Saturday, February 20, 2010

ಮೂರ್ತಿಯೆಂಬ 'ನೆರಳು ಬೆಳಕ' ಸಾರಥಿ

"ಬಾಳು ಒಂದು ಬೆಳಕಿನಾಟ

ಆಸೆಯೊಂದು ಕತ್ತಲಾಟ

ಸಾಗಿದೆ ಇದರೊಡನೆ ಬೆಳಕು ಕತ್ತಲೋಟ..." ಇದು ಪ್ರಸಿದ್ಧ ಕವಿ ಸಾಲು. ಈ ಸಾಲ ನೂಲು ಹಿಡಿದು ಸಿನಿಮಾದತ್ತ ಇಣುಕಿದರೆ ಸಿನಿಮಾ ಮತ್ತೇನೂ ಅಲ್ಲ, ಅದೂ ನೆರಳು ಬೆಳಕಿನದ್ದೇ ಆಟ ಎಂಬುದು ನಮ್ಮ ಅನುಭವದ ತೆಕ್ಕೆಗೆ ಸಂದಿರುತ್ತದೆ.

ಬಾಳೆಂಬ ಸಿನಿಮಾದಲ್ಲಿ ಎಲ್ಲರೂ ಪಾತ್ರಧಾರಿಗಳೇ! ಸಿನಿಮಾವೆಂಬ ಬಾಳಲ್ಲಿ ಹಾಗಿಲ್ಲ! ಅಲ್ಲಿರೋದು ಕೆಲವೇ ಕೆಲವು ಪಾತ್ರಾಧಾರಿಗಳು. ಆ ಪಾತ್ರಗಳನ್ನು ಆಡಿಸಿ, ಬೀಳಿಸಿ ನೋಡೋ ಸೂತ್ರ(ಧಾರಿ)ಗಳ ಸಂಖ್ಯೆ ಹತ್ತಾರು. ಆ ಹತ್ತಾರು ಸೂತ್ರ(ಧಾರಿ)ಗಳನ್ನು ಒಟ್ಟಿಗೆ ಹೆಣೆದು ತನ್ನ ಆಣತಿಯಂತೆ ಕುಣಿಸುವವ ನಿರ್ದೇಶಕ. ಆದರೆ ನಿರ್ದೇಶಕನಿಗೆ ಎಲ್ಲವನ್ನೂ ತನಗೆ ಇಷ್ಟಬಂದ ಹಾಗೆ ಮಾಡಲಾಗುವುದಿಲ್ಲ. ಯಾಕೆಂದರೆ, ಅವನ ಇಷ್ಟ, ಕನಸು, ಚಿಂತನೆ, ಧೋರಣೆ ಹೀಗೆ ಅದೇನೇ ಹೇಳಿ ಅದು ಇರುವುದು ಅಮೂರ್ತ ರೂಪದಲ್ಲಿ. ಅದು ಜನರನ್ನು ತಲುಪಬೇಕಾದರೆ ಮೂರ್ತ ಆಥವಾ ಸಾಂಕೇತಿಕ ರೂಪ ಪಡೆಯಲೇಬೇಕು. ಅದಕ್ಕಾಗಿಯೇ ಅನೇಕ ತಂತ್ರಜ್ಞರು ಒಂದು ಸಿನಿಮಾ ರೂಪುಗೊಳ್ಳುವ ಪಕ್ರ್ರಿಯೆಯಲ್ಲಿ ಪಾಲುಪಡೆಯುತ್ತಾರೆ. ಅಂತಹ ತಂತ್ರಜ್ಞರಲ್ಲಿ ಅತ್ಯಂತ ಪ್ರಮುಖನಾದವನೇ ಸಿನಿಛಾಯಾಗ್ರಾಹಕ. ಅಂತಹ ಸಿನಿಛಾಯಾಗ್ರಾಹ(ಸಾಧ)ಕರಲ್ಲಿ ಭಾರತದ ಮಟ್ಟಿಗೆ ಮೇರು ಪ್ರತಿಭೆ ಎಂದು ಪರಿಗಣಿಸಬಹುದಾದ ವ್ಯಕ್ತಿ ೨೦೦೮ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ವಿ. ಕೆ. ಮೂರ್ತಿ!

ವಿ. ಕೆ. ಮೂರ್ತಿ ೧೯೨೩ರಲ್ಲಿ ಮೈಸೂರಿನಲ್ಲಿ ಜನಿಸಿ, ಚಿತ್ರ ನಗರಿ, ಮಾಯಾ ನಗರಿ ಮುಂಬೈಯಲ್ಲಿ ಕಾಗದದ ಹೂವು ಅರಳಿಸಿದವರು! ಹೌದು, ಮೂರ್ತಿಯವರ ಕಾಯಕ ಜೀವನ ನೆಲೆ ಕಂಡುಕೊಂಡದ್ದು ದೂರದ ಮುಂಬೈಯಲ್ಲಿ. ಅದರಲ್ಲೂ ಭಾರತದ ಚಲನಚಿತ್ರ ರಂಗ ಕಂಡ ಅದ್ವಿತೀಯ ನಿರ್ದೇಶಕ ಗುರುದತ್ತ್ರ ಜೊತೆಯಲ್ಲಿ.

ಒಳ್ಳೆಯ ನಿರ್ದೇಶಕ ಮತ್ತು ದಕ್ಷ ಸಿನಿಛಾಯಾಗ್ರಾಹಕರ ನಡುವೆ ಆದ್ಭುತವೆನಿಸುವ ಒಂದು ಕೆಮೆಸ್ಟ್ರಿ ಇರುತ್ತದೆ. ಅವರಿಬ್ಬರು ಒಂದು ರೀತಿಯಲ್ಲಿ ಆದರ್ಶ ಗಂಡಹೆಂಡತಿಯರಿದ್ದಂತೆ! ಉದಾಹರಣೆಗೆ ನಿರ್ದೇಶಕ ಸೆರ್ಗಿ ಐನ್ಸ್ಟೀನ್ ಮತ್ತು ಸಿನಿಮಾಟೊಗ್ರಾಫರ್ ಎಡ್ವರ್ಡ್ ಟಿಸ್, ಆರ್ಸನ್ ವೆಲ್ಸ್ ಮತ್ತು ಗ್ರೇಗ್ ಟೋಲೆಂಡ್, ಇಂಗ್ಮರ್ ಬರ್ಗ್ಮನ್ ಮತ್ತು ಸ್ಪೆನ್ ನಿಕ್ವಿಸ್ಟ್, ಸತ್ಯಜಿತ್ ರಾಯ್ ಮತ್ತು ಸುಬ್ರೊತೋ ಮಿತ್ರಾ ಹೀಗೇ. ಇಂತಹದ್ದೆ ಸಾಲಿಗೆ ಸೇರಿದ ಮತ್ತೊಂದು ಮೋಡಿ ಮಾಡಿದ ಜೋಡಿಯೆಂದರೆ ಅದು ಗುರುದತ್ತ್ ಮತ್ತು ವಿ. ಕೆ. ಮೂರ್ತಿಯದ್ದು.

ಯಾವ ಗುಟ್ಟನ್ನು ತೆರೆಯ ಮೇಲೆ ಹೇಳಬೇಕು, ಯಾವುದನ್ನು ಉಳಿಸಬೇಕು, ಎಲ್ಲಿ ಸಂಶಯ ಹುಟ್ಟಿಸಬೇಕು, ಎಲ್ಲಿ ಅದನ್ನು ಪರಿಹರಿಸಬೇಕು, ನಾವೀಗ ಏನನ್ನೂ ಹೇಳ್ತಾ ಇದ್ದೇವೆ, ಅದು ಯಾವ ಅರ್ಥ ನೀಡಬೇಕು, ಎಲ್ಲಿ, ಹೇಗೆ, ಎಷ್ಟು ಬೆಳಕಿರಲಿ ಅಥವಾ ನೆರಳಿರಲಿ ಹೀಗೆ ಇದ್ದರೆ ಅದು ಏನನ್ನು ಹೇಳುತ್ತದೆ, ಇದನ್ನೇ ಇನ್ನೊಂದು ರೀತಿಯಲ್ಲಿ ಹೇಗೆ ತೋರಿಸಬಹುದು ಯಾವುದು ಹೆಚ್ಚು ಪರಿಣಾಮಕಾರಿ ಹೀಗೆ ಎಲ್ಲವನ್ನು ಯೋಚಿಸಿ, ಚಿಂತಿಸಿ, ಮಥಿಸಿ ಅದನ್ನು ತನ್ನ ಕ್ಯಾಮೆರದಲ್ಲಿ ಸೆರೆ ಹಿಡಿದು, ನಿರ್ದೇಶಕನ ಆಶಯಗಳಿಗೆ ಚ್ಯುತಿ ತರದೆ ತೆರೆಯ ಮೇಲೆ ಮೆರೆಸುವುದು ಅಂದರೆ ಸಾಮಾನ್ಯ ಕೆಲಸವೇ? ಇಲ್ಲಿ ಕ್ಯಾಮೆರಾ ಮನುಷ್ಯನ ಕಣ್ಣಿನಂತೆ ಕೆಲಸ ಮಾಡಿದರೆ ಸಿನಿಛಾಯಾಗ್ರಾಹಕ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ, ಅದೂ ಎರಡು ಕಾಯಗಳದ್ದು! ಮೊದಲನೆಯದ್ದು ನಿರ್ದೇಶಕನದ್ದಾದರೆ ಎರಡನೇಯದ್ದು ಪ್ರೇಕ್ಷಕನದ್ದು.

ವಿ. ಕೆ ಮೂರ್ತಿಯವರಿಗೆ ಈ ಎರಡೂ ಕಲೆಗಳು ಸಿದ್ದಿಸಿತ್ತು. ಅದರಲ್ಲೂ ಗುರುದತ್ತ್ರ ಸಿನಿಮಾವೆಂದರೆ ಗುರುದತ್ತ್ರೇ ಇವರ ದೇಹ ಪ್ರವೇಶಿಸಿ ಕ್ಯಾಮೆರಾ ಕೆಲಸ ಮಾಡುತ್ತಿದ್ದರೇನೋ ಎಂಬಷ್ಟು ಪರಿಪಕ್ವತೆ. ಗುರುದತ್ತ್ರ ಜತೆ ಭಾರತದ ಮೊತ್ತಮೊದಲ ಸಿನಿಮಾಸ್ಕೋಪ್ ಚಿತ್ರ ಕಾಗಜ್ ಕಿ ಫೂಲ್, ಪ್ಯಾಸಾ, ಬಾಝಿ, ಸಾಹಿಬ್ ಬೀಬಿ ಔರ್ ಗುಲಾಮ್, ಆರ್ ಪಾರ್ ಮುಂತಾದ ದೇಶದ ಚಲನಚಿತ್ರ ರಂಗದ ಮೈಲುಗಲ್ಲು ಎಂದೆನಿಸುವ ಚಿತ್ರಗಳಿಗೆ ನೆರಳು ಬೆಳಕು ತುಂಬಿದರು. ಕಾಗಜ್ ಕಿ ಫೂಲ್ಗೆ ೧೯೫೯ರಲ್ಲಿ ಮತ್ತು ಸಾಹಿಬ್ ಬೀಬಿ ಔರ್ ಗುಲಾಮ್ಗೆ ೧೯೬೨ರಲ್ಲಿ ಫಿಲಂಫೇರ್ ಅವಾರ್ಡ್ ಜಯಿಸಿದ್ದರು.

ಮೂರ್ತಿ, ಗುರುದತ್ತ್ ಬದುಕಿರುವವರೆಗೂ ಬೇರೊಬ್ಬ ನಿರ್ದೇಶಕನ ಕೈಕೆಳಗೆ ಮುಖ್ಯ ಕ್ಯಾಮೆರಾಮೆನ್ ಆಗಿ ದುಡಿದಿರಲಿಲ್ಲ. ಆದರೆ ೧೯೬೪ರಲ್ಲಿ ಗುರುದತ್ತ್ರ ಆಕಸ್ಮಿಕ ಅಗಲುವಿಕೆ ನಂತರ ಕಮಲ್ ಅಮ್ರೋಹಿಯ ಶ್ರೇಷ್ಟ ಚಿತ್ರ ಕೀಜಾ ಮತ್ತು ರಝೀಯಾ ಸುಲ್ತಾನ್ಗೆ ಕ್ಯಾಮೆರಾ ಹಿಡಿದರು. ಅನಂತರ ಪ್ರಮೋದ್ ಚಕ್ರವರ್ತಿ,ಗೋವಿಂದ ನಿಹಲಾನಿ, ಶ್ಯಾಮ್ ಬೆನಗಲ್ ಮುಂತಾದವರ ಚಿತ್ರಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದರು.

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹೂವುಹಣ್ಣು ಇವರ ಕ್ಯಾಮರ ಕೈಚಳಕಕ್ಕೆ ಸಾಕ್ಷಿಯಾದ ಏಕಮಾತ್ರ ಕನ್ನಡ ಚಲನಚಿತ್ರ. ಏನ್ಸಾರ್, ಒಂದೇ ಕನ್ನಡ ಚಿತ್ರಕ್ಕೆ ಕೆಲಸ ಮಾಡಿದ್ದೀರಲ್ಲ ಬೇರೆ ಕನ್ನಡ ಚಿತ್ರಗಳಿಗೆ ಯಾಕೆ ಕೆಲಸ ಮಾಡಿಲ್ಲ? ಎಂದು ಕೇಳಿದರೆ, ನಿಮ್ಮ ನಿರ್ಮಾಪಕರನ್ನೇ ಕೇಳಿ ಅನ್ನುವುದು ಮೂರ್ತಿಯವರ ಉವಾಚ. ಅದರರ್ಥ ಅವರ ಸಾಮರ್ಥ್ಯವನ್ನು ತವರ ಚಲನಚಿತ್ರ ರಂಗ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ನೋವು ಅವರಲ್ಲಿ ಇದೆ ಎಂದಾಯಿತು. ಅಷ್ಟರ ಮಟ್ಟಿಗೆ ನಮ್ಮದು ದುರದೃಷ್ಟ! ನಮ್ಮಲ್ಲಿ ಬೆಳೆಯದಿದ್ದರೂ ಪರವಾಗಿಲ್ಲ ಅಲ್ಲೆಲ್ಲೋ ಬೆಳೆದು ಜಗತ್ತಿನ ಗಮನ ಸೆಳೆದರಲ್ಲ ಅದು ಕನ್ನಡಾಂಬೆಯ ಅದೃಷ್ಟ!

ಮೂರ್ತಿ ಸಾಬ್, ಒಬ್ಬ ಶ್ರೇಷ್ಟ ಸಿನಿಛಾಯಾಚಿತ್ರಗಾರನಾಗುವ ಮುಂಚೆ ಒಬ್ಬ ಸ್ವಾತಂತ್ರ್ಯ ಸೇನಾನಿಯಾಗಿದ್ದರು, ಪ್ರತಿಫಲವಾಗಿ ಜೈಲುವಾಸ ಅನುಭವಿಸಿದರು. ಅವರ ನೆನಪಿನ ಕೋಶದಲ್ಲಿರುವ ಅವರ ಹೋರಾಟಕ್ಕೆ ನಿದರ್ಶನವಾಗಿರುವ ಘಟನೆಯೊಂದು ಹೀಗಿದೆ. ಆಗ ಅವರು ಕಾಲೇಜಿನಲ್ಲಿ ಓದುತ್ತಿದ್ದರಂತೆ, ಗಾಂಧಿಜಿಯ ಭಾಷಣ ಕೇಳಿ ಸುಮಾರು ೧೫೦ ಮಂದಿ ಉತ್ಸಾಹಿ ವಿದ್ಯಾರ್ಥಿಗಳು ಬ್ರಿಟಿಷ್ರ ಅಳ್ವಿಕೆಯ ವಿರುದ್ಧ ಪ್ರತಿಭಟಿಸಲು ಸೈಕಲ್ ರ್ಯಾಲಿ ನಡೆಸ ಹೊರಟರಂತೆ. ಇವರಿಗೆಲ್ಲ ವಿ. ಕೆ ಮೂರ್ತಿಯೇ ಸಾರಥಿ. ಪ್ರತಿಭಟನೆ ಮೈಸೂರುನಗರದಿಂದ ಹೊರಟು ಪೊಲಿಸ್ ಚೌಕಿಯಲ್ಲಿ ಕೊನೆಗೊಳಿಸುವುದು ಎಂದು ನಿರ್ಧರಿಸಲಾಗಿತ್ತಂತೆ. ಅದರಂತೆ ಪ್ರತಿಭಟನೆ ಶುರುವಾಯಿತು, ಜೋರಾಯಿತು. ಪ್ರತಿಭಟನೆ ಚೌಕಿ ಬಳಿ ತಲುಪುತ್ತಲೇ ಪೊಲಿಸರು ಇವರನ್ನು ಬಂಧಿಸಲು ತಯಾರಾಗಿದ್ದರಂತೆ. ಮೂರ್ತಿಯವರು ಹಿಂತಿರುಗಿ ಒಮ್ಮೆ ತಮ್ಮ ಹಿಂಬಾಲಕರನ್ನು ನೊಡಲು ಅಲ್ಲಿದದ್ದು ಬರೀ ಏಳು ಮಂದಿಯಂತೆ!

ಮೂರ್ತಿಯವರಿಗೆ ನಟನಾಗುವ ಆಸೆಯೇ ಹೆಚ್ಚಿತಂತೆ. ಅದಕ್ಕಾಗಿ ಮುಂಬೈಗೆ ಓಡಿ ಹೋಗಿ ಅರೆ ಪ್ಯಾಂಟ್ನಲ್ಲೇ ಸ್ಟುಡಿಯೋದಿಂದ ಸ್ಟುಡಿಯೋಗೆ ಅಲೆದಾಡಿದರಂತೆ, ಅಲ್ಲಿ ಅವರ ಸಂಬಂಧಿಕರು ಆಶ್ರಯ ನೀಡಿದರಂತೆ ಅದರು ಅವಕಾಶ ದಕ್ಕಲಿಲ್ಲ ಇನ್ನು ಇಲ್ಲಿದ್ದು ಸಮಯ ಕೊಲ್ಲುವುದಕ್ಕಿಂತ ಊರಿಗೆ ಹಿಂತಿರುಗಿ ಶಿಕ್ಷಣವನ್ನು ಪೂರೈಸುವುದೇ ಒಳಿತು ಎಂದು ಭಾವಿಸಿ ಶಿಕ್ಷಣ ಪೂರೈಸಿದರಂತೆ.

ಇವರಿಗೆ ವಯಲಿನ್ ನುಡಿಸುವುದು ಕೂಡ ಕರಗತವಾಗಿತ್ತಂತೆ ತದನಂತರ ಇವರು ಸಿನಿಮಾಟೋಗ್ರಾಫಿಯನ್ನು ಕಲಿತದ್ದು.

ಜಯಂತ ದೇಸಾಯಿಯವರ ಮಹಾರಾಣ ಪ್ರತಾಪ್ ಇವರಿಗೆ ಬ್ರೇಕ್ ನೀಡಿತ್ತು. ಅದರಲ್ಲಿ ಅವರು ಸಿನಿಮಾಟೊಗ್ರಾಫರ್ ದ್ರೋಣಾಚಾರ್ಯರಿಗೆ ಸಹಾಯಕರಾಗಿ ದುಡಿದಿದ್ದರು. ಅನಂತರ ಇವರು ಅಮ್ರಪಾಲಿ ಎಂಬ ಸಿನಿಮಾ ನೋಡಿದಾಗ ಅದರಲ್ಲಿ ಸಿನಿಮಾಟೊಗ್ರಾಫರ್ ಫಾಲಿ ಮಿಸ್ತ್ರಿಯ ಚಮತ್ಕಾರಗಳನ್ನು ಕಂಡು ಮೂಕವಿಸ್ಮಿತರಾದರು. ಆಗ ಇವರು ಕೆಲ ಚಿತ್ರಗಳಲ್ಲಿ ವಯಲಿನ್ ವಾದಕರಾಗಿ ದುಡಿದಿದ್ದರು. ಮಿಸ್ತ್ರಿಯವರಿಗೆ ಸಹಾಯಕರಾಗಿ ದುಡಿದರು ಆ ಕಾಲದಲ್ಲಿ ಇವರು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಸಹಾಯಕ ಸಿನಿಮಾಟೊಗ್ರಾಫರ್ ಆಗಿದ್ದರು. ಅನಂತರದ್ದು ಇತಿಹಾಸ. ಅವರು ಸ್ವತಂತ್ರ ಸಿನಿಮಾಟೊಗ್ರಾಫರ್ ಆಗಿ ತೆರೆಯ ಮೇಲೆ ದೃಶ್ಯ ಕಾವ್ಯವನ್ನೇ ಬರೆದರು. ನೆರಳು ಬೆಳಕಿಗೂ ಭಾವ ತುಂಬಿ ಅದೂ ಏನನ್ನೋ ಹೇಳುವಂತೆ ಮಾಡಿದರು. ಅದನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿದರು. ಅದು ಒಂದು ಪಾತ್ರವಾಗುವಂತೆ ನೋಡಿಕೊಂಡರು.

ಅವರು ಸಿನಿಮಾಟೊಗ್ರಾಪರ್ ಆಗಿದ್ದ ಬಾಝಿ(೧೯೫೧), ಜಾಲ್(೧೯೫೨), ಮಿಸ್ಟರ್ & ಮಿಸಸ್(೧೯೫೫), ಸಿಐಡಿ(೧೯೫೬), ೧೨ ಓ ಕ್ಲಾಕ್(೧೯೫೮), ಚೌದಿನ್ ಕ ಚಾಂದ್(೧೯೬೦), ಜಿದ್ದಿ(೧೯೬೪), ಲವ್ ಇನ್ ಟೋಕಿಯೊ(೧೯೬೬), ಸೂರಾಜ್(೧೯೬೬), ನವ್ ಜವಾನ್(೧೯೭೧), ಜುಗ್ನು(೧೯೭೩), ನಸ್ತಿಕ್(೧೯೮೩), ಕಲಿಯುಗ್ ಔರ್ ರಾಮಾಯಣ್(೧೯೮೭), ಖುಲೆ ಅಮ್(೧೯೯೨), ದೀದಾರ್(೧೯೯೨) ಮುಂತಾದ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು.

ಮೂರ್ತಿಯವರಿಗೆ ೨೦೦೫ರ ಅಮ್ಸ್ಟ್ಯಾರ್ಡ್ಯಾಮ್ IIಈಂ ಜೀವಮಾನದ ಸಾಧಕ ಪ್ರಶಸ್ತಿಗೂ ಭಾಜನರಾಗಿದ್ದರು. ಇದೀಗ ಬೆಂಗಳೂರಿನಲ್ಲಿ ತಮ್ಮ ಬಾಳ ಸಂಜೆ ಕಳೆಯುತ್ತಿರುವ ಮೂರ್ತಿಯವರನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಅರ್ಹವಾಗಿಯೇ ಹುಡುಕಿಕೊಂಡು ಬಂದಿದೆ.

Saturday, February 13, 2010

ಕತ್ತಲ ಕೋಣೆ ಸೇರಿದ ಛಾಯಾಚಿತ್ರ ಮಾರಾಟಗಾರರು!

   ಮಾನವ ಹೊಟ್ಟೆಪಾಡಿಗಾಗಿ ಹತ್ತಾರು ಕೆಲಸ ಅಥವಾ ಉದ್ಯೋಗ ಮಾಡುತ್ತಿರುತ್ತಾನೆ. ಅವುಗಳಲ್ಲಿ ಕೆಲವು ಸಾಂಪ್ರದಾಯಿಕ ಕೆಲಸಗಳಾಗಿದ್ದು ಅವುಗಳಿಗೆ ಸಾಂಸ್ಕ್ರತಿಕ ಮಹತ್ವ ಮತ್ತು ಗುರುತು ಇರುತ್ತದೆ.
  
   ಇನ್ನು ಕೆಲ ಉದ್ಯೋಗಗಳು ಅಧುನಿಕತೆಯ ಕೊಡುಗೆ ಎಂದು ಪರಿಗಣಿಸುವ ರೀತಿಯದ್ದು. ಈ ಕೆಲಸಗಳಿಗೆ ಹೆಚ್ಚು ಸಾಮಾಜಿಕ ಗೌರವ ಮತ್ತು ಅದಾಯ ಇರುತ್ತದೆ. ಆದರೆ ಈ ಎರಡರ ಮಧ್ಯೆ ಕೆಲ ಉದ್ಯೋಗಗಳಿರುತ್ತವೆ. ಅವುಗಳು ಅಧುನಿಕತೆಯ ಕೊಡುಗೆಗಳಾದರೂ ಅವಕ್ಕೆ ಸಮಾಜದಲ್ಲಿ ಗೌರವ ಮತ್ತು ನಿಶ್ಚಿತ ಅದಾಯ ಇರುವುದಿಲ್ಲ. ಇಂತಹ ಉದ್ಯೋಗಗಳಲ್ಲಿ ನಿರತರಾಗಿರುವವರಿಗೆ ಯಾವುದೇ ಭದ್ರತೆಗಳಿರುವುದಿಲ್ಲ. ಯಾಕೆಂದರೆ ಅಧುನಿಕತೆ ಎಂಬುದು ತುಂಬ ತುಂಬ ಚಲನಶೀಲ. ಅಲ್ಲಿ ನಿನ್ನೆಯ ಹೊಸತು ಇಂದಿನ ಹಳತು ಎಂಬ ಸ್ಥಿತಿ. ಅದಕ್ಕಿಂತ ಹೆಚ್ಚಾಗಿ ಇಂದು ಅಧುನಿಕತೆ ಎಂಬುದು ಒಬ್ಬ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿಸುವ ಆಥವಾ ಅವಲಂಬಿಸುವುದಾದರೆ ದೊಡ್ಡ ದೊಡ್ಡ ಕಂಪೆನಿಗಳನ್ನೇ ಅವಲಂಬಿಸುವಂತೆ ಮಾಡುವ ಗುಪ್ತ ಅಜೆಂಡಾ ಹೊಂದಿದೆ. ಅದ್ದರಿಂದ ಈ ಅಧುನಿಕತೆ ಕೊಡುಗೆಗಳನ್ನೇ ನಂಬಿ ಬದುಕು ಕಟ್ಟ ಹೊರಟ್ಟಿದ್ದ ಬಹಳಷ್ಟು ಜನ ಬೀದಿಗೆ ಬಿದ್ದಿದ್ದಾರೆ, ಬೀಳುತ್ತಿದ್ದಾರೆ.

   ಇದಕ್ಕೆ ತಾಜಾ ಉದಾಹರಣೆ ಎಂದರೆ ಪ್ರವಾಸಿ ತಾಣಗಳಲ್ಲಿ ಅಲ್ಲಿನ ಛಾಯಾಚಿತ್ರ ಮಾರಿ ಬದುಕ ಬಂಡಿ ಎಳೆಯುತ್ತಿದ್ದವರ ಕಥೆ.

   ಕೆಲ ವರ್ಷಗಳ ಹಿಂದೆ ನೀವು ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೂ ಇಂತವರು ದಂಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ’ಇಪ್ಪತ್ತು ರೂಪಾಯಿಗೆ ೧೦ ಪೋಟೋ’ ಎಂದು ಬೊಬ್ಬೆ ಹಾಕುತ್ತ, ’ನಿಮ್ಮ ಭೇಟಿಯ ನೆನಪಿಗೆ ಇರಲಿ’ ಎಂದು ಹೇಳುತ್ತ ಪೋಟೋ ಕೊಟ್ಟು ನಮ್ಮ ನೆನಪಿನ ಮತ್ತು ಅವರ ಅನ್ನದ ಬುತ್ತಿ ತುಂಬಿಸಿ ಕೊಳ್ಳುತ್ತಿದ್ದರು.

   ಅದರಲ್ಲೂ ಮೈಸೂರು, ನಂಜನ ಗೂಡು, ಬೆಂಗಳೂರಿನ ಲಾಲ್ಭಾಗ್, ಕಬ್ಬನ್ ಪಾರ್ಕ್, ಬೇಲೂರು, ಹಳೆಬೀಡು, ಬಾದಾಮಿ, ಹಂಪಿಗಳಲ್ಲಿ ಇಂತಹವರ ಸಂಖ್ಯೆ ಬಹಳಷ್ಟಿತ್ತು.

   ಈಗ ಆ ನೆನಪಿನ ಪಳೆಯುಳಿಕೆಯೆಂಬಂತೆ ಕೆಲ ಮಂದಿ ಮಾತ್ರ ಈ ಕೆಲಸ ನಿರತರಾಗಿದ್ದಾರೆ. ಅದೂ ಒಲ್ಲದ ಮನಸ್ಸಿನಿಂದ!

   ಇದಕ್ಕೆಲ್ಲ ಕಾರಣ ಡಿಜಿಟಲ್ ಕ್ಯಾಮರಾ ತಂದಿಟ್ಟ ಪೋಟೊ ಕ್ರಾಂತಿ!

   ಮ್ಯೆಸೂರಿನ ಜಗದ್ವಿಖ್ಯಾತ ಚಾಮುಂಡೇಶ್ವರಿ ದೇಗುಲದ ಮುಂದೆ ಕಳೆದ ೧೫ ವರ್ಷಗಳಿಂದ ಇದನ್ನೇ ವೃತ್ತಿಯಾಗಿಸಿಕೊಂಡಿರುವ ಮಣಿಕಂಠರನ್ನು ಮಾತನಾಡಿಸಿದಾಗ ಅವರು ಹೇಳಿದ್ದು, ಹಿಂದೆ ನಮಗೆ ದಿನಕ್ಕೆ ೩೦೦ ರೂಪಾಯಿಗಳಷ್ಟು ವ್ಯಾಪಾರವಾಗುತ್ತಿತ್ತು, ಈಗ ೧೦೦ ರೂ ಆದರೆ ಅದೇ ಹೆಚ್ಚು. ಈಗ ಜನರು ತಮಗೆ ಬೇಕಾದ ಚಿತ್ರಗಳನ್ನು ತಾವೇ ತೆಗೆದುಕೊಂಡು ಹೋಗುತ್ತಿದ್ದಾರೆ, ಇದರಿಂದ ನಮ್ಮ ಹೊಟ್ಟೆಗೆ ತಣ್ಣೀರೇ ಗತಿ ಎಂಬಂತಾಗಿದೆ

   ಇಂದು ಮೂರರ ಹರೆಯದ ಮಗುವಿನಿಂದ ಹಿಡಿದು ೯೦ರ ಮುದುಕನ ವರೆಗೆ ಎಲ್ಲರೂ ಡಿಜಿಟಲ್ ಕ್ಯಾಮೆರ ಬಳಸುತ್ತಿದ್ದಾರೆ. ಅಲ್ಲಿ ತಮಗೆ ಬೇಕಾದ ಪೋಟೋ ತೆಗೆದುಕೊಳ್ಳುವ ಸ್ವಾತಂತ್ರ್ಯವಿರುತ್ತದೆ ಹಾಗೆಯೇ ಬೇಡದ ಪೋಟೋಗಳನ್ನು ನಿವಾಳಿಸಿಕೊಳ್ಳಬಹುದು. ಇದರಿಂದ ನಮಗೆ ವೈಯುಕ್ತಿಕವಾಗಿ ತುಂಬ ಲಾಭವಿದೆ. ಆದರೆ ಸಾಮಾಜಿಕವಾಗಿ ನೋಡಿದಾಗ ನೂರಾರು ಕುಟುಂಬಗಳು ಬೇರೊಂದು ಉದ್ಯೋಗವನ್ನರಸ ಬೇಕಾಗಿ ಬಂದಿದೆ. ಅಲ್ಲೊಂದು ಸ್ಥಿತ್ಯಂತರವೇ ನಡೆದು ಹೋಗಿದೆ.

   ಇದೇ ವೃತ್ತಿ ನಿರತ ಗೋವಿಂದ ರಾಜುವನ್ನು ಮಾತನಾಡಿಸಿದಾಗ, ನಮಗೆ ಬೇರೊಂದು ವೃತ್ತಿ ಮಾಡೋಣ ಎಂದರೆ ಅದು ಗೊತ್ತಿಲ್ಲ, ಈ ಕೆಲಸ ನಂಬಿದರೆ ಬದುಕು ಸಾಗೋದಿಲ್ಲ, ಒಟ್ಟಿನಲ್ಲಿ ನಮಗೆ ಏನೂ ಮಾಡಬೇಕೆಂದೇ ಗೊತ್ತಾಗುತ್ತಿಲ್ಲ.

   ಈ ಪೋಟೋ ಮಾರುತ್ತಿದ್ದ ಪರಂಪರೆ ಒಳ್ಳೆದು ಅಂತ ನಾನು ಹೇಳುತ್ತಿಲ್ಲ, ಇವರಿಂದ ಮೋಸ ಹೋದವರು ಮತ್ತು ಬೈಗುಳ ತಿನ್ನಬೇಕಾದ ಪ್ರಸಂಗ ಎದುರಿಸಿದ ಅನೇಕ ಸಂದರ್ಭಗಳು ಎದುರಾದದ್ದು ಇದೆ. ಆದೇನೇ ಆಗಿದ್ದರೂ ಕೂಡ ನಮ್ಮ ಹಿಂದಿನ ಎರಡು ಪೀಳಿಗೆಯ ಪ್ರವಾಸಕ್ಕೆ ಮತ್ತದರ ನೆನಪಿಗೆ ತಮ್ಮದೆ ಕೊಡುಗೆ ನೀಡಿದ್ದ ವೃತ್ತಿಯೊಂದು ನಮ್ಮ ಕಣ್ಣೇದುರೇ ಕಾಲಗರ್ಭ ಸೇರುತ್ತಿರುವುದು ಮಾತ್ರ ದಿಟ.