Tuesday, July 26, 2011

"ಗೌರವದ ಸಂಖ್ಯೆ ಮುಟ್ಟಲೇಬೇಕು"

ಈ ಬರಹ ಈ ಮಣ್ಣಿನ ಹೆಮ್ಮೆಯ ಮತ್ತು ಅತ್ಯಂತ ಪುಣ್ಯವಂತ ಮಕ್ಕಳಾದ ಸೈನಿಕರಿಗೆ ಮತ್ತವರ ತ್ಯಾಗ, ಬಲಿದಾನಗಳಿಗೆ ಸಮರ್ಪಿತ...

’ಅಯ್ಯೋ ನಿಮಗೆ ಗೊತ್ತಿಲ್ಲವೆ? ನಾನು 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದೆ. ನಂತರ 1858ರಲ್ಲೇ ಪುನಃ ಹುಟ್ಟಿ ಬಂದೆ. ಮತ್ತೆ ಹೋರಾಡುವುದಕ್ಕಾಗಿ, ಆಗ ಅವಸರದಲ್ಲಿ ಬಲಗೈ ಮರೆತು ಹೋಯಿತು!" ಇಂತಹ ವಜ್ರಸದೃಶ ಮಾತು ಚಿಮ್ಮಿ ಬರಬೇಕಾದರೆ ಆ ಒಂಟಿಗೈಗಳ ಕ್ರಾಂತಿಕಾರಿ ಸೂಫಿ ಅಂಬಾಪ್ರಸಾದ್ ಈ ಮಣ್ಣನ್ನು ಅದೆಷ್ಟು ಪ್ರೀತಿಸಿರಬೇಕು? ಈ ಭೂಮಾತೆ ಆತನಿಗೆಷ್ಟು ಅಪ್ಯಾಯಾಮಾನ ಎನಿಸಿರಬೇಕು? ಆ ಸಂದರ್ಭದಲ್ಲಿ ಬ್ರಿಟಿಷರ ರಾಕ್ಷಸಿತನ ಯಾವ ಸೀಮೆ ತಲುಪಿರಬಹುದು?

ಸುಮಾರು ೧೫೦ ವರ್ಷಗಳ ಹಿಂದೆ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಜ್ವಾಲಾಮುಖಿಯಂತೆ ಅವಿರ್ಭಾವಿಸಿದ್ದ ಭಾರತೀಯರ ಆಕ್ರೋಶ, ಸ್ವಾತಂತ್ರ್ಯಕ್ಕಾಗಿನ ಹಪಹಪಿಕೆ ನನ್ನ(ಮ್ಮ) ದೇಶ ಎಂಬ ಒಕ್ಕೊರಲ ಮಾರ್ದನಿ ಅದು ಅನೂಹ್ಯ ವೇಗದಲ್ಲಿ ದೇಶಾದಾದ್ಯಂತ ಬಿತ್ತರಿಸಿ ಬ್ರಿಟಿಷರನ್ನು ಒದ್ದೊಡಿಸಿದ್ದು ಎಲ್ಲರಿಗೂ ಗೊತ್ತಿರುವಂತದ್ದೆ! ಅದನ್ನು ಪುನರ್ ನೆನಪಿಸುವ ಅವಶ್ಯಕತೆ ಇಲ್ಲ.

ಅದೇನೆ ಇರಲಿ, ಎಷ್ಟೋ ಆದರ್ಶಗಳು ಅನಿವಾರ್ಯತೆಗಳ ಸಂದುಗೊಂದಿಗೆ ಸಿಲುಕಿ ತನ್ನ ರೂಪ ಬದಲಿಸಿಕೊಂಡು ವಿರೂಪವಾಗುವುದು ಅಥವಾ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುವುದು ಮಾನವ ಇತಿಹಾಸದಲ್ಲಿ ಸಹಜ. ಇದರ ಫಲಿತಾಂಶ ಕೆಲವೊಮ್ಮೆ ಸಕಾರಾತ್ಮಕವಾಗಿರಬಹುದು, ಇನ್ನು ಕೆಲವೊಮ್ಮೆ ನಕಾರಾತ್ಮಕವಾಗಿರಬಹುದು. ಇಂತಹ ಗುಣಗಳಲ್ಲಿ ರಾಷ್ಟ್ರ ಪ್ರೇಮವೂ ಒಂದು.

ಜಾಗತೀಕರಣದ ಕನ್ನಡಕವಿಟ್ಟು ನೋಡಿದರೆ ದೇಶ ಪ್ರೇಮಕ್ಕೆ ಅರ್ಥವೇ ಇಲ್ಲ. ಅದು ವಿಶ್ವಪ್ರೇಮವೆಂಬ ಅಳವಿಲ್ಲದ ವಿಶಾಲತೆಯನ್ನು ಪಡೆದುಕೊಳ್ಳುತ್ತದೆ ಅಷ್ಟೆ.

ಭಾರತೀಯರಿಗೆ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಆರಂಭದಲ್ಲಿ ’ದೇಶಪ್ರೇಮ’ ಎಂಬ ಪದ ಮತ್ತು ಭಾವನೆಯ ಸ್ಥಿತ್ಯಂತರವೇ ಆಗಿತ್ತು. ೧೯೪೭ರ ವರೆಗೆ ಸ್ವಾತಂತ್ರ್ಯಗಳಿಸಲು ಹೋರಾಟ ನಡೆಸಿದವರು ದೇಶಪ್ರೇಮಿಗಳೆಂದು ಕರೆಸಿಕೊಂಡರೆ ತದನಂತರ ಆ ಸ್ವಾತಂತ್ರ್ಯವನ್ನು ಉಳಿಸಲು ಹೋರಾಡಿದ ಮಹನೀಯರು ಹೀರೊಗಳಾದರು. ಅಂತಹ ಒಬ್ಬ ಹೀರೋನ ಕಥೆ ಈಗ ನಿಮ್ಮ ಮುಂದಿಡುತ್ತಿದ್ದೇನೆ.

ಅದು ೧೯೬೨ನೇ ಇಸವಿ. ಚೀನಾ ಭಾರತದ ಮೇಲೆ ಮುಗಿ ಬಿದ್ದ ಸಂದರ್ಭ. ಕಾಶ್ಮೀರದ ಬೊವ್ಡಿಲಾದ ಬೆಟ್ಟಗಳು ನಿರ್ಲಿಪ್ತವಾಗಿ ನಿಂತಿದ್ದವು. ಅವಕ್ಕೇನು ಅಲ್ಲವೇ? ಆದರೆ ಅದನ್ನು ಕಾಯ ನಿಂತಿದ್ದ ಭಾರತೀಯ ಸೈನಿಕರಿಗೆ ಸ್ವಾಭಿಮಾನದ ಪ್ರಶ್ನೆ. ಒಂಚೂರು ಮೈಮರೆತರೆ ತೆರೆಯಂತೆ ಬಂದಪ್ಪಳಿಸುವ ಚೀನಿ ಸೈನಿಕರು. ಸಾಹಸಿ ದೇಶಪ್ರೇಮಿ ಸೈನಿಕರ ಪಾಲಿಗೆ ದೊರೆತ ಸುವರ್ಣ ಘಳಿಗೆ.

ಭಾರತದ ಮುಂಚೂಣಿ ನೆಲೆಯಲ್ಲಿದ್ದ ಶಾರ್ದೂಲ್ ಸಿಂಗ್‌ಗೆ ನಮಗೂ ಅವರಿಗೂ ಕುಸ್ತಿ ನಡೆದಿದ್ದರೆ ಚೆನ್ನ ಎಂಬ ಭಾವ. ಈ ಭಾವನೆ ಅವನಲ್ಲಿ ಏಕೆ ಹುಟ್ಟಿಕೊಂಡಿತ್ತೋ ಗೊತ್ತಿಲ್ಲ. ಒಂದೀ ಚೀನಿಯರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಎದುರಾಗಿ ಅವನಲ್ಲಿದ್ದ ಅತೀ ಸಾಮಾನ್ಯ ಬಂದೂಕನ್ನು ಕಂಡಿರಬಹುದು ಅಥವಾ ಅವನ ವ್ಯಕ್ತಿತ್ವವೇ ಅಂತದ್ದಿರಬಹುದು.

ಚೀನಿ ಪಡೆ ಹತ್ತಿರ ಹತ್ತಿರ ಬರುತ್ತಿತ್ತು. ಅಗಳಿನಲ್ಲಿ ನಿಂತಿದ್ದ ಭಾರತೀಯ ಯೋಧರು ಕೈಕಟ್ಟಿ ಕೂರಲಿಲ್ಲ. ಚಪ್ಪಟೆ ಮೂಗಿನ ಸೈನಿಕರನ್ನು ಅಪ್ಪಚಿ ಮಾಡಲು ಗುಂಡಿನ ಸುರಿಮಳೆಯನ್ನೆ ಸುರಿಸಿದರು.

ಭಾರತೀಯ ಪುಟ್ಟ ಪಡೆ ದಿಟ್ಟವಾಗಿ ಹೋರಾಡಿ ಚೀನಿಯರ ಬೃಹತ್ ಸೈನ್ಯವನ್ನು ಕದಡಿ ಹಾಕಿತ್ತು. ಅಷ್ಟರಲ್ಲೆ ಗುಂಡಿನ ಪೆಟ್ಟಿಗೆ ಖಾಲಿಯಾಗುತ್ತ ಬಂದಿತ್ತು. ಆದರೆ ಶಾರ್ದೂಲ ಸಿಂಗ್‌ನ ಗುಂಡಿಗೆಯಲ್ಲಿ ಹೆಪ್ಪುಗಟ್ಟಿದ್ದ ಶೌರ್ಯ, ಮಾತೃಭೂಮಿಗಾಗಿನ ತುಡಿತ, ಕೆಚ್ಚು, ಒಂದು ಹೆಜ್ಜೆಯೂ ಹಿಂದೆ ಸರಿಯಲಾರೆ ಎಂಬ ದೃಢ ಸಂಕಲ್ಪ ಒಂದಿನಿತು ಖಾಲಿಯಾಗಿರಲಿಲ್ಲ. ಬದಲು ಅದು ಪ್ರತಿಕ್ಷಣ ಹೆಚ್ಚಾಗುತ್ತಿತ್ತು.

ಶಾರ್ದೂಲ ಸಿಂಗ್ ತನ್ನ ಮೇಲಾಧಿಕಾರಿಗೆ ಆಗ, "ಚಿಂತೆಬೇಡ ಕ್ಯಾಪ್ಟನ್, ಗುಂಡು ಮುಗಿದರೆ ಕೈ ಕೈ ಮಿಲಾಯಿಸೋಣ ನನ್ನ ಬಂದೂಕಿನ ಹಿಡಿಯಿಂದ ಹತ್ತು ತಲೆಗಳನ್ನಾದರೂ ಪುಡಿ ಪುಡಿ ಮಾಡುತ್ತೇನೆ" ಎಂದು ಹೇಳಿದ. ಯಾವುದೋ ಸಿನೆಮಾದಲ್ಲಿ ಕೇಳಿದಂತೆ ಇದೆಯೇ? ಜಗತ್ತಿನಲ್ಲಿ ಸಿನೆಮಾಗಳಲ್ಲಿನ ಸಾಹಸಗಳನ್ನು ಮೀರಿದ ಸಾಹಸ ಮಾಡಿದವರು ಎಷ್ಟು ಮಂದಿ ಇಲ್ಲ? ಅಂತವರ ಪಟ್ಟಿಗೆ ಶಾರ್ದೂಲ್ ಸಿಂಗ್ ತನ್ನ ಹೆಸರು ನೊಂದಾಯಿಸಿಕೊಂಡು ಬಿಟ್ಟ.

ಶಾರ್ದೂಲ ಎಂದರೆ ಹುಲಿ. ಅವನಿಗೆ ಹೆಸರೇ ಅನ್ವರ್ಥ. ಐದೇ ನಿಮಿಷದಲ್ಲಿ ಗುಂಡುಗಳ ಪೆಟ್ಟಿಗೆ ಬರಿದು. "ವಾಪಸಾಗಲು ಸಿದ್ಧರಾಗಿ" ಎಂಬ ಕ್ಯಾಪ್ಟನ್‌ನ ಆಜ್ಞೆ. ಅಷ್ಟರಲ್ಲಿ ೮ ಮಂದಿ ಚೀನಿ ಸೈನಿಕರು ಕಂದಕದೊಳಗೆ ಧುಮುಕಿಯಾಗಿತ್ತು. ಕ್ಯಾಪ್ಟನ್ "ಹಿಂತಿರುಗಿ" ಎಂಬ ಆದೇಶ ಶಾರ್ದೂಲ "ಸಿಂಹ"ನಿಗೆ ಎಲ್ಲಿ ಕೇಳಿಸಿರಬಹುದು? ಕೇಳಿಸಿದರು, ಆ ಕಾಲುಗಳು ಹಿಂದೆ ಸರಿಯುವಂತವೇ?

ಕ್ಷಣ ಮಾತ್ರದಲ್ಲಿ ಕಂದಕದಿಂದ ಚಿಗರೆಯಂತೆ ಮೇಲಕ್ಕೆ ಹಾರಿದ ಶಾರ್ದೂಲ ತನ್ನ ಬದುಕನ್ನೆ ಶತ್ರುವಿನ ಅಂಗೈಯಲ್ಲಿಟ್ಟು ಬಂದೂಕನ್ನು ಪಟಪಟನೆ ಬೀಸಲಾರಂಭಿಸಿದ.

ಈ ಸಾಹಸಿ ಸೂರ್ಯ ಕಣ್ಣು ತೆರೆದಾಗ ತೇಜಪುರದ ಆಸ್ಪತ್ರೆಯೊಂದರಲ್ಲಿ ಮಲಗಿದ್ದ. ಕ್ಯಾಪ್ಟನ್ ಹೆಮ್ಮೆಯಿಂದ "ಶಾರ್ದೂಲ ಎಂಟು ಬರುಡೆಗಳನ್ನು ಚಿಂದಿ ಉಡಾಯಿಸಿದ್ದಿ" ಎಂದ.

ಈ ಶೌರ್ಯದ ಕಿಡಿ ವೈದ್ಯರ ಕಡೆಗೆ ಬೀರಿದ್ದು ನಿಶ್ಯಕ್ತ ನೋಟ. ಆದರೆ ಹೇಳಿದ್ದು "ಡಾಕ್ಟರ್ ನಾನು ಬೇಗ ಹುಷಾರಾಗಬೇಕು...!" "ಆಗುತ್ತಿ" ಎಂದರು ಡಾಕ್ಟರ್.

ಆದರೆ ಈ ಪರಾಕ್ರಮದ ಖಜಾನೆಗೆ ಹುಷಾರಾಗಿ ಮನೆಗೆ ಹೋಗಬೇಕು ಎಂಬ ಯಾವುದೇ ಇರಾದೆಯಿರಲಿಲ್ಲ. ಅವನಿಗಿದ್ದದ್ದು ಭಾರತವನ್ನು ಆವರಿಸಿದ್ದ ಚೀನಿ ಪರದೆಯನ್ನು ಚಿಂದಿ ಮಾಡಬೇಕೆಂಬ ಏಕಮಾತ್ರ ಗುರಿ.

ಶಾರ್ದುಲ ಮಾತು ಮುಂದುವರಿಸಿ, "ಡಾಕ್ಟರ್, ಬೇಗ ಹೋಗಬೇಕು ೮ ಜನರನ್ನು ಮುಗಿಸಿದ್ದೇನೆ... ಅಯ್ಯೋ! ಕೇವಲ ಎಂಟು! ರಣರಂಗಕ್ಕೆ ಹಿಂತಿರುಗಿ ಹೋಗಬೇಕು. ತೀರ ಕಡಿಮೆಯಾಯಿತು! ಗೌರವ ಬರುವಷ್ಟಾದರೂ ಅಂಕಿಯನ್ನು ಹೆಚ್ಚಿಸಬೇಕು. ಗೌರವದ ಸಂಖ್ಯೆ ಮುಟ್ಟಲೇಬೇಕು".


ಆದರೆ ಭ್ರಮೆಯ ಪೊರೆಯೊಳಗಿದ್ದ ಆಗಿನ ಸರ್ಕಾರದಿಂದಾಗಿ ನಮ್ಮ ಪ್ರತಿಷ್ಠೆ ಮಣ್ಣು ಪಾಲಾಯಿತು. ಸ್ವಾತಂತ್ರ್ಯನಂತರದ ಏಕಮಾತ್ರ ಸೋಲು ನಮ್ಮನ್ನು ಬೇಡ ಬೇಡವೆಂದರೂ ನಮ್ಮನ್ನು ಅಪ್ಪಿಕೊಂಡಿತು.

ಅತ್ತ ಮನಸ್ಸಿಲ್ಲದ ಮನಸ್ಸಿನಿಂದ ಶಾರ್ದೂಲ ಸಿಂಗ್‌ನ ಜೀವದೀಪವೂ ಆರಿಹೋಯಿತು.

Saturday, July 23, 2011

ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?

ಲೋಕಾಯುಕ್ತ ವರದಿ ಸೋರಿಕೆಯಾಗುತ್ತಲೆ ಯಡಿಯೂರಪ್ಪ, ರೆಡ್ಡಿ ಸೋದರರು, ಕುಮಾರಸ್ವಾಮಿ, ಅನಿಲ್ ಲಾಡ್ ಸೇರಿದಂತೆ ರಾಜ್ಯದ ಅನೇಕ ಅತಿರಥ ಮಹಾರಥಿಗಳು ಮತ್ತು ಸುಮಾರು ೫೦೦ಕ್ಕೂ ಮಿಕ್ಕ ಅಧಿಕಾರಿಗಳ ಮೇಲಿದ್ದ ಊಹಾಪೋಹ ಆಧಾರಿತ ಆರೋಪಗಳು ಇದೀಗ ತಾತ್ವಿಕ ಮತ್ತು ಸಾಂವಿಧಾನಿಕ ನೆಲಗಟ್ಟಿನ ಮೇಲೆ ನಿಂತ ಆರೋಪಗಳಾಗಿ ಪರಿವರ್ತನೆ ಗೊಂಡಿದೆ.

ಯಡಿಯೂರಪ್ಪ ಸಕಲ ಭ್ರಷ್ಟಾಚಾರ ಕಲಾ ವಲ್ಲಭ ಎಂಬುದನ್ನು ಸಾಬೀತು ಮಾಡಲು ದೇಶದ ಜನರಿಗೆ ಯಾವುದೇ ವರದಿಯ ಅಗತ್ಯವಿರಲಿಲ್ಲ. ಆದರೆ ತಾನು ಭ್ರಷ್ಟಾಚಾರಿ ಎಂದು ಅವರನ್ನು ಅರ್ಥ ಮಾಡಿಕೊಳ್ಳಲು ಮತ್ತು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿಗೆ ಇದು ಗೊತ್ತಾಗಲು ಇಂತಹವೊಂದು ವರದಿ ಅಗತ್ಯವಾಗಿತ್ತು. ಆ ಕೆಲಸವನ್ನು ನ್ಯಾ. ಸಂತೋಷ್ ಹೆಗ್ಗಡೆ ಮಾಡಿ ಮುಗಿಸಿದ್ದಾರೆ.

ಯಡಿಯೂರಪ್ಪ ಕರ್ನಾಟಕದ ಸಂಪತ್ತನ್ನು ಸುಮಾರು ೫ ವರ್ಷಗಳಿಂದ ಹುಲುಸಾಗಿ ಮೇಯುತ್ತಿದ್ದಾರೆ, ಕಳೆದ ಮೂರು ವರ್ಷಗಳಲ್ಲಿ ಅದು ಮಿತಿ ಮೀರಿದೆ. ಪ್ರತಿಯೊಂದಕ್ಕೂ ಕೊನೆ ಎಂಬುದು ಇದ್ದೆ ಇರುತ್ತದೆ. ಅದೇ ರೀತಿ ಯಡಿಯೂರಪ್ಪರ ಭ್ರಷ್ಟ ಆಡಳಿತಕ್ಕೆ ಕೊನೆಯ ಷರಾವನ್ನು ಲೋಕಾಯುಕ್ತದ ಈ ವರದಿ ಬರೆಯುತ್ತದೆಯೋ? ಇಲ್ಲ, ೨ ವರ್ಷಗಳ ಬಳಿಕ ಕರ್ನಾಟಕದ ಪ್ರಜ್ಙಾವಂತ ಜನರೇ ಬರೆಯಬೇಕಾಗುತ್ತದೆಯೇ? ಎಂಬುದು ಈಗಿರುವ ಪ್ರಶ್ನೆ...

ಬಹುಶಃ ಯಡಿಯೂರಪ್ಪರಿಗೆ ಅಧಿಕಾರ ಹಸ್ತಾಂತರ ಮಾಡಲು ಇದಕ್ಕಿಂತ ಸುಸಂದರ್ಭ ಮುಂದೆ ಬರುವುದು ಅನುಮಾನ, ಅದೇ ರೀತಿ ಯಡಿಯೂರಪ್ಪರಿಂದ ರಾಜೀನಾಮೆ ಕೇಳಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಯನ್ನು ಅನುಸ್ಥಾಪಿಸಲು ಬಿಜೆಪಿ ಹೌಕಮಾಂಡ್‌ಗೂ ಇದು ಸುವರ್ಣವಕಾಶ. ಆದರೆ ಯಡಿಯೂರಪ್ಪ ತಮ್ಮ ಹಠವನ್ನು ಬಿಡುವರೇ ಅಥವಾ ಮತ್ತೇ ತನ್ನ ಲಿಂಗಾಯತ ಆಸ್ತ್ರವನ್ನು ಬಿಟ್ಟು ಹೈಕಮಾಂಡ್ ಅನ್ನು ನಿಶ್ಯಸ್ತ್ರಗೊಳಿಸವರೇ ಎಂಬುದು ಈ ಸಮಯದ ಕುತುಹಲ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಒಪ್ಪಿದರೆ ಬಿಜೆಪಿ ಶೋಭಾ ಕರಂದ್ಲಾಜೆ, ಆರ್. ಅಶೋಕ್, ವಿ ಎಸ್ ಅಚಾರ್ಯ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಸುರೇಶ್ ಕುಮಾರ್ ಅಥವಾ ಅನಂತ್ ಕುಮಾರ್‌ರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿಸುವ ಸಾಧ್ಯತೆಯಿದೆ. ಇನ್ನು ಕಪ್ಪು ಕುದುರೆಗಳು ಕೂಡ ಅಚಾನಕ್ ಆಗಿ ರಂಗ ಪ್ರವೇಶಿಸಿ ರೇಸ್‌ಗೆಲ್ಲಲು ಬಹುದು. ಈ ರಾಜಕೀಯದಲ್ಲಿ ಎಲ್ಲವೂ ಸಾಧ್ಯ!

ಇಲ್ಲಿ ಸದಾನಂದ ಗೌಡ ಮತ್ತು ಅನಂತ್ ಕುಮಾರ್ ಲೋಕಸಭೆ ಸದಸ್ಯರು. ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಅಂದರೆ ಇಂದಲ್ಲ ನಾಳೆ ತಮ್ಮ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನ ಸಭೆ ಪ್ರವೇಶಿಸಬೇಕಾಗುತ್ತದೆ. ಆದರೆ ಇದನ್ನು ಪಕ್ಷದ ಹೈಕಮಾಂಡ್ ಒಪ್ಪುವುದು ಅನುಮಾನ. ಅದರಲ್ಲೂ ಯಡಿಯೂರಪ್ಪ ಈಗ ಅನಂತ್ ಕುಮಾರ್‌ರ ನೆರಳು ಕಂಡರು ಕತ್ತಿ ಝಳಪಿಸುತ್ತಿದ್ದಾರೆ. ಅದೇ ರೀತಿ ಅನಂತ್ ಕುಮಾರ್ ಕೂಡ ಒಂದೆರಡು ಬಾರಿ ಯಡಿಯೂರಪ್ಪರ ಪದಚ್ಯುತಿಗಾಗಿ ತಿಪ್ಪರಲಾಗ ಹಾಕಿದ್ದರು. ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಹುಬ್ಬಳಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅನಂತ್‌ರ ಹಾಜರಾತಿಯೇ ಇರಲಿಲ್ಲ. ಒಂದು ವೇಳೆ ಅನಂತ್‌ಗೆ ಪಟ್ಟ ನೀಡಿದರೆ ಯಡಿಯೂರಪ್ಪ ಮತ್ತವರ ಪಡೆ ಪಕ್ಷ ತೊರೆಯುವುದು ನಿಶ್ಚಿತ, ಆ ಕಾರಣದಿಂದ ಬಿಜೆಪಿ ಸರ್ಕಾರವೇ ಪತನವಾಗಬಹುದು. ರಾಜ್ಯ ಮತ್ತೆ ಚುನಾವಣೆ ಎದುರಿಸಬೇಕಾಗಬಹುದು. ಈಗ ಚುನಾವಣೆ ನಡೆದರೆ ಬಿಜೆಪಿ ಕಾರ್ಯಕರ್ತ ಯಡಿಯೂರಪ್ಪರ ಯಾವ ಘನಂದಾರಿ ಕೆಲಸವನ್ನು ಹಿಡಿದು ಕೊಂಡು ಜನರಲ್ಲಿ ಮತ ಯಾಚಿಸಬಲ್ಲ? ಯಡಿಯೂರಪ್ಪರಿಗೆ ಮಾನ ಮಾರ್ಯದೆ ಇಲ್ಲವೆಂದು ಆ ಕಾರ್ಯಕರ್ತನಿಗೂ ಇಲ್ಲವೇ? ಇಲ್ಲಿ ಮತ್ತೊಂದು ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ... ಯಾರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವುದು ಎಂಬ ದೊಡ್ಡ ಪ್ರಶ್ನೆಯದು. ಆಗ ಬಿಜೆಪಿ ಮತ್ತೇ ಗೊಂದಲಕ್ಕೆ ಸಿಳುಕಿ ಕೊಳ್ಳಲಿದೆ. ಇಲ್ಲಿ ಯಾರನ್ನು ಬಿಂಬಿಸಿದರೂ ಜಾತಿಯ ಪ್ರಶ್ನೆ ಅದರ ಕಾಲಿಗೆ, ಮೈಗೆ ಎಲ್ಲ ತೊಡರಿಕ್ಕೊಳ್ಳುತ್ತದೆ. ಅದಕ್ಕಾಗಿ ಸುರಕ್ಷಿತವಾಗಿರೋಣ ಎಂದು ಆದು ಸಮೂಹ ನಾಯಕತ್ವದ ಮೊರೆ ಹೋಗಬಹುದು. ಆದರೆ ಇಲ್ಲಿ ಮತ್ತೇ ಬಣ ಸಂಸ್ಕೃತಿ ಹುಟ್ಟಿಕೊಂಡು (ಇದರರ್ಥ ಈಗ ಇಲ್ಲ ಎಂದಲ್ಲ) ಪಕ್ಷವನ್ನು ರಾಜ್ಯದಲ್ಲಿ ಹೇಳ ಹೆಸರಿಲ್ಲದ ಹಾಗೆ ಮಾಡುವುದು ನಿಶ್ಚಿತ. ಅದ್ದರಿಂದ ಅನಂತ್ ಕುಮಾರ್‌ಗೆ ಹೋಲಿಸಿದರೆ ಸದಾನಂದ ಗೌಡ ಉತ್ತಮ ಆಯ್ಕೆ ಎಂದು ಬಿಜೆಪಿ ಹೈಕಮಾಂಡ್ ಭಾವಿಸಬಹುದು. ಬಿಜೆಪಿ ಅಧಿಕಾರಕ್ಕೆ ಬಂದಾಗ ಸದಾನಂದ ಗೌಡ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದರು ಎಂಬುದು ಇಲ್ಲಿ ಉಲ್ಲೇಖನಿಯ. ಅವರು ಯಡಿಯೂರಪ್ಪರ ಆಪ್ತ ವಲಯದಲ್ಲಿರುವುದರಿಂದ ಅವರಿಗೆ ಯಡಿಯೂರಪ್ಪರಿಂದ ಅಡ್ಡಿಯಾಗಲಾರದು. ಆದರೆ ಹಸನ್ಮುಖಿ ಸದಾನಂದ ಗೌಡರು ಒಕ್ಕಲಿಗ ವರ್ಗದವರಾಗಿರುವುದರಿಂದ ಶೋಭಾ ಕರಂದ್ಲಾಜೆ ಮತ್ತು ಆರ್ ಆಶೋಕ್ ಅವರ ಆಯ್ಕೆಗೆ ಅಡ್ಡಗಾಲು ಹಾಕಬಹುದು. ಅದೇನೆ ಇದ್ದರು ಸದಾನಂದ ಗೌಡರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಉಳಿದವರಿಗಿಂತ ಹೆಚ್ಚಿದೆ. ಆದರಲ್ಲೂ ಶೋಭಾರಿಗೆ ಬೇಸರವಾದರೆ ಯಡಿಯೂರಪ್ಪ ಸುಮ್ಮನಿರುತ್ತಾರೆಯೇ? ಅದ್ದರಿಂದ ಇವರಿಬ್ಬರು ನೇರವಾಗಿ ತಾವೇ ಮುಖ್ಯಮಂತ್ರಿ ಆಗುವ ಪ್ರಯತ್ನ ಮಾಡುವುದು ಬಿಟ್ಟು ತಮ್ಮವರನ್ನು ಮುಖ್ಯಮಂತ್ರಿಯನ್ನಾಗಿಸಲು ಅವಿರತವಾಗಿ ಶ್ರಮಿಸುವ ಸಾಧ್ಯತೆಯೇ ಹೆಚ್ಚು.

ಇನ್ನು ರೆಡ್ಡಿ ಸೋದರರು ಮುಖ್ಯಮಂತ್ರಿ ಬಿಡಿ ಮಂತ್ರಿ ಸ್ಥಾನ ಉಳಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ. ಬಹುಶಃ ಅವರ ಕೈಯಿಂದ ಮಂತ್ರಿ ಹುದ್ದೆ ಕಿತ್ತುಕೊಳ್ಳುವುದು ನಿಶ್ಚಿತ. ಆದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಜಗದೀಶ್ ಶೆಟ್ಟರ್‌ನ್ನು ಕೂರಿಸಲು ತೆರೆ ಮರೆಯ ಪ್ರಯತ್ನ ಮಾಡುವುದು ಖಂಡಿತ. ಆದರೆ ಅವರ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕುವುದು ಅನುಮಾನ ಅಥವಾ ಅವರ ಪ್ರಯತ್ನವೇ ಶೆಟ್ಟರ್‌ರ ಆಸೆಗೆ ತಣ್ಣೀರಾಗಲು ಬಹುದು. ಶೆಟ್ಟರ್ ಆಯ್ಕೆಯನ್ನು ಯಡಿಯೂರಪ್ಪ ಸುತಾರಾಂ ಒಪ್ಪುವುದಿಲ್ಲ. ಎಲ್ಲಿಯಾದರೂ ಬಿಜೆಪಿ ಶೆಟ್ಟರ್‌ನ್ನು ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿದರೆ ಯಡಿಯೂರಪ್ಪ ಇದು ತನಗೆ ಮುಳುಗು ನೀರು ಎಂದೆ ಭಾವಿಸುತ್ತಾರೆ ಮತ್ತು ಅವರು ಪಕ್ಷದಿಂದ ಹೊರ ಹೋಗುವ ಸಾಧ್ಯತೆಯೇ ಹೆಚ್ಚು. ಯಡಿಯೂರಪ್ಪ ತಾವು ಮುಖ್ಯಮಂತ್ರಿಯಗುವ ಮುಂಚೆಯೆ ಬಿ ಬಿ ಶಿವಪ್ಪ, ಬಸವರಾಜ್ ಪಾಟೀಲ್ ಸೆಡಂ ಮುಂತಾದವರ ರಾಜಕೀಯ ಭವಿಷ್ಯವನ್ನೇ ನುಂಗಿ ನೀರು ಕುಡಿದವರು. ಅದೇ ಬುದ್ಧಿಯನ್ನು ಮತ್ತೂ ಮುಂದುವರಿಸಿ ಬಸನಗೌಡ ಪಾಟೀಲ್ ಯತ್ನಾಲ್‌ರನ್ನು ಪಕ್ಷದಿಂದ ಹೊರ ಹೋಗುವಂತೆ ಮಾಡಿದ್ದರು. ಇದೇ ರೀತಿ ಶೆಟ್ಟರ್ ಕೊರಳಿಗೆ ಉರುಳಾಗುವ ಅನೇಕ ದಾಳಗಳನ್ನ ಎಸೆದು ಅವರನ್ನು ರಾಜಕೀಯವಾಗಿ ಇಲ್ಲವಾಗಿಸಲು ಸಾಕಷ್ಟು ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇಲ್ಲೇ ಯಡಿಯೂರಪ್ಪರ ಸೋಗಲಾಡಿತ ಬಟಾ ಬಯಲಾಗುತ್ತದೆ. ಅವರು ನಿಜವಾಗಿಯೂ ಲಿಂಗಾಯತರ ಹಿತ ಚಿಂತನೆ ಮಾಡುವವರೇ ಆದರೆ "ನಾನು ಹೋದರೆ ಹೋಗಲಿ ಮತ್ತೊಬ್ಬ ಲಿಂಗಾಯತ ರಾಜ್ಯದ ಮುಖ್ಯಮಂತ್ರಿ ಅಗುತ್ತಾನೆ, ಆಗಲಿ ಬಿಡಿ ನಮ್ಮ ಸಮುದಾಯಕ್ಕೆ ಒಳ್ಳೆದಾಗಲಿ" ಎಂದು ಶೆಟ್ಟರ್‌ಗೆ ಅವಕಾಶ ಮಾಡಿಕೊಡುತ್ತಿದ್ದರು. ಆದರೆ ಅವರಿಗೆ ಇಡೀ ಲಿಂಗಾಯತ ಸಮುದಾಯಕ್ಕೆ ತಾನೊಬ್ಬನೆ ಏಕಚಕ್ರಾಧಿಪತಿ ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಸ್ವಾರ್ಥ ಮುಖ್ಯವೇ ಹೊರತು ಆ ಸಮುದಾಯದ ಒಳಿತಲ್ಲ. ಲೋಕಾಯುಕ್ತ ವರದಿಯ ಬಳಿಕವು ಲಿಂಗಾಯತ ಸಮುದಾಯ ಯಡಿಯೂರಪ್ಪರ ಹಿಂದೆ ಮೊದಲಿನಂತೆ ನಿಲ್ಲುತ್ತದೆ ಎಂದು ಭಾವಿಸುವ ಹಾಗಿಲ್ಲ. ಭ್ರಷ್ಟರ ರಕ್ಷಣೆಗೆ ನಿಲ್ಲುವಷ್ಟು ನಮ್ಮ ಯಾವುದೇ ಮಠ ಮಾನ್ಯಗಳು, ಸಮುದಾಯಗಳು ಕೆಟ್ಟು ಹೋಗಿಲ್ಲ ಎಂದೆ ನಾನು ಭಾವಿಸುತ್ತೇನೆ. ಇಲ್ಲಿ ಶೆಟ್ಟರ್‌ರನ್ನು ಆಯ್ಕೆ ಮಾಡುವ ರಿಸ್ಕ್‌ನ್ನು ಹೈಕಮಾಂಡ್ ತೆಗೆದುಕೊಳ್ಳಹುದು. ಆದರೆ ಅದು ಯಡಿಯೂರಪ್ಪ ಪಕ್ಷ ತೊರೆಯುತ್ತಾರೆ ಎಂದರೆ ಅವರ ಹಿಂದೆ ಎಷ್ಟು ಜನ ಶಾಸಕರು ಹೋಗುತ್ತಾರೆ ಎಂದು ಲೆಕ್ಕ ಹಾಕಿಕೊಂಡ ಬಳಿಕವೇ ತೆಗೆದುಕೊಳ್ಳಬಹುದಾದ ಕ್ಯಾಲ್ಕುಲೇಟೆಡ್ ರಿಸ್ಕ್.

ಇಂದು ಕಾಂಗ್ರೆಸ್‌ನಲ್ಲಾಗಲಿ, ಜಾತ್ಯತೀತ ಜನತಾದಳದಲ್ಲಾಗಲಿ ಪ್ರಬಲ ಲಿಂಗಾಯತ ನಾಯಕರುಗಳಿಲ್ಲ. ಜನತಾದಳ ಎಂದರೆ ನೆನಪಾಗುವುದು ಗೌಡ ಫ್ಯಾಮಿಲಿ. ಯತ್ನಾಲ್ ಲಿಂಗಾಯತ ಸಮುದಾಯದವರಾಸರು ಪ್ರಭಾವಿ ಮಟ್ಟಕ್ಕೆ ಇನ್ನೂ ಏರಿಲ್ಲ. ಇನ್ನು ಕಾಂಗ್ರೆಸ್‌ನ ನಾಯಕರ ಪಟ್ಟಿ ತೆಗೆದರೆ ಅಲ್ಲಿ ನೆನಪಾಗುವ ಹೆಸರುಗಳನ್ನೊಮ್ಮೆ ನೋಡಿ ಪರಮೇಶ್ವರ್, ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ್, ಎಚ್ ವಿಶ್ವನಾಥ್, ವೀರಪ್ಪ ಮೊಯಿಲಿ, ಎಸ್ ಎಮ್ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಆರ್ ವಿ ದೇಶಪಾಂಡೆ ಇವರಲ್ಲಿ ಯಾರು ಲಿಂಗಾಯತರಿಲ್ಲ. ಆದರೆ ಬಿಜೆಪಿಯಲ್ಲಿ ಯಡ್ಡಿ ಬಿಟ್ಟರೆ ಶೆಟ್ಟರ್ ಇದ್ದಾರೆ. ಇವರಿಬ್ಬರನ್ನು ಬಿಟ್ಟರೆ ಬಸವರಾಜ ಬೊಮ್ಮಾಯಿ ಇದ್ದಾರೆ. ಆದ್ದರಿಂದ ಯಡಿಯೂರಪ್ಪ ಪಕ್ಷ ತೊರೆದರೆ ಅಥವಾ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಇಡೀ ಲಿಂಗಾಯತ ಸಮುದಾಯ ಬಿಜೆಪಿಯನ್ನು ಬಹಿಷ್ಕರಿಸಿ ಬೇರೆ ಪಕ್ಷಗಳ ಹಿಂದೆ ಹೋಗುತ್ತಾರೆ ಎಂದು ನಂಬುವುದೇ ಮೂರ್ಖತನ. ಇದೆಲ್ಲ ಯಡಿಯೂರಪ್ಪ ಸೃಷ್ಟಿಸಿರುವ ಭ್ರಮೆಗಳಷ್ಟೆ.

ಇನ್ನು ಯಡಿಯೂರಪ್ಪ ತಮ್ಮ ಪರಮಾಪ್ತೆ ಶೋಭಾ ಕರಂದ್ಲಾಜೆಯವರನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಿಸುವ ಸಾಧ್ಯತೆ ನಿಚ್ಛಳ. ಕರಂದ್ಲಾಜೆಯ ಕೆಲಸದ ಹಸಿವು ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಅವರ ಆಯ್ಕೆಯನ್ನು ವಿರೋಧಿಸುವ ಪ್ರಬಲ ಗುಂಪು ಪಕ್ಷದೊಳಗೆ ಇದೆ. ಇನ್ನೊಂದು ನಿಟ್ಟಿನಲ್ಲಿ ಹೇಳುವುದಾದರೆ ಯಡಿಯೂರಪ್ಪ ಹಗರಣಗಳ ಕಿರಿಕಿರಿಯಿಂದಾಗಿ ಪದಚ್ಯುತರಾದರೆ ಅಕಾಲ ರಾಜಕೀಯ ಮುಸ್ಸಂಜೆ ತಲುಪಿದಂತೆ. ಆ ಬಳಿಕ ಶೋಭಾ ಬಿಜೆಪಿಯಲ್ಲಿ ತನ್ನ ದಾರಿಯನ್ನು ತಾನೆ ಕಂಡುಕೊಳ್ಳಬೇಕಾಗುತ್ತದೆ. ಇಲ್ಲಿ ಆಕೆ ಲಿಂಗಾಯತ ನಾಯಕರಾದ ಶೆಟ್ಟರ್, ಕೇಂದ್ರದಲ್ಲಿ ಪ್ರಭಾವಿಯಾಗಿರುವ ಅನಂತ್ ಕುಮಾರ್ ಮತ್ತು ತನ್ನದೇ ಒಕ್ಕಲಿಗ ಸಮುದಾಯದ ಆರ್. ಆಶೋಕ್‌ರ ಪ್ರಬಲ ರಾಜಕೀಯ ನಡೆಗಳನ್ನು ಎದುರಿಸಿ ತನ್ನ ಭವಿಷ್ಯವನ್ನು ಕಂಡುಕೊಳ್ಳುವುದು ನಿಜಕ್ಕೂ ಕಠಿಣ. ಅದರ ಬದಲು ತಾನು ಯಡಿಯೂರಪ್ಪರ ನೆರಳಿನಿಂದ ಹೊರ ಬಂದು, ಬಿಜೆಪಿಯಲ್ಲಿ ತನ್ನದೆ ಆದ ಅಸ್ತಿತ್ವವನ್ನು ಕಾಣುವವರೆಗೆ ಆಕೆ ಕಾಯುವುದೇ ಒಳಿತು. ಒಂದು ವೇಳೆ ಶೋಭಾ ಆಯ್ಕೆಗೆ ನಿರೀಕ್ಷಿತ ವಿರೋಧ ವ್ಯಕ್ತವಾಗದೇ ಹೋದರೆ ಆಕೆ ಚಿಕ್ಕ ಪುಟ್ಟ ವಿರೋಧವನ್ನು ಲೆಕ್ಕಿಸದೇ ಈ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳುವುದೇ ಉತ್ತಮ. ಶೋಭಾರನ್ನು ಸಿಎಮ್ ಮಾಡಿದರೆ ಯಡಿಯೂರಪ್ಪರ ತಾನು ಲಿಂಗಾಯತ ಸಮುದಾಯದ ಹಿತ ರಕ್ಷಕ ಎಂಬ ಸ್ವ ಘೋಷಿತ ಇಮೇಜ್‌ಗೆ ಧಕ್ಕೆ ಉಂಟು ಮಾಡಬಹುದು. ಆದರೆ ನ್ಯಾ. ಸಂತೋಷ್ ಹೆಗ್ಗಡೆಯವರ ಮಾತಿನಲ್ಲೆ ಹೇಳುವುದಾದರೆ ಒಂದು ತಪ್ಪಿನಲ್ಲಿ ಶೆ. ೫೦ ಭಾಗ ಪಾಪ(ಶಿಕ್ಷೆ) ತಪ್ಪು ಮಾಡಿದವನದ್ದು, ಶೇ. ೨೫ ಭಾಗ ಪಾಪ (ಶಿಕ್ಷೆ) ಅದಕ್ಕೆ ಪ್ರೋತ್ಸಾಹ ನೀಡಿದವನದ್ದು ಹಾಗೂ ಶೇ. ೨೫ ಭಾಗ ಪಾಪ (ಶಿಕ್ಷೆ) ಆ ತಪ್ಪನ್ನು ನೋಡಿಯೂ ಸುಮ್ಮನಿದ್ದವನದ್ದು. ಅಂದರೆ ಕರಂದ್ಲಾಜೆ ಈಗಾಗಲೇ ಶೇ ೫೦ರಷ್ಟು ಪಾಪ ಮಾಡಿದ್ದಾರೆ. ಇದನ್ನೆ ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಅವರು ಯಡಿಯೂರಪ್ಪ ಮಾಡಿದ ತಪ್ಪಿಗೆ  ಶೇ. ೫೦ರಷ್ಟು ಶಿಕ್ಷೆ ಪಡೆಯಲು ಆರ್ಹರು. ಯಡ್ಡಿಯ ಆಖಿಲಾಂಡ ಕೋಟಿ ಭ್ರಷ್ಟಾಚಾರದ ಬಗ್ಗೆ ಆಕೆಗೆ ಗೊತ್ತೇ ಇರಲಿಲ್ಲವೆಂದರೆ ಆಕೆ ಯಡ್ಡಿಯ ಪರಮಾಪ್ತೆ ಎಂಬುದಕ್ಕೆ ಆರ್ಥವೇ ಇಲ್ಲ. ಇನ್ನೊಂದು ಅಂಶವೆಂದರೆ ಯಡಿಯೂರಪ್ಪ ಶೋಭಾರನ್ನು ಮುಖ್ಯಮಂತ್ರಿಯನ್ನಾಗಿಸಲು ಪ್ರಯತ್ನಿಸುತ್ತಿರುವುದು ಪರೋಕ್ಷವಾಗಿ ತಾನು ರಾಜ್ಯವನ್ನು ಮುನ್ನಡೆಸಬೇಕು ಎಂಬ ಉದ್ದೇಶ ಮತ್ತು ತನ್ನವರೇ ಸಿಎಮ್ ಆಗಿದ್ದರೆ ಸರ್ಕಾರವನ್ನು ತನ್ನ ಮೇಲಿರುವ ಆರೋಪಗಳಿಗೆ ಗುರಾಣಿ ಯನ್ನಾಗಿಸಬಹುದು ಎಂಬ ಕಾರಣಕ್ಕಾಗಿ. ಅದ್ದರಿಂದ ಶೋಭಾ ಕರಂದ್ಲಾಜೆ ತನ್ನ ಸುದೀರ್ಘ ರಾಜಕೀಯ ಭವಿಷ್ಯದ ಒಳಿತಿಗಾಗಿ ಈ ಕೊಡುಗೆಯನ್ನು ತಿರಸ್ಕರಿಸುವುದೇ ಕ್ಷೇಮ.

ಆರ್ ಆಶೋಕ್ ಮೊದಲು ಅನಂತ್ ಕುಮಾರ್ ಬಣದೊಂದಿಗೆ ಗುರುತಿಸಿಕೊಂಡಿದ್ದವರು. ಆ ಬಳಿಕ ತಮ್ಮ ಬಣ ನಿಷ್ಠೆಯನ್ನು ಯಡಿಯೂರಪ್ಪ ಕ್ಯಾಂಪ್‌ಗೆ ಬದಲಿಸಿ ಮಹತ್ವದ ಗೃಹ ಮತ್ತು ಸಾರಿಗೆ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೆರಡು ಹಗರಣಗಳ ಕಲೆ ಮೈಮೇಲೆ ಮೆತ್ತಿಕೊಂಡಿವೆ. ಬಿಜೆಪಿಯಲ್ಲಿನ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಪ್ರಸಕ್ತ ರಾಜ್ಯ ಬಿಜೆಪಿಯಲ್ಲಿರುವ ಬಣಗಳನ್ನು ಕೇವಲ ಎರಡಕ್ಕೆ ಸೀಮಿತಗೊಳಿಸಿ ಮಾತನಾಡಿದರೆ ಆರ್ ಆಶೋಕ್‌ರ ಉಮೇದುದಾರಿಕೆಯನ್ನು ಎರಡು ಬಣಗಳು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಎಲ್ಲಾದರೂ ವಿರೋಧ ವ್ಯಕ್ತ ಪಡಿಸಿದರೆ ಅದು ಯಡಿಯೂರಪ್ಪ ಬಣವಾಗಿರುವ ಸಾಧ್ಯತೆ ಸಂಭವ ಇದೆ. ಕಾರಣ ಶೋಭಾ ಫ್ಯಾಕ್ಟರ್!

ಇನ್ನು ಸುರೇಶ್ ಕುಮಾರ್ ಮತ್ತು ವಿ ಎಸ್ ಆಚಾರ್ಯ ಇಬ್ಬರು ಕೂಡ ಮುಖ್ಯಮಂತ್ರಿ ಸ್ಥಾನದ ಪೈಪೋಟಿಗೆ ಅನಿವಾರ್ಯವಾಗಿ ಬಿದ್ದಿದ್ದಾರೆ. ಇಬ್ಬರಿಗೂ ಪ್ರಾಮಾಣಿಕತೆಯೇ ಆಸ್ತಿ. ಇಲ್ಲಿ ವಿ ಎಸ್ ಆಚಾರ್ಯ ಯಡಿಯೂರಪ್ಪ ಕೃಪಾಪೋಷಿತ ಬಂಡಾಯ ಮತ್ತು ಸಮಾಧಾನ ಮಂಡಳಿಯ ಖಾಯಂ ಸದಸ್ಯ. ಆಚಾರ್ಯರಿಗೆ ಯಡಿಯೂರಪ್ಪರ ಪೂರ್ಣ ರಕ್ಷೆಯಿದೆ. ಹಾಗೆಂದು ಅವರನ್ನು ವಿರೋಧಿಸುವರು ಆಚಾರ್ಯ ಯಡ್ಡಿ ಬಣಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕಾಗಿಯೇ ಇವರನ್ನು ವಿರೋಧಿಸಬೇಕು ಅನ್ನುವುದನ್ನು ಬಿಟ್ಟು ಬೇರೆ ಕಾರಣಗಳಿಲ್ಲ. ಇನ್ನು ಸುರೇಶ್ ಕುಮಾರ್‌ರ ಪ್ರಮಾಣಿಕತೆ, ಸಂವೇದನಶೀಲತೆ ಬಗ್ಗೆ ಎರಡು ಮಾತಿಲ್ಲ. ಆವರ ಆಯ್ಕೆಯನ್ನು ಯಾವ ಬಣಗಳು ಕೂಡ ನೇರವಾಗಿ ವಿರೋಧಿಸಲಾರವು. ಆದರೆ ಸುರೇಶ್ ಕುಮಾರ್‌ರ ಪ್ರಾಮಾಣಿಕತೆಯ ಜೊತೆ ಹೆಜ್ಜೆ ಹಾಕಲಾಗದ ಕೆಲವು ಶಕ್ತಿಗಳು ಅವರ ಆಯ್ಕೆಯನ್ನು ವಿರೋಧಿಸುವ ಸಾಧ್ಯತೆ ಇದೆ. ಇವರಿಬ್ಬರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಜಾತಿಯ ಪ್ರಾಬಲ್ಯತೆಯೆ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಮಾನದಂಡವಾಗುವುದಾದರೆ ಇವರಿಬ್ಬರ ಉಮೇದುದಾರಿಕೆಯೂ ಮೂಲೆ ಗುಂಪಾಗುತ್ತದೆ.

ವಾಸ್ತವವಾಗಿ ಜಾತಿಯನ್ನೇ ಮಾನದಂಡವಾಗಿಸಿ ಮತದಾರ ಮತದಾನ ಮಾಡುತ್ತಾನೆ ಎಂದಾದರೆ ಗುಜರಾತ್‌ನಲ್ಲಿ ನರೇಂದ್ರ ಮೋದಿ, ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತ ನಡೆಸಲು ಸಾಧ್ಯವೇ ಇರಲಿಲ್ಲ. ಅದು ಎರಡೆರಡು ಬಾರಿಗೆ! ಖ್ಯಾತ ನಟಿ ಕತ್ರಿನಾ ಕೈಫ್‌ರ ಮಾತಿನಲ್ಲೇ ಹೇಳುವುದಾದರೆ ಅರ್ಧ ಭಾರತೀಯನಾಗಿರುವ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅದು ಹೇಗೆ ತನ್ನ ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತದೆ? ಅವರಿಗೆ ಮತ ಹಾಕಬಹುದಾದ ಅರ್ಧ ಭಾರತೀಯರು ದೇಶದಲ್ಲಿ ಎಷ್ಟು ಜನ ಇದ್ದಾರೆ? ಜಾತಿಯ ಹೆಸರು ಹೇಳಿ ರಾಜಕೀಯ ಮಾಡುವುದು ದುರ್ಬಲತೆಯ ಲಕ್ಷಣ. ಆ ಜಾತಿಯ ಮಂತ್ರಕ್ಕೆ ಬೆದರಿ ಕೂರುವುದು ಪುಕ್ಕಲುತನದ ಪರಮಾವಧಿ.

ಇನ್ನು ಯಡಿಯೂರಪ್ಪರ ಮೇಲೆ ಸಾಲು ಸಾಲು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಸಿಇಸಿ ಸುಪ್ರಿಂ ಕೋರ್ಟ್‌ಗೆ ತನ್ನ ಪೂರ್ಣ ವರದಿ ನೀಡಲು ಬಾಕಿಯಿದೆ.ಅದ್ದರಿಂದ ಅವರು ರಾಜೀನಾಮೆ ನೀಡಿದರೆ ಇಲ್ಲಿಗೆ ಎಲ್ಲವೂ ಮುಕ್ತಾಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಅವರು ಮುಖ್ಯಮಂತ್ರಿ ಸ್ಥಾನದಲ್ಲೇ ಉಳಿದರೆ ಆ ಪ್ರಕರಣಗಳು, ಅದರ ವಿಚಾರಣೆ ಸರ್ಕಾರ ಮತ್ತು ಬಿಜೆಪಿಗೆ ಕೆಟ್ಟ ಹೆಸರು ಮತ್ತು ಆಗಾಗ ತಲೆ ನೋವು ತರಲಿದೆ. ಅದ್ದರಿಂದ ಒಮ್ಮೆಲೆ ಯಡ್ಡಿ ಮತ್ತು ಸರ್ಕಾರಕ್ಕಿರುವ ಸಂಬಂಧವನ್ನು ಕಡಿದು ಹಾಕಿ ಅವರನ್ನು ಆಡಳಿತ ಪಕ್ಷದ ಶಾಸಕ ಸ್ಥಾನದಲ್ಲಿ ಕೂರಿಸಿ ಬಿಟ್ಟರೆ, ಬೀಸೋ ದೊಣ್ಣೆ ತಪ್ಪಿದಂತೆ. ನಂತರ ಅವರಾಯಿತು ಅವರ ಪ್ರಕರಣಗಳಾಯಿತು ಅಂತ ಸುಮ್ಮನಿರಬಹುದು.

ಹಾಗೇ ಮುಂದೆ ಮುಖ್ಯಮಂತ್ರಿ ಆಗುವಾತ, ಆದಷ್ಟು ಪಕ್ಷದಲ್ಲಿ ಗುಂಪುಗಾರಿಕೆ ಹುಟ್ಟಿಕೊಳ್ಳದಂತೆ ನೋಟಿಕೊಳ್ಳಬೇಕಿದೆ. ಯಡ್ಡಿ ಜೊತೆ ಗುರುತಿಸಿಕೊಳ್ಳುವವರನ್ನು ಆದಷ್ಟು ಮುಖ್ಯ ವಾಹಿನಿಗೆ ಎಳೆಯುವ ಕಠಿಣ ಕೆಲಸ ಮಾಡಬೇಕಿದೆ. ಏಕೆಂದರೆ ಯಡ್ಡಿ ಯಾವುದೇ ಕ್ಷಣದಲ್ಲಿ ಬಗಲ ಮುಳ್ಳಾಗಬಹುದು.  

ರಾಜ್ಯದ ಬಿಜೆಪಿ ಶಾಸಕರುಗಳೇ ನಿಮಗೆ ಮಾನ, ಮಾರ್ಯಾದೆ, ನಾಚಿಕೆ ಇತ್ಯಾದಿ ಇದೆ ಎಂದಾದರೆ ದಯಮಾಡಿ ಯಡಿಯೂರಪ್ಪರನ್ನು ಸಿಎಮ್ ಸ್ಥಾನದಿಂದ  ಕೆಳಗಿಳಿಸುವ ಪ್ರಯತ್ನ ಮಾಡಿ. ಇಲ್ಲವೆಂದರೆ ಮುಂದಿನ ಚುನಾವಣೆಯಲ್ಲಿ ನೀವು ಗಂಟು ಮೂಟೆ ಕಟ್ಟುವ ಹಾಗೆ ಮತದಾರರಾದ ನಾವು ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಯಡಿಯೂರಪ್ಪ ಕಳೆದ 3 ವರ್ಷಗಳಿಂದ ಮಾಡುತ್ತಲೇ ಇದ್ದಾರೆ. ಎಚ್ಚರ!

Wednesday, July 20, 2011

ನಾಳೆ ಮದುವೆ ಆದ ಮೇಲೂ ನಾನು ತರಕಾರಿ ಕೊಂಡು ಹೋಗ್ಬೇಕಾಗುತ್ತಾ?

’ಆಟೋ’ಬಯೋಗ್ರಾಫಿ - ಭಾಗ ೨

ಯಾವುದಕ್ಕೆ ಕೈ ಹಿಡಿಯೋದು... ಜನ ಕಡಿಮೆ ಇರುವುದಕ್ಕಾ? ಹುಡುಗಿಯರು ಇರುವುದಕ್ಕಾ? ಅಲ್ಲಾ ಉದ್ದನೆದಕ್ಕಾ...? ನೋಡುವ ಯಾವುದಾದರೆ ಏನು? ಹಣೆಯಲ್ಲಿ ಬರೆದದ್ದು.... ಹೋ... ದೇವರು ಇದನ್ನು ಕೂಡ ಹಣೆಯಲ್ಲಿ ಬರೆದಿರುತ್ತಾನಾ? ಇಲ್ಲ... ಇದೆಲ್ಲಾ ಬರೆದಿರಲಿಕ್ಕಿಲ್ಲ... ಅಲ್ಲಾ ನಾನು ಹೋಗುವಾಗ ಎಲ್ಲಾದರೂ ಆಕ್ಸಿಡೆಂಟ್ ಆದರೆ... ಹೌದಲ್ಲ... ಇಲ್ಲ ಅವನು ಆಕ್ಸಿಡೆಂಟ್ ಆಗುವಂತದನ್ನು ಮಾತ್ರ ಬರೆದಿರಬಹುದು... ಇರಬಹುದೇನೋ... ಈ ಕಳ್ಳ ಜ್ಯೋತಿಷಿಗಳು ನಮ್ಮ ದೇವರ ಕಲ್ಪನೆಯನ್ನೇ ಹಾಳು ಮಾಡುತ್ತಿದ್ದಾರೆ... ನಾಯಿ ಮಕ್ಕಳು... ಇಲ್ಲ ನಾನು ಆವತ್ತು ಭೇಟಿ ಆದ ಜ್ಯೋತಿಷಿ ನನ್ನ ಬಗ್ಗೆ ಅದೆಷ್ಟು ನಿಖರವಾಗಿ ಹೇಳಿದ್ನಲ್ಲ... ಹುಂ ಜ್ಯೋತಿಷ್ಯ ಸತ್ಯ... ಆದರೆ ಈ ಟಿವಿಯಲ್ಲಿ ಬರೋ ಜ್ಯೋತಿಷಿಗಳಲ್ಲ... ಅವರು ಕಳ್ ನನ್ ಮಕ್ಕಳು... ಏನನ್ನು ಸಾರ್ವತ್ರಿಕರಣ ಮಾಡಬಾರದು... ಹೌದು ನಾನು ಕೂಡ ಅದೆಷ್ಟೋ ಬಾರಿ ಹಾಗೆ ಅಂದ್ಕೊಳ್ಳುತ್ತೇನೆ... ಆದರೂ ಮಾಡಿಯೇ ಬಿಡುತ್ತೇನೆ... ಹೋ... ಇಲ್ಲ ಆ ತರಹ ನಾನು ಮಾಡೋದಿಲ್ಲ... ಮೊದಲಿಗೆ ಹಾಗೇ ಭಾವಿಸಿಕೊಂಡ್ರು ಕೊನೆಗೆ ಪರ್ಟಿಕ್ಯುಲರ್ ಆಗಿರುತ್ತೀನಿ... ಇವತ್ತೇನು ಎಲ್ಲ ರಿಕ್ಷಾಗಳು ಬಸುರಿಯಾಗಿವೆ... ನೋಡೋಣ ರೂಮ್‌ಗೆ ಹೋಗಿ ಕಡಿದು ಕಟ್ಟೆ ಹಾಕೋದು ಏನಿದೆ... 'ಪರ್ವ' ಓದೋಕ್ಕಿದೆ... ನೆಕ್ಸ್ಟ್ ಬರೋ ಗಾಡಿ ಹತ್ತೋದೆ... ಏನು ಬೇಕಾದರೂ ಆಗಲಿ... ಹೋ ಅದು ಖಾಲಿ ಇದೆ... ಕೈ ಹಿಡಿಬೇಕಾ... ಬೇಡ ಅವನೇ ಸ್ಲೋ ಆದ... ಅವನಿಗೆ ಅರ್ಥ ವಾಯಿತು... ಮುಂದೆ ಕೂರೋದ ಅಲ್ಲ... ಹಿಂದೆನಾ... ಹಿಂದೆನೇ ಕೂರೋಣ... ಬೈಯ್ಯಾ ಬಾಸಠ್... ಇವತ್ತು ತರಕಾರಿ ಅಗಬೇಕಲ್ಲ... ಹುಂ... ಏನು ತಗೊಳ್ಳೋದು... ಮಾರ್ಕೆಟ್‌ಗೆ ಹೋಗಿ ನೊಡೋಣ... ತರಕಾರಿ ಜೊತೆ ಏನು ಆಗ್ಬೇಕು... ಸದ್ಯ ಏನು ಬೇಡ ಅನ್ನಿಸುತ್ತೆ.... ಬೇಕು ಅಂದ್ರೆ ಶೆಟ್ರು ಹೇಳ್ತಾರೆ... ಸರಿ ಇವತ್ತು ಜ್ಯೂಸ್... ಕಲ್ಲಂಗಡಿದ್ದೇ ಮಾಡೋಣ... ರೂಂ ಕೀ... ಕಿಸೆಯಲ್ಲೇ ಇದೇ ತಾನೇ... ಮನೆಯಲ್ಲಿ ಅಜ್ಜಿ, ಅಮ್ಮ ಎಲ್ಲ ಅಡಿಗೆ ಮಾಡೋದನ್ನು ದೊಡ್ಡ ಕುಂಬಳಕಾಯಿ ಕೆಲಸದ ಹಾಗೆ ಮಾಡುತ್ತಿದ್ದರು... ಆದರೆ ಇದು ಎಷ್ಟು ಸುಲಭ... ಹುಂ ಎಲ್ಲರಿಗೂ ಅಷ್ಟೆ ಅವರವರ ಕೆಲಸವೇ ದೊಡ್ಡದು... ನಾಳೆ ಮದುವೆ ಆದ ಮೇಲೂ ನಾನು ತರಕಾರಿ ಕೊಂಡು ಹೋಗ್ಬೇಕಾಗುತ್ತಾ? ಯಾರಿಗೆ ಗೊತ್ತು... ಹಣೆಯಲ್ಲಿ ಏನೂ ಬರೆದಿದೆ ಅಂತ... ನಾಲ್ಕು ಜನರ ಮಧ್ಯೆ ರಿಕ್ಷಾ ನಿಲ್ಲಿಸುತ್ತಾನೆ... ತಲೆ ಸರಿಯಿಲ್ವಾ ಇವನಿಗೆ.... ಇವನಲ್ಲ... ಎಲ್ಲ ರಿಕ್ಷಾದವರು ಹೀಗೆಯೇ... ಇಲ್ಲ, ಈಗ ಜನ ಆಗೋದಿಲ್ಲ ಅದರೂ... ಬಾಸಠ್, ವಿಜಯ ನಗರ ಅಂತ ಕರೆಯುತ್ತಾನೆ... ಹೋ ಅವರು ಒಂದು ಈ ರಿಕ್ಷಾ ಹತ್ತದಿದ್ದರೆ ಸಾಕು... ಇಲ್ಲಿನ ಬಸ್ಸಿನವರಿಗೆ ಭಾಷೆ ಅನ್ನುವುದೇ ಇಲ್ಲ... ಮೆಸೆಜ್ ಬಂತಾ ಅಂತ... ಇವನು ಫಾರ್ವರ್ಡ್ ಮೆಸೆಜ್ ಮಾಡಿದ್ದಾನೆ... ಇವರ‍್ಯಾಕೆ ಇಂತಹ ಫಾರ್ವರ್ಡ್ ಮೆಸೆಜ್ ಮಾಡುತ್ತಾರೆ... ಉಪದೇಶ ಕೊಡುತ್ತಾ, ಲವ್ ಅಂದ್ರೆ ಹಾಗೇ, ಫ್ರೆಂಡ್‌ಶಿಪ್ ಅಂದ್ರೆ ಹೀಗೆ ಅಂತ... ಅದ್ರ ಬದಲು ಫನ್ನಿ ಅಗಿರೋ ಮೆಸೆಜ್ ಮಾಡೋಕ್ಕೆ ಆಗೋದಿಲ್ವಾ? ಎಲ್ಲರೂ ಉಪದೇಶ ಕೊಡುವವರೇ ಅಯಿತು... ಅಪ್ಪ, ಅಮ್ಮನಿಂದ ಹಿಡಿದು.... ಇವನ ತನಕ... ನನಗೆ ಬ್ಲ್ಯಾಕ್ ಬೆರಿ ಸೆಟ್ ತಗೋಬೇಕು ಅಂತ ಇತ್ತು... ತಪ್ಪಿದ್ರೆ ಗ್ಯಾಲಕ್ಸಿ... ಕರ್ಮ ಅವೆರಡರಲ್ಲೂ ಡ್ಯೂಯಲ್ ಸಿಮ್ ಇಲ್ಲ... ಸುಧೀರ್ ಜೊತೆ ಬ್ಲ್ಯಾಕ್ ಬೆರಿಯಲ್ಲೂ ಡ್ಯೂಯಲ್ ಸಿಮ್ ಹಾಕಿಸ್ಲಿಕ್ಕೆ ಹೇಳಬೇಕು... ಅವರು ಎನು ಹೇಳ್ತಾರೆ... ನಗ್ತಾರೆ ಅಷ್ಟೆ... ಈ ನೊಯ್ಡಾ ಮುಂದೊಂದು ದಿನ ಇನ್ನು ನಾಲ್ಕೈದು ವರ್ಷದಲ್ಲೇ ಭಾರತದ ನ್ಯೂಯಾರ್ಕ್ ಆಗುತ್ತೆ... ನಾನು ಅದೆಷ್ಟು ಲಕ್ಕಿ... ಮಾಯಾವತಿ ಇಲ್ಲಿ ಒಳ್ಳೆ ಕೆಲಸ ಮಾಡ್ತಾ ಇದ್ದಾಳೆ... ಈ ಫೋರ್ಟಿಸ್ ಪಕ್ಕ ಜಾಮ್ ಆಯಿತಾ... ಈ ಅಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ತುಂಬ ಕೊಸ್ಟ್‌ಲೀ ಅಂತೆ... ಈ ಹಾಸ್ಟಿಟಲ್ ಪಕ್ಕನೂ ಒಂದು ಸಿಗ್ನಲ್ ಲೈಟ್... ಇಲ್ಲೂ ಗಾಡಿ ನಿಲ್ಲಬೇಕು... ನಮ್ಮ ಲೈಫ್‌ಗೂ ಈ ಸಿಗ್ನಲ್‌ಗೂ ಏನೋ ಸಂಬಂಧವಿದೆ... ಹೌದು ನಾವು ಕೂಡ ಅಸ್ಪತ್ರೆಯಲ್ಲಿ ಇರುವಾಗ ವಿಶ್ರಾಂತಿ ಪಡಿತೇವೆ... ಇಲ್ಲೂ ಗಾಡಿ ಪಡೆಯುತ್ತಾ ಇದೆ... ಆದ್ರೆ... ಈ ಸಿಗ್ನಲ್‌ಗೆ ನಮ್ಮ ಗಾಡಿಯವ ಸ್ಪಂದಿಸದಿದ್ದರೆ... ಅದೇ ರೀತಿ ಅಸ್ಪತ್ರೆಯಲ್ಲಿ ಡಾಕ್ಟರ್‌ಗಳ ಮದ್ದಿಗೆ ನಾವು ಸ್ಪಂದಿಸದಿದ್ದರೆ... ಹೋಗೋದು ಯಮಪುರಿಗೆ... ಹೀಗೆ ಸುಮ್ಮನೆ ಕೂತ್ಕೊಂಡಿದ್ದಾಗ ಎಷ್ಟೆಲ್ಲ ಯೋಚನೆ ಬರುತ್ತೆ... ಇದನ್ನು ಬರೆದು ಇಟ್ಕೊಬೇಕು... ಅದೆಲ್ಲಾ ಅಗಿ ಹೋಗೋದು ಅಲ್ಲಾ... ನಾನು ಬರೆದದ್ದೆಲ್ಲವನ್ನು ಇನ್ನೂ ಟೈಪ್ ಮಾಡಿಲ್ಲ... ಇನ್ನೂ ಹೊಸದಾಗಿ ಬರೆಯೋದು... ಅಷ್ಟರಲ್ಲೇ ಇದೆ... ಸಿಗ್ಮಲ್ ಪಾಸ್ ಆಯಿತು ಬಚಾವ್... ಹೋ ಈ ಅಂಟಿ ಹತ್ತುತ್ತಾರ... ಒಳ್ಳೆ ಮಾಂಸ ಪರ್ವತ... ಇವರು ರಮ್ಯನ ತರಹ ಇದ್ದಾರಲ್ಲ... ಹುಂ... ರಮ್ಯನು ೪೦ ವರ್ಷ ಅದಾಗ ಇದೇ ರೀತಿ ಆಗಬಹುದಾ? ಇಲ್ಲ... ಇಲ್ಲ... ಅವಳು ಅಷ್ಟೆ ದಪ್ಪ... ಅದಕ್ಕಿಂತ ದಪ್ಪ ಆಗ್ಲಿಕ್ಕಿಲ್ಲ... ಅದೇ ಮ್ಯಾಕ್ಸಿಮಮ್...ಇನ್ನೂ ದಪ್ಪ ಆದ್ರೆ... ಅವಳದ್ದು ಅವಳ ಅಮ್ಮನ ರೀತಿಯ ಶರೀರ... ಮತ್ತೇ ಹುಡುಗಿಯರನ್ನು ಹೇಳಲು ಆಗುತ್ತಾ... ಎಲ್ಲರೂ ಹುಡುಗಿಯರ ಮನಸ್ಸು ಚಂಚಲ ಅಂತಾರೆ...ಅವರೇನು ಯೋಚಿಸ್ತಾರೆ ಅನ್ನೋದೆ ಗೊತ್ತಾಗುವುದಿಲ್ಲ ಅಂತಾರೆ... ನನ್ನ ಜೊತೆ ಕೇಳಿದ್ರೆ ಅವರ ಮನಸ್ಸು ಮಾತ್ರವಲ್ಲ ದೇಹನೂ ಚಂಚಲ ಅಂತಾ ಹೇಳ್ತೇನೆ...ಯಾವಾಗ ಹೇಗೆ ಆಗುತ್ತೋ... ಆ ಹುಡುಗಿ ಈ ಬಾರಿ ನನಗೆ ಬರ್ತ್ ಡೇ ವಿಶ್ ಮಾಡಿಲ್ಲ ಅಲ್ವಾ... ನಾಲ್ಕು ವರ್ಷದಿಂದ ತಪ್ಪದೇ ವಿಶ್ ಮಾಡುತ್ತಿದ್ದಳು... ಬಿಡು... ಅದೆಲ್ಲ ಯೋಚಿಸುತ್ತ ಇರ‍್ಲಿಕ್ಕಾಗುತ್ತಾ... ಅವಳೇನು ನನಗೆ ಲೈಫ್ ಲಾಂಗ್ ವಿಶ್ ಮಾಡುತ್ತಿರುತ್ತೇನೆ ಅಂದಿದ್ಲಾ... ಇಲ್ಲ ತಾನೇ? ಮತ್ತೇ? ಅವಳ ಜೊತೆ... ನನ್ನ ಫ್ರೆಂಡ್ಸ್ ಅಂದ್ರೆ ಪಿಯುಸಿಯಲ್ಲಿ ಇದ್ದವರು... ಅಬ್ಬಾ... ಏನು ಗಮ್ಮತ್ತು... ಆಗ ಅದೆಷ್ಟು ಕಾರುಬಾರು ಮಾಡಿದ್ವಿ... ಯಾರಿಗೂ ಕ್ಯಾರ್ ಮಾಡುತ್ತಿರಲಿಲ್ಲ... ಪ್ರವೀಣ್‌ಗೆ ಹೊಡೆಯಲು ಹೋದದ್ದು... ಇಲ್ಲ, ನಾನು ಹೊಡಿಯಲು ಹೋಗಿರಲಿಲ್ಲ... ನನ್ನ ಐಡಿ ಸೀಜ್ ಆಗಿದ್ದು... ಹುಂ... ಪುಷ್ಟ, ವಚನ್ ಎಲ್ಲ ಹೊಡಿಯಲು ಹೋಗಿದ್ದು... ನಾನು ಆಗ ಇವರನ್ನೆಲ್ಲ ಬಚಾವ್ ಮಾಡಿದ್ದು... ಆ ಪ್ಲ್ಯಾನ್ ಅಬ್ಬಾ... ಅರ್ಧ ಗಂಟೆಯಲ್ಲಿ ಐಡಿ ನಮ್ಮ ಕೈಯಲ್ಲಿ... ಅಬ್ಬಾ... ಆ ಮಟ್ಟಿಗೆ ಹೋಲಿಸಿದ್ರೆ ಡಿಗ್ರಿ ಬುರ್ನಾಸ್... ಬಿಂಗ್ರಿ ಬರೋದೆ ಆಯಿತು... ಎಲ್ಲ ಫ್ರೆಂಡ್ಸ್ ಹುಡುಗಿಯರ ಹಿಂದೆ ಬಿದ್ದು ಹಾಳಾಗಿ ಹೋದ್ರೂ... ನಾನು... ನಾನೇನು ಡಿಗ್ರಿ ಫೈನಲ್ ಇಯರ್ ತನಕ ಸರಿ ಇದ್ದೆಯಲ್ಲ... ಅಮೇಲೆ... ಹಾಳದ್ನಾ... ಉಮ್ಮಾ... ಇಲ್ಲ... ನಾನು ಹಾಳಗಿಲ್ಲ... ನನ್ನ ಫ್ರೆಂಡ್ಸ್... ಅವರೂ ಹಾಳಗಿಲ್ಲ... ಪಿಯುವಲ್ಲಿ ಐಶ್ವರ್ಯಾ... ಹುಂ ಹೌದು... ಏನೆಲ್ಲ ಸುದ್ದಿ ನಮ್ಮ ಬಗ್ಗೆ... ಆದರೆ ನಿಜ ಗೊತ್ತಿದದ್ದು ನನಗೂ ಅಭಿಗೂ ಮಾತ್ರ... ಇಂದಿಗೂ ಐಶ್ವರ್ಯಾ ಐಶ್ವರ್ಯಾನೇ...

ಅಮೇಲೆ ಲಕ್ಷ್ಮೀ... ನಾನು ಈ ಸಂಪತ್ತನನ್ನು ಸೂಚಿಸುವ ಹೆಸರಿನ ಹುಡುಗಿಯರಿಗೆ ಅದು ಹೇಗೆ ಅಂಟಿಕೊಳ್ಳುತ್ತೇನೋ... ಅವಳು ಆಗ ಹೈಸ್ಕೂಲ್ ಹುಡುಗಿ ತಾನೇ... ಹುಡುಗಿಯರ ಮನಸ್ಸನ್ನು ಹಠದಿಂದ ಗೆಲ್ಲಲಾಗುವುದಿಲ್ಲ ಅಂತಾರಲ್ಲ... ಅದನ್ನು ಸುಳ್ಳು ಎಂದು ನಾನು ಆಗಲೇ ಸಾಬೀತು ಮಾಡಿರಲಿಲ್ವಾ... ಹಠ ಎಂದರೆ ಎಂತಹ ಹಠ... ಅದನ್ನು ನಾನು ಒಳ್ಳೆದಕ್ಕೆ ಬಳಸಿಕೊಂಡಿದ್ದರೆ ಏನೋ ಆಗಿ ಹೋಗುತ್ತಿದೆ... ಆದರೆ ಅವಳು ಇನ್ನೇನೂ ಪ್ರಪೋಸ್ ಮಾಡುತ್ತಾಳೆ ಅಂದಾಗ... ಅದು ಹೇಗೆ ಜಾರಿ ಕೊಂಡು ಬಿಟ್ಟೆ... ನನ್ನದು ಥರ್ಡ್ ಕ್ಲಾಸ್ ಜೀವನ... ನಾನು ಆಗ ಹಾಗೆ ಏಕೆ ಮಾಡಿದೆ...? ಕಾರಣವಿತ್ತು... ಸ್ಪಷ್ಟ ಕಾರಣವಿತ್ತು... ಮೊನ್ನೆ ಅವಳು ಸಿಕ್ಕಾಗ ಹೇಳಿದ್ನಲ್ಲ... ಅವಳ ಎದೆಯಲ್ಲಿ ಇನ್ನೂ ಪ್ರೀತಿ ಸತ್ತಿರಲಿಲ್ಲ... ಮೊದಲ ಪ್ರೀತಿನೇ ಹಾಗೆ... ನಾ ಹೇಳಿ ಮುಗಿಸಿದಾಗ ಅವಳ ಕಣ್ಣಲ್ಲಿ ನೀರು... ನಾನು ಅದೆಷ್ಟು ಹುಡುಗಿಯರ ಕಣ್ಣೀರು ನೋಡಿಲ್ಲ... ಅವರನ್ನು ಸಮಾಧಾನ ಮಾಡುವುದೇ ಒಂದು ಕಲೆ... ನನ್ನ ಕಾರಣ ಕೇಳಿ... ಅವಳಿಗೆ ನನ್ನ ಮೇಲಿದ್ದ ಪ್ರೀತಿ ಮತ್ತೂ ಹೆಚ್ಚಾಗಿದೆ... ನನ್ನದು ಬಿಕ್ನಾಸಿ ಲೈಫ್... ನಾ ಹೇಳಲೇ ಬಾರದಿತ್ತು... ಅಬ್ಬಾ ಈ ರೇಖಾ ನನ್ನನ್ನು ಅದೆಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು... ಅದಕ್ಕೆ ಅವಳು ಬರೆದ ಅಟೋಗ್ರಾಫ್ ಸಾಕ್ಷಿ... ನಿಜಕ್ಕೂ... ನಾನು ಇವತ್ತಿಗೂ ಅಟೋಗ್ರಾಫ್ ತೆಗೆದಿಟ್ಟುಕೊಂಡಿದ್ದೇನೆ ಅಂದರೆ ಅದಕ್ಕೆ ಅವಳು ಬರೆದದ್ದು ಕಾರಣ ಆಗಿರಬಹುದು... ಆದರೆ ಅರ್ಥ ಮಾಡಿಕೊಳ್ಳುವುದು ಅಂದರೆ ಏನು... ಅನ್ನೋದೆ ನನ್ನನ್ನು ಕಾಡೋದು... ನಾನು ಹೇಳೋದೆ ಬೇರೆ... ಮನುಷ್ಯ ಅಂದರೆ ಒಂದು ಕಲಾಕೃತಿ ರೀತಿ... ನೀವು ಅವನನ್ನು ಹೇಗೆ ನೋಡುತ್ತೀರೋ ಅವನು ಕೂಡ ನಿಮಗೆ ಹಾಗೆ ಕಾಣುತ್ತಾನೆ... ನಾ ರೇಖಾನಿಗೆ ಕಂಡ ರೀತಿ ಸೌಮ್ಯಳಿಗೋ, ಅನುರಾಧಳಿಗೋ, ಶಂಶೀರ್‌ಗೋ, ಅವಿಲ್‌ಗೋ, ಶ್ರೀಜಾಳಿಗೋ ಕಾಣಿಸಿಕೊಳ್ಳಬೇಕಿಲ್ಲ... ಮತ್ತೇ... ಅದ್ದರಿಂದ ಒಬ್ಬರನ್ನು ಅರ್ಥ ಮಾಡಿಕೊಂಡಿದ್ದೇನೆ ಅನ್ನುವುದೇ ಅರ್ಥವಿಲ್ಲದ ಮಾತು... ಆದ್ರೂ... ಈ ರಿಕ್ಷಾದವ ಎಲ್ಲಿ ನಿಲ್ಲಿಸುತ್ತಾನೋ... ಈ ಬದಿಯೋ... ಆ ಬದಿಯೋ... ಯಾವ ಬದಿ ಆದರೂ ನಮ್ಮತ್ತ ಹೋಗೋ ರೀಕ್ಷಾ ಏರಬೇಕು ಅಂದರೆ ರಸ್ತೆ ದಾಟಬೇಕು... ಅದಕ್ಕೆ ಮತ್ತೆ ಐದು ನಿಮಿಷ...ಆನಂದ್ ವಿಹಾರ್‌ಗೆ ಹೋಗೋ ಯಾವ ರಿಕ್ಷಾ ಏರೋದು... ಖೋಡದ ಮೂಲಕ ಹೋಗೋದೋ... ವೈಶಾಲಿ ಮೂಲಕ ಹೋಗೋದೋ... ಯಾವುದಾದರೇ ಏನು... ಎರಡು ಒಂದೇ... ಸರಿ... ಇದರಲ್ಲೇ ಕೂರೋಣವಂತೆ... ಅಡ್ಡ ಸೀಟಲ್ಲೇ ಕೂರೋಣ... ಇದರಲ್ಲೂ ಹುಡುಗಿಯರು ಇಲ್ಲ... ಈ ಹುಡುಗಿಯರು ಅಂದರೆ ಮಳೆಯಂತೆ... ಮಳೆಗಾಲದಲ್ಲಿ ಬೇಡ ಬೇಡ ಅಂದರೂ ಬರ‍್ತಾರೆ... ಬೇಸಿಗೆಯಲ್ಲಿ ಬೇಕು ಬೇಕು ಅಂದರೂ ಬರೋದಿಲ್ಲ... ಸುಡುಗಾಡು...ಇವತ್ತು ಸೌಮ್ಯಳಿಗೆ ಕಾಲ್ ಮಾಡಬೇಕು... ಹುಂ... ಸ್ಮೀತಾ ಅದೇಷ್ಟು ಒಳ್ಳೆಯವಳು... ಸುಮ್ಮನೆ ಬೆಟ್ ಕಟ್ಟಿದ್ದು... ಆದರೂ ಕಟ್ಲೀಸ್ ಕಳುಹಿಸಿದಳು... ಎಲ್ಲಾದರೂ ನಾನು ಸೋತಿದ್ರೆ ಕಳುಹಿಸುತ್ತಿದ್ನಾ? ಇಲ್ಲ... ಮೋಸ್ಟ್‌ಲಿ ಇಲ್ಲ... ಹೋ ಅವಳಲ್ಲಿ ಈ ಹಾಡು ಯಾವ ಸಿನೆಮಾದ್ದು ಅಂತ ಕೇಳಿದ್ರೆ ಹೇಳಬಹುದು... ಅವಳಿಗೆ ಗೊತ್ತಿರುತ್ತೆ... ಇಲ್ಲ ಅಂದ್ರೆ ಸುಪ್ರಭಾನಿಗೆ ಗೊತ್ತಿರಬಹುದು... ಹುಂ ಹಾಡು ಕೇಳದೆ, ಸಿನೆಮಾ ನೋಡದೇ ಎಷ್ಟು ದಿನ ಆಯಿತು... ಹಾಡು ಆದ್ರೂ ಕೇಳಬಹುದು... ಸಿನೆಮಾ ನೋಡುವಷ್ಟು ಟೈಮ್ ಇರೋದಿಲ್ಲ... ಏನೂ ಟೈಮ್ ಇರೋದಿಲ್ಲ... ಅಷ್ಟು ಟೈಮ್ ಇರುತ್ತೆ... ಟೈಮ್ ಮ್ಯಾನೇಜ್‌ಮೆಂಟ್ ಗೊತ್ತಿಲ್ಲ... ಇಲ್ಲ ನನ್ನಲ್ಲಿರುವ ಸಿನೆಮಾಗಳನ್ನು ನೋಡಲು ತುಂಬ ತಾಳ್ಮೆ ಬೇಕು...ಹೌದೌದು... ಈಗ ಕ್ರಿಕೆಟ್ ನೋಡಲು ಕೂಡ ಮೊದಲಿನಷ್ಟು ಆಸಕ್ತಿ ಇಲ್ಲ... ಏನು ಆಯಿತು... ಮೊದಲಿಗೆ ಕ್ರಿಕೆಟ್ ಮ್ಯಾಚ್ ಇದೆ ಎಂದಾಗ ತಪಸ್ಸಿಗೆ ಕುಳಿತ ಹಾಗೇ ಕೂರುತ್ತಿದ್ದೆ... ಇವತ್ತು ಟ್ರಾಫಿಕ್ ತುಂಬ ಕ್ಲೀಯರ್ ಇದೆ... ಈ ಮನುಷ್ಯ ಏಕೆ ಹೀಗೆ ಒದ್ದಾಡುತ್ತಿದ್ದಾನೆ... ಇರುವೆ ಬಿಟ್ಟು ಕೊಂಡಿದ್ದಾನೆ... ಎಲ್ಲದರೂ ನನ್ನ ಪಕ್ಕ ಚಂದದ ಹುಡುಗಿ ಕೂತುಕೊಂಡು ಹೀಗೆ ಒದ್ದಾಡಿದ್ದೆ ಆಗಿದ್ರೆ ನಾನು ಈ ರೀತಿ ಹೇಳ್ತಾ ಇದ್ನಾ... ಹುಡುಗಿಯರು ಈ ರೀತಿ ಒದ್ದಾಡೋದಿಲ್ಲ... ಯಾರೂ ಹೇಳಿದ್ದು... ನಮ್ಮೂರಿನ ಹುಡುಗಿಯರು ಒದ್ದಾಡೋದಿಲ್ಲ ನಿಜ... ಇವರು ದೆಹಲಿ ಹುಡುಗಿಯರು ತಾನೇ... ಬೋಲ್ಡ್ ಆಂಡ್... ಇಲ್ಲಿ ಮಾರ್ಗದ ಬದಿ ಅದೇಷ್ಟು ಚೆನ್ನಾಗಿ ಗಿಡ ನೆಟ್ಟಿದ್ದಾರೆ... ನಮ್ಮೂರಲ್ಲಿ ಎಲ್ಲ ರಸ್ತೆಗಾಗಿ ಮರ ಕಡಿತಾರೆ... ಮುಂದೊಂದು ದಿನ ಇದು ಉದ್ಯಾನ ನಗರಿ ಆಗುತ್ತೆ... ಬೆಂಗಳೂರು ಬರಡು ನಗರಿ ಆಗುತ್ತೆ... ಹಾಗೇ ಆಗ್ಬೇಕು...ಇಲ್ಲ ಅಂದ್ರೆ ಜನರಿಗೆ ಬುದ್ದಿ ಬರೋದಿಲ್ಲ... ಈ ಮನುಷ್ಯನನ್ನು ಈಗ ರೀಕ್ಷಾದಿಂದ ಕೆಳಗೆ ಹಾಕಬೇಕು... ಒಂಚೂರು ಮ್ಯಾನರ್ಸ್ ಇಲ್ಲ ಇವನಿಗೆ... ಇನ್ನೂ ಗಾಡಿ ನಿಲ್ಲಿಸಲು ಹೇಳಬೇಕು... ಮುಂದೆ ಇಳಿಯುವವರು ಇದ್ದಾರೆ... ಅವರು ಇಳಿದಾಗ ಇಳಿದ್ರೆ ಆಯಿತು...

Thursday, July 7, 2011

ನನ್ನ 'ಆಟೋ'ಬಯೋಗ್ರಾಫಿ...

  1. ಭಾಗ 1
ಹುಂ... ಯಾವುದರಲ್ಲಿ ಕೂರೋದು ಅಂತ ಗೊತ್ತಾಗುತ್ತಿಲ್ಲ. ಯಾರು ಬೇಗ ಹೋಗುತ್ತಾನೋ ಅವನದರಲ್ಲಿ ಕೂರಬೇಕು... ಅದೇ ಗೊತ್ತಾಗುತ್ತಿಲ್ಲವೇ?... ಸಾಯಲಿ, ಯಾವುದರಲ್ಲಾದರೂ ಒಂದರಲ್ಲಿ ಕೂರೋಣ... ಸರಿ, ಇದರಲ್ಲೇ ಕೂರುತ್ತೇನೆ.... ಇನ್ನು ಇವನು ಹೊರಡಬೇಕಾದರೆ ನಾಲ್ಕೈದು ಮಂದಿ ಆದರೂ ಆಗಬೇಕು... ಅವಳು ಕೂಡ ನಮ್ಮತ್ತ ಹೋಗುವವಳೋ.... ದೇವರೇ ನನ್ನ ಪಕ್ಕನೇ ಕೂರಲಿ.... ಛೇ... ಅ ಗಾಡಿ ಹೋಯಿತು... ನಾನು ಅದರಲ್ಲಾದರೂ ಕೂರುತ್ತಿದ್ದೆ. ಇನ್ನು ಮೊಬೈಲ್‌ನಲ್ಲಿ ಮೇಲ್ ಆದ್ರೂ ಚೆಕ್ ಮಾಡುತ್ತೇನೆ... ಇವತ್ತು ಸಂಜೆ ಗುಲಾಬ್ ಜಾಮೂನ್ ತಿನ್ನಬೇಕು... ಆವತ್ತು ಆಂಟಿ ಬಂದಿದ್ದಾಗ ತಿಂದದ್ದು.... ಅಯ್ಯೋ ಈ ಹುಡುಗಿಗೆ ಫೋನ್ ಮಾಡದೇ ತುಂಬ ದಿನ ಆಯಿತಲ್ಲ.... ಸಂಜೆ ಮಳೆ ಬರೋದು ಗ್ಯಾರಂಟಿ... ಈ ಮುದುಕಪ್ಪ ಏಕೆ ಇಲ್ಲಿ ಬಂದು ಕುಳಿತ... ಛೇ... ಇವತ್ತಾದರೂ ಆಫೀಸ್‌ಗೆ ಬೇಗ ಹೋಗಿ ಸಂಜೆ ಬೇಗ ಬರಬೇಕು ಅಂತಿದ್ದೆ... ಹೋ... ಬಚಾವ್ ಹೊರಟೇ ಬಿಟ್ಟ... ಅದು ಸರಿ, ನಾನು ಬಚಾವ್ ಅಂತ ಹೇಳಲು ಶುರು ಮಾಡಿದ್ದು ಯಾವಾಗ? ಅದೇ ನಮ್ಮ ಮನೆಗೆ ಬರುತ್ತಿದ್ದ ಮನ್ಮಥ ಡ್ರೈವರ್‌ನಿಂದ ಅಲ್ವಾ ನನಗೆ ಈ ಪದ ಸಿಕ್ಕಿದ್ದು.... ನಮಗೆ ಯಾರು ಯಾರು ಏನೇನು ಕೊಟ್ಟು ಹೋಗುತ್ತಾರೋ... ಲೈಫ್ ಅನ್ನೋದೆ ಇಷ್ಟು.... ಯಾರ‍್ಯಾರೋ ಕೊಟ್ಟದ್ದೆ ನಮ್ಮ ಜೊತೆ... ಪುನಃ ಇಲ್ಲಿ ನಿಲ್ಲಿಸುತ್ತಿದ್ದಾನೆ... ಛೇ ಯಾಕಪ್ಪ... ನಾನು ಈ ಗಾಡಿಯಲ್ಲಿ ಕೂತೆ... ಎಂತಹ ಬಿಸಿಲು... ೪೭ ಡಿಗ್ರಿ ಸೆಲ್ಸಿಯಸ್ ಅಂತೆ... ಆದರೂ ನಾನು ನಿರೀಕ್ಷಿದಷ್ಟು ಧಗೆ ಇಲ್ಲ... ಏನೇ ಆಗಲಿ ಒಂದು ಒಳ್ಳೆ ಎಕ್ಸ್‌ಪಿರಿಯೆನ್ಸ್... ಆಯ್ಯೋ ಇವತ್ತು ಕೃತಿಕಾಳ ಬರ್ತ್ ಡೇ ಅಲ್ವಾ? ಹಮ್, ಹೌದು... ಇನ್ನೂ ವಿಶ್ ಮಾಡಿಲ್ಲ... ಈಗ್ಲೇ ಮೆಸೆಜ್ ಮಾಡುತ್ತೇನೆ... ಬೇಡ ಬೇಡ ಅವಳಿಗೆ ಮೆಸೆಜ್ ಮಾಡೊದಕ್ಕಿಂತ ಕಾಲ್ ಮಾಡೋದೆ ಬೆಟರ್... ಆ ಹುಡುಗಿ ನೋಡು ಸಖತ್ತಾಗಿದ್ದಾಳೆ... ಆದರೂ ಸ್ವಲ್ಪ ಬಿಳಿ ಜಾಸ್ತಿ ಆಯಿತು ಅಂತ ಅನ್ನಿಸುತ್ತೆ... ನಾನ್ಯಾಕೆ ಈಗ ಹುಡುಗಿಯರ ಬಗ್ಗೆ ಸಿಕ್ಕಾಪಟ್ಟೆ ಯೋಚಿಸುತ್ತೇನೆ... ಮೊನ್ನೆ ಆನಿಲ್ ನಾನು ಹುಡುಗಿ ಹುಡುಕುತ್ತಿದ್ದೇನೆ ಆಂದ ಬಳಿಕ ತಾನೇ? ಇಲ್ಲ, ಇಲ್ಲ ಹಾಗೇನು ಇಲ್ಲ. ನಾನು ಮೊದಲು ಕೂಡ ಹೀಗೆಯೇ ಇದ್ದೆ. ಹುಂ. ಆದರೆ ನಾನು ಆಗ ಈ ರೀತಿಯೆಲ್ಲ ಯೋಚಿಸುತ್ತಿರಲಿಲ್ಲ... ಮದುವೆ ಅಂತೆ... ಮದುವೆ.... ಸುಮ್ಮನೆ ಸ್ಮಶಾನ ವಾಸಿ ಆಗೋದು ಒಳ್ಳೆಯದು... ಅದನ್ನು ಬಿಟ್ಟಾಕು... ಆವತ್ತು ಅವಳು ಪ್ರಪೋಸ್ ಮಾಡಿದಾಗ ನಾನು ಒಪ್ಪಿಕೊಂಡು ಬಿಟ್ಟಿದ್ರೆ... ಹೌದು ಒಪ್ಕೋಬಹುದಿತ್ತೇನೋ... ಆದರೂ ನನಗೆ ನನ್ನದೆ ಆದ ಕೆಲವು ಚಿಂತನೆಗಳಿವೆ... ನಾವಿಬ್ಬರು ಅದ್ಭುತ ಕೆಮಿಸ್ಟ್ರಿ ಹೊಂದಿದ್ವಿ ನಿಜ... ಆವಳಿಗೆ ಶೀತ ಆದರೂ ೩೦೦೦ ಕಿಮೀ ದೂರ ಇದ್ದ ನನಗೆ ಸಿಕ್ಸ್ತ್ ಸೆನ್ಸ್ ಮೂಲಕ ಗೊತ್ತಾಗುತ್ತಿತ್ತಲ್ಲ... ತಕ್ಷಣ ಆರ್ ಯೂ ಫೈನ್? ಅಂತ ಮೆಸೆಜ್ ಮಾಡುತ್ತಿದ್ದೇನಲ್ಲ... ಅಬ್ಬಾ... ನಾಳೆ ಇನ್ಯಾರನ್ನೋ ಕಟ್ಟಿಕೊಳ್ಳಬಹುದು... ಅವಳ ಜೊತೆ ಇಂತಹ ಕೆಮಿಸ್ಟ್ರಿ ಹುಟ್ಟಿಕೊಳ್ಳಬಹುದಾ? ಕೆಮಿಸ್ಟ್ರಿಗೆ ಮಣ್ಣು ಬಿತ್ತು... ಬಯೋಲಾಜಿ ಮುಖ್ಯ ಸೋ ಮಕ್ಕಳಂತು ಹುಟ್ಟುತ್ತವೆ... ಎಲ್ಲರೂ ಆದರ್ಶ ದಂಪತಿಗಳು ಅಂತಾರೆ... ಸಾವು... ಏನು ಆದರ್ಶನೋ... ಈ ಆದರ್ಶ ಅನ್ನೋದೆ ಒಂದು ಕಟ್ಟುಪಾಡು... ಈ ಮನುಷ್ಯ ಭಾರಿ ಸ್ಪೀಡ್ ಆಗಿ ಡ್ರೈವ್ ಮಾಡುತ್ತಾನೆ... ತೊಂದರೆಯಿಲ್ಲ... ಆಫೀಸ್‌ನಲ್ಲಿ ಸಿಸ್ಟಮ್ ತುಂಬಾ ಸ್ಲೋ ಇದೆ... ಸಾವಿದ್ದು... ನನಗೆ ಸಿಸ್ಟಮ್ ಸ್ಲೋ ಇದೆ ಅಂದರೆ ತುಂಬಾ ಕೋಪ ಬರುತ್ತೆ... ಅದೆಲ್ಲ ಹೌದು... ಜೀವನ ಹೀಗೆ ಸಾಗಿದ್ರೆ... ನನ್ನ ಗುರಿ ತಲುಪಲಿಕ್ಕೆ ಆಗುತ್ತಾ... ಇಲ್ಲ... ಇಲ್ಲ... ಆದ್ರೆ ನನ್ನ ಸದ್ಯದ ಗುರಿಯಾದ್ರೂ ಏನೂ... ಆಯ್ಯೋ... ಇಲ್ಲಿಂದ್ಲೇ ಟ್ರಾಫಿಕ್ ಜಾಮ್... ನಾನು ಬೆಂಗಳೂರಿಗೆ ಬೈಯುತ್ತಿದ್ದೆ... ಇಲ್ಲೂ ಹಾಗೇ ಆಗುತ್ತಿದೆ... ಹುಂ... ಆದರೂ ಬೆಂಗಳೂರಿಗಿಂತ ಈ ಟ್ರಾಫಿಕ್ ಎಷ್ಟೋ ಪಾಲು ವಾಸಿ....ಈ ರಿಕ್ಷಾ ಡ್ರೈವರ್‌ಗಳು ನಿಜವಾಗಿಯೂ ಬಡವರಾ? ಮೊನ್ನೆ ತಾನೇ ಒಬ್ಬ ನಾವು ದಿನಕ್ಕೆ ೧,೫೦೦ ರೂ ದುಡಿಯುತ್ತೇವೆ ಅಂದ್ನಲ್ಲ... ಇನ್ನು ಇವರನ್ನು ನಾವು ಹೇಗೆ ಬಡವರು ಅನ್ನುವುದು? ಅವರಿಗಿಂತ ನಾನೇ ಬಡವ... ದಿನಕ್ಕೆ ಸಾವಿರ ಅಂದರೂ ೩೦,೦೦೦ ಆಯಿತು... ಮತ್ತೇ... ಬಿಡಿ ೨೦,೦೦೦ ಆಂದ್ರೂ ಸಾಕಲ್ವ... ಹಾಗಾದರೆ ಹಣಕ್ಕೆ ಬಾಯಿ ಬಾಯಿ ಬಿಡುವ ಹುಡುಗಿಯರು ಏಕೆ ಇವರನ್ನು ಮದುವೆ ಆಗೋದಿಲ್ಲ... ಹೋ... ಅವರಿಗೆ ಗೌರವ ಇರೋದಿಲ್ಲ... ಅದಕ್ಕಿರಬಹುದು... ಆದ್ರೂ ಹಣಕ್ಕೆ ಬಾಯಿ ಬಿಟ್ಟುಕೊಂಡು ಮದುವೆ ಆಗೋರಿಗಿಂತ ಈ ಆಟೋದವರೇ ಗೌರವಾನ್ವಿತರು... ಅಲ್ಲ ಈ ಮನುಷ್ಯ ಜಾತಿ, ಹಣ, ಆಂತಸ್ತು, ಶಿಕ್ಷಣ ಅಂತ ಏಕೆ ಹಾಳಗುತ್ತಿದ್ದಾನೋ... ನಾ ಮೊನ್ನೆ ಅಲ್ಲೇ ರೂಮಿನ ಪಕ್ಕ ನೋಡಿದ ಗುಡಿಸಲಿನವರು ಅದೆಷ್ಟು ಸಂತಸದಿಂದಿದ್ರು... ಇಲ್ಲ, ಇಲ್ಲ ಅವರಿಗೂ ನಮ್ಮ ಹಾಗೇ ಆಗೋ ಆಸೆ ಇರಬೇಕು... ಅವರು ಅವರ ಮಗನನ್ನು ಶಾಲೆಗೆ ಕಳುಹಿಸುವುದರ ಬಗ್ಗೆ ಮಾತನಾಡುತ್ತಿದ್ದರು...? ಅಡಿಗರು ಹೇಳಿದ್ದು ನಿಜ... “ಇರುವುದೆಲ್ಲವ ಬಿಟ್ಟು ಇರದಿರುವುದರೆಡೆಗೆ ತುಡಿಯುವುದೇ ಜೀವ”... ಅಲ್ಲ, ನನ್ನನ್ನು ಎಲ್ಲರೂ ಏಕೆ ನೀನು ತುಂಬಾ ಫಿಲಾಸಫಿಕಲ್ ಆಗಿ ಮಾತನಾಡುತ್ತಿಯಾ ಅನ್ನುತ್ತಾರೆ... ಏನು ಫಿಲಾಸಫಿಯ ಏನೋ... ನಮ್ಮ ಅನುಭವಗಳು ಜಾಸ್ತಿ ಆಗುತ್ತಾ ಹೋದ ಹಾಗೆ ನಮ್ಮಲ್ಲಿರುವ ಮಗುತನವನ್ನು ಕೊಲೆ ಮಾಡಿಕೊಂಡು ಸಾಗುತ್ತೇವೆ... ಮೊಸ್ಟ್‌ಲೀ ನನ್ನ ಜೀವನದಲ್ಲೂ ಇದೇ ಆಗಿರಬೇಕು... ಆದರೂ ಮಗುವಾಗುವ ಚಪಲ ಇನ್ನೂ ಬಿಟ್ಟಿಲ್ಲ... ಬಾಬಾ ರಾಮ್‌ದೇವ್‌ರ ಕತೆಯೇನು...? ಬಾಬಾರ ಸರಿ ತಪ್ಪು ಏನೇ ಇರಲಿ... ಈ ಕಾಂಗ್ರೆಸ್‌ನವರದ್ದು ತೀರಾ ಕಚಡಾ ರಾಜಕಾರಣವಾಯಿತು... ಏನು ಅಯ್ಯೋ... ಬಿಡಿ ರಾಜಕೀಯ... ಈ ಸಿದ್ಧಾಂತಗಳಿಗೆ ಮಣ್ಣು ಬಿತ್ತು... ಎಲ್ಲಾ ಹೊಟ್ಟೆ ತುಂಬಿದ ಮೇಲೆ... ಈ ನಮ್ಮ ಎಡಪಂಥೀಯರು, ಬಲ ಬಲಪಂಥೀಯರು ಅನ್ನೋರಿಗೆ... ಒಬ್ಬ ಹಸಿದ ಮನುಷ್ಯನಿಗೆ ಅನ್ನ ಹಾಕುವ ಮನಸ್ಸಿಲ್ಲ... ಸುಮ್‌ಸುಮ್ನೆ ಬಾಯಲ್ಲಿ ಸಿದ್ಧಾಂತದ ತೇಗು ಬಿಡುತ್ತಾರೆ... ಆದರೂ ಈ ಸಿದ್ಧಾಂತಗಳು ಬೇಕು ಅಲ್ವಾ? ಎನ್ ಕರ್ಮ... ಏಕೆ ಹೀಗೆ ಹಾರ್ನ್ ಹಾಕುತ್ತಾರೆ ಅಂತ ಗೊತ್ತಾಗುವುದಿಲ್ಲ ಮಂಡೆ ಸಮ ಇಲ್ಲದ್ದು... ಬರೀ ಲೋಫರ್‌ಗಳು... ಅಲ್ಲ ನಾನ್ಯಾಕೆ ಕಾರ್ ತಗೋಬಾರದು... ತಗೊಂಡು ಈ ಟ್ರಾಫಿಕ್‌ಗೆ ನಾನೂ ನನ್ನದೇ ಕೊಡುಗೆ ನೀಡಬಹುದಲ್ಲ... ಹುಂ... ಎಲ್ಲವನ್ನೂ ಆ ರೀತಿ ಯೋಚನೆ ಮಾಡ್ಲಿಕ್ಕಾಗೋದಿಲ್ಲ... ನಾನು ತಗೋತ್ತೇನೆ ಕಾರು ಆದ್ರೆ.. ಈ ಚಿಕ್ಕ ಕಾರುಗಳೆಲ್ಲ ಬೇಡ... ದೊಡ್ಡ ಕಾರೇ ಆಗಬೇಕು... ಬಿಎಮ್‌ಡಬ್ಲು, ಆಡಿ ಆಗಬಹುದು... ಅದು ಆದ್ರೆ ಈಗ ತಗೋಳ್ಳಿಕ್ಕೆ ಆಗೋದಿಲ್ಲ... ಸರಿ, ಕಾಯೋಣ... ಲೈಫ್ ಇಂದಿಗೆ ಇವತ್ತಿಗೆ ಮುಗಿಯೋದಿಲ್ಲ... ಆದರೆ ಪ್ರತಿ ಕ್ಷಣವನ್ನು ಗಮ್ಮತ್ತು ಮಾಡಬೇಕು... ಈ ಭಿಕ್ಷೆ ಬೇಡುವವರು ಏಕೆ ಬರುತ್ತಾರೋ.... ನಾನು ಇವರಿಗೆ ಭಿಕ್ಷೆ ನೀಡದೆ ಎಷ್ಟು ಸಮಯ ಆಯಿತು.. ಭಿಕ್ಷೆ ನೀಡುವುದೇ ಮಹಾಪಾಪ... ಈ ಟ್ರಾಫಿಕ್ ಬೇಗ ಕ್ಲೀಯರ್ ಆಗುತ್ತೆ... ಇನ್ನು ಅಲ್ಲಿ ಹೋಗಿ ಇಳಿಬೇಕು.. ಅಲ್ಲಿಂದ ೭ ನಿಮಿಷದ ದಾರಿ... ಅದೇ ನಾವು ಶಾರ್ಟ್ ಕಟ್ ಆಗಿ ಜೋಪಡಿಯ ಮಧ್ಯೆ ಹೋಗುತ್ತಿದ್ದೆವು? ಆ ಜೋಪಡಿಗಳನ್ನು ಈಗ ನೆಲಸಮ ಮಾಡಿದ್ದಾರೆ... ಇನ್ನು ಅಲ್ಲಿ ದೊಡ್ಡ ಬಿಲ್ಡಿಂಗ್ ಮಾಡುತ್ತಾರಂತೆ... ಸೋ ಆಫೀಸ್‌ಗೆ ನಾನು ಮಾರ್ಗದ ಮೂಲಕವೇ ಹೋಗಬೇಕು... ಎಕ್ಸ್ಟ್ರಾ ೩ ನಿಮಿಷ ಬೇಕು... ಅಲ್ಲಾ ಇನ್ನು ಅಲ್ಲಿ ದೊಡ್ಡವರು ದೊಡ್ಡ ಕಟ್ಟಡ ಕಟ್ಟುತ್ತಾರೆ... ಅಮೇಲೆ ನಾವು ಅತ್ತ ಹೋಗುವಂತಿಲ್ಲ... ಬಡವರು ನಮ್ಮನ್ನು ಅವರ ನಡುವೆ ಬಿಟ್ಟು ಕೊಡುತ್ತಾರೆ...ಅದರೆ ಈ ಶ್ರೀಮಂತರು ಅವರ ಹತ್ತಿರವು ನಮ್ಮನ್ನು ಸುಳಿಯ ಬಿಡುವುದಿಲ್ಲ... ನಾನು ಶೆಟ್ರು ಬಾರ್‌ಕ್ಲೇಸ್‌ಗೆ ಸುಧೀರ್ ಹೆಸರು ಹೇಳಿ ನುಗ್ಗಿದ್ದು... ಅಬ್ಬಾ... ನಾವು ಹಾಗೇ ೨-೩ ಸಲ ಹೋಗಿದ್ವಿ ಅಲ್ಲ... ಈಗ ಹೋಗುವ ಮನಸ್ಸಿಲ್ಲ... ಆದರೂ ಆಕಾಂಕ್ಷ ಆ ರೀತಿಯಿಲ್ಲ... ನಮ್ಮ ಜೊತೆ ನಮ್ಮ ರೀತಿಯಲ್ಲೇ ಇರುತ್ತಾಳೆ.... ಹೌದು ಯಾವುದನ್ನೂ, ಯಾರನ್ನೂ ಸಾರ್ವತ್ರಿಕರಣ ಮಾಡಬಾರದು... ನಾವು ಅವತ್ತೊಮ್ಮೆ ಹುಂ ಮೆಲ್ವೀನ್ ಕೂಡ ಇದ್ರೂ... ಊಟ ಮಾಡುತ್ತಿದ್ದಾಗ ಒಬ್ಬಳು ಶ್ರಿಮಂತರ ಮನೆ ಹುಡುಗಿ ಬಡ ಮಕ್ಕಳ ಜೊತೆ ಅದೆಷ್ಟು ಚೆನ್ನಾಗಿ ಆಡುತ್ತಿದ್ದಳು ಅಲ್ವಾ... ಅಗ್ಲೇ ತಾನೇ ಅವಳು ಎಷ್ಟು ಒಳ್ಳೆ ಹುಡುಗಿ ಅಂತ ನನಗನಿಸಿದ್ದು... ಅವಳನ್ನು ಮದುವೆ ಆಗೋ ಹುಡುಗ ಅದೃಷ್ಟ ಮಾಡಿರಬೇಕು... ಅಮೇಲೆ ನಾನೇ ಏಕೆ ಆ ಆದೃಷ್ಟ ಮಾಡಿರಬಾರದು... ಅಮೇಲೆ.... ಹಾ... ಸ್ಟಾಪ್ ಬಂತು... ಬೇರೆ ಯಾರೂ ಇಳಿಲಿಕ್ಕಿಲ್ಲ... ಸೋ ನಾನೇ ನಿಲ್ಲಿಸಲು ಹೇಳಬೇಕು... ಹಣ ಪರ್ಸ್‌ಲ್ಲಿ ಇದೆಯಾ ಕಿಸೆಯಲ್ಲ... ಶರ್ಟ್‌ನ ಕಿಸೆಯಲ್ಲಿದೆ... ಇಳಿದ ಮೇಲೆ ಕೊಡುವುದಾ? ಅಲ್ಲ... ಸರಿ ಬೈಯ್ಯಾ ಉದರ್ ರೋಕ್ ದಿಜಿಯೆ..