Tuesday, September 6, 2011
ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... !
ಇವತ್ತು ಎಲ್ಲಿಂದ ರಿಕ್ಷಾ ಹತ್ತೋದು... ನಮ್ಮೂರಿನ ರಿಕ್ಷಾಕ್ಕೂ ಇಲ್ಲಿನ ರಿಕ್ಷಾಕ್ಕೂ ತುಂಬಾ ವ್ಯತ್ಯಾಸವಿದೆ. ನಮ್ಮೂರಲ್ಲಿ ಜೀಪಲ್ಲಿ ೧೦ ರಿಂದ ೧೫ ಜನ ಕೂತರೆ ಇಲ್ಲಿ ರಿಕ್ಷಾದಲ್ಲೇ ೧೫ ಜನ ಆರಾಮವಾಗಿ ಕೂತುಕೊಳ್ಳುತ್ತಾರೆ... ಇಲ್ಲಿಗೂ ಜೀಪ್ ಬಂದಿದ್ರೆ ಒಳ್ಳೇದಿತ್ತಲ್ಲ... ಹುಂ ಆದ್ರೆ ಇದು ಮೈದಾನ ಪ್ರದೇಶ... ಸಮತಟ್ಟಾದ ನೆಲ... ನಮ್ಮೂರು ಹೀಗೆ ಸಮತಟ್ಟಾದ ನೆಲವಲ್ಲ... ಇಲ್ಲೇ ಮಹಾಭಾರತ ನಡೆದದ್ದು... ಇಲ್ಲಿಗೆ ಕೃಷ್ಣ ಬಂದಿದ್ನಾ... ಯಾವ ರಿಕ್ಷಾ ಹತ್ತೋದು... ಇವತ್ತು ಸಂಜೆ ಕೂದಲು ತೆಗಿಬೇಕು... ಮುಂದೆ ಹೋಗಿ ಹತ್ತೋದ ಅಥವಾ ಇಲ್ಲೆ... ನೋಡುವ... ಇದೇ ರಿಕ್ಷಾ... ಅವನೇ ನಿಲ್ಲಿಸಿದ... ಸೈಡ್ಗೆ ಕೂರೋಕ್ಕೆ ಇವನು ಬಿಡ್ತಾ ಇಲ್ವೇ... ತೊಂದ್ರೆಯಿಲ್ಲ... ನಡುವಲ್ಲೇ ಕೂರೋಣ... ಹುಂ.. ಐದು ನಿಮಿಷ ಕೂರುವ ಸೀಟಿಗೆ ನಮ್ಮದು ಇಷ್ಟು ತಾಕಲಾಟ... ಹಾಗಾದ್ರೆ ನಾವು ರಾಜಕೀಯದವರಿಗೆ ಬೈಯ್ಯೋದು... ಇವನು ಎಡೆಯಲ್ಲಿ ಇಳಿತಾನೋ ಏನೋ... ಈ ನೋಯ್ಡಾ ಪ್ಲ್ಯಾನ್ಡ್ ಸಿಟಿ ಅಂತಾರೆ... ಆದರೂ ಇಲ್ಲಿ ಒಂದು ಕಡೆಯೂ ಚರಂಡಿ ಇಲ್ಲ.. ಮಳೆ ಬಂದಾಗ ರಂಬಾರೊಟ್ಟಿ ಆಗುತ್ತೆ... ಲಾಸ್ಟ್ ಟೈಮ್ ಆಗಿತ್ತು... ಹುಂ ಇಲ್ಲಿ ಅದೇ ಭಾರಿ ಮಳೆಯಂತೆ... ನನಗೆ ಅದು ಒಂದು ಚಮಚಾದಷ್ಟು ಮಳೆ ಅನಿಸಿತ್ತಲ್ಲಾ.... ಅದು ಬೇರೆ... ಇದು ಬೇರೆ... ನಮ್ಮೂರಿನ ರೀತಿಯೇ ಇಲ್ಲೂ ಇರೋದಾದ್ರೆ... ಇದನ್ನು ನೋಯ್ಡಾ ಎಂದು ಏಕೆ ಕರಿಬೇಕು? ಆದ್ರೂ ಇಲ್ಲಿ ಮಾರ್ಗದ ಬದಿಯೆಲ್ಲ ಗಿಡ ನೆಟ್ಟಿದ್ದಾರೆ... ಕೆಲ ಗಿಡಗಳು ಮರ ಆಗಿವೆ... ಸುಮಾರು ೪ ವರ್ಷದ ಹಿಂದೆ ನೆಟ್ಟಿರಬೇಕು... ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಲ್ಲಿ ಮರ ಕಡಿಯುತ್ತಾರೆ... ಇಲ್ಲಿ ಗಿಡ ನೆಟ್ಟಿದ್ದಾರೆ.... ಒಂದು ಹಳೆ ನಗರವನ್ನು ಯೋಜಿತವಾಗಿ ಅಭಿವೃದ್ಧಿ ಮಾಡೋದು ಕಷ್ಟ... ಆದೇ ಹೊಸ ನಗರ ಕಟ್ಟೋದು ಎಷ್ಟು ಸುಲಭ... ಹುಂ... ಮಾಯಾವತಿ ನಿಜಕ್ಕೂ ಗ್ರೇಟ್... ತನ್ನ ಮೂರ್ತಿ ಹಾಕಲಾದರೂ ಚಂದ ಚಂದದ ಗಾರ್ಡನ್ ಮಾಡ್ತಾಳೆ... ನಮ್ಮ ಆಫೀಸ್ ಪಕ್ಕದ ಗಾರ್ಡನ್ ಎಷ್ಟು ಚಂದ ಇದೆ... ಅಲ್ಲಿ ಸೂರ್ಯ ಮುಳುಗೋದು ನೋಡೋದು ಎಷ್ಟು ಚಂದ... ಹೌದು... ನಾನು ಯೋಚನೆ ಮಾಡೋದು ಯಾವ ಭಾಷೆಯಲ್ಲಿ ಕನ್ನಡದಲ್ಲಾ... ಅಲ್ಲಾ ತುಳುವಿನಲ್ಲ... ಎರಡರಲ್ಲೂ ಮಾಡುತ್ತೇನೆ... ಇಲ್ಲ... ನನಗೆ ಹಾಗಾದ್ರೆ ಎರಡು ಮಾತೃಭಾಷೆ... ತಾಯಿ ಎಷ್ಟು ಬೇಕಾದರೂ ಇರಲಿ... ತುಂಬ ಇದ್ರೆ ತುಂಬಾ ಒಳ್ಳೆಯದು... ಆದ್ರೆ... ತಂದೆ ಒಬ್ಬನೇ ಇರಬೇಕು... ನನಗೆ ಯಾರದರೂ ಇವನು ನನ್ನ ಮಗನ ಸಮಾನ ಅಂದಾಗ ಎಷ್ಟು ಕೋಪ ಬರುತ್ತೆ... ಹಾಗೇ ಹೇಳುವವರು ಹೆಚ್ಚಾಗಿ ದೊಡ್ಡ ಲೋಫರ್ಗಳಾಗಿರುತ್ತಾರೆ... ಅದೇ ಅವತ್ತು ಕೃಷ್ಣಪ್ಪಣ್ಣ ಆಂದಾಗ ಎದ್ದು ಜಾಡಿಸಿ ಒದೆಯುವಷ್ಟು ಕೋಪ ಬಂದು ಸರಿ ಬೈಯ್ದಿದ್ದೆ... ನಾನು ಬೈಯ್ಯೋದು ಕಡಿಮೆ... ಆದ್ರೂ ಅವತ್ತು ಅಷ್ಟೂ.... ಇನ್ನೂ ಕೆಲ ಹುಡುಗೀರೂ ಅಣ್ಣಾ ಎಂದು ಕರೆಯುತ್ತಾರೆ.... ಅವರು ನನಗೆ ಯಾವತ್ತೂ ತಂಗಿಯರ ರೀತಿ ಕಂಡಿಲ್ಲ... ಇನ್ನೂ ನಾನು ಕೂಡ ಅವರಿಗೆ ಅಣ್ಣನ ರೀತಿಯಿಲ್ಲ ಅನ್ನೋದು ಗೊತ್ತು... ಆದ್ರೂ ನಾಟ್ಕ ಮಾಡುತ್ತಾರೆ...ಬದ್ಮಾಶ್ಗಳು... ನಾನು ಸಂಬಂಧಿಕರನ್ನು ಬಿಟ್ಟು ಬೇರೆ ಯಾರನ್ನೂ ಸಂಬಂಧದ ಹೆಸರಲ್ಲಿ ಕರೆದಿಲ್ಲ... ನಾನು ಅಕ್ಕ ಎಂದು ಕರೆದದ್ದು ಸಂಧ್ಯಾ, ರಶ್ಮಿ, ವಿದ್ಯಾ ಮತ್ತು ಪ್ರಸೀನಾರನ್ನು ಮಾತ್ರ... ಹೌದು... ಆ ಟೈಮ್ ನಿಜಕ್ಕೂ ನನ್ನ ಸುವರ್ಣ ಯುಗ... ನಂ ಬಸ್... ಈ ರಿಕ್ಷಾದಲ್ಲಿ ಮಳೆಯನ್ನು ಎನ್ಜಾಯ್ ಮಾಡೋಕ್ಕೂ ಆಗೋದಿಲ್ಲ... ಅದೇ ನಮ್ಮೂರಲ್ಲಿ ಆ ಬಸ್ನಲ್ಲಿ... ಕಿಟಕಿ ಬಾಗಿಲು ತೆರೆದು ಅದು ಎಂತಹ ಮಳೆ ಬಂದ್ರೂ... ಹನಿ ಹನಿ ನೀರು ಮುಖಕ್ಕೆ ಬಡಿಯುತ್ತಿದ್ದದ್ದು... ಆಗಲೇ ತಾನೇ ನನಗೂ ಅವಳಿಗೂ ಶುರುವಾಗಿದ್ದು... ನಮ್ಮೂರಿನ ಮಳೆಗೆ ಏನೋ ಚೆಲುವಿದೆ.... ಈ ಬಸ್ನಿಂದಾಗಿ ನನ್ನರೆಡು ಶರ್ಟ್ ಬಿಸಾಕುವ ಹಾಗೇ ಅಗಲಿಲ್ವಾ... ಆಯಿಲ್... ಹುಂ... ಆದೂ ಬ್ರ್ಯಾಂಡೆಡ್... ನನ್ನ ಮಾವನಿಗೆ ಬ್ರ್ಯಾಂಡೆಡ್ ಡ್ರೆಸ್ ಆಗಬೇಕು... ಇಲ್ಲ ಅಂದ್ರೆ ಬಿಸಾಕುತ್ತಾರೆ... ನಾನು ಸಧ್ಯ ಬ್ರ್ಯಾಂಡೇಡ್ ಡ್ರೆಸ್ ತೆಗೆದುಕೊಂಡಿಲ್ಲ... ಇನ್ನೂ ತೆಗೆದುಕೊಳ್ಳುವುದಾದರೆ ಬ್ರ್ಯಾಂಡೇಡ್ ತಗೋಬೇಕು...ಹೋ ಅವಳು ಚಂದ ಇದ್ದಾಳೆ... ನಮ್ಮ ಗಾಡಿಯೇ ಹತ್ತುತ್ತಾಳೆ... ನನ್ನ ಪಕ್ಕನೇ ಕೂ... ನೋಡು ಹುಡುಗಿಗೇ ಹೇಗೆ ಜಾಗ ಮಾಡಿಕೊಟ್ಟ... ಲೋಫರ್... ಅವಳನ್ನು ಮಧ್ಯ ಕೂರಿಸಿರುತ್ತಿದ್ದರೆ ಅವನಿಗೆ ಏನಾಗುತ್ತಿತ್ತು.... ಅವಳೇನೋ ರೆಡಿ ಇದ್ದಳು... ಇವನೇ ಮಂಗ... ಈ ಹುಡುಗೀರ ನೆರಳು ಕಂಡ್ರೇ ಸಾಕು ಹುಡುಗರು ಸ್ವಾರ್ಥಿಗಳಾಗುತ್ತಾರೆ... ಇವರ ಜನ್ಮಕ್ಕಿಷ್ಟು... ಹೊಸದು ಗಾಗಲ್ ತಗೋಬೇಕು... ಏನಿವತ್ತು ರಾಮಕೃಷ್ಣ ಮೆಸೆಜ್ ಮಾಡಿಲ್ಲ.... ಹೆಚ್ಚಾಗಿ ಆತ ಬೆಳಿಗ್ಗೆ ೬ ಗಂಟೆಗೆ ಮೆಸೆಜ್ ಮಾಡೋನು... ಏನೋ ಬ್ಯುಸಿ ಇರಬೇಕು... ಹುಂ... ಎಲ್ಲರೂ ಬ್ಯುಸಿ ಆಗುತ್ತಿದ್ದಾರೆ... ಆದ್ರೆ ನಾನು.... ಇಲ್ಲ, ಯಾರೂ ಬ್ಯುಸಿ ಆಗೋದಿಲ್ಲ... ಬ್ಯುಸಿ ಆಗೀರೋರ್ ತರ ತೋರಿಸಿಕೊಳ್ಳುತ್ತಾರೆ... ನಾನು ಮೆಸೇಸ್ ಮಾಡೋದು ಕಡಿಮೆ ಆಗಿದೆ... ಅದು ನಾನು ಬ್ಯುಸಿ ಅಂತೇನು ಅಲ್ಲ... ನಾನು ಅದೇಷ್ಟು ಬ್ಯುಸಿ ಇದ್ದರು ಪ್ರೀತಿ ಇರೋರಿಗೆ ಮೆಸೆಜ್ ಮಾಡಿಯೇ ಮಾಡುತ್ತೇನೆ.... ಬೇಕಾದ್ರೆ ನನ್ನ ಪ್ರೀತಿ ಕಡಿಮೆ ಆಗಿದೆ ಅಂದ್ರೆ ಒಪ್ಪಿಕೊಳ್ಳುತ್ತೇನೆ... ಆದ್ರೆ ಕೊಡಲು ಸಮಯವಿಲ್ಲ... ಬ್ಯುಸಿ ಅನ್ನೋ ಕಾರಣ ನಾ ಕೊಡೋದೆ ಇಲ್ಲ... ಜಸ್ಟ್ ಲವ್ ಮ್ಯಾಟರ್ಸ್ ಡೀಯರ್ಸ್... ಅಲ್ಲ ಈ ಮನುಷ್ಯರಿಗೆ ಪ್ರೀತಿ, ಗೆಳೆತನ ಮತ್ತು ಗಂಡ ಹೆಂಡ್ತಿ ಸಂಬಂಧಕ್ಕಿರುವ ವ್ಯತ್ಯಾಸವೇ ಗೊತ್ತಿಲ್ಲ... ಒಬ್ಳು ಒಳ್ಳೆ ಫ್ರೇಂಡ್ ಅಂದರೆ ಅವಳನ್ನೇ ಲವರ್ ಅಂತ ಅಂದ್ಕೋತಾರೆ ಅನಂತರ ಮದುವೆ ಆಗ್ಬೇಕು ಅಂತ ಬಯಸ್ತಾರೆ... ಕೆಲವರು ಆಗುತ್ತಾರೆ ಕೂಡ... ಅದು ಹೇಗೆ ಸಾಧ್ಯ... ಫ್ರೇಂಡ್, ಲವರ್ ಮತ್ತು ಹೆಂಡ್ತಿ ಮಧ್ಯೆ ವ್ಯತ್ಯಾಸವಿಲ್ವಾ...? A = B, B=C THERE FOR A=C ಆಗುವುದು ಮ್ಯಾತ್ಸ್ನಲ್ಲಿ ಮಾತ್ರ. ಭಾವನೆ, ಸಂಬಂಧಗಳ ವಿಷಯದಲ್ಲಿ ೨+ ೨=೪ ಅಂತ ಸ್ಪಷ್ಟವಾಗಿ ಕೈ ತೋರಿಸಿ ಹೇಳಲಿಕ್ಕಾಗುತ್ತಾ? ಆದರೂ ಈ ಜನಗಳು ಸಂಬಂಧಗಳನ್ನು ಕಲಸುಮೆಲೋಗರ ಮಾಡಿಕೊಂಡು ಕೊನೆಗೊಂದು ದಿನ ಪರಿತಪಿಸುತ್ತಿರುತ್ತಾರೆ... ಕರ್ಮದವರು.... ಗೆಳತಿ=ಹೆಂಡ್ತಿ .... ಎಂತಹ ಡೆಡ್ಲಿ ಕಾಂಬಿನೇಷನ್! ಈ ಕುಂಬ್ಳೆ ಬಗ್ಗೆ ನನಗೆ ಮೊದಲು ಗೌರವವಿತ್ತು... ಆದ್ರೆ ಈಗ ಎಲ್ಲ ಕಳ್ಕೊಂಡು ಬಿಟ್ಟ... ಸುಮ್ಮನಿದ್ದರೆ ಅವನ ಹುಳುಕುಗಳು ಅಲ್ಲಿಂದಲ್ಲಿಗೆ ಮುಚ್ಚಿ ಹೋಗುತ್ತಿತ್ತು... ಆದ್ರೆ ಬೇಡದಕ್ಕೆ ಕೈ ಹಾಕಲು ಹೋಗಿ ಅವನೇ ಬೇಡದವನು ಆಗುತ್ತಿದ್ದಾನೆ...ಕರ್ಮ ಕರಗುತ್ತಿದೆ ಕನಸಿನ ಬಣ್ಣ... ಈ ಸೆಟ್ನಲ್ಲಿ ತುಂಬ ಬೇಡದ ನಂಬರ್ ಸೇರಿಕೊಂಡಿವೆ... ಎಲ್ಲ ತೆಗಿಬೇಕು... ಆಗ ಒಂಚೂರು ಸುಲಭವಾಗುತ್ತೆ... ಮೊನ್ನೆಯಷ್ಟೆ ಒಂದಷ್ಟು ಹೆಸರನ್ನು ಡಿಲಿಟ್ ಮಾಡಿದ್ದೆ....ಹತ್ತಿರ ಹತ್ತಿರ ೯೦೦ ನಂಬರ್ಗಳಿದ್ದವು... ಇನ್ನೀಗ ಕೆಲವು ಇವೆ.... ಈ ಮನುಷ್ಯರ ಹಣೆ ಬರಹ ಗೊತ್ತಾಗುವುದು ಸಾವಿನಲ್ಲಿ... ಇದರಲ್ಲಿ ಈಗ ಏಳೆಂಟು ಅಕ್ಷತಾನವರ ನಂಬರ್ ಇದೆ... ನಾನು ರೆಗ್ಯುಲರ್ ಆಗಿ ಕಾಂಟ್ಯಾಕ್ಟ್ ಇಟ್ಟುಕೊಂಡಿರುವುದು ಇಬ್ಬರಲ್ಲಿ ಮಾತ್ರ... ಸೋ ಉಳಿದ ನಂಬರ್ಗಳು ಯಾಕೆ.... ಡಿಲೀಟ್ ಮಾಡೋದೆ.... ಹೌದು ಇಲ್ಲ ಅಂದರೆ ಕೆಲವು ಸಲ ತಪ್ಪಿ ಮೆಸೇಜ್ ಹೋಗುತ್ತೆ... ಆ ರೀತಿ ಆಗಬಾರದು... ಅಯ್ಯೋ ಇನ್ನು ಇಲ್ಲಿ ಇಳಿಬೇಕಾ.... ಹುಂ ನೆಕ್ಸ್ಟ್ ಎಲ್ಲಿ ರಿಕ್ಷಾ ಹತ್ತುವುದು... ಕ್ರಾಸ್ನಲ್ಲಿಯಾ ಅಥವಾ ಸ್ಟ್ಯಾಂಡ್ನಲ್ಲಿಯಾ... ನೋಡೋಣ.... ಅಲ್ಲಿಗೆ ಹೋಗಿ... ಹೋ ಕ್ರಾಸ್ನಲ್ಲೇ ರಿಕ್ಷಾ ರೆಡಿ ಇದೆ...
ನಾನು ಒಳ್ಳೆ ಹುಡುಗ ಎಂದು ಕರೆಸಿಕೊಂಡು ತಪ್ಪು ಮಾಡಿದೆ... ನಾನು ಎಷ್ಟೇ ಕೆಟ್ಟವನಾದರೂ ಕೂಡ ವರ್ಷಗಟ್ಟಳೆ ಶಿಕ್ಷೆ ಪಡೆಯುವ ಯಾವ ಕೆಲಸ ಕೂಡ ಮಾಡುತ್ತಿರಲಿಲ್ಲ... ಅದು ಗ್ಯಾರಂಟಿ... ಆದರೆ ಒಳ್ಳೆ ಹುಡುಗ ಎಂದು ಕರೆಸಿಕೊಂಡು ೪ ವರ್ಷಗಳ ಕಾಲ ಅದೇಷ್ಟು ಹಿಂಸೆ ಪಟ್ಟಿಲ್ಲ... ಆದರೂ ನಾನು ಅದರಿಂದ ತುಂಬ ಗಟ್ಟಿಯಾದೆ ಎಂದೆನಿಸುವುದಿಲ್ವಾ.... ಹುಂ ಗಟ್ಟಿಯೇನೋ ಆದೆ... ಆದರೆ ಕಳಕೊಂಡದ್ದು... ನಾನು ಆಪಾತ್ರರಿಗೆ ಒಂದು ಪೈಸೆಯೂ ಕೊಡಬಾರದು ಎಂದೆ ನಿರ್ಧರಿಸಿಕೊಂಡವನು... ಈಗ ಯಾವೊಂದು ಚಿಂತೆಯಿಲ್ಲದೆ... ಆಬ್ಬಾ ಆರಾಮ... ಹೇ... ಇದರರ್ಥ ನಾನು ಈ ಹಿಂದೆ ಚಿಂತೆ ಮಾಡುತ್ತಿದ್ದೆ ಅಂತ ಆಗುತ್ತಾ...? ಇಲ್ಲ ನನಗೆ ಸ್ಪಷ್ಟವಾಗಿ ಗೊತ್ತಿರುತ್ತೆ... ಯಾವ ಸಂಬಂಧ ಎಲ್ಲಿ ತನಕ ಅಂತ... ನಾನು ಪ್ರವಾದಿ ರೀತಿಯಲ್ಲಿ ಈ ೮ ತಿಂಗಳ ಹಿಂದೆಯೇ ಅವಳ ಜೊತೆ ಏಪ್ರಿಲ್ನಲ್ಲಿ ನಮ್ಮ ಸಂಬಂಧ ಮುರಿದು ಬೀಳುತ್ತೆ ಅಂತ ಹೇಳಿರಲಿಲ್ವಾ... ಹಾಗೆಯೇ ಆಯಿತಲ್ವಾ? ಈ ಕಾರಣಕ್ಕೆ ಮತ್ತು ಈ ಧೈರ್ಯದಿಂದಲೇ ಇರಬೇಕು ನಾನು ಸಿಕ್ಕಾಪಟ್ಟೆ ಫ್ಲರ್ಟ್ ಮಾಡುವುದು... ವೇದದ ಸಾಲಿರಬೇಕು... ಯಾವುದಕ್ಕೂ ಅಂಟಿಕೊಳ್ಳಬಾರದು... ಅಂಟಿಕೊಳ್ಳುವಿಕೆಯೇ ದುಃಖಕ್ಕೆ ಕಾರಣ ಅಂತ... ಅದನ್ನೇ ಶಿರಸಾ ವಹಿಸಿ ಪಾಲಿಸಿಕೊಂಡು ಬರುತ್ತಿದ್ದೇನೆ... ಇವತ್ತು ನನ್ನಿಂದ ಯಾರು ದೂರವಾದರೆ ನನಗೆ ನೋವಗಬಹುದು.... ಯಾರಿಲ್ಲ... ಆದರೆ ಎಲ್ಲರೂ ದೂರವಾದರೆ ಖಂಡಿತಾ ನೋವಾಗುತ್ತದೆ... ನನ್ನ ಪರ್ಯಾಯ ಮೂಲಗಳು ಗಟ್ಟಿಯಾಗಿವೆ... ಆದ್ದರಿಂದ ಡೊಂಟ್ ವರಿ... ಈಗ ಏನೇ ಆಗಲಿ ಹುಚ್ಚು ಹಿಡಿದವರ ರೀತಿ ಓದುತ್ತಿದ್ದೇನೆ... ಓದುವುದಂತೂ ನಾನು ತುಂಬ ಮಾಡುತ್ತಿದ್ದೇನೆ ಆದರೆ ಆಧ್ಯಯನ... ಇಲ್ಲವೇ ಇಲ್ಲ... ಇದು ಬದಲಾಗಬೇಕು... ಅಲ್ಲ ಹುಡುಗಿಯರ ಎಫ್ಬಿ ಸ್ಟೇಟಸ್ ಮೆಸೆಜ್, ಪೊಟೋಗಳಿಗೆ ಯಾಕೆ ಅಷ್ಟು ಕಾಮೆಂಟ್, ಲೈಕ್ಸ್ ಬರುತ್ತೆ... ಹುಂ ನಾನು ಆ ಮಟ್ಟಿಗೆ ಇಂದಿಗೂ ಪ್ರಾಮಾಣಿಕತೆ ಉಳಿಸಿಕೊಂಡಿದ್ದೇನೆ... ನನಗೆ ಖುಷಿ ಅದ್ರೆ ಮಾತ್ರ ಕಾಮೆಂಟ್ ಹಾಕುತ್ತೇನೆ... ಇಲ್ಲ ಅಂದ್ರೆ ಸುಮ್ಮನಿರುತ್ತೇನೆ... ಟೀಕೆ ಅಥವಾ ಸಲಹೆ ಯಾರಿಗೂ ಬೇಡ... ಅಲ್ಲ... ನಾವು ನಮ್ಮ ಅಭಿಪ್ರಾಯ ಅಥವಾ ಪೊಟೋ ವನ್ನು ೪ ಜನರ ಮುಂದೆ ಇಟ್ಟ ಮೇಲೆ ಪ್ರತಿಯೊಂದಕ್ಕೂ ನಾವು ಸಿದ್ಧರಿರಬೇಕು... ಅದು ಬಿಟ್ಟು ಎಲ್ಲರೂ ನಮ್ಮನ್ನು ಹೊಗಳಲೇ ಬೇಕು, ನಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಬಯಸುವುದು ಎಷ್ಟು ಸರಿ? ಅಂತವರು ಸೊಷಿಯಲ್ ನೆಟ್ವರ್ಕ್ಗಳಲ್ಲಿ ಏನನ್ನೂ ಅಪ್ಲೋಡ್ ಮಾಡುವ ಉಸಾಬರಿಗೆ ಹೋಗಬಾರದು... ನಾನ್ಸೆನ್ಸ್... ಈ ರಿಕ್ಷಾದವ ತುಂಬಾ ಫಾಸ್ಟ್ ಆಗಿ ಹೋಗುತ್ತಿದ್ದಾನೆ... ಆದರೆ ಒಳ್ಳೆ ಡ್ರೈವಿಂಗ್... ಹೋಯ್ ನಾವು ಇಳಿಯೋ ಪ್ಲೇಸ್ ಬಂತಲ್ಲ... ಚಿಲ್ಲರೇ ಕೈಯಲ್ಲೇ ಇದೆ..
Subscribe to:
Posts (Atom)