಾಣಿ ಬಣ ಎಂಬ 'ಬಣ ಸಂಸ್ಕ್ರತಿ' ಗುಪ್ತಗಾಮಿನಿಯಾಗಿ ಹರಿಯುತ್ತಲೆ ಇತ್ತು. ಆದರೆ ಅದು ಎಂದಿಗೂ ಭಿನ್ನಮತದ ಸ್ವರೂಪ ಪಡೆದಿರಲಿಲ್ಲ. ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ 2004ರಲ್ಲಿ ಅಧಿಕಾರ ಕಳೆದುಕೊಂಡದ್ದೆ ತಡ ಭಿನ್ನಮತದ ಗೆದ್ದಲು ಪಕ್ಷವನ್ನು ಕೊರೆಯುತ್ತಲೆ ಬಂದಿತ್ತು. ಈ ಗೆದ್ದಲು ಪಕ್ಷದ ಎಲ್ಲೊ ಹುಟ್ಟಿಕೊಂಡಿರಲಿಲ್ಲ ಬಿಜೆಪಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರಲ್ಲಿ ಮತ್ತು ಅವರಿಂದಲೇ ಹುಟ್ಟಿಕೊಂಡಿತ್ತು. ಇದು ಉಮಾಭಾರತಿ, ಕಲ್ಯಾಣ್ ಸಿಂಗ್, ಗೋವಿಂದಾಚಾರ್ಯ ಮುಂತಾದ ಮೂಂಚೂಣಿ ನಾಯಕರು ಪಕ್ಷದಿಂದ ಹೊರ ಹೋಗುವಂತೆ ಮಾಡಿತ್ತು. ಇದರಿಂದ ಪಕ್ಷಕ್ಕೆ ನೇರವಾದ ಹೊಡೆತ ಬೀಳಲಿಲ್ಲ ಅದರೆ ಪಕ್ಷದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಗಳು ಅಥವಾ ಯಾರ್‍ಯಾರೋ ಉನ್ನತ ಹುದ್ದೆ ಅಲಂಕರಿಸಲಾಂಭಿಸಿದರು. ಇವತ್ತಿನ ಎಲ್ಲಾ ಅಸಮಧಾನಗಳ ಮೂಲವಿರವುದೇ ಇಲ್ಲಿ!
ಬಿಜೆಪಿ ತನ್ನದು ಸಿದ್ಧಾಂತ ನಿಷ್ಠ ಪಕ್ಷವೆಂದು ಅದೇಷ್ಟೇ ಹೇಳಿಕೊಂಡರೂ ಅದು ಅ(ಒ)ಪ್ಪಿಕೊಂಡಿರುವುದು ವಾಜಪೇಯಿ ಮತ್ತು ಎಲ್. ಕೆ ಅಡ್ವಾಣಿಯವರ ನಡೆಯನ್ನು. ಅವರ ನಡೆ ನುಡಿ ಪಕ್ಷದ ಪಂಚಾಂಗವಾಯಿತು. ಆದರೆ ಅವರ ನಡೆ ನುಡಿಗೆ ಒಂದು ಚೌಕಟ್ಟಿತ್ತು ಆದನ್ನು ಮೀರಿದ ಅವರ ಚಿಂತನೆಯನ್ನಾಗಲಿ ಕಾರ್ಯವನ್ನಾಗಲೀ ಪಕ್ಷ ಸರ್ವಸಮ್ಮತವಾಗಿ ಒಪ್ಪಿಕೊಂಡಿರಲಿಲ್ಲ. ಉದಾಹರಣೆಗೆ ವಾಜಪೇಯಿ ರೈಲು ಮೂಲಕ ಪಾಕಿಸ್ತಾನಕ್ಕೆ ನೀಡಿದ ಭೇಟಿ ಮತ್ತು ಅದರೊಂದಿಗಿನ ಸ್ನೇಹ ಸಂಬಂಧಕ್ಕಾಗಿನ ಅವರ ಒತ್ತಾಸೆಗಳನ್ನು ಪಕ್ಷದಲ್ಲಿನ ಎಲ್ಲರೂ ಒಪ್ಪಿರಲಿಲ್ಲ. ಅದೇ ರೀತಿ, ಕಂದಹಾರ್ ವಿಮಾನ ಅಪಹರಣದ ಸಮಯದಲ್ಲಿ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗಾಗಿ ಭಾರತದ ಜೈಲಿನಲ್ಲಿದ್ದ ಪರಮ ಪಾತಕಿ ಉಗ್ರರನ್ನು ಅಪಹರಣಕಾರರ ಕೈಗೆ ಒಪ್ಪಿಸಿದ್ದನ್ನು ಕೂಡ. ಆದರೆ ಆಗ ಕೈಯಲ್ಲಿದ್ದ ಅಧಿಕಾರವೆಂಬ ಮಂತ್ರದಂಡ ಎಲ್ಲ ನವೆಗಳಿಗೂ ಮದ್ದರಿಯಿತು.
ಪಕ್ಷದ ಮತ್ತೊಬ್ಬ ನಾಯಕ ಅಡ್ವಾಣಿ, ಜಿನ್ನಾರನ್ನು 'ಜಾತ್ಯಾತೀತವಾದಿ' ಎಂದು ಕರೆದು ಇಕ್ಕಟ್ಟು ಸೃಷ್ಟಿಸಿಕೊಂಡರು. ವಿವಾದ ಹೆಮ್ಮರವಾಗಿ ಬೆಳೆಯಿತು, ಜಿನ್ನಾರನ್ನು ಜಾತ್ಯತೀತವಾದಿ ಎಂದದ್ದು ಪಕ್ಷದ ಸಿದ್ಧಾಂತಕ್ಕೆ ಮಾಡಿದ ಅಪಚಾರ ಎಂದೆ ಬಗೆಯಲಾಯಿತು. ಇದೆಲ್ಲದಕ್ಕಿಂತ ಹೆಚ್ಚು ರಾಷ್ಟೀಯ ಸ್ವಯಂ ಸೇವಕ ಸಂಘಕ್ಕೆ ಈ ಮಾತು ಅಪಥ್ಯವೆನಿಸಿತು. ಆಗ ಪಕ್ಷ ಅಧಿಕಾರದಲ್ಲಿರಲಿಲ್ಲ, ಅದ್ದರಿಂದ ಅಡ್ವಾಣಿ ಸಾಕಷ್ಟು ತೊಂದರೆಗೀಡಾದದ್ದು ಮಾತ್ರ ಸತ್ಯ. ಇದು ವ್ಯಕ್ತಿಗಿಂತ ಪಕ್ಷದ ಸಿದ್ಧಾಂತ ದೊಡ್ಡದು ಎಂಬುದಕ್ಕೆ ಪುರಾವೆ ಖಂಡಿತವಾಗಿಯೂ ಅಲ್ಲ. ಯಾಕೆಂದರೆ ಬಿಜೆಪಿಗೆ ತನ್ನ ಸಿದ್ಧಾಂತವೇ ಮುಖ್ಯ ಎಂಬುದಾದರೆ ಅವತ್ತೇ ಪಕ್ಷ ಅಡ್ವಾಣಿಯ ಮೇಲೆ ಉಳಿದ ಭಿನ್ನಮತೀಯರ ಮೇಲೆ ಕೈಗೊಂಡ ಕ್ರಮ ತೆಗೆದುಕೊಂಡು 'ಮುಖ ನೋಡಿ ಮಣೆ ಹಾಕುವುದು' ತನ್ನ ಸಂಸ್ಕ್ರತಿಯಲ್ಲ ಎಂದು ಸಾಬೀತು ಮಾಡುತ್ತಿತ್ತು. ಆದರೆ ಹಾಗಾಗಲಿಲ್ಲ. ಅಂದರೆ ಬಿಜೆಪಿಯಲ್ಲಿ ಪಕ್ಷ ನಿಷ್ಠೆ ವ್ಯಕ್ತಿ ನಿಷ್ಠೆಯೊಂದಿಗೆ ಮಿಳಿತವಾಗಿದೆ ಎಂದು ಅರ್ಥ ತಾನೇ?
ಪಕ್ಷದ ಈಗಿನ ಭಿನ್ನಮತಗಳತ್ತ ಗಮನ ಹರಿಸೋಣ. ಇವತ್ತು ಬಿಜೆಪಿ ಕೇಂದ್ರ, ತಾನು ಅಧಿಕಾರದಲ್ಲಿರುವ ಕರ್ನಾಟಕ ಮತ್ತು ಉತ್ತರಾಖಂಡದಲ್ಲಿ ಭಿನ್ನಮತದ ಸಮಸ್ಯೆ ಎದುರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಪಕ್ಷದ ಶೂನ್ಯ ಸಾಧನೆಯನ್ನು ಅಧರಿಸಿ ಅಲ್ಲಿನ ಕೆಲ ಶಾಸಕರು ಮುಖ್ಯಮಂತ್ರಿ ಬಿ.ಸಿ. ಖಂಡೂರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿನ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಈಶ್ವರಪ್ಪ ಬಣದ ಬಂಡಾಯದಲ್ಲಿ ಸೈಧಾಂತಿಕ ಕಾರಣಗಳಿರುವುದನ್ನು ಅಲ್ಲಗಳೆಯುವಂತಿಲ್ಲ. ಸೈಧಾಂತಿಕವಾಗಿ ನೋಡಿದರೆ ಈಶ್ವರಪ್ಪರೇ ನೈಜ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೇನೋ ಎಂದೆನಿಸುತ್ತದೆ. ಆದರೆ ಸದ್ಯ ಪರಿಸ್ಥಿತಿ ಅವರಿಗೆ ಅನುಕೂಲಕರವಾಗಿಲ್ಲ.
ಪಕ್ಷದ ರಾಜ್ಯ ಘಟಕಗಳಲ್ಲಿನ ಭಿನ್ನಮತಿಯರಿಗೆ ಮಂಗಳಾರತಿ ಎತ್ತಬೇಕಾದವರೆ ಬೆಂಕಿ ಹಾಕಿಕೊಂಡು ಕುಣಿಯುತ್ತಿದ್ದಾರೆ!
ಕಳೆದ ಲೋಕಸಭಾ ಚುನಾವಣಾ ಸಂದರ್ಭ ಪಕ್ಷದ ಪಿಲಿಭಿತ್ ಅಭ್ಯರ್ಥಿಯಾಗಿದ್ದ ವರುಣ್ ಗಾಂಧಿ ಮಾಡಿದ ವಿವಾದಾಸ್ಪದ ಭಾಷಣಕ್ಕೆ ಬಿಜೆಪಿ ನಾಯಕರ ಪ್ರತಿಕಿಯಿಸಿದ ವಿಧಾನದಲ್ಲೇ ಪಕ್ಷದೊಳಗಿನ ಗೊಂದಲಗಳು ಬೆಳಕಿಗೆ ಬಂದಿದ್ದವು. ಅನಂತರ ಅಡ್ವಾಣಿಯ ನಂತರ ಮೋದಿ ಪಕ್ಷದ ಪ್ರಧಾನಿ ಅಭ್ಯರ್ಥಿಯೆಂಬ ಅರುಣ್ ಶೌರಿ ಮತ್ತು ಅರುಣ್ ಜೇಟ್ಲಿ ಹೇಳಿಕೆಗಳು ಈ ಗೊಂದಲವನ್ನು ಸಿಕ್ಕಾಗಿಸಿದವು.ಸುಧಾನ್ಷು ಮಿತ್ತಾಲ್ ರನ್ನು ಈಶಾನ್ಯ ರಾಜ್ಯಗಳ ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ರಾಜನಾಥ್ ಸಿಂಗ್ ನೇಮಿಸಿದ್ದು ಜೇಟ್ಲಿಯ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆದರೆ ಚುನಾವಣೋತ್ತರದಲ್ಲಿ ವರುಣ್ ಗಾಂಧಿಯನ್ನು ಚುನಾವಣಾ ಸೋಲಿಗೆ ಹೊಣೆಗಾರರಾನ್ನಾಗಿಸುವ ಪ್ರಯತ್ನ ಕೂಡ ನಡೆಯಿತು. ಇದೀಗ ಸುಧಿಂದ್ರ ಕುಲಕರ್ಣಿ, ಜಸ್ವಂತ್ ಸಿಂಗ್ ಮತ್ತು ಯಶವಂತ ಸಿನ್ಹಾರಂತ ಪ್ರಭಾವಿ ನಾಯಕರುಗಳು ಪಕ್ಷದಲ್ಲಿನ ಸಮಸ್ಯೆಗೆ ಪರಿಹಾರವಾಗುವ ಬದಲು ತಾವೇ ಒಂದು ಸಮಸ್ಯೆಯಾಗಿ ಪರಿವರ್ತನೆಗೊಂಡಿದ್ದಾರೆ.
ಇಲ್ಲಿ ಸಿನ್ಹಾ ಎತ್ತಿರುವ ಪ್ರಶ್ನೆಗಳಲ್ಲಿ ಖಂಡಿತವಾಗಿಯೂ ಸಾರವಿದೆ. ಅವರು ಪಕ್ಷದ ಕರ್ನಾಟಕ ಘಟಕದ ಉಸ್ತುವಾರಿ ವಹಿಸಿಕೊಂಡಿದ್ದರೂ ರಾಜ್ಯ ಬಿಜೆಪಿಯಲ್ಲಿ ಏನೇ ಅದರೂ ಅದು ತಲುಪುತ್ತಿದ್ದದ್ದು ಜೇಟ್ಲಿ ಬಳಿಗೆ. ಇದು ಕೂಡ ಸಿನ್ಹಾ ಅಸಮಧಾನಕ್ಕೆ ಕಾರಣವಾಗಿರಬಹುದು. ಇಂದು ಬಿಜೆಪಿಯ ಕೇಂದ್ರ ಮಟ್ಟದ ನಾಯಕರಲ್ಲಿ ಎಲ್ ಕೆ ಅಡ್ವಾಣಿ ಮತ್ತು ನರೇಂದ್ರ ಮೋದಿಯವರನ್ನು ಹೊರತುಪಡಿಸಿದರೆ ಬೇರೆ ನೈಜ ನಾಯಕರುಗಳೇ ಇಲ್ಲ. ಉಳಿದವರೆಲ್ಲ ಕೇವಲ ಬಾಯಿ ಮಾತಿನಿಂದ ಮತ್ತು ಬುದ್ಧಿ ಬಲದಿಂದ ನಾಯಕರೆಂದು ಗುರುತಿಸಿಕೊಳ್ಳುತ್ತಿರುವವರು. ಅವರಿಗೆ ಜನ ಬೆಂಬಲ ಮತ್ತು ಯಾವುದೇ ಹೋರಾಟದ ಹಿನ್ನೆಲೆಯಿಲ್ಲ. ಇದರೊಂದಿಗೆ ಸಂಘಟನೆಯಲ್ಲೂ ವಿಫಲರಾಗಿದ್ದಾರೆ. 'ಹೂವಿನೊಂದಿಗೆ ನಾರು ಸ್ವರ್ಗ ಸೇರಿತು' ಎಂಬಂತೆ ವಾಜಪೇಯಿ. ಎಲ್ ಕೆ ಅಡ್ವಾಣಿ ಮತ್ತು ಲಕ್ಷಾಂತರ ಕಾರ್ಯಕರ್ತರ ಹೆಸರು ಹೇಳಿಕೊಂಡು ಅವರು ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ.
ಬಿಜೆಪಿಯ ನಾಯಕರೆನಿಸಿಕೊಂಡಿರುವವರ ನಡುವಿನ ಕೆಸರೆರಚಾಟ ಅದರ ಮುಂದಿನ ರಾಜಕಿಯ ಭವಿಷ್ಯಕ್ಕೆ ಮತ್ತು ಪಕ್ಷಕ್ಕೆ ತೀರಾ ಕಂಟಕಪ್ರಾಯವಾಗಬಲ್ಲದು, ಅದೂ ಅಲ್ಲದೇ ಈಗ ಪಕ್ಷದೊಳಗೆ ಸೈಧಾಂತಿಕ ಗೊಂದಲಗಳು ಸೇರಿಕೊಂಡಿವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಪಕ್ಷದ ಮಾತೃಸಂಸ್ಠೆ ಆರೆಸ್ಸೆಸ್ ಪಕ್ಷದಿಂದ ದೂರ ಸರಿಯುತ್ತಿದೆ. ಆರೆಸ್ಸೆಸ್ ನ ಹಿರಿಯ ನಾಯಕ ಬಾಬುರಾವ್ ವೈದ್ಯ ಪಕ್ಷದ ಹಿಂದುತ್ವ ಸಿದ್ಧಾಂತದೊಂದಿಗಿನ ಆಟವನ್ನು ಖಂಡಿಸಿ ಅದು ಈ ಸಿಧ್ಧಾಂತದಿಂದ ದೂರ ಸರಿಯುವುದೇ ಲೇಸು ಎಂದಿದ್ದಾರೆ. ಹೌದು, ಬಿಜೆಪಿ ಹಿಂದುತ್ವಕ್ಕೆ 1991ರ ಅಯೋಧ್ಯೆ ಚಳುವಳಿಯ ನಂತರ ಎಂದಿಗೂ ನ್ಯಾಯ ಸಲ್ಲಿಸಿಲ್ಲ. ಆದರೆ ಅದನ್ನೆ ತನ್ನ ಮುಖ್ಯ ಸಿಧ್ಧಾಂತ ಎಂದು ಹೇಳುತ್ತ ಬಂದಿದೆ. ಇದರಿಂದ ಹಿಂದೂಗಳು ಕೂಡ ಭ್ರಮನಿರಶನಗೊಂಡಿದ್ದಾರೆ ಅಲ್ಪಸಂಖ್ಯಾತರಂತು ಬಿಜೆಪಿಯಿಂದ ಮಾರುದ್ದ ದೂರ ನಿಂತಿದ್ದಾರೆ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ವಾಜಪೇಯಿ 'ಒಮ್ಮೆಯಾದರೂ' ದೇಶದ ಪ್ರಧಾನಿಯಾಗಲಿ ಎಂಬ ಜನತೆಯ ಆಶಯ ಮತ್ತು ಕಾಂಗ್ರೆಸ್ನಲ್ಲಿ ಆಗ ಇದ್ದ ನಾಯಕತ್ವದ ಸಮಸ್ಯೆಗಳು ಪ್ರಮುಖ ಕಾರಣವಾಗಿತ್ತು. ಆದರೆ ಇಂದು ವಾಜಪೇಯಿ ಹಾಸಿಗೆ ಹಿಡಿದಿದ್ದಾರೆ, ಕಾಂಗ್ರೆಸ್ನ ನಾಯಕತ್ವ ಬಹಳ ಗಟ್ಟಿಯಾಗಿದೆ. ಅದ್ದರಿಂದ ಬಿಜೆಪಿಯ ಮುಂದೆ ಇರುವುದು ಈಗ ಎರಡೇ ಆಯ್ಕೆ ಒಂದೋ ತನ್ನ ಸಿದ್ಧಾಂತವನ್ನು ಗಟ್ಟಿಮಾಡಿಕೊಳ್ಳಬೇಕು. ಇಲ್ಲ, ತನ್ನ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂದು ನಿರ್ಧಾರ ಮಾಡಿಕೊಂಡು ಅವರ ಪರ ದೇಶಾದದ್ಯಂತ ಒಂದು ಅಲೆ ಸೃಷ್ಟಿಯಾಗುವಂತೆ ನೋಡಿಕೊಳ್ಳಬೇಕು.
ಪಕ್ಷಕ್ಕೆ ಈಗಿನ ಭಿನ್ನಮತದ ತೊಡಕಿನಿಂದ ಹೊರಬರುವುದು ಅಷ್ಟು ಸುಲಭವಾಗಿಲ್ಲ, ಯಾಕೆಂದರೆ ಸಮಸ್ಯೆ ನಾನ ದಿಕ್ಕಿನಲ್ಲಿ, ನಾನ ಸ್ಥಳಗಳಲ್ಲಿ ಮತ್ತು ನಾನ ರೀತಿಯಲ್ಲಿ ಹುಟ್ಟಿಕೊಂಡಿದೆ. ಇಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಮತ್ತು ಸಿಧ್ಢಾಂತತೊಂದಿಗಿನ ಭಿನ್ನಮತ ಮುಖ್ಯವಾದದ್ದು. ಅದ್ದರಿಂದ ಏಕೌಷಧ ಈ ಸಮಸ್ಯೆಯನ್ನು ಪರಿಹರಿಸದು. ಅದೆಲ್ಲದಕ್ಕಿಂತ ಹೆಚ್ಚಾಗಿ ಈ ಸಮಸ್ಯೆಗಳನ್ನು ಪರಿಹರೀಸೋದು ಯಾರು? ಎಂಬ ದೊಡ್ಡ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕೆಂದರೆ ಪಕ್ಷದಲ್ಲಿ ಯಾರು ಯಾರನ್ನು ನಂಬದ ಸ್ಥಿತಿ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಗೆ ಪರ್ಯಾಯವಾಗಿ ಬೆಳೆದಿದ್ದ ಬಿಜೆಪಿ ಈಗ ಇಳಿಜಾರಿನಲ್ಲಿ ಸಾಗುತ್ತಿದೆ. ಅದು ಪಾತಳ ಸೇರುವ ಮುಂಚೆ ಅದರ ನಾಯಕರುಗಳು ಎಚ್ಚೆತ್ತುಕೊಂಡರೆ ಕ್ಷೇಮ. ಇಲ್ಲ ಅಂದರೆ, ’ಹಿಂದೆ ಬಿಜೆಪಿಯೆಂಬ ಪಕ್ಷವಿತ್ತು, ಕಮಲ ಅದರ ಚಿಹ್ನೆಯಾಗಿತ್ತು. ಅದು ದೇಶವನ್ನು 6 ವರ್ಷಗಳ ಕಾಲ ಆಳಿತ್ತು’ ಎಂದು ಬಿಜೆಪಿ ನಾಯಕರುಗಳು ತಮ್ಮ ಮಕ್ಕಳಿಗೆ ಕಥೆ ಹೇಳುತ್ತ ಕೂರಬೇಕಾದೀತು! ಎಚ್ಚರ!
Subscribe to:
Posts (Atom)