ನಾವು ಪಾಕಿಸ್ತಾನದೊಂದಿಗೆ ಮೂರು ಯುದ್ಧ ಮಾಡಿದೇವು, ಮೂರರಲ್ಲೂ ಗೆದ್ದೆವು. ಚೀನಾದೊಂದಿಗೆ ನಡೆದ ಏಕಮಾತ್ರ ಸಮರದಲ್ಲಿ ಹೀನಾತಿಹೀನವಾಗಿ ಸೋತೆವು. ಚೀನಾ, ಜಮ್ಮು ಕಾಶ್ಮೀರದ ಮೇಲೆ ದಾಳಿ ನಡೆಸುತ್ತಿದ್ದಾಗ, 'ಅಲ್ಲಿ ಒಂದು ಹುಲ್ಲು ಕೂಡ ಬೆಳೆಯುವುದಿಲ್ಲ ಅದು ನಮಗ್ಯಾಕೆ? ಎಂದು ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಪ್ರಶ್ನಿಸುತ್ತಾರೆ. ಆದಕ್ಕೆ ಆಗಿನ ಸಂಸದರೊಬ್ಬರು, 'ನಿಮ್ಮ ತಲೆಯಲ್ಲೂ ಕೂಡ ಒಂದೂ ಕೂದಲು ಬೆಳೆಯುವುದಿಲ್ಲ ಅದು ನಿಮಗ್ಯಾಕೆ'? ಎಂದು ಕೇಳುತ್ತಾರೆ. ನೆಹರೂ ಅ ಕ್ಷಣ ಪೆಚ್ಚಾಗುತ್ತಾರೆ. ಆದರೆ ನೆಹರುರಲ್ಲಿದ್ದ ಮನಸ್ಥಿತಿ ಮಾತ್ರ ಇಂದಿಗೂ ನಮ್ಮಿಂದ ದೂರವಾಗಿಲ್ಲ.
ತಾವಾಗಿ ಯಾರ ಮೇಲು ಯುದ್ಧ ಸಾರದ ಜಗತ್ತಿನ ಏಕೈಕ ದೇಶ ನಮ್ಮದು, ಅದೇ ರೀತಿ ಬ್ರಿಟಿಷರನ್ನು ಹೊರತುಪಡಿಸಿ ಬೇರೆ ಯಾವ ದಾಳಿಕೋರರ ಮೇಲೂ ಸಂಘಟಿತವಾಗಿ ಹೋರಾಡದವರು ಕೂಡ ನಾವೇ! ಆದರೆ ನಾವು ಸ್ವಾತಂತ್ರ್ಯಗಳಿಸಿದ ಬಳಿಕವೇ ನಾಲ್ಕು ಪ್ರಮುಖ ಯುದ್ಧಗಳನ್ನು ಎದುರಿಸಬೇಕಾಯಿತು. ಈ ನಾಲ್ಕು ಸಂದರ್ಭದಲ್ಲಿ ದೇಶಕ್ಕೆ ದೇಶವೇ ಒಂದಾಗಿತ್ತು.
ಈ ಎಲ್ಲ ಸಂದರ್ಭದಲ್ಲೂ ದೇಶದ ಸಾರ್ವಭೌಮತೆ ಉಳಿಸಿಕೊಟ್ಟದ್ದು ಮತ್ತು ಮುಂದೆಯೂ ಉಳಿಸಿಕೊಡುವುದು ನಮ್ಮ ಸೈನಿಕರೇ. ತೀರಾ ಇತ್ತೀಚಿಗೆ ನಡೆದ 1999ರ ಕಾರ್ಗಿಲ್ ಕದನ ಅಂದರೆ ಮಿಲಿಟರಿ ಭಾಷೆಯಲ್ಲಿ 'ಅಪರೇಷನ್ ವಿಜಯ' ಕಾರ್ಯಚರಣೆಯಲ್ಲಿ 533 ವೀರಯೋಧರನ್ನು ನಾವು ಕಳೆದುಕೊಂಡೆವು. ಆದರೆ ಇಂತಹ ಒಬ್ಬನೇ ಒಬ್ಬ ವೀರಯೋಧನ ಸಾಹಸಗಾಥೆಯ ಸಮಗ್ರ ಪರಿಚಯ ನಮ್ಮ ಪಾಠ ಪುಸ್ತಕಗಳ ಮೂಲಕ ನಮಗಾಗಿಲ್ಲ.
ಲೆಪ್ಟಿನೆಂಟ್ ಸೌರವ್ ಕಾಲಿಯಾ ತನ್ನ ಎಲ್. ಎಮ್. ಜಿ ಬಂದೂಕಿನಿಂದ 20 ಉಗ್ರರನ್ನು ಸದೆಬಡಿದ ಮೇಲೆಯೆ ತಾನು ಇತಿಹಾಸ ಪುಟ ಸೇರಿದ್ದು. ಹಾಗೇಯೇ ನಾಯ್ಕ್ ಅಂಗ್ರೇಜ್ ಸಿಂಗ್, ಎದೆಗೆ ಗುಂಡು ತಿಂದು ಅಸ್ಪತ್ರೆಯಲ್ಲಿ ಮಲಗಿದ್ದಾಗ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗುತ್ತಾರೆ. ಆಗ ಆಂಗ್ರೇಜ್ ಸಿಂಗ್, "ಸಾಬ್, ನಾವೆಲ್ಲ ಎದೆಗೆ ಗುಂಡು ತಿಂದಿದ್ದೇವೆ ಬೆನ್ನಿಗಲ್ಲ, ಅಂತ ಎಲ್ಲರಿಗೂ ಹೇಳಿ" ಅಂದಾಗ ಎಲ್ಲರ ಕಣ್ಣಾಲಿಗಳು ತುಂಬಿ ಬಂದವಂತೆ.
ಹೀಗೆ ಈ ಯುದ್ಧಗಳಲ್ಲಿ ಮಡಿದ, ದುಡಿದ ಪ್ರತಿಯೊಬ್ಬ ಸೈನಿಕನೂ ಒಂದೊಂದು ಪುಸ್ತಕವಾಗುವಷ್ಟು ಅನುಭವ ಹೊತ್ತುಕೊಂಡಿದ್ದಾರೆ. ಆದರೆ ಇಂತಹವರ ಬಗ್ಗೆ ನಮ್ಮ ಪಠ್ಯ ಪುಸ್ತಕಗಳಲ್ಲಿ ಎಲ್ಲದರೂ ಉಲ್ಲೇಖವಿದೇಯೇ? ಕೆಲವು ರಾಷ್ಟ್ರ ನಾಯಕರ ಕಥೆಗಳನ್ನು ಅಕ್ಷರ ಜೋಡಿಸಿ ಓದಲಾರಂಭಿಸಿದಂದಿನಿಂದ ನಾವು ಓದುತ್ತಿದ್ದೇವೆ. ಇದರಿಂದ ನಮ್ಮಲ್ಲಿ ಅಪರಿಮಿತ ದೇಶಪ್ರೇಮ ಬೆಳೆದಿದೆ ಎನ್ನುವಂತಿಲ್ಲ. ಯಾಕೆಂದರೆ ಅವರ ಹೋರಾಟ ಬೇರೊಂದು ದೇಶ ನಮ್ಮ ಮೇಲೆ ದಾಳಿ ನಡೆಸಿದಾಗ ಅಥವಾ ನಡೆಸುತ್ತಿರುವಾಗ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ಈಗ ಇರುವ ಸಂಭವ್ಯಯತೆಗಳು ಇಂತದ್ದೇ.
ಆಗ ನಮ್ಮ ಸಹಾಯಕ್ಕೇ ಬರುವುದು ನಮ್ಮ ಸೈನಿಕರ ಹೋರಾಟ. ಇಂದು ದೇಶಕ್ಕೆ ಬೇಕಾಗಿರುವುದು ಸೈನಿಕರ ಹಾದಿಯನ್ನು ತುಳಿಯಲು ಸಿದ್ದವಾಗಿರುವ ಮನಸ್ಸುಗಳು. ಇದರರ್ಥ, ಎಲ್ಲಕ್ಕೂ ರಕ್ತಪಾತವೇ ಮದ್ದು, ಅಥವಾ ಎಲ್ಲರೂ ಸೈನ್ಯ ಸೇರಬೇಕೆಂದೂ ಅಲ್ಲ ಆದರೆ ಆ ಬಗ್ಗೆ ಗೌರವ ಮತ್ತು ದೇಶಕ್ಕಾಗಿ ಹೋರಾಡುವ ಮತ್ತು ದುಡಿಯುವ ಆಯ್ಕೆಯನ್ನು ಮುಕ್ತವಾಗಿಟ್ಟು ಕೊಂಡವರು ಬೇಕು. ಅಂತಹವರು ಸೃಷ್ಟಿಯಾಗಬೇಕಾದರೆ ನಮ್ಮ ಪಠ್ಯಗಳು ಕೂಡ ಅದಕ್ಕೆ ಪೂರಕವಾಗಿರಬೇಕು.
ಆದರೆ ನಮ್ಮ ಪಠ್ಯ ಪುಸ್ತಕಗಳನ್ನು ಓದುವವನಲ್ಲಿ ಒಂದಿಷ್ಟು ದೇಶಪ್ರೇಮವಿದ್ದರೂ ಅದು ಬತ್ತಿ ಹೋಗಬಹುದು. ಅದು ಅಷ್ಟು ನಿಸ್ತೇಜ ಮತ್ತು ಚೈತನ್ಯ ಹೀನ ಒಟ್ಟಿನಲ್ಲಿ ಜಡ. ಅದು ಸೃಷ್ಟಿಸುತ್ತೀರುವ ಜನಾಂಗ ಕೂಡ ಅಂತದ್ದೇ!
ಪಾಠ ಪುಸ್ತಕಗಳಲ್ಲಿ ಭಾವನೆಗಳಿಗೆ ಹೆಚ್ಚು ಪ್ರಾಶಸ್ತ್ಯ ಇರಬಾರದು, ಒಪ್ಪಿಕೊಳ್ಳೋಣ. ಆದರೆ ಒಂದು ಸಮಾಜ ಪ್ರೇರಣೆ ಪಡೆಯುವ ಸಂಗತಿಗಳೇ ಇಲ್ಲ ಎಂದಾದರೇ ಅದು ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯುವಲ್ಲಿ ಸಹಕಾರಿ ಆಗಬಲ್ಲುದೇ? ಈ ಕೆಲಸ ಮಾಡದಿದ್ದ ಪಾಠ ಪುಸ್ತಕವಿದ್ದು ಪ್ರಯೋಜನವೇನು? ನಮ್ಮ ಸಮಾಜ ವಿಜ್ಞಾನ ಪುಸ್ತಕಗಳಿಗೆ ಕಾಣುವ ದೇಶಪ್ರೇಮವೆಂದರೆ ಸ್ವತಂತ್ರ ಹೋರಾಟಗಾರರದ್ದು ಮಾತ್ರ. ಇತಿಹಾಸದಲ್ಲಂತೂ ರಾಜ ಮಹಾರಾಜರು ಮತ್ತು ಅವರ ಆಡಳಿತ, ಮಾಡಿದ ಯುದ್ಧ ಮತ್ತು ಒಂದಿಷ್ಟು ಅವರ ಸಾಧನೆ ಹೇಳಿ, ಮಕ್ಕಳನ್ನು ಪರೀಕ್ಷೆಯಲ್ಲಿ ಪಾಸ್ ಮಾಡಿಸಿ 'ಧನ್ಯೋಸ್ಮಿ' ಎನಿಸಿಕೊಳ್ಳುತ್ತಿದೇಯೆ ಹೊರತು ಅದರಿಂದ ಇಂದಿನ ಪೀಳಿಗೆ ಮತ್ತು ದೇಶಕ್ಕೇ ಏನು ಲಾಭವಿದೆ? ನನಗಂತೂ ಗೊತ್ತಾಗುತ್ತಿಲ್ಲ.
ಇತಿಹಾಸದ ಪರಿಚಯ ನಮಗೆ ಇರಬೇಕು, ಆದರೆ ಅದು ರಾಜ ಮಹಾರಾಜರ ಚರಿತ್ರೆಯಾಗಿ ಅಲ್ಲ. ಈ ಬಗ್ಗೇ ಇನ್ನೋಮ್ಮೆ ಚರ್ಚೆ ಮಾಡೋಣ.
ಸ್ವಾತಂತ್ರ್ಯೋತ್ತರದ ಮಹಾನ್ ಸೇನಾನಿಗಳಾದ ಜನರಲ್ ಕಾರ್ಯಪ್ಪ, ಮಾಣಿಕ್ ಷಾ... ಹೀಗೆ ಸಾವಿರಾರು ಸೈನಿಕರು ನಮ್ಮ ಪಾಠ ಪುಸ್ತಕಗಳಲ್ಲಿ ಹೆಚ್ಚೆಂದರೆ ಗೆರೆಯೊಂದರಲ್ಲಿ ಸೆರೆಯಾಗಿ ಮರೆಯಾಗಿ ಹೋಗುವ ಪರಿ ನಿಜಕ್ಕೂ ರೇಜಿಗೆ ಹುಟ್ಟಿಸುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಕಾರಣರಾದವರನ್ನು ನೆನಪಿಸಿಕೊಳ್ಳುವುದು ಮುಖ್ಯವೇ, ಆದರೆ ಆ ಸ್ವಾತಂತ್ರ್ಯ ಉಳಿಸಿಕೊಟ್ಟವರನ್ನು ಕೂಡ ನೆನಪಿಸಿಕೊಳ್ಳವುದು ಮುಖ್ಯವಲ್ಲವೇ?
ಈ ವರ್ಷ ಜುಲೈ 26ರಂದು 'ವಿಜಯ ದಿನ' ಅಥವಾ 'ಅಪರೇಷನ್ ವಿಜಯ'ದ ದಶಮಾನೋತ್ಸವವನ್ನು ರಾಜಕೀಯದ ಸೋಂಕಿಲ್ಲದೆ, ಆರ್ಥಪೂರ್ಣವಾಗಿ ಆಚರಿಸುವ ಶಕ್ತಿ, ಬುದ್ದಿ, ಮಾನಸಿಕ ಆರೋಗ್ಯ ನಮ್ಮ ಸರಕಾರಕ್ಕೆ ಬರಲಿ, ಸಿಗಲಿ ಎಂದು ಸದ್ಯ ಪ್ರಾರ್ಥಿಸುತ್ತಿದ್ದೇನೆ.
ಅಮೇಲೆ ಉಳಿದದ್ದು!
ಜ್ಯೆ ಜವಾನ್, ಜ್ಯೆ ಕಿಸಾನ್, ಜ್ಯೆ ವಿಜ್ಞಾನ್!