ಲೋಕಸಭೆಗೆ ನಡೆದ ಚುನಾವಣೆ ನಿರೀಕ್ಷಿತ ಫಲಿತಾಂಶ ನೀಡಿದರೂ ಒಂದು ಅಚ್ಚರಿ ಮಾತ್ರ ಎಲ್ಲರಿಗೂ ಕಾದಿತ್ತು. ಅದೇ ಕಾಂಗ್ರೆಸ್ ಗೆ ದಕ್ಕಿದ ಸ್ಥಾನಗಳು! ಇದು ಕಾಂಗ್ರೆಸ್ ಪಕ್ಷದ ಅದ್ಬುತ ಬೆಳವಣಿಗೆ ಎಂದೆನಿಸಿದರೂ ಸೂಕ್ಷ್ಮವಾಗಿ ಗಮನಿಸಿದರೆ ಇದು ಆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಆದ ಮುಖಭಂಗ!
ಹಿಂದಿನ ಅಂದರೆ ೨೦೦೪ ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅಗ ಆಡಳಿತ ನಡೆಸುತ್ತಿದ್ದ ಎನ್‌ಡಿಎ ಈ ಚುನಾವಣೆ ’ಗೆದ್ದೆ ಗೆಲ್ಲುತ್ತೇವೆ’ ಎಂಬ ಹುಮ್ಮಸಿನಲ್ಲಿ ಪಡೆದುಕೊಂಡ ’ಶಾಕ್’ ಕೂಡ ಒಂದು ಅಚ್ಚರಿಯೇ! ಆ ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್‌ನ ಗೆಲುವು ಅನ್ನುವುದಕ್ಕಿಂತ ಬಿಜೆಪಿಯ ಸೋಲು ಅನ್ನುವುದು ಹೆಚ್ಚು ಸೂಕ್ತ. ಆ ಚುನಾವಣೆಯ ನಂತರ ಕಾಂಗ್ರೆಸ್ ತನ್ನ ’ಜಾತ್ಯತೀತತೆ’ ಎಂಬ ’ಸಿಮೆಂಟ್’ ಬಳಸಿ ಯುಪಿಎ ಎಂಬ 'ಕಟ್ಟಡ' ಕಟ್ಟಿಕೊಂಡು ೫ ವರ್ಷಗಳ ಆಡಳಿತ ನಡೆಸಿದ್ದು ಎಲ್ಲರಿಗೂ ತಿಳಿದಿರುವಂತದ್ದೆ.
ಇದೀಗ ನನ್ನ ಮುಖ್ಯ ಪ್ರಶ್ನೆಗೆ ಬರುತ್ತೆನೆ, ಅಂದು ಕಾಂಗ್ರೆಸ್ ಪಕ್ಷ ಶ್ರೀಮತಿ ಸೋನಿಯಾ ಗಾಂಧಿಯವರ ನೇತ್ರತ್ವದಲ್ಲಿ ಚುನಾವಣೆ ಎದುರಿಸಿತ್ತು. ಆದರೆ ಈ ಬಾರಿ ಸೋನಿಯಾ ಯುಪಿಎ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದರೂ ಕೂಡ ಅವರ ಮುಂದಾಳತ್ವದಲ್ಲೇ ಕಾಂಗ್ರೆಸ್ ಮತಯಾಚಿಸಿತ್ತು ಎಂದು ಹೇಳಲು ಸಾಧ್ಯವಿಲ್ಲ. ಅದು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರ ಸರ್ಕಾರದ ಸಾಧನೆಯ ಆಧಾರದಲ್ಲಿ ಜನರ ಬಳಿಗೆ ಬಂದಿತ್ತು. ಒಟ್ಟಿನಲ್ಲಿ ಇಲ್ಲಿ ಮನಮೋಹನ್ ಸಿಂಗ್‌ರೇ ಕೇಂದ್ರಬಿಂದು. ಆದ ಕಾರಣ ಈ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದದ್ದು ಸಿಂಗ್‌ಗೆ.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಳಿ ಇದ್ದದ್ದು ೧೪೫ ಸೀಟುಗಳು ಮಾತ್ರ. ಆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಆದರೆ ಅದನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಇಲ್ಲಿ ಕಾಂಗ್ರೆಸಿಗರು ಎನ್‌ಡಿಎ ಆಡಳಿತದಿಂದ ಜನ ಬೇಸತ್ತಿದ್ದರು ಎಂದರೂ ಕೂಡ
ಅದಕ್ಕೆ ಪರ್ಯಾಯವಾಗಿ ಸೋನಿಯಾ ಗಾಂಧಿಯವರನ್ನು ಅವರು ಒಪ್ಪಿಕೊಂಡಿರಲಿಲ್ಲ ಎಂಬುದನ್ನು ಈ ಸಂಖ್ಯೆ ಸ್ಪಷ್ಟವಾಗಿ ಸೂಚಿಸುತ್ತದೆ. ಇದರ ಒಟ್ಟು ತಾತ್ಪರ್ಯ ಸೋನಿಯಾರನ್ನು ದೇಶದ ಜನರು ಕಾಂಗ್ರೆಸ್‌ನ ನಾಯಕಿಯಾಗಿ ಒಪ್ಪಿಕೊಳ್ಳುತ್ತಾರೆಯೇ ಹೊರತು ದೇಶದ ನಾಯಕಿಯಾಗಿ ಅಲ್ಲ.
ಈ ಚುನಾವಣೆಯಲ್ಲಿ ಅದೇ ಪಕ್ಷ ಕಳೆದ ಸಲಕ್ಕಿಂತ ೬೧ ಸೀಟ್‌ಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ. ಇದು ಸಿಂಗ್ ಸೋನಿಯಾರಿಗಿಂತ ಪ್ರಬಲ ನಾಯಕ ಎಂಬುದರ ದ್ಯೋತಕವಲ್ಲದೆ ಮತ್ತೇನು? ಮತ್ತೊಂದು ಗಮನಿಸಬೇಕಾದ ಆಂಶವೆಂದರೆ ಸಿಂಗ್‌ರನ್ನು ತನ್ನ ನಾಯಕನನ್ನಾಗಿ ದೇಶವೂ ಒಪ್ಪಿಕೊಂಡಿದೆ, ವಾಸ್ತವವಾಗಿ ಸಿಂಗ್‌ಗೆ ಅವರ ಪಕ್ಷದಲ್ಲೆ ನಾಯಕನ ಸ್ಥಾನವಿಲ್ಲ! ಇದರರ್ಥ ನೆಹರು ಕುಟುಂಬದವರಲ್ಲದೆ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಮತ್ತು ಜನರೂ ಕೂಡ ಅವರನ್ನು ತಮ್ಮ ನಾಯಕನನ್ನಾಗಿ ಅಂಗೀಕರಿಸುತ್ತಾರೆ ಎಂದು ತಾನೇ? ಆದರೆ ಕಾಂಗ್ರೆಸಿಗರು ಮತ್ತೆ ಮತ್ತೆ ಆ ಕುಟುಂಬದ ಹಿಂದೆಯೇ ಮೊರೆ ಹೋಗುತ್ತಿರುವುದು ವಿಪರ್ಯಾಸವೇ ಸರಿ.
ಇಂದಿಗೂ ಕಾಂಗ್ರೆಸ್ ಪಕ್ಷದ ಬ್ಯಾನರ್, ಕಛೇರಿ ಅಥವಾ ಕಾರ್ಯಕ್ರಮಗಳಲ್ಲಿ ಶಾಶ್ವತವಾಗಿರುವುದು ಜವಹರ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯ ಚಿತ್ರಗಳು ಮತ್ತದರೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾಧ್ರರ ಚಿತ್ರಗಳು ಮತ್ತು ಸಾಧನೆಗಳು. ಮನಮೋಹನ್ ಸಿಂಗ್‌ಗೆ ಈಗ ಪ್ರಧಾನ್ಯತೆ ಸಿಕ್ಕಿದ್ದರೂ ಕೂಡ ಅದು ಸೀಮಿತ ಆವಧಿಗೆ ಮಾತ್ರ.
ಉದಾಹರಣೆಗೆ ಕಾಂಗ್ರೆಸ್ ಪಕ್ಷದಿಂದಲೇ ದೇಶದ ಪ್ರಧಾನಿಗಳಾದ ಲಾಲ್ ಬಹುದ್ದೂರ್ ಶಾಸ್ತ್ರಿ ಅಥವಾ ಪಿ.ವಿ ನರಸಿಂಹ ರಾವ್‌ರ ಬಗೆಗೆ ಆ ಪಕ್ಷ ತೋರಿಸುತ್ತಿರುವ ಅನಾದರ ನಮ್ಮ ಕಣ್ಣ ಮುಂದೆ ಇದೆ.
ಬಿಜೆಪಿಯ ಎರಡನೇ ಪೀಳಿಗೆ ನಾಯಕರು ಕಾಯುವದರಲ್ಲಿ ತಪ್ಪೇನಿಲ್ಲ!
ಇನ್ನು ಬಿಜೆಪಿ ಈ ಸೋಲಿನಿಂದ ತೀವ್ರ ಹತಾಶವಾಗಿದ್ದು ಸಿಕ್ಕ ಸಿಕ್ಕವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಅದು ಯಾವ ಮಟ್ಟಕ್ಕೆ ಬಂದು ಮುಟ್ಟಿದೆಯೆಂದರೆ ತನ್ನ ಮೂಲ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುವವರನ್ನೇ ಅಸ್ಪ್ರಶ್ಯರು ಎಂದು ಪರಿಗಣಿಸುಷ್ಟು. ಇದು ಅದರ ಸೈದ್ಧಾಂತಿಕ ಟೊಳ್ಳುತನವನ್ನು ಬಯಲು ಮಾಡಿದೆ.
ಇಂದು ದೇಶದಾದ್ಯಂತ ಬಿಜೆಪಿಯೆಂಬ ಹೆಸರನ್ನು ನೀವು ಕೇಳುತ್ತಿರುವಿರೆಂದರೆ ಅದಕ್ಕೆ ಕಾರಣ ಅದು ಬಲವಾಗಿ ಪ್ರತಿಪಾದಿಸುತ್ತ ಬಂದಿರುವ ಹಿಂದುತ್ವ. ಅದು ಎಲ್ಲಿ ತನಕ ಹಿಂದುತ್ವವನ್ನೇ ತನ್ನ ಚುನಾವಣಾ ವಿಷಯವನ್ನಾಗಿಸಿಕೊಂಡಿತ್ತೋ ಅಲ್ಲಿ ತನಕ ಅದು ಲೋಕಸಭೆಯಲ್ಲಿ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಬಂದಿತ್ತು ಮತ್ತು ಆಡಳಿತದ ಚುಕ್ಕಾಣಿಯನ್ನು ಕೂಡ ಹಿಡಿಯಿತು. ಆದರೆ ಅದೇ ದಿನಗಳಲ್ಲಿ ತನ್ನ ಮೂಲ ಸಿದ್ಧಾಂತದಿಂದ ದೂರ ಸರಿಯಲಾರಂಭಿಸಿತು ಅಂದಿನಿಂದ ಅದರ ಕೆಟ್ಟದಿನಗಳು ಶುರುವಾಯಿತು.
ಅದರ ಸೈದ್ಧಾಂತಿಕ ಪಲಾಯನವಾದಕ್ಕೆ ಇತ್ತೀಚಿನ ನಿದರ್ಶನವೆಂದರೆ ವರುಣ್ ಗಾಂಧಿಯವರ ಹೇಳಿಕೆಗೆ ಅದು ಪ್ರತಿಕ್ರಿಯಿಸಿದ ರೀತಿ. ಅವರನ್ನೇ ಬಿಜೆಪಿಯ ಕಳಪೆ ನಿರ್ವಹಣೆಗೆ ಹೊಣೆಗಾರರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ಸಲದ ಲೋಕಸಭೆ ಚುನಾವಣೆಯಲ್ಲಿ ಗುಜರಾತ್ ಗಲಭೆಯೆ ಪಕ್ಷದ ಸೋಲಿಗೆ ಕಾರಣ ಎಂದು ಅದು ಕಂಡುಕೊಂಡಿತ್ತು. ಆದರೆ ಇಂದು ಬಿಜೆಪಿ ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತ ಇದೆ, ಒಮ್ಮೆ ದೇಶವನ್ನೂ ಆಳಿತ್ತು ಹಾಗೆ ಲೋಕಸಭಾ ಚುನಾವಣೆಗಳಲ್ಲಿ ಲೀಲಾಜಾಲವಾಗಿ ೧೦೦ಕ್ಕಿಂತ ಹೆಚ್ಚು ಸೀಟ್‌ಗಳನ್ನು ಪಡೆಯುತ್ತದೆ ಎಂದಾದರೆ ಅದಕ್ಕೆ ಕಾರಣ ೧೯೯೦ರಲ್ಲಿ ನಡೆದ ಅಯೋಧ್ಯ ಚಳುವಳಿ. ಅದು ಹಿಂದುತ್ವದ ಹೆಸರಲ್ಲೇ ನಡೆದದ್ದು ಅಲ್ಲವೇ? ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಕರ್ನಾಟಕದಿಂದ ಒಂದು ಅಂಶವನ್ನು ಕಲಿತುಕೊಳ್ಳುವ ಜರೂರತ್ತಿದೆ ಅದೇನೆಂದರೆ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಎಲ್ಲೆಲ್ಲಿ ಹಿಂದುತ್ವದ ಮಂತ್ರ ಪಠಿಸಿತ್ತೋ ಅಲ್ಲೆಲ್ಲಾ ವಿಜಯಶಾಲಿಯಾಗಿದೆ! ಇದರರ್ಥ ಹಿಂದುತ್ವಕ್ಕೆ ಮತಗಳಿಸಿ ಗೆಲ್ಲಿಸಿ ಕೊಡುವ ಸಾಮರ್ಥ್ಯವಿದೆ ಎಂಬದು ತಾನೇ?
ಇನ್ನು ಮುಂದಿನ ಲೋಕಸಭೆ ಚುನಾವಣೆಗೆ ಸಾಕಷ್ಟು ಸಮಯಾವಕಾಶವಿದೆ. ಆದ್ದರಿಂದ ಈಗಲೇ ನಾಯಕತ್ವದ ಬಗೆಗಿನ ಗೊಂದಲ ಪರಿಹರಿಸಿಕೊಂಡು ಸೈದ್ಧಾಂತಿಕ ನಿಷ್ಟೆ ಮೆರೆದರೆ ಮುಂದಿನ ಲೋಕಸಭಾ ಚುನಾವಣೆ ಬಹುಶ: ೨೦೧೪ (ಇದು ನಿಜವಾಗಲಿ ಎಂಬ ಆಶಯದೊಂದಿಗೆ)ರಲ್ಲಿ ಏಕಾಂಗಿಯಾಗಿ ಬಹುಮತ ಪಡೆಯುವ ಪಡೆಯುವ ಸಾಧ್ಯತೆ ಕಡಿಮೆ ಇದ್ದರು ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮಬಲ್ಲದು. ಬಿಜೆಪಿಗೆ ೨೦೦+ ಸೀಟ್ ಸಿಕ್ಕರೆ ನಂತರ ಮಿತ್ರಪಕ್ಷಗಳನ್ನು ಹುಡುಕಿಕೊಳ್ಳವಿದು ಕಷ್ಟವಲ್ಲ, ಅವೇ ಹುಡುಕಿಕೊಂಡು ಬರುತ್ತವೆ! ಅವುಗಳ ಅಧಿಕಾರಕ್ಕಾಗಿನ ಹಪಾಹಪಿ ಯಾವ ಪರಿಯದ್ದು ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಅವುಗಳ ನಾಯಕರುಗಳು ತಮ್ಮ ಸ್ವಂತ ಮಾನ ಮಾರ್ಯಾದೆ ಬಿಟ್ಟು ವರ್ತಿಸುತ್ತಾರೆ ಇನ್ನು ಸಿದ್ಧಾಂತ ಸುಮ್ಮನೆ ಹೆಸರಿಗೆ ಮಾತ್ರ!
ಇಂದು ಬಿಜೆಪಿ ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದರು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್, ಛತ್ತೀಸ್‌ಗಢದ ರಮಣ್ ಸಿಂಗ್ ಮತ್ತು ಗುಜರಾತಿನ ನರೇಂದ್ರ ಮೋದಿಯವರ ಆಡಳಿತ ಹೆಚ್ಚು ಗಮನ ಸೆಳೆದಿದೆ ಮತ್ತು ಉತ್ತಮವಾಗಿದೆ. ಆದರೆ ಮೊದಲ ಇಬ್ಬರಿಗಿಂತ ಮೋದಿ ಹೆಚ್ಚು ಜನಪ್ರಿಯ. ಇದಕ್ಕೆ ಕಾರಣಗಳು ಏನೇ ಇದ್ದರೂ ಅವರು ಬಿಜೆಪಿಯ ಮೂಲ ಸಿದ್ಧಾಂತ ಮತ್ತು ಪಕ್ಷ ಈಗ ಹೆಚ್ಚಾಗಿ ಪ್ರತಿಪಾದಿಸುವ ಪ್ರಗತಿ ಸಿದ್ದಾಂತ ಎರಡಕ್ಕೂ ಅಗತ್ಯವಾದ ಮುಖ ಹೊಂದಿದ್ದಾರೆ. ಒಂದು ರೀತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಆಡ್ವಾಣಿಯವರ ವ್ಯಕ್ತಿತ್ವದ ಸಮ್ಮೀಶ್ರಣ ಈ ಮೋದಿ! ಅವರು ಪಕ್ಷದ ಮುಂದಿನ ಪ್ರಧಾನಿ ಆಭ್ಯರ್ಥಿ ಎಂದಾದರೆ ಅವರನ್ನು ದೇಶದ ಮೂಲೆ ಮೂಲೆಗೂ ಪರಿಚಯಿಸುವ ಕೆಲಸ ಈಗಿನಿಂದಲೇ ಆಗಬೇಕು. ಅವರು ಪಕ್ಷದ ಪ್ರಧಾನಿ ಆಭ್ಯರ್ಥಿ ಅಲ್ಲ, ಎಂದಾದರೆ ಮತ್ತ್ಯಾರು? ಅದು ಕೂಡ ಈಗಾಲೇ ನಿರ್ಧಾರವಾಗಿರಲಿ. ಇದು ಅಂತರಿಕವಾಗಿದ್ದರೂ ಸರಿ. ಉಳಿದಂತೆ ಬಿಜೆಪಿಯಲ್ಲಿ ಅನೇಕ ನಾಯಕರಿದ್ದರೂ ಅವರ್‍ಯಾರಿಗೂ ಒಂದು ಹೋರಾಟದ ಅಥವಾ ಜನಬೆಂಬಲದ ನಾಯಕತ್ವವಿಲ್ಲ, ಇದರೊಂದಿಗೆ ಅವರು ಪಕ್ಷದ ಸಂಘಟನೆಯಲ್ಲೂ ವಿಫಲರಾಗಿದ್ದಾರೆ. ಈ ನಾಯಕರು ಕೇವಲ ಬುದ್ಧಿಶಕ್ತಿ ಮತ್ತು ಬಾಯಿಬಲದಿಂದ ನಾಯಕರಾದವರು. ಅವರೆಲ್ಲರನ್ನು ಅವರವರ ರಾಜ್ಯಗಳಿಗೆ ಕಳುಹಿಸಿ ಅಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುವಂತೆ ಮಾಡಬೇಕು ಇದರಿಂದ ಅವರಿಗೂ ಪಕ್ಷಕ್ಕೂ ಲಾಭವಿದೆ.
ಉದಾಹರಣೆಗೆ ವೆಂಕಯ್ಯ ನಾಯ್ಡು ಬಿಜೆಪಿಯಲ್ಲಿ ಮಹಾನ್ ನಾಯಕನೆಂದೇ ಗುರುತಿಸಲ್ಪಡುವವರು. ಆದರೆ ಆವರ ಸ್ವಂತ ರಾಜ್ಯ ಆಂಧ್ರ ಪ್ರದೇಶದಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನ ಗೆಲ್ಲುವ ತಾಕತ್ತಿಲ್ಲ! ಅವರು ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗುತ್ತಾರೆ. ಇನ್ನು ರಾಜನಾಥ್ ಸಿಂಗ್ ಬಿಜೆಪಿಯ ರಾಷ್ಟ್ರಧ್ಯಕ್ಷರು ಅವರು ಉತ್ತರ ಪ್ರದೇಶದವರು. ಕೇವಲ ದಶಕಗಳ ಹಿಂದೆ ಅಲ್ಲಿ ಬಿಜೆಪಿ ಅತ್ಯಂತ ಬಲಶಾಲಿಯಾಗಿತ್ತು ಆದರೆ ಇಂದು ಅಲ್ಲೇ ತೀರಾ ದುರ್ಬಲ. ಅಂದರೆ ಇದು ಅವರ ನಾಯಕತ್ವ ಎಂತದ್ದು ಎಂಬುದನ್ನು ಸೂಚಿಸುತ್ತದೆ.
ಬಿಜೆಪಿಯ ಇನ್ನುಳಿದ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಸ್ವಂತ್ ಸಿಂಗ್, ಯಶವಂತ ಸಿನಾ ಎಲ್ಲರೂ ಇದೇ ವರ್ಗಕ್ಕೆ ಸೇರಿದವರು. ಅಂದರೆ ಪಕ್ಷದ ಮೇಲ್‌ಸ್ತರದ ನಾಯಕರುಗಳೆಲ್ಲ ಇಂತವರೇ! ಒಂದೋ ಈ ನಾಯಕರನ್ನು ಸಂಘಟನೆಯ ಕೆಲಸಕ್ಕಾಗಿ ಅವರವರ ರಾಜ್ಯಕ್ಕೆ ಕಳುಹಿಸಬೇಕು ಅಥವಾ ಜನಬೆಂಬಲವಿರುವ ನಾಯಕರುಗಳಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕು. ಮುಂದಿನ ಚುನಾವಣೆಗಳಲ್ಲಿ ಪಕ್ಷ ಕೆಟ್ಟ ನಿರ್ವಹಣೆ ತೋರಿಸಿದರೆ ಈ ನಾಯಕರುಗಳನ್ನು ಮುಲಾಜಿಲ್ಲದೆ ಮನೆಗೆ ಕಳುಹಿಸಬೇಕು. ಆಗ ಜವಾಬ್ದಾರಿಯುತವಾಗಿ ಎಲ್ಲರೂ ಕಾರ್ಯನಿರ್ವಹಿಸುತ್ತಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಸರದಿಯಂತೆ ದೇಶವನ್ನಾಳಬೇಕು ಎಂಬುದು ನನ್ನ ಕನಸು. ಈಗ ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ನಡೆಯುತ್ತಿರುವಂತೆ. ಆಗ ಎರಡೂ ಪಕ್ಷಗಳ ನಡುವೆ ನಿಕಟ ಸ್ಪರ್ಧೆ ಮೂಡುತ್ತದೆ ಇದರಿಂದ ದೇಶಕ್ಕೆ ಒಳಿತಾಗುತ್ತದೆ ಎಂಬುದು ನನ್ನ ನಿರೀಕ್ಷೆ.
ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಮಹಾನ್ ನಾಯಕರಾಗಿದ್ದರೂ ದೇಶದ ಪ್ರಧಾನಿಯಾಗಲು ೫೦ ವರ್ಷ ಕಾಯಬೇಕಾಯಿತು, ಇನ್ನು ಅವರಿಗಿಂತ ಒಂದು ಹಿಡಿ ಹೆಚ್ಚೇ ಎಂದೆನ್ನಬಹುದಾದ ಆಡ್ವಾಣಿಯವರಿಗೆ ಆ ಭಾಗ್ಯ ಸಿಗಲಿಲ್ಲ ಬಹುಶ: ಸಿಗಲಿಕ್ಕೂ ಇಲ್ಲ (ಇದು ಸುಳ್ಳಾಗಲೀ ಎಂಬ ಆಶಯ). ಅಂತದ್ದರಲ್ಲಿ ಈ ಇಬ್ಬರ ನಾಯಕತ್ವ ಗುಣ, ಸಂಘಟನಾ ಚಾತುರ್ಯ ಮತ್ತು ಹೋರಾಟದ ಹಿನ್ನೆಲೆಯಿಂದ ಮಾರುದ್ದ ದೂರದಲ್ಲಿರುವ ಬಿಜೆಪಿಯ ಎರಡನೇ ಪೀಳಿಗೆ ನಾಯಕರು ಕಾಯುವದರಲ್ಲಿ ತಪ್ಪೇನಿಲ್ಲ!
1 comment:
Fantastic one dear friend... I really like the way you put forward your thoughts..
And one more thing; It's wrong to be born in this nation as an anti-Congress element. Anti-Congress men are always compelled to struggle too much for survival by the Congress!!
Beware of the Congress treachery.
Good luck..
Post a Comment