Friday, February 20, 2015

ದೂರದರ್ಶನ... ರಾಜಕಾರಣ... ಕ್ರಿಕೆಟ್ಟು... ದಿಕ್ಕೆಟ್ಟು

ಒಡಿಸ್ಸಾದ ಆದಿವಾಸಿಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಬಂದಂತೆ ಗ್ರಾಮ ಭಾರತದ ಕ್ರಿಕೆಟ್ ವೀಕ್ಷಕರ ರಕ್ಷಣೆಗೆ ಸುಪ್ರೀಂ ಕೋರ್ಟ್ ಬಂದಿದೆ... ಮತ್ತೆ ಇತಿಹಾಸ ಮರುಕಳಿಸಿದೆ...!

ಭಾರತ ಹಳ್ಳಿಗಳ ದೇಶದಿಂದ ಕಾರ್ಪೋರೇಟ್ ಗಳ  ದೇಶವಾಗುವತ್ತ ವೇಗವಾಗಿ, ಸುಗಮವಾಗಿ ಸಾಗುತ್ತಿದೆ. ಇದಕ್ಕೆ ರಾಜಕಾರಣಿಗಳೇ ಪೌರೋಹಿತ್ಯ ವಹಿಸಿಕೊಂಡಿದ್ದಾರೆ ಎಂಬುದಕ್ಕೊಂದು ನಿದರ್ಶನ ಇಲ್ಲಿದೆ.

ಇಂದು ಕ್ರಿಕೆಟ್ ನೂರಾರು ಕೋಟಿ ರೂಗಳ ವಹಿವಾಟಿನ ಆಟ. ಭಾರತದಲ್ಲಂತೂ ಅದೇ ಒಂದು ಧರ್ಮವಂತೆ, ಕ್ರಿಕೆಟ್ ಅಟಗಾರನೇ ದೇವರಂತೆ. ನಿಜ ಧರ್ಮ, ದೇವರನ್ನೇ ಬಂಡವಾಳವಾಗಿಸಿ ಹಣ ಮಾಡುವುದೇ ಈಗಿನ ದಿನಮಾನದ ಮಹಿಮೆ. ಧರ್ಮ ಮತ್ತು ದೇವರೇ ಆಟ, ಕೂಟದ ವಸ್ತುವಾಗಿರುವಾಗ ಆಟವೇ ಧರ್ಮವಾಗುವ, ಆಟಗಾರನೇ ದೇವರಾಗುವ ವಿದ್ಯಮಾನಗಳು ಕಾರ್ಪೋರೇಟ್ ಕೃಪಾಪೋಷಿತ ಉತ್ಪನ್ನ ಮತ್ತು ಉಪ ಉತ್ಪನ್ನ.
 
ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ೧೯೦೦ರ ಅಸುಪಾಸಿನಲ್ಲಿ ಬ್ರಿಟೀಷರು ಮತ್ತು ರಾಜ ಮಹಾರಾಜರು ದೇಶದಲ್ಲಿ ಕ್ರಿಕೆಟ್ಟು ಸಸಿಯನ್ನು ನೆಟ್ಟು ನೀರೆರುದು ಪೋಷಿಸಿದ್ದರು. ೧೯೮೩ರಲ್ಲಿ ಭಾರತ ವಿಶ್ವಕಪ್ ಗೆದ್ದಿತ್ತು, ದೇಶಕ್ಕೆ ಕ್ರಿಕೆಟ್ ಹುಚ್ಚು ಹಿಡಿಯಿತು. ಮತ್ತೆ ೨೦೦೦ದ ಹೊತ್ತಿಗೆ ಆಧುನಿಕ ಬ್ರಿಟೀಷರು, ವಸಾಹತುಶಾಹಿಗಳ ರೂಪ ತಾಳಿ ಬಂಡವಾಳಶಾಹಿಗಳಾಗಿ ಕ್ರಿಕೆಟ್ ಫಲ ತಿನ್ನಲು ಪ್ರಾರಂಭಿಸಿದ್ದರು. ದೇಶದ ಪ್ರಜಾಪ್ರಭುತ್ವದ ದೊರೆಗಳೇ ಗೂಟ ರಕ್ಷಕರಾದರು.


ದೇಶವ್ಯಾಪಿ ಕ್ರಿಕೆಟ್ ಪ್ರೀತಿ ಬೆಳೆಯಲು ಆಕಾಶವಾಣಿ ಮತ್ತು ದೂರದರ್ಶನ ವಹಿಸಿದ್ದ ಪಾತ್ರ ಅನನ್ಯ. ಈ ಶೃವ್ಯ ಮತ್ತು ದೃಶ್ಯ ಮಾಧ್ಯಮ ಇರದಿದ್ದರೆ ಕ್ರಿಕೆಟ್ ಇಂದು ಚಿನ್ನದ ಮೊಟ್ಟೆ ಇಡುವ ’ಡಕ್’ ಆಗುತ್ತಿರಲಿಲ್ಲ.

ದೇಶದ ಲಕ್ಷಾಂತರ ಹಳ್ಳಿಗಳಿಗೆ ಕ್ರಿಕೆಟ್ ತಲುಪಿಸಿದ ಹೆಗ್ಗಳಿಕೆ ದೂರದರ್ಶನದ್ದು. ದೂರದರ್ಶನದಲ್ಲಿ ಕ್ರಿಕೆಟ್ ಪ್ರಸಾರ ಇರದಿದ್ದರೆ ಇವತ್ತು ಕ್ರಿಕೆಟ್ ಪ್ರಸಾರಕ್ಕಾಗಿ ಸ್ಟಾರ್, ಇಎಸ್ಪಿಎನ್, ಟೆನ್ ಸ್ಪೋರ್ಟ್ಸ್, ಸೋನಿ ಮುಂತಾದ ವಾಹಿನಿಗಳು ಪೈಪೋಟಿ ನಡೆಸುವ ಪ್ರಸಂಗವೇ ಬರುತ್ತಿರಲಿಲ್ಲ. ಆದರೆ ಇಂದು ಕ್ರಿಕೆಟ್ ಗೆ ದೂರದರ್ಶನವೇ ಪರಿತ್ಯಕ್ತ. ಕ್ರಿಕೆಟ್ ಶಿಶುವನ್ನು ಪೋಷಿಸಿ ಬೆಳೆಸಿದ್ದ ದೂರದರ್ಶನಕ್ಕೆ ಇಂದು ತುಂಬು ಜವ್ವನದ ಕ್ರಿಕೆಟ್ ನ  ಆಶ್ರಯವಿಲ್ಲ. ಕ್ರಿಕೆಟ್ ಗೆ, ದೂರದರ್ಶನ ಈ ಕಾಲದ ತಂದೆ ತಾಯಿಗಳಂತೆ!

೧೯೯೦ರ ದಶಕದಲ್ಲಿ, ಈ ಶತಮಾನದ ಮೊದಲ ದಶಕದ ಆರಂಭದ ವರ್ಷಗಳಲ್ಲಿ ಅಥವಾ ಡಿಟಿಎಚ್ ಯುಗ ಆರಂಭವಾಗುವ ಮೊದಲು ದೂರದರ್ಶನವೇ ಕ್ರಿಕೆಟ್ ರಸದೌತಣ ನೀಡುತ್ತಿದ್ದದ್ದು. ಊರಲ್ಲಿ ಟಿವಿ ಇದ್ದ ಮನೆಗೆ ಮ್ಯಾಚ್ ನೋಡಲಿಕ್ಕಾಗಿ ಮೈಲಿಗಟ್ಟಳೆ ನಡೆಯುತ್ತಿದ್ದರು. ಹಗಲು-ಇರುಳ ಪಂದ್ಯವಾದರೆ ಆ ಕತ್ತಲಲ್ಲೆ ಮತ್ತೆ ನಡೆದು ಮನೆ ಸೇರುತ್ತಿದ್ದರು. ಅಲ್ಲೋ ಹತ್ತಾರು ಜನ ನೆರೆದು, ಕೂರಲು ಜಾಗವಿಲ್ಲದೆ, ನಿಂತುಕೊಂಡೇ ಕ್ರಿಕೆಟ್ ವೀಕ್ಷಣೆ. ವಿದ್ಯುತ್ ಕೈ ಕೊಡುವುದು ಹಿಡಿಶಾಪ ಹಾಕುವುದು ಎಲ್ಲವೂ  ಮಾಮೂಲಿ. ಆಟವೊಂದನ್ನು ಎಷ್ಟು ಪ್ರೀತಿಸಬೇಕೋ ಅದಕ್ಕಿಂತ ಹೆಚ್ಚು, ಐ ಮೀನ್... ತಮ್ಮ ಮನೆಯವರನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚು ಆಟವೊಂದನ್ನು ಪ್ರೀತಿಸಿದ್ದರು ಭಾರತೀಯರು. ದೇವರಿಗಿಂತಲೂ ಹೆಚ್ಚು ಆಟಗಾರರನ್ನು ಆರಾಧಿಸಿದ್ದರು ನಮ್ಮ ಜನ.

ಕಪ್ಪು ಮೋಡ ಮಳೆ ಸುರಿಸುತ್ತೇ ಎಂಬುದಕ್ಕಿಂತ ದೊಡ್ಡದಿತ್ತು ದ್ರಾವಿಡ್ ಪಂದ್ಯವನ್ನು ಉಳಿಸುತ್ತಾನೆ ಎಂಬ ನಿರೀಕ್ಷೆ! ತಾನು ಮೂವತ್ತೈದು ಅಂಕ ಪಡೆದು ಪಾಸ್ ಆಗುವುದಕ್ಕಿಂತ ಸಚಿನ್ ೧೦೦ ಬಾರಿಸಿಯೇ ಬಾರಿಸುತ್ತಾನೆ ಎಂಬ ವಿಶ್ವಾಸವೇ ಗಟ್ಟಿ! ಗಂಗೂಲಿ ಬೀಡು ಬೀಸಾದ ಹೊಡೆತಗಳ ಮುಂದೆ ಹಟ್ಟಿ ಸೇರದ ದನ ಕರುಗಳ ನೆನಪೇ ಇಲ್ಲ! ಕುಂಬ್ಳೆ ಸ್ಪೀನ್ ಮೋಡಿಗೆ ಮರುಳಾಗಿ ದಿನದ ಸಂಜೆಯ ಸಾರಾಯಿಯ ನೆನಪೇ ಮಾಯ!

ಆದರೆ ಇಂದಿನ ಕ್ರಿಕೆಟ್ ಅಧಿಪತಿಗಳಿಗೆ ಈ ಅಭಿಮಾನಿಗಳ ನೆನಪೇ ಇಲ್ಲ. ಅವರಿಗೆ ಅಮಿತಾಬ್, ಶಾರೂಖ್, ಪ್ರೀತಿ, ಶಿಲ್ಪಾ, ಅಂಬಾನಿ, ಮಲ್ಯ ಮುಂತಾದ ತಾರೆಗಳು ಮಾತ್ರ ಕ್ರಿಕೆಟ್ ಅಭಿಮಾನಿಗಳು! ಐಪಿಎಲ್ ತಂಡಗಳ ಮಾಲೀಕರಾಗುವ ಮೊದಲು ಅವರು ಒಂದೇ ಒಂದು ಕ್ರಿಕೆಟ್ ಪಂದ್ಯವನ್ನು ಪೂರ್ಣವಾಗಿ ನೋಡಿದ್ದರೋ ಇಲ್ಲವೋ. ನಿಮಿಷಕ್ಕಿಷ್ಟು ಹಣ ಎಂದು ಲೆಕ್ಕ ಹಾಕುವ ಜನರ ಮುಂದೆ, ಕೂಲಿ ತಪ್ಪಿದರೆ ಉಪವಾಸ, ಪರೀಕ್ಷೆ ಫೈಲ್ ಆದರೆ ವನವಾಸ ಎಂದು ಗೊತ್ತಿದ್ದರೂ ಕ್ರಿಕೆಟ್ನ್ನು ಹುಚ್ಚರಂತೆ ಪ್ರೇಮಿಸಿದ ಕ್ರಿಕೆಟ್ ಪ್ರೇಮಿಗಳು ಲೆಕ್ಕಕ್ಕಿಲ್ಲ. ನಿಜ ಪ್ರೇಮಿಗಳಿಗಿಂತಲೂ ಕಾಮಿಗಳಿಗೆ ಮಣೆ. ದುರ್ದೈವ!

೨೦೧೫ರ ವಿಶ್ವಕಪ್ ಪಂದ್ಯದ ಪ್ರಸಾರದ ಹಕ್ಕು ಸ್ಟಾರ್ ಸ್ಪೊರ್ಟ್ಸ್ನದ್ದು. ಆದರೆ ದೇಶದ ಆಸಕ್ತಿ ಇರುವ ಪಂದ್ಯಗಳನ್ನು ತಾನು ಪ್ರಸಾರ ಮಾಡುತ್ತೇನೆ ಎಂಬುದು ಪ್ರಸಾರ ಭಾರತಿಯ ವಾದ. ಡಿಟಿಎಚ್ ಯುಗದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಳ್ಳಿಗಳ ಮನೆಗೂ ಲಗ್ಗೆ ಇಟ್ಟಿದೆ. ಆದರೆ ಇಂದಿಗೂ ದೇಶದಲ್ಲಿ ಡಿಟಿಎಚ್ ಡಿಶ್ಗಳನ್ನು ಬಳಸದ ಮನೆಗಳ ಪ್ರಮಾಣವೂ ದೊಡ್ಡದಿದೆ. ಡಿಟಿಎಚ್ ಡಿಶ್ ಬಳಸಿದ್ದರೂ ಕೂಡ ಈ ಚಾನೆಲ್ ಗಳು ಉಚಿತವಾಗಿ ಸಿಗುತ್ತಿಲ್ಲ. ಅದಕ್ಕೆ ಒಂದಿಷ್ಟು ಹಣ ನೀಡಬೇಕು. ಕ್ರಿಕೆಟ್ ವೀಕ್ಷಣೆ ಮಧ್ಯಮ, ಶ್ರೀಮಂತ, ನಗರ, ಪಟ್ಟಣ, ಅರೆ ಪಟ್ಟಣಗಳಿಗಷ್ಟೇ ಸೀಮಿತವಾಗಿರಲಿ. ಕ್ರಿಕೆಟ್ ಅಭಿಮಾನಿಗಿಂತಲೂ, ಕ್ರಿಕೆಟ್ಗಿಂತಲೂ ಪ್ರಸಾರದ ಹಕ್ಕು ಪಡೆದವರು ಸಮೃದ್ಧಿ ಹೊಂದಿರಲಿ!

ಕ್ರಿಕೆಟ್ ನೋಡದಿದ್ದರೆ ದೇಶ ದಿಕ್ಕೆಟ್ಟು ಹೋಗುವುದಿಲ್ಲ! ಆದರೆ ಬಡ, ಗಾಮೀಣ ಭಾರತೀಯನನ್ನು ಕ್ರಿಕೆಟ್ ವೀಕ್ಷಣೆಯಿಂದ ವಂಚಿತರಾಗಿಸುವ ಪ್ರಯತ್ನಕ್ಕಿಂತಲೂ ಆಘಾತಕಾರಿಯಾದ ಸಂಗತಿ ಇನ್ನೊಂದಿದೆ.

ದೂರದರ್ಶನಕ್ಕೆ ವಿಶ್ವಕಪ್ನ ಭಾರತ ಆಡುವ ಪಂದ್ಯಗಳ ನೇರ ಪ್ರಸಾರ ನಡೆಸಲು ಅವಕಾಶ ನೀಡಬಾರದು ಎಂಬ ಮಾಧ್ಯಮ ಹಕ್ಕು ಪಡೆದವರ ನಿಲುವನ್ನು ಸಮರ್ಥಿಸಿಕೊಂಡವರು ಕಪಿಲ್ ಸಿಬಲ್, ಪಿ. ಚಿದಂಬರಂ, ಸಲ್ಮಾನ್ ಖುರ್ಷಿದ್ ಮತ್ತು ಅಭಿಷೇಕ್ ಮನು ಸಿಂಘ್ವಿ. ಈ ಹಿಂದಿನ ಕೇಂದ್ರ ಸರ್ಕಾರದಲ್ಲಿ ಕ್ರಮವಾಗಿ ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ, ಗೃಹ ಮತ್ತು ಹಣಕಾಸು, ವಿದೇಶಾಂಗ, ಕಾನೂನು, ಮಾಹಿತಿ ಮತ್ತು ಪ್ರಸಾರದಂತಹ ಅತ್ಯಂತ ಪ್ರಮುಖ ಖಾತೆಗಳನ್ನು ಹೊಂದಿದ್ದ ಮಂತ್ರಿಗಳು.

ವಕೀಲರಿಗೆ ಕೇಸ್ ಮುಖ್ಯ. ಅವರು ಯಾವ ಕೇಸ್ ತೆಗೆದುಕೊಂಡಿದ್ದಾರೆ ಎಂಬ ಆಧಾರದಲ್ಲಿ ಅವರನ್ನು ಅಳೆಯಲಾಗದು. ಚಿಕಿತ್ಸೆಗಾಗಿ ಬಂದ ಶತ್ರುವಿಗೂ ಔಷಧಿ ನೀಡಬೇಕು ಎಂಬ ವೈದ್ಯರ ಸೂತ್ರದಂತೆಯೇ ತನ್ನನ್ನು ಸಂಪರ್ಕಿಸಿದ ಯಾವುದೆ ವ್ಯಕ್ತಿಗೆ ಕಾನೂನಿನ ನೆರವು ನೀಡುವುದು ವಕೀಲರ ಕರ್ತವ್ಯ. ಆದರೆ ದೂರದರ್ಶನದಲ್ಲಿ ಕ್ರಿಕೆಟ್ ಪ್ರಸಾರ ನಡೆಸಬಾರದು ಎಂದು ವಾದಿಸುತ್ತಿರುವ ವಕೀಲರು (ಸಿಂಘ್ವಿ ಹೊರತು ಪಡಿಸಿ) ಕೇವಲ ೧೦ ತಿಂಗಳ ಹಿಂದೆ ಅಧಿಕಾರ ಕಳೆದುಕೊಂಡ ಸರ್ಕಾರದ ಆಧಾರ ಸ್ತಂಭವಾಗಿದ್ದರು ಎಂದು ಹೊಳೆದಂತೆ ಮನಸ್ಸು ಕುಸಿಯುತ್ತದೆ.

ದೇಶದ ಲಕ್ಷಾಂತರ ಜನರಿಗೆ ಸಿಗಬೇಕಾದ ಸವಲತ್ತಿಗೆ ಕುತ್ತು ತರಲು ಹೊರಟಿದ್ದಾರೆ ಈ ಮಹಾಶಯರು. ಒಂದು ಉದ್ಯಮ ಸಂಸ್ಥೆಗೆ ಆಗುವ ನಷ್ಟವೇ ಈ ಮಾಜಿ ಮಂತ್ರಿಗಳಿಗೆ ಮುಖ್ಯ. ವಾಣಿಜ್ಯ ಒಪ್ಪಂದದ ವ್ಯಾಜ್ಯದ ಮುಂದೆ ಗ್ರಾಮ ಭಾರತದ ನೋವು ನಲಿವುಗಳು ನಗಣ್ಯ. ವಾಣಿಜ್ಯ ಕಾಯ್ದೆಯ ರಕ್ಷಣೆಯಲ್ಲಿ ದೇಶದ ಸಂವಿಧಾನದ ಆಶಯಕ್ಕೆ ಭಂಗವಾದರೂ ಪರವಾಗಿಲ್ಲ ಎಂಬ ನಿಲುವು ಕಾನೂನು ರಂಗದ ಅತಿರಥರದ್ದು. ಮಾಜಿ ಮಂತ್ರಿಗಳದ್ದು. ಇನ್ನು ಗ್ರಾಮ ಭಾರತವನ್ನು ಸ್ಪರ್ಶಿಸುವ ಸಂವೇದನೆ ಇವರಿಗೆ ಇದ್ದಿರಲು ಸಾಧ್ಯವೇ? ಇಂದು ಸ್ಟಾರ್ ನ ‘ಸ್ಟಾರ್’ ರಕ್ಷಣೆಗೆ ಕಂಕಣ ತೊಟ್ಟಿರುವಾಗ ಅಂದು ಒಡಿಸ್ಸಾದ ಆದಿವಾಸಿಗಳ ಆಕ್ರಂದನ ಇವರಿಗೆ ಕೇಳಿಸಿರಬಹುದೇ? ಆಲದ ಮರದಂತೆ ಪ್ರಶ್ನೆ ಬೆಳೆಯುತ್ತಿದೆ.

ಚೆಂಡು ವಿಕೆಟ್ ಗೆ ಬಡಿದಂತೆ ಈಗ ಲೈಟ್ ಪ್ರಕಾಶಿಸುತ್ತಿದೆ. ಆಧುನಿಕತೆ ಮೆರೆಯುತ್ತಿದೆ. ಆದರೆ ಕ್ರಿಕೆಟ್ ನಲ್ಲಿದ್ದ ಲೈಟ್ ನಿಧಾನವಾಗಿ ಮಂಕಾಗುತ್ತಿದೆ. ನೈಜ ಕ್ರಿಕೆಟ್ ಪ್ರೇಮ ಮರೆಯಾಗುತ್ತಿದೆ. ಕಾಪೋರೇಟ್ ಗಳ ರೇಟ್ ಮುಂದೆ ಹಾರ್ಟ್ ಬೀಟ್ ಗಳ ವಿಕೆಟ್ ಉರುಳುತ್ತಿದೆ.

ಕ್ರೀಡೆ ಬೇರೆಯಲ್ಲ, ವ್ಯವಸ್ಥೆ ಬೇರೆಯಲ್ಲ. ಪೌರೋಹಿತ್ಯರು ಮಾತ್ರ ಅವರೇ! ಐ ಮೀನ್ ಸಿಬಲ್, ಚಿದು, ಸಿಂಘ್ವಿ, ಖುರ್ಷಿದ್, ಟ್ಲಿ, ಶಾ, ಠಾಕೂರ್, ಪವಾರ್, ಶುಕ್ಲಾ ... ಇತಿಹಾಸ ಮರಳುತ್ತದೆ, ಹೆಸರು ಬದಲಾಗಬಹುದು. ಕೊಹ್ಲಿಯನ್ನು ಇಂದಿನ ಸಚಿನ್ ಅಂದ ಹಾಗೆ, ರಹಾನೆಯನ್ನು ದ್ರಾವಿಡ್ ಅಂದ ಹಾಗೆ, ಪಠಾಣ್, ಕಪಿಲ್ ದೇವ್ ಆದಂತೆ. ಸಚಿನ್  ನನ್ನು ಗವಾಸ್ಕರ್ ಅಂದಂತೆ...

ಅದೇ ರನೌಟ್, ಬೌಲ್ಡ್, ಕ್ಯಾಚ್ ಗಳು ನಿಯಮ ಬದಲಾದಂತೆ ಕಾಣುವುದಿಲ್ಲ. ಆದರೆ ಚೆಂಡು, ಫಿಲ್ಡರ್, ಬೌಂಡರಿಗಳು ಲಾಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ... ಅರುಣಾಚಲ ಪ್ರದೇಶದ ಗುಡ್ಡದ ಮೇಲೆ, ಉಡುಪಿಯ ಕಾಡೊಳಗೆ ಇರುವಾತ ಕ್ರಿಕೆಟ್ ನೋಡದಿದ್ದರೆ ಏನಂತೆ... ಅಂಬಾನಿ, ಶ್ರೀನಿವಾಸನ್, ಮಲ್ಯರು ಕೋಟಿ ಸುರಿದು, ಕೋಟಿ ಕೋಟಿ ದೋಚಿದರೆ ಸಾಕಂತೆ!