Friday, March 18, 2011

ಬರೇ...

ಬರೇ ಕನಸುಗಳಲ್ಲ ಇವು
ನಾಳೆಯ ಬಾಳಿನ ಭರವಸೆಗಳು
ನೊಂದ ಬೆಂದ ಮನಕ್ಕೆ
ತಂಪನ್ನಿಯುವ ಅಮೃತಬಿಂದುಗಳು

ಬರೇ ಮೌನಗಳಲ್ಲ ಇವು
ಮಾತಿನ ಹಿಂದಿರುವ ಯೋಜನೆಗಳು
ಯಾರೂ ತಿಳಿಯದ, ಇನ್ಯಾರು ಅರಿಯದ
ಅವರ‍್ಯಾರು ಮುರಿಯದ ಆಟಿಕೆಗಳು
ತನಗೂ ಮೆದುಳಿದೆ ಅನ್ನುವ ಸೂಚನೆಗಳು

ಬರೇ ಮಾತುಗಳಲ್ಲ ಇವು,
ಯಾವೊಂದು ಜೀವಿಯಲ್ಲೂ
ಇರದ ಒಳ ಹೊರಗಿನ ಅಭಿವ್ಯಕ್ತಿಗಳು
ನನ್ನ ನಿನ್ನ ನಡುವಿನ ಅತ್ಮಿಯ ಬೆಸುಗೆಗಳು

ಬರೇ ಸ್ನೇಹಗಳಲ್ಲ ಇವು,
ಮನುಕುಲದ ಸುಂದರ ಚಿತ್ರಣಗಳು
ಸೂರ್ಯನ ಬೆಳಕಿನಷ್ಟೆ ಸತ್ಯವಾದ,
ನಿತ್ಯವಾದ, ಹೃದಯಂಗಮವಾದ
ಹೆಣೆಹೆಣೆದು ಬೆಸೆದುಕೊಳ್ಳುವ
ಬಿಗಿ ಬಾಂಧವ್ಯಗಳು.

ಬರೇ ನಂಬಿಕೆಗಳಲ್ಲ ಇವು
ನನ್ನ ನಿನ್ನ ನಡುವೆ ನಡೆಯುವ
ನೂರೊಂದು ವ್ಯವಹಾರಕ್ಕೆ ಸೇತುವೆಗಳು
ಜಗದ ಸಾವು ನೋವುಗಳ
ಮರೆಯಲು, ತೊರೆಯಲು
ಕಾರಣವಾಗೋ ಗಿಡ ಮೂಲಿಕೆಗಳು.

Tuesday, March 8, 2011

ಅವರು ನನ್ನನ್ನು ಬಿಡಿ, ತಮ್ಮ ಕನಸುಗಳನ್ನು ಕೂಡ ತಮ್ಮ ಜೊತೆ ಇಟ್ಟುಕೊಂಡಿಲ್ಲ!

ಇಂದು ಮಹಿಳೆಯರ ದಿನ....
ಮಹಿಳೆಯರನ್ನು ಹೊಗಳಿ ಅಟ್ಟಕೇರಿಸಲು ಇರುವ ದಿನ...
ಮಹಿಳೆಯರ ಸಶಕ್ತಿಕರಣಕ್ಕಾಗಿ ಹೋರಾಡಲು ಮೂಹೂರ್ತವಿಡುವ ದಿನ...
ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕಂಠ ಶೋಷಣೆ ಮಾಡಲಿರುವ ಸುದಿನ...
ಮತ್ತೇ, ಉಳಿದ ೩೬೪ ದಿನಗಳ ಕಥೆ - ವ್ಯಥೆಗೆ ಕೊನೆ ಹಾಡಿ ನಾಳಿನ ಭರವಸೆಗೆ ಹೊಸ ಭಾಷ್ಯ ಬರೆಸುವ ಪಣ ತೊಡುವ ದಿನ...
ಹೌದೌದು ಎಲ್ಲವೂ ಹೌದು... ಯಾರಿಗೆ ಉಳ್ಳವರಿಗೆ... ಆಧುನಿಕತೆಯ ರಾಜಪಥದಲ್ಲಿ ರಾಜರಂತೆ ನಡೆಯುವವರಿಗೆ! ಆದರೆ ಅದೇ ದಾರಿಯಲ್ಲಿ ತರಗೆಲೆಯಂತೆ ಬಿದ್ದು ಅಸ್ತಿತ್ವ ಕಳೆದುಕೊಂಡು ಗಾಳಿ ಬಂದ ಕಡೆಗೆ ಅತ್ತಿಂದಿತ್ತ ಇತ್ತಿಂದಿತ್ತ ಹಾರುತ್ತಾ, ಯಾವುದೋ ಕುಟುಂಬದ ವಟ ವೃಕ್ಷದ ಬುಡಕ್ಕೆ ಬಿದ್ದು ತನ್ನ ಸತ್ವವನ್ನು ಅದಕ್ಕೆ ಧಾರೆಯೆರೆಯುವ ಬಹುಪಾಲು ಮಹಿಳಾ ಸಂಕುಲಕ್ಕೆ ಎಲ್ಲ ದಿನಗಳೂ ಕೂಡ ಮತ್ತೊಂದು ದಿನಗಳೇ... ಎಲ್ಲ ಕ್ಷಣಗಳು ಕೂಡ ಜೀವಚ್ಛವಗೊಳಿಸುವ ಕ್ಷಣಗಳೇ ಆದರೂ ಅಲ್ಲೊಂದು ಇಲ್ಲೊಂದು ಖುಷಿಯ ಒರತೆ ಕಾಣುವ, ಆ ಒರತೆಯಲ್ಲೇ ತನ್ನೆಲ್ಲ ಕೊರತೆಯನ್ನು ತುಂಬಿಕೊಳ್ಳುವ ನನ್ನೆಲ್ಲ ಅಕ್ಕತಂಗಿಯಂದಿರಿಗೆ, ತಾಯಂದಿರಿಗೆ, ಗೆಳತಿಯಂದಿರಿಗೆ ಪ್ರಣಾಮ ಹೇಳಲೇ, ಧಿಕ್ಕಾರ ಕೂಗಲೇ ಗೊತ್ತಾಗುತ್ತಿಲ್ಲ.

ನನಗೆ ನನ್ನ ಪರಿಸರದ ಅನೇಕ ಹುಡುಗಿಯರನ್ನು ಕಂಡಾಗ, ಮಾತನಾಡಿಸಿದಾಗ ಇವರು ಏಕೆ ಹೀಗೆ? ಎಂದು ಅನಿಸುತ್ತದೆ. ಒಮ್ಮೊಮ್ಮೆ ಅಸಹಾಯಕತೆ, ಕೋಪ, ವಾಕರಿಕೆ ಎಲ್ಲವೂ ಎದೆಯೊಳಗೆ ಹುಟ್ಟಿಕೊಳ್ಳುತ್ತದೆ. ನನ್ನ ಪರಿಸರದಲ್ಲಿರುವ ಬಹುತೇಕ ಹುಡುಗಿಯರು ಸಾಂಪ್ರದಾಯಿಕ ಮನೆತನದವರು. ಇಂದಿಗೂ ನರಳುತ್ತಿರುವ ಹುಡುಗಿಯರು ಹೆಚ್ಚಾಗಿ ಬಡ ಕುಟುಂಬಗಳಲ್ಲಿದ್ದರೆ, ಕೊರಗುತ್ತಿರುವುದು ಮಧ್ಯಮ ವರ್ಗದ ಸಾಂಪ್ರದಾಯಿಕ ಮನೆಗಳ ಹುಡುಗಿಯರು. ಅವರು ನಾಲ್ಕು ಕೋಣೆ, ೫ ಕಿಟಕಿ, ೨ ಬಾಗಿಲಿನೊಳಗೆ ಬಂಧಿಯಾಗಿದ್ದರೆ. ಅವರು ಉದ್ಯೋಗಕ್ಕೆ ಹೋಗಿದ್ದರು ಮನೆಯ ಮಾರ್ಯಾದೆಯೆಂಬ ಚಾವಡಿಯ ನಡುಗಂಬ (ಈಗ ಎಲ್ಲ ಆರ್‌ಸಿಸಿ ಮನೆಯಾಗಿದೆ, ಮನೆ ಕಟ್ಟು ರೀತಿಯಲ್ಲಿ ಅಧುನಿಕತೆ ಬಂದಿದ್ದರು ಮನ ಕಟ್ಟುವ ರೀತಿಯಲ್ಲಿ ಬದಲಾವಣೆ ಆಗದಿರುವುದು ವಿಪರ್ಯಾಸ)ಕ್ಕೆ ಬಿಗಿದಿರುವ ಹಗ್ಗ, ಸರಪಳಿ ಏನು ಬೇಕಾದರೂ ಹೇಳಿ ಅದು ಅವರ ಕುತ್ತಿಗೆಗೆ ಭದ್ರವಾಗಿ ಸುತ್ತು ಹಾಕಲ್ಟಟ್ಟಿದೆ.

ನಾನು ನನ್ನ ಜೊತೆ ಬೆಳೆದ ಅನೇಕ ಹುಡುಗಿಯರ ಪಕ್ಕ ಕುಳಿತು ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಪಿಯುಸಿಯಲ್ಲಿ ಅದು ಆಗಬೇಕು, ಇದು ಮಾಡಬೇಕು, ನಾನು ಹಾಗೇ, ನಾನು ಹೀಗೆಯೇ ಇರುತ್ತೇನೆ ಎಂದವರು ಇಂದು ನನ್ನನ್ನು ಅವರ ಪಕ್ಕ ಕೂರಲೂ ಕೂಡ ಬಿಡುವುದಿಲ್ಲ. ಅದು ನನಗೆ ಬೇಸರದ ವಿಷಯವೇ ಅಲ್ಲ. ಆದರೆ ದುರಂತವೆಂದರೆ ಅವರು ನನ್ನನ್ನು ಬಿಡಿ, ತಮ್ಮ ಕನಸುಗಳನ್ನು ಕೂಡ ತಮ್ಮ ಜೊತೆ ಇಟ್ಟುಕೊಂಡಿಲ್ಲ!

ಮತ್ತೆ ಅದೇನೋ ಹಿಂದಿನ ಸಲುಗೆಯಲ್ಲಿ ಅವರನ್ನು ಕೆಣಕಿದರೆ ಅವರು ತಮ್ಮ ಪಥ ಭ್ರಷ್ಟತೆಯನ್ನು ನಗು ನಗುತ್ತಾ ಹೇಳುತ್ತಾರೆ. ಮನೆಯ ಅನಿವಾರ್ಯತೆಗಾಗಿ ತಾವು ಮಾಡುತ್ತಿರುವ ತ್ಯಾಗದ ಬಗ್ಗೆ ಹೆಮ್ಮೆ ಪಡುತ್ತಾರೆ. ಮದುವೆ ಅಗಲೇ ಬೇಕು ಎಂಬ ಮನೆಯವರ ಒತ್ತಡಕ್ಕೆ ತಾವು ಹೇಗೆ ತಲೆ ಬಾಗಿದ್ದೇವೆ, ಬಾಗುತ್ತಿದ್ದೇವೆ ಎಂದು ಸಿಹಿ ಬೆಲ್ಲ ಸವಿಯುವಂತೆ ಹೇಳುತ್ತಾರೆ. ಅವರು ಮದುವೆ ಆಗುತ್ತಾರೆ ಎಂಬುದು ಖುಷಿಯ ಸಂಗತಿ. ಹುಡುಗಿ ಎಂಬ ಸಲಿಗೆ ದಾಟಿ ಮಹಿಳೆ ಅನ್ನುವ ಗೌರವದ ಆವರಣೊಳಗೆ ಅವರು ಕೂರುವುದು ಅದನ್ನು ನಾನು ಸೇರಿದಂತೆ ಅವರ ಓರಗೆಯ ಸ್ನೇಹಿತರು ಸ್ವೀಕರಿಸುವ ರೀತಿ ನಿಜಕ್ಕೂ ವಿಶಿಷ್ಟವಾದದ್ದು. ಆದರೆ ಮನೆಯವರ ಒತ್ತಡಕ್ಕೆ ಬಲಿಯಾಗಿ, ಮನೆಯವರ ಕರ್ತವ್ಯ, ಗೌರವವನ್ನು ಪೂರೈಸಲು, ಹೆಚ್ಚಿಸುವುದಕ್ಕಾಗಿ ತಮ್ಮ ಸತ್ವರ್ಪಣೆ ಮಾಡಿಕೊಳ್ಳುತ್ತಾರಲ್ಲ ಅದು ನಿಜಕ್ಕೂ ಎದೆಗೆ ಬೆಂಕಿ ಹಾಕಿದ ಅನುಭವ ತರುತ್ತದೆ.

ಇಂತಹ ಹುಡುಗಿಯರನ್ನು ಕಂಡಾಗ ನನಗೆ ಏಕೆ ಕೋಪ ಬರುತ್ತದೆ ಎಂದರೆ... ಒಂದಿಷ್ಟು ಕೆಚ್ಚು ತೋರಿಸದೆ ಸಮಾಜದ ಸಿದ್ಧ ಸೂತ್ರಕ್ಕೆ ತಮ್ಮನ್ನು ತಾವು ನೈವೇದ್ಯ ಮಾಡಿಕೊಳ್ಳುತ್ತಾರಲ್ಲ ಅದಕ್ಕೆ. ಸ್ವತಃ ತಮ್ಮಲ್ಲಿ ವಿದ್ಯೆ, ಬುದ್ಧಿ ಇದ್ದರು ಕೂಡ ಅದು ಇನ್ನೊಬ್ಬನ ತೆಕ್ಕೆಯಲ್ಲಿ ಅರಳಲಿ ಎಂದು ಬಯಸುತ್ತಾರಲ್ಲ ಅದಕ್ಕೆ. ತಮ್ಮತನದ ಉಳಿವಿಗಾಗಿ ಹೋರಾಟದ ಲವಲೇಷವನ್ನು ತೋರಿಸದೇ ಅವಶೇಷವಾಗುತ್ತರಲ್ಲಾ ಅದಕ್ಕೆ. ಇಂತಹ ಮಹಿಳೆಯರಿಗೆ ಕಲ್ಪನಾ ಚಾವ್ಲ, ಸುನೀತಾ ವಿಲಿಯಮ್ಸ್, ನೀರಜಾ ಭಾನೋಟ್, ಐಶ್ವರ್ಯಾ ರೈ, ಮಮತಾ ಬ್ಯಾನರ್ಜಿ, ಪಿ ಟಿ ಉಷಾ, ಮೇಧಾ ಪಾಟ್ಕರ್ ಮುಂತಾದವರು ಪುಸ್ತಕದ ಆದರ್ಶಗಳಾಗಿ ಬಿಡುತ್ತಾರಲ್ಲ ಅದಕ್ಕೆ. ತಾವು ಅವರಂತಾಗಬೇಕು ಎಂದು ತಾವೇ ಕಂಡ ಕನಸನ್ನು ತಾವೇ ಚಿವುಟಿ ಹಾಕಿ ನಗುತ್ತಾರಲ್ಲ ಅದಕ್ಕೆ. ಸಾಹಸಿ ಮಹಿಳೆಯರ ಪಾಠ ಮಾಡುವಾಗ ಟೀಚರ್ ರ ಮನದಲ್ಲಿ "ನನಗಂತೂ ಆ ಸಾಹಸ ಮಾಡಲಾಗಲಿಲ್ಲ ಈ ಮಕ್ಕಳಾದರೂ ಮಾಡಲಿ" ಎಂಬ ಆಶಯ ಇರುತ್ತಿತ್ತೇನೋ, ಆ ಆಶಯವನ್ನು ಈಡೇರಿಸುವ ಜವಾಬ್ಧಾರಿಯನ್ನು ಈ ಹುಡುಗಿಯರು ಮತ್ತೇ ತಮ್ಮ ಮುಂದಿನ ಪೀಳಿಗೆಗೆ ದಾಟಿಸುತ್ತಾರಲ್ಲ ಅದಕ್ಕೆ. ಈ ರೀತಿ ಇರುವ ಹುಡುಗಿಯರು ಒಂದು ಮಾತನ್ನು ಗಮನದಲ್ಲಿಟ್ಟು ಕೊಳ್ಳಬೇಕು. ನೀವು ಕಾಣುವ ಕನಸು ನಿಮ್ಮದಾಗಿದ್ದರೆ ಅದನ್ನು ನನಸು ಮಾಡುವ ಜವಾಬ್ಧಾರಿ ಕೂಡ ನಿಮ್ಮದು. ಅದನ್ನು ನನಸು ಮಾಡಲು ಇನ್ನೊಬ್ಬರು ಬರಬೇಕು ಅಥವಾ ಅದನ್ನು ನನಸು ಮಾಡಲು ಇನ್ನೊಬ್ಬರು ಹೋರಾಡಲಿ ಎಂದು ಬಯಸುವುದಾದರೆ ನಿಮಗೆ ಈ ಸಮಾಜವನ್ನು ಟೀಕಿಸುವ, ದ್ವೇಷಿಸುವ ಯಾವುದೇ ನೈತಿಕತೆ ಉಳಿದಿರುವುದಿಲ್ಲ. ಸಾಯುತ್ತಿರುವ ಮಂದಿ ಬದುಕುವ ಕನಸು ಕಾಣುತ್ತಾರೆ ನಿಜ ಆದರೆ ಬದುಕುವ, ಬದುಕಲು ಹೋರಾಡುವ ಪ್ರಯತ್ನ ಮಾಡದಿದ್ದರೆ, ಕನಿಷ್ಠ ಪಕ್ಷ ಒದ್ದಾಡದಿದ್ದರೆ (ಒದ್ದಾಡುತ್ತಿದ್ದರೆ ಯಾರಾದರೂ ಪುಣ್ಯಾತ್ಮರು ಕಂಡು ನಿಮ್ಮನ್ನು ಅಸ್ಪತ್ರೆಗೆ ಸಾಗಿಸಬಹುದು, ಅಲ್ಲಿ ನೀವು ಪುನಃ ಬದುಕಿ ಬರಬಹುದು, ಮತ್ತೇ ಹೊಸ ಜೀವನ ಸಾಗಿಸಬಹುದು) ನಿಮ್ಮನ್ನು, ನಿಮ್ಮ ಕನಸುಗಳನ್ನು ಯಾರೆಂದರೆ ಯಾರು ಬದುಕಿಸುವುದಿಲ್ಲ.

ಆದರೆ ಈ ಸಾಲುಗಳನ್ನೆ ಬಡ ಮಹಿಳೆಯರಿಗೆ ಹೇಳುವಂತಿಲ್ಲ. ಅವರಿಗೆ ಅವರ ಹಕ್ಕುಗಳನ್ನು ಪಡೆಯಲು ಸಮಾಜದ ಬೆಂಗಾವಲು ಬೇಕೆ ಬೇಕು. ಅವರ ಅಭಿವೃದ್ಧಿ ಅಂದರೆ ಅದಕ್ಕೆ ಇನ್ನೂ ಅನೇಕ ಆಯಾಮಗಳಿರುತ್ತವೆ. ಅವರನ್ನು ಮೊದಲು ಮನೆಯಲ್ಲಿ ಆಗುವ ಶಾರೀರಿಕ, ಮಾನಸಿಕ ಶೋಷಣೆಗಳಿಂದ ಹೊರ ತರುವ ಕೆಲಸ ಮಾಡಬೇಕು, ಶಿಕ್ಷಣ ಕೊಡಬೇಕು ಹೀಗೆ. ಅವರು ಆದರೆ ಅವರಲ್ಲಿರುವ ಹೋರಾಟದ ಕೆಚ್ಚು ಈ ಸಾಂಪ್ರದಾಯಿಕ ಮನೆಗಳಲ್ಲಿನ ಹುಡುಗಿಯರಿಗಿಂತ ಹೆಚ್ಚಿರುತ್ತದೆ. ಅದಕ್ಕೆ ಒಂಚೂರು ತೈಲ ಎರೆದರೆ ಅವರು ಯಾವುದೇ ವ್ಯವಸ್ಥೆಯನ್ನು ಬುಡಮೇಲು ಮಾಡಬಲ್ಲರು. ಅವರು ಅಗತ್ಯಬಿದ್ದರೆ ಏಕಾಂಗಿಯಾಗಿಯೇ ಗೌರವಯುತ ಜೀವನ ಸಾಗಿಸಬಲ್ಲರು. ಆದರೆ ಅವರ ಶಿಕ್ಷಣದ ಮಟ್ಟ ಅವರನ್ನು ಕಟ್ಟಿ ಹಾಕುತ್ತದೆ. ಮತ್ತೇ ಮತ್ತೇ ಶೋಷಣೆಯ ಮಡಿಲಲ್ಲಿ ಪವಡಿಸವ ಹಾಗೇ ಮಾಡುತ್ತದೆ. ಇಂದು ಇಂತಹ ಮಹಿಳೆಯರ ಬಗ್ಗೆ ಮಾತನಾಡಲು ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಸರ್ಕಾರ ಕೂಡ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಸಾಂಪ್ರದಾಯಿಕ ಕುಟುಂಬಗಳ 'ಮಾನ ರಕ್ಷಕ' ಹುಡುಗಿಯರ ಹಿತರಕ್ಷಣೆಗೆ ಯಾರೆಂದರೆ ಯಾರೂ ಇಲ್ಲ. ದುರಂತವೆಂದರೆ ಸ್ವತಃ ಅವರು ಕೂಡ!

************************************************************************************

ಇಂದು ನಾನು ನನ್ನ ಆತ್ಮೀಯ ಗೆಳತಿಯರಾಗಿ ಇನ್ನೂ ಉಳಿದುಕೊಂಡಿರುವ ಅಥವಾ ಉಳಿದಿದ್ದಾರೆ ಎಂದು ನಾನು ಭಾವಿಸಿರುವ ಎಲ್ಲರಿಗೂ ಒಂದು ಎಸ್‌ಎಮ್‌ಎಸ್ ಮಾಡಿದ್ದೆ ಅದೇನೆಂದರೆ "ಮಹಿಳೆಯಾಗುವತ್ತ ವೇಗವಾಗಿ ಓಡುತ್ತಿರುವ ನನ್ನ ನಲ್ಮೆಯ ಹುಡುಗಿಗೆ ಈ ದಿನದ ಹಸಿ ಹಸಿ ಬಿಸಿ ಬಿಸಿ ಶುಭಕಾಮನೆಗಳು" ಎಂದು. ನನ್ನ ಬಹುತೇಕ ಗೆಳತಿಯರು ಗರಿಷ್ಠ ಇನ್ನೆರಡು ವರ್ಷಗಳಲ್ಲಿ ಮಹಿಳೆಯಾಗಲಿದ್ದಾರೆ. ಅವರು ಹುಡುಗಿಯರಾಗಿದ್ದ ಸಂದರ್ಭದಲ್ಲಿ ಅಂದರೆ ಈಗ ನಮ್ಮ ನಡುವೆ ಇರುವ ಸಲಿಗೆ ತೆರೆಗೆ ಸರಿಯಲಿದೆ, ನೆನಪುಗಳ ಪಟ್ಟಿಯಲ್ಲಿ ಒಂದು ಸ್ಥಾನ ಪಡೆಯಲಿದೆ (ಅನೇಕ ಮಂದಿ ಈಗಾಗಲೇ ಹುಡುಗಿಯರಾಗಿರುವಾಗಲೇ ಅಲ್ಲಿ ಸ್ಥಾನ ಪಡೆದಿದ್ದಾರೆ, ಬದುಕಿದ್ದಾಗಲೆ ಅವರ ಅಂತ್ಯ ಸಂಸ್ಕಾರ ನೆರವೇರಿಸಿದ್ದೇನೆ, ಇದಕ್ಕಾಗಿ ಕ್ಷಮಿಸಿ ಅನ್ನಲೇ... ಗೊತ್ತಾಗುತ್ತಿಲ್ಲ). ಅಷ್ಟರಲ್ಲಿ ಒಬ್ಬಳು ಗೆಳತಿ ಥ್ಯಾಂಕ್ಸ್ ಎಂದು ನನಗೆ ರಿಪ್ಲೈ ಮಾಡಿದಳು. ನಾನು ತಕ್ಷಣ ಮಹಿಳೆ ಆಗುವ ಬಗ್ಗೆ ನಿನ್ನ ಅಭಿಪ್ರಾಯ ಏನು ಎಂದು ಕೇಳಿದೆ... "ಏನಿಲ್ಲ" ಅಂದಳು. ಆದರೆ ಆ "ಏನಿಲ್ಲ" ಅನ್ನುವ ಪದ ಹೇಳಿದಕ್ಕಿಂತ ಹೇಳದಿದ್ದದ್ದೇ ಹೆಚ್ಚು ಎಂದು ನನಗೆ ಆ ಕ್ಷಣವೇ ಅರ್ಥವಾಗಿತ್ತು.

ಹುಡುಗಿಯೊಬ್ಬಳು ಮಹಿಳೆ ಆಗುವುದೆಂದರೆ ಏನು? ಚೆಲ್ಲು ಚೆಲ್ಲಾಗಿರುವ ಹುಡುಗಿಯೇ ಆಗಲಿ, ಘನ ಗಾಂಬಿರ್ಯದ ಹುಡುಗಿಯೇ ಆಗಲಿ ಮಹಿಳೆ ಆಗುತ್ತಾಳೆ ಎಂದರೆ ಅವಳು ಒಂದು ಹೊಸ ಜವಾಬ್ಧಾರಿಯನ್ನು ಹೊತ್ತುಕೊಂಡಂತೆಯೇ. ಆದರೆ ಅವರು ಮಹಿಳೆ ಆಗುವ ಪ್ರಕ್ರಿಯೆ ಅವರ ವೈಯುಕ್ತಿಕ ಆಯ್ಕೆಯಾಗಿರಬೇಕು ಅನ್ನುವುದು ನನ್ನ ಕನಸು. ಅವರು ಇಷ್ಟ ಪಟ್ಟು ಜವಾಬ್ಧಾರಿ ಹೊರಲು ತಯಾರಿದ್ದು ಮದುವೆ ಆದರೆ, ಮಕ್ಕಳಿಗೆ ಜನ್ಮ ನೀಡಿದರೆ ಆ ಬಗ್ಗೆ ಒಡಕು ಮಾತು ಆಡುವಂತಿಲ್ಲ. ಆದರೆ ಮದುವೆ ಮಾಡುತ್ತಾರೆ, ಅದ್ದರಿಂದ ಮದುವೆ ಆಗಬೇಕು, ಮದುವೆ ಆದ ಮೇಲೆ ಎಲ್ಲರೂ ಮಗು ಕೇಳುತ್ತಾರೆ ಅದಕ್ಕೆ ಮಕ್ಕಳನ್ನು ಹೆರಬೇಕು ಎಂಬ ಒತ್ತಾಯಕ್ಕೆ ಬಿದ್ದು ಸಾಮಾಜಿಕ ಸಂಕೋಲೆಯೊಳಗೆ ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವುದು ನಿಜಕ್ಕೂ ಅಸಹಜ. ಒಬ್ಬಳು ಹುಡುಗಿ(ಮಹಿಳೆ)ಯನ್ನು ಒತ್ತಾಯದಿಂದ ಸಂಭೋಗಿಸಿದರೆ ಅದನ್ನು ಅತ್ಯಾಚಾರ ಎಂದು ಕರೆದು ಶಿಕ್ಷೆ ನೀಡಬಹುದಾದರೆ ಒಬ್ಬಳು ಹುಡುಗಿಯನ್ನು ಬಲವಂತವಾಗಿ ಮಹಿಳೆಯನ್ನಾಗಿಸುವುದು ಕೂಡ ಅತ್ಯಾಚಾರವಲ್ಲದೇ ಮತ್ತೇನು? ಪರಿಸ್ಥಿತಿಯನ್ನು ಎದುರಿಸಿ ಬದುಕಲಾಗದೇ ಜೀವ ಕಳೆದುಕೊಳ್ಳುವುದನ್ನು ಆತ್ಮಹತ್ಯೆ ಎನ್ನುವುದಾದರೆ ಪರಿಸ್ಥಿತಿಯನ್ನು ಎದುರಿಸಲಾಗದೇ ತನ್ನತನವನ್ನು ಕಳೆದುಕೊಳ್ಳುವುದು ಕೂಡ ಆತ್ಮಹತ್ಯೆಯಲ್ಲವೇ?

ನನಗೆ ಬೇಸರವಾಗುವುದು, ದುಃಖವಾಗುವುದು ಅದೇ.... ಇನ್ನೂ ಈ ಜೀವಂತ ಶವಗಳ ಮುಖ ನೋಡುತ್ತಿರಬೇಕಲ್ಲ ಎಂಬುದು.... ಆದರೆ ಎಲ್ಲೋ ಒಂದು ಕಡೆ ಇವರಲ್ಲಿ ಒಬ್ಬಳಾದರೂ ಎದ್ದು ನಿಲ್ಲಬಲ್ಲಳೇ, ಗೆದ್ದು ಸಾಗಬಲ್ಲಳೇ, ಉಳಿದವರಿಗೂ ಗೆಲುವಿನ ರುಚಿ ನೀಡಬಲ್ಲಳೇ, ಕನಿಷ್ಠ ಪಕ್ಷ ಮಿಸುಕಾಡಿಯಾದರೂ ಒಂದೇ ಒಂದು ಕಿಡಿ ಹೊತ್ತಿಸಬಲ್ಲಳೇ...ಎಂಬ ಕಾತರ ನನ್ನದು... ಕಾದು ನೋಡುತ್ತಿದ್ದೇನೆ.... ಕಾಯುವುದೇ ಜೀವನ... ಜೀವನ ಎಂಬುದು ಕಾಯುವುದು, ಕಾಯಿಸುವುದು ಆಗಿರುವ ಈ ಹೊತ್ತಲ್ಲಿ!